Tag: ಕಲ್ಯಾಣ ಕರ್ನಾಟಕ ಉತ್ಸವ

  • ಮಾಸ್ಕ್ ಹಾಕದ ವಿದ್ಯಾರ್ಥಿಗಳ ಮೇಲೆ ಸಚಿವ ನಾಗೇಶ್ ಗರಂ

    ಮಾಸ್ಕ್ ಹಾಕದ ವಿದ್ಯಾರ್ಥಿಗಳ ಮೇಲೆ ಸಚಿವ ನಾಗೇಶ್ ಗರಂ

    ಯಾದಗಿರಿ: ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಆಗಮಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಸ್ಕ್ ಹಾಕದ ವಿದ್ಯಾರ್ಥಿಗಳ ಮೇಲೆ ಗರಂ ಆಗಿ ಬಳಿಕ, ಕಾಲೇಜ್ ವಿದ್ಯಾರ್ಥಿಗಳಿಗೆ ಮಾಸ್ಕ್ ಬಗ್ಗೆ ಪಾಠ ಮಾಡಿದ್ದಾರೆ.

    ಧ್ವಜಾರೋಹಣಕ್ಕೆ ಯಾದಗಿರಿಗೆ ಆಗಮಿಸಿದ ನಾಗೇಶ್ ಅವರು ನಗರದ ಸ್ವಪ್ನಾ ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಮಾಸ್ಕ್ ಧರಿಸದ ವಿದ್ಯಾರ್ಥಿಗಳನ್ನು ಕಂಡು ಗರಂ ಆಗಿದ್ದು, ಕೋಪದಿಂದ ಮಕ್ಕಳಿಗೆ ಮಾಸ್ಕ್ ಹಾಕೋಳಿ ಎಂದು ಗದರಿಸಿದ್ದಾರೆ. ಇದನ್ನೂ ಓದಿ:  ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್

    ವೇದಿಕೆಯಿಂದ ಇಳಿದು ಮಕ್ಕಳ ಬಳಿ ತೆರಳಿ ನಿಮಗೆ ಸ್ಕೂಲ್ ಆರಂಭ ಮಾಡಬೇಕಾ ಬೇಡ್ವಾ, ಮಾಸ್ಕ್ ಹಾಕಿಲ್ಲ ಎಂದರೆ ಸ್ಕೂಲ್ ಓಪನ್ ಮಾಡಲ್ಲ ಎಂದು ಮಕ್ಕಳಿಗೆ ಎಚ್ಚರಿಕೆ ನೀಡಿ ಮಾಸ್ಕ್ ಜಾಗೃತಿ ಮೂಡಿಸಿದ್ದಾರೆ. ಇದನ್ನೂ ಓದಿ:  ಮುಂದಿನ ದಿನಗಳಲ್ಲಿ ಕ್ಷೇತ್ರವಾರು ಶಾಸಕರ ಜೊತೆ ಸಭೆ ಮಾಡಿ ಲಸಿಕೆ ಅಭಿಯಾನ ಮಾಡ್ತೇವೆ: ಆರ್.ಅಶೋಕ್

    ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ್, ಜಿಲ್ಲಾಧಿಕಾರಿ, ಎಸ್‍ಪಿ ಉಪಸ್ಥಿತರಿದ್ದರು.

  • ಕಲ್ಯಾಣ ಕರ್ನಾಟಕ ಉತ್ಸವ- ರಾಯಚೂರಿನಲ್ಲಿ ಜನಪ್ರತಿನಿಧಿಗಳು ಗೈರು

    ಕಲ್ಯಾಣ ಕರ್ನಾಟಕ ಉತ್ಸವ- ರಾಯಚೂರಿನಲ್ಲಿ ಜನಪ್ರತಿನಿಧಿಗಳು ಗೈರು

    ರಾಯಚೂರು: ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆ ನಗರದ ಪೊಲೀಸ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ರಾಯಚೂರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಬಳಿಕ ತೆರೆದ ಜೀಪ್‍ನಲ್ಲಿ ಗೌರವ ವಂದನೆ ಸ್ವೀಕರಿಸಿದರು.

    ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಜನಪ್ರತಿನಿಧಿಗಳ ಗೈರು ಎದ್ದು ಕಾಣುತ್ತಿತ್ತು. ಜನಪ್ರತಿನಿಧಿಗಳಿಗಾಗಿ ಮೀಸಲಿಟ್ಟಿದ್ದ ಕುರ್ಚಿಗಳು ಖಾಲಿ ಇದ್ದವು. ನೂತನ ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಬಸಪ್ಪ, ಸ್ಥಳೀಯ ಶಾಸಕ ಡಾ.ಶಿವರಾಜ್ ಪಾಟೀಲ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ರಾಯಚೂರು ಸಂಸದ ಅಮರೇಶ್ವರ ನಾಯಕ್ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇದನ್ನೂ ಓದಿ: ಹಟ್ಟಿ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಪುತ್ರನ ಗುಂಡಾಗಿರಿ, ಎಫ್‍ಐಆರ್ ದಾಖಲು

    ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ್ ನಿಕಮ್, ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸೀಫ್ ಸೇರಿ ಇತರ ಅಧಿಕಾರಿಗಳು ಭಾಗಿಯಾಗಿದ್ದರು.

  • ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆಗೆ ನಿರ್ಧಾರ, ಕೇಂದ್ರ ನಾಯಕರೊಂದಿಗೆ ಚರ್ಚೆ: ಸಿಎಂ

    ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆಗೆ ನಿರ್ಧಾರ, ಕೇಂದ್ರ ನಾಯಕರೊಂದಿಗೆ ಚರ್ಚೆ: ಸಿಎಂ

    – ಕಲ್ಯಾಣ ಕರ್ನಾಟಕ ಧ್ವಜಾರೋಹಣ ನೆರವೇರಿಸಿದ ಸಿಎಂ
    – ಇಂದು ದೆಹಲಿಗೆ ತೆರಳಲಿರುವ ಬಿಎಸ್‍ವೈ

    ಕಲಬುರಗಿ: ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದುಕೊಂಡಿದ್ದೇನೆ. ಕೇಂದ್ರದ ನಾಯಕರು ಯಾವ ರೀತಿಯಾಗಿ ಸೂಚನೆ ನೀಡುತ್ತಾರೆ ನೋಡಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸರ್ದಾರ್ ವಲ್ಲಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಧ್ವಜಾರೋಹಣ ನೆರವೇರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ದೆಹಲಿಗೆ ಹೊರಟಿದ್ದು, ಪ್ರಧಾನಿ ಮೋದಿ ಮತ್ತು ಸಚಿವರನ್ನು ಭೇಟಿಯಾಗುತ್ತಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರ ನಾಯಕರ ಅಭಿಪ್ರಾಯ ತೆಗೆದುಕೊಂಡು ನಂತರ ವಿಸ್ತರಣೆ ಮಾಡಲಾಗುವುದು. ದೆಹಲಿಗೆ ಹೋದ ಮೇಲೆ ನಾಳೆ ಈ ಕುರಿತು ಚರ್ಚೆ ನಡೆಯಲಿದೆ. ಈ ವೇಳೆ ಹಳಬರನ್ನು ಕೈ ಬಿಟ್ಟು, ಹೊಸಬರನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಇದನ್ನು ಕೇಂದ್ರ ನಾಯಕರು ನಿರ್ಧರಿಸುತ್ತಾರೆ. ಅಲ್ಲದೆ ನಾಳೆ ಪ್ರಧಾನಿ ಮೋದಿ, ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

    ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಎನ್.ಇ.ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಾ. ಬಸವರಾಜ ಪಾಟೀಲ ಸೇಡಂ, ಸಂಸದ ಡಾ. ಉಮೇಶ ಜಾಧವ್, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಶಾಸಕರಾದ ಬಸವರಾಜ್ ಮತ್ತಿಮೂಡ ಡಾ.ಅವಿನಾಶ್ ಜಾಧವ್, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ್ ಉಪಸ್ಥಿತರಿದ್ದರು.

  • ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ-1,300 ಕೋಟಿ ಕಾಮಗಾರಿಗಳಿಗೆ ಸಿಎಂ ಚಾಲನೆ

    ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ-1,300 ಕೋಟಿ ಕಾಮಗಾರಿಗಳಿಗೆ ಸಿಎಂ ಚಾಲನೆ

    ಕಲಬರುಗಿ: ಇಂದು 73ನೇಯ ಕಲ್ಯಾಣ ಕರ್ನಾಟಕ ಉತ್ಸವ ಹಿನ್ನಲೆ ಜಿಲ್ಲೆಗೆ ಆಗಮಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪನವರು 1,300 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

    ನಗರದ ಎಸ್ ವಿಪಿ ವೃತ್ತದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ರ ಪುತ್ತಳಿಗೆ ಪೂಜೆ ಸಲ್ಲಿಸಿ ಸಿಎಂ ಮಾಲಾರ್ಪಣೆ ಮಾಡಿದರು. ನಂತರ ಡಿಎಆರ್ ಮೈದಾನದಲ್ಲಿ ಧ್ವಜಾರೋಹಣ ನೇರವೇರಿಸಿದರು. 2013-14 ರಿಂದ 219-20ರ ವರೆಗೆ ಕೆಕೆಆರ್ ಡಿಬಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತ ವಿಶೇಷ ಕೈಪಿಡಿಯನ್ನ ಸಿಎಂ ಬಿಡುಗಡೆ ಮಾಡಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಮಾಡಿದರು.

    ಸರ್ದಾರ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಮಳೆ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆಂದು ಅನ್ಕೊಂಡಿರಲಿಲ್ಲ. ಮಳೆಯ ನಡುವೆ ಕಲ್ಯಾಣ ಕರ್ನಾಟಕ ಉತ್ಸವ ಯಶಸ್ವಿಯಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಏನೇನು ಕಾರ್ಯಕ್ರಮ ರೂಪಿಸಬೇಕು ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

    ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ವಿಭಾಗದಲ್ಲಿ ಸ್ವಾತಂತ್ರ್ಯ ಸಂಭ್ರಮ ಕಳೆಗಟ್ಟಿದೆ. ಬ್ರಿಟಿಷರಿಂದ ದೇಶಕ್ಕೆ ಆಗಸ್ಟ್ 15 ರಂದು ಸ್ವಾತಂತ್ರ್ಯ ದೊರೆತಿದ್ದರೆ ಅಂದಿನ ಹೈದ್ರಾಬಾದ್ ಕರ್ನಾಟಕ, ಈಗಿನ ಕಲ್ಯಾಣ ಕರ್ನಾಟಕಕ್ಕೆ ಸೆಪ್ಟೆಂಬರ್ 17ರಂದು ಸ್ವಾತಂತ್ರ್ಯ ಸಿಕ್ಕಿತ್ತು. ಈ ಹಿನ್ನೆಲೆ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಗುತ್ತದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಗುತ್ತದೆ.

    ಇನ್ನು ಕಾರ್ಯಕ್ರಮದಲ್ಲಿ ಡಿಸಿಎಂ ಗೋವಿಂದ್ ಕಾರಜೋಳ, ಸಂಸದ ಉಮೇಶ್ ಜಾದವ್, ಸಚಿವ ಆರ್.ಅಶೋಕ್, ಶಾಸಕ ದತ್ತಾತ್ರೇಯ ಪಾಟೀಲ್ ರೆವೂರ್, ಬಾಬುರಾವ್ ಚಿಂಚನಸೂರ್ ಸೇರಿದಂತೆ ಹಲವರು ಕಲ್ಯಾಣ ಕರ್ನಾಟಕದ ಉತ್ಸವದಲ್ಲಿ ಭಾಗಿಯಾಗಿದ್ದರು.