Tag: ಕರ್ಫ್ಯೂ

  • 9 ದಿನಗಳ ಕಾಲ ಕರ್ನಾಟಕ ಕರ್ಫ್ಯೂ- ಇಂದು ಸಂಜೆ ಅಧಿಕೃತ ಘೋಷಣೆ ಸಾಧ್ಯತೆ

    9 ದಿನಗಳ ಕಾಲ ಕರ್ನಾಟಕ ಕರ್ಫ್ಯೂ- ಇಂದು ಸಂಜೆ ಅಧಿಕೃತ ಘೋಷಣೆ ಸಾಧ್ಯತೆ

    – ಮಾರ್ಚ್ 31ರವರೆಗೂ KSRTC-BMTC ಬಸ್ ಸಂಚಾರ ಸಂಪೂರ್ಣ ರದ್ದು

    ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ವಿವಿಧ ದೇಶಗಳಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ಲಾಕ್‍ಡೌನ್ ಕರ್ನಾಟಕದಲ್ಲೂ ಜಾರಿಯಾಗುವ ಸಾಧ್ಯತೆಯಿದೆ.

    ಲಾಕ್‍ಡೌನ್ ಘೋಷಿಸಿದರೂ ಎಂದಿನಂತೆ ಸಂಚಾರ ವ್ಯವಸ್ಥೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾನೂನಿನ ಮೂಲಕ ಕ್ರಮ ಕೈಗೊಳ್ಳಿ ಎಂದು ಆದೇಶ ಕೊಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕರ್ನಾಟಕವನ್ನು ಲಾಕ್‍ಡೌನ್ ಮಾಡಲು ಸಿದ್ಧತೆ ನಡೆಸಿದೆ.

    ನಾಳೆಯಿಂದ ಮಾರ್ಚ್ 31ರವರೆಗೆ ಲಾಕ್‍ಡೌನ್ ಮಾಡಲು ಸರ್ಕಾರ ಮುಂದಾಗಿದ್ದು, ವಾಣಿಜ್ಯ ಅಂಗಡಿಗಳು ಸಂಪೂರ್ಣ ಬಂದ್ ಆಗಲಿದೆ. ಮುಖ್ಯಮಂತ್ರಿಗಳ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇವತ್ತು ಸಂಜೆ ವಿಪಕ್ಷ ನಾಯಕರ ಸಭೆ ಬಳಿಕ ಅಧಿಕೃತವಾಗಿ ಸಿಎಂ ನಿರ್ಧಾರ ಪ್ರಕಟಿಸಲಿದ್ದಾರೆ.

    ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ಮಾಚ್ 31ರವರೆಗೂ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‍ಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ. ಅಂಗಡಿ ಮುಂಗಟ್ಟುಗಳು ಕ್ಲೋಸ್ ಆಗಿರುತ್ತವೆ. ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿರುತ್ತವೆ. ಹಾಲು, ತರಕಾರಿ, ಹಣ್ಣು, ಆಸ್ಪತ್ರೆ, ಮೆಡಿಕಲ್ ಶಾಪ್ ಓಪನ್ ಇರುತ್ತದೆ. ಖಾಸಗಿ ವಾಹನಗಳು ಸೇರಿದಂತೆ ಎಲ್ಲವೂ ರಸ್ತೆಯಲ್ಲಿ ಓಡಾಡುವಂತಿಲ್ಲ. ವಾಣಿಜ್ಯ ಅಂಗಡಿಗಳು ಫುಲ್ ಬಂದ್ ಆಗಲಿವೆ ಎಂದು ಹೇಳಿದರು.

    ಖಾಸಗಿ ಆಸ್ಪತ್ರೆ ವೈದ್ಯರ ಜೊತೆ ಸಾಕಷ್ಟು ಚರ್ಚೆ ಆಗಿದೆ. ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದವರನ್ನ ಹುಡುಕಿ ಕ್ವಾರಂಟೈನ್ ಮಾಡುವುದೇ ದೊಡ್ಡ ಸವಾಲಾಗಿದೆ. ಗಂಭೀರತೆ ಅರಿತು ಸ್ವಯಂ ಪ್ರೇರಣೆಯಿಂದ ಮನೆಯಲ್ಲಿರಬೇಕು. ನಗರ ಪ್ರದೇಶದ ಜನ ಗ್ರಾಮೀಣ ಪ್ರದೇಶಕ್ಕೆ ಹೋಗಿ ಅಲ್ಲಿ ತೊಂದರೆ ಮಾಡಬೇಡಿ. ಬೆಂಗಳೂರು ನಗರದಲ್ಲಿ 144 ಸೆಕ್ಷನ್ ಮುಂದುವರಿಯುತ್ತದೆ. ಬಡವರಿಗೆ ಮಾತ್ರ ದಿನಪೂರ್ತಿ ಉಚಿತ ಊಟ ಕೊಡಲಾಗುತ್ತದೆ. ಇಂದಿರಾ ಕ್ಯಾಂಟಿನ್‍ನಲ್ಲಿ ಬಡವರಿಗೆ ಉಚಿತ ಊಟವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

  • ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆಯಲ್ಲಿ ದಾಖಲೆ ಸೃಷ್ಟಿಸಿದ ಆವಕ

    ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆಯಲ್ಲಿ ದಾಖಲೆ ಸೃಷ್ಟಿಸಿದ ಆವಕ

    ರಾಮನಗರ: ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ 75 ಟನ್ ಗೂಡು ಮಾರುಕಟ್ಟೆ ಪ್ರವೇಶಿಸಿಸುವ ಮೂಲಕ ದಾಖಲೆ ಬರೆದುಕೊಂಡಿದೆ.

    ಅಷ್ಟೇ ಅಲ್ಲದೇ ಸರ್ಕಾರಿ ರಜೆಯನ್ನು ಹೊರತು ಪಡಿಸಿ, ಕೊರೊನಾ ಹೊಡೆತಕ್ಕೆ ಮೊದಲ ಬಾರಿಗೆ ಮಾರುಕಟ್ಟೆ ಬಂದ್ ಕೂಡ ಆಗುತ್ತಿದೆ. ಇದರೊಂದಿಗೆ ಹೊರ ರಾಜ್ಯದ ಬೆಳೆಗಾರರ ಮೇಲೆ ನಿರ್ಬಂಧ ಹೇರಲಾಗಿದೆ.

    ದಿನನಿತ್ಯ ಸಾವಿರಾರು ಜನರಿಂದ ತುಂಬಿ ತುಳುಕುವ ರಾಮನಗರದ ರೇಷ್ಮೆ ಮಾರುಕಟ್ಟೆ ಕೊರೊನಾ ಕಾಟಕ್ಕೆ ತತ್ತರಿಸಿದೆ. ಹಾಗಾಗಿ ನಾಳೆ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರೇಷ್ಮೆ ಮಾರುಕಟ್ಟೆ ಬಂದ್ ಮಾಡಲಾಗಿದ್ದು, ಮಾರುಕಟ್ಟೆಗೆ ಅಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ.

    ಏಷ್ಯದಲ್ಲೇ ಅತೀ ದೊಡ್ಡಮಟ್ಟದ ವಹಿವಾಟು ಹೊಂದಿರುವ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ 75 ಟನ್ ಗೂಡು ಮಾರುಕಟ್ಟೆ ಪ್ರವೇಶಿಸಿಸುವ ಮೂಲಕ ದಾಖಲೆ ಮಾಡಿದೆ. 1,300ಕ್ಕೂ ಹೆಚ್ಚು ಲಾಟ್ ಒಮ್ಮೆಯೇ ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಗೂಡಿನ ದರವು ಕುಸಿತಕಂಡಿದ್ದು, ಇಷ್ಟು ಪ್ರಮಾಣದ ಗೂಡಿನ ನಿರ್ವಹಣೆ, ತೂಕ ಮಾಡುವ ಕೆಲಸವು ಮಾರುಕಟ್ಟೆ ಅಧಿಕಾರಿಗಳಿಗೆ ತಲೆಬಿಸಿ ತಂದಿತ್ತು.

    ಈ ಮೊದಲು ದಿನಕ್ಕೆ 30ರಿಂದ 32 ಟನ್ ರೇಷ್ಮೆ ಗೂಡು ಮಾರುಕಟ್ಟೆ ಪ್ರವೇಶಿಸುತ್ತಿತ್ತು. ಕೊರೊನಾದಿಂದಾಗಿ ಭಾನುವಾರ ಮಾರುಕಟ್ಟೆ ಬಂದ್ ಆಗಲಿದೆ. ಹೀಗಾಗಿ ಶನಿವಾರ 75 ಟನ್ ರೇಷ್ಮೆ ಆವಕಗೊಂಡಿರುವುದು ವಿಶೇಷವಾಗಿದೆ. ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಹೆಚ್ಚಾದ ಹಿನ್ನೆಲೆಯಲ್ಲಿ ಬೆಳೆಗಾರರು ಮಾರುಕಟ್ಟೆಯಲ್ಲಿ ಜಾಲರಿ ಸಿಗದೇ ನೆಲದ ಮೇಲೆಯೇ ಗೂಡು ಹರಡಿಕೊಂಡು ಹರಾಜಿಗಾಗಿ ಕಾದು ಕುಳಿತ್ತಿದ್ದರು.

  • ಮಂಗ್ಳೂರಲ್ಲಿ ಕರ್ಫ್ಯೂ ತೆರವು, ಶಾಲಾ-ಕಾಲೇಜು ಓಪನ್- ಕಡಲನಗರಿಗೆ ಸಿದ್ದು ಭೇಟಿ

    ಮಂಗ್ಳೂರಲ್ಲಿ ಕರ್ಫ್ಯೂ ತೆರವು, ಶಾಲಾ-ಕಾಲೇಜು ಓಪನ್- ಕಡಲನಗರಿಗೆ ಸಿದ್ದು ಭೇಟಿ

    ಮಂಗಳೂರು: ನಗರದಲ್ಲಿ ಕರ್ಫ್ಯೂ ತೆರವು ಮಾಡಲಾಗಿದ್ದು, ಕರಾವಳಿ ಜನ ಈಗ ಕೊಂಚ ನಿರಾಳರಾಗಿದ್ದಾರೆ. ಮಂಗಳೂರು ಸದ್ಯ ಸಹಜ ಸ್ಥಿತಿಗೆ ಮರಳಿದೆ. ಶಾಲಾ-ಕಾಲೇಜುಗಳು ಇಂದಿನಿಂದ ಓಪನ್ ಆಗುತ್ತಿದೆ. ಇದರ ನಡುವೆ ಸಿದ್ದರಾಮಯ್ಯ ಇಂದು ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ.

    ಹಿಂಸಾಚಾರ, ಗೋಲಿಬಾರ್‍ನಿಂದ ಕಂಗೆಟ್ಟಿದ್ದ ಕಡಲನಗರಿ ಮಂಗಳೂರು ಈಗ ಶಾಂತವಾಗಿದೆ. ನಗರದಲ್ಲಿ ಬೆಳಗ್ಗೆ 6 ಗಂಟೆಗೆ ಕರ್ಫ್ಯೂ ಮುಕ್ತಾಯವಾಗಿದೆ. ಹಾಗಾಗಿ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ 144 ಸೆಕ್ಷನ್ ಮುಂದುವರಿದಿದೆ.

    ಕರ್ಫ್ಯೂ ತೆರವಿನಿಂದ ಇಂದಿನಿಂದ ಎಂದಿನಂತೆ ಶಾಲಾ-ಕಾಲೇಜುಗಳು ಆರಂಭವಾಗಲಿದೆ. ಎಲ್ಲಾ ಸರ್ಕಾರಿ, ಖಾಸಗಿ ಕಚೇರಿಗಳೂ ತೆರೆದುಕೊಳ್ಳಲಿವೆ. ಕರ್ಫ್ಯೂ ಸಡಿಲಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಜನ ಮಾರುಕಟ್ಟೆಯತ್ತ ಆಗಮಿಸುತ್ತಿದ್ದಾರೆ. ಮಾತ್ರವಲ್ಲದೇ ಕರ್ಫ್ಯೂನಿಂದಾಗಿ ಮಂಗಳೂರಲ್ಲೇ ಸಿಲುಕಿಕೊಂಡಿದ್ದ ಮಂದಿ ಇಂದು ತಮ್ಮ ತಮ್ಮ ಊರುಗಳಿಗೆ ಸೇಫಾಗಿ ತೆರಳಿದರು.

    ಇತ್ತ ಶುಕ್ರವಾರ ಮಂಗಳೂರಿಗೆ ತೆರಳಬೇಕಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಅವಕಾಶ ಸಿಕ್ಕಿರಲಿಲ್ಲ. ಕರ್ಫ್ಯೂ ಹಿನ್ನೆಲೆ ರಮೇಶ್ ಕುಮಾರ್ ನೇತೃತ್ವದ ನಿಯೋಗಕ್ಕೆ ತಡೆಯೊಡ್ಡಲಾಗಿತ್ತು. ಹಾಗಾಗಿ ಸಿದ್ದರಾಮಯ್ಯ ಕೂಡ ತೆರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಇಂದು ಮಂಗಳೂರಿಗೆ ಭೇಟಿ ನೀಡಲಿದ್ದು, ಮೃತರ ಕುಟುಂಬಸ್ಥರನ್ನು ಭೇಟಿ ಮಾಡಲಿದ್ದಾರೆ.

    ಮಂಗಳೂರಿನಲ್ಲಿ ಈಗಾಗಲೇ ಇಂಟರ್ನೆಟ್ ಇದ್ದು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೇ ಸಭೆ, ಪ್ರತಿಭಟನೆ ನಿಷಿದ್ಧವಾಗಿದೆ. ಒಟ್ಟಿನಲ್ಲಿ ಮಂಗಳೂರಲ್ಲಿ ಗುಂಡೇಟಿಗೆ ಇಬ್ಬರು ಬಲಿಯಾದ ಬಳಿಕ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಎಲ್ಲವೂ ಎಂದಿನಂತೆ ನಡೆಯುತ್ತಿದೆ.

  • ಸಂಜೆ 6 ಗಂಟೆವರೆಗೆ ಕರ್ಫ್ಯೂ ಸಡಿಲಿಕೆ: ಸಿಎಂ ಘೋಷಣೆ

    ಸಂಜೆ 6 ಗಂಟೆವರೆಗೆ ಕರ್ಫ್ಯೂ ಸಡಿಲಿಕೆ: ಸಿಎಂ ಘೋಷಣೆ

    ಮಂಗಳೂರು: ಪೌರತ್ವ ಕಿಚ್ಚನಿಂದ ಮಂಗಳೂರಿನಾದ್ಯಂತ ಪೊಲೀಸರು ಕರ್ಫ್ಯೂವನ್ನು ಜಾರಿ ಮಾಡಿದ್ದರು. ಹೀಗಾಗಿ ಇಂದು ಸಂಜೆ 6 ಗಂಟೆವರೆಗೆ ಕರ್ಫ್ಯೂವನ್ನು ಸಡಿಲಿಕೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಜನರು ಕರ್ಫ್ಯೂವನ್ನು ತೆಗೆಯಬೇಕೆಂದು ಮನವಿ ಮಾಡಿಕೊಂಡಿದ್ದರು. ಹೀಗಾಗಿ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಇವತ್ತು 3 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಕರ್ಫ್ಯೂ ಸಡಿಲಿಕೆ ಮಾಡಲಾಗುತ್ತದೆ. ಮತ್ತೆ ಸಂಜೆಯಿಂದ ಕರ್ಫ್ಯೂ ಇರುತ್ತದೆ. ನಾಳೆ ಸಂಜೆವರೆಗೂ ಪೂರ್ಣವಾಗಿ ಕರ್ಫ್ಯೂವನ್ನು ಸಡಿಲ ಮಾಡಲಾಗುತ್ತದೆ. ನಾಳೆ ರಾತ್ರಿ ಮತ್ತೆ ಕರ್ಫ್ಯೂ ಮುಂದುವರಿಯುತ್ತದೆ. ಸೋಮವಾರದಿಂದ ಕರ್ಫ್ಯೂ ಇರುವುದಿಲ್ಲ. ಆದರೆ 144 ಸೆಕ್ಷನ್ ಮಾತ್ರ ಮುಂದುವರಿಯುತ್ತದೆ ಎಂದು ತಿಳಿಸಿದರು.

    ಮಂಗಳೂರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದರಿಂದ ಅಹಿತರ ಘಟನೆಗಳು ನಡೆದಿವೆ. ಈ ಬಗ್ಗೆ ಯಾವ ರೀತಿ ತನಿಖೆ ನಡೆಯಬೇಕೆಂದು ಗೃಹ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಮತ್ತೆ ಕಾನೂನಿನ ಚೌಕಟ್ಟಿನಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕಾಗುತ್ತದೆ. ಅದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸುತ್ತೇನೆ. ಅವರೇ ಪರಿಹಾರ ಘೋಷಣೆ ಮಾಡುತ್ತಾರೆ ಎಂದರು.

    ನಮ್ಮ ಸರ್ಕಾರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಯಾವುದೇ ರೀತಿಯ ಬೇಧಭಾವ ಮಾಡದೆ ಎಲ್ಲಾ ರೀತಿ ಸಹಕಾರ ನೀಡುತ್ತಾ ಬಂದಿದೆ. ಈ ಹಿಂದೆನೂ ಅದೇ ರೀತಿ ನಡೆದುಕೊಂಡಿದ್ದೇವೆ. ಮುಂದೆನೂ ಇದೇ ರೀತಿ ನಡೆದುಕೊಳ್ಳುತ್ತೇವೆ. ಇದನ್ನು ಅರ್ಥಮಾಡಿಕೊಂಡು ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇರೋಣ. ಇದು ಪ್ರಧಾನಿ ಮೋದಿ ಅವರ ಅಪೇಕ್ಷೆ ಕೂಡ ಆಗಿದೆ. ಹೀಗಾಗಿ ಎಲ್ಲರೂ ಶಾಂತಿಯುತವಾಗಿ ಇರಬೇಕು ಎಂದು ಯುಡಿಯೂರಪ್ಪ ಮನವಿ ಮಾಡಿಕೊಂಡರು.

    ಹೀಗಾಗಿ ನಗರದಲ್ಲಿ ಅಂಗಡಿ-ಮುಗ್ಗಟ್ಟುಗಳು ತೆರೆದಿದ್ದು, ಜನರು ಎಂದಿನಂತೆ ದಿನಚರಿಯ ಸಾಮಗ್ರಿಗಳನ್ನ ಕೊಳ್ಳುತ್ತಿದ್ದಾರೆ. ಜೊತೆಗೆ ಬಸ್ ಸಂಚಾರ ಕೂಡ ಆರಂಭವಾಗಿದೆ. ಆದರೆ ಸಂಜೆ 6 ಗಂಟೆವರೆಗೆ ಮಾತ್ರ ಕರ್ಫ್ಯೂವನ್ನು ಸಡಿಲಿಕೆ ಮಾಡಲಾಗಿದೆ. ಹೀಗಾಗಿ ಪೊಲೀಸರು ಜನರ ಬಳಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

     

  • ನೆಪ ಹೇಳ್ಕೊಂಡು ಹೊರ ಬಂದ ಯುವಕರು – ಲಾಠಿ ರುಚಿ ತೋರಿಸಿದ ಪೊಲೀಸರು

    ನೆಪ ಹೇಳ್ಕೊಂಡು ಹೊರ ಬಂದ ಯುವಕರು – ಲಾಠಿ ರುಚಿ ತೋರಿಸಿದ ಪೊಲೀಸರು

    ಮಂಗಳೂರು: ಪೌರತ್ವದ ಪ್ರತಿಭಟನೆ, ಗಲಾಟೆನಿಂದ ಶಾಂತವಾಗಿರುವ ಮಂಗಳೂರಿನಲ್ಲಿ ಮತ್ತೆ ಪೊಲೀಸರು ಲೈಟಾಗಿ ಲಾಠಿ ಚಾರ್ಜ್ ಮಾಡಿದ್ದಾರೆ.

    ನಗರದ ಸೆಂಟ್ರಲ್ ಮಾರ್ಕೆಟ್‍ನಲ್ಲಿ ಪೊಲೀಸರು ಮತ್ತೆ ಲಾಠಿಯೇಟು ಕೊಟ್ಟಿದ್ದಾರೆ. ಇಂದು ಕೂಡ ಮಂಗಳೂರಿನಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಹೀಗಾಗಿ ಯಾರು ಕೂಡ ಓಡಾಡುವಂತಿಲ್ಲ. ಆದರೂ ಯುವಕರು ಇಲ್ಲದ ನೆಪ ಹೇಳಿ ಮನೆಯಿಂದ ಹೊರಬರಲು ಯತ್ನಿಸಿದ್ದಾರೆ. ಆಗ ಪೊಲೀಸರು ಯುವಕರಿಗೆ ಲಾಠಿರುಚಿ ತೋರಿಸಿ ಓಡಿಸಿದ್ದಾರೆ.

    ಪೊಲೀಸ್ ಕಮಿಷನರ್ ಈಗಾಗಲೇ ಪರಿಸ್ಥಿತಿ ನೋಡಿಕೊಂಡು ಓಡಾಡಲೂ ಅವಕಾಶ ಕೊಡುತ್ತೇವೆ ಎಂದು ಕಳೆದ ದಿನವೇ ಹೇಳಿದ್ದರು. ಆದರೂ ಇಂದು ಬೆಳಗ್ಗೆ ಯುವಕರ ಆಸ್ಪತ್ರೆಗೆ ಹೋಗಬೇಕು ಎಂದು ಬೇರೆ ಬೇರೆ ನೆಪ ಹೇಳಿಕೊಂಡು ವಾಹನಗಳಲ್ಲಿ ನಗರದೊಳಗೆ ಬಂದಿದ್ದರು. ಅಂತಹವರಿಗೆ ಪೊಲೀಸರು ಲಾಠಿಯೇಟು ಕೊಟ್ಟಿದ್ದಾರೆ.

    ಇಂದು ಕೂಡ ಕರ್ಫ್ಯೂ ಜಾರಿಯಲ್ಲಿರುವುದರಿಂದ ಪೊಲೀಸರು ಪ್ರತಿ ರಸ್ತೆಗೂ ಹೋಗಿ ಮನೆಯಿಂದ ಹೊರಗಡೆಗೆ ಯಾರು ಬರಬಾರದು ಎಂದು ಮೈಕಿನಲ್ಲಿ ಅನೌನ್ಸ್ ಮಾಡುತ್ತಿದ್ದಾರೆ. ಒಂದು ವೇಳೆ ತುರ್ತು ಪರಿಸ್ಥಿತಿಯಿದ್ದರೆ ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದರೆ ಅವರೇ ಬೇಕಾದ ಸೌಲಭ್ಯವನ್ನು ಒದಗಿಸಲಿದ್ದಾರೆ. ಭಾನುವಾರ ರಾತ್ರಿಯವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತಾರೆ.

  • ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ -ಕರ್ಫ್ಯೂ ಜಾರಿ

    ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ -ಕರ್ಫ್ಯೂ ಜಾರಿ

    ಶ್ರೀನಗರ: ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಜಮ್ಮು ಕಾಶ್ಮೀರದ ಹಲವೆಡೆ ಪ್ರತಿಭಟನೆ ನಡೆದಿದ್ದು, ಈ ವೇಳೆ ಕೆಲ ಸೂಕ್ಷ್ಮ ಪ್ರದೇಶದಲ್ಲಿ ಕಲ್ಲು ತೂರಾಟ ಕೂಡ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕರ್ಫ್ಯೂ  ಜಾರಿ ಮಾಡಲಾಗಿದೆ.

    ಜಮ್ಮು  ನವಬಾದ್, ಭಕ್ಷಿನಗರ್, ಜಾನಿಪುರ್ ಸೇರಿ ಹಲವು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಸೇನೆಯ ಅಧಿಕಾರಿಗಳು ಕೂಡ ಜನರಲ್ಲಿ ಶಾಂತಿ ಕಾಪಾಡಲು ಮನವಿ ಮಾಡಿದರೂ ಕೂಡ ಹೋರಾಟಗಳು ತೀವ್ರಗೊಂಡ ಕಾರಣದಿಂದ ಕರ್ಫ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ದಾಳಿ ಬೆನ್ನಲ್ಲೇ ಜಮ್ಮುವಿನಲ್ಲಿ ಮೊಬೈಲ್ ಹಾಗೂ ಇಂಟರ್‍ನೆಟ್, ಫೋನ್ ಸಂಪರ್ಕ ಬಂದ್ ಮಾಡಲಾಗಿದೆ.

    ಜಮ್ಮು ಕಾಶ್ಮೀರದ ಉಪ ಕಮಿಷನರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಜಮ್ಮು ಸಿಟಿ ಸೇರಿದಂತೆ ವಿವಿಧೆಡೆ ಕರ್ಫ್ಯೂ ಜಾರಿ ಮಾಡಲಾಗಿದೆ. ಅದರಲ್ಲೂ ಜಮ್ಮು ಓಲ್ಡ್ ಸಿಟಿ ಪ್ರದೇಶದಲ್ಲಿ ಹೆಚ್ಚಿನ ಪ್ರತಿಭಟನೆಗಳು ನಡೆದಿದೆ. ಧ್ವನಿವರ್ಧಕಗಳಲ್ಲಿ ಈ ಬಗ್ಗೆ ರಕ್ಷಣಾ ಪಡೆ ಮಾಹಿತಿ ನೀಡಿ ಘೋಷಣೆ ಮಾಡಲಾಗುತ್ತಿದೆ. ಪರಿಣಾಮ ನಗರದಲ್ಲಿ ಬಹುತೇಕ ಸ್ತಬ್ಧವಾಗಿದೆ.

    ದಾಳಿಯನ್ನ ಖಂಡಿಸಿದ ಜಮ್ಮು ಕಾಶ್ಮೀರದ ವ್ಯಾಪಾರಿ ಒಕ್ಕೂಟ ಕೂಡ ಬಂದ್‍ಗೆ ಕರೆ ನೀಡಿದ್ದು, ಹೈ ಕೋರ್ಟ್ ವಕೀಲರ ಸಂಘ ಸೇರಿದಂತೆ ಹಲವು ಸ್ಥಳೀಯ ಸಂಘಟನೆಗಳು ದಾಳಿಯನ್ನು ಖಂಡಿಸಿದೆ. ಇದೇ ವೇಳೆ ಭಾರತೀಯ ವಿದೇಶಾಂಗ ಇಲಾಖೆಯಿಂದ ಪಾಕಿಸ್ತಾನದ ರಾಯಭಾರಿ ಸೊಹೈಲ್ ಮಹಮೂದ್ ಅವರಿಗೆ ಬುಲಾವ್ ನೀಡಿದ್ದು, ಸೊಹೈಲ್ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನು ಭೇಟಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv