Tag: ಕಲಾವಿದರು

  • ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ಯಶ್ ಸಹಾಯ ಹಸ್ತ

    ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ಯಶ್ ಸಹಾಯ ಹಸ್ತ

    – ತಲಾ 5 ಸಾವಿರ ನೀಡುವುದಾಗಿ ಘೋಷಿಸಿದ ರಾಕಿ ಭಾಯ್

    ಬೆಂಗಳೂರು: ಕೊರೊನಾ 2ನೇ ಅಲೆ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡಿದೆ. ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿನಿಮಾ ಕ್ಷೇತ್ರಕ್ಕೂ ಭಾರೀ ನಷ್ಟವಾಗಿದ್ದು, ಬಡ ಕಲಾವಿದರು, ಕಾರ್ಮಿಕರು ತುತ್ತು ಅನ್ನಕ್ಕೂ ಗತಿ ಪರಿತಪಿಸುತ್ತಿದ್ದಾರೆ. ಅದೇ ರೀತಿ ಹಲವು ಕಲಾವಿದರು ಸಹಾಯವನ್ನು ಸಹ ಮಾಡುತ್ತಿದ್ದಾರೆ. ಇದೀಗ ನಟ ಯಶ್ ಸಹ ಇನ್ನೂ ಒಂದು ಹೆಜ್ಜೆ ಮುಂದೆ ಬಂದು ಬಡ ಕಲಾವಿದರು ಹಾಗೂ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

    ಈ ಕುರಿತು ಟ್ವಿಟ್ಟರ್ ಮೂಲಕ ಪತ್ರವನ್ನು ಬಿಡುಗಡೆಗೊಳಿಸಿರುವ ಯಶ್, ಸುಮಾರು 3 ಸಾವಿರಕ್ಕೂ ಹೆಚ್ಚು ಸಿನಿಮಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂ. ಗಳನ್ನು ತಮ್ಮ ಸಂಪಾದನೆಯಿಂದ ನೀಡುವುದಾಗಿ ಘೋಷಿಸಿದ್ದಾರೆ.

    ಈ ಕುರಿತು ಪತ್ರ ಬಿಡುಗಡೆ ಮಾಡಿರುವ ಅವರು, ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚು ಕಡಿಮೆ ಬುಡಮೇಲು ಮಾಡಿದೆ. ಅದರಲ್ಲೂ ಕಳೆದ ಒಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ. ಇದು ಬರೀ ಮಾತನಾಡುವ ಸಮಯವಲ್ಲ, ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ ಎಂದಿದ್ದಾರೆ.

    ಸುಮಾರು 3 ಸಾವಿರಕ್ಕೂ ಹೆಚ್ಚಿನ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂ.ಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ. ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

    ನಮ್ಮ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣ ಇದು ಕಾರ್ಯರೂಪಕ್ಕೆ ಬರಲಿದೆ. ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ. ಬದಲಿಗೆ ಶಕ್ತಿ ಇರುವ ಹೃದಯವಂತರು ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನ ಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಸಹಾಯ ಮಾಡಿದರೆ ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎಂಬುದು ನನ್ನ ಆಶಯ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

  • ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ

    ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ

    – ಆದ್ಯತಾ ಗುಂಪಿನಲ್ಲಿ ಕಲಾವಿದರಿಗೂ ಲಸಿಕೆ
    – ವೈಯಕ್ತಿಕವಾಗಿ ಸಹ ಧನ ಸಹಾಯ

    ಬೆಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಚಿತ್ರರಂಗದ ಪೋಷಕ ಕಲಾವಿದರಿಗೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಗೃಹ ನಿರ್ಮಾಣ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮನೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.

    ಚಿತ್ರರಂಗದ ಪೋಷಕ ಕಲಾವಿದರಿಗೆ ಭರತ್‍ಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಫುಡ್ ಕಿಟ್ ವಿತರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮನೆ ಅಗತ್ಯ ಇರುವ ಕಲಾವಿದರು ಅರ್ಜಿ ಹಾಕಬಹುದು. ತಕ್ಷಣವೇ ಅಂಥ ಕಲಾವಿದರಿಗೆ ಕಡಿಮೆ ದರದಲ್ಲಿ ಮನೆ ಹಂಚಿಕೆ ಮಾಡಲಾಗುವುದು ಎಂದರು.

    ಇತ್ತೀಚೆಗೆ ಪ್ರಕಟಿಸಲಾದ ಪ್ಯಾಕೇಜ್‍ನಲ್ಲಿ ಕಲಾವಿದರಿಗೆ 3,000 ಕೊಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಅದರಲ್ಲಿ ಚಿತ್ರರಂಗದ ಪೋಷಕ ಕಲಾವಿದರೂ ಸೇರಿದ್ದಾರಾ ಇಲ್ಲವಾ ಎಂಬ ಬಗ್ಗೆ ಗೊಂದಲವಿದೆ. ಚಿತ್ರರಂಗದ ಕಲಾವಿದರಿಗೂ ಆ ಹಣ ಸಿಗುವ ಬಗ್ಗೆ ಕನ್ನಡ ಮತ್ತು ಸಂಸ್ಕೃತ ಇಲಾಖೆ ಕ್ರಮ ವಹಿಸುವ ಕುರಿತು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

    ಪೋಷಕ ಕಲಾವಿದರನ್ನು ಆದ್ಯತೆಯ ಗುಂಪು ಎಂದು ಪರಿಗಣಿಸಿ ಅವರಿಗೂ ವ್ಯಾಕ್ಸಿನೇಷನ್ ನೀಡಲಾಗುವುದು. ಈ ಬಗ್ಗೆ ಕಲಾವಿದರ ಪಟ್ಟಿ ನೀಡುವಂತೆ ಕೇಳಲಾಗಿದೆ. ಅಲ್ಲದೆ ಈ ಫುಡ್ ಕಿಟ್ ಪಡೆಯುತ್ತಿರುವ ಎಲ್ಲ ಕಲಾವಿದರಿಗೆ ವೈಯಕ್ತಿಕವಾಗಿ ತಲಾ 1,000 ರೂ. ಚೆಕ್ ನೀಡುವುದಾಗಿ ಇದೇ ವೇಳೆ ಡಿಸಿಎಂ ಹೇಳಿದರು.

    ಸಾವಿನ ಲೆಕ್ಕ ಮುಚ್ಚಿಡುತ್ತಿಲ್ಲ
    ಸರ್ಕಾರ ಕೋವಿಡ್ ಸಾವಿನ ಲೆಕ್ಕವನ್ನು ಮುಚ್ಚಿಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಅರೋಪ ಅಸತ್ಯದಿಂದ ಕೂಡಿದೆ. ಪ್ರತಿ ಸೋಂಕಿತನ ಬಗ್ಗೆಯೂ ಮಾಹಿತಿ ಇದೆ. ಯಾರಾದರೂ ಸಾವನ್ನಪ್ಪಿದರೆ ಆ ಮಾಹಿತಿಯೂ ವಿವಿಧ ಹಂತಗಳಲ್ಲಿ ದಾಖಲಾಗುತ್ತಿದೆ. ಇದೆಲ್ಲವನ್ನು ಬಹಳ ವ್ಯವಸ್ಥಿತವಾಗಿ ಮಾಡಲಾಗುತ್ತಿದ್ದು, ಸಿದ್ದರಾಮಯ್ಯ ಅವರು ಮಾಡಿರುವ ಆರೋಪದಲ್ಲಿ ಹುರಳಿಲ್ಲ. ಜನರಲ್ಲಿ ಗೊಂದಲ ಉಂಟು ಮಾಡುವುದು ಬೇಡ ಎಂದು ಡಾ.ಅಶ್ವಥ್ ನಾರಾಯಣ್ ತಿಳಿಸಿದರು.

    ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೂ ಲಸಿಕೆ ಅಭಾವ ಇದೆ ಎನ್ನುವುದು ನಿಜ. ಆದರೆ ಸರ್ಕಾರ ಉತ್ಪಾದಕರಿಂದ ಲಸಿಕೆ ಪಡೆದು ಜನರಿಗೆ ನೀಡಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಹಂತ ಹಂತವಾಗಿ ಲಭ್ಯವಾಗುತ್ತಿರುವ ಲಸಿಕೆಯನ್ನು ಆಗಿಂದಾಗ್ಗೆ ಕೊಡಲಾಗುತ್ತಿದೆ. ಆದ್ಯತೆಯ ಮೇರೆಗೆ ಯಾರಿಗೆ ಕೋಡಬೇಕೋ ಅವರಿಗೆ ಕೊಡಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ, ಮೀಸೆ ಅಂಜನಪ್ಪ, ಉಮೇಶ್ ಹೆಗಡೆ, ಡಿಂಗ್ರಿ ನಾಗರಾಜ್, ಸಿತಾರಾ ಹಾಗೂ ಟ್ರಸ್ಟ್‍ನ ಭರತ್ ಗೌಡ, ನಟರಾದ ಗಣೇಶ್ ರಾವ್ ಕೆಸರ್ಕಾರ್, ಕೆಂಪೇಗೌಡ ಫುಡ್ ಕಿಟ್ ವ್ಯವಸ್ಥೆ ಮಾಡಿದ್ದರು. ಡಿಸಿಎಂ ಅವರು ಸಾಂಕೇತಿಕವಾಗಿ 30 ಕಲಾವಿದರಿಗೆ ಕಿಟ್ ವಿತರಣೆ ಮಾಡಿದ್ದು, ಉಳಿದ 200 ಕಿಟ್‍ಗಳನ್ನು ಕಲಾವಿದರ ಮನೆಗೆ ತಲುಪಿಸಲಾಗುವುದು ಎಂದು ಭರತ್ ಗೌಡ ಮಾಹಿತಿ ನೀಡಿದರು.

  • ಸುದೀಪ್ ಪತ್ರ ನೋಡಿ ಭಾವುಕರಾದ ಹಿರಿಯ ಕಲಾವಿದರು

    ಸುದೀಪ್ ಪತ್ರ ನೋಡಿ ಭಾವುಕರಾದ ಹಿರಿಯ ಕಲಾವಿದರು

    ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಅನೇಕ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಯದಲ್ಲಿ ಹಲವಾರು ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸಹಾಯವನ್ನು ಜನರಿಗೆ ಮಾಡುತ್ತಿದ್ದಾರೆ. ಈ ಮಧ್ಯೆ ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷವಾಗಿ ಹಿರಿಯ ಕಲಾವಿದರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ಕೆಲಸವಿಲ್ಲದೇ ಜೀವನ ನಡೆಸಲು ಪರದಾಡುತ್ತಿರುವ ಸಿನಿಮಾ ಕಾರ್ಮಿಕರಿಗೆ ನೆರವು ನೀಡುತ್ತಿರುವ ಕಿಚ್ಚ ಸುದೀಪ್, ಇದೀಗ ಗಿರಿಜಾ ಲೋಕೇಶ್, ಉಮೇಶ್ ಸೇರಿದಂತೆ ಹಲವಾರು ಹಿರಿಯ ಕಲಾವಿದರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಜೊತೆಗೆ ಅನೇಕ ಹಿರಿಯ ಕಲಾವಿದರಿಗೆ ಸಹಾಯ ಮಾಡುತ್ತಿದ್ದಾರೆ.

    ಸುದೀಪ್‍ರವರು ವಿಶೇಷ ತಂಡವೊಂದನ್ನು ರಚಿಸುವ ಮೂಲಕ 100ಕ್ಕೂ ಹಿರಿಯ ಕಲಾವಿದರಿಗೆ ಅಗತ್ಯವಿರುವ ವಸ್ತುಗಳನ್ನು ತಲುಪಿಸುವುದರ ಜೊತೆಗೆ ನನ್ನ ಕುಟುಂಬದ ಹಿರಿಯರು ನೀವೆಲ್ಲ ಹೇಗಿದ್ದೀರಾ? ಪ್ರೀತಿಯಿಂದ ಕಿಚ್ಚ ಸುದೀಪ್ ಎಂದು ಪತ್ರವನ್ನು ಬರೆದು ಕಳುಹಿಸಿಕೊಟ್ಟಿದ್ದಾರೆ. ಈ ಪತ್ರವನ್ನು ನೋಡಿ ಅನೇಕ ಕಲಾವಿದರು ಭಾವುಕರಾಗಿದ್ದು, ಸುದೀಪ್ ಮಾಡುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇತ್ತೀಚೆಗಷ್ಟೇ ಸುದೀಪ್‍ರವರ ಮೊದಲು ಮಾನವನಾಗು ಎಂಬ ಟ್ರಸ್ಟ್ ಮೂಲಕ ಸೌಮ್ಯ ಎಂಬ ಮಹಿಳೆಯ ಸೋಂಕಿತ ಪತಿಯ ಚಿಕಿತ್ಸೆ ವೆಚ್ಚವನ್ನು ಭರಿಸುವ ಮೂಲಕ ನೆರವು ನೀಡಿದ್ದರು.

  • ಬಡ ಯಕ್ಷಗಾನ ಕಲಾವಿದರಿಗೆ ಉಚಿತ ರೇಷನ್ – ಯಕ್ಷಧ್ರುವ ಪಟ್ಲ ಫೌಂಡೇಶನ್ ಘೋಷಣೆ

    ಬಡ ಯಕ್ಷಗಾನ ಕಲಾವಿದರಿಗೆ ಉಚಿತ ರೇಷನ್ – ಯಕ್ಷಧ್ರುವ ಪಟ್ಲ ಫೌಂಡೇಶನ್ ಘೋಷಣೆ

    ಮಂಗಳೂರು: ಯಕ್ಷಗಾನ ಕರಾವಳಿಯ ಪ್ರಮುಖ ಜಾನಪದ ಕಲೆ. ಯಕ್ಷಗಾನವನ್ನು ನಂಬಿಕೊಂಡು ಸಾವಿರಾರು ಕಲಾವಿದರು ಜೀವನ ಸಾಗಿಸುತ್ತಿದ್ದಾರೆ. ಕೊರೊನಾ ಮಹಾಮಾರಿಯಿಂದ ಕಳೆದ ವರ್ಷ ತತ್ತರಿಸಿದ ಯಕ್ಷಗಾನ ಕಲಾವಿದರು ಈ ಬಾರಿಯೂ ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದಾರೆ. ಅಂತವರ ನೆರವಿಗೆ ಮುಂದಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಉಚಿತ ರೇಷನ್ ವಿತರಣೆಯ ಘೋಷಣೆ ಮಾಡಿದೆ.

    ಲಾಕ್‍ಡೌನ್‍ನಿಂದ ಮೇಳದ ತಿರುಗಾಟವಿಲ್ಲದೆ ಮತ್ತು ಮುಂದಿನ 4-5 ತಿಂಗಳು ಯಾವ ಕಾರ್ಯಕ್ರಮವೂ ಇಲ್ಲದೆ ಯಕ್ಷಗಾನ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲಾವಿದರ ಈ ಸ್ಥಿತಿಯನ್ನು ಮನಗಂಡು ಕಳೆದ ವರ್ಷದಂತೆ ಈ ಬಾರಿಯೂ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ತೀರಾ ಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ಉಚಿತವಾಗಿ ರೇಷನ್ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ.

    ಅತೀ ಅವಶ್ಯಕತೆ ಇರುವ ಯಕ್ಷಗಾನ ವೃತ್ತಿ ಕಲಾವಿದರು ಟ್ರಸ್ಟ್ ನ ಘಟಕದ ಪದಾಧಿಕಾರಿಗಳನ್ನು ಮೇ 10ರೊಳಗೆ ಸಂಪರ್ಕಿಸಿ ತಮ್ಮ ಹೆಸರು, ವಿಳಾಸ ಮತ್ತು ಮೇಳದ ಹೆಸರನ್ನು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ 91645 21588 ಮತ್ತು 74111 61662 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಕಟನೆ ತಿಳಿಸಿದೆ.

  • ನಮ್ಮ ಪ್ರತಿಭೆಗಳ ಪರವಾಗಿ ನಾವೇ ನಿಲ್ಲದಿದ್ರೆ ಬೇರಾರು ನಿಲ್ತಾರೆ?: ಸುದೀಪ್

    ನಮ್ಮ ಪ್ರತಿಭೆಗಳ ಪರವಾಗಿ ನಾವೇ ನಿಲ್ಲದಿದ್ರೆ ಬೇರಾರು ನಿಲ್ತಾರೆ?: ಸುದೀಪ್

    – ಸರ್ಕಾರಕ್ಕೆ ಕಿಚ್ಚನ ಮನವಿ

    ಬೆಂಗಳೂರು: ಕೊರೊನಾದಿಂದಾಗಿ ರದ್ದಾಗಿರುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡುವಂತೆ ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾ ಸಂಘದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಕಲಾವಿದರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ನಟ ಕಿಚ್ಚ ಸುದೀಪ್, ಸರ್ಕಾರಕ್ಕೆ ಮನವಿ ಸಹ ಮಾಡಿಕೊಂಡಿದ್ದಾರೆ.

    ನಾನು ಪ್ರತಿಭಟನಾ ನಿರತ ವಾದ್ಯಗೋಷ್ಠಿ ಕಲಾವಿದರ ಜೊತೆಗಿದ್ದೇನೆ. ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳನ್ನ ಈ ವಿಷಯವಾಗಿ ಗಮನ ಹರಿಸಲು ಮತ್ತು ನಿಮ್ಮಿಂದಾಗುವ ನೆರವನ್ನ ನೀಡಲು ವಿನಂತಿಸುವೆ. ಹಾಗೆ ಈ ಕಲಾವಿದರ ಪರವಾಗಿ ಸರ್ಕಾರ ಸಹ ಪೂರಕ ಕ್ರಮಗಳನ್ನ ಕೈಗೊಳ್ಳಲು ಕೋರುತ್ತೇನೆ. ಏಕೆದಂರೆ ದೂರದರ್ಶನವಿಲ್ಲದ ಕಾಲದಿಂದಲೂ ನಮ್ಮನ್ನ ರಂಜಿಸುತ್ತಿರುವ ಕಲಾ ಬಳಗವನ್ನ ಮುಂದಿನ ತಲೆಮಾರುಗಳ ತನಕ ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸಿದ್ದೇನೆ. ನಮ್ಮ ಈ ಪ್ರತಿಭೆಗಳ ಪರವಾಗಿ ನಾವೇ ನಿಲ್ಲದಿದ್ರೆ ಬೇರಾರು ನಿಲ್ಲುತ್ತಾರೆ ಅಲ್ಲವೇ ಎಂದಿದ್ದಾರೆ.

    ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಲಾವಿದರು, ಜಾತ್ರೆ, ಉತ್ಸವ, ರಾಜ್ಯೋತ್ಸವ ನಡೆಸಲು ಪ್ರೋತ್ಸಾಹ ನೀಡಬೇಕು. ವಾದ್ಯಗೋಷ್ಠಿ ಕಲಾವಿದರಿಗೆ 5 ಸಾವಿರ ರೂಪಾಯಿ ಆರ್ಥಿಕ ಸಹಾಯದ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯ ನೀಡಬೇಕು. ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ನಮಗೂ ಕೊಡಬೇಕು ಎಂದು ಪ್ರತಿಭಟನಾ ನಿರತರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.

  • ಕೊರೊನಾಗೆ ಇಂಜೆಕ್ಷನ್ ಕೊಟ್ಟ ಕಲಾವಿದರು – ಕುಂದಾಪುರ ಕೋಡಿಯಲ್ಲಿ ವಿಭಿನ್ನ ಮರಳು ಶಿಲ್ಪ

    ಕೊರೊನಾಗೆ ಇಂಜೆಕ್ಷನ್ ಕೊಟ್ಟ ಕಲಾವಿದರು – ಕುಂದಾಪುರ ಕೋಡಿಯಲ್ಲಿ ವಿಭಿನ್ನ ಮರಳು ಶಿಲ್ಪ

    ಉಡುಪಿ: ಕೊರೊನಾ ರೋಗಕ್ಕೆ ಇಂಜೆಕ್ಷನ್ ಕೊಡಲಾಗಿದೆ. ಕನ್ ಫ್ಯೂಸ್ ಆಗಬೇಡಿ, ಇದು ಮರಳಿನಲ್ಲಿ ಮೂಡಿಬಂದ ವಿಭಿನ್ನ ಕಲಾಕೃತಿ.

    ಹೌದು. ಮಹಾಮಾರಿ ಕೊರೊನಾದ ವಿರುದ್ಧ ಇಂದು ದೇಶಾದ್ಯಂತ ಲಸಿಕೆ ಹಂಚಿಕೆಯಾಗಿದೆ. ಕೊರೊನಾದ ಫ್ರಂಟ್ ಲೈನ್ ವಾರಿಯರ್ ಗಳು ಕೋವಿಶೀಲ್ಡ್, ಕೋವ್ಯಾಕ್ಸಿನ್ ಚುಚ್ಚಿಸಿಕೊಂಡಿದ್ದಾರೆ. ಭಾರತೀಯ ವೈದ್ಯರು ಮತ್ತು ಸಂಶೋಧಕರ ಸಾಧನೆ, ಸರ್ಕಾರದ ಕಾರ್ಯಚಟುವಟಿಕೆಗೆ ಉಡುಪಿಯ ಸ್ಟ್ಯಾಂಡ್ ಟೀಮ್ ವಿಭಿನ್ನವಾಗಿ ಶ್ಲಾಘಿಸಿದೆ. ಬೃಹತ್ ಮರಳು ಶಿಲ್ಪದ ಮೂಲಕ ವ್ಯಾಕ್ಸಿನನ್ನು ಸ್ವಾಗತಿಸಿದೆ.

    ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಡಿ ಬೀಚಿನಲ್ಲಿ ಬೃಹತ್ ಮರಳು ಶಿಲ್ಪ ಮಾಡಿರುವ ಸ್ಯಾಂಡ್ ಆರ್ಟ್ ತಂಡ ಮರಳಲ್ಲಿ ಭೂಗೋಳ, ಭಾರತವನ್ನು ರಚಿಸಿದ್ದಾರೆ. ಕೊರೊನಾ ರೋಗಕ್ಕೆ ಇಂಜೆಕ್ಷನ್ ಕೊಡುವ ಮಾದರಿ, ವ್ಯಾಕ್ಸಿನ್, ಸಿರಿಂಜ್ ಆಕೃತಿಯನ್ನು ರಚಿಸಿದ್ದಾರೆ. ತಂಡದಲ್ಲಿ ಹರೀಶ್ ಸಾಗಾ, ರಾಘವೇಂದ್ರ ಮತ್ತು ಜೈ ನೇರಳಕಟ್ಟೆ ಸುಮಾರು ಐದು ಗಂಟೆಗಳ ಕಾಲ ದುಡಿದಿದ್ದಾರೆ.

    ಕಲಾವಿದ ಹರೀಶ್ ಸಾಗಾ ಮಾತನಾಡಿ, ಕೊರೊನಾ ಎಲ್ಲಾ ಕ್ಷೇತ್ರದಲ್ಲಿ ಅವಾಂತರ ಮಾಡಿದೆ. ಈಗ ವ್ಯಾಕ್ಸಿನ್ ಬಂದಿದೆ. ಮಾಸ್ಕ್ ಕಳಚುವ ಪರಿಸ್ಥಿತಿ ನಿರ್ಮಾಣವಾಗಲಿ. ಜನ ನಿಶ್ಚಿಂತವಾಗಿ ಓಡಾಡುವಂತಾಗಲಿ ಎಂಬುದನ್ನು ಮರಳುಶಿಲ್ಪದ ಮೂಲಕ ರಚಿಸಿದ್ದೇವೆ. ಲಸಿಕೆ ಸಂಶೋಧನೆ ಮಾಡಿದ ಎಲ್ಲರಿಗೆ ಇದು ಅರ್ಪಣೆ ಮಾಡಿರುವುದಾಗಿ ಹೇಳಿದರು.

    ಕಲಾವಿದ ಜೈ ನೇರಳಕಟ್ಟೆ ಮಾತನಾಡಿ, ಮರಳ ಶಿಲ್ಪದಲ್ಲಿ ಕೊರೊನಾ ಕಾಡಿದ ಭೂಮಿ, ಕೊರೊನಾ ಗೆದ್ದ ಭಾರತ, ಲಸಿಕೆ, ಸಿರೀಂಜ್, ಮಾಸ್ಕ್, ಕೊರೊನಾ ರಾಕ್ಷಸನನ್ನು ರಚಿಸಿದ್ದೇವೆ ಎಂದರು.

  • ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ನೂತನ ಯಕ್ಷಗಾನ ಮೇಳ

    ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ನೂತನ ಯಕ್ಷಗಾನ ಮೇಳ

    – ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ
    – ದೇವಿ ಮಹಾತ್ಮೆ ಪ್ರದರ್ಶನಕ್ಕಾಗಿಯೇ ತಂಡ

    ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಮೇರು ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಪ್ರಧಾನ ಭಾಗವತಿಕೆಯೊಂದಿಗೆ ಹೊಸ ಯಕ್ಷಗಾನ ಮೇಳ ಆರಂಭಗೊಂಡಿದ್ದು, ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ರಂಗಸ್ಥಳದಲ್ಲಿ ಮೇಳೈಸಲಿದ್ದಾರೆ.

    ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಿಂದ ಹೊರ ಬಂದ ಬಳಿಕ ಪಟ್ಲ ಅವರು ಹೊಸ ಯಕ್ಷಗಾನ ಮೇಳ ಮಾಡುತ್ತಾರೆ ಎಂಬ ಸುದ್ದಿ ಇತ್ತು, ಅದು ಈಗ ನಿಜವಾಗಿದೆ. ನವೆಂಬರ್ ತಿಂಗಳ 27ರಿಂದ ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರದರ್ಶನ ಆರಂಭವಾಗಲಿದೆ ಎಂದು ಪಾವಂಜೆ ದೇವಳದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಹೇಳಿದ್ದಾರೆ.

    ಮೇಳದ ಯಕ್ಷಗಾನ ಪ್ರದರ್ಶನವು ಕಾಲಮಿತಿಯದ್ದಾಗಿದ್ದು, ಸಾಮಾನ್ಯವಾಗಿ ಸಂಜೆ 6 ಗಂಟೆಯಿಂದ 11ರವರೆಗಿನ ಅವಧಿಯಲ್ಲಿ ನಡೆಯಲಿದೆ. ಈ ಎಲ್ಲಾ ಪ್ರದರ್ಶನಗಳನ್ನು ಕೋವಿಡ್-19ರ ಪರಿಸ್ಥಿತಿಯಲ್ಲಿ ಸರ್ಕಾರ ನೀಡುವ ನಿರ್ದೇಶನಗಳಿಗೆ ಒಳಪಟ್ಟು ನಡೆಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.

    ನೂತನ ಮೇಳದ ಕಲಾವಿದರು
    ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರು ಪ್ರಧಾನ ಭಾಗವತರಾಗಿದ್ದು, ಪ್ರಫುಲ್ಲಚಂದ್ರ ನೆಲ್ಯಾಡಿ ಭಾಗವತಿಕೆಯಲ್ಲಿ ಸಾಥ್ ನೀಡಲಿದ್ದಾರೆ. ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳ್ಳಿಂಜಡ್ಕ, ಪ್ರಶಾಂತ್ ವಗೆನಾಡು, ಪೂರ್ಣೇಶ್ ಆಚಾರ್ಯ ಇರಲಿದ್ದಾರೆ. ಉಜಿರೆ ನಾರಾಯಣ, ಸಂದೇಶ್ ಮಂದಾರ ಹಾಸ್ಯ ಪಾತ್ರಧಾರಿಗಳಾಗಿ ಬಣ್ಣ ಹಚ್ಚಲಿದ್ದಾರೆ.

    ಅಕ್ಷಯ್ ಕುಮಾರ್, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು ಸ್ತ್ರೀಪಾತ್ರಧಾರಿಗಳಾಗಲಿದ್ದಾರೆ. ಪ್ರಧಾನ ವೇಷಧಾರಿಗಳಾಗಿ ರಾಧಾಕೃಷ್ಣ ನಾವಡ, ದಿವಾಣ ಶಿವಶಂಕರ ಭಟ್, ಸಂತೋಷ್ ಮಾನ್ಯ, ರಾಕೇಶ್ ರೈ, ಸತೀಶ್ ನೈನಾಡು, ಮಾಧವ ಕೊಳ್ತಮಜಲು, ಮೋಹನ್ ಬೆಳ್ಳಿಪ್ಪಾಡಿ, ಮನೀಷ್ ಪಾಟಾಳಿ, ಲೋಕೇಶ ಮುಚ್ಚೂರು, ಹರಿರಾಜ್ ಕಿನ್ನಿಗೋಳಿ, ರೋಹಿತ್, ದಿವಾಕರ, ಲಕ್ಷಣ, ಮಧುರಾಜ್, ಭುವನ್ ಮತ್ತಿತರು ಇರಲಿದ್ದಾರೆ.

    ದೇವಿ ಮಹಾತ್ಮೆ ಪ್ರದರ್ಶನಕ್ಕಾಗಿಯೇ ತಂಡ
    ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಸತೀಶ್ ಪಟ್ಲರಿಗೆ ಶ್ರೀದೇವಿ ಮಹಾತ್ಮೆ ಪ್ರಸಂಗ ಸಾಕಷ್ಟು ಪ್ರಖ್ಯಾತಿ ತಂದು ಕೊಟ್ಟಿದ್ದು, ಇಲ್ಲಿಯೂ ಕೂಡ ದೇವಿ ಮಹಾತ್ಮೆ ಪ್ರಸಂಗಕ್ಕೆ ಕಲಾವಿದರು ಸೆಟ್ ಆದಂತೆ ಇದ್ದಾರೆ. ಅಕ್ಷಯ್ ಕುಮಾರ್ ದೇವಿ, ರಾಜೇಶ್ ನಿಟ್ಟೆ ಮಾಲಿನಿ, ಸತೀಶ್ ನೈನಾಡು ಮಹಿಷಾಸುರ, ರಾಧಾಕೃಷ್ಣ ನಾವಡ ರಕ್ತಬೀಜ, ಲೋಕೇಶ್ ಮುಚ್ಚೂರು ಮತ್ತು ಬೆಳ್ಳಿಪಾಡಿ ಮೋಹನ್ ಚಂಡ- ಮುಂಡರು ಹೀಗೆ ದೇವಿ ಮಹಾತ್ಮೆ ಪ್ರಸಂಗಕ್ಕೆ ಸೆಟ್ ಆಗುವಂತೆ ಕಲಾವಿದರ ಆಯ್ಕೆ ಆದಂತೆ ಇದೆ.

    ಯಕ್ಷಗಾನದ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಪಟ್ಲ ಸತೀಶ್ ಶೆಟ್ಟಿ ಅವರ ಕಂಠಸಿರಿಯನ್ನು ಅವರೇ ನೇತೃತ್ವವಹಿಸಿದ ಯಕ್ಷಗಾನ ಮೇಳದೊಂದಿಗೆ ನೋಡಿ ಆನಂದಿಸಲು ಅವರ ಅಭಿಮಾನಿಗಳು ಕಾತುರರಾಗಿರೋದಂತು ಸತ್ಯ. ಹಿಂದಿನಿಂದಲೂ ಪಾವಂಜೆ ಕ್ಷೇತ್ರ ಯಕ್ಷಗಾನಕ್ಕೆ ಗರಿಷ್ಠ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿದ್ದು, ಇಲ್ಲಿಂದ ಹೊರಡುವ ನೂತನ ಮೇಳ ಯಶಸ್ಸಾಗುವುದರಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

  • ರಜನಿಕಾಂತ್ ಸಂಘಟನೆಯಿಂದ ಹಿರಿಯ ಕಲಾವಿದರಿಗೆ ಸಹಾಯ

    ರಜನಿಕಾಂತ್ ಸಂಘಟನೆಯಿಂದ ಹಿರಿಯ ಕಲಾವಿದರಿಗೆ ಸಹಾಯ

    – 40 ಹಿರಿಯ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

    ಬೆಂಗಳೂರು: ಕರ್ನಾಟಕ ರಾಜ್ಯ ರಜನಿಕಾಂತ್ ಸಂಘಟನೆಯ ರಜನಿ ಸಂತೋಷ್ ಮತ್ತು ತಂಡದವರು ಸುಮಾರು 40 ಜನ ಹಿರಿಯ ಕಲಾವಿದರಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್‍ಗಳನ್ನು ನೀಡುವ ಮೂಲಕ ಸಹಾಯ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಕಚೇರಿಗೆ ಕರೆ ಮಾಡಿ ಮಾಹಿತಿ ಪಡೆದು. ಬೆಂಗಳೂರಿನಿಂದ ಸುಮಾರು 70 ಕಿ.ಮೀ.ದೂರದಲ್ಲಿರುವ ಕುಂಬಳೆ ಗ್ರಾಮದ ಹಿರಿಯ ಕಲಾವಿದರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದ್ದಾರೆ. ಸುಮಾರು ಎರಡು ತಿಂಗಳಿಂದ ಈ ಬಡ ಕಲಾವಿದರಿಗೆ ಯಾವುದೇ ಕೆಲಸವಿಲ್ಲದೆ ಊಟಕ್ಕೆ ಪರದಾಡುತ್ತಿದ್ದರು. ವಿಷಯ ತಿಳಿದ ಕರ್ನಾಟಕ ರಾಜ್ಯ ರಜನಿಕಾಂತ್ ಸಂಘಟನೆಯ ರಜನಿ ಸಂತೋಷ್ ಮತ್ತು ತಂಡ ಬೆಂಗಳೂರಿನಿಂದ ಸುಮಾರು 70 ಕಿ.ಮೀ.ದೂರ ತೆರಳಿ ಕಲಾವಿದರಿಗೆ ಸಹಾಯ ಮಾಡಿದೆ.

    ಸಂಘಟನೆಯ ಸದಸ್ಯರು ಸುಮಾರು 40 ಹಿರಿಯ ಕಲಾವಿದರಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ. ದಿನಸಿ ಪಡೆದ ಕಲಾವಿದರು ಸಂತಸ ವ್ಯಕ್ತಪಡಿಸಿದ್ದು, ದಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

  • ಸಕ್ಕರೆ ನಾಡಲ್ಲಿ ಕಲಾವಿದನ ಕುಂಚದಲ್ಲಿ ಅರಳುತ್ತಿರುವ ಸ್ವಚ್ಛತೆಯ ಅರಿವು

    ಸಕ್ಕರೆ ನಾಡಲ್ಲಿ ಕಲಾವಿದನ ಕುಂಚದಲ್ಲಿ ಅರಳುತ್ತಿರುವ ಸ್ವಚ್ಛತೆಯ ಅರಿವು

    ಮಂಡ್ಯ: ಕಸ ಮುಕ್ತ ನಗರವನ್ನಾಗಿ ಮಾಡಲು ಇದೀಗ ಕಲಾವಿದನ ಕುಂಚದ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಂಡ್ಯದಲ್ಲಿ ಮಾಡಲಾಗುತ್ತಿದೆ.

    ಮಂಡ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಬರುವ ಗೋಡೆಗಳ ಮೇಲೆ ಸ್ವಚ್ಚತೆಯ ಕುರಿತ ಚಿತ್ರಗಳನ್ನು ಬಿಡಿಸುವ ಮೂಲಕ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸಲಾಗುತ್ತಿದೆ. ಹೊಸ ವರ್ಷದ ಅಂಗವಾಗಿ ಕರ್ನಾಟಕ ರಾಜ್ಯ ಕುಂಚ ಕಲಾವಿದರ ಸಂಘ ಹಾಗೂ ಮಂಡ್ಯ ನಗರ ಸಭೆಯ ವತಿಯಿಂದ ಜನರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು ಈ ಹೊಸ ಉಪಾಯ ಮಾಡಲಾಗಿದೆ.

    ಪ್ಲಾಸ್ಟಿಕ್ ತ್ಯಜಿಸಿ ಪ್ರಕೃತಿಯನ್ನು ಉಳಿಸಿ, ಸ್ವಚ್ಛತೆ ಕಾಪಡಿ ಆರೋಗ್ಯಕರವಾಗಿರಿ ಎಂಬ ಘೋಷವಾಕ್ಯದ ಮೂಲಕ ಚಿತ್ರಗಳನ್ನು ಬಿಡಿಸಲಾಗಿದೆ. ಈ ಮೂಲಕ ಮಂಡ್ಯ ನಗರವನ್ನು ಸ್ವಚ್ಛ ನಗರಿಯನ್ನಾಗಿ ಮಾಡಲು ಇದೀಗ ಮಂಡ್ಯ ನಗರ ಸಭೆ ಮುಂದಾಗಿದೆ. ಈ ನಡುವೆ ಸಾರ್ವಜನಿಕರಿಗೆ ಗಿಡಗಳನ್ನು ವಿತರಣೆ ಮಾಡುವ ಮೂಲಕ ಜನರಿಗೆ ಪರಿಸರದ ಕುರಿತು ಅರಿವು ಮೂಡಿಸಲಾಯಿತು.

  • 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‍ವುಡ್ ಕಲಾವಿದರು

    2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‍ವುಡ್ ಕಲಾವಿದರು

    ಸ್ಯಾಂಡಲ್‍ವುಡ್ ಬೆಳ್ಳಿತೆರೆ ಹಾಗೂ ಕಿರುತೆರೆಯ ಹಲವು ಕಲಾವಿದರು 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಬೆಳ್ಳಿತೆರೆ ಕಲಾವಿದರಿಗಿಂತ ಕಿರುತೆರೆಯ ಕಲಾವಿದರೇ ಹೆಚ್ಚಾಗಿ ಮದುವೆಯಾಗಿದ್ದಾರೆ. ಕೆಲವು ಕಲಾವಿದರು ಬಹುವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳಯ, ಗೆಳತಿಯರನ್ನೇ ಮದುವೆಯಾದರೆ, ಮತ್ತೆ ಕೆಲವು ಕಲಾವಿದರು ಆರೆಂಜ್ಡ್ ಮ್ಯಾರೇಜ್ ಆಗಿದ್ದಾರೆ. 2019ರಲ್ಲಿ ಯಾವೆಲ್ಲಾ ಕಲಾವಿದರು ಮದುವೆಯಾಗಿದ್ದಾರೆ ಎಂಬುದುನ್ನು ಒಮ್ಮೆ ನೋಡಿ

    ವಿಜಯ್ ಸೂರ್ಯ: ಗುಳಿಕೆನ್ನೆಯ ಚೆಲುವ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಅವರ ಜೊತೆ ಪ್ರೇಮಿಗಳ ದಿನದಂದೇ ವಿವಾಹವಾಗಿದ್ದರು. ಮನೆಯವರೆಲ್ಲ ಮೆಚ್ಚಿದ ಚೈತ್ರಾ ಅವರ ಜೊತೆ ವಿಜಯ್ ಸಪ್ತಪದಿ ತುಳಿದಿದ್ದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕವೇ ನಟ ವಿಜಯ್ ಸೂರ್ಯ ಜನಪ್ರಿಯತೆ ಪಡೆದವರು. ಚೈತ್ರಾ ಸಾಫ್ಟ್‍ವೇರ್ ಉದ್ಯೋಗಿಯಾಗಿದ್ದಾರೆ.

    ನೇಹಾ ಪಾಟೀಲ್: ಹುಬ್ಬಳ್ಳಿ ಮೂಲದ ನಟಿ ನೇಹಾ ಪಾಟೀಲ್ ಅವರು ಸಿನಿಮಾ ಬಗ್ಗೆ ಆಸಕ್ತಿ ಇರುವ ಬೆಂಗಳೂರಿನ ಎಂಜಿನಿಯರಿಂಗ್ ಹುಡುಗ ಪ್ರಣವ್ ಅವರ ಜೊತೆ ಮದುವೆಯಾಗಿದ್ದರು. ಫೆಬ್ರವರಿ 22ರಂದು ವಿಜಯನಗರದ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಯಜ್ಞಾ ಶೆಟ್ಟಿ: ಬಹುಭಾಷಾ ನಟಿ ಯಜ್ಞಶೆಟ್ಟಿ ಅವರು ಅಕ್ಟೋಬರ್ 10ರಂದು ತುಳು ಸಿನಿರಂಗದ ನಾಯಕ ನಟ ಸಂದೀಪ್ ಶೆಟ್ಟಿ ಅವರೊಂದಿಗೆ ಮಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕುಟುಂಬ ಸದಸ್ಯರು ಸೇರಿದಂತೆ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮಂಗಳೂರಿನಲ್ಲಿ ಮದುವೆ ನಡೆದಿತ್ತು. ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವದಂಪತಿಗೆ ಶುಭಕೋರಿದ್ದರು.

    ಗುರು ರಾಜ್ ಕುಮಾರ್: ರಾಜ್ ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಎರಡನೇ ಪುತ್ರ ಯುವರಾಜ್ ಕುಮಾರ್ ಅವರು ಮೈಸೂರಿನ ಶ್ರೀದೇವಿಯನ್ನು ಮೇ 26ರಂದು ಮದುವೆಯಾಗಿದ್ದರು. ಇವರಿಬ್ಬರ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿತ್ತು. ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಇಬ್ಬರು ಸ್ನೇಹಿತರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಎರಡು ಕುಟುಂಬದವರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು.

    ಇಶಿತಾ ವರ್ಷ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿ ಇಶಿತಾವರ್ಷ ನವೆಂಬರ್ 10ರಂದು ತಮ್ಮ ಬಹುಕಾಲದ ಗೆಳೆಯ ಮುರುಗಾನಂದ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಾಯಾ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವ ಜೋಡಿಗೆ ಶುಭಾಶಯವನ್ನು ತಿಳಿಸಿದ್ದರು.

    ರಿಷಿ: `ಅಪರೇಷನ್ ಅಲಮೇಲಮ್ಮ’ ಮತ್ತು `ಕವಲುದಾರಿ’ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವ ನಟ ರಿಷಿ ಅವರು ಕೂಡ ನವೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಿಷಿ ಅವರು ಬರಹಗಾರ್ತಿ ಸ್ವಾತಿ ಅವರೊಂದಿಗೆ ಚೆನ್ನೈನಲ್ಲಿ ಮದುವೆಯಾಗಿದ್ದರು. ವಿವಾಹವಾದ ನಂತರ ನವೆಂವರ್ 20ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.

    ಹಿತಾ ಚಂದ್ರಶೇಖರ್: ಡಿಸೆಂಬರ್ 1ರಂದು ಹಿತಾ ಚಂದ್ರಶೇಖರ್ ತಮ್ಮ ಗೆಳೆಯ ಕಿರಣ್ ಶ್ರೀನಿವಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಿರಣ್ ಶ್ರೀನಿವಾಸ್ ಗುರು-ಹಿರಿಯರು ನಿಶ್ಚಯ ಮಾಡಿದ್ದ ಶುಭ ಮುಹೂರ್ತದಲ್ಲಿ ಹಿತಾ ಚಂದ್ರಶೇಖರ್‍ಗೆ ಮಾಂಗಲ್ಯಧಾರಣೆ ಮಾಡಿದ್ದರು. ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ನಡೆದಿತ್ತು. ಕಿರಣ್ ಮತ್ತು ಹಿತಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಮೇ ತಿಂಗಳಲ್ಲಿ ಕಿರಣ್ ಹಾಗೂ ಹಿತಾ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಚಂದನ್ ಶೆಟ್ಟಿ- ನಿವೇದಿತಾ ಗೌಡ: ಅಕ್ಟೋಬರ್ 21ರಂದು ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು.

    ಅರ್ಚನಾ: ಸ್ಯಾಂಡಲ್‍ವುಡ್‍ನ `ಆ ದಿನಗಳು’ ಸಿನಿಮಾ ಖ್ಯಾತಿಯ ಅರ್ಚನಾ ವೇದಾ ತಮ್ಮ ಪ್ರಿಯಕರನೊಂದಿಗೆ ನವೆಂಬರ್ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅರ್ಚನಾ ವೇದಾ ತಮ್ಮ ಗೆಳೆಯ ಜಗದೀಶ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹೈದರಾಬಾದಿನಲ್ಲಿ ಗುರು-ಹಿರಿಯರ ನಿಶ್ಚಯಿಸಿದ್ದ ಮೂಹೂರ್ತದಲ್ಲಿ ಈ ಜೋಡಿಯ ಮದುವೆ ಸಾಂಪ್ರದಾಯಿಕವಾಗಿ ನಡೆದಿತ್ತು.

    ಧ್ರುವ ಸರ್ಜಾ: ನವೆಂಬರ್ 24ರಂದು ಧ್ರುವ ಶುಭ ಮುಹೂರ್ತದಲ್ಲಿ ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಅವರನ್ನು ವರಿಸಿದ್ದರು. ಜೆ.ಪಿ.ನಗರದ ಸಂಸ್ಕೃತ ಬೃಂದಾವನ ಕನ್ವೆನ್ಷನ್ ಹಾಲ್‍ನಲ್ಲಿ ಇವರ ವಿವಾಹ ಮಹೋತ್ಸವ ನಡೆದಿದ್ದು, ಅಂದು ಸಂಜೆಯೇ ಸಿನಿಮಾ ಕಲಾವಿದರಿಗಾಗಿ ಅದ್ಧೂರಿಯಾಗಿ ರಿಸೆಪ್ಶನ್ ಏರ್ಪಡಿಸಲಾಗಿತ್ತು. ಮರುದಿನ ಎಂದರೆ 25 ರಂದು ಅಭಿಮಾನಿಗಳಿಗಾಗಿ ವಿಶೇಷ ಆರತಕ್ಷತೆಯನ್ನು ಆಯೋಜೆ ಮಾಡಲಾಗಿತ್ತು.

    ಮನೀಶ್ ಪಾಂಡೆ- ಆಶ್ರಿತಾ ಶೆಟ್ಟಿ: ಭಾರತದ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಡಿಸೆಂಬರ್ 2ರಂದು ತುಳು ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮನೀಶ್ ಪಾಂಡೆ ಅವರು ತುಳು ಹಾಗೂ ದಕ್ಷಿಣ ಭಾರತದ ನಟಿಯಾಗಿರುವ ಆಶ್ರಿತಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದರು. ಇವರ ಮದುವೆಯಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದರು.

    ನಿತ್ಯಾ ರಾಮ್: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಿತ್ಯ ರಾಮ್ ಅವರು ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಅವರ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದರು. ಮದುವೆಗೆ ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವಜೋಡಿಗೆ ಶುಭಾಶಯ ತಿಳಿಸಿದ್ದರು.

    ದೀಪಿಕಾ (ಧನ್ಯಾ): ದೀಪಿಕಾ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿರುವ ಅಕ್ಕು ಆಕರ್ಶ್ ಜೊತೆ ನವೆಂಬರ್ 15ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ದೀಪಿಕಾ ಮತ್ತು ಆಕರ್ಶ್ ವಿವಾಹ ಸಾಂಪ್ರದಾಯಿಕವಾಗಿ ನಡೆದಿತ್ತು. ಇವರಿಬ್ಬರು ಪರಸ್ಪರ ಬಹು ದಿನಗಳಿಂದ ಪ್ರೀತಿಸುತ್ತಿದ್ದರು. ನಂತರ ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದಾರೆ. ಎರಡು ಕುಟುಂಬದವರು ಇವರ ಪ್ರೀತಿಯನ್ನು ಖುಷಿಯಿಂದ ಒಪ್ಪಿಕೊಂಡು ಕೆಲ ತಿಂಗಳ ಹಿಂದೆ ಇಬ್ಬರ ನಿಶ್ಚಿತಾರ್ಥ ಮಾಡಿದ್ದರು.

    ಭವಾನಿ ಸಿಂಗ್: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಯಲ್ಲಿ ಈ ಹಿಂದೆ ನಟಿಸುತ್ತಿದ್ದ ನಟ ಭವಾನಿ ಸಿಂಗ್ ತಮ್ಮ ಬಹುದಿನದ ಗೆಳತಿ ಪಂಕಜಾ ಶಿವಣ್ಣ ಅವರ ಜೊತೆ ನವೆಂಬರ್ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಭವಾನಿ ಹಾಗೂ ಪಂಕಜಾ ಎರಡು ವರ್ಷದಿಂದ ಸ್ನೇಹಿತರಾಗಿದ್ದರು. ಬಳಿಕ ಭವಾನಿ ಅವರು ಪಂಕಜಾ ಅವರನ್ನು ಪ್ರಪೋಸ್ ಮಾಡಿದ್ದು, ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಈಗ ಮದುವೆಯಾಗಿದ್ದರು.