Tag: ಕಲ್ಲಿನ ಕ್ವಾರಿ

  • ಕಲ್ಲಿನ ಕ್ವಾರಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಮಹಿಳೆ ಸಾವು

    ಕಲ್ಲಿನ ಕ್ವಾರಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಮಹಿಳೆ ಸಾವು

    ಬೆಂಗಳೂರು: ಗ್ರಾಮದಲ್ಲಿ ನೀರಿನ ಅಭಾವ ಉಂಟಾದ ಕಾರಣಕ್ಕೆ ಬಟ್ಟೆ ತೊಳೆಯಲು ಕಲ್ಲಿನ ಕ್ವಾರಿಗೆ ಹೋಗಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನೆಲಮಂಗಲ ಸಮೀಪದ ಕಂಬದಕಲ್ ಗ್ರಾಮದಲ್ಲಿ ನಡೆದಿದೆ.

    ಕಂಬದಕಲ್ ಗ್ರಾಮದ ನಿವಾಸಿ ಮಂಜುಳ (42) ಮೃತ ದುರ್ದೈವಿ. ಗ್ರಾಮದಲ್ಲಿ ನೀರಿನ ಬವಣೆ ಇದ್ದ ಕಾರಣಕ್ಕೆ ಕಲ್ಲಿನ ಕ್ವಾರಿಯೊಂದರಲ್ಲಿ ಬಟ್ಟೆ ತೊಳೆಯಲು ಮಹಿಳೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಕ್ವಾರಿಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮಹಿಳೆ ಸಾವಿಗೆ ಗ್ರಾಮ ಪಂಚಾಯ್ತಿಯೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ ಬಿಟ್ಟಸಂದ್ರ ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿ ಪೀಠೋಪಕರಣ ಧ್ವಂಸ ಮಾಡಿ, ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸೂಕ್ತ ನೀರಿನ ಸರಬರಾಜು ಮಾಡದೆ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ ತೋರಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಅಲ್ಲದೆ ಪಂಚಾಯ್ತಿಯ ವಾಟರ್ ಮ್ಯಾನ್ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.

  • ರಕ್ಷಿತಾರಣ್ಯದಲ್ಲೇ ಕಲ್ಲಿನ ಕ್ವಾರಿ ಮಾಫಿಯಾ- ರಮಾನಾಥ ರೈ ಆಪ್ತನಿಂದಲೇ ಅಕ್ರಮ

    ರಕ್ಷಿತಾರಣ್ಯದಲ್ಲೇ ಕಲ್ಲಿನ ಕ್ವಾರಿ ಮಾಫಿಯಾ- ರಮಾನಾಥ ರೈ ಆಪ್ತನಿಂದಲೇ ಅಕ್ರಮ

    ಮಂಗಳೂರು: ಮಾಜಿ ಅರಣ್ಯ ಸಚಿವ ರಮಾನಾಥ ರೈ ಆಪ್ತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ಪದ್ಮಶೇಖರ್ ಜೈನ್ ಎಂಬವರು ರೈ ಪ್ರತಿನಿಧಿಸುತ್ತಿದ್ದ ಬಂಟ್ವಾಳ ತಾಲೂಕಿನಲ್ಲಿ ರಕ್ಷಿತಾರಣ್ಯವನ್ನೇ ಅತಿಕ್ರಮಿಸಿ ಕಲ್ಲಿನ ಕ್ವಾರಿ ನಡೆಸ್ತಿರೋದು ಬೆಳಕಿಗೆ ಬಂದಿದೆ.

    ಬಂಟ್ವಾಳ ತಾಲೂಕಿನ ಕೊಡ್ಯಮಲೆ ರಕ್ಷಿತಾರಣ್ಯ ವ್ಯಾಪ್ತಿಯ ಸರ್ವೆ ನಂಬರ್ 164 /2 ಮತ್ತು 172/2 ರಲ್ಲಿ ಕಳೆದ ಹತ್ತು ವರ್ಷಗಳಿಂದ ಕಲ್ಲಿನ ಕೋರೆ ನಡೆಸುತ್ತಿದ್ದು, ಇದೀಗ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.

    ಅರಣ್ಯ ಇಲಾಖೆ, ಗಣಿ ಇಲಾಖೆ ಸೇರಿದಂತೆ ಸ್ಥಳೀಯ ಪಂಚಾಯತ್ ಮಟ್ಟದ ಅಧಿಕಾರಿಗಳೂ ಈ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ಕಳೆದ ಹತ್ತು ವರ್ಷಗಳಿಂದ ಇಲ್ಲಿ ಅಕ್ರಮ ಕ್ವಾರಿ ನಡೆಯುತ್ತಿದ್ದರೂ, ಈ ಬಗ್ಗೆ ಯಾವೊಬ್ಬ ಅಧಿಕಾರಿಯೂ ಕಾನೂನು ಉಲ್ಲಂಘನೆಯ ಆಕ್ಷೇಪ ಎತ್ತಿಲ್ಲ. ವಿಶೇಷ ಅಂದ್ರೆ, ಬಂಟ್ವಾಳದ ಆರ್ ಟಿಐ ಕಾರ್ಯಕರ್ತರೊಬ್ಬರು ಅಧಿಕಾರಿ ವರ್ಗದ ಮೇಲೆ ವಿಶ್ವಾಸ ಕಳೆದುಕೊಂಡು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಮಂಗಳೂರಿನ ಗಣಿ ಇಲಾಖೆ ಅಧಿಕಾರಿಗಳು ಹೈಕೋರ್ಟಿಗೂ ತಪ್ಪು ಮಾಹಿತಿ ನೀಡಿದ್ದಾರೆ.

    ಅಕ್ರಮ ಕ್ವಾರಿ ಅರಣ್ಯ ಪ್ರದೇಶದ 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನಡೀತಿದ್ದರೂ, ಅದರ ಬಗ್ಗೆ ಉಲ್ಲೇಖಿಸದೆ 2015ರ ಬಳಿಕ ಕ್ವಾರಿಗೆ ಅನುಮತಿಯನ್ನೇ ನೀಡಿಲ್ಲ ಎಂದು ಜುಲೈ 2ರಂದು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದೇ ಗಣಿ ಅಧಿಕಾರಿಗಳು ಆರ್ ಟಿಐ ಮಾಹಿತಿಯಡಿ ಕೇಳಿದ ಪ್ರಶ್ನೆಗೆ, ಸದ್ರಿ ಸರ್ವೆ ನಂಬರಿನಲ್ಲಿ ಯಾವುದೇ ಕ್ವಾರಿ, ಕ್ರಷರ್ ಗೆ ಅನುಮತಿ ನೀಡಿಲ್ಲ ಎಂದಿದ್ದು ಅಧಿಕಾರಿಗಳ ಶಾಮೀಲಾತಿಯ ಶಂಕೆ ಮೂಡುವಂತಾಗಿದೆ. ಹೀಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಅಧಿಕಾರಿಗಳು ಮತ್ತು ಪರಿಸರ ಇಲಾಖೆ ಅಧಿಕಾರಿಗಳು ಈ ಅಕ್ರಮದಲ್ಲಿ ನೇರ ಶಾಮೀಲಾಗಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.

    ಕ್ವಾರಿ ವಿರುದ್ಧ ಸ್ಥಳೀಯರು ಯಾವುದೇ ದೂರು ನೀಡಿದ್ರೂ, ಧಮ್ಕಿ ಮೂಲಕ ಬಾಯಿ ಮುಚ್ಚಿಸ್ತಾರೆಂಬ ಆರೋಪ ಕೂಡ ಕೇಳಿಬಂದಿದೆ.

  • ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟ: ತಂದೆ-ಮಗ ಸೇರಿ ಮೂವರ  ದುರ್ಮರಣ

    ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟ: ತಂದೆ-ಮಗ ಸೇರಿ ಮೂವರ ದುರ್ಮರಣ

    ಹಾಸನ: ಕಳೆದ ರಾತ್ರಿ ಬಂದ ಭಾರೀ ಮಳೆಗೆ ಕಲ್ಲು ಕ್ವಾರೆಯಲ್ಲಿ ಬಂಡೆ ಸಿಡಿಸಲು ಅಳವಡಿಸಿದ್ದ ಸಿಡಿಮದ್ದಿಗೆ ಸಿಡಿಲು ಬಡಿದು ಮೂವರು ಮೃತಪಟ್ಟ ಘಟನೆ ಹಾಸನ ತಾಲೂಕಿನ ಕಟ್ಟಾಯದ ಬಳಿ ನಡೆದಿದೆ.

    ಯದು ಎಂಬವರಿಗೆ ಸೇರಿದ ಕಲ್ಲಿನ ಕ್ವಾರಿಯಲ್ಲಿ ಗುಡುಗು, ಸಿಡಿಲಿನ ಅಬ್ಬರಕ್ಕೆ ಸ್ಫೋಟಗೊಂಡ ಸಿಡಿಮದ್ದಿಗೆ ಜಗದೀಶ(50), ಮಗ ಪುನೀತ್ (23), ನಾಗ (40) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗ ಮುಡಲೂಕೊಪ್ಪ ಗ್ರಾಮದ ನಿವಾಸಿ.

    ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉಡುಪಿಯಲ್ಲಿ ಸರ್ಕಾರಿ ಸ್ವಾಮ್ಯದ ಕ್ವಾರಿಗೆ ಬಿದ್ದು ತಾಯಿ-ಮಗ ಸಾವು!

    ಉಡುಪಿಯಲ್ಲಿ ಸರ್ಕಾರಿ ಸ್ವಾಮ್ಯದ ಕ್ವಾರಿಗೆ ಬಿದ್ದು ತಾಯಿ-ಮಗ ಸಾವು!

    – ಮುಗಿಲುಮುಟ್ಟಿದ ತಂದೆಯ ಆಕ್ರಂದನ

    ಉಡುಪಿ: ಬೆಳಗಾವಿಯ ಅಥಣಿಯಲ್ಲಿ ಕೊಳವೆ ಬಾವಿಗೆ 6 ವರ್ಷದ ಬಾಲಕಿ ಬಿದ್ದು ಮೃತಪಟ್ಟ ಘಟನೆ ಮಾಸುವ ಮುನ್ನವೇ ಉಡುಪಿಯಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಬಟ್ಟೆ ಒಗೆಯಲು ಹೋಗಿದ್ದ ತಾಯಿ ಮಗುವನ್ನು ಕಲ್ಲು ಕ್ವಾರಿ ಬಲಿ ಪಡೆದಿದೆ.

    ನಡೆದಿದ್ದೇನು?: ಉಡುಪಿಯ ಅಲೆವೂರಿನ ಪೆರುಪಾದೆ ಸರ್ಕಾರಿ ಸ್ವಾಮ್ಯದ ಕಲ್ಲಿನ ಕ್ವಾರಿ ಬಾಗಲಕೋಟೆ ಮೂಲದ ದ್ಯಾಮವ್ವ ಮತ್ತು ಹನುಮಂತ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಬಟ್ಟೆ ಒಗೆಯಲು ಹೋದ ದ್ಯಾಮವ್ವ ನಾಲ್ಕು ವರ್ಷದ ಮಗನನ್ನು ಬಂಡೆಯ ಮೇಲೆ ಆಟವಾಡಲು ಬಿಟ್ಟಿದ್ದರು. ಹನುಮಂತ ಆಟವಾಡುತ್ತಾ ಕಲ್ಲಿನ ಕ್ವಾರಿಗೆ ಬಿದ್ದಿದ್ದಾನೆ. ಮಗ ನೀರಿಗೆ ಬಿದ್ದ ತಕ್ಷಣ ರಕ್ಷಿಸಲು ಹೋದ ತಾಯಿ ಕೂಡಾ ಮುಳುಗಿದ್ದಾರೆ. ತಾಯಿ-ಮಗು ಮುಳುಗುವುದನ್ನು ಕಂಡು ರಕ್ಷಿಸಲು ಸ್ಥಳೀಯರು ಹೋಗುವಷ್ಟರಲ್ಲಿ ಸಂಪೂರ್ಣ ಮುಳುಗಿ ಮೃತಪಟ್ಟಿದ್ದಾರೆ.

    ಘಟನೆ ನಡೆದು ಸುಮಾರು 1 ಗಂಟೆ ಬಿಟ್ಟು ಅಗ್ನಿಶಾಮಕ ದಳ ಬೋಟ್ ಜೊತೆ ಬಂತು. ಆ ತಂಡದಲ್ಲಿ ಮುಳುಗು ತಜ್ಞರೇ ಇರಲಿಲ್ಲ. ಗರುಡಪಾತಾಳ ಹಾಕಿ ಮೃತದೇಹ ಹುಡುಕಲು ಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಅಧಿಕಾರಿಗಳ ಅಸಹಾಯಕತೆ ಕಂಡು ಸ್ಥಳೀಯ ಮುಳುಗು ತಜ್ಞರನ್ನು ಕರೆಸಲಾಯ್ತು. ಮೂವರು ಮುಳುಗು ತಜ್ಞರು ಬಂದು ಸುಮಾರು 15 ನಿಮಿಷಗಳ ಕಾಲ ಹುಡುಕಾಟ ನಡೆಸಿದರು. ಕ್ವಾರಿಯಲ್ಲಿ ಪಾಚಿ ತುಂಬಿಕೊಂಡಿದೆ. ಹಳೆಯ ಬಟ್ಟೆಗಳ ರಾಶಿಯೇ ಇದೆ. ಆಳದಲ್ಲಿ ಎರಡು ಮೃತದೇಹಗಳು ಸಿಲುಕಿದ್ದು, ಸದ್ಯ ಮೃತದೇಹಗಳನ್ನ ಮೇಲಕ್ಕೆತ್ತಿದ್ದೇವೆ ಅಂತಾ ಮುಳುಗು ತಜ್ಞರಾದ ಅಶೋಕ್ ಶೆಟ್ಟಿ, ನಿತೇಶ್, ಪ್ರಭಾಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ರು.

    ಅಗ್ನಿಶಾಮಕದಳದ ಅಸಹಾಯಕತೆಗೆ ಸ್ಥಳೀಯರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ತಂಡದಲ್ಲಿ 10-15 ಮಂದಿ ಇದ್ದರು. ಅದರಲ್ಲಿ ಒಬ್ಬನೂ ಈಜುಗಾರ ಇರಲಿಲ್ಲ ಎಂಬುದು ವಿಪರ್ಯಾಸ. ಇವರು ದೋಣಿಯಲ್ಲಿ ಕಬ್ಬಿಣದ ಸಲಾಕೆಗಳನ್ನು ಎಸೆದು ಹುಡುಕಾಟ ಮಾಡಿದರು. ಒಬ್ಬ ಸಿಬ್ಬಂದಿಯೂ ನೀರಿಗೆ ಇಳಿಯಲಿಲ್ಲ. ಈಜಲು- ಮುಳುಗಲು ಬಾರದವರನ್ನು ಅಗ್ನಿಶಾಮಕ ಇಲಾಖೆಗೆ ಆಯ್ಕೆ ಮಾಡಿದ್ದು ಯಾಕೆ?, ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ಪರಿಣತರನ್ನು ಇಲಾಖೆಗೆ ಸೇರಿಸಬೇಕು ಎಂದು ಸ್ಥಳೀಯ ಅಲೆವೂರು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸೇರಿಗಾರ್ ಆಕ್ರೋಶ ವ್ಯಕ್ತಪಡಿಸಿದರು.

    ಮುಗಿಲುಮುಟ್ಟಿದ ಆಕ್ರಂದನ: ದ್ಯಾಮವ್ವನ ಗಂಡ ಯಮುನಪ್ಪ ಹಾಸಂಗಿಗೆ ಮಾತು ಬರಲ್ಲ. ಕಿವಿನೂ ಕೇಳಿಸಲ್ಲ. ಮೃತದೇಹಗಳ ಪಕ್ಕ ಯಮುನಪ್ಪ ಕುಳಿತು ರೋಧಿಸುತ್ತಿದ್ದುದ್ದು ನೆರೆದವರ ಮನ ಕಲಕುವಂತಿತ್ತು. ಕಳೆದ ಮೂವತ್ತು ವರ್ಷಗಳಿಂದ ಇಬ್ಬರ ಕುಟುಂಬ ಉಡುಪಿಯಲ್ಲಿ ಕೂಲಿ ಕೆಲಸಕ್ಕೆಂದು ಬಂದಿತ್ತು. ಇಬ್ಬರಿಗೂ ಇಲ್ಲೇ ಮದುವೆಯಾಗಿತ್ತು. ಎರಡೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

    ಜಿಲ್ಲೆಯಾದ್ಯಂತ ಸರ್ಕಾರ ನೂರಾರು ಬಂಡೆ ಕಲ್ಲು ಕ್ವಾರಿಗಳಿಗೆ ಪರವಾನಿಗೆ ನೀಡಿದೆ. ಕಲ್ಲು ತೆಗೆದು ಖಾಲಿಯಾದಾಗ ಕ್ವಾರಿಯನ್ನು ಹಾಗೆಯೇ ಬಿಟ್ಟು ಹೋಗಲಾಗುತ್ತದೆ. ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಿಲ್ಲ. ಯಾವುದೇ ಮುನ್ನೆಚ್ಚರಿಕಾ ಬೋರ್ಟ್ ಅಳವಡಿಸಿಲ್ಲ. ಜಿಲ್ಲೆಯಾದ್ಯಂತ ನೂರಾರು ಕಲ್ಲುಕ್ವಾರಿಗಳಿದ್ದು ಎಲ್ಲವೂ ಹೀಗೆಯೇ ತೆರೆದುಕೊಂಡಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜವಾಬ್ದಾರಿ ಇದು. ನಿದ್ದೆ ಮಾಡುತ್ತಿರುವ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮಳೆಗಾಲ ಆರಂಭಕ್ಕೆ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಸ್ಥಳೀಯರು ಒತ್ತಾಯಿಸಿದ್ದಾರೆ.

    https://www.youtube.com/watch?v=58cJh_BFu7Y