Tag: ಕಲ್ಲಿಕೋಟೆ

  • ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

    ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

    – ರನ್‌ ವೇ ಬಫರ್‌ ಜೋನ್‌ ಕಡಿಮೆಯಿದೆ
    – ಇದು ಕೊಲೆಗೆ ಸಮನಾದ ಕ್ರಿಮಿನಲ್‌ ಕೃತ್ಯ

    ಚೆನ್ನೈ: ಮಂಗಳೂರು ವಿಮಾನ ದುರಂತದ ಬಳಿಕ ನಾನು ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲೂ ಅಪಾಯವಾಗಬಹುದು ಎಂದು ವರದಿಯಲ್ಲಿ ಎಚ್ಚರಿಕೆ ನೀಡಿದ್ದೆ. ಆದರೆ ನನ್ನ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಯಿತು ಎಂದು ವಾಯು ಸುರಕ್ಷಾ ತಜ್ಞ, ಕ್ಯಾಪ್ಟನ್‌ ಮೋಹನ್‌ ರಂಗನಾಥನ್‌ ಹೇಳಿದ್ದಾರೆ.

    ಕಲ್ಲಿಕೋಟೆ ವಿಮಾನ ದುರಂತದ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಲ್ಲಿಕೋಟೆ ವಿಮಾನ ನಿಲ್ದಾಣ ಟೇಬಲ್‌ ಟಾಪ್‌ ಆಗಿದ್ದು, ರನ್‌ವೇಯ ಬಫರ್‌ ಜೋನ್‌ ಬಹಳ ಕಡಿಮೆಯಿದೆ. ನಿಯಮಗಳ ಪ್ರಕಾರ ರನ್‌ವೇ ಕೊನೆಯಲ್ಲಿ 240 ಮೀಟರ್ ಉದ್ದದ ಬಫರ್‌ ಜೋನ್‌ ಇರಬೇಕು. ಆದರೆ ಇಲ್ಲಿ ಕೇವಲ 90 ಮೀಟರ್‌ ಉದ್ದವಿದೆ. ಇನ್ನೊಂದು ಬದಿಯಲ್ಲಿ 100 ಮೀಟರ್‌ ಇರಬೇಕಿತ್ತು. ಆದರೆ ಇಲ್ಲಿ ಕೇವಲ 75 ಮೀಟರ್‌ ಇದೆ ಎಂದು ಹೇಳಿದರು.

    ವಿಮಾನ ನಿಲ್ದಾಣದಲ್ಲಿ ವಿಮಾನಗಳು ಲ್ಯಾಂಡ್‌ ಆಗುವಾಗ ಏನಾದರೂ ದೋಷ ಉಂಟಾದರೆ ಅಥವಾ ನಿಗದಿತ ಜಾಗದಲ್ಲಿ ಲ್ಯಾಂಡ್‌ ಆಗದೇ ಮುಂದಕ್ಕೆ ಹೋಗಿ ಲ್ಯಾಂಡ್‌ ಆದಾಗ ವಿಮಾನ ರನ್‌ವೇಗಿಂತಲೂ ಮುಂದಕ್ಕೆ ಸಾಗುತ್ತದೆ. ರನ್‌ವೇಗಿಂತಲೂ ವಿಮಾನ ಮುಂದಕ್ಕೆ ಹೋದಾಗ ಅಪಾಯ ಆಗದೇ ಇರಲು ಬಫರ್‌ ಜೋನ್‌ ನಿರ್ಮಿಸಲಾಗುತ್ತದೆ. ಈ ವಲಯವನ್ನು ರನ್‌ವೇ ರೀತಿಯಾಗಿ ನಿರ್ಮಿಸುತ್ತಾರೆ. ಆದರೆ ರನ್‌ವೇಯಲ್ಲಿ ಇರುವಂತೆ ಮಧ್ಯದಲ್ಲಿ ಯಾವುದೇ ಬಿಳಿಯಾದ ಪಟ್ಟಿಗಳು ಇರುವುದಿಲ್ಲ.

    ಮಳೆ ಬಂದಾಗ ಟೇಬಲ್‌ ಟಾಪ್‌ ವಿಮಾನ ನಿಲ್ದಾಣದಲ್ಲಿ ಇಳಿಸಲು ಸರಿಯಾದ ಮಾರ್ಗಸೂಚಿಗಳು ಇಲ್ಲ. ಈ ಕಾರಣಕ್ಕೆ ಈ ರೀತಿಯ ಘಟನೆಗಳು ಸಂಭವಿಸುತ್ತದೆ. ರನ್‌ವೇಯಲ್ಲಿ ಯಾವುದೇ ಸುರಕ್ಷತಾ ಜಾಗವಿಲ್ಲ. 9 ವರ್ಷದದ ಹಿಂದೆಯೇ ಈ ಬಗ್ಗೆ ವರದಿ ನೀಡಿ ಎಚ್ಚರಿಕೆ ನೀಡಿದ್ದೆ. ಆದರೆ ಅವರು ವಿಮಾನ ನಿಲ್ದಾಣಕ್ಕೆ ಯಾವುದೇ ಅಪಾಯವಿಲ್ಲ. ಸುರಕ್ಷಿತವಾಗಿದೆ ಎಂದು ಹೇಳಿದರು ಎಂದು ರಂಗನಾಥನ್‌ ತಿಳಿಸಿದರು.

    ಇಲ್ಲಿ ದುರಂತ ಸಂಭವಿಸಿ ಸಾವನ್ನಪ್ಪಿದ್ದರೆ ಇದು ಕೊಲೆಗೆ ಸಮನಾದ ಕ್ರಿಮಿನಲ್‌ ಕೃತ್ಯ. ಈ ವಿಮಾನ ನಿಲ್ದಾಣ ಎರಡು ಬದಿಗಳಲ್ಲಿ 200 ಅಡಿ ಆಳದ ಕಣಿವೆಯಿದೆ. ವಿಮಾನಯಾನ ಸಂಸ್ಥೆಗಳು ಇಲ್ಲಿ ಕುರುಡಾಗಿ ವರ್ತಿಸುತ್ತದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಈ ಬಗ್ಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಎತ್ತರ ಪ್ರದೇಶದಲ್ಲಿ ಇರುವ ಕಾರಣ ಅಪಾಯವಾಗಬಹುದು ಎಂಬ ಕಾರಣಕ್ಕೆ ಕೆಲ ಅಂತರಾಷ್ಟ್ರೀಯ ವಿಮಾನಯಾನ ಕಂಪನಿಗಳು ಇಲ್ಲಿ ದೊಡ್ಡ ವಿಮಾನಗಳ ಲ್ಯಾಂಡಿಂಗ್‌ ನಿಲ್ಲಿಸಿದ್ದವು. ಬೋಯಿಂಗ್‌ 777, ಏರ್‌ಬಸ್‌ ಎ330ಗಳು ರನ್‌ವೇ ಕಡಿಮೆಯಿದೆ ಎಂಬ ಕಾರಣ ನೀಡಿ ಈ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಿದ್ದವು.

    ಕಲ್ಲಿಕೋಟೆ ರನ್‌ವೇ 2,860 ಮೀಟರ್‌ ಉದ್ದವಿದೆ. ದೇಶದಲ್ಲಿ ಅತಿ ಉದ್ದವಿರುವ ದೆಹಲಿ ವಿಮಾನ ನಿಲ್ದಾಣದ ರನ್‌ವೇ 4,430 ಮೀಟರ್‌ ಉದ್ದವಿದೆ. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

  • ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    – ರಾಷ್ಟ್ರಪತಿಯಿಂದ ಚಿನ್ನದ ಪದಕ
    – 30 ವರ್ಷಗಳ ಅಪಘಾತ ರಹಿತ ಚಾಲನೆ

    ಕಲ್ಲಿಕೋಟೆ: ಲ್ಯಾಂಡಿಂಗ್‌ ವೇಳೆ ರನ್‌ವೇಯಿಂದ ಜಾರಿ 2 ತುಂಡಾದ ವಿಮಾನವನ್ನು ಹಾರಿಸುತ್ತಿದ್ದ ಪೈಲಟ್‌ ದೀಪಕ್‌ ವಸಂತ ಸಾಠೆ ಯುದ್ಧ ವಿಮಾನಗಳ ಹಾರಾಟದ ಅನುಭವವನ್ನು ಪಡೆದಿದ್ದರು.

    ಹೌದು. ದುಬೈಯಿಂದ 184 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್‌ಇಂಡಿಯಾ ಎಕ್ಸ್‌ ಪ್ರೆಸ್‌ ವಿಮಾನವನ್ನು ದೀಪಕ್‌ ವಸಂತ ಸಾಠೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಸುತ್ತು ಹೊಡೆಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯ ಮಧ್ಯೆಯೂ ವಿಮಾನವನ್ನು ಟೇಬಲ್‌ ಟಾಪ್‌ ರನ್‌ವೇಯಲ್ಲಿ ಇಳಿಸಿದರೂ ಅದು 35 ಅಡಿ ಕಂದಕಕ್ಕೆ ಜಾರಿ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿದೆ.

    ಪುಣೆಯ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದ ಸಾಠೆ ಮಿಗ್‌ 21 ಯುದ್ಧವಿಮಾನವನ್ನು ಹಾರಿಸಿದ್ದರು. ವಾಯುಪಡೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕೆ ಅವರಿಗೆ ರಾಷ್ಟ್ರಪತಿಯಿಂದ ಚಿನ್ನದ ಪದಕ ಸಹ ಸಿಕ್ಕಿತ್ತು. ಹೈದರಾಬಾದ್‌ನಲ್ಲಿರುವ ಏರ್‌ಫೋರ್ಸ್‌ ಅಕಾಡೆಮಿಯಲ್ಲಿದ್ದಾಗ ಅವರು ಸ್ವಾರ್ಡ್‌ ಆಫ್‌ ಆನರ್‌ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.

    1981ರಲ್ಲಿ ವಾಯಪಡೆಗೆ ಸೇರಿದ್ದ ಸಾಠೆ 22 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಇರುವ ಏರ್‌ ಪೋರ್ಸ್‌ ಟ್ರೈನಿಂಗ್‌ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದರು. ಸ್ಕ್ವಾಡ್ರನ್‌ ಲೀಡರ್‌ ಆಗಿ ನಿವೃತ್ತಿ ಪಡೆದ ಬಳಿಕ ನಾಗರಿಕ ವಿಮಾನ ಸೇವೆಗೆ ಸೇರ್ಪಡೆಯಾಗಿದ್ದರು.

    ಬೋಯಿಂಗ್‌ 737 ವಿಮಾನಗಳ ಹಾರಾಟದಲ್ಲಿ ಅಪಾರ ಅನುಭವ ಹೊಂದಿದ್ದ ಇವರು 30 ವರ್ಷಗಳ ಕಾಲ ಅಪಘಾತರಹಿತ ಪೈಲಟ್‌ ಆಗಿ ಗುರುತಿಸಿಕೊಂಡಿದ್ದರು. ಮುಂಬೈ ನಿವಾಸಿಯಾಗಿದ್ದ ಇವರು ಕಳೆದ 18 ವರ್ಷಗಳಿಂದ ಏರ್‌ ಇಂಡಿಯಾದಲ್ಲಿ ಪೈಲಟ್‌ ಆಗಿದ್ದರು. ಏರ್‌ ಇಂಡಿಯಾದಲ್ಲಿ ಸೇವೆಗೆ ಸೇರಿದ ನಂತರ ಅವರು ಏರ್‌ಬಸ್‌310 ಗಳ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ್ದರು.

    ಸಾಠೆ ಅವರಿಗೆ ಇಬ್ಬರು ಪುತ್ರರಿದ್ದು, ಒಬ್ಬರು ಬೆಂಗಳೂರಿನಲ್ಲಿದ್ದರೆ ಇನ್ನೊಬ್ಬರು ಅಮೆರಿಕದಲ್ಲಿದ್ದಾರೆ. ಶೀಘ್ರವೇ ಇವರು ಕಲ್ಲಿಕೋಟೆಗೆ ತಲುಪಲಿದ್ದಾರೆ ಎಂದು ವರದಿಯಾಗಿದೆ.

    ಸುತ್ತಲೂ ಆಳ ಕಣಿವೆಯಿ ಇದ್ದು, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗುತ್ತದೆ. ಈ ರೀತಿಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸುವುದು ಬಹಳ ಸವಾಲಿನ ಕೆಲಸ. ಕಲ್ಲಿಕೋಟೆ ದುರ್ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.