Tag: ಕಳಲೆ ಕೇಶವಮೂರ್ತಿ

  • ಶಾಸಕರಾಗಿ ಕಳಲೆ ಕೇಶವಮೂರ್ತಿ, ಗೀತಾ ಮಹದೇವಪ್ರಸಾದ್ ಪ್ರಮಾಣವಚನ ಸ್ವೀಕಾರ

    ಶಾಸಕರಾಗಿ ಕಳಲೆ ಕೇಶವಮೂರ್ತಿ, ಗೀತಾ ಮಹದೇವಪ್ರಸಾದ್ ಪ್ರಮಾಣವಚನ ಸ್ವೀಕಾರ

    ಬೆಂಗಳೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ನೂತನ ಶಾಸಕರಾಗಿ ಚುನಾಯಿತರಾದ ಕಳಲೆ ಕೇಶವಮೂರ್ತಿ ಹಾಗೂ ಡಾ. ಗೀತಾ ಮಹದೇವ ಪ್ರಸಾದ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಪೀಕರ್ ಕೆಬಿ ಕೋಳಿವಾಡ ಪ್ರಮಾಣ ವಚನ ಬೋಧನೆ ಮಾಡಿದ್ರು.

    ಸಿಎಂ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಕಳಲೆ ಕೇಶವಮೂರ್ತಿ ಅವರು ಶ್ರೀಕಂಠೇಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಹಾಗೆ ಮಲೆ ಮಹದೇಶ್ವರನ ಹೆಸರಿನಲ್ಲಿ ಗೀತಾ ಮಹದೇವಪ್ರಸಾದ್ ಪ್ರಮಾಣ ವಚನ ಸ್ವೀಕಾರ ಮಾಡಿದ್ರು.

    ಇದೇ ವೇಳೆ ಮಾತನಾಡಿದ ಶಾಸಕಿ ಗೀತಾ ಮಹದೇವಪ್ರಸಾದ್, ಸಚಿವ ಸ್ಥಾನ ನೀಡುವ ಬಗ್ಗೆ ಯಾವುದೇ ರೀತಿಯ ಚರ್ಚೆ ಆಗಿಲ್ಲ. ಅದರ ಬಗ್ಗೆ ನಾನು ಯಾವುದೇ ಯೋಚನೆ ಮಾಡಿಲ್ಲ. ಅವರು ಕೊಟ್ಟರೆ ಮುಂದೆ ನೋಡೋಣ ಅಂದ್ರು.

    ಕ್ಷೇತ್ರದಲ್ಲಿ ಮಹದೇವಪ್ರಸಾದ್ ರವರು ಶೇ. 85ರಷ್ಟು ಕೆಲಸ ಮಾಡಿದ್ದಾರೆ. ನಾನು ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮುಗಿಸಬೇಕಾಗಿದೆ. ಅವರ ನೆನಪು ಇನ್ನೂ ನಮ್ಮನ್ನ ಕಾಡುತ್ತಿದೆ. ಕೆರೆಗೆ ನೀರು ತುಂಬುವ ಯೋಜನೆ ಬಾಕಿಯಿದೆ. ಆ ಕೆಲಸವನ್ನ ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತೇನೆ. ಶಾಸಕಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಖುಷಿ ತಂದಿದೆ. ನಮ್ಮ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಅಂತ ಗೀತಾ ಮಹದೇವಪ್ರಸಾದ್ ಹೇಳಿದ್ರು .

    ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಶಾಸಕನಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ತುಂಬಾ ಸಂತೋಷವಾಗಿದೆ. ಕ್ಷೇತ್ರದ ಮತದಾರರಿಗೆ ನಾನು ಋಣಿಯಾಗಿರುವೆ. ಉಳಿದ ಅಲ್ಪಾವಧಿಯಲ್ಲೇ ಕ್ಷೇತ್ರದಲ್ಲಿ ಜನರ ಕೆಲಸ ಮಾಡುತ್ತೇನೆ ಅಂದ್ರು.

     

  • ನಂಜನಗೂಡಿನಲ್ಲಿ ಕಾಂಗ್ರೆಸ್‍ಗೆ ‘ಪ್ರಸಾದ’

    ನಂಜನಗೂಡಿನಲ್ಲಿ ಕಾಂಗ್ರೆಸ್‍ಗೆ ‘ಪ್ರಸಾದ’

    ಮೈಸೂರು: ಪ್ರತಿಷ್ಠೆಯ ಕಣವಾಗಿದ್ದ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್‍ನ ಕಳಲೆ ಕೇಶವಮೂರ್ತಿ 21,334 ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ವಿಜಯದ ನಗೆ ಬೀರಿದ್ದಾರೆ.

    ಕಳಲೆ ಕೇಶವಮೂರ್ತಿ ಅವರಿಗೆ 86,212 ಮತಗಳು ಸಿಕ್ಕಿದ್ದರೆ ಬಿಜೆಪಿಯ ವಿ.ಶ್ರೀನಿವಾಸ್ ಪ್ರಸಾದ್‍ಗೆ 64,878 ಮತಗಳು ಲಭಿಸಿವೆ. 1,665 ನೋಟ ಮತಗಳು ಬಿದ್ದಿವೆ.

    ಆರಂಭಿಕ ಹಂತದಿಂದಲೂ ಮುನ್ನಡೆ ಸಾಧಿಸಿಕೊಂಡು ಬಂದಿದ್ದ ಕಳಲೆ ಕೇಶವಮೂರ್ತಿ ಅಂತಿಮವಾಗಿ 2013ರ ಸೋಲಿಗೆ ಸೇಡು ತೀರಿಸಿಕೊಂಡರು.

    2013 ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಶ್ರೀನಿವಾಸ ಪ್ರಸಾದ್ 50, 784 ಮತಗಳನ್ನು ಗಳಿಸಿದ್ದರೆ, ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಕಳಲೆ ಕೇಶವಮೂರ್ತಿ 41,843 ಮತಗಳನ್ನು ಪಡೆದಿದ್ದರು.

    ಸಿಎಂ ಸಿದ್ದರಾಮಯ್ಯ ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಶ್ರೀನಿವಾಸಪ್ರಸಾದ್ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಜೆಡಿಎಸ್‍ನಲ್ಲಿದ್ದ ಕಳಲೆ ಕೇಶವಮೂರ್ತಿ ಜೆಡಿಎಸ್‍ಗೆ ರಾಜೀನಾಮೆ ನೀಡಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದ ಕಾರಣ ಪರೋಕ್ಷವಾಗಿ ಕಳಲೆ ಗೆಲುವಿಗೆ ಕಾರಣವಾಗಿದೆ.

  • ಸರ್ಕಾರದ ಯೋಜನೆಗಳೇ ನನಗೆ ಶ್ರೀರಕ್ಷೆ: ಕಳಲೆ ಕೇಶವಮೂರ್ತಿ

    ಸರ್ಕಾರದ ಯೋಜನೆಗಳೇ ನನಗೆ ಶ್ರೀರಕ್ಷೆ: ಕಳಲೆ ಕೇಶವಮೂರ್ತಿ

    ಮೈಸೂರು: ಸರ್ಕಾರದ ಅಭಿವೃದ್ಧಿ ಕೆಲಸಗಳನ್ನ ನೋಡಿ ಜನರು ನನಗೆ ಮತ ಹಾಕಿದ್ದಾರೆ ಅಂತಾ ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶ ಮೂರ್ತಿ ಹೇಳಿದ್ದಾರೆ.

    ಈ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಶವ ಮೂರ್ತಿ, ಇದು ಹಣದಿಂದ ಆಗಿರುವ ಚುನಾವಣೆಯಲ್ಲ ಅಭಿವೃದ್ಧಿ ನೋಡಿ ಮತ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಆಶೀರ್ವಾದಿಸಿದ್ದಾರೆ ಅಂತಾ ಹೇಳಿದ್ದಾರೆ.

    ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಆರಂಭಿಕ ಹಂತದಿಂದಲೂ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿಕೊಂಡು ಬಂದಿದೆ.

    ಮೂರನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಕಳಲೆ ಕೇಶವಮೂರ್ತಿ 18,477 ಮತಗಳನ್ನು ಪಡೆದರೆ, ಶ್ರೀನಿವಾಸ ಪ್ರಸಾದ್ 9,244 ಮತಗಳಿಂದ ಹಿನ್ನಡೆ ಸಾಧಿಸಿದ್ದಾರೆ.

  • ಅಂತೂ ಕಾಂಗ್ರೆಸ್ ಬತ್ತಳಿಕೆ ಸೇರಿತು ಜೆಡಿಎಸ್ ಬ್ರಹ್ಮಾಸ್ತ್ರ

    ಕೆಪಿ ನಾಗರಾಜ್
    ನಂಜನಗೂಡಿನ ಪ್ರಭಾವಿ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರುವುದು ಅಧಿಕೃತವಾಗಿದೆ. ಯಾವಾಗ ಎಂಬ ದಿನಾಂಕ ಮಾತ್ರ ನಿರ್ಧಾರವಾಗಬೇಕಿದೆ. ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ್ದೆ ಪಬ್ಲಿಕ್ ಟಿವಿ ವೆಬ್‍ಸೈಟ್. ಒಂದು ತಿಂಗಳ ಹಿಂದೆಯೆ ಪಬ್ಲಿಕ್ ಟಿವಿ ವೆಬ್‍ಸೈಟ್‍ನಲ್ಲಿ ಈ ಸುದ್ದಿ ಬರೆಯಲಾಗಿತ್ತು. ಇವತ್ತು, ಇದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

    ನಂಜನಗೂಡಿನಲ್ಲಿ ಸಭೆ ನಡೆಸಿದ ಕಳಲೆ ಕೇಶವಮೂರ್ತಿ ತಾವು ತಮ್ಮ ಹಿತೈಷಿಗಳ ಅಭಿಪ್ರಾಯದಂತೆ ಕಾಂಗ್ರೆಸ್ ಸೇರುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಂಜನಗೂಡು ಉಪ ಚುನಾವಣೆಯಲ್ಲಿ ವಿ. ಶ್ರೀನಿವಾಸಪ್ರಸಾದ್ ವಿರುದ್ಧ ತಾವೇ ಕಾಂಗ್ರೆಸ್‍ನ ಅಭ್ಯರ್ಥಿ ಎಂಬುದನ್ನು ಹೇಳಿದ್ದಾರೆ. ಹೀಗಾಗಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯೋ ಪ್ಲಾನ್ ನಡೆಸಿದ್ದ ಮೂಲ ಕಾಂಗ್ರೆಸಿಗರ ಕನಸಿಗೆ ತಣ್ಣೀರು ಎರಚಿದಂತಾಗಿದೆ.

    ಈ ಉಪ ಚುನಾವಣೆಯಲ್ಲೆ ತಮ್ಮ ಮಗನಿಗೆ ಚುನಾವಣಾ `ಟ್ರಯಲ್’ ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ, ಮಹದೇವಪ್ಪ ಅಂದುಕೊಂಡಿದ್ದರು. ಇದಕ್ಕಾಗಿ, ನಂಜನಗೂಡು ಕ್ಷೇತ್ರದ ಹಳ್ಳಿ ಹಳ್ಳಿಯನ್ನು ಸುತ್ತಿದ್ದರು. ಯಾರೇ ಅಭ್ಯರ್ಥಿ ಆದರೂ ತಾವೇ ಓಡಾಟ ಮಾಡಬೇಕು. ಹಣ ವೆಚ್ಚ ಮಾಡಬೇಕು. ಪರಿಸ್ಥಿತಿ ಹೀಗಿರುವಾಗ ತಮ್ಮ ಮಗನಿಗೆ ಯಾಕೆ ಟಿಕೆಟ್ ಕೊಡಿಸಿ ಒಂದು ಟ್ರಯಲ್ ನೋಡಬಾರದು. ಗೆದ್ದರೆ ಮಗ ಶಾಸಕ, ಸೋತರೆ ಮಗನಿಗೆ ಒಂದು ಕ್ಷೇತ್ರ ಸಿಕ್ಕಂತಾಗುತ್ತೆ. ಜೊತೆಗೆ ಚುನಾವಣೆ ಎದುರಿಸೋ ಅನುಭವವಾಗುತ್ತೆ ಅನ್ನೋದು ಮಹದೇವಪ್ಪ ಅವರ ಪ್ಲಾನ್ ಆಗಿತ್ತು.

    ಆದರೆ, ಕ್ಷೇತ್ರದಲ್ಲಿನ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸಚಿವರ ಮಗ ಸುನೀಲ್‍ಬೋಸ್‍ಗೆ ಟಿಕೆಟ್ ಕೊಡೋ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಶ್ರೀನಿವಾಸಪ್ರಸಾದ್ ಅಂತಹ ಹಿರಿಯ ರಾಜಕಾರಣಿ ಮುಂದೆ ಸುನೀಲ್‍ಬೋಸ್ ಸ್ಪರ್ಧಿಸಿದರೆ ಸೋಲಿನ ಜೊತೆಗೆ ದೊಡ್ಡ ಅವಮಾನ ಎದುರಿಸಬೇಕಾಗುತ್ತೆ. ಹೀಗಾಗಿ, ಸುನೀಲ್‍ಬೋಸ್‍ಗೆ ಟಿಕೆಟ್ ಬೇಡ ಅನ್ನೋ ಕೂಗು ಎದ್ದಿತ್ತು. ಈ ಕೂಗಿಗೆ ಚಾಮರಾಜನಗರ ಸಂಸದ ಧೃವನಾರಾಯಣ್ ಕೂಡ ಧ್ವನಿ ಸೇರಿಸಿದ್ದರು ಎನ್ನಲಾಗುತ್ತಿದೆ. ಹೀಗಾಗಿ, ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ, ಮಹದೇವಪ್ಪಗೆ ಮಗನನ್ನು ಕಣಕ್ಕೆ ಇಳಿಸೋ ಯೋಚನೆ ಕೈ ಬಿಡುವಂತೆ ಹೇಳಿದ್ದರು. ಇದರಿಂದ, ಮಹದೇವಪ್ಪ ಬೇಸರಕ್ಕೆ ಒಳಗಾಗಿದ್ದು ಈಗ ಕ್ಷೇತ್ರದಲ್ಲಿ ಗುಟ್ಟಾಗಿ ಉಳಿದಿಲ್ಲ.

    ಪ್ರತಿಷ್ಠೆಯ ಮಹಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೂಕ್ತ ಅಭ್ಯರ್ಥಿಗಾಗಿ ಕವಡೆ ಬೀಡುತ್ತಿದ್ದ ಸಿಎಂ ಟೀಂ ಈಗ ಯಶಸ್ವಿಯಾಗಿ ಆಪರೇಷನ್ ಕಾಂಗ್ರೆಸ್ ನಡೆಸಿದೆ. ನಂಜನಗೂಡಿನ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಲು ನಿರ್ಧರಿಸಿದೆ. ಇದನ್ನು ಒಪ್ಪಿದ ಕಳಲೆ ಕೇಶವಮೂರ್ತಿ ಇವತ್ತು ಜೆಡಿಎಸ್‍ಗೆ ಗುಡ್ ಬೈ ಹೇಳಿದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳಲೆ ಕೇಶವಮೂರ್ತಿ, ಶ್ರೀನಿವಾಸಪ್ರಸಾದ್ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಈ ಭಾಗದ ದಲಿತ, ಲಿಂಗಾಯತ ಹಾಗೂ ಒಕ್ಕಲಿಗ ಮತದಾರರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರೋ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಅಭ್ಯರ್ಥಿಯಾದರೆ ಚುನಾವಣೆಯಲ್ಲಿ ಲಾಭವಾಗುತ್ತೆ ಅನ್ನೊ ಲೆಕ್ಕಚಾರ ದಿಂದ ಕಾಂಗ್ರೆಸ್ ಕಳಲೆ ಕೇಶವಮೂರ್ತಿಗೆ ಮಣೆ ಹಾಕಿದೆ.

    ಅಲ್ಲದೆ, ಕಳಲೆ ಕೇಶವಮೂರ್ತಿ ಕಾಂಗ್ರೆಸ್‍ನಿಂದ ಸ್ಪರ್ಧೆಗೆ ಇಳಿಯೋ ಕಾರಣ ಜೆಡಿಎಸ್‍ಗೆ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿ ಇಲ್ಲ. ತಮ್ಮ ಬತ್ತಳಿಕೆಯಲ್ಲಿನ ಪ್ರಬಲ ಆಸ್ತ್ರವೇ ಕಾಂಗ್ರೆಸ್‍ಗೆ ಹೋಗಿರೋ ಕಾರಣ ಜೆಡಿಎಸ್ ಮೌನವಾಗಿಯೆ ಕಣದಿಂದ ಹಿಂದೆ ಸರಿಯುತ್ತಾರೆ. ಇದರಿಂದ ಜೆಡಿಎಸ್ ಮತಗಳು ಕೇಶವಮೂರ್ತಿ ವರ್ಚಸ್ಸಿನಿಂದ ಕಾಂಗ್ರೆಸ್‍ಗೆ ಬರುತ್ತೆ ಅನ್ನೋ ಲೆಕ್ಕ ಹಾಕಿಯೇ ಸಿಎಂ ಟೀಂ, ಕಳಲೆ ಕೇಶವಮೂರ್ತಿಯನ್ನು ಅಭ್ಯರ್ಥಿ ಮಾಡಲು ಮುಂದಾಗಿದೆ.

    ಅಲ್ಲಿಗೆ, ಕಳೆದ ಚುನಾವಣೆಯಲ್ಲಿ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಯಾರು ಪ್ರಬಲ ಪೈಪೋಟಿ ನೀಡಿದ್ದರೋ ಅವರೆ ಇವತ್ತು ಕಾಂಗ್ರೆಸ್‍ನಿಂದ ಕಣಕ್ಕೆ ಇಳಿಯೋದು ನಿಶ್ಚಿತ. ಕಾಂಗ್ರೆಸ್‍ನ ಈ ಆಪರೇಷನ್ ಲೆಕ್ಕಚಾರಗಳು ವರ್ಕ್ ಔಟ್ ಆಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಸಿಗೋಕೆ ಇನ್ನೂ ಎರಡು ತಿಂಗಳು ಕಾಯಬೇಕಿದೆ.

  • ನಾನು ಕಾಂಗ್ರೆಸ್‍ಗೆ ಸೇರುತ್ತಿರುವುದು ಯಾಕೆ: ಕೇಶವಮೂರ್ತಿ ಉತ್ತರಿಸಿದ್ದು ಹೀಗೆ

    ಮೈಸೂರು: ನಾನು ಜನರ ಮತ್ತು ಅಭಿಮಾನಿಗಳ ಆಸೆಯಂತೆ ಕಾಂಗ್ರೆಸ್‍ಗೆ ಸೇರ್ಪಡೆ ಆಗುತ್ತಿದ್ದೇನೆ ಎಂದು ಜೆಡಿಎಸ್ ಪಕ್ಷದ ಮುಖಂಡ ಕಳಲೆ ಕೇಶವಮೂರ್ತಿ ಹೇಳಿದ್ದಾರೆ.

    ಇಂದು ಕೇಶವಮೂರ್ತಿ ಆಪ್ತರು ಮತ್ತು ಬೆಂಬಲಿಗರ ಸಭೆ ಕರೆದಿದ್ದರು. ಈ ಸಭೆಯ ನಂತರ ಜೆಡಿಎಸ್ ನಿಂದ ಹೊರ ಬರುತ್ತಿರುವುದಾಗಿ ತಿಳಿಸಿದರು. ಇನ್ನು ಕಲವೇ ದಿನಗಳಲ್ಲಿ ಕೇಶವಮೂರ್ತಿ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ. ನಂಜನಗೂಡಿನ ಉಪಚುನಾವಣೆಯಲ್ಲಿ ಕೇಶವಮೂರ್ತಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿ ಆಗುವ ಸಾಧ್ಯತೆಗಳಿವೆ.

    ನಾನು ಸ್ವಾಭಿಮಾನದ ಹೆಸರು ಹೇಳಿಕೊಂಡು ಪಕ್ಷಾಂತರ ಮಾಡುವಂತಹ ವ್ಯಕ್ತಿಯಲ್ಲ ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು. ನಾನು ನಂಜನಗೂಡಿನಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿದವನು. ಈಗ ಪಕ್ಷ ತೊರೆಯುವ ಪರಿಸ್ಥಿತಿ ಬಂದೊದಗಿದೆ. ನಾನು ಕಾಂಗ್ರೆಸ್ ಸೇರುವ ಅನಿವಾರ್ಯತೆ ಎದುರಾಗಿದೆ ಎಂದು ಕೇಶವಮೂರ್ತಿ ತಿಳಿಸಿದರು.

    ಜೆಡಿಎಸ್ ನಿಂದಲೇ ಸ್ಪರ್ಧಿಸಿದರೆ ರಾಜ್ಯ ಸರ್ಕಾರದ ಹಣ ಬಲ, ತೋಳ್ಬಲದ ಮುಂದೆ ಜಯಿಸುವುದು ಕಷ್ಟವಾಗುತ್ತದೆ. ಇದನ್ನು ದೇವೇಗೌಡರಿಗೆ ಹೇಳಿದ್ದೇನೆ. ಅವರು ನನಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಜೆಡಿಎಸ್ ನಿಂದ ಅಭ್ಯರ್ಥಿ ಹಾಕದೇ ನನ್ನ ಗೆಲುವಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದಲೇ ನಾನು ಕಾಂಗ್ರೆಸ್ ನತ್ತ ಮುಖ ಮಾಡಿದ್ದೇನೆ ಎಂದು ಹೇಳಿದರು.