Tag: ಕಳಪೆ ಆಹಾರ

  • ಹಾವೇರಿ| ಕಳಪೆ ಗುಣಮಟ್ಟದ ಆಹಾರ ವಿತರಣೆ – ಹಾಸ್ಟೆಲ್ ವಿದ್ಯಾರ್ಥಿಗಳಿಂದ ಉಪವಾಸ ಧರಣಿ

    ಹಾವೇರಿ| ಕಳಪೆ ಗುಣಮಟ್ಟದ ಆಹಾರ ವಿತರಣೆ – ಹಾಸ್ಟೆಲ್ ವಿದ್ಯಾರ್ಥಿಗಳಿಂದ ಉಪವಾಸ ಧರಣಿ

    ಹಾವೇರಿ: ಕಳಪೆ ಗುಣಮಟ್ಟದ ಆಹಾರ ವಿತರಣೆ ವಿರುದ್ಧ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಊಟ ಸೇವಿಸದೆ ಉಪವಾಸ ಕುಳಿತ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.

    ತಾಲೂಕಿನ ದೇವಗಿರಿ ಎಂಜಿನಿಯರಿಂಗ್ ಕಾಲೇಜು ಹಿಂಭಾಗದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಇಲಿ ಹಿಕ್ಕೆ ಬಿದ್ದ ಅಕ್ಕಿ, ನೊರಜು, ಹುಳ ಹತ್ತಿದ ತರಕಾರಿ, ಕೊಳೆತ ಬಾಳೆ ಹಣ್ಣು, ಕೆಟ್ಟು ನಾರುವ ಮೊಟ್ಟೆ ವಿತರಣೆ ಮಾಡುತ್ತಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳು ಹಾಸ್ಟೆಲ್ ಅವ್ಯವಸ್ಥೆ ಬೆಳಕಿಗೆ ತರುತ್ತಿದ್ದಂತೆ ಹಾಸ್ಟೆಲ್ ಸಿಬ್ಬಂದಿ ಕೊಳೆತು ಹಾಳಾದ ಆಹಾರ ಪದಾರ್ಥಗಳನ್ನು ಹಾಸ್ಟೆಲ್ ಹಿಂಭಾಗದಲ್ಲಿ ಎಸೆದು ಬಂದಿದ್ದಾರೆ. ಇದನ್ನೂ ಓದಿ: Kolar | ಪರಿಚಯಸ್ಥರ ಸೋಗಿನಲ್ಲಿ ಬಂದು ಒಂಟಿ ಮನೆ ದೋಚಿದ ನಾಲ್ವರು ದುಷ್ಕರ್ಮಿಗಳು

    ಇನ್ನು ಹಾಸ್ಟೆಲ್‌ನಲ್ಲಿಯ ವಿದ್ಯಾರ್ಥಿಗಳ ಗ್ರಂಥಾಲಯವನ್ನೆ ದಾಸ್ತಾನು ಕೊಠಡಿ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಿ, ಗುಣಮಟ್ಟದ ಊಟಕ್ಕೆ ಆದ್ಯತೆ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಓದಿಗೆ ಬೇಕಾದ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕು. ಅಲ್ಲಿಯವರೆಗೂ ಊಟ ಮಾಡುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ಕುಳಿತಿದ್ದಾರೆ. ಇದನ್ನೂ ಓದಿ: ಶೃಂಗೇರಿಗೆ ಡಿಕೆಶಿ ಭೇಟಿ – ಕಾರ್ತ ವೀರ್ಯಾರ್ಜುನನಿಗೆ ವಿಶೇಷ ಪೂಜೆ

  • ವಿದ್ಯಾರ್ಥಿಗಳಿಗೆ ಕಳಪೆ ಆಹಾರ ಪೂರೈಕೆ ಸಾಬೀತು- ಸಿಬ್ಬಂದಿಗೆ ಡಿಸಿ ತರಾಟೆ

    ವಿದ್ಯಾರ್ಥಿಗಳಿಗೆ ಕಳಪೆ ಆಹಾರ ಪೂರೈಕೆ ಸಾಬೀತು- ಸಿಬ್ಬಂದಿಗೆ ಡಿಸಿ ತರಾಟೆ

    ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹುಳು ಮಿಶ್ರಿತ ಆಹಾರ ಸೇವಿಸಿ 30ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಆದರ್ಶ ವಿದ್ಯಾಲಯಕ್ಕೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು.

    ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ನಿನ್ನೆ ಸಂಭವಿಸಿದ ಘಟನೆಯ ಕುರಿತು ಆದರ್ಶ ಶಾಲೆಯ ವಿದ್ಯಾರ್ಥಿಗಳು ಹಾಗೂ ಅಡುಗೆ ತಯಾರಿಸುವ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳು ಅಸ್ವಸ್ಥರಾಗಲು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಅಡುಗೆಗೆ ಬಳಕೆ ಮಾಡಿರುವುದೇ ಕಾರಣ ಎಂಬುದು ಭೇಟಿ ವೇಳೆ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

    ಆದರ್ಶ ವಿದ್ಯಾಲಯದ ಅವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ತನಿಖೆಗೆ ಆದೇಶಿಸುವಂತೆಯೂ ಮನವಿ ಮಾಡಿದರು. ಇದೇ ವೇಳೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲಿಸಿದ ಅಕ್ಕಿ, ಬೇಳೆ, ಗೋಧಿ ಉತ್ಪನ್ನಗಳಲ್ಲಿ ಹುಳುಗಳು ಇರುವುದು ಪತ್ತೆಯಾಯಿತು. ಅವಧಿ ಮುಗಿದಿರುವ ಹಾಲಿನ ಪುಡಿಯ ಪೊಟ್ಟಣಗಳನ್ನು ಬಳಕೆ ಮಾಡುತ್ತಿರುವ ವಿಷಯವೂ ಬೆಳಕಿಗೆ ಬಂದಿದೆ.

    ನವೆಂಬರ್ ಅಂತ್ಯಕ್ಕೆ ಅವಧಿ ಮುಗಿದಿರುವ ಹಾಲಿನ ಪುಡಿಯ ಪೊಟ್ಟಣ ಬಳಕೆ ಮಾಡುತ್ತಿರುವ ಬಗ್ಗೆ ಆದರ್ಶ ವಿದ್ಯಾಲಯದ ಸಿಬ್ಬಂದಿಗಳನ್ನು ಅಭಿರಾಮ್ ಜಿ ಶಂಕರ್ ಪ್ರಶ್ನಿಸಿ, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದಕ್ಕೆ ಶಾಲಾ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

  • ಕಳಪೆ ಗುಣಮಟ್ಟದ ಆಹಾರ ಸೇವಿಸಿ 12 ಮಂದಿ ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ

    ಕಳಪೆ ಗುಣಮಟ್ಟದ ಆಹಾರ ಸೇವಿಸಿ 12 ಮಂದಿ ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ

    ರಾಯಚೂರು: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್‍ನಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ರಾಯಚೂರಿನ ಲಿಂಗಸಗೂರಿನಲ್ಲಿ ಇಂದು ನಡೆದಿದೆ.

    ಕಳಪೆ ಗುಣಮಟ್ಟದ ಆಹಾರವನ್ನು ಸೇವಿಸಿ ಸುಮಾರು 12 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಮಧ್ಯಾಹ್ನದ ಊಟ ಬಳಿಕ ವಿದ್ಯಾರ್ಥಿಗಳು ಏಕಾಏಕಿ ಅಸ್ವಸ್ಥರಾಗಿದ್ದಾರೆ. ತಕ್ಷಣ ಹಾಸ್ಟೆಲ್ ವಾರ್ಡನ್ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

    ಪದೇ ಪದೇ ಮೊರಾರ್ಜಿ ಶಾಲೆಗಳಲ್ಲಿ ಈ ರೀತಿ ಘಟನೆಗಳು ಮರುಕಳಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಈ ಕುರಿತು ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದೆ. ರಾಜ್ಯದಲ್ಲಿ ಹಲವೆಡೆ ಕಳಪೆ ಗುಣಮಟ್ಟದ ಆಹಾರ ಸೇವಿಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥರಾದರೂ ಕ್ರಮ ತೆಗೆದುಕೊಳ್ಳದ ಅಧಿಕಾರಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv