Tag: ಕಲಬುರುಗಿ

  • ನಳಿನ್ ಕುಮಾರ್ ಕಟೀಲ್‍ ಒಬ್ಬ ಜೋಕರ್: ಶರಣ್‍ಪ್ರಕಾಶ್ ಪಾಟೀಲ್

    ನಳಿನ್ ಕುಮಾರ್ ಕಟೀಲ್‍ ಒಬ್ಬ ಜೋಕರ್: ಶರಣ್‍ಪ್ರಕಾಶ್ ಪಾಟೀಲ್

    ಕಲಬುರಗಿ: ಬಿಜೆಪಿ ರಾಜ್ಯಧ್ಯಾಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್ ಅವರು ಏನು ಮಾತನಾಡುತ್ತಾರೋ ಅವರಿಗೆ ಗೊತ್ತಾಗಲ್ಲ ಎಂದು ಮಾಜಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

    nalin kumar kateel

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ 23 ಸ್ಥಾನಗಳನ್ನು ಗೆದ್ದಿದ್ರೆ, ಬಿಜೆಪಿ 23 ಸ್ಥಾನಗಳನ್ನು ಗೆದ್ದಿದೆ. ಆದರೆ ಕಟೀಲ್ ನಮಗೆ ಬಹುಮತ ಸಿಕ್ಕಿದೆ ಎಂದು ಹೇಳಿದ್ದಾರೆ. ಯಕ್ಷಗಾನದಲ್ಲಿ ಹೇಗೆ ನಟನೆ ಮಾಡುತ್ತಾರೋ, ಹಾಗೆ ಕಟೀಲ್ ಕೂಡ ಭಾಷಣ ಮಾಡುತ್ತಾರೆ. ಪಾಲಿಕೆಯಲ್ಲಿ ಬಹುಮತ ಸಿಕ್ಕಿದೆ ಎಂದು ಹೇಗೆ ಅಂದುಕೊಳ್ಳುತ್ತಾರೋ ಗೊತ್ತಿಲ್ಲ. ಕಲಬುರಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲೂ ಸಹ ಕಾಂಗ್ರೆಸ್ ಪಾರುಪತ್ಯ ಮೆರದಿದೆ. ಹೊಸ ಸಿಎಂ ಬಂದ ಖುಷಿಯಲ್ಲಿ ಬಿಜೆಪಿಯವರು ಸಿಕ್ಕಾಪಟ್ಟೆ ಹಣ ಖರ್ಚು ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ:ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

    ಕಲಬುರಗಿ ಪಾಳಿಕೆಯಲ್ಲಿ ಜೆಡಿಎಸ್ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲಿದೆ. ಈ ಬಗ್ಗೆ ಜೆಡಿಎಸ್ ಕೂಡ ಒಲವು ವ್ಯಕ್ತಪಡಿಸಿದೆ. ಪಕ್ಷದ ಮಟ್ಟದಲ್ಲಿ ಇಂದು ಮೈತ್ರಿ ಬಗ್ಗೆ ಚರ್ಚೆ ನಡೆಯಲಿದೆ ಈ ಬಗ್ಗೆ ದೇವೆಗೌಡರ ಜೊತೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ ಎಂದರು.  ಇದನ್ನೂ ಓದಿ:  ಸಾಮಾನ್ಯರ ಸಿಎಂ ಬೊಮ್ಮಾಯಿ: ಡಾ.ಕೆ ಸುಧಾಕರ್

    ಪಾಲಿಕೆ ವಿಚಾರದಲ್ಲಿ ಡಿಕೆಶಿ, ಸಿದ್ದು ಸೈಲೆಂಟ್ ಆಗಿಲ್ಲ. ಕುಮಾರಸ್ವಾಮಿ ಜೊತೆ ಡಿಕೆಶಿ ನಿರಂತರ ಚರ್ಚೆ ನಡೆಸಿದ್ದಾರೆ. ಸ್ಥಳೀಯ ಜೆಡಿಎಸ್ ನಾಯಕರು ಕೂಡ ಕಾಂಗ್ರೆಸ್ ಸದಸ್ಯರೊಂದಿಗೆ ಮೈತ್ರಿಗೆ ಸಿದ್ಧರಿದ್ದಾರೆ. ಏನೇ ಗೊಂದಲಗಳಿದ್ದರು ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ 100ಕ್ಕೆ ನೂರು ಖಚಿತ. ಅಧಿಕಾರದ ಬಗ್ಗೆ ಬಿಜೆಪಿ ತಿರುಕನ ಕನಸು ಕಾಣುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತನಾಡಬೇಕಾದರೆ ಹುಷಾರಾಗಿರಿ ಎಂದು ಕಟೀಲ್ ವಿರುದ್ಧ ಶರಣಪ್ರಕಾಶ್ ಪಾಟೀಲ್ ಕಿಡಿಕಾರಿದರು

  • ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

    ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

    ಕಲಬುರುಗಿ: ಯುವಕನೋರ್ವನನ್ನು ಮಾರಾಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಸಿಂದಗಿ ಹೊರವಲಯದಲ್ಲಿ ನಡೆದಿದೆ.

    ಕೊಲೆಯಾದ ಯುವಕನನ್ನು ವೀರೇಶ್ ಬೀಮಳ್ಳಿ (28) ಎಂದು ಗುರುತಿಸಲಾಗಿದೆ. ವೀರೇಶ್ ಕಲಬುರಗಿ ನಗರದ ದುಬೈ ಕಾಲೋನಿ ನಿವಾಸಿಯಾಗಿದ್ದು, ಸೂಪರ್ ಮಾರ್ಕೆಟ್‍ನ ಪಾತ್ರೆ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ನಿನ್ನೆ ಮುಂಜಾನೆ ಕೆಲಸಕ್ಕೆ ಹೋಗಿದ್ದ ವೀರೇಶ್‍ನನ್ನು ಅಂಗಡಿಯಿಂದ ಮೂರು ಜನ ಬಂದು ಕರೆದುಕೊಂಡು ಹೋಗಿದ್ದರು. ಅವರೊಂದಿಗೆ ತೆರಳಿದ್ದ ವಿರೇಶ್ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದನು. ಏಕಾಏಕಿ ನಾಪತ್ತೆಯಾದ ವಿಷಯ ತಿಳಿದ ವೀರೇಶ್ ಕುಟುಂಬಸ್ಥರು ಚೌಕ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಇಂದು ವೀರೇಶ್ ಮೃತದೇಹ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ಇರಿದು ನಂತರ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಗುಂಡಿಯಲ್ಲಿ ಶವ ಎಸೆದು ಪರಾರಿಯಾಗಿದ್ದಾರೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಕಲಬರುಗಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ತಂದೆ ತಾಯಿಯ ನೆನಪಿಗಾಗಿ ಗುಡಿ ಕಟ್ಟಿ ಮೂರ್ತಿ ಪ್ರತಿಷ್ಠಾಪಿಸಿದ ಮಗ

    ತಂದೆ ತಾಯಿಯ ನೆನಪಿಗಾಗಿ ಗುಡಿ ಕಟ್ಟಿ ಮೂರ್ತಿ ಪ್ರತಿಷ್ಠಾಪಿಸಿದ ಮಗ

    ಕಲಬುರಗಿ: ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳಲಾರದೇ ಅನಾಥಾಶ್ರಮಕ್ಕೆ ಕಲಿಸುವ ಈ ಕಾಲದಲ್ಲಿ ಇಲ್ಲೂಬ್ಬ ಆಧುನಿಕ ದಶರಥ ತಂದೆ ತಾಯಿಯ ಗುಡಿ ಕಟ್ಟಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಿದ್ದಾರೆ.

     

    ಇಂದಿನ ದಿನಗಳಲ್ಲಿ ಕೆಲವರಿಗೆ ವಯಸ್ಸಾದ್ದರೆ ತಂದೆ ತಾಯಿಯನ್ನು ನೋಡಿಕೊಳ್ಳುವುದೆ ಒಂದು ದೊಡ್ಡ ಕಷ್ಟದ ಕೆಲಸ ಅಂತ ಕೆಲ ಮಕ್ಕಳ ಅಂತಾರೆ. ಆಳಂದ ತಾಲೂಕಿನ ನಿರಗೂಡಿ ಗ್ರಾಮದ ದಶರಥ ಪಾತ್ರೆ ತಮ್ಮ ಪೋಷಕರ ನೆನಪಿಗಾಗಿ ಸುಮಾರು 2 ಲಕ್ಷ ರೂ. ಹಣ ಖರ್ಚು ಮಾಡಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.

    ನಿರಗುಡಿ ಗ್ರಾಮದ ದಶರಥ ಪಾತ್ರೆ ಅವರ ತಂದೆ ವಿಶ್ವನಾಥ್ ಹಾಗೂ ತಾಯಿ ಲಕ್ಷ್ಮಿಬಾಯಿ ಇಬ್ಬರೂ ಕೂಡ ನಾಲ್ಕು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಇವರ ಪುಣ್ಯ ಸ್ಮರಣಾರ್ಥವಾಗಿ ಇಂದು ಗ್ರಾಮದಲ್ಲಿ ಗುಡಿ ಕಟ್ಟಿ ಮೂರ್ತಿ ಕೂರಿಸಿದ್ದಾರೆ.

    ತನ್ನ ಪೋಷಕರು ಜೊತೆಗೆ ಇಲ್ಲದೆ ಇದ್ದರು ಕಣ್ಣಿಗೆ ಕಾಣುವ ದೇವರಾಗಿರಬೇಕೆಂಬ ಮಹದಾಸೆಯಿಂದ ಗುಡಿ ಕಟ್ಟಿ ಮೂರ್ತಿ ಪ್ರತಿಷ್ಠಾಪಿಸಿರುವ ದಶರಥ ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸುಂದರವಾದ ಮೂರ್ತಿ ಕೆತ್ತೆನೆಗಾಗಿ ದಶರಥ ನೆರೆಯ ರಾಜ್ಯ ಮಹಾರಾಷ್ಟ್ರದ ಪಂಡರಾಪೂರದ ಶಿಲ್ಪಿಗಳನ್ನು ಸಂಪರ್ಕಿಸಿ ಮೂರ್ತಿ ಕೆತ್ತನೆ ಮಾಡಿಸಿಕೊಂಡಿದ್ದಾರೆ.

  • ಮಾತಾ ಮಾಣಿಕೇಶ್ವರಿ ಅಂತಿಮ ದರ್ಶನಕ್ಕೆ ಸಿದ್ಧತೆ- ತಾವೇ ನಿರ್ಮಿಸಿಕೊಂಡಿರೋ ಸಮಾಧಿಯಲ್ಲಿ ಅಂತ್ಯಕ್ರಿಯೆ

    ಮಾತಾ ಮಾಣಿಕೇಶ್ವರಿ ಅಂತಿಮ ದರ್ಶನಕ್ಕೆ ಸಿದ್ಧತೆ- ತಾವೇ ನಿರ್ಮಿಸಿಕೊಂಡಿರೋ ಸಮಾಧಿಯಲ್ಲಿ ಅಂತ್ಯಕ್ರಿಯೆ

    ಕಲಬುರಗಿ: ಲಿಂಗೈಕ್ಯರಾದ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಅವರ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಅವರೇ ನಿರ್ಮಿಸಿಕೊಂಡಿರುವ ಸಮಾಧಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

    ಅನಾರೋಗ್ಯದಿಂದ ಶನಿವಾರ ಲಿಂಗೈಕ್ಯರಾದ ಮಾತಾ ಮಾಣಿಕೇಶ್ವರಿ ಅವರನ್ನು ನೋಡಲು ತಡರಾತ್ರಿಯಿಂದಲೇ ಸಾವಿರಾರು ಭಕ್ತರು ಮಾಣಿಕ್ಯಗಿರಿ ಬೆಟ್ಟಕ್ಕೆ ಬರುತ್ತಿದ್ದಾರೆ. ಆಂಧ್ರ ಪ್ರದೇಶ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದು, ಮಠದ ಮುಖ್ಯ ದ್ವಾರದ ಆವರಣದಲ್ಲಿ ವೇದಿಕೆಗೆ ಸಿದ್ಧತೆ ಮಾಡಿ 10 ಗಂಟೆಯ ನಂತರ ಸಾರ್ವಜನಿಕ ದರ್ಶನಕ್ಕೆ ಚಿಂತನೆ ಮಾಡಲಾಗಿದೆ.

    ಮಾತಾ ಮಾಣಿಕೇಶ್ವರಿಯವರ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಹರಿದು ಬರುವ ನೀರಿಕ್ಷೆ ಇದ್ದು, ಜಿಲ್ಲಾಡಳಿತ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲು ಭಕ್ತರು ಆಗಮಿಸಲಿದ್ದು, ಎರಡು ಸಾವಿರ ಪೊಲೀಸರು ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಮಠದ ಅವರಣದಲ್ಲಿ ಹಾಕಿರುವ ವೇದಿಕೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿ ಸರತಿ ಸಾಲಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಬೆಳಗ್ಗೆ ಐದು ಗಂಟೆಗೆ ಅಮ್ಮನಿಗೆ ಮಠದ ಗುಹೆಯಲ್ಲಿ ಅರ್ಚಕರು ಹಾಲಿನಿಂದ ಅಭಿಷೇಕ ಮಾಡಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ಪ್ರಕಾರ ಅಂತಿಮ ವಿಧಿವಿಧಾನ ನಡೆಯಲಿದ್ದು, ಮಠದ ಆವರಣದಲ್ಲಿಯೇ ಇರುವ ಶಿವಲಿಂಗದ ಆಕಾರದ ಸಮಾಧಿಯಲ್ಲಿ ಅವರನ್ನು ಲಿಂಗೈಕ್ಯ ಮಾಡಲಾಗುತ್ತದೆ. ಈ ಸಮಾಧಿಯನ್ನು ಸ್ವತಃ ಮಾತಾ ಮಾಣಿಕೇಶ್ವರಿ ಅವರೇ ನಿರ್ಮಾಣ ಮಾಡಿಕೊಂಡಿದ್ದರು.

    ಹೈದರಾಬಾದ್ ಕರ್ನಾಟಕ ಭಾಗದ ನಡೆದಾಡುವ ದೇವರು, ಪೀಠಾಧಿಪತಿ ಮಾತಾ ಮಾಣಿಕೇಶ್ವರಿ ಅಮ್ಮನವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಠದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಲಿಂಗೈಕ್ಯರಾಗಿದ್ದರು.

  • ಮೋಜು ಮಸ್ತಿಗಾಗಿ ದರೋಡೆಗೆ ಇಳಿದ ಕಲಬುರಗಿಯ ಖಿಲಾಡಿ ದಂಪತಿ!

    ಮೋಜು ಮಸ್ತಿಗಾಗಿ ದರೋಡೆಗೆ ಇಳಿದ ಕಲಬುರಗಿಯ ಖಿಲಾಡಿ ದಂಪತಿ!

    ಕಲಬುರಗಿ: ಮೋಜು ಮಸ್ತಿಗಾಗಿ ಸಾಲ ಮಾಡಿದ ಪ್ರತಿಷ್ಠಿತ ಫ್ಯಾಮಿಲಿಯ ದಂಪತಿ ಆ ಸಾಲ ತೀರಿಸಲು ದರೋಡೆಗೆ ಇಳಿದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

    ಜೇವರ್ಗಿ ಪಟ್ಟಣದ ವಿಜಯಕುಮಾರ್ ಸ್ಥಾವರಮಠ್ ಮತ್ತು ಆತನ ಪತ್ನಿ ನಿಶಾ ಬಂಧಿತ ಆರೋಪಿಗಳು. ನಿಶಾ ಎಂಬಿಎ ಓದಿದ್ದರೆ ವಿಜಯ್‍ಕುಮಾರ್ ಬಿಕಾಂ ಓದಿದ್ದಾನೆ. ಇವರಿಬ್ಬರು ಜುಲೈ 10ರಂದು ಕಲಬುರಗಿಯ ಜೇವರ್ಗಿ ಕ್ರಾಸ್ ಬಳಿ ಸುಷ್ಮಾ ಎಂಬವರಿಗೆ ವಿಳಾಸ ಹೇಳುವ ನೆಪದಲ್ಲಿ ಕಾರಿನಲ್ಲಿ ಕುರಿಸಿ ನಕಲಿ ಗನ್ ತೋರಿಸಿ ಚಿನ್ನಾಭರಣ ದರೋಡೆ ಮಾಡಿದ್ದಾರೆ.

    ಈ ಪ್ರಕರಣ ನಡೆದ ನಂತರ ನೊಂದ ಮಹಿಳೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯವಳಿಯನ್ನು ಸಂಗ್ರಹಿಸಿದ್ದಾರೆ. ಆಗ ಈ ಇಬ್ಬರು ಖತರ್‍ನಾಕ್ ದಂಪತಿಯ ಅಸಲಿ ಬಣ್ಣ ಬಯಲಾಗಿದೆ. ಯಾಕೆ ಹೀಗೆ ಮಾಡಿದ್ರೆ ಅಂತಾ ಕಳ್ಳ ದಂಪತಿಗಳಿಗೆ ಕೇಳಿದ್ರೆ ತಪ್ಪಾಯ್ತು ಅಂತಾ ಹೇಳಿದ್ದಾರೆ.

    ಇಬ್ಬರು ದಂಪತಿಯ ಪೋಷಕರು ಕೋಟ್ಯಧೀಶರಾಗಿದ್ದಾರೆ. ಈಗ ಮಕ್ಕಳು ಮಾಡಿದ ಈ ಕೆಲಸದಿಂದ ಸದ್ಯ ಅವರು ತಲೆ ತಗ್ಗಿಸುವಂತೆ ಮಾಡಿದೆ.

  • ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ ಸೈಕೋ ಡಾಕ್ಟರ್ ಬಂಧನ

    ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ ಸೈಕೋ ಡಾಕ್ಟರ್ ಬಂಧನ

    ಬೆಳಗಾವಿ: ನಗರ ಎಪಿಎಂಸಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಹಲವು ದಿನಗಳಿಂದ ಕಲಬುರಗಿ ನಗರದ ವಿವಿಧ ಪ್ರದೇಶದಲ್ಲಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ದುಷ್ಕರ್ಮಿಯನ್ನು ಬಂಧಿಸಿದ್ದಾರೆ.

    ಕಲಬುರಗಿ ನಗರದ ನಿವಾಸಿ ಆಗಿರುವ ಡಾ. ಅಮಿತ್ ಗಾಯಾಕವಾಡ್ ಬಂಧನವಾದ ವ್ಯಕ್ತಿಯಾಗಿದ್ದು, ಆರೋಪಿ ಅಮಿತ್ ಬೆಳಗಾವಿಯ ಬಿಐಂಎಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ.

    ಕಳೆದ ಒಂದು ವಾರದಿಂದ ನಗರದಲ್ಲಿ ಕಾರಿನ ಮೇಲೆ ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ. ಘಟನೆಯನ್ನು ಗಂಭೀರವಾಗಿ ಪರಿಣಿಸಿದ ಪೊಲೀಸರು ಆರೋಪಿಯ ಪತ್ತೆ ಕಾರ್ಯಾಚರಣೆ ನಡೆಸಿದ್ದರು. ಆದರೂ ನಗರದಿಂದ ತಪ್ಪಿಸಿಕೊಂಡು ಹೋಗಿದ್ದ ಅಮಿತ್‍ನನ್ನು ಕಲಬುರಗಿ ಪೊಲೀಸರ ಮಾಹಿತಿ ಮೇರೆಗೆ ಬೆಳಗಾವಿ ನಗರದಲ್ಲಿ ಬಂಧಿಸಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ: ಕಲಬುರಗಿ ನಗರದ ಖುಬಾ ಪ್ಲಾಟ್ ನಲ್ಲಿ ಕಾರ್ ಗೆ ಬೆಂಕಿ ಹಚ್ಚುವ ಸಂರ್ಭದಲ್ಲಿ ಕಾರ್ ಮಾಲೀಕರು ಆರೋಪಿಯನ್ನು ಗಮನಿಸಿದ್ದರು. ಈ ವೇಳೆ ಆರೋಪಿ ಹೆಲ್ಮೆಟ್ ಧರಿಸಿದ್ದ ಇದರಿಂದ ಅನುಮಾನಗೊಂಡ ಅವರು ಆತನನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ವಾಗಿ ಆರೋಪಿ ನಾನು ಮನೆಯ ಮಾಲೀಕರಾದ ಡಿಸೋಜಾ ಅವರನ್ನು ಭೇಟಿ ಮಾಡಲು ಬಂದಿದೆ ಎಂದು ತಿಳಿಸಿದ್ದ. ಆದರೆ ಡಿಸೋಜಾ ಅವರು ಮೃತಪಟ್ಟು ಹಲವು ದಿನಗಳಾಗಿದ್ದವು. ನಂತರ ಆರೋಪಿ ಮುಖದ ಮೇಲಿನ ಹೆಲ್ಮೆಟ್ ತೆಗಿಸಿ ಪ್ರಶ್ನಿಸಿದ್ದರು. ಆದರೆ ಈ ವೇಳೆ ಅವರಿಗೆ ಬೇರೆ ಮಾಹಿತಿ ನೀಡಿ ಆರೋಪಿ ಅಲ್ಲಿಂದ ಎಸ್ಕೆಪ್ ಆಗಿದ್ದ. ಈ ಘಟನೆ ಕುರಿತು ಕಾರ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಈ ಮಾಹಿತಿಯ ಬೆನ್ನಟ್ಟಿದ್ದ ಪೊಲೀಸರಿಗೆ ಬೆಳಗಾವಿ ನಗರದ ವಿವೇಂತಾ ಆರ್ಪಾಟ್ ಮೆಂಟ್ ನಲ್ಲಿ ಇಂತಹದೇ ಘಟನೆಯಲ್ಲಿ ವ್ಯಕ್ತಿಯೊಬ್ಬರು ಸಿಕ್ಕಿ ಬಿದ್ದಿರುವ ಮಾಹಿತಿ ಲಭಿಸಿಸುತ್ತದೆ. ಬಂಧಿತ ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ ಸಂದರ್ಭದಲ್ಲಿ ಅಮಿತ್ ಬೆಳಗಾವಿಯ ಸದಾಶಿವ ನಗರದಲ್ಲಿ ವಾಸಿಸುತ್ತಿದ್ದು, ಆತನ ಮನೆಯಲ್ಲಿ ಕೃತ್ಯಕ್ಕೆ ಬಳಸಿದ ಎಲ್ಲಾ ವಸ್ತುಗಳು ಪತ್ತೆಯಾಗಿದೆ. ಪ್ರಸ್ತುತ ಆರೋಪಿ ಅಮಿತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

    ಇದಕ್ಕೂ ಮುನ್ನ ಆರೋಪಿ ಕಲಬುರಗಿ ನಗರದ ಸೇಡಂ ರಸ್ತೆಯ ಜಯನಗರದ ಬಳಿ 2, ಬನಶಂಕರಿ ಕಾಲೋನಿ ಬಳಿ 1, ವಿಶ್ವೇಶರಯ್ಯ ಕಾಲೋನಿಯ ಬಳಿ 1, ಯುನೈಟೆಡ್ ಆಸ್ಪತ್ರೆ ಬಳಿ 1, ಲಾಲಗೇರಿ ಕ್ರಾಸ್ ಬಳಿ 1 ಕಾರು ಸೇರಿದಂತೆ ಎಂಟಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ. ಅಲ್ಲದೇ ಈ ಘಟನೆಯ ಮರುದಿನವೇ ಆರೋಪಿ ಮತ್ತೆ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಗರದ ಖೂಬಾ ಪ್ಲಾಟ್ ನಲ್ಲಿ ಹುಂಡೈ ಕಂಪೆನಿ ಕಾರ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.

    ಪದೇ ಪದೇ ಕಾರುಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳಿಂದ ಕಂಗಲಾಗಿದ್ದ ಕಲಬುರಗಿ ನಗರದ ಕಾರು ಮಾಲೀಕರು, ತಮ್ಮ ಕಾರುಗಳ ರಕ್ಷಣೆಗಾಗಿ ಮನೆ ಬಿಟ್ಟು ಕಾರಿನಲ್ಲಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಅರೋಪಿಯ ಪತ್ತೆಗಾಗಿ ಜಿಲ್ಲೆಯ ಎ ಡಿವಿಷನ್ ಡಿಎಸ್‍ಎಸ್ಪಿ ಲೊಕೇಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಅಲ್ಲದೇ ಆರೋಪಿ ಕಾರಿಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ದೃಶ್ಯಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಪೊಲೀಸರು ಆರೋಪಿಯ ಪತ್ತೆಗೆ ಸಾರ್ವಜನಿಕರ ಸಹಕಾರವನ್ನು ಕೋರಿದ್ದರು.

    https://www.youtube.com/watch?v=PWHq6BC0Dho

  • ಟ್ರಾಕ್ಟರ್ ಹಿಂಬದಿಗೆ ಕಾರು ಡಿಕ್ಕಿ:ಇಬ್ಬರು ವಕೀಲರು ಸೇರಿ ಮೂವರ ಸಾವು

    ಟ್ರಾಕ್ಟರ್ ಹಿಂಬದಿಗೆ ಕಾರು ಡಿಕ್ಕಿ:ಇಬ್ಬರು ವಕೀಲರು ಸೇರಿ ಮೂವರ ಸಾವು

    ಕಲಬುರಗಿ: ಟ್ರಾಕ್ಟರ್ ನ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ ಬಳಿ ನಡೆದಿದೆ.

    ನಗರದ ನಿವಾಸಿ ಶ್ರೀರಂಗ್ ಶೇಡಕರ್ (42) ಮಲ್ಲಾಬಾದ್ ಗ್ರಾಮದ ನಿವಾಸಿ ರಮೇಶ್ ದೊಡ್ಮನಿ (40) ಮೃತಪಟ್ಟ ವಕೀಲರು. ಅಪಘಾತ ನಡೆದ ವೇಳೆ ಕಾರಿನಲ್ಲಿ ಮೂವರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಅಪಘಾತ ಸಂಭವಿಸಲು ಕಾರ್ ಟಯರ್ ಸ್ಫೋಟ ಆಗಿದ್ದೇ ಕಾರಣ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

    ವಕೀಲರಾದ ಶ್ರೀರಂಗ್ ಮತ್ತು ರಮೇಶ್ ಇಬ್ಬರು ಅಫಜಲಪುರ್ ಪಟ್ಟಣದಲ್ಲಿರುವ ನ್ಯಾಯಾಲಯಕ್ಕೆ ಪ್ರಕರಣವೊಂದರ ಸಂಬಂಧ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮಲ್ಲಾಬಾದ್ ಗ್ರಾಮದ ಬಳಿ ಟಯರ್ ಸ್ಫೋಟಗೊಂಡಿದೆ. ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಟ್ರಾಕ್ಟರಿಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಕಾರು ಚಾಲಕ ಮೃತ ಪಟ್ಟಿದ್ದಾರೆ. ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಲಬುರಗಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿಗಳು-2, ಸರಿಗಮಪ ಆಡಿಷನ್

    ಕಲಬುರಗಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿಗಳು-2, ಸರಿಗಮಪ ಆಡಿಷನ್

    ಕಲಬುರುಗಿ: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್ ಟು ಮತ್ತು ಸರಿಗಮಪ ಲಿಟಲ್ ಚಾಂಪ್ಸ್ ಸೀಜನ್ 14ರ ಆಡಿಷನ್ ಕಲಬುರುಗಿಯಲ್ಲಿ ನಡೆಯಿತು. ನೂರಾರು ಮಕ್ಕಳು ಆಡಿಷನ್‍ನಲ್ಲಿ ಪಾಲ್ಗೊಂಡರು.

    ಮೇಹತಾ ಶಾಲೆಯಲ್ಲಿ ಬೆಳಗ್ಗೆ ಆರಂಭವಾದ ಆಡಿಷನ್ ಸಂಜೆಯವರೆಗೆ ಕೂಡಾ ಮುಂದುವರೆಯಿತು. 13 ಸೀಜನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಸರಿಗಮಪ ರಾಜ್ಯಾದ್ಯಂತ ಬಹಳ ಪ್ರಸಿದ್ಧಿ ಪಡೆದಿದೆ.

    ಎಲ್ಲಾ ಮೂವತ್ತು ಜಿಲ್ಲೆಗಳಲ್ಲಿ ಮತ್ತು ಮಹಾ ನಗರಗಳಲ್ಲಿ ಆಡಿಷನ್ ನಡೆಯುತ್ತಿದ್ದು ಪ್ರತಿಭೆಗಳ ಹುಡುಕಾಟ ನಡೆಯುತ್ತಿದೆ. ಜೀ ವಾಹಿನಿಯ ಸುಮಾರು 50ಕ್ಕಿಂತಲೂ ಹೆಚ್ಚು ಸಿಬ್ಬಂದಿ ಆಡಿಷನ್‍ನಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕಲಬುರಗಿ ನಗರದ ಸೇರಿದಂತೆ ಜಿಲ್ಲೆಯ ಹಲವೆಡೆಯಿಂದ 300ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.

    ಹಾಸ್ಯದ ಬಗ್ಗೆ ಆಸಕ್ತಿಯಿರುವವರು, ಸಂಗೀತ ಕಲಿತ ಮಕ್ಕಳು ಖುಷಿ ಖುಷಿಯಾಗಿ ಆಡಿಷನ್‍ನಲ್ಲಿ ಪಾಲ್ಗೊಂಡರು. ಇನ್ನು ತಮ್ಮ ಮಕ್ಕಳನ್ನು ಈ ಆಡಿಷನ್‍ನಲ್ಲಿ ಭಾಗವಹಿಸಲು ಅವರ ಪೋಷಕರು ಅಷ್ಟೇ ಕಾತುರದಿಂದ ಕಾಯುತ್ತಿರುವುದು ಸರ್ವೇ ಸಾಮಾನ್ಯವಾಗಿತ್ತು.

  • ರೌಡಿಗಳಿಗೆ ಹೇರ್ ಕಟ್ ಮಾಡಿಸಿದ ಪೊಲೀಸರು

    ರೌಡಿಗಳಿಗೆ ಹೇರ್ ಕಟ್ ಮಾಡಿಸಿದ ಪೊಲೀಸರು

    ಕಲಬುರಗಿ: ಉದ್ದುದ್ದ ಕೂದಲು ಬಿಟ್ಟು ಜನರಿಗೆ ಭೀಕರ ಲುಕ್ ಕೊಡುತ್ತಿದ್ದ ರೌಡಿಗಳಿಗೆ ಕಲಬುರಗಿ ಪೊಲೀಸರು ಹೇರ್ ಕಟ್ ಮಾಡಿಸಿದ್ದಾರೆ.

    ಕಲಬುರುಗಿ ಜಿಲ್ಲೆ ಹಾಗೂ ತಾಲೂಕು ಪೊಲೀಸ್ ಠಾಣೆಗಳಲ್ಲಿ ಇಂದು ಏಕಕಾಲದಲ್ಲಿ ರೌಡಿ ಪರೇಡ್ ನಡೆಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾನೂನು ಬಾಹಿರ, ಆಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಸುಮಾರು 900 ರೌಡಿಗಳು ಈ ಪರೇಡ್‍ಗಳಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿತ್ತು.

    ಪರೇಡ್ ನಲ್ಲಿ ಭಾಗವಹಿಸಿದ್ದ ಹಲವು ರೌಡಿಗಳು ಚಿತ್ರ ವಿಚಿತ್ರವಾಗಿ ಉದ್ದ ಕೂದಲು ಬಿಟ್ಟಿದ್ದರು. ಇದನ್ನು ಕಂಡ ಎಸ್ಪಿ ಎನ್. ಶಶಿಕುಮಾರ್ ಸ್ಥಳದಲ್ಲೇ ಹೇರ್ ಕಟ್ ಮಾಡಿಸಿ ಅಪರಾಧ ಚಟುವಟಿಕೆಗಲ್ಲಿ ಭಾಗಿಯಾದಂತೆ ಎಚ್ಚರಿಕೆ ನೀಡಿದ್ದಾರೆ.

    ನವೆಂಬರ್ 10 ರಂದು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಿಸುವ ಸಲುವಾಗಿ ಸಮಾಜದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ರೌಡಿ ಪರೇಡ್ ನಡೆಸಲಾಗಿದೆ. ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆಯಲ್ಲಿ ಕಲಬುರುಗಿಯ ಅಪಜಲ್‍ಪುರ ಪ್ರದೇಶದಲ್ಲಿ ಗಲಾಟೆ ಸಂಭವಿಸಿತ್ತು. ಸರ್ಕಾರ ಆದೇಶ ಮೇರೆಗೆ ಈ ಬಾರಿಯು ಆಚರಣೆಯನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಶಾಂತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಎಸ್ಪಿ ಎನ್. ಶಶಿಕುಮಾರ್ ತಿಳಿಸಿದರು.

    ಕಲಬುರುಗಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯೊಂದರಲ್ಲೇ ಸುಮಾರು 300ಕ್ಕೂ ಹೆಚ್ಚು ರೌಡಿಗಳು ಪರೇಡ್‍ನಲ್ಲಿ ಭಾಗವಹಿಸಿದ್ದರು. ಕೊಲೆ, ಸುಲಿಗೆ ದರೋಡೆ, ಸರಗಳ್ಳತನ, ಪೊಲೀಸ್ ಮೇಲೆ ಹಲ್ಲೆ ಮುಂತಾದ ಗಂಭೀರ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ರೌಡಿ ಶೀಟರ್ ಪ್ರಕರಣ ದಾಖಲಿಸುತ್ತೇವೆ. ಈ ವರ್ಷ 1990ಕ್ಕೂ ಅಧಿಕ ಜನರ ಮೇಲೆ ರೌಡಿ ಶೀಟರ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ ಸುಮಾರು 280 ಹಳೆ ರೌಡಿಗಳ ಮೇಲೆ ದಾಖಲು ಮಾಡಲಾಗಿದ್ದ ಪ್ರಕರಣಗಳನ್ನು ಕೈಬಿಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

    ಪೊಲೀಸರ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ರೌಡಿಗಳ ವೇಷವನ್ನು ಬದಲಿಸುವುದರ ಜೊತೆಗೆ ಅವರ ಮನಸ್ಸನ್ನು ಬದಲಿಸುವ ಕಾರ್ಯ ನಡೆಯಬೇಕಿದೆ ಎಂದು ತಿಳಿಸಿದರು.

  • ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ – ಬಳ್ಳಾರಿಯಲ್ಲಿ ಮರವೇರಿ ಕುಳಿತಿದ್ದ ಅಂಗವಿಕಲ ರೈತನ ರಕ್ಷಣೆ

    ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ – ಬಳ್ಳಾರಿಯಲ್ಲಿ ಮರವೇರಿ ಕುಳಿತಿದ್ದ ಅಂಗವಿಕಲ ರೈತನ ರಕ್ಷಣೆ

    ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದೆ. ತಡರಾತ್ರಿಯೂ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಇನ್ನೂ ಬಿಸಿಲ ನಗರಿ ಬಳ್ಳಾರಿಯಲ್ಲಿ ಭೀಕರ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸಿಂಧವಾಳ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ರೈತರೊಬ್ಬರನ್ನು ರಕ್ಷಣೆ ಮಾಡಲಾಗಿದೆ.

    ಗುರುವಾರ ಎಂದಿನಂತೆ ತೋಟಕ್ಕೆ ತೆರಳಿದ್ದ ರೈತ ಶ್ರೀನಿವಾಸ್ ಹಳ್ಳದ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಜೀವದಾಸೆಗೆ ಮರವೇರಿ ಕುಳಿತಿದ್ದರು. ಈ ಮಾಹಿತಿ ಪಡೆದ ಜಿಲ್ಲಾಡಳಿತ 125 ಕ್ಕೂ ಹೆಚ್ಚಿನ ರಕ್ಷಣಾ ಸಿಬ್ಬಂದಿಯೊಂದಿಗೆ ರೈತ ಶ್ರೀನಿವಾಸ್ ಅವರನ್ನು ರಕ್ಷಣೆ ಮಾಡಿದೆ. ಈ ರಕ್ಷಣಾ ಕಾರ್ಯವನ್ನು ವೀಕ್ಷಿಸಲು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ರಕ್ಷಣಾ ಕಾರ್ಯಚಾರಣೆ ವೇಳೆ ಬಳ್ಳಾರಿ ಎಸಿ, ತಹಶೀಲ್ದಾರ್, ಡಿವೈಎಸ್‍ಪಿ, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ರೈತ ಶ್ರೀನಿವಾಸ್ ಅಂಗವಿಕಲರಾಗಿದ್ದು, 12 ಗಂಟೆಗಳ ಕಾಲ ಮರ ಹತ್ತಿ ಕುಳಿತ ಧೈರ್ಯವನ್ನು ಮೆಚ್ಚಿ ಮಾಜಿ ಶಾಸಕ, ಗಣಿ ಉದ್ಯಮಿ ಸೂರ್ಯನಾರಾಯಣ ರೆಡ್ಡಿ 11 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

    ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮದ ಸುತ್ತ ಮುತ್ತ ಡ್ರೋನ್ ಕ್ಯಾಮೆರಾದ ಮೂಲಕ ಮಳೆ ದೃಶ್ಯಗಳನ್ನ ಪಬ್ಲಿಕ್ ಟಿವಿ ಸೆರೆ ಹಿಡಿದಿದೆ. ಫೋಟೋಗ್ರಾಫರ್ ಮಹೇಶ್ ಹನ್ಸಿ ಅನ್ನೋವ್ರು ಡ್ರೋನ್ ಬಳಸಿ ಈ ದೃಶ್ಯ ತೆಗೆದಿದ್ದಾರೆ.

     

    ಅತ್ತ ರಾಯಚೂರಿನ ಲಿಂಗಸುಗೂರಿನಲ್ಲಿ ಸುರಿದ ಭಾರೀ ಮಳೆಗೆ ತಾಲೂಕಿನ ಬುದ್ದಿನ್ನಿ ಕೆರೆ ಒಡೆದಿದ್ದು ಸುತ್ತಮುತ್ತಲ ಗ್ರಾಮಗಳಿಗೆ ನೀರು ನುಗ್ಗಿದೆ. ಗುಡಿಹಾಳ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಬುದ್ದಿನ್ನಿ, ಮಟ್ಟೂರಿನಲ್ಲೂ ಮನೆಗಳಿಗೆ ನೀರು ನುಗ್ಗಿದೆ. ಬೆಳಗಿನ ಜಾವ ಕೆರೆ ಒಡೆದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಹೊಲಗಳಲ್ಲಿ ನೀರು ನಿಂತಿದ್ದು ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ತುಂಬಿದ್ದು, ಕೆರೆ ಒಡೆದ ಹಿನ್ನೆಲೆಯಲ್ಲಿ ಮಸ್ಕಿ ನಾಲಾ ಡ್ಯಾಮಿಗೆ ಹೆಚ್ಚು ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಡ್ಯಾಮ್ ನಿಂದ ಹೆಚ್ಚುವರಿ ನೀರು ಹಳ್ಳಕ್ಕೆ ಬಿಡುಗಡೆ ಮಾಡಲಾಗುತ್ತಿದೆ.

    ಹಾಸನ ಜಿಲ್ಲೆಯಾದ್ಯಂತ ರಾತ್ರಿಯಿಡೀ ಭಾರಿ ಮಳೆ ಸುರಿದಿದ್ದು, ತಾಲೂಕಿನ ತೇಜೂರು ಗ್ರಾಮದಲ್ಲಿ ಐದು ಮನೆಗಳು ಕುಸಿದಿವೆ. ಘಟನಾ ಸಂದರ್ಭದಲ್ಲಿ ಮನೆಯಲ್ಲಿದ್ದ ಮಗು ಪಾರಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

    ಕಲಬುರಗಿ ಜಿಲ್ಲೆಯಲ್ಲಿ ಸತತ ಮಳೆಯ ಹಿನ್ನೆಲೆಯಲ್ಲಿ ಸೇಡಂ ಪಟ್ಟಣದ ಕಮಲಾವತಿ ನದಿ ಉಕ್ಕಿ ಹರಿದಿದೆ. ಎರಡು ತಿಂಗಳ ಹಿಂದೆಯಷ್ಟೆ ಒಂದೂವರೆ ಕೋಟಿ ರೂ. ಹಣ ಖರ್ಚು ಮಾಡಿ ನದಿಗೆ ನಿರ್ಮಾಣ ಮಾಡಲಾಗಿದ್ದ ಬ್ರಿಡ್ಜ್ ನೀರಿನಲ್ಲಿ ಕೊಚ್ಚಿ ಹೋಗಿದೆ. ಕಳಪೆ ಕಾಮಾಗಾರಿಯೇ ಬ್ರಿಡ್ಜ್ ನೀರಿನಲ್ಲಿ ಕೊಚ್ಚಿ ಹೋಗಲು ಕಾರಣ ಅಂತಾ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಗೆ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಹೀಗಾಗಿ ಜಿಲ್ಲೆಯ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.

     

    ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ರಾತ್ರಿ ವರುಣ ಆರ್ಭಟಿಸಿದ್ದಾನೆ. ರಾತ್ರಿ ಜಿಲ್ಲೆಯಾದ್ಯಂತ ಜೋರು ಮಳೆಯಾಗಿದ್ದು ಅದರಲ್ಲೂ ಚನ್ನಪಟ್ಟಣ ಹಾಗು ಕನಕಪುರ ತಾಲೂಕುಗಳಲ್ಲಿ ಗುಡುಗು ಸಿಡಿಲು ಸಹಿತ ಜೋರು ಮಳೆಯಾಗಿದೆ. ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೇ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳಲ್ಲಿ ಮಳೆ ನೀರು ನಿಂತು ಬೈಕ್ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಜೋರು ಮಳೆ ನಿಂತ ಬಳಿಕ ಮಧ್ಯರಾತ್ರಿಯ ವರೆಗೂ ಸಹ ತುಂತುರು ಮಳೆ ಮುಂದುವರೆದಿತ್ತು.