Tag: ಕಲಘಟಗಿ ತೊಟ್ಟಿಲು

  • ಧಾರವಾಡ ಜಿಲ್ಲಾಡಳಿತದಿಂದ ಪ್ರಧಾನಿ ಮೋದಿಗೆ ತೊಟ್ಟಿಲು ಗಿಫ್ಟ್

    ಧಾರವಾಡ ಜಿಲ್ಲಾಡಳಿತದಿಂದ ಪ್ರಧಾನಿ ಮೋದಿಗೆ ತೊಟ್ಟಿಲು ಗಿಫ್ಟ್

    ಧಾರವಾಡ: ಪ್ರಧಾನಿ ಮೋದಿ (Narendra Modi) ಪ್ರತಿ ಬಾರಿ ರಾಜ್ಯಕ್ಕೆ ಬಂದಾಗ ಹೊಸದೊಂದು ಉಡುಗೊರೆ ತಯಾರಾಗಿರುತ್ತದೆ. ಈ ಬಾರಿ ಧಾರವಾಡಕ್ಕೆ ಐಐಟಿ (IIT) ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಮಕ್ಕಳನ್ನು ಆಡಿಸುವ ತೊಟ್ಟಿಲನ್ನು ಉಡುಗೊರೆಯಾಗಿ ನೀಡಲು ಧಾರವಾಡ (Dharwad) ಜಿಲ್ಲಾಡಳಿತ ಸಿದ್ಧವಾಗಿದೆ.

    ಜಿಲ್ಲೆಯ ಕಲಘಟಗಿ ತೊಟ್ಟಿಲು (Kalaghatgi cradle) ಎಂದರೆ ಬಹಳ ಫೇಮಸ್. ತೊಟ್ಟಿಲಿನ ಮೇಲೆ ಹಚ್ಚಿದ ಬಣ್ಣ ಕೂಡಾ ಅಳಿಸುವುದಿಲ್ಲ. ಸಾಗುವಾನಿ ಕಟ್ಟಿಗೆಯಿಂದ ತಯಾರಾಗಿರುವ ಈ ಚಿಕ್ಕ ತೊಟ್ಟಿಲಿನ ಮೇಲೆ ದಶಾವತಾರ (Ten Incarnations) ಚಿತ್ರ ಬಿಡಿಸಲಾಗಿದೆ. ಇದರೊಂದಿಗೆ ಸಿದ್ಧಾರೂಢರ (Siddharoodha) ಚಿಕ್ಕ ಮೂರ್ತಿಯನ್ನೂ ಸಹ ಕೊಡಲಾಗುತ್ತಿದೆ. ಇದನ್ನೂ ಓದಿ: ಕುಂಕುಮ ಎಂದರೆ ಬೆಚ್ಚಿ ಬೀಳುತ್ತಿದ್ದ ಸಿದ್ದರಾಮಯ್ಯ ಇಂದು ದೇವಸ್ಥಾನ ಬಿಟ್ಟು ಬದುಕುತ್ತಿಲ್ಲ: ಈಶ್ವರಪ್ಪ

    ತೊಟ್ಟಿಲು ತಯಾರಿಸಲು ಸುಮಾರು 15 ದಿನಗಳಾದರೂ ಬೇಕು. ಆದರೆ ಪ್ರಧಾನಿ ಮೋದಿಗೆ ಗಿಫ್ಟ್ ಕೊಡುತ್ತಿರುವ ಹಿನ್ನೆಲೆಯಲ್ಲಿ ಕಲಘಟಗಿಯ ಶ್ರೀಧನ ಸಾಹುಕಾರ ಎನ್ನುವ ಕಲಾವಿದ 8 ದಿನಗಳಲ್ಲಿ ಈ ಉಡುಗೊರೆ ತಯಾರಿಸಿದ್ದಾರೆ.

    ಏಲಕ್ಕಿ ಹಾರ ಹಾಗೂ ಪೇಟ ಹಾಕಿ ಪ್ರಧಾನಿಗೆ ಜಿಲ್ಲಾಡಳಿತ ಸನ್ಮಾನಿಸಿ ಉಡುಗೊರೆಯನ್ನು ನೀಡಿ ಗೌರವಿಸಲಿದೆ. ಇದನ್ನೂ ಓದಿ: ಯಾರಿಗೋ ಹುಟ್ಟಿದ ಮಗುವನ್ನು ಜೆಡಿಎಸ್-ಕಾಂಗ್ರೆಸ್‍ನವರು ತಮ್ಮದೆನ್ನುತ್ತಾರೆ: ಈಶ್ವರಪ್ಪ ವಾಗ್ದಾಳಿ

  • ಕಲಘಟಗಿ ತೊಟ್ಟಿಲಿನಲ್ಲಿ ಜೂನಿಯರ್ ಚಿರು – ಈ ತೊಟ್ಟಿಲಿನ ವಿಶೇಷತೆ ಏನು?

    ಕಲಘಟಗಿ ತೊಟ್ಟಿಲಿನಲ್ಲಿ ಜೂನಿಯರ್ ಚಿರು – ಈ ತೊಟ್ಟಿಲಿನ ವಿಶೇಷತೆ ಏನು?

    ಬೆಂಗಳೂರು: ರಾಜ್ಯ ಮಾತ್ರವಲ್ಲ ಹೊರ ರಾಜ್ಯದಲ್ಲಿಯೂ ಧಾರವಾಡ ಜಿಲ್ಲೆಯ ಕಲಘಟಗಿ ತೊಟ್ಟಿಲು ಫೇಮಸ್. ಯಾರೇ ಗಣ್ಯ ವ್ಯಕ್ತಿಗಳಿಗೆ ಮಗು ಜನಿಸಿದರೂ ತೊಟ್ಟಿಲಿನ ವಿಚಾರದಲ್ಲಿ ನೆನಪಾಗುವುದು ಕಲಘಟಗಿ ಎಂದರೆ ತಪ್ಪಾಗಲಿಕ್ಕಿಲ್ಲ. ಈಗ ಚಿರಂಜೀವಿ ಮತ್ತು ಮೇಘನಾ ದಂಪತಿ ಪುತ್ರನನ್ನು ಈ ತೊಟ್ಟಿಲಿಗೆ ಹಾಕಿ ತೂಗಿದ್ದಾರೆ.

    ರಾಮಾಯಣ, ಮಾಹಾಭಾರತ, ಪೌರಾಣಿಕ ಕಥೆಗಳ ಚಿತ್ರಣ, ದೇಶದ ಸಂಸ್ಕೃತಿಗಳ ಚಿತ್ರಣಗಳನ್ನು ಈ ತೊಟ್ಟಿಲುಗಳುಗಳಲ್ಲಿ ಚಿತ್ರಿಸಲಾಗುತ್ತದೆ. ಅಲ್ಲದೆ ಈ ತೊಟ್ಟಿಲುಗಳ ಆಯಸ್ಸು ಸಹ ಹೆಚ್ಚು. ಅಚ್ಚಳಿಯದ ನೆನಪಾಗಿ ಉಳಿಯುತ್ತದೆ ಎಂಬ ಕಾರಣಕ್ಕೆ ಬಹುತೇಕ ಗಣ್ಯ ವ್ಯಕ್ತಿಗಳು ತಮ್ಮ ಪ್ರೀತಿ ಪಾತ್ರರ ಮಕ್ಕಳಿಗೆ ಕಲಘಟಗಿ ತೊಟ್ಟಿಲನ್ನು ನೀಡುತ್ತಾರೆ. ಅದೇ ರೀತಿ ಇದೀಗ ವನಿತಾ ಗುತ್ತಲ ಅವರು ಮೇಘನಾ ರಾಜ್ ಅವರಿಗೆ ಕಲಘಟಗಿ ತೊಟ್ಟಿಲನ್ನು ಮಾಡಿಸಿ ಜೂನಿಯರ್ ಚಿರುಗೆ ಉಡುಗೊರೆಯಾಗಿ ನೀಡಿದ್ದಾರೆ.

    ಇನ್ನೂ ವಿಷೇಶವೆಂದರೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮಗಳು ಐರಾಗೂ ಸ್ವತಃ ನಟ ಅಂಬರೀಷ್ ಅವರು ಕಲಘಟಗಿ ತೊಟ್ಟಿಲನ್ನು ಹೇಳಿ ಮಾಡಿಸಿ ಉಡುಗೊರೆಯಾಗಿ ನೀಡಿದ್ದರು. ಇದಾದ ಬಳಿಕ ಜನಾರ್ದನ ರೆಡ್ಡಿ ಮೊಮ್ಮಗಳಿಗೂ ಸಹ ವನಿತಾ ಗುತ್ತಲ್ ಅವರೇ ತೊಟ್ಟಿಲನ್ನು ಮಾಡಿಸಿ ನೀಡಿದ್ದರು. ಮಾತ್ರವಲ್ಲದೆ ರಾಜ್‍ಕುಮಾರ್ ಕುಟುಂಬವರೂ ಕಲಘಟಗಿ ತೊಟ್ಟಿಲನ್ನು ಕೊಳ್ಳುತ್ತಾರೆ. ಇದೀಗ ಜೂನಿಯರ್ ಚಿರುಗು ಸಹ ಇದೇ ರೀತಿಯ ತೊಟ್ಟಿಲನ್ನು ವನಿತಾ ಅವರೇ ಉಡುಗೊರೆಯಾಗಿ ನೀಡಿದ್ದಾರೆ.

    ತೊಟ್ಟಿಲಿನ ವಿಶೇಷತೆ ಏನು?
    ಕರಕುಶಲಕಾರರ ಕೈಚಳಕದಲ್ಲಿ ಮೂಡುವ ಈ ತೊಟ್ಟಿಲುಗಳಿಗೆ ಭಾರೀ ಬೇಡಿಕೆ ಇದ್ದು, ಕಲಘಟಗಿ ತೊಟ್ಟಿಲಿಗೆ 600 ವರ್ಷಗಳ ಇತಿಹಾಸವಿದೆ. ಇಲ್ಲಿ ಧಾರ್ಮಿಕವಾಗಿ ತೊಟ್ಟಿಲು ಮಾಡುತ್ತಾರೆ. ತೊಟ್ಟಲಿಗೆ ಧಾರ್ಮಿಕ ಕಥೆಗಳು, ಮುದ್ದು ಕೃಷ್ಣ ಆಟ, ಲೀಲೆಗಳು, ರಾಮಾಯಣದ ಪ್ರಸಂಗಗಳು ಹೀಗೆ ವಿವಿಧ ರೀತಿಯ ಚಿತ್ರಗಳನ್ನು ಬಿಡಿಸಲಾಗುತ್ತದೆ. ಈ ಬಣ್ಣಕ್ಕೆ 100 ವರ್ಷ ಗ್ಯಾರೆಂಟಿ ಇರುತ್ತದೆ. ಅಲ್ಲದೆ ತೊಟ್ಟಿಲಿಗೆ ಬಣ್ಣ ಹಚ್ಚುವಾಗ ಅವರು ಸಾಧಾರಣ ಬಣ್ಣ ಹಚ್ಚುವುದಿಲ್ಲ. ಗಿಡಮೂಲಿಕೆ ಬಣ್ಣಗಳನ್ನು ಲೇಪನ ಮಾಡಲಾಗುತ್ತದೆ. ಒಂದು ತೊಟ್ಟಿಲುಗಳನ್ನು ತಯಾರಿಸಲು ಸುಮಾರು 4-5 ತಿಂಗಳುಗಳ ಕಾಲ ಸಮಯ ಬೇಕಾಗುತ್ತದೆ.

    ತೊಟ್ಟಿಲಿನ ಬೆಲೆ ಎಷ್ಟು?
    ಜೂನಿಯರ್ ಚಿರುಗೆ ಕಲಘಟಗಿಯ ಕರಕುಶಲಕರ್ಮಿ ಮಾರುತಿ ಬಡಿಗೇರ್ ತೊಟ್ಟಿಲು ತಯಾರಿಸಿ ಕೊಟ್ಟಿದ್ದಾರೆ. ಆರಂಭದಲ್ಲಿ ಒಂದು ತೊಟ್ಟಿಲಿಗೆ 1.10 ಲಕ್ಷ ರೂ. ಹೇಳಿದ್ದರು. ನಾನು ಮೇಘನಾ ಕುಟುಂಬಕ್ಕೆ ತೊಟ್ಟಿಲು ಕೊಡುತ್ತಿರುವುದು ತಿಳಿದು 15 ಸಾವಿರ ರೂ. ಕಡಿಮೆ ಮಾಡಿದರು. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆಯಾದಾಗ ಸಹಾಯ ಮಾಡುತ್ತೇವೆ. ಆದರೆ ಮೇಘನಾ ಅವರು ಇಷ್ಟು ಬೇಸರಗೊಂಡಿದ್ದಾರೆ. ಹೀಗಾಗಿ ಸಹಾಯ ಮಾಡಬೇಕು ಎಂದು ಈ ಕೆಲಸ ಮಾಡಲು ನಿರ್ಧರಿಸಿದೆವು ಎಂದು ವನಿತಾ ಮಾಹಿತಿ ನೀಡಿದ್ದಾರೆ.

    ಉತ್ತರ ಕರ್ನಾಟಕ ಶೈಲಿಯಲ್ಲಿ ಸೀಮಂತ
    ಸರ್ಜಾ ಕುಟುಂಬಸ್ಥರನ್ನು ಹೇಗೆ ಸಂಪರ್ಕಿಸಬೇಕು ಎಂದು ನಮಗೆ ತಿಳಿದಿರಲಿಲ್ಲ. ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿರುವ ಉಮೇಶ್ ಬಣಕಾರ್ ಅವರು ನಮ್ಮ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನವರು ಹೀಗೆ ಅವರನ್ನು ಸಂಪರ್ಕಿಸಿ, ಬಳಿಕ ಪ್ರಮೀಳಾ ಅವರನ್ನು ಸಂಪರ್ಕಿಸಿದೆವು. ಆರಂಭದಲ್ಲಿ ಸೀಮಂತ ಮಾಡುತ್ತೇವೆ ಎಂದು ಕೇಳಿದಾಗ ಅಷ್ಟೇನು ಆಸಕ್ತಿ ತೋರಲಿಲ್ಲ. ಬಳಿಕ ನಾವು ಕಾರ್ಯಕ್ರಮ ಮಾಡಲು ಮುಂದಾದಾಗ ಚೆನ್ನಾಗಿ ಸ್ಪಂದಿಸಿದರು. ಉತ್ತರ ಕರ್ನಾಟಕ ಶೈಲಿಯಲ್ಲೇ ಸೀಮಂತ ಮಾಡಿದೆವು. ಮೇಘನಾ ನಾನ್ ವೆಜ್ ಊಟ ಎಂದರೆ ಹೆಚ್ಚು ಇಷ್ಟ ಎಂದರು ಆಗ ಅಡಿಗೆ ಮಾಡಿ ಎರಡು ದಿನ ಬಿಟ್ಟು ಊಟ ತಂದುಕೊಟ್ಟೆವು. ಬಳಿಕ ಹೆರಿಗೆ ಆದಮೇಲೆ ಸಹ ಉತ್ತರ ಕರ್ನಾಟಕ ಶೈಲಿಯ ಕೊಬ್ಬರಿಖಾರ, ಅವಳಿ ಬೀಜ, ಅರಿಶಿಣ, ಬೆಳ್ಳುಳ್ಳಿ ಹೀಗೆ ನಮ್ಮ ಉತ್ತರ ಕರ್ನಾಟಕ ಪದ್ಧತಿಯಂತೆ ಎಲ್ಲ ಪದಾರ್ಥಗಳನ್ನು ಮೇಘನಾ ಮನೆಯವರಿಗೆ ನೀಡಿದೆವು ಎಂದು ತಿಳಿಸಿದರು.

    ಮಗುವನ್ನು ಸ್ನಾನ ಮಾಡಿಸಲು ನಮ್ಮ ಸದಸ್ಯರೊಬ್ಬರನ್ನು 10 ದಿನಗಳ ಕಾಲ ಮೇಘನಾ ಅವರ ಮನೆಯಲ್ಲಿಯೇ ಬಿಟ್ಟಿದ್ದೆವು. ಇದೀಗ ಮಗುವಿನ ನಾಮಕರಣಕ್ಕೆ 16 ಜನ ಸ್ತ್ರೀ ಸಂಘದ ಸದಸ್ಯರೆಲ್ಲ ಬಂದಿದ್ದೇವೆ. ಹುಟ್ಟಿದ ಮನಿ ಪುಟ್ಟ ಎಂದು ಹೇಳಿ ನಾನೇ ಮಗುವಿಗೆ ಹೆಸರಿಟ್ಟೆ ತುಂಬಾ ಖುಷಿಯಾಯಿತು ಎಂದು ವನಿತಾ ವಿವರಿಸಿದ್ದಾರೆ.

  • ರೆಡ್ಡಿ ಮೊಮ್ಮಗಳಿಗಾಗಿ ಕಲಘಟಗಿ ಬಣ್ಣದ ತೊಟ್ಟಿಲು ಸಿದ್ಧ

    ರೆಡ್ಡಿ ಮೊಮ್ಮಗಳಿಗಾಗಿ ಕಲಘಟಗಿ ಬಣ್ಣದ ತೊಟ್ಟಿಲು ಸಿದ್ಧ

    ಹುಬ್ಬಳ್ಳಿ: ದೇಶಾದ್ಯಂತ ಹೆಸರುವಾಸಿಯಾಗಿರುವ ಧಾರವಾಡ ಜಿಲ್ಲೆಯ ಕಲಘಟಗಿ ಬಣ್ಣದ ತೊಟ್ಟಿಲು ತನ್ನದೇ ಆದ ಮಹತ್ವವನ್ನು ಹೊಂದಿದೆ. ಇದೀಗ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಪುತ್ರಿ ಬ್ರಹ್ಮಣಿ ಮಗುವಿಗೆ ಕಲಘಟಗಿ ತೊಟ್ಟಿಲು ಸಿದ್ಧವಾಗುತ್ತಿದೆ. ಇದನ್ನೂ ಓದಿ: ಕಲಘಟಗಿ ತೊಟ್ಟಿಲಿನ ವಿಶೇಷತೆ ಏನು?

    ಕಲಘಟಗಿ ಕಲಾವಿದ ಮಾರುತಿ ಬಳಿಯೇ ಸುಮಾರು ಮೂರು ತಿಂಗಳಿನಿಂದ ತೊಟ್ಟಿಲು ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ತೊಟ್ಟಿಲಿನಲ್ಲಿ ಕೃಷ್ಣನ ಬಾಲ ಲೀಲೆ ಮೂಡಿಬಂದಿರುವುದು ತೊಟ್ಟಿಲಿನ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ. ಕಲಘಟಗಿ ತೊಟ್ಟಿಲು ಕಲಾವಿದನ ಕೈ ಚಳಕದಿಂದ ನೋಡುಗರ ಕಣ್ಮನ ಸೆಳೆಯುತ್ತದೆ.

    ಹಾವೇರಿ ಜಿಲ್ಲೆಯ ವನಿತಾ ಗುತ್ತಲ ಎಂಬವರು ಜನಾರ್ದನ ರೆಡ್ಡಿ ಮೊಮ್ಮಗುವಿಗೆ ಈ ತೊಟ್ಟಿಲನ್ನು ನೀಡುತ್ತಿದ್ದಾರೆ. ಈಗಾಗಲೇ 40,000 ಮುಂಗಡ ರೂಪಾಯಿಯನ್ನು ನೀಡಲಾಗಿದ್ದು, ಉಳಿದ 50,000 ರೂ.ಹಣವನ್ನು ಇಂದು ಕೊಟ್ಟು ಬೆಂಗಳೂರಿಗೆ ತೆಗೆದುಕೊಂಡು ಹೋಗಲಿದ್ದಾರೆ.

    ಅಲ್ಲದೇ ಸಿನಿಮಾ ನಟರು ಕೂಡ ಕಲಘಟಗಿ ಬಣ್ಣದ ತೊಟ್ಟಿಲಿಗೆ ಮಾರು ಹೋಗಿದ್ದು, ಯಶ್-ರಾಧಿಕಾ ಪಂಡಿತ್ ಮಗುವಿಗೂ ಕಲಘಟಗಿ ತೊಟ್ಟಿಲನ್ನು ನೀಡಲಾಗಿದೆ. ರಾಜ್‍ಕುಮಾರ್ ಅವರ ಕುಟುಂಬಕ್ಕೆ ಇವರೇ ತೊಟ್ಟಿಲನ್ನು ನೀಡುವುದು.