Tag: ಕಲ್ಲು ಗಣಿಗಾರಿಕೆ

  • ಕೊಡಗಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ – ಸುತ್ತಮುತ್ತಲಿನ ಪ್ರದೇಶದ ಜನಕ್ಕೆ ಕಾಡ್ತಿದೆ ಶ್ವಾಸಕೋಶದ ಸಮಸ್ಯೆ!

    ಕೊಡಗಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ – ಸುತ್ತಮುತ್ತಲಿನ ಪ್ರದೇಶದ ಜನಕ್ಕೆ ಕಾಡ್ತಿದೆ ಶ್ವಾಸಕೋಶದ ಸಮಸ್ಯೆ!

    ಮಡಿಕೇರಿ: ಅದು ಪ್ರಕೃತಿಯ ತವರು ಕೊಡಗು (Kodagu), ದೇಶ ವಿದೇಶಗಳ ಜನರು ನಿತ್ಯ ಈ ಊರಿಗೆ ಭೇಟಿ ನೀಡಿ ಪ್ರಕೃತಿಯ ಮಡಿಲಲ್ಲಿ ದಿನ ಕಳೆಯುತ್ತಾರೆ. ಬೆಟ್ಟಗುಡ್ಡಗಳ ಹಸಿರಿನ ವಾತಾವರಣ ಕಂಡು ಖುಷಿಯಿಂದ ತೆರಳುತ್ತಾರೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ (Tourism) ಚಟುವಟಿಕೆಗಳು ಹೆಚ್ಚಾಗುತ್ತಿದೆ. ಇಂತಹ ಕೊಡಗಿನಲ್ಲಿ ಕೆಲ ದುರುಳರು ಹಣದ ಆಸೆಗೆ ಬೃಹತ್ ಬೆಟ್ಟಗಳನ್ನೇ ನಾಶ ಮಾಡಲು ಹೊರಟಿದ್ದಾರೆ. ಇಡೀ ಬೆಟ್ಟ ಪ್ರದೇಶವನ್ನೇ ರಕ್ಕಸನ ಬಾಯಿಯಂತೆ ನುಂಗುತ್ತಿದ್ದಾರೆ. ಹೀಗಾಗಿ ಆ ಊರ ಸುತ್ತಮುತ್ತ ಪ್ರದೇಶಗಳಲ್ಲಿ ವಾಸ ಮಾಡುವ ಜನರು ದಿನ ಕಳೆದಂತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಪಂಚಾಯತಿ ವ್ಯಾಪ್ತಿಯ ಯಲಕನೂರು ಹಾಗೂ ಹೊಸಳ್ಳಿ ಗ್ರಾಮದಲ್ಲಿ ಕೆಲ ದುರುಳರು ಪ್ರಕೃತಿಯ ಒಡಲಿಗೆ ಕೈಹಾಕಿದ್ದಾರೆ. ಲಾರಿ, ಇಟಾಚಿಗಳನ್ನ ಬಳಸಿಕೊಂಡು ಹಗಲು ರಾತ್ರಿ ಎನ್ನದೇ ಬಾರಿ ಸ್ಫೋಟಕಗಳನ್ನು ಸಿಡಿಸಿ ಅಕ್ರಮವಾಗಿ ಗಣಿಗಾರಿಕೆ (Illegal Mining) ನಡೆಸುತ್ತಿದ್ದಾರೆ. ಇದರಿಂದ ಹಲವಾರು ಜನರು ಅನಾರೋಗ್ಯ ಸಮಸ್ಯೆ ಎದುರಿಸಬೇಕಾಗಿದೆ.

    ಊರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 17ಕ್ಕೂ ಹೆಚ್ಚು ಕಲ್ಲು ಕೊರೆಗಳು ಇದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಇತ್ತಿಷ್ಟು ಜಾಗದಲ್ಲಿ ಗಣಿಗಾರಿಕೆ ನಡೆಸುತ್ತೇವೆ ಅಂತ ಅನುಮತಿ ಪಡೆದಿದ್ದಾರೆ. ಆದ್ರೆ ಕಲ್ಲುಗಣಿಗಾರಿಕೆ ನಡೆಸುತ್ತಿರುವರು ಇಲಾಖೆಯ ಕೆಲ ಮಾನದಂಡಗಳನ್ನ ಗಾಳಿಗೆ ತೂರಿ ಪ್ರಕೃತಿ ಮಾತೆಯ ಭೂಗರ್ಭವನ್ನೇ ಸೀಳುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ಭಾರೀ ಸ್ಫೋಟಕಗಳನ್ನ ಸಿಡಿಸಿ ಗಣಿ ಕೆಲಸ ನಡೆಸುತ್ತಿದ್ದಾರೆ. ಮೀಸಲು ಅರಣ್ಯ ಪ್ರದೇಶವನ್ನ ಬೀಡದೇ ಮನಸ್ಸೋ ಇಚ್ಚೆ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದು ಸುತ್ತಮುತ್ತ ನೆಲೆಸಿರುವ ಪ್ರದೇಶದ ಜನರನ್ನೂ ಆತಂಕ್ಕೆ ದೂಡಿದೆ.

    ಇನ್ನೂ ಈ ಊರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಹಲವು ಕಲ್ಲುಗಣಿಗಾರಿಕೆ ಅಕ್ರಮವಾಗಿದೆ. ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಊರಿನ ವಾತಾವರಣ ಕಲುಷಿತಗೊಂಡು ಗ್ರಾಮದ ಶೇ.90ರಷ್ಟು ಮಂದಿಗೆ ಶ್ವಾಸಕೋಶದ ತೊಂದರೆ ಎದುರಾಗಿದೆ. ಹೀಗಾಗಿ ಕಲ್ಲುಗಣಿಗಾರಿಕೆ ತಕ್ಷಣ ನಿಲ್ಲಿಸಬೇಕು, ಇಲ್ಲದಿದ್ದಲ್ಲಿ ದಯಾಮರಣ ನೀಡಿ ಎಂದು ಗ್ರಾಮಸ್ಥರು ವಿವಿಧ ಇಲಾಖಾ ಅಧಿಕಾರಿಗಳ ಎದುರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಕಲ್ಲುಗಣಿಗಾರಿಕೆಯಿಂದ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಭಾರೀ ಸಮಸ್ಯೆ ಸೃಷ್ಟಿಯಾಗಿದೆ. ಅತೀ ಹೆಚ್ಚು ಭಾರದ ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟಿದ್ದು, ಜನರ ಬದುಕು ದುಸ್ತರವಾಗಿದೆ. ಸಂಜೆ ವೇಳೆ ಕೋರೆಗಳಲ್ಲಿ ಭಾರೀ ಸ್ಫೋಟಗಳನ್ನು ಬಳಸಲಾಗುತ್ತಿದೆ. ಇಲ್ಲಿನ ಮನೆಗಳೂ ಸಾಕಷ್ಟು ಬಿರುಕುಬಿಟ್ಟಿವೆ. ಜೀವನವೇ ನರಕವಾಗಿದೆ ಗ್ರಾಮಸ್ಥರು ಅಧಿಕಾರಿಗಳೆದುರು ಅಳಲು ತೋಡಿಕೊಂಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ಕಿವಿಗೊಡದೆ ಅಧಿಕಾರಿಗಳು ತಮ್ಮ ಪಾಡಿಗೆ ಇದ್ದಾರೆ. ಇನ್ನೂ ಕೆಲವರು ಗ್ರಾಮಸ್ಥರಿಗೆ ಹಣ ನೀಡಿ ಇಲ್ಲಿ ಯಾವ್ದೇ ಸಮಸ್ಯೆ ಇಲ್ಲವೆಂದು ಹೇಳುವಂತೆ ಹೇಳಿಕೊಟ್ಟಿದ್ದಾರೆ ಅಂತ ʻಪಬ್ಲಿಕ್‌ ಟಿವಿʼ ರಿಯಾಲಿಟಿ ಚೆಕ್‌ ವೇಳೆ ಯುವಕನೊಬ್ಬ ಹೇಳಿಕೊಂಡಿದ್ದಾನೆ.

  • ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ದಾರಿ – 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಆಫರ್‌!

    ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ದಾರಿ – 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಆಫರ್‌!

    ಬೆಂಗಳೂರು: ಗ್ಯಾರಂಟಿಗಳ (Guarantee Scheme) ಭಾರದಿಂದ ತತ್ತರಿಸಿರುವ ರಾಜ್ಯ ಸರ್ಕಾರ ಸಂಪನ್ಮೂಲಗಳ ಕ್ರೋಢೀಕರಣಕ್ಕಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕ್ತಿದೆ. ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದವರು ಬಾಕಿ ಉಳಿಸಿಕೊಂಡ 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಯೋಜನೆ (OTS Scheme) ತರೋದಕ್ಕೆ ಮುಂದಾಗಿದೆ.

    ರಾಜಧನ ಮತ್ತು ದಂಡ ವಸೂಲಿ ಮಾಡಲು ಉಪಖನಿಜ (Submineral) ರಿಯಾಯ್ತಿ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಪ್ರತಿ ಟನ್‌ಗೆ 80 ರೂ. ರಾಜಧನ ನಿಗದಿ ಮಾಡಿದೆ. ಇದರಿಂದ ಸರ್ಕಾರ 311.55 ಕೋಟಿ ಹೆಚ್ಚುವರಿ ಸಂಗ್ರಹದ ನಿರೀಕ್ಷೆಯಲ್ಲಿದೆ. ಅಲ್ಲದೇ, ಪರವಾನಗಿ ಪಡೆಯದೇ ಹೆಚ್ಚುವರಿಯಾಗಿ ಸಾಗಿಸಿದ ಉಪಖನಿಜಕ್ಕೆ ದಂಡ ಹಾಕಲು ತೀರ್ಮಾನಿಸಿದೆ. ಇದನ್ನೂ ಓದಿ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನಿಯಮ ಸಡಿಲ – ಶೇ.25ರಷ್ಟು ವಿದ್ಯಾರ್ಥಿಗಳಿದ್ದರೂ ಮಾನ್ಯತೆ!

    ಅಷ್ಟೇ ಅಲ್ಲ, ಖನಿಜಗಳನ್ನ ಹೊಂದಿರುವ ಭೂಮಿಗೆ ತೆರಿಗೆ ಹಾಕಲು ಸರ್ಕಾರದ ನಿರ್ಧಾರ ಮಾಡಿದೆ. ಜಮೀನಿನಲ್ಲಿ ಲಭ್ಯವಾಗುವ ಖನಿಜದ ಹಕ್ಕುಗಳು ಭೂಮಾಲಿಕನಿಗೆ ಸೇರುತ್ತದೆ. ಆದರೆ, 1 ಟನ್‌ಗೆ 100 ರೂ.ನಂತೆ ರಾಯಲ್ಟಿ ಹಾಕಲು ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಹೆಚ್‌.ಕೆ ಪಾಟೀಲ್‌ (HK Patil) ತಿಳಿಸಿದ್ದಾರೆ.

    ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಇಂದಿನ ಸಭೆಯಲ್ಲಿ 20 ವಿಷಯಗಳ ಬಗ್ಗೆ ಚರ್ಚೆ ಮಾಡಿ ಅನುಮೋದನೆ ನೀಡಲಾಗಿದೆ. ಕಲ್ಲು ಗಣಿಗಳಲ್ಲಿನ ಕಲ್ಲುಗಳಿಗೆ ಒಂದು ಟನ್‌ಗೆ 70 ರೂ. ರಾಯಲ್ಟಿ ಇದೆ. ಅದನ್ನು ಹೆಚ್ಚಳ ಮಾಡಿ ಒಂದು ಟನ್‌ಗೆ 80 ರೂ.ಗೆ ನಿಗದಿ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: MSPಗೆ ಆಗ್ರಹಿಸಿ ದೆಹಲಿಗೆ ನುಗ್ಗಲು ಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗ

    ಕೆಲವು ಗುತ್ತಿಗೆಯಿಂದ ಬರಬೇಕಾದ ಬಾಕಿ ಹಾಗೆ ಇದೆ. ಹಲವು ವರ್ಷಗಳಿಂದ ದಂಡ ವಸೂಲಿಯಾಗಿಲ್ಲ. ಕಳೆದ 6-7 ವರ್ಷಗಳಿಂದ ವಸೂಲಿಯಾಗಿಲ್ಲ. ಹಾಗಾಗಿ ಒನ್ ಟೈಮ್ ಸೆಟಲ್ಮೆಂಟ್‌ಗೆ ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ದಂಡ ವಸೂಲಿ ಮಾಡಲು ನಿರ್ಧಾರ ಮಾಡಲಾಗಿದೆ. ಅಲ್ಲದೇ ಡಿಜಿಟಲೀಕರಣ ಮಾಡಿದ ಮೇಲೆ ಒತ್ತುವರಿ ಸಾಧ್ಯವಾಗಿಲ್ಲ. ಒಟಿಎಸ್ ಮೂಲಕ ದಂಡವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

  • ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಸಿದ್ಧತೆ – ರೈತರಿಂದ ಭಾರೀ ಆಕ್ರೋಶ!

    ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಸಿದ್ಧತೆ – ರೈತರಿಂದ ಭಾರೀ ಆಕ್ರೋಶ!

    – ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಂಗೆ ಅಪಾಯ – ರೈತರ ಆತಂಕ

    ಮಂಡ್ಯ: ಬೇಬಿಬೆಟ್ಟದಲ್ಲಿ ಸದ್ದಿಲ್ಲದೇ ಟ್ರಯಲ್ ಬ್ಲಾಸ್ಟ್‌ಗೆ (Bebi Trial Blast) ಸರ್ಕಾರ ಸಿದ್ಧತೆ ನಡೆಸಿದೆ. ಪ್ರಾಯೋಗಿಕ ಪರೀಕ್ಷೆಗೆ ಮುಂದಿನ ವಾರವೇ ವಿಜ್ಞಾನಿಗಳನ್ನು ಕರೆಸಲು ಮುಂದಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

    ಇದರಿಂದ ರೈತರು (Farmers) ಗರಂ ಆಗಿದ್ದು, ಪ್ರತಿಭಟನೆ ನಡೆಸಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ ಹಲವು ರೈತ ಮುಖಂಡರು, ಕಾರ್ಯಕರ್ತರು ಕೆಆರ್‌ಎಸ್‌ (KRS) ಬಳಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ರೈತರು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. `ಟ್ರಯಲ್ ಬ್ಲಾಸ್ಟ್ ಬೇಡ ಬೇಡ’ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಹತ್ರಾಸ್‌ ದುರಂತ- ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಾಳುಗಳಿಗೆ ತಲಾ 50 ಸಾವಿರ ನೆರವು

    ಬಳಿಕ ಮಾತನಾಡಿದ ಪ್ರತಿಭಟನಾನಿರತ ರೈತರು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಬಳಿಯ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಂಗೆ ಅಪಾಯ ಇದೆ. ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಸದ್ಯ ಗಣಿಗಾರಿಕೆ ನಿಷೇಧಿಸಲಾಗಿದೆ. ಈಗ ಮತ್ತೆ ಸರ್ಕಾರವೇ ಗಣಿಗಾರಿಕೆಗೆ ಅನುಮತಿ ನೀಡಲು ಮುಂದಾಗಿದೆ. ಅದಕ್ಕಾಗಿ ಟ್ರಯಲ್ ಬ್ಲಾಸ್ಟ್ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಟ್ರಯಲ್ ಬ್ಲಾಸ್ಟ್ ಮಾಡಿ ಡ್ಯಾಂಗೆ ಯಾವುದೇ ಅಪಾಯವಿಲ್ಲ ಅಂತ ವರದಿ ತರಿಸಿಕೊಳ್ಳಲು ಹುನ್ನಾರ ನಡೆಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಮ್ ಮುಖ್ಯದ್ವಾರ, ನೀರಾವರಿ ನಿಯಮದ ಕಚೇರಿ ಬಳಿ 100ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: IPL 2025: ಮೆಗಾ ಹರಾಜು ಪ್ರಕ್ರಿಯೆ ಶುರು; ರಿಟೇನ್‌ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ!

  • ಅಕ್ರಮ ಗಣಿಗಾರಿಕೆ- ತಡೆಯಲು ಹೋದ DSP ಮೇಲೆ ಟ್ರಕ್ ಹರಿಸಿ ಬರ್ಬರ ಹತ್ಯೆ

    ಅಕ್ರಮ ಗಣಿಗಾರಿಕೆ- ತಡೆಯಲು ಹೋದ DSP ಮೇಲೆ ಟ್ರಕ್ ಹರಿಸಿ ಬರ್ಬರ ಹತ್ಯೆ

    ಚಂಡೀಗಢ: ನುಹ್‍ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ತಡೆಯಲು ಹೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಕಲ್ಲು ತುಂಬಿದ ಟ್ರಕ್ ಹರಿಸಿ ಬರ್ಬರ ಹತ್ಯೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.

    ಡಿಎಸ್‍ಪಿ ಶ್ರೇಣಿಯ ಅಧಿಕಾರಿ ಸುರೇಂದ್ರ ಸಿಂಗ್ ಬಿಷ್ಣೋಯ್ ಮೃತ ದುರ್ದೈವಿ. ಅರಾವಳಿ ಪರ್ವತ ಶ್ರೇಣಿಯ ಸಮೀಪದ ಪಚಗಾಂವ್‍ನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಡಿಎಸ್‍ಪಿ ಶ್ರೇಣಿಯ ಅಧಿಕಾರಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರು ಮಾಹಿತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪೊಲೀಸ್ ತಂಡದೊಂದಿಗೆ ಪಚಗಾಂವ್‍ಗೆ ತೆರಳಿದ್ದಾರೆ.

    ಈ ವೇಳೆ ಪೊಲೀಸ್ ಸಿಬ್ಬಂದಿಯನ್ನು ಕಂಡ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಎಸ್‍ಪಿ ಸುರೇಂದ್ರಸಿಂಗ್ ಅವರು ದಾರಿಯಲ್ಲಿ ನಿಂತು ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಟ್ರಕ್‍ನ ಚಾಲಕ ಅವರ ಮೇಲೆ ಟ್ರಕ್‍ನ್ನು ಹರಿಸಿದ್ದರಿಂದ ಡಿಎಸ್‍ಪಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಡಿಎಸ್‍ಪಿ ಜೊತೆಯಿದ್ದ ಮತ್ತಿಬ್ಬರು ಪೊಲೀಸರು ತಪ್ಪಿಸಿಕೊಂಡಿದ್ದರಿಂದ ಘಟನೆಯಿಂದ ಪಾರಾಗಿದ್ದಾರೆ. ಘಟನೆ ಸಂಬಂಧಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಬೆಳಗಾವಿಯ ಬಿಎಸ್‍ಎಫ್ ಯೋಧ ದುರ್ಮರಣ

    POLICE JEEP

    ಘಟನೆ ಕುರಿತು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಹರಿಯಾಣ ಪೊಲೀಸ್ ಟ್ವೀಟ್ ಮಾಡಿ ಡಿಎಸ್‍ಪಿಗೆ ಸಂತಾಪ ವ್ಯಕ್ತಪಡಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಂಪಾಜೆ ಘಾಟ್‌ ರಸ್ತೆಯಲ್ಲಿ ನಾಳೆಯಿಂದ ಎಲ್ಲ ವಾಹನಗಳ ಸಂಚಾರಕ್ಕೆ ಅನುಮತಿ: ಸಿಸಿ ಪಾಟೀಲ್‌

    Live Tv
    [brid partner=56869869 player=32851 video=960834 autoplay=true]

  • ನಂದಿಬೆಟ್ಟದ ಬಳಿ ಭೂಕುಸಿತ – ಕಲ್ಲು ಗಣಿಗಾರಿಕೆಯ ಬ್ಲಾಸ್ಟಿಂಗ್‍ಗೆ ಬೆದರಿದ್ವಾ ಪಂಚಗಿರಿಗಳು?

    ನಂದಿಬೆಟ್ಟದ ಬಳಿ ಭೂಕುಸಿತ – ಕಲ್ಲು ಗಣಿಗಾರಿಕೆಯ ಬ್ಲಾಸ್ಟಿಂಗ್‍ಗೆ ಬೆದರಿದ್ವಾ ಪಂಚಗಿರಿಗಳು?

    – ಭೂಕುಸಿತ.. ಇದು ಎಚ್ಚರಿಕೆ ಗಂಟೆ?
    – ಬೆಟ್ಟದ ತಪ್ಪಲಲ್ಲಿ ಭೂದಾಹವೇ ಕುಸಿತಕ್ಕೆ ಕಾರಣನಾ?

    ಚಿಕ್ಕಬಳ್ಳಾಪುರ: ಬುಧವಾರ ನಂದಿಬೆಟ್ಟದ ಬಳಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಭೂಕುಸಿತ ಆಗಿತ್ತು. ಆದ್ರೆ ಭೂಕುಸಿತ ಆಗೋಕೆ ಭಾರೀ ಪ್ರಮಾಣದ ಮಳೆ ಅನ್ನೋದು ಬಹುತೇಕರ ಅಭಿಪ್ರಾಯವಾದ್ರೂ ಕೆಲವರ ವಾದವೇ ಬೇರೆ ಇದೆ. ಭಾರೀ ಪ್ರಮಾಣದ ಭೂಕುಸಿತಕ್ಕೆ ಕಲ್ಲು ಗಣಿಗಾರಿಕೆ-ಬೆಟ್ಟದ ತಪ್ಪಲಲ್ಲಿ ಭೂಮಿ ಮಾಡೋಕೆ ಭೂಗಳ್ಳರ ಮಾಡ್ತಿರೋ ಕೃತ್ಯಗಳೇ ಕಾರಣ ಅನ್ನೋ ಅನುಮಾನಗಳು ವ್ಯಕ್ತವಾಗಿವೆ.

    ವಿಶ್ವವಿಖ್ಯಾತ ನಂದಿಬೆಟ್ಟದ ಬಳಿ ಭೂಕುಸಿತ ಉಂಟಾಗಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ. ಪರಿಣಾಮ ನಂದಿಗಿರಿಧಾಮಕ್ಕೆ ಶಾಶ್ವತವಾಗಿ ರಸ್ತೆ ನಿರ್ಮಾಣ ಮಾಡೋವರೆಗೂ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಮಧ್ಯೆ ಹಿಂದೆಂದೂ ಆಗದ ಅಷ್ಟೊಂದು ದೊಡ್ಡ ಮಟ್ಟದ ಭೂ ಕುಸಿತ ಆಗಿದ್ದಾದ್ರೂ ಹೇಗೆ ಅನ್ನೋ ಅನುಮಾನ ಹಲವರದ್ದಾಗಿದೆ. ಬಹುತೇಕರು ಭಾರೀ ಮಳೆಯ ಪರಿಣಾಮ ಗುಡ್ಡ ಕುಸಿತ ಆದ್ರೂ, ಕಾರಣ ಬೇರೆಯೇ ಇದೆ ಅಂತಾರೆ.

    ನಂದಿಗಿರಿ, ಬ್ರಹ್ಮಗಿರಿ, ಸ್ಕಂದಗಿರಿ, ದಿಬ್ಬಗಿರಿ, ಚನ್ನಗಿರಿಗಳು ಒಂದಕ್ಕೊಂದು ಆಂಟಿಕೊಂಟಿವೆ. ಒಂದೆಡೆ ಚಿಕ್ಕಬಳ್ಳಾಪುರದ ಕಣಿವೆನಾರಾಯಣಪುರದ ಬಳಿ, ಮತ್ತೊಂದೆಡೆ ದೇವನಹಳ್ಳಿಯ ತೈಲಗೆರೆ ಬಳಿ ಎಗ್ಗಿಲ್ಲದೇ ಕಲ್ಲು ಗಣಿಗಾರಿಕೆ ನಡೆಸಲಾಗ್ತಿದೆ. ಇದುವೇ ಭೂಕುಸಿತಕ್ಕೆ ಕಾರಣ ಆಗಿರಬಹುದು ಅಂತಾ ಪರಿಸರವಾದಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ದೋಸೆ ಮಾಡುವಾತ ಲಕ್ಷಾಂತರ ರೂಪಾಯಿ ವಂಚನೆ-ಕಡಬದಿಂದ ಮೈಸೂರಿಗೆ ಪರಾರಿ

    ನಂದಿಗಿರಿಧಾಮದ ತಪ್ಪಲಿನ ಭೂಮಿಗೆ ಬಂಗಾರದ ಬೆಲೆಯಿದೆ. ಹೀಗಾಗಿ ನಂದಿಬೆಟ್ಟದ ಸುತ್ತಲೂ ಬೆಟ್ಟದ ಬುಡಕ್ಕೆ ಕನ್ನ ಹಾಕ್ತಿರೋ ಭೂಗಳ್ಳರು, ರಾಜಾರೋಷವಾಗಿ ಕಲ್ಲು ಬಂಡೆ ಕರಗಿಸಿ, ಬೆಟ್ಟದ ಬುಡವನ್ನ ಅಗೆದು ಬಗೆದು ಸಮತಟ್ಟು ಮಾಡಿ ಜಮೀನು ಮಾಡಿಕೊಳ್ಳುತ್ತಿದ್ದಾರೆ. ಇದು ಸಹ ಬೆಟ್ಟದ ಹಿಡಿತವನ್ನ ಕಡಿಮೆ ಮಾಡಿ ಭೂಕುಸಿತ ಆಗೋಕೆ ಕಾರಣ ಆಗುತ್ತಿದೆ ಎಂದು ಸ್ಥಳೀಯರಾದ ಚಿಕ್ಕೇಗೌಡ ಹೇಳುತ್ತಾರೆ. ಇದನ್ನೂ ಓದಿ: ನಂದಿಬೆಟ್ಟಕ್ಕೆ ಶಾಶ್ವತ ರಸ್ತೆ ನಿರ್ಮಾಣ ಆಗೋವರೆಗೂ ಪ್ರವಾಸಿಗರಿಗೆ ನಿಷೇಧ

    ಒಟ್ಟಿನಲ್ಲಿ ನಂದಿಬೆಟ್ಟದ ತಪ್ಪಲಲ್ಲಿ ಮೇಲ್ನೋಟಕ್ಕೆ ಭಾರೀ ಪ್ರಮಾಣದ ಮಳೆ ಬಂದು ಭೂ ಕುಸಿತ ಆಗಿದೆ ಅನ್ನೋದು ಅಧಿಕಾರಿಗಳ ಪ್ರಾಥಮಿಕ ಮಾಹಿತಿ. ಪರಿಸರವಾದಿಗಳು, ಪ್ರಜ್ಞಾವಂತರ ಅನುಮಾನಗಳನ್ನ ಸುಖಾಸುಮ್ಮನೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಈ ಬಗ್ಗೆ ಅಧ್ಯಯನ ನಡೆದು ಆಸಲಿ ಸತ್ಯ ಹೊರಬರಬೇಕಿದೆ.

  • ಮಂಡ್ಯದಲ್ಲಿ ಕೊನೆಗೂ ಅಕ್ರಮ ಗಣಿಗಾರಿಕೆಗೆ ಬ್ರೇಕ್

    ಮಂಡ್ಯದಲ್ಲಿ ಕೊನೆಗೂ ಅಕ್ರಮ ಗಣಿಗಾರಿಕೆಗೆ ಬ್ರೇಕ್

    ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರ ದೆಹಲಿ ಮಟ್ಟದಲ್ಲಿ ಸದ್ದು ಮಾಡಲು ಆರಂಭಿಸಿದ್ದರಿಂದ ಜಿಲ್ಲಾಡಳಿತ ಅಲರ್ಟ್ ಆಗಿದೆ. ಪಾಂಡವಪುರದ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ 11 ಕ್ರಷರ್ ಗಳ ಗುತ್ತಿಗೆಯನ್ನು ರದ್ದು ಮಾಡಲಾಗಿದೆ.

    ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ನಾಗಮಂಗಲದಲ್ಲಿ ಎ-ಫಾರಂ ಹೊಂದದ 22 ಕ್ರಷರ್ ಗಳ  ಪರವಾನಗಿಯನ್ನು ರದ್ದುಪಡಿಸಲಾಗಿದೆ. ಅನಧಿಕೃತ ಕಲ್ಲುಗಣಿಗಾರಿಕೆ, ಅಕ್ರಮ ಸಾಗಾಣಿಕೆಗೆ ಬ್ರೇಕ್ ಹಾಕಲು ತಾಲೂಕುವಾರು ಕಂದಾಯ, ಅರಣ್ಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿದೆ.

    ಜಿಲ್ಲೆಯಾದ್ಯಂತ 11 ಚೆಕ್‍ಪೋಸ್ಟ್ ನಿರ್ಮಿಸಲು ಆದೇಶಿಸಲಾಗಿದೆ. ಏಪ್ರಿಲ್‍ನಿಂದ ಇಲ್ಲಿಯವರೆಗೆ 12 ಪ್ರಕರಣ ದಾಖಲಾಗಿದ್ದು, 119 ವಾಹನ ವಶಕ್ಕೆ ಪಡೆಯಲಾಗಿದೆ. 33.73 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಗಣಿ ಇಲಾಖೆ ಅಧಿಕಾರಿ ಪದ್ಮಜಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ಕೆಆರ್‌ಎಸ್‌ ಸುತ್ತಲಿನ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಿ- ಕೇಂದ್ರ ಸಚಿವರಿಗೆ ಸುಮಲತಾ ಮನವಿ

    ಇತ್ತೀಚಿಗೆ ಕೆಆರ್‌ಎಸ್‌ ಸುತ್ತಮುತ್ತ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಸಮರ ಸಾರಿದ್ದರು. ಈ ಮಧ್ಯೆ, ಬೇಬಿಬೆಟ್ಟದ ನಿಷೇಧಿತ ಗಣಿ ಪ್ರದೇಶದಲ್ಲಿ 11 ಡಿಟೋನೇಟರ್, 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಸ್ಥಳೀಯರ ಮಾಹಿತಿ ಮೇರೆಗೆ ಇವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಡುವಂತೆ ಮನವಿ

    ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಡುವಂತೆ ಮನವಿ

    ಮಂಡ್ಯ: ಅಕ್ರಮ ಗಣಿಗಾರಿಕೆಯ ಕುರಿತು ತೀವ್ರ ಚರ್ಚೆ ನಡೆಯುತ್ತಿರುವುದರ ಮಧ್ಯೆ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸಕ್ರಮ ಮಾಡಲು ಅನುಮತಿ ಕೊಡಬೇಕೆಂದು ಶ್ರೀರಂಗಪಟ್ಟಣ ತಾಲೂಕು ಚನ್ನನಕೆರೆ, ಜಕ್ಕನಹಳ್ಳಿ ಗ್ರಾಮಸ್ಥರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಶೈಲಜಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಈ ಎರಡು ಗ್ರಾಮದಲ್ಲಿ ಸುಮಾರು 300 ರಿಂದ 400 ಕುಟುಂಬ ವಾಸವಾಗಿವೆ. ಗ್ರಾಮಗಳಲ್ಲಿ 20 ವರ್ಷದಿಂದ ಹಿಡುವಳಿ ಜಮೀನಿನಲ್ಲಿ ಕಲ್ಲು ಬಂಡೆ ಇದ್ದು, ಕೈಯಲ್ಲಿ ಜಲ್ಲಿ, ಸೈಜು ಮತ್ತು ಬೋಡ್ರಸ್‍ಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ. ಸ್ಥಳೀಯ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದು ಸಣ್ಣ ಪುಟ್ಟ ಟ್ರ್ಯಾಕ್ಟರ್, ಲಾರಿಗಳನ್ನು ತೆಗೆದುಕೊಂಡು ಅಕ್ಕ ಪಕ್ಕದ ಗ್ರಾಮಗಳಲ್ಲಿ ಮನೆ ಕಟ್ಟಲು ಸಾಮಗ್ರಿಗಳನ್ನು ಒದಗಿಸಿಕೊಡುತ್ತಿದ್ದೇವೆ. ಹೀಗಾಗಿ ಸಕ್ರಮ ಮಾಡಿಕೊಂಡಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಗ್ರಾಮಗಳ ವ್ಯಾಪ್ತಿಯಲ್ಲಿ ಕ್ರಷರ್‍ಗಳನ್ನು ಎಂ ಸ್ಯಾಂಡ್, ಜಲ್ಲಿಪುಡಿ ಮಾಡಲು ಸರ್ಕಾರದಿಂದ ಪರವಾನಗಿ ನೀಡಲಾಗಿದೆ. ಕಾವೇರಿ ಸ್ಟೋನ್ ಕ್ರಷರ್, ಧನಲಕ್ಷ್ಮೀ ಸ್ಟೋನ್ ಕ್ರಷರ್, ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ಟೋನ್ ಕ್ರಷರ್, ಜೆ.ಜೆ.ಸ್ಟೋನ್ ಕ್ರಷರ್ ಮಾಲೀಕರು ಸ್ಥಳೀಯ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಇದನ್ನೇ ನಂಬಿ ನೂರಾರೂ ಕುಟುಂಬ ಜೀವನ ನಡೆಸುತ್ತಿವೆ. ಆದ್ದರಿಂದ ಗಣಿಗಾರಿಕೆ ಸಕ್ರಮ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

    ಮಳೆಯನ್ನೇ ನಂಬಿ ವ್ಯವಸಾಯ ಮಾಡುತ್ತಿದ್ದೇವೆ. ಕೋವಿಡ್ ಕಾರಣದಿಂದ ನಗರದಲ್ಲಿ ಕೆಲಸ ಮಾಡುತ್ತಿದ್ದ ಯುವಕರು, ಇದೀಗ ಉದ್ಯೋಗ ಕಳೆದುಕೊಂಡು ಗ್ರಾಮೀಣ ಭಾಗಕ್ಕೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಸಕಾಲಕ್ಕೆ ಮಳೆ ಬಾರದೇ ನಷ್ಟ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

  • 90 ದಿನದಲ್ಲಿ ಉದ್ದಿಮೆದಾರರ ಮನೆ ಬಾಗಿಲಿಗೆ ಎನ್‍ಒಸಿ: ಸಚಿವ ನಿರಾಣಿ

    90 ದಿನದಲ್ಲಿ ಉದ್ದಿಮೆದಾರರ ಮನೆ ಬಾಗಿಲಿಗೆ ಎನ್‍ಒಸಿ: ಸಚಿವ ನಿರಾಣಿ

    – ಒನ್ ಟೈಮ್ ಸೆಟ್ಲ್ ಮೆಂಟ್ ಯೋಜನೆ ಪ್ರಾರಂಭ

    ಬೆಂಗಳೂರು: ಕಂದಾಯ, ಸಾರಿಗೆ, ಅರಣ್ಯ ಮತ್ತು ಪರಿಸರ ಇಲಾಖೆ ಒಳಗೊಂಡ ಏಕಗವಾಕ್ಷಿ ಪದ್ಧತಿಯನ್ನು ಜಾರಿಗೆ ತಂದು 90 ದಿನಗಳಲ್ಲಿ ಉದ್ಯಮಿಗಳ ಮನೆ ಬಾಗಿಲಿಗೆ ಎನ್‍ಒಸಿ (ನಿರಪೇಕ್ಷಣ ಪತ್ರ) ತಲುಪಿಸುವ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಘೋಷಣೆ ಮಾಡಿದರು.

    ನಗರದ ಅರಮನೆ ಮೈದಾನದಲ್ಲಿ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ಸ್ ಉದ್ಯಮಿಗಳಿಗೆ ಹಮ್ಮಿಕೊಂಡಿದ್ದ ಸುರಕ್ಷತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

    ಕಲ್ಲು ಕ್ವಾರಿ ಮತ್ತು ಗಣಿಗಾರಿಕೆ ನಡೆಸುವ ಉದ್ಯಮಿಗಳಿಗೆ ಅನುಕೂಲವಾಗುವಂತೆ ನಾಲ್ಕು ಇಲಾಖೆಗಳನ್ನು ಒಳಗೊಂಡ ಏಕಗವಾಕ್ಷಿ ಪದ್ಧತಿಯನ್ನು ಜಾರಿ ಮಾಡಿ ಅರ್ಜಿ ಸಲ್ಲಿಸಿದ 90 ದಿನದೊಳಗೆ ಉದ್ಯಮಿದಾರರ ಮನೆ ಬಾಗಿಲಿಗೆ ಇಲಾಖೆ ವತಿಯಿಂದಲೇ ಎನ್‍ಒಸಿ ಪತ್ರಗಳನ್ನು ತಲುಪಿಸುವ ವ್ಯವಸ್ಥೆ ಜಾರಿ ಮಾಡಲಿದ್ದೇವೆ. ಉದ್ದಿಮೆದಾರರು ಇಲಾಖೆಯಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಕರಾವಳಿ ಭಾಗದಲ್ಲಿ ಪ್ರತ್ಯೇಕವಾಗಿ ಮಂಗಳೂರಿನಲ್ಲಿ ಹಾಗೂ ರಾಜ್ಯದ ನಾಲ್ಕು ಕಂದಾಯ ಭಾಗಗಳಲ್ಲಿ ಗಣಿ ಅದಾಲ್ ನಡೆಸಲಾಗುವುದು. ಇದರಿಂದ ಸ್ಥಳದಲ್ಲೇ ಉದ್ದಿಮೆದಾರರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಅನುಕೂಲವಾಗುತ್ತದೆ ಎಂದರು.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜನಸ್ನೇಹಿ ಹಾಗೂ ಜನಪರವಾಗಿ ಇರಬೇಕೆಂಬ ಗುರಿ ಇಟ್ಟುಕೊಂಡಿದೆ. 24/7 ಕೆಲಸ ಮಾಡಬೇಕು, ಉದ್ದಿಮೆದಾರರಿಗೆ ಯಾವುದೇ ರೀತಿಯ ಕಾನೂನಿನ ತೊಡಕು ಉಂಟಾಗದಂತೆ ಸರಳೀಕರಣವಾಗಿ ಉದ್ಯಮ ನಡೆಸಲು ವೇದಿಕೆ ಕಲ್ಪಿಸಿಕೊಡುವುದು ನಮ್ಮ ಮುಖ್ಯ ಗುರಿ ಎಂದರು.

    ಉದ್ದಿಮೆದಾರರಿಗೆ ಪ್ರಸ್ತುತ ಐದು ಪಟ್ಟು ದಂಡ ವಿಧಿಸುವ ನಿಯಮ ಇಲಾಖೆಯಲ್ಲಿದೆ. ಸುಮಾರು 6,700ಕೋಟಿ ರಾಜಸ್ವ ಸರ್ಕಾರಕ್ಕೆ ಬರಬೇಕಾಗಿದೆ. ಇನ್ನು ಮುಂದೆ ಏಕಕಂತು ತಿರುವಳಿ ಯೋಜನೆ (ಒನ್ ಟೈಮ್ ಸಟ್ಲ್‍ಮೆಂಟ್ ಸ್ಕೀಮ್) ಪ್ರಾರಂಭಿಸಲಾಗುವುದು. ಬಹುದಿನಗಳ ಬೇಡಿಕೆಯಂತೆ ಜಿಲ್ಲಾ ಗಣಿ ನಿಧಿ (ಡಿಎಂಎಫ್) ಪ್ರಸ್ತುತ ಶೇ.30ರಷ್ಟಿದೆ. ಇದನ್ನು ಶೇ.10ಕ್ಕೆ ಇಳಿಕೆ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಡುವುದಾಗಿ ತಿಳಿಸಿದರು.

    ಉದ್ದಿಮೆದಾರರು ರಾಜಸ್ವ ಹಾಗೂ ಜಿಎಸ್‍ಟಿ ಕಟ್ಟುತ್ತಾರೆ. ಇದರಿಂದಲೇ ಕೋಟ್ಯಂತರ ರೂ. ತೆರಿಗೆ ಸರ್ಕಾರಕ್ಕೆ ಪಾವತಿಯಾಗುತ್ತದೆ. ನಿಮಗೆ ಅನುಕೂಲ ಕಲ್ಪಿಸಿಕೊಟ್ಟರೆ ಉದ್ಯಮ ಸುಲಭವಾಗಿ ನಡೆಯಲಿದೆ. ಶೀಘ್ರದಲ್ಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಜನಪರವಾದ ಹಾಗೂ ಜನ ಸ್ನೇಹಿ ಗಣಿ ನೀತಿಯನ್ನು ಜಾರಿ ಮಾಡಲಿದ್ದೇವೆ. ಇದರಲ್ಲಿ ನಿಮ್ಮ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಿಕೊಳ್ಳುವುದಾಗಿ ತಿಳಿಸಿದರು.

    ದೇಶಕ್ಕೆ ಮಾದರಿಯಾದ ಗಣಿ ನೀತಿಯನ್ನು ಜಾರಿ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಕರ್ನಾಟಕದ ನೀತಿಯನ್ನು ಬೇರೆ ರಾಜ್ಯಗಳು ಮಾದರಿಯಾಗಿಟ್ಟುಕೊಳ್ಳಬೇಕು. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿದರು. ನಾನೂ ಕೂಡ ಮೂಲತಃ ಉದ್ಯಮಿಯಾಗಿದ್ದು, ಉದ್ಯಮಿದಾರರ ಸಮಸ್ಯೆಗಳು ಏನೆಂಬುದರ ಬಗ್ಗೆ ಅರಿವಿದೆ. ನೀವು ಮುಂದಿಟ್ಟಿರುವ ಬೇಡಿಕೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಗೌರವಯುತವಾಗಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಾಗ್ದಾನ ಮಾಡಿದರು.

    ಎಲ್ಲ ಜಿಲ್ಲೆಗಳಲ್ಲಿ ಖನಿಜ ಭವನ
    ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಇಲಾಖೆವತಿಯಿಂದ ಪ್ರತ್ಯೇಕ ಖನಿಜ ಭವನಗಳನ್ನು ಪ್ರಾರಂಭ ಮಾಡಲಾಗುವುದು. ಕೆಲವು ಜಿಲ್ಲೆಗಳಲ್ಲಿ ಖನಿಜ ಭವನಗಳು ಇಲ್ಲದಿರುವುದು ಗಮನಕ್ಕೆ ಬಂದಿದೆ. ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲೂ ಖನಿಜ ಭವನಗಳನ್ನು ತೆರೆಯಲಾಗುವುದು. ಇದರಿಂದ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಅಭಿಪ್ರಾಯಪಟ್ಟರು.

    ನಾನು 20-25 ವರ್ಷಗಳ ಹಿಂದೆ ಸಣ್ಣ ಉದ್ಯಮಿಯಾಗಿದ್ದೆ. ಅಂದು ನನ್ನ ಬಳಿ ಹೆಚ್ಚಿನ ಹಣಕಾಸು ಇರಲಿಲ್ಲ. ಇಂದು ಏಷ್ಯಾದಲ್ಲೇ ಅತಿ ದೊಡ್ಡ ಸಕ್ಕರೆ ಕಾರ್ಖಾನೆಯನ್ನು ನಾನು ನಡೆಸುತ್ತಿದ್ದೇನೆ. ನನ್ನ ಪರಿಶ್ರಮ ಹಾಗೂ ಸಾಧಿಸಬೇಕೆಂಬ ಗುರಿ ಇದ್ದಿದ್ದರಿಂದಲೇ ಇದು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

    ಸಕ್ಕರೆ ಕಾರ್ಖಾನೆ ಜೊತೆಗೆ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಅಲ್ಲದೆ ಸಹಕಾರ ಕ್ಷೇತ್ರದಲ್ಲೂ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದ್ದೇವೆ. ಎಥಿನಾಲ್, ಸಿಮೆಂಟ್ ಉತ್ಪಾದನೆ ಸೇರಿದಂತೆ ವಾರ್ಷಿಕ 5 ಸಾವಿರ ಕೋಟಿ ವಹಿವಾಟು ನಡೆಸುತ್ತಿದ್ದೇವೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ಕಾರ್ಖಾನೆ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದರು. ನಮ್ಮ ಫೌಂಡೇಶನ್ ಬೆಳದು ಬಂದ ಹಾದಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು ಎಂದರು.

    ಇಲಾಖೆಯಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಶಿವಮೊಗ್ಗದ ಹುಣಸೋಡು, ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಬಳಿ ನಡೆದ ಘಟನೆಯ ನಂತರ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈ ಎರಡು ಘಟನೆ ನಡೆದ ನಂತರ ವಿರೋಧ ಪಕ್ಷದವರು ನನಗೆ ಮಾಲೀಕರನ್ನು ಬಂಧಿಸುವಂತೆ ಒತ್ತಡ ಹಾಕಿದರು. ಇದು ಮಾಲೀಕರಿಂದ ಪ್ರಮಾದವಾಗಿಲ್ಲ ಎಂದು ನಾನು ಮನವರಿಕೆ ಮಾಡಿಕೊಟ್ಟೆ. ಸ್ಪೋಟಕಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವಾಗ ಉಂಟಾದ ಅತಾಚುರ್ಯದಿಂದ ಇದು ಸಂಭವಿಸಿತು. ಮುಂದೆ ಈ ರೀತಿ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದರು.

    ಮಾಲೀಕರು ಬಂಡವಾಳ ಹೂಡಿ ಉದ್ಯಮ ಆರಂಭಿಸುತ್ತಾರೆ. ಅವರ ಮೇಲೆ ಕ್ರಮ ಜರುಗಿಸಿದರೆ ಕ್ರಷರ್‍ಗಳು ನಿಂತು ಹೋಗುತ್ತವೆ. ಬ್ಯಾಂಕ್‍ನಲ್ಲಿ ಪಡೆದ ಸಾಲದ ಮೇಲಿನ ಬಡ್ಡಿ ಹೆಚ್ಚಾಗುತ್ತದೆ. ಕಾರ್ಮಿಕರಿಗೆ ಕೆಲಸ ಇಲ್ಲದಂತಾಗುತ್ತದೆ. ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಉಪಾಧ್ಯಕ್ಷ ಎಸ್.ದತ್ತಾತ್ರೀ, ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಅಸೋಸಿಯೇಷನ್ಸ್ ಅಧ್ಯಕ್ಷ ಎಸ್.ಸಂಜೀವ ಹಟ್ಟಿಹೊಳಿ, ಗಣಿ ಸುರಕ್ಷತಾ ಮಹಾನಿದೇರ್ಶಕರಾದ ಮುರಳಿಧರ್ (ಬೆಂಗಳೂರು ವಲಯ), ಶ್ಯಾಮ್ ಸುಂದರ್ ಸೋನಿ(ಗೋವಾ ವಲಯ) ಹಾಗೂ ಉಮೇಶ್ ಎಂ.ಸಾವರ್ಕರ್ (ಬಳ್ಳಾರಿ ವಲಯ) ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

  • ಕಡಿಮೆ ಬೆಲೆಗೆ ಮರಳು ಒದಗಿಸಲು ಹೊಸ ನೀತಿ: ಮುರುಗೇಶ್ ನಿರಾಣಿ

    ಕಡಿಮೆ ಬೆಲೆಗೆ ಮರಳು ಒದಗಿಸಲು ಹೊಸ ನೀತಿ: ಮುರುಗೇಶ್ ನಿರಾಣಿ

    ಕೊಪ್ಪಳ: ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಕಡಿಮೆ ಬೆಲೆಗೆ ಮರಳು ಮತ್ತು ಜಲ್ಲಿಕಲ್ಲು ದೊರಕಿಸಿ ಕೊಡಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಹೊಸ ಗಣಿಕಾರಿಕೆ ನೀತಿಯನ್ನು ಜಾರಿಗೊಳಿಸಲಿದೆ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದರು. ಮನೆ ಕಟ್ಟುವ ಕನಸು ಹೊಂದಿರುವ ಪ್ರತಿಯೊಬ್ಬರಿಗೂ ಮರಳು ಮತ್ತು ಜಲ್ಲಿಕಲ್ಲು ಕಡಿಮೆ ಬೆಲೆಗೆ ಸಿಗಬೇಕು. ಈ ದೃಷ್ಟಿಯಿಂದ ರಾಜ್ಯದಲ್ಲಿ ಹೊಸ ಗಣಿ ನೀತಿಯನ್ನು ತರಲಾಗುತ್ತಿದೆ. ಹೊಸ ನೀತಿಯನ್ವಯ ಟ್ಯಾಕ್ಟರ್, ಎತ್ತಿನ ಬಂಡಿ, ದ್ವಿಚಕ್ರ ವಾಹನಗಳಲ್ಲಿ ಮರಳು ಸಾಗಣೆ ಮಾಡಿದರೆ ಎಫ್‍ಐಆರ್ ದಾಖಲಿಸುವುದಿಲ್ಲ. ಬದಲಿಗೆ ಮರಳು ಸಂಗ್ರಹಿಸಿ ಬೇರೆ ಬೇರೆ ಜಿಲ್ಲೆಗಳಿಗೆ ಸಾಗಾಣಿಕೆ ಮಾಡಿದರೆ ಮಾತ್ರ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

    ರಾಜ್ಯದಲ್ಲೆಡೆ ಅನಧಿಕೃತವಾಗಿ ಮರಳು ಹಾಗೂ ಜಲ್ಲಿಕಲ್ಲು ಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಸರ್ಕಾರದ ಆದಾಯ ಪೋಲಾಗುತ್ತಿದೆ. ನಿಯಂತ್ರಣ ಮಾಡಿದಷ್ಟೂ ಅನಧಿಕೃತ ಗಣಿಗಾರಿಕೆ ಹೆಚ್ಚಾಗುತ್ತದೆ. ಹೀಗಾಗಿ ಎಲ್ಲಿ ಬೇಕಾದರೂ ಉಚಿತವಾಗಿ ಮರಳು ಪಡೆಯಬಹುದಾದ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಿಸುವವರಿಗೆ ಅನುಕೂಲ ಆಗಲಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವವರಿಗೆ ಇದು ವರದಾನ ಆಗಲಿದೆ ಎಂದರು.

    ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವತಿಯಿಂದ ಕಲ್ಲು ಗಣಿಗಾರಿಕೆ ಮಾಡುವ ಕ್ರಷರ್‍ಗಳ ಮಾಲೀಕರಿಗೆ ಕಾರ್ಯಾಗಾರ ಆಯೋಜಿಲಾಗುತ್ತದೆ. ಕಲ್ಲು ಗಣಿಗಾರಿಕೆ ಮಾಡುವ ರೀತಿ, ಗಣಿಗಾರಿಕೆ ಸಮಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಜ್ಞರಿಂದ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಕ್ರಷರ್ ಮಾಲೀಕರಿಗೆ ತರಬೇತಿ ನೀಡಲು ಶೀಘ್ರ ಕಾರ್ಯಾಗಾರ ಆಯೋಜಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

    ಗಂಗಾವತಿ ಭಾಗದಲ್ಲಿ ಕಲ್ಲು ಒಡೆದು ಮಾರಾಟ ಮಾಡುವ ಮೂಲಕ ಜೀವನ ಕಟ್ಟಿಕೊಂಡ ಭೋವಿ ಜನಾಂಗದವರಿಗೆ ಅಧಿಕಾರಿಗಳು ಅನಗತ್ಯವಾಗಿ ಸಮಸ್ಯೆ ಉಂಟುಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರಿಗೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಪುರಾತತ್ವ ಇಲಾಖೆಯವರು ಐತಿಹಾಸಿಕ ಶಿಲೆಗಳಿರುವ ಪ್ರದೇಶಗಳಲ್ಲಿ ಗ್ರಾಮಗಳನ್ನು ಉಲ್ಲೇಖಿಸಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಮನವಿ ಮಾಡಿದ್ದಾರೆ. ಹಾಗಾಗಿ ಅಲ್ಲಿನ ಕೆಲ ಜನರಿಗೆ ಕಲ್ಲು ಗಣಿಗಾರಿಕೆ ಮಾಡದಂತೆ ಸೂಚಿಸಿದ್ದೇವೆ ಎಂದರು.

  • ರಾಜ್ಯಕ್ಕೆ ಬೆಳಕು ನೀಡಿದ ಜನರ ಬದುಕು ಕತ್ತಲಲ್ಲಿ- ಗ್ರಾಮದಲ್ಲಿ ಪ್ರತಿ ದಿನ ಕಂಪಿಸುತ್ತೆ ಭೂಮಿ

    ರಾಜ್ಯಕ್ಕೆ ಬೆಳಕು ನೀಡಿದ ಜನರ ಬದುಕು ಕತ್ತಲಲ್ಲಿ- ಗ್ರಾಮದಲ್ಲಿ ಪ್ರತಿ ದಿನ ಕಂಪಿಸುತ್ತೆ ಭೂಮಿ

    ಕಾರವಾರ: ಆ ಊರಿನಲ್ಲಿ ಪ್ರತಿ ದಿನ ಭೂಮಿ ಕಂಪಿಸುತ್ತೆ. ಇದ್ದಕ್ಕಿದ್ದ ಹಾಗೆ ಮನೆಗಳ ಮೇಲೆ ಕಲ್ಲುಗಳು ಬಿದ್ದರೆ ಕಂಪನದಿಂದ ಮನೆಗಳೇ ಬಿರುಕು ಬಿಡುತ್ತಿವೆ. ಹೌದು ಕಲ್ಲು ಗಣಿಗಾರಿಕೆಯಿಂದ ಈ ಅವಾಂತರ ಸೃಷ್ಟಿಯಾಗಿದ್ದು, ಜನ ನಿತ್ಯವೂ ಜೀವವನ್ನು ಕೈಯಲ್ಲೇ ಹಿಡಿದುಕೊಂಡು ಬದುಕಬೇಕಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ, ಅಡಾಳಿ, ಗೌಳಿವಾಡದ ಜನ ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಬದುಕನ್ನು ಕತ್ತಲು ಮಾಡಿಕೊಂಡು ಹೊಸ ಬದುಕು ಕಟ್ಟಿಕೊಂಡವರು. ರಾಜ್ಯ ಸರ್ಕಾರದ ಸೂಪಾ ಜಲವಿದ್ಯುತ್ ಯೋಜನೆಯಲ್ಲಿ ತಮ್ಮ ಜಮೀನನ್ನು ಕಳೆದುಕೊಂಡ ನಿರಾಶ್ರಿತರಿಗಾಗಿ 35 ವರ್ಷದ ಹಿಂದೆಯೇ ರಾಮನಗರದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಜಮೀನನ್ನು ನೀಡಿದೆ. ಈ ಜಮೀನಿನಲ್ಲಿ ಬದುಕು ಕಟ್ಟಿಕೊಂಡ ಜನ ಇದೀಗ ಭಯದಿಂದ ಜೀವನ ಸಾಗಿಸಬೇಕಾಗಿದೆ.

    ಸರ್ಕಾರ ನೀಡಿದ ಜಮೀನಿನಲ್ಲಿ ಬದುಕು ಕಟ್ಟಿಕೊಂಡ ಜನರಿಗೆ ಜಿಲ್ಲಾಡಳಿತ ಈ ಊರಿನ ಮಾರುದೂರದಲ್ಲಿಯೇ ಗಣಿಗಾರಿಕೆಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಮೊದಲು ಎಂಟು ಗುತ್ತಿಗೆದಾರರಿಗೆ ಕಲ್ಲುಗಣಿಗಾರಿಕೆಗಾಗಿ ತಲಾ ಎರಡು ಎಕರೆ ಪ್ರದೇಶವನ್ನು ರಾಮನಗರದ ಸರ್ವೆ ನಂ.45 ರಲ್ಲಿ ಅವಕಾಶ ಮಾಡಿಕೊಟ್ಟಿತು. ಗಣಿಗಾರಿಕೆಗಾಗಿ ಗುತ್ತಿಗೆ ಪಡೆದ ಗುತ್ತಿಗೆದಾರರು ಮೊದಲು ಎರಡು ಎಕರೆ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ಪ್ರಾರಂಭಿಸಿದರು. ಆದರೆ ದುರಾಸೆಗೆ ಬಿದ್ದ ಗಣಿ ಮಾಲೀಕರು ಇಲ್ಲಿನ ನೂರು ಎಕರೆ ಪ್ರದೇಶವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಕಾನೂನು ಬಾಹಿರವಾಗಿ ನಿಯಮ ಮೀರಿ ಗಣಿಗಾರಿಕೆ ಮಾಡುತಿದ್ದು, ಮಾತ್ರವಲ್ಲದೆ ದೊಡ್ಡ ಪ್ರಮಾಣದ ಸ್ಫೋಟಕ ಬಳಸಿ ಕಲ್ಲುಗಳನ್ನು ಸಿಡಿಯಲು ಶುರುಮಾಡಿದ್ದಾರೆ.

    ಇದರಿಂದಾಗಿ ಇಡೀ ಗ್ರಾಮ ಕಲ್ಲಿನ ಧೂಳಿನಿಂದ ಆವರಿಸಿದೆ ಸಿಡಿತಲೆಯಿಂದಾಗಿ ಗ್ರಾಮದಲ್ಲಿರುವ ಮನೆಗಳು ಬಿರುಕು ಬಿಡಲು ಪ್ರಾರಂಭಿಸಿವೆ. ಗಣಿಗಾರಿಕೆಯಿಂದಾಗಿ ಗ್ರಾಮದ ಜನ ಕೃಷಿ ಭೂಮಿ ಉಳುವುದನ್ನೂ ಬಿಡುವಂತಾಗಿದ್ದು, ನರಕದಲ್ಲಿ ಜೀವನ ನಡೆಸುವಂತಾಗಿದೆ.

    ಪ್ರತಿಭಟಿಸಿದರೂ ಕೇಳೋರಿಲ್ಲ!

    ರಾಮನಗರದ ಜನ ಅಕ್ರಮ ಗಣಿಗಾರಿಕೆಯಿಂದ ತಮ್ಮ ಜಮೀನಿನಲ್ಲಿ ಕೃಷಿ ಬಿಡುವಂತಾದರೆ, ಇಡೀ ಗ್ರಾಮ ಧೂಳಿನಿಂದ ತುಂಬಿಹೋಗಿದ್ದು ಸಿಡಿತಲೆಯಿಂದಾಗಿ ಮನೆಗಳು ಬಿರುಕು ಬಿಟ್ಟಿವೆ. ಈ ಕುರಿತು ಪ್ರತಿಭಟನೆ ನಡೆಸಿ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಹಾಗೂ ಜೋಯಿಡಾದ ತಹಶೀಲ್ದಾರ್ ಗೆ ಮನವಿ ಸಲ್ಲಿಸುತ್ತಲೇ ಬಂದಿದ್ದು, ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲವೆಂಬಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

    ಈ ಕುರಿತು ಜೋಯಿಡಾ ದ ತಹಶೀಲ್ದಾರ್ ಸಂಜಯ್ ಕಾಂಬ್ಳೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಕೇವಲ ಎರಡು ಎಕರೆ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ನಡೆಯುತಿಲ್ಲ, ಯಾವುದೇ ಸಮಸ್ಯೆಯಾಗಿಲ್ಲ ಎಂದು ತೇಪೆ ಹಾಕುತಿದ್ದಾರೆ. ಕಾನೂನು ಬಾಹಿರ ಬ್ಲಾಸ್ಟಿಂಗ್ ನಡೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಸ್ಥಳ ಪರಿಶೀಲನೆ ನಡೆಸಿದಾಗ ನೂರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತಿದ್ದು, ನಿಯಮಗಳನ್ನು ಗಾಳಿಗೆ ತೂರಿ ಅತ್ಯಂತ ಪ್ರಭಲ ಸಿಡಿತಲೆ ಬಳಸಿ ಬಂಡೆಗಳನ್ನು ಒಡೆಯಲಾಗುತ್ತಿದೆ. ಇದರಿಂದಾಗಿ ಇಲ್ಲಿನ ಅಂತರ್ಜಲ ಕೂಡ ಬತ್ತಿ ಹೋಗಿದ್ದು, ಇಡೀ ಗ್ರಾಮ ಧೂಳಿನಿಂದ ತುಂಬಿದೆ. ಹೆಚ್ಚು ಧೂಳು ಆವರಿಸಿದ್ದರಿಂದ ಹಿಮ ಆವರಿಸಿದಂತೆ ಭಾಸವಾಗುತ್ತದೆ. ಅಲ್ಲದೆ ಗ್ರಾಮಕ್ಕೆ ಹೋಗುವ ದಾರಿಯನ್ನೂ ಗಣಿ ಮಾಲೀಕರು ನುಂಗಿದ್ದು, ಗಣಿಗಾರಿಕೆಗಾಗಿ ದಾರಿಯನ್ನೂ ಬಳಸಿಕೊಳ್ಳಲಾಗಿದೆ.