Tag: ಕಳಸಾ ಬಂಡೂರಿ ಯೋಜನೆ

  • ಕಳಸಾ ಬಂಡೂರಿ ಯೋಜನೆ ಮೂಲಕ ನಮ್ಮ ಪಾಲಿನ ನೀರು ಬಳಸಲು ರಾಜ್ಯಕ್ಕೆ ಸಂಪೂರ್ಣ ಹಕ್ಕಿದೆ: ಡಿಕೆಶಿ

    ಕಳಸಾ ಬಂಡೂರಿ ಯೋಜನೆ ಮೂಲಕ ನಮ್ಮ ಪಾಲಿನ ನೀರು ಬಳಸಲು ರಾಜ್ಯಕ್ಕೆ ಸಂಪೂರ್ಣ ಹಕ್ಕಿದೆ: ಡಿಕೆಶಿ

    – ನಾವೆಲ್ಲರೂ ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕೋಣ ಎಂದ ಡಿಸಿಎಂ

    ಬೆಂಗಳೂರು: ಕಳಸಾ ಬಂಡೂರಿ ಯೋಜನೆ (Kalasa Banduri Project) ಮೂಲಕ ನಮ್ಮ ಪಾಲಿನ ನೀರನ್ನು ಬಳಸಲು ರಾಜ್ಯಕ್ಕೆ ಸಂಪೂರ್ಣ ಹಕ್ಕಿದೆ. ಈ ವಿಚಾರವಾಗಿ ನಾವೆಲ್ಲರೂ ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದರು.

    ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಕೋನರೆಡ್ಡಿ ಅವರು ಮಹದಾಯಿ ಯೋಜನೆ ವಿಚಾರವಾಗಿ ಗೋವಾ ಸಿಎಂ ಅಲ್ಲಿನ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ಇಡೀ ರಾಜ್ಯದ ಜನ ಪಕ್ಷಬೇಧ ಮರೆತು ಈ ವಿಚಾರವಾಗಿ ಹೋರಾಟ ಮಾಡಿದ್ದಾರೆ. ನ್ಯಾಯಾಲಯದಲ್ಲಿ ಇದರ ತೀರ್ಪು ಬಂದಿದ್ದು, ನಮ್ಮ ರಾಜ್ಯಕ್ಕೆ ಅಗತ್ಯ ಪಾಲಿನ ನೀರು ಹಂಚಿಕೆ ಮಾಡಲಾಗಿದೆ. 2022ರಲ್ಲಿ ಕೇಂದ್ರ ಜಲ ಆಯೋಗ ಕೂಡ ಈ ನೀರನ್ನು ಬಳಸಿಕೊಳ್ಳಲು ಅನುಮತಿ ನೀಡಿತು. ಹುಬ್ಬಳ್ಳಿ ಧಾರವಾಡದಲ್ಲಿ ಶಾಸಕರುಗಳು ಸೇರಿ ವಿಜಯೋತ್ಸವವನ್ನು ಆಚರಿಸಿದರು ಎಂದರು. ಇದನ್ನೂ ಓದಿ: ಕೇಂದ್ರದಿಂದ `ಆನ್‌ಲೈನ್ ಗೇಮಿಂಗ್ ತಡೆ’ ಮಸೂದೆಗೆ ಅನುಮೋದನೆ

    ಈ ಮಧ್ಯೆ ಗೋವಾದ ಅಧಿಕಾರಿ ಈ ಯೋಜನೆ ಪ್ರಶ್ನಿಸಿ ನಮ್ಮ ಸರ್ಕಾರಕ್ಕೆ ಶೋಕಾಸ್ ನೋಟೀಸ್ ನೀಡಿದ್ದಾರೆ. ಅವರು ನಮ್ಮ ರಾಜ್ಯಕ್ಕೆ ಹೇಗೆ ನೋಟೀಸ್ ನೀಡಲು ಸಾಧ್ಯ? ಕೆಲವು ವಿಚಾರದಲ್ಲಿ ಕೇಂದ್ರ ಸರ್ಕಾರ ನಮಗೆ ನೋಟೀಸ್ ನೀಡಬಹುದು. ನಮ್ಮ ರಾಜ್ಯದ ಅಧಿಕಾರಿ ಬೇರೆ ರಾಜ್ಯಕ್ಕೆ ನೋಟೀಸ್ ನೀಡಲು ಸಾಧ್ಯವೇ? ನಾವು ಆ ನೋಟೀಸ್ ಗೆ ಹೆಚ್ಚು ಮಾನ್ಯತೆ ನೀಡದೇ ಯೋಜನೆ ಮುಂದುವರಿಸಬೇಕಿತ್ತು. ಆದರೆ ಆಗ ನಮ್ಮ ರಾಜ್ಯದವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಂದು ನಾನು ಅಧಿಕಾರದಲ್ಲಿ ಇದ್ದಿದ್ದರೆ, ಆ ನೋಟೀಸ್ ಕೊಡಲು ನೀನು ಯಾರು ಎಂದು ಪ್ರಶ್ನೆ ಮಾಡುತ್ತಿದ್ದೆ ಎಂದು ಹೇಳಿದರು. ಇದನ್ನೂ ಓದಿ: 12 ಗಂಟೆ ಟ್ರಾಫಿಕ್‌ನಲ್ಲೇ ಕಳೆಯೋದಾದ್ರೆ ಜನ ಟೋಲ್ ಯಾಕೆ ಪಾವತಿಸ್ಬೇಕು? – NHAI ವಿರುದ್ಧ ಸುಪ್ರೀಂ ಗರಂ

    ನಾನು ನಾಲ್ಕು ಬಾರಿ ಕೇಂದ್ರ ಜಲ ಶಕ್ತಿ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದು, ಈ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಅವರಿಗೆ ಯಾವ ರಾಜಕೀಯ ಒತ್ತಡ ಇದೆಯೋ ಗೊತ್ತಿಲ್ಲ. ಇನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಮೂರು ಬಾರಿ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಈ ತಿಂಗಳು ಮತ್ತೆ ದೆಹಲಿಗೆ ಬಂದು ಭೇಟಿ ಮಾಡುವಂತೆ ದಿನಾಂಕ ನೀಡಿದ್ದಾರೆ. ಕಳಸಾ ಬಂಡೂರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಮೀಸಲಾಗಿರುವ ಪ್ರತಿಯೊಂದು ಹನಿ ನೀರನ್ನು ಬಳಸಲು ಎಲ್ಲಾ ಹಕ್ಕು ಇದೆ. ನಾನು ಇಲಾಖೆ ಅಧಿಕಾರ ವಹಿಸಿಕೊಂಡ ಬಳಿಕ ಟೆಂಡರ್ ಕರೆದು ಗುತ್ತಿಗೆಯನ್ನು ಅಂತಿಮಗೊಳಿಸಿದ್ದೇನೆ. ಕಾನೂನು ವಿಚಾರಗಳನ್ನು ಸ್ವಲ್ಪ ಅಧ್ಯಯನ ಮಾಡುತ್ತಿದ್ದು, ಈ ವಿಚಾರದಲ್ಲಿ ಕಾನೂನು ತೊಡಕು ಇದ್ದರೆ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆದು ನಾವು ಯೋಜನೆ ಆರಂಭಿಸಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಚಾರವಾಗಿ ಅಡ್ವೊಕೇಟ್ ಜನರಲ್ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದು ವಿವರಿಸಿದರು. ಇದನ್ನೂ ಓದಿ: ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಷರತ್ತು ಬದ್ಧ ಅನುಮತಿ

    ಇದು ನಮ್ಮ ರಾಜ್ಯದ ಹಿತದ ವಿಚಾರ. ಇದು ಅನಗತ್ಯವಾಗಿ ವಿಳಂಬವಾದರೆ ನೀರು ಸುಮ್ಮನೆ ಹರಿದು ಹೋಗುತ್ತಿರುತ್ತದೆ. ನಾವೆಲ್ಲರೂ ಈ ವಿಚಾರದಲ್ಲಿ ಒಗ್ಗಟ್ಟಿನ ಹೋರಾಟ ಮಾಡಬೇಕು. ನಾನು ದಿನಾಂಕ ನಿಗದಿ ಮಾಡುತ್ತೇನೆ. ಎಲ್ಲರೂ ಹೋಗಿ ಈ ಯೋಜನೆ ಜಾರಿಗೆ ಆಗ್ರಹ ಮಾಡೋಣ. ನಾನು ಈ ವಿಚಾರವಾಗಿ ಪ್ರಧಾನಮಂತ್ರಿಗಳ ಮುಂದೆಯೂ ಪ್ರಸ್ತಾಪ ಮಾಡಿದ್ದೇನೆ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ನೀವು ಒತ್ತಡ ಹಾಕಿ. ಈ ಯೋಜನೆ ಜಾರಿಯಾದರೆ ಕೇವಲ ಒಂದೇ ವರ್ಷದಲ್ಲಿ ಫಲಿತಾಂಶ ಕಾಣಲಿದೆ ಎಂದು ತಿಳಿಸಿದರು. ಇದನ್ನೂ ಓದಿ: 97 LCA ಮಾರ್ಕ್ 1A ಫೈಟರ್ ಜೆಟ್‌ ಖರೀದಿಗೆ 62,000 ಕೋಟಿ ರೂ. ಒಪ್ಪಂದಕ್ಕೆ ಭಾರತ ಅನುಮೋದನೆ

  • ಕಳಸಾ-ಬಂಡೂರಿ ಕಾಮಗಾರಿ ಪ್ರಾರಂಭಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕಲು ಸಭೆ ಕರೆಯಿರಿ- ಸಿಎಂಗೆ ಕೋನರೆಡ್ಡಿ ಒತ್ತಾಯ

    ಕಳಸಾ-ಬಂಡೂರಿ ಕಾಮಗಾರಿ ಪ್ರಾರಂಭಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕಲು ಸಭೆ ಕರೆಯಿರಿ- ಸಿಎಂಗೆ ಕೋನರೆಡ್ಡಿ ಒತ್ತಾಯ

    ಬೆಂಗಳೂರು: ಮಹದಾಯಿ (Mahadayi), ಕಳಸಾ-ಬಂಡೂರಿ (Kalasa-Banduri)ಯೋಜನೆ ಕಾಮಗಾರಿ ಪ್ರಾರಂಭ ಮಾಡುವ ಪ್ರಸ್ತಾವನೆಯನ್ನು ಕೇಂದ್ರದ ವನ್ಯಜೀವಿ ಮಂಡಳಿ ತಿರಸ್ಕಾರ ಮಾಡಿರುವ ಹಿನ್ನಲೆಯಲ್ಲಿ ಕೂಡಲೇ ಸರ್ವಪಕ್ಷಗಳ ಸಭೆ ಕರೆಯುವಂತೆ ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ಕಾಂಗ್ರೆಸ್ ಶಾಸಕ ಕೋನರೆಡ್ಡಿ (Konareddy) ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ವಿಜಯೇಂದ್ರ ಚಾಲನೆ: ರಾಜ್ಯದಲ್ಲಿ 1 ಕೋಟಿ ನೋಂದಣಿ ಗುರಿ

    ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಬಹುದಿನಗಳ ಕನಸು ಕಳಸಾ-ಬಂಡೂರಿ, ಮಹದಾಯಿ ಯೋಜನೆಗಳು. 20 ವರ್ಷಗಳಿಂದ ಹೋರಾಟ ನಡೆದುಕೊಂಡು ಬಂದಿದ್ದು, ಎಲ್ಲವೂ ಮುಗಿದಿದೆ. ಯೋಜನೆ ಪ್ರಾರಂಭವಾಗುವ ನಿರೀಕ್ಷೆ ರಾಜ್ಯದ ಜನತೆಗೆ ಇತ್ತು. ಮೊನ್ನೆ ಕೇಂದ್ರ ವನ್ಯಜೀವಿ ಮಂಡಳಿಯು ಅನುಮತಿಯನ್ನು ತಿರಸ್ಕರಿಸಿದೆ. ಸಿಎಂ ಕೂಡಲೇ ಸರ್ವಪಕ್ಷಗಳ ಸಭೆ ಮತ್ತು ಆ ಭಾಗದ ಶಾಸಕರನ್ನು ಕರೆದು ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಮನವಿ ಮಾಡಿದ್ದೇನೆ. ಸಿಎಂ ಶೀಘ್ರವೇ ಇದರ ಬಗ್ಗೆ ವಿಚಾರ ಮಾಡಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ ಎಂದರು.

    ಚುನಾವಣೆ ಪೂರ್ವದಲ್ಲಿ ಬಿಜೆಪಿಯವರು ಸಾಕಷ್ಟು ಭಾಷಣ ಮಾಡಿದ್ದರು. ಮಹದಾಯಿ ಯೋಜನೆಯನ್ನು ನಾವು ಮಾಡೇ ಮಾಡುತ್ತೇವೆ ಎಂದಿದ್ದರು. ಇವತ್ತು ಬಿಜೆಪಿಯವರು ತಮ್ಮ ಮಾತನ್ನು ಮರೆತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರಿಗೆ ನಾನು ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರದಿಂದ ಯೋಜನೆ ಪ್ರಾರಂಭಕ್ಕೆ ಅನುಮತಿ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಎದೆಮೂಳೆ ಮುರಿತ, ವೃಷಣಕ್ಕೆ ಹಾನಿ; 600 ರೂ.ನ ಮೆಗ್ಗಾರ್‌ನಿಂದ ಕರೆಂಟ್ ಶಾಕ್ ಕೊಟ್ಟು ಹಿಂಸೆ

  • ಹುಬ್ಬಳ್ಳಿಯಲ್ಲಿ ನಡೆಯಿತು ಸರ್ವ ಪಕ್ಷಗಳ ನಾಯಕರ ಸಭೆ

    ಹುಬ್ಬಳ್ಳಿಯಲ್ಲಿ ನಡೆಯಿತು ಸರ್ವ ಪಕ್ಷಗಳ ನಾಯಕರ ಸಭೆ

    -ಸರ್ವ ಪಕ್ಷಗಳ ನಿರ್ಧಾರ ಪ್ರಕಟ

    ಧಾರವಾಡ/ಹುಬ್ಬಳ್ಳಿ: ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಬಗ್ಗೆ ಹುಬ್ಬಳ್ಳಿಯಲ್ಲಿಂದು ಮಹತ್ವದ ಸರ್ವ ಪಕ್ಷದ ಸಭೆಯನ್ನು ಮೂರು ಪಕ್ಷಗಳ ಜನಪ್ರತಿನಿಧಿಗಳು ನಡೆಸಿದ್ದು, ಪಕ್ಷಾತೀತವಾಗಿ ಯೋಜನೆ ಬಗ್ಗೆ ಕೆಲಸ ಮಾಡಲಾಗುವುದು ಸಭೆಯಲ್ಲಿ ಸರ್ವಸಮ್ಮತ ತೀರ್ಮಾನಕ್ಕೆ ಬರಲಾಗಿದೆ.

    ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳ ಸಭೆ ನಡೆಯಿತು. ಒಂದು ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚೆ ನಡೆಸಿದ ನಾಯಕರು ಹಲವು ವಿಚಾರಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು.

    ಸಭೆ ಬಳಿಕ ಮಾತನಾಡಿದ ಬಸವರಾಜ ಹೊರಟ್ಟಿ, ಮಹದಾಯಿ ವಿಚಾರವಾಗಿ ಮುಂದಿನ ಕ್ರಮದ ಬಗ್ಗೆ ಸಂಪೂರ್ಣ ಚರ್ಚಿಸಲಾಗಿದ್ದು, ಸಂಬಂಧಪಟ್ಟ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಇನ್ನೂ ಮಹದಾಯಿ ವಿಚಾರವಾಗಿ ಉತ್ತಮ ವಾತಾವರಣ ನಿರ್ಮಾಣವಾಗಿದ್ದು, ಇದೊಂದು ಉತ್ತಮ ಹೆಜ್ಜೆ ಆಗಿದ್ದು, ಬಹಳ ಶಾಂತ ರೀತಿಯಲ್ಲಿ ಸಭೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

    ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಮಹದಾಯಿ ವಿಚಾರವಾಗಿ ಈ ಸಭೆ ಮೊದಲ ದಿಟ್ಟ ಹೆಜ್ಜೆಯಾಗಿದ್ದು, ಮಹದಾಯಿ ಸಮಸ್ಯೆಯ ಪರಿಹಾರಕ್ಕೆ ತಾರ್ತಿಕ ಅಂತ್ಯ ಹಾಕಲು ಈ ಸಭೆ ಮಹತ್ವವನ್ನು ಪಡೆದಿದೆ ಎಂದರು.

    ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಮಹದಾಯಿ ಯೋಜನೆ ವಿಚಾರವಾಗಿ ಕರೆದಿರುವ ಜನಪ್ರತಿನಿಧಿಗಳ ಸಭೆಯಲ್ಲಿ ಸರ್ವಪಕ್ಷಗಳ ಜನಪ್ರತಿನಿಧಿಗಳು ಭಾಗಿಯಾಗಿದ್ದು, ಪಕ್ಷಾತೀತವಾಗಿ ಕೆಲಸ ಮಾಡಲು ಈ ಸಭೆ ಸಹಾಯಕಾರಿ ಆಗಿದೆ. ಸಿದ್ದರಾಮಯ್ಯನವರು ಕೂಡಾ ಸಭೆಯ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಎಲ್ಲ ಶಾಸಕರು ಮಹದಾಯಿ ವಿಚಾರವಾಗಿ ಕಾನೂನು ತಜ್ಞರ ಜೊತೆಗೆ ಚರ್ಚಿಸಿ ಅಂತಿಮ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಪಕ್ಷಾತೀತವಾಗಿ ಯಾವುದೇ ದೋಷಾರೋಪಣೆ ಮಾಡದೇ, ಪಕ್ಷಗತ ರಾಜನೀತಿ ಬಿಟ್ಟು ಒಟ್ಟಿಗೆ ಸೇರಿರುವುದು ಒಳ್ಳೆಯ ವಿಚಾರ ಎಂದರು.

    ಸಭೆಯಲ್ಲಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಪ್ರಸಾದ್ ಅಬ್ಬಯ್ಯ, ಆನಂದ್ ಮಾಮನಿ, ಎಂಎಲ್ ಸಿ ಶ್ರೀನಿವಾಸ್ ಮಾನೆ, ಪ್ರದೀಪ್ ಶೆಟ್ಟರ್, ಮಾಜಿ ಶಾಸಕ ಕೋನರೆಡ್ಡಿ, ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಉಪಸ್ಥಿತರಿದ್ದರು.

  • ಕಳಸಾ ಬಂಡೂರಿ ಯೋಜನೆ ಮತ್ತು ಗಡಿ ವಿಚಾರಕ್ಕೆ ಮತ್ತೆ ಪ್ರತಿಭಟನೆ ಶುರು

    ಕಳಸಾ ಬಂಡೂರಿ ಯೋಜನೆ ಮತ್ತು ಗಡಿ ವಿಚಾರಕ್ಕೆ ಮತ್ತೆ ಪ್ರತಿಭಟನೆ ಶುರು

    ಗದಗ: ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಸರ್ಕಾರ ತಡೆಯಾಜ್ಞೆ ನೀಡಿರುವುದು ಹಾಗೂ ಕರ್ನಾಟಕದ ಬೆಳಗಾವಿ, ಕಾರವಾರ ಜಿಲ್ಲೆಗಳು ತನ್ನ ಭಾಗ ಎಂದು ಮಹಾರಾಷ್ಟ್ರ ಕ್ಯಾತೆ ತೆಗೆದಿರುವುದನ್ನು ವಿರೋಧಿಸಿ ಗದಗನಲ್ಲಿ ಕನ್ನಡ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

    ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದ ಮಹಾತ್ಮ ಗಾಂಧೀಜಿ ಸರ್ಕಲ್‍ನಲ್ಲಿ ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

    ಲೋಕಸಭೆ ಚುನಾವಣೆ ವೇಳೆ ಪ್ರಧಾನ ಮಂತ್ರಿಗಳು ಈ ಯೋಜನೆ ಜಾರಿಗೊಳಿಸುವ ಭರವಸೆಗಳನ್ನು ನೀಡಿದ್ದರು. ಈಗ ಕಳಸಾ ಬಂಡೂರಿ ನಾಲಾ ಯೋಜನೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಹಿಂಪಡೆದುಕೊಂಡು ತಡೆಯಾಜ್ಞೆ ನೀಡಿದೆ. ಇದು ಕರ್ನಾಟಕ ರಾಜ್ಯಕ್ಕಾದ ಅನ್ಯಾಯ. ಗೋವಾ ಸರ್ಕಾರದ ತಾಳಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಕುಣಿಯುತ್ತಿದೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಕಳಸಾ ಬಂಡೂರಿ ಯೋಜನೆ ತಡೆಯಾಜ್ಞೆ ಹಿಂಪಡೆಯಬೇಕು, ಕುಡಿಯುವ ನೀರಿನ ನಾಲಾಗೆ ಕೂಡಲೇ ಮತ್ತೆ ಚಾಲನೆ ನೀಡಬೇಕೆಂದು ಆಗ್ರಹಿಸಿದರು.

    ಕರ್ನಾಟಕದ ಬೆಳಗಾವಿ ಹಾಗೂ ಕಾರವಾರ ಜಿಲ್ಲೆಗಳಿಗೆ ಮಹಾರಾಷ್ಟ್ರದ ಅಂಗ ಎಂದು ಮಹಾ ಸಿಂಎಂ ಉದ್ಧವ್ ಠಾಕ್ರೆ ಹೇಳಿಕೆಯನ್ನು ಖಂಡಿಸಲಾಯಿತು. ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ಕೈಹಾಕುವ ಈ ದುರಾಲೋಚನೆ ಕೈಬಿಡಬೇಕು. ಯಾವ ಕಾರಣಕ್ಕೂ ಬೆಳಗಾವಿ, ಕಾರವಾರ ಅಷ್ಟೇ ಅಲ್ಲ, ನಮ್ಮ ರಾಜ್ಯದ ಯಾವ ಹಳ್ಳಿಗಳನ್ನೂ ಬಿಟ್ಟುಕೊಡುವ ಮಾತೇ ಇಲ್ಲ. ಮಹಾರಾಷ್ಟ್ರ ಮತ್ತೆ ಉದ್ಧಟತನ ತೋರಿದರೆ ಉಗ್ರವಾದ ಹೋರಾಟ ಮಾಡುವುದಾಗಿ ಸಂಘಟಕರು ಉದ್ಧವ ಠಾಕ್ರೆಗೆ ಟಕ್ಕರ್ ನೀಡಿದ್ದಾರೆ.

    ಈ ವೇಳೆ ಕೇಂದ್ರ ಸರ್ಕಾರದ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ನರೇಂದ್ರ ಮೋದಿ, ಕೇಂದ್ರ ಸಚಿವರ ಪ್ರತಿಕೃತಿ ದಹನ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

  • ಕಳಸಾ ಬಂಡೂರಿಗೆ ತಡೆ- ಜಾವ್ಡೇಕರ್ ಭೇಟಿ ಮಾಡಿದ ಕೇಂದ್ರ ಸಚಿವರ ನಿಯೋಗ

    ಕಳಸಾ ಬಂಡೂರಿಗೆ ತಡೆ- ಜಾವ್ಡೇಕರ್ ಭೇಟಿ ಮಾಡಿದ ಕೇಂದ್ರ ಸಚಿವರ ನಿಯೋಗ

    ನವದೆಹಲಿ: ಮಹದಾಯಿ ಯೋಜನೆಗೆ ನೀಡಿರುವ ತಾತ್ಕಾಲಿಕ ತಡೆಯನ್ನು ಹಿಂಪಡೆಯುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಕೇಂದ್ರ ಸಚಿವರ ನಿಯೋಗ ಮನವಿ ಮಾಡಿದೆ.

    ಗುರುವಾರ ದೆಹಲಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಉಮೇಶ್ ಕತ್ತಿ ಒಳಗೊಂಡ ನಿಯೋಗ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿ ಮಾಡಿ ಯೋಜನೆಗೆ ಅನುಮತಿ ಮುಂದುವರಿಸುವಂತೆ ಮನವಿ ಮಾಡಿತು.

    ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಯಾಗಿದ್ದು ಇದಕ್ಕೆ ಅಡ್ಡಿ ಮಾಡಬಾರದು ಇಲ್ಲಿ ಯಾವುದೇ ಜಲ ವಿದ್ಯುತ್ ಅಥವಾ ನೀರಾವರಿ ಯೋಜನೆಗಳನ್ನು ಮಾಡುತ್ತಿಲ್ಲ. ಹೀಗಾಗಿ ನೀಡಿರುವ ತಡೆಯನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.

    ಕುಡಿಯುವ ನೀರಿನ ಯೋಜನೆಯಾದ ಹಿನ್ನೆಲೆ ನ್ಯಾಯಾಧಿಕರಣ ನೀರು ಹಂಚಿಕೆ ಮಾಡಿದೆ. ಇದನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟಿಗೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಅರ್ಜಿ ಸಲ್ಲಿಸಿವೆ. ಆದರೆ ಸುಪ್ರೀಂಕೋರ್ಟ್ ತೀರ್ಪು ಏನೇ ಬಂದರೂ ಅದನ್ನು ಮುಂದೆ ಪರಿಶೀಲನೆ ಮಾಡಿಕೊಳ್ಳೋಣ ಈಗ ಸುಪ್ರೀಂ ಕೋರ್ಟ್ ನೆಪವೊಡ್ಡಿ ಯೋಜನೆಗೆ ನೀಡಿರುವ ಅನುಮತಿಗೆ ತಡೆ ನೀಡಬಾರದು, ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

    ಈ ಸಂಬಂಧ ಪ್ರತಿಕ್ರಿಯಿಸಿದ ಶಾಸಕ ಉಮೇಶ್ ಕತ್ತಿ, ಪ್ರಕಾಶ್ ಜಾವ್ಡೇಕರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕುಡಿಯುವ ನೀರಿನ ಯೋಜನೆಗೆ ತೊಂದರೆ ನೀಡುವುದಿಲ್ಲ ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.

    ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಒಪ್ಪಿಗೆ ನೀಡಿತ್ತು. ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇರುವ ಹಿನ್ನೆಲೆ ಒಪ್ಪಿಗೆಗೆ ತಡೆ ನೀಡುವಂತೆ ಗೋವಾ ಸರ್ಕಾರ ಕೇಂದ್ರ ಸಚಿವ ಜಾವ್ಡೇಕರ್ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿತ್ತು. ಒತ್ತಡದ ಬೆನ್ನೆಲ್ಲೇ ಬುಧವಾರ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಯೋಜನೆಗೆ ನೀಡಿದ್ದ ಒಪ್ಪಿಗೆಗೆ ತಡೆ ನೀಡಿತ್ತು.

  • ಕಳಸಾ ಬಂಡೂರಿ ಯೋಜನೆಗೆ ವಿಘ್ನ ದೂರ- ಗೋವಾ ಫಾರ್ವರ್ಡ್ ಪಾರ್ಟಿಗೆ ಮುಖಭಂಗ

    ಕಳಸಾ ಬಂಡೂರಿ ಯೋಜನೆಗೆ ವಿಘ್ನ ದೂರ- ಗೋವಾ ಫಾರ್ವರ್ಡ್ ಪಾರ್ಟಿಗೆ ಮುಖಭಂಗ

    ನವದೆಹಲಿ: ಕಳಸಾ ಬಂಡೂರಿ ಯೋಜನೆಗೆ ಇದ್ದ ವಿಘ್ನಗಳು ದೂರಾಗಿವೆ. ಯೋಜನೆಗೆ ಖ್ಯಾತೆ ತೆಗೆದಿದ್ದ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‍ಪಿ)ಗೆ ಮುಖಭಂಗವಾಗಿದೆ.

    ಮಹದಾಯಿ, ಕಳಸಾ-ಬಂಡೂರಿ ನಾಲೆಗಳ ತಿರುವು ಯೋಜನೆಗೆ ಅನುಮತಿ ನೀಡಿ ಕೇಂದ್ರ ಸರ್ಕಾರದ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಜಿಎಫ್‍ಪಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದೂರು ಸಲ್ಲಿಸಿತ್ತು.

    ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರವು ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಿದೆ. ಈ ಮೂಲಕ ಪರಿಸರ ರಕ್ಷಣೆಗಾಗಿ ಹೋರಾಡುತ್ತಿರುವ ಗೋವಾ ಪರ ನಿಲ್ಲದೆ ಕರ್ನಾಟಕ ಬೆಂಬಲ ನೀಡಿದೆ ಎಂದು ದೂರಿದ್ದರು. ಜೊತೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ದಾವಂತ್ ನೇತೃತ್ವದ ಸರ್ವ ಪಕ್ಷಗಳ ನಿಯೋಗವು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತ್ತು.

    ಕುಡಿಯುವ ನೀರಿಗಾಗಿ ಯೋಜನೆಯೇ ಹೊರತು ವಿದ್ಯುತ್ ಉತ್ಪಾದನೆಗಲ್ಲ. ಹಾಗಾಗಿ ಇಐಎ (ಎನ್ವಿರಾನ್‍ಮೆಂಟ್ ಇಂಪ್ಯಾಕ್ಟ್ ಅಸೆಸ್‍ಮೆಂಟ್) ಅಗತ್ಯ ಇಲ್ಲ ಅಂತ ಅಕ್ಟೋಬರ್ 17ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹೇಳಿತ್ತು. ಆದರೆ ಕರ್ನಾಟಕ ವಿದ್ಯುತ್ ಉತ್ಪಾದನೆ ಮತ್ತು ನೀರಾವರಿಗೆ ಯೋಜನೆ ಮಾಡುತ್ತಿದೆ ಎಂದು ಗೋವಾ ಫಾರ್ವರ್ಡ್ ಪಾರ್ಟಿ ದೂರಿತ್ತು.

    ಈ ಸಂಬಂಧ ವಿಚಾರಣೆ ನಡೆಸಿ ಇಂದು ಅರ್ಜಿ ವಜಾಗೊಳಿಸಿರುವ ಹಸಿರು ನ್ಯಾಯಾಧೀಕರಣ, ಈ ಹಂತದಲ್ಲಿ ಅರ್ಜಿಯ ವಿಚಾರಣೆ ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದೆ. ಈ ಮೂಲಕ ಗೋವಾ ಫಾರ್ವರ್ಡ್ ಪಾರ್ಟಿಗೆ ಹಿನ್ನಡೆಯಾಗಿದೆ. ಇತ್ತ ಬೆಳಗಾವಿಯ ಖಾನಾಪೂರ ತಾಲೂಕಿನಲ್ಲಿ ಯೋಜನೆ ನಡೆಯುತ್ತಿದೆ.