Tag: ಕಳಸಾ ಕಾಮಗಾರಿ

  • ಕಳಸಾ ಕಾಮಗಾರಿ ನಡೆಯೋ ಕಣಕುಂಬಿಗೆ ಗೋವಾ ವಿಧಾನಸಭೆ ಟೀಂ ದಿಢೀರ್ ಭೇಟಿ

    ಕಳಸಾ ಕಾಮಗಾರಿ ನಡೆಯೋ ಕಣಕುಂಬಿಗೆ ಗೋವಾ ವಿಧಾನಸಭೆ ಟೀಂ ದಿಢೀರ್ ಭೇಟಿ

    ಬೆಳಗಾವಿ: ಮಹದಾಯಿ ನದಿ ನೀರುಹಂಚಿಕೆ ವಿವಾದ ವಿಚಾರ ಸಂಬಂಧಿಸಿದಂತೆ ಕರ್ನಾಟಕ ಕಣಕುಂಬಿಗೆ ಗೋವಾ ವಿಧಾನಸಭೆ ಸ್ವೀಕರ್ ನೇತೃತ್ವದ ತಂಡ ಇಂದು ಭೇಟಿ ನೀಡಿದೆ.

    ಕರ್ನಾಟಕ ಸರ್ಕಾರ ಕಳಸಾ ಕಾಮಗಾರಿ ನಡೆಸುತ್ತಿರುವ ಪ್ರದೇಶ ಇದಾಗಿದ್ದು, ಗೋವಾ ವಿಧಾನಸಭಾ ಸ್ಪೀಕರ್ ಪ್ರಮೋದ್ ಸಾವಂತ್, ಡೆಪ್ಯೂಟಿ ಸ್ಪೀಕರ್ ಮೈಖೆಲ್ ಲೋಬೋ ಹಾಗೂ ಹಲವು ಹಾಲಿ ಮತ್ತು ಮಾಜಿ ಶಾಸಕರು ಸೇರಿದಂತೆ 40 ಜನರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

    ಈ ವೇಳೆ ಕಣಕುಂಬಿಯಲ್ಲಿ ಮಾತನಾಡಿದ ಗೋವಾ ಡೆಪ್ಯೂಟಿ ಸ್ಪೀಕರ್ ಮೈಕಲ್ ಲೋಬೋ, ನ್ಯಾಯಾಧೀಕರಣದ ಆದೇಶವನ್ನು ಕರ್ನಾಟಕ ಉಲ್ಲಂಘನೆ ಮಾಡಿದೆ. ಕರ್ನಾಟಕ ಸರ್ಕಾರ ನಿಯಮ ಉಲ್ಲಂಘನೆ ಮಾಡಿ ಗೋವಾಕ್ಕೆ ಹೋಗುವ ನೀರನ್ನು ತಡೆಯುವ ಯತ್ನ ಮಾಡಿದೆ. ನ್ಯಾಯಾಧೀಕರಣ ಸಮಿತಿಯನ್ನು ರಚಿಸಿ ತನಿಖೆ ನಡೆಸಬೇಕು. ಇದು ಕೇವಲ ಸಾಮಾನ್ಯ ಭೇಟಿ ಅಷ್ಟೇ ಎಂದು ಹೇಳಿದರು.

    ಮಹದಾಯಿ ನ್ಯಾಯಾಧೀಕರಣ ಆದೇಶ ಉಲ್ಲಂಘಿಸಿ ಕರ್ನಾಟಕ ಕಾಮಗಾರಿ ನಡೆಸುತ್ತಿದೆ ಎನ್ನುವ ಆರೋಪದ ಹಿನ್ನೆಲೆ ಗೋವಾ ತಂಡದ ಈ ಭೇಟಿ ತೀವ್ರ ಕುತೂಹಲವನ್ನು ಉಂಟುಮಾಡಿದೆ. ಸ್ಥಳದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ, ಎಸ್ಪಿ ಉಪಸ್ಥಿತರಿದ್ದರು. ಮುಂಜಾಗೃತ ಕ್ರಮವಾಗಿ ಕಳಸಾ ನಾಲೆ ಸುತ್ತ ವ್ಯಾಪಕ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

    ಸಿಎಂ ಸ್ಪಷ್ಟನೆ: ಗೋವಾ ಸ್ಪೀಕರ್ ತಂಡದಿಂದ ಕಳಸಾ ನಾಲಾ ಯೋಜನೆ ವೀಕ್ಷಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಗೋವಾ ರಾಜ್ಯದಿಂದ ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಹಾಗೂ ಅವರ ತಂಡ ಕಳಸಾ ಕಾಮಗಾರಿ ನಡೆಯೋ ಕಣಕುಂಬಿಗೆ ಬಂದಿದ್ದಾರೆ. ಅವರನ್ನು ತಡೆಯುವುದು ಬೇಡ. ಶಿಷ್ಟಾಚಾರದ ಪ್ರಕಾರ ಅವರ ಜೊತೆ ಸಹಕರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅವರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡುವುದರ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಸ್ಥಳ ವೀಕ್ಷಣೆ ಮಾಡಿ ಹೋಗಲಿ. ಆದರೆ ನಾವು ಯಾವುದೇ ಕಾಮಗಾರಿ ಮುಂದುವರೆಸಿಲ್ಲ. ನ್ಯಾಯಾಧೀಕರಣದ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.