Tag: ಕಲ್ಲು ಬಂಡೆ

  • ಬೆಟ್ಟ ಕರಗಿಸಿ, ಲೇಔಟ್ ನಿರ್ಮಾಣ – ಬಂಡೆಗಳ ಸ್ಫೋಟಕ್ಕೆ ಬೆದರಿದ ನಿವಾಸಿಗಳು

    ಬೆಟ್ಟ ಕರಗಿಸಿ, ಲೇಔಟ್ ನಿರ್ಮಾಣ – ಬಂಡೆಗಳ ಸ್ಫೋಟಕ್ಕೆ ಬೆದರಿದ ನಿವಾಸಿಗಳು

    – ಹಸಿರು ವಲಯವನ್ನ ವಸತಿ ಯೋಜನೆಗೆ ಅಕ್ರಮ ಬಳಕೆ

    ರಾಯಚೂರು: ನಗರದಲ್ಲಿ ಪ್ರಕೃತಿದತ್ತವಾದ ಬೆಟ್ಟವನ್ನ ಒಡೆದು ಲೇಔಟ್ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಪರಿಸರ ಪ್ರೇಮಿಗಳು ಆಕ್ರೋಶಗೊಂಡಿದ್ದಾರೆ. ದೊಡ್ಡ ದೊಡ್ಡ ಬಂಡೆಗಳ ಸ್ಫೋಟದಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಗ್ರೀನ್ ಝೋನ್ ನಲ್ಲಿರುವ ಬೆಟ್ಟವನ್ನು ಹಗಲು ರಾತ್ರಿ ನಿರಂತರ ನೆಲಸಮ ಮಾಡಲಾಗುತ್ತಿದೆ ಅಂತ ನಿವಾಸಿಗಳು ಹೋರಾಟಕ್ಕೆ ಮುಂದಾಗಿದ್ದಾರೆ.

    ನಗರದ ಮಧ್ಯದಲ್ಲೇ ಇರುವ ಇಲ್ಲಿನ ವಿದ್ಯಾನಗರ, ಸಾವಿತ್ರಿ ಕಾಲೋನಿ, ಲಕ್ಷ್ಮಿಪುರಂ ಲೇಔಟ್‍ಗೆ ಹೊಂದಿಕೊಂಡಿರುವ ಬೆಟ್ಟವನ್ನ ನಿರಂತರವಾಗಿ ಸ್ಫೋಟಿಸಲಾಗುತ್ತಿದೆ. ರಾಯಚೂರು ನಗರದ ಮಾಸ್ಟರ್ ಪ್ಲಾನ್ ಪ್ರಕಾರ ಗ್ರೀನ್ ಝೋನ್ ನಲ್ಲಿರುವ ಗುಡ್ಡವನ್ನ ವಸತಿ ಯೋಜನೆಗೆ ಮಾರ್ಪಾಡು ಮಾಡಲಾಗುತ್ತಿದೆ. ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡಲಾಗುತ್ತಿದ್ದು ಈ ಗುಡ್ಡ ಸ್ಫೋಟದಿಂದ ಮನೆಗಳು ಕಂಪಿಸುತ್ತಿವೆ ಅಂತ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸರ್ವೆ ನಂ.886. ಹಾಗೂ 882/2 ರಲ್ಲಿ ಬರುವ ಈ ಬೆಟ್ಟ ಮಾಣಿಕ್ ಪ್ರಭು ಸಂಸ್ಥಾನಕ್ಕೆ ಸೇರಿದ್ದು ಬಿಲ್ಡರ್ ಗಳಿಗೆ ಗುಡ್ಡವನ್ನ ಒಡೆದು ಲೇಔಟ್ ನಿರ್ಮಿಸಲು ಗುತ್ತಿಗೆ ನೀಡಲಾಗಿದೆ. ಬಿಲ್ಡರ್ ಗಳು ಗುಡ್ಡದಲ್ಲಿನ ದೊಡ್ಡ ಬಂಡೆಗಳನ್ನ ನಿಯಮಬಾಹಿರವಾಗಿ ಸ್ಫೋಟಿಸುತ್ತಿದ್ದಾರೆ. ಹೀಗಾಗಿ ಧೂಳು, ಶಬ್ದ ಮಾಲಿನ್ಯ ಜೊತೆಗೆ ಸುತ್ತಮುತ್ತಲಿನ ಮನೆಗಳು ಕಂಪಿಸುತ್ತಿದ್ದು ಮನೆಯ ಕಿಟಕಿ ಗಾಜುಗಳು ಸಹ ಒಡೆದಿವೆ. ಹೆಚ್ಚಾಗಿ ಹಿರಿಯ ನಾಗರೀಕರೇ ಇರುವ ಇಲ್ಲಿನ ವಸತಿ ಪ್ರದೇಶದಲ್ಲಿ ಧೂಳಿನ ಸಮಸ್ಯೆ ಹೆಚ್ಚಾಗಿ ಅಸ್ತಮಾ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಧೂಳು ಹೆಚ್ಚಾಗಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ. ಹೀಗಾಗಿ ಬೆಟ್ಟ ಕರಗಿಸಿ ಲೇಔಟ್ ನಿರ್ಮಿಸಲು ಮುಂದಾಗಿರುವುದನ್ನ ಕೂಡಲೇ ನಿಲ್ಲಿಸಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ.

    ಪ್ರತೀ ನಿತ್ಯ ಗುಡ್ಡವನ್ನ ಒಡೆಯುತ್ತಿರುವುದಕ್ಕೆ ಜನ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಮಾಣಿಕ್ ಪ್ರಭು ಟ್ರಸ್ಟ್ ಗೆ ಸಾಮಾಜಿಕ ಚಟುವಟಿಕೆಗಳಿಗೆ ನೀಡಲಾಗಿರುವ ಬೆಟ್ಟದ ಜಾಗವನ್ನ ಲೇಔಟ್ ಮಾಡಲಾಗುತ್ತಿದೆ. ಇದರಿಂದ ನಿಯಮಗಳ ಉಲ್ಲಂಘನೆ ಒಂದೆಡೆಯಾದರೆ ಪ್ರಕೃತಿ ಸಂಪತ್ತು ಹಾಳಾಗುತ್ತಿದೆ ಅನ್ನೋದು ನಿವಾಸಿಗಳ ಅಳಲು. ಈಗಾಗಲೇ ಇಲ್ಲಿನ ಹಿರಿಯ ನಾಗರೀಕರು ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕೇವಲ ಪರಿಶೀಲನೆ ಮಾಡಿ ಸುಮ್ಮನಾಗುತ್ತಿದ್ದಾರೆ. ವಸತಿ ಪ್ರದೇಶದಲ್ಲಿ ಬಂಡೆಗಳ ಸ್ಫೋಟ ನಿಷಿದ್ಧವಿದ್ದು ಕ್ರಮ ಕೈಗೊಳ್ಳಬೇಕು ಅಂತ ಜನ ಒತ್ತಾಯಿಸಿದ್ದಾರೆ.

    ಲೇಔಟ್ ನಿರ್ಮಾಣಕ್ಕಾಗಿ ರಾಯಚೂರು ನಗರಕ್ಕೆ ಕಳಶಪ್ರಾಯವಾಗಿದ್ದ ಬೆಟ್ಟ ಕರಗುತ್ತಿದೆ. ಒಂದೆಡೆ ನಿಯಮಬಾಹಿರವಾಗಿ ಪ್ರಕೃತಿ ಹಾಳಾಗುತ್ತಿದ್ದರೆ ಇನ್ನೊಂದೆಡೆ ನಿವಾಸಿಗಳು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಕಾನೂನು ಕ್ರಮ ಜರುಗಿಸಬೇಕಿದೆ. ಗ್ರೀನ್ ಝೋನ್‍ನಲ್ಲಿರುವ ಬೆಟ್ಟವನ್ನ ಉಳಿಸಬೇಕಿದೆ.

  • ಗುಡ್ಡದಿಂದ ಬೈಕ್ ಮೇಲೆ ಉರುಳಿದ ಕಲ್ಲುಬಂಡೆ- ಬೈಕ್ ಸಂಪೂರ್ಣ ಜಖಂ, ಸವಾರ ಪಾರು

    ಗುಡ್ಡದಿಂದ ಬೈಕ್ ಮೇಲೆ ಉರುಳಿದ ಕಲ್ಲುಬಂಡೆ- ಬೈಕ್ ಸಂಪೂರ್ಣ ಜಖಂ, ಸವಾರ ಪಾರು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣಕ್ಕಾಗಿ ತೆರವು ಮಾಡಿದ್ದ ಗುಡ್ಡದಿಂದ ಬೃಹತ್ ಕಲ್ಲುಬಂಡೆಯೊಂದು ರಸ್ತೆ ಮೇಲೆ ಉರುಳಿಬಿದ್ದಿದೆ. ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದಿದೆ.

    ಗಿರೀಶ್ ಬುಧವಂತ ನಾಯ್ಕ ಬಚಾವ್ ಆದ ಸವಾರ. ಬೃಹತ್ ಬಂಡೆ ರಸ್ತೆ ಮೇಲೆ ಉರುಳಿ ಬಂದ ಪರಿಣಾಮ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಗಿರೀಶ್ ಬೈಕ್ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದೆ.

    ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾರ್ಯವನ್ನ ಐಆರ್‌ಬಿ ಕಂಪನಿ ಮಾಡಿದ್ದು, ಕಳೆದ ಮಳೆಗಾಲದಲ್ಲೂ ಅವೈಜ್ಞಾನಿಕ ಕಾಮಗಾರಿಯಿಂದ ಅನೇಕ ಅವಘಡಗಳು ಹೆದ್ದಾರಿಯಲ್ಲಿ ಸಂಭವಿಸಿತ್ತು. ಈ ಬಾರಿ ಸಹ ಮಳೆಗಾಲ ಪ್ರಾರಂಭದಲ್ಲಿಯೇ ಅವಘಡ ಸಂಭವಿಸಿದ್ದು, ಮಳೆಯಿಂದ ಗುಡ್ಡಗಳು ಕುಸಿಯತೊಡಗಿವೆ.  ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಭಾರೀ ಮಳೆಗೆ ರಾಜ್ಯದ ಹಲವೆಡೆ ಸಾವು-ನೋವು: ಬಳ್ಳಾರಿಯಲ್ಲಿ ಗುಡ್ಡದ ಕಲ್ಲುಬಂಡೆ ಕುಸಿದು ಬಾಲಕ ಸಾವು

    ಭಾರೀ ಮಳೆಗೆ ರಾಜ್ಯದ ಹಲವೆಡೆ ಸಾವು-ನೋವು: ಬಳ್ಳಾರಿಯಲ್ಲಿ ಗುಡ್ಡದ ಕಲ್ಲುಬಂಡೆ ಕುಸಿದು ಬಾಲಕ ಸಾವು

    – ಬಾಗಲಕೋಟೆಯಲ್ಲಿ ಮನೆಯ ಮೇಲಿನ ಕಲ್ಲು ಮೈಮೇಲೆ ಬಿದ್ದು ಬಾಲಕಿ ಸಾವು

    ಬಳ್ಳಾರಿ: ಬಿರುಗಾಳಿ ಸಹಿತ ಭಾರೀ ಮಳೆಗೆ ಕಲ್ಲುಬಂಡೆ ಕುಸಿದು ಬಿದ್ದು 12 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ನಾಗಲಕೆರೆಯ ನಿವಾಸಿಯಾದ ಶಿವು ಮೃತ ಬಾಲಕ. ಈ ಪ್ರದೇಶದ ಭೀಮಪ್ಪ ಎನ್ನುವವರ ಮನೆ ಮೇಲೆ ಬಳ್ಳಾರಿ ಕೋಟೆಯ ಬೃಹತ್ತಾದ ಕಲ್ಲು ಕುಸಿದಿದೆ. ಹೀಗಾಗಿ ಮನೆಯಲ್ಲಿ ಮಲಗಿದ್ದ ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಅಲ್ಲದೆ ರಾತ್ರಿ ಮನೆಯಲ್ಲಿ ಮಲಗಿದ್ದ ಭೀಮಪ್ಪ, ಈಶ್ವರಮ್ಮ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೌಲಬಜಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಇನ್ನು ಬಾಗಲಕೋಟೆಯಲ್ಲಿ ಭಾರಿ ಮಳೆಗಾಳಿಗೆ ಮನೆಯ ಮೇಲಿನ ತಗಡು ಹಾಗೂ ಕಲ್ಲು ಮೈಮೇಲೆ ಬಿದ್ದು ದೀಪಾ ಕಡೆಮನಿ ಎಂಬ 9 ವರ್ಷದ ಬಾಲಕಿ ಸಾವಿಗಿಡಾದ್ದಾಳೆ. ಬಾಗಲಕೋಟೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಭಾರಿ ಮಳೆ ಗಾಳಿಯ ಕಾರಣ ತಗಡಿನ ಮೇಲೆ ಇಡಲಾಗಿದ್ದ ಕಲ್ಲುಗಳು ಮನೆಯಲ್ಲಿ ಮಲಗಿದ್ದ ದೀಪಾ ಮೇಲೆ ಬಿದ್ದು, ತಲೆ ಮತ್ತು ಮುಖದ ಭಾಗಕ್ಕೆ ಗಂಭೀರ ಗಾಯವಾಗಿ ದೀಪಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ದೀಪಾ ಸಾವಿನ ಸುದ್ದಿ ತಿಳಿದು ಗ್ರಾಮದಲ್ಲಿ ದುಃಖ ಮಡುಗಟ್ಟಿದೆ. ಬಾಗಲಕೋಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮನೆ ಮೇಲೆ ಮರ ಬಿದ್ದು ಮನೆಯ ಗೋಡೆ ಕುಸಿದ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ನಡೆದಿದೆ. ಗೋಪಾಲಯ್ಯ ಎಂಬವರಿಗೆ ಸೇರಿದ ಮನೆ ಇದಾಗಿದ್ದು ಅದೃಷ್ಟವಶಾತ್ ಸಣ್ಣಪುಟ್ಟ ಗಾಯ ಹೊರತಪಡಿಸಿದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ.

    ತುಮಕೂರು ಜಿಲ್ಲೆಯಾದ್ಯಂತ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವು ಕಡೆ ಆಸ್ತಿ-ಪಾಸ್ತಿಗೆ ನಷ್ಟ ಉಂಟಾಗಿದೆ. ಶಿರಾದ ನ್ಯಾಯಗೆರೆಯಲ್ಲಿ 30 ಮನೆಗಳಿಗೆ ಹಾನಿಯುಂಟಾಗಿದೆ. ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದಿದೆ. ಇನ್ನು ತುಮಕೂರು ನಗರದ ವಿದ್ಯಾನಗರದ ಕೃಷ್ಣಪ್ಪ ಎನ್ನುವವರ ಮನೆಯ ಮೇಲೆ ತೆಂಗಿನಮರ ಬಿದ್ದು ಮನೆಗೆ ಹಾನಿಯುಂಟಾಗಿದ್ದು, ಮನೆ ಮಾಲೀಕ ಕೃಷ್ಣಪ್ಪಗೆ ಗಾಯವಾಗಿದೆ. ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ವ್ಯತ್ಯಯದಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

    ನೆಲಮಂಗಲ ಬಳಿ ಮಳೆಯಿಂದ ಕಂಟೇನರ್ ಲಾರಿ ಕೆಟ್ಟು ಸುಮಾರು ನಾಲ್ಕು ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ. ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಬಳಿ ತುಮಕೂರು-ಬೆಂಗಳೂರು ಹೆದ್ದಾರಿ 4ರಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ದೌಡಾಯಿಸಿದ್ದಾರೆ.