Tag: ಕರ್ಫ್ಯೂ

  • ಗಮನಿಸಿ – ರಾತ್ರಿ ಬಸ್, ಕ್ಯಾಬ್, ಆಟೋ ಸಂಚಾರಕ್ಕೆ ಅನುಮತಿ

    ಗಮನಿಸಿ – ರಾತ್ರಿ ಬಸ್, ಕ್ಯಾಬ್, ಆಟೋ ಸಂಚಾರಕ್ಕೆ ಅನುಮತಿ

    ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿ ಬಸ್, ಕ್ಯಾಬ್ ಮೂಲಕ ರಾತ್ರಿಯೂ ಸಂಚರಿಸಬಹುದು. ಕೋವಿಡ್ 19 ಲಾಕ್‍ಡೌನ್ ವೇಳೆ ಹೇರಲಾಗಿದ್ದ ರಾತ್ರಿಯ ಕರ್ಫ್ಯೂ ನಿರ್ಬಂಧವನ್ನು ಸಡಿಲಿಸಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.

    ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಬಸ್, ಟ್ಯಾಕ್ಸಿಗಳಲ್ಲಿ ಕಂಟೈನ್ಮೆಂಟ್ ವಲಯ ಹೊರತು ಪಡಿಸಿ ಉಳಿದ ಕಡೆ ಸಂಚರಿಸಬಹುದು. ಪ್ರಯಾಣಿಕರು ಹೊಂದಿರುವಂತಹ ಬಸ್ ಟಿಕೆಟ್ ಆಧಾರದ ಮೇಲೆ ಬಸ್ ನಿಲ್ದಾಣಗಳಿಗೆ ಹೋಗಲು ಮತ್ತು ಬಸ್ ನಿಲ್ದಾಣದಿಂದ ಮನೆಗಳಿಗೆ ಹೋಗಲು ಅನುಮತಿ ನೀಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.

    ಗುರುವಾರ ಹೊರಡಿಸಲಾದ ಆದೇಶದಲ್ಲಿ ಕರ್ಫ್ಯೂ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಗಳ ಸಂಚಾರಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ತೆರವುಗೊಳಿಸಿದ್ದಾರೆ.

    ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಗಳು ಪ್ರಯಾಣಿಕರನ್ನು ಬಸ್ ಸ್ಟ್ಯಾಂಡ್/ ಪಿಕ್ ಅಪ್ ಪಾಯಿಂಟ್ ಗಳಲ್ಲಿ ಕರೆದೊಯ್ಯಲು ಮತ್ತು ಕರೆತರಲು ಸಹ ಅನುಮತಿ ನೀಡಲಾಗಿದೆ.

  • ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೂ ಬಿಎಂಟಿಸಿ ಬಸ್ ಸಂಚಾರ

    ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೂ ಬಿಎಂಟಿಸಿ ಬಸ್ ಸಂಚಾರ

    ಬೆಂಗಳೂರು: ನೈಟ್ ಕರ್ಫ್ಯೂ ಸಡಿಲ ಮಾಡಿದ ಹಿನ್ನೆಲೆಯಲ್ಲಿ ಇಂದಿನಿಂದ ಬಿಎಂಟಿಸಿ ಬಸ್ ಸಂಚಾರದ ಅವಧಿಯಲ್ಲಿ ಬದಲಾವಣೆಯಾಗಿದೆ.

    ಇದುವರೆಗೂ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಮಾತ್ರ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಇತ್ತು. ಇಂದಿನಿಂದ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಬಿಎಂಟಿಸಿ ಬಸ್‍ಗಳು ಓಟಾಟ ಮಾಡಲಿವೆ. ಈ ಹಿಂದೆಯೇ ಎಂಡಿ ಶಿಖಾ ಅವರು ಬಸ್ ಸಂಚಾರ ಅವಧಿಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ನೀಡಿದೆ.

    ಇಂದಿನಿಂದ ನೈಟ್ ಕರ್ಫ್ಯೂ ಸಮಯ ಕೂಡ ಬದಲಾವಣೆಯಾಗಿದೆ. ರಾತ್ರಿ 9 ಗಂಟೆಯಿಂದ ರಾತ್ರಿ 5 ಗಂಟೆಯವರಗೆ ಮಾತ್ರ ಕರ್ಫ್ಯೂ ಜಾರಿಯಾಗಿದೆ. ಹೀಗಾಗಿ ಬಿಎಂಟಿಸಿ ಬಸ್‍ಗಳ ಸಂಚಾರ ಅವಧಿ ಕೂಡ ಬದಲಾವಣೆಯಾಗಿದೆ. ಈ ಮೂಲಕ ಪ್ರಯಾಣಿಕರು ಹೆಚ್ಚಿನ ಸಂಖ್ಯೆ ಓಡಾಡಬಹುದು.

    ಈ ಬಗ್ಗೆ ಬಿಎಂಟಿಸಿ ಎಂಡಿ ಶಿಖಾ, “ಭಾನುವಾರ ಬಿಎಂಟಿಸಿಗೆ ಗೈಡ್ ಲೈನ್ಸ್ ಬಂದಿದೆ. ಹೀಗಾಗಿ ಎಂಚ್‍ಎ ನಿರ್ದೇಶನದಂತೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಬಸ್‍ಗಳನ್ನು ಓಡಿಸುತ್ತೇವೆ” ಎಂದು ಪಬ್ಲಿಕ್ ಟಿವಿ ಸ್ಪಷ್ಟಪಡಿಸಿದ್ದಾರೆ. ಕಂಟೈನ್ಮೆಂಟ್ ಝೋನ್‍ಗಳಲ್ಲಿ ಬಸ್‍ಗಳ ಓಡಾಟಕ್ಕೆ ಇನ್ನೂ ಸರ್ಕಾರ ಅವಕಾಶ ನೀಡಿಲ್ಲ. ಹೀಗಾಗಿ ಕಂಟೈನ್ಮೆಂಟ್ ಝೋನ್ ಏರಿಯಾಗಳಲ್ಲಿ ಬಸ್ ಓಡಾಟವಿಲ್ಲ.

  • ನಾಳೆ ರಾಜ್ಯದಲ್ಲಿ ಕರ್ಫ್ಯೂ ಇಲ್ಲ

    ನಾಳೆ ರಾಜ್ಯದಲ್ಲಿ ಕರ್ಫ್ಯೂ ಇಲ್ಲ

    – ಮದ್ಯದಂಗಡಿ ಕೂಡ ಓಪನ್

    ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಪ್ರತಿ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್‍ಡೌನ್ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ ನಾಳೆ ಕರ್ಫ್ಯೂವನ್ನು ಸಡಿಲಗೊಳಿಸಿ ಆದೇಶ ಹೊರಡಿಸಿದೆ.

    ಭಾನುವಾರ ರಾಜ್ಯದಲ್ಲಿ ಯಾವುದೇ ಸಂಪೂರ್ಣ ಲಾಕ್‍ಡೌನ್ ಇಲ್ಲ. ಎಂದಿನಂತೆ ಎಲ್ಲಾ ಚಟವಟಿಕೆಗಳು ಇರಲಿದೆ ಎಂದು ಸಿಎಂ ಕಚೇರಿಯಿಂದ ಅಧಿಕೃತವಾಗಿ ಘೋಷಣೆಯಾಗಿದೆ.

    ಪ್ರತಿ ದಿನದಂತೆ ಭಾನುವಾರ ಬಸ್ ಸಂಚಾರ ಇರುತ್ತೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಎಂದಿನಂತೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಸಂಚಾರ ಮಾಡಲಿದೆ. ಅಲ್ಲದೇ ಅಂತರ ರಾಜ್ಯ ಸಂಚಾರ ಕೂಡ ಇರುತ್ತದೆ. ಜೊತೆಗೆ ಆಟೋ, ಕ್ಯಾಬ್ ಎಲ್ಲ ಸಂಚಾರ ವ್ಯವಸ್ಥೆ ಕೂಡ ಇರುತ್ತದೆ.

    ಹೋಟೆಲ್, ಸಲೂನ್, ತರಕಾರಿ, ದಿನಸಿ, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲಾ ಅಂಗಡಿಗಳು ತೆರೆದಿರುತ್ತದೆ. ಅದೇ ರೀತಿ ಹೋಟೆಲ್‍ನಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೂ ಪಾರ್ಕ್ ತೆರೆದಿರುತ್ತದೆ. ಜೊತೆಗೆ ಮದ್ಯದಂಗಡಿ ಕೂಡ ಓಪನ್ ಆಗುತ್ತದೆ.

  • ಕೊರೊನಾ ಕರ್ಫ್ಯೂ ನಡುವೆ ಗದಗನಲ್ಲಿ 50 ಜೋಡಿ ಸರಳ ವಿವಾಹ

    ಕೊರೊನಾ ಕರ್ಫ್ಯೂ ನಡುವೆ ಗದಗನಲ್ಲಿ 50 ಜೋಡಿ ಸರಳ ವಿವಾಹ

    ಗದಗ: ಕೊರೊನಾ ಲಾಕ್‍ಡೌನ್ ಮಧ್ಯೆ ಗದಗನಲ್ಲಿ ಇಂದು ಸುಮಾರು 50 ಜೋಡಿಗಳು ವಿವಾಹ ಮಾಡಿಕೊಂಡಿದ್ದು, ಸರಳ ವಿವಾಹದಲ್ಲಿ ಪೊಲೀಸರು ಸಹ ಭಾಗವಹಿಸಿ ಹಾರೈಸಿದ್ದಾರೆ.

    ಒಂದೆಡೆ ಲಾಕ್‍ಡೌನ್ ಕರ್ಫ್ಯೂ, ಮತ್ತೊಂದೆಡೆ ಸಾಲು ಸಾಲು ವಿವಾಹಗಳು ನಡೆಯುತ್ತಿವೆ. ಶುಭ ಭಾನುವಾರ ಇರುವುದರಿಂದ ಜಿಲ್ಲೆಯಲ್ಲಿ ಇಂದು ಸುಮಾರು 50 ಜೋಡಿ ಸರಳ ವಿವಾಹ ನಡೆದಿವೆ. ವಿವಾಹ ನಡೆಯುವ ಹಳ್ಳಿ ಹಳ್ಳಿಗಳಲ್ಲಿ ಪೊಲೀಸರೇ ಮುಂದೆ ನಿಂತು ಸರಳವಾಗಿ ನಡೆಯಲು ಸಹಕಾರ ನೀಡಿದ್ದಾರೆ.

    ನಗರ ಹಾಗೂ ತಾಲೂಕಿನ ಹೊಂಬಳ, ಹುಲಕೋಟಿ, ಕುರ್ತಕೋಟಿ, ಬೆಳಹೊಡ, ಚಿಕ್ಕ ಹಂದಿಗೋಳ, ಕದಡಿ, ಬಳಗಾನೂರ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಸುಮಾರು 50 ಜೋಡಿಗಳು ಕೊರೊನಾದ ಲಾಕ್‍ಡೌನ್ ನಡುವೆಯೂ ದಾಂಪತ್ಯಕ್ಕೆ ಕಾಲಿಟ್ಟಿವೆ. ಗ್ರಾಮೀಣ ಭಾಗದಲ್ಲಿ ನಡೆದ ಮದುವೆಗೆ ಗದಗ ಗ್ರಾಮೀಣ ಪಿ.ಎಸ್ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಮದುವೆ ನಡೆದವು.

    ಸರ್ಕಾರದ ನಿಯಮಗಳನ್ನು ಪಾಲಿಸಿ, ಕಡಿಮೆ ಜನಸಂಖ್ಯೆ, ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಧರಿಸಿ ಸಪ್ತದಿ ತುಳಿದರು. ವಧು-ವರರ ಸಂಬಂಧಿಗಳು ಸಹ ಸಾಮಾಜಿಕ ಅಂತರ ಕಾಯ್ದುಕೊಂಡು ಅಕ್ಷತೆ ಹಾಕಿ ಆಶಿರ್ವಧಿಸಿದರು. ಕೊರೊನಾ ಅಟ್ಟಹಾಸಕ್ಕೆ ಮದುವೆ ಸಂಭ್ರಮಗಳು ಕಳೆಗುಂದಿವೆ. ಜೊತೆಗೆ ಆಡಂಬರಕ್ಕೂ ಕಡಿವಾಣ ಬೀಳುತ್ತಿದೆ.

  • 2 ದಿನ ರಜೆ ಸಿಗುತ್ತಿದ್ದಂತೆ ಊರಿಗೆ ಹೊರಟ ಜನ- ಬೆಂಗ್ಳೂರಿನಲ್ಲಿ ಟ್ರಾಫಿಕ್ ಜಾಮ್

    2 ದಿನ ರಜೆ ಸಿಗುತ್ತಿದ್ದಂತೆ ಊರಿಗೆ ಹೊರಟ ಜನ- ಬೆಂಗ್ಳೂರಿನಲ್ಲಿ ಟ್ರಾಫಿಕ್ ಜಾಮ್

    ಬೆಂಗಳೂರು: ಕೊರೊನಾ ಕರ್ಫ್ಯೂ ಶುರುವಾಗಲು ಕೆಲವೇ ಗಂಟೆ ಬಾಕಿ ಇರುವಂತೆ ಸಾವಿರಾರು ವಾಹನಗಳು ರಸ್ತೆಗಿಳಿದ ಪರಿಣಾಮ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

    ಹೆಮ್ಮಾರಿ ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಶನಿವಾರ ಸಂಜೆ 7ರಿಂದ ಭಾನುವಾರದವರೆಗೆ ಕರ್ಫ್ಯೂ ಮಾದರಿಯ ಲಾಕ್‍ಡೌನ್ ಘೋಷಿಸಲಾಗಿದೆ. ಜೊತೆಗೆ ರಂಜಾನ್ ಹಿನ್ನೆಲೆ ಸೋಮವಾರ ಸರ್ಕಾರಿ ರಜೆ ಇದೆ. ಇದರಿಂದಾಗಿ ಇಂದು ಸಂಜೆ ಸಾವಿರಾರು ಜನರು ಮನೆ ಹಾಗೂ ಊರುಗಳಿಗೆ ತೆರಳಲು ತಮ್ಮ ವಾಹನದಲ್ಲಿ ಪ್ರಯಾಣ ಆರಂಭಿಸಿದರು. ಇದರಿಂದಾಗಿ ಎಲ್ಲೆಡೆ ಟ್ರಾಫಿಕ್ ಸಮಸ್ಯೆ ಎದುರಾಯಿತು. ಇದನ್ನೂ ಓದಿ: ಫಸ್ಟ್ ಟೈಂ ರಾಜ್ಯದಲ್ಲಿ ದ್ವಿಶತಕ ಸಿಡಿಸಿದ ಕೊರೊನಾ- ಸೋಂಕಿತರ ಸಂಖ್ಯೆ 1,959ಕ್ಕೆ ಏರಿಕೆ

    ಲಾಕ್‍ಡೌನ್ ಸಡಲಿಕೆಯಾದ ಬಳಿಕ ಸಾವಿರಾರ ಜನರು ಬೆಂಗಳೂರಿಗೆ ಬಂದಿದ್ದರು. ಆದರೆ ಈಗ ಭಾನುವಾರ ಹಾಗೂ ಸೋಮವಾರ ರಜೆ ಹಿನ್ನೆಲೆ ಮತ್ತೆ ತಮ್ಮ ತಮ್ಮ ಊರುಗಳತ್ತ ಪಯಣ ಬೆಳೆಸಿದ್ದಾರೆ. ಸಾವಿರಾರು ಜನರು ತಮ್ಮ ವಾಹನಗಳಲ್ಲಿ ಊರುಗಳಿಗೆ ಹೊರಟಿದ್ದರಿಂದ ನೆಲಮಂಗಲದ ನವಯುಗ ಟೋಲ್ ಬಳಿ ವಾಹನ ದಟ್ಟಣೆ ಉಂಟಾಯಿತು.

    ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ರಾಜ್ಯದಲ್ಲಿ ಮಹಾಮಾರಿ ಕೊರೊನಾ ತಾಂಡವವಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿನಿಂದ ಸಾವಿರಾರು ಜನರು ಗುಂಪು ಗುಂಪಾಗಿ ತಮ್ಮ ಊರುಗಳಿಗೆ ಪಯಣ ಬೆಳೆಸಿದ್ದಾರೆ. ಇದರಿಂದಾಗಿ ಈ ಜನರು ಹಳ್ಳಿಗಳಿಗೂ ಕೋವಿಡ್-19 ವೈರಸ್ ಅನ್ನು ಹಬ್ಬಿಸುತ್ತಾರಾ ಎಂಬ ಆತಂಕ ಮೂಡಿಸಿದೆ.

  • ಕರ್ಫ್ಯೂ ಹಿನ್ನೆಲೆ ಮುಗಿಬಿದ್ದು ವ್ಯಾಪಾರ – ಬಿಸಿಲಿಗೂ ಹೆದರದ ಜನ

    ಕರ್ಫ್ಯೂ ಹಿನ್ನೆಲೆ ಮುಗಿಬಿದ್ದು ವ್ಯಾಪಾರ – ಬಿಸಿಲಿಗೂ ಹೆದರದ ಜನ

    ರಾಯಚೂರು: ರಂಜಾನ್ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ವ್ಯಾಪಾರ ಜೋರಾಗಿದ್ದು, ಸುಡು ಬಿಸಿಲಿನಲ್ಲೂ ಜನ ಮುಗಿಬಿದ್ದು ವಸ್ತುಗಳನ್ನ ಕೊಳ್ಳುತ್ತಿದ್ದಾರೆ.

    ಇಂದು ಸಂಜೆ 7 ರಿಂದಲೇ ಕರ್ಫ್ಯೂ ಇರುವುದರಿಂದ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಲಿವೆ. ಹೀಗಾಗಿ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರ ವ್ಯಾಪಾರ ಸಾಧ್ಯವಿಲ್ಲ. ಸೋಮವಾರ ರಂಜಾನ್ ಇರುವುದರಿಂದ ಇಂದು ವ್ಯಾಪಾರ ವಹಿವಾಟು ಜೋರಾಗಿದೆ.

    ನಗರದ ಬಟ್ಟೆ ಬಜಾರ್, ಸೂಪರ್ ಮಾರ್ಕೆಟ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜನ ಮುಗಿಬಿದ್ದು ವ್ಯಾಪಾರ ನಡೆಸಿದ್ದಾರೆ. ಆದರೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನ ಮರೆತು ಜನರು ವ್ಯಾಪಾರ ಮಾಡುತ್ತಿದ್ದಾರೆ.

    ಕೊರೊನಾ ವೈರಸ್ ಭೀತಿಯಿಲ್ಲದೆ ಗುಂಪು ಗುಂಪಾಗಿ ವ್ಯಾಪಾರ ಮಾಡುತ್ತಿದ್ದಾರೆ. ಹೀಗಾಗಿ ರಸ್ತೆಗಳಲ್ಲಿ ಜನ, ವಾಹನಗಳೇ ತುಂಬಿವೆ. ಆಹಾರ ಪದಾರ್ಥ, ಹಣ್ಣು, ಚಪ್ಪಲಿ, ಬಟ್ಟೆಗಳನ್ನ ಜನ ಯಾವುದೇ ಭಯಭೀತಿಯಿಲ್ಲದೆ ಕೊಳ್ಳುತ್ತಿದ್ದಾರೆ.

  • ಕೊರೊನಾ ಭೀತಿಯ ನಡುವೆಯೂ ಮರಕಳ್ಳತನ – ಕಳ್ಳರಿಗೆ ಲಾಠಿ ಏಟು

    ಕೊರೊನಾ ಭೀತಿಯ ನಡುವೆಯೂ ಮರಕಳ್ಳತನ – ಕಳ್ಳರಿಗೆ ಲಾಠಿ ಏಟು

    ಶಿವಮೊಗ್ಗ: ಕೊರೊನಾ ವೈರಸ್ ಭೀತಿಗೆ ಈಡಿ ರಾಷ್ಟ್ರವೇ ತತ್ತರಿಸಿ ಹೋಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವೈರಸ್ ತಡೆಗಟ್ಟಲು 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.

    ಪ್ರಧಾನಿ ಅವರ ಈ ಆದೇಶವನ್ನೇ ಬಂಡವಾಳ ಮಾಡಿಕೊಂಡ ಕೆಲ ಖದೀಮರು, ಲಾಕ್‍ಡೌನ್ ಇದೆ ಎಂದು ಕಾಡಿನತ್ತ ಯಾರೂ ಸಹ ತಲೆ ಹಾಕುವುದಿಲ್ಲ. ಇದೇ ಸಮಯದಲ್ಲಿ ಬೆಲೆ ಬಾಳುವ ಮರಗಳಿಗೆ ಕೊಡಲಿ ಹಾಕಿ ಮರಗಳ್ಳತನಕ್ಕೆ ಪ್ರಯತ್ನಿಸಿರುವ ಘಟನೆ ಶಿವಮೊಗ್ಗದ ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಈ ವೇಳೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದ ಅರಣ್ಯ ರಕ್ಷಕನ ಮೇಲೆ ಮರಗಳ್ಳರಾದ ರಾಜೇಂದ್ರ, ಮುರುಗೇಶ, ವಿರೇಂದ್ರ ಹಾಗೂ ಬಲರಾಮ್ ಸೇರಿ ಹಲ್ಲೆಗೆ ಮುಂದಾಗಿದ್ದಾರೆ. ಈ ಖದೀಮರು ಲಕ್ಷಾಂತರ ರೂ. ಬೆಲೆ ಬಾಳುವ ಮರಗಳಾದ ಸಾಗುವಾನಿ, ಬೀಟೆ ಸೇರಿದಂತೆ ಇತರೆ ಮರಗಳನ್ನು ಕಳ್ಳತನ ಮಾಡಿ ಶಿವಮೊಗ್ಗ ಮೂಲದ ಹಬೀಬ್ ಎಂಬುವನಿಗೆ ಮಾರಾಟಕ್ಕೆ ಯತ್ನಿಸಿದ್ದರು.

    ಸದ್ಯ ಮೂವರು ಮರಗಳ್ಳರನ್ನು ವಶಕ್ಕೆ ಪಡೆದ ಅರಣ್ಯ ಸಿಬ್ಬಂದಿ ಬಂಧಿತರನ್ನು ಶಿವಮೊಗ್ಗ ವನ್ಯಜೀವಿ ವಲಯದ ಡಿಎಫ್‍ಒ ನಾಗರಾಜ್ ಮುಂದೆ ನಿಲ್ಲಿಸಿದ್ದಾರೆ. ಡಿಎಫ್‍ಒ ನಾಗರಾಜ್ ಮರಗಳ್ಳರಿಗೆ ಕರ್ಫ್ಯೂ ಇದ್ದರೂ ಮನೆಯಿಂದ ಹೊರ ಬಂದು ಮರಗಳ್ಳತನ ಮಾಡುತ್ತೀರಾ ಎಂದು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೂವರಿಗೂ ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೇ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೊರ್ವ ಪರಾರಿಯಾಗಿದ್ದು, ಆತನ ಪತ್ತೆಗೂ ಬಲೆ ಬೀಸಿದ್ದಾರೆ.

  • 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿಯಲ್ಲಿ ಲಾಕ್‍ಡೌನ್ – ಏನಿರುತ್ತೆ? ಏನಿರಲ್ಲ?

    9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿಯಲ್ಲಿ ಲಾಕ್‍ಡೌನ್ – ಏನಿರುತ್ತೆ? ಏನಿರಲ್ಲ?

    ಬೆಂಗಳೂರು: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು ಹೊಸ 7 ಕೇಸ್ ಪತ್ತೆಯಾದ ಹಿನ್ನೆಲೆ ಕರ್ನಾಟಕದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 33ಕ್ಕೆ ಏರಿದೆ. ಹೀಗಾಗಿ ರಾಜ್ಯದ ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿಯಲ್ಲಿ ಲಾಕ್‍ಡೌನ್ ಮಾಡಲಾಗಿದೆ.

    ಕಳೆದ ದಿನವೇ ಬೆಂಗಳೂರನ್ನು ಲಾಕ್‍ಡೌನ್ ಮಾಡಲಾಗಿತ್ತು. ಆದರೆ ಇಂದು ಅತೀ ಹೆಚ್ಚು ಕೊರೊನಾ ಕೇಸ್‍ಗಳು ಪತ್ತೆ ಆಗಿರುವ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‍ಗಳು ಎಂದಿನಂತೆ ಓಡಾಡುತ್ತಿದ್ದವು. ಆಟೋ, ಟ್ಯಾಕ್ಸಿಗಳ ಸಂಚಾರವೂ ಎಂದಿನಂತೆ ಇತ್ತು. ಬಹುತೇಕ ಕಡೆ ಅಂಗಡಿ ಮುಂಗಟ್ಟು ತೆರೆದಿತ್ತು. ಸರ್ಕಾರಿ ಕಚೇರಿಗಳನ್ನು ಓಪನ್ ಮಾಡಲಾಗಿತ್ತು.

    ಈ ಬಗ್ಗೆ ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತ್ತು. ತಕ್ಷಣ ಮಧ್ಯಾಹ್ನ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ತಜ್ಞರ ಸಲಹೆಯನ್ನು ಮೀರಿ ಇಡೀ ರಾಜ್ಯವನ್ನು ಲಾಕ್‍ಡೌನ್ ಮಾಡದೇ, ಅರ್ಧಂಬರ್ಧ ಕರ್ಫ್ಯೂ ತೀರ್ಮಾನ ಕೈಗೊಂಡರು. ಮತ್ತದೇ ಕೊರೊನಾ ಪೀಡಿತ 9 ಜಿಲ್ಲೆಗಳಿಗೆ ಅನ್ವಯವಾಗುವಂತೆ ತಕ್ಷಣದಿಂದಲೇ ಜಾರಿ ಆಗುವಂತೆ ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಂಡಿದೆ.

    ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಏಪ್ರಿಲ್ 1 ರವರೆಗೂ ಜಿಲ್ಲೆಗಳು ಲಾಕ್‍ಡೌನ್ ಆಗಲಿವೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ಮೈಸೂರು, ಕಲಬುರ್ಗಿ, ಕೊಡಗು, ಧಾರವಾಡ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

    9 ಜಿಲ್ಲೆಗಳಲ್ಲಿ ಏನಿರಲ್ಲ:
    * ನಾಳೆಯಿಂದ ಕೆಎಸ್ಆರ್‌ಟಿಸಿ, ಬಿಎಂಟಿಸಿ ಸಂಚಾರ ರದ್ದು (9 ಜಿಲ್ಲೆಗಳಿಂದ ಇತರೆ ಜಿಲ್ಲೆ ಸಂಪರ್ಕಿಸುವ ಸಾರಿಗೆ ಬಂದ್)
    * ಖಾಸಗಿ ಬಸ್‍ಗಳು, ಆಟೋ-ಕ್ಯಾಬ್, ಟ್ಯಾಕ್ಸಿಗಳ ಓಡಾಡಲ್ಲ..!
    * ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ಇರಲ್ಲ
    * ಅಂಗಡಿ, ಮಾರ್ಕೆಟ್, ಹೋಟೆಲ್ ಬಂದ್
    * ಎಂಆರ್‌ಪಿ ಶಾಪ್, ಬಾರ್ & ರೆಸ್ಟೋರೆಂಟ್ ಬಂದ್
    * ದೇವಸ್ಥಾನ ಬಂದ್, ಧಾರ್ಮಿಕ ಆಚರಣೆಗಳಿಗೆ ನಿಷೇಧ (ಬೆಂಗಳೂರು ಕರಗ ಸೇರಿ)
    * ಗೃಹಬಂಧನದಲ್ಲಿ ಇರುವವರು ಹೊರ ಬಂದರೆ ಕ್ರಿಮಿನಲ್ ಕೇಸ್, ಜೈಲು ಶಿಕ್ಷೆ (ಹೋಂ ಕ್ವಾರಂಟೈನ್ ಮೇಲೆ ಖಾಕಿ ನಿಗಾ)
    * ಗಾರ್ಮೆಂಟ್ಸ್, ಕಾರ್ಖಾನೆ ಬಂದ್ (ವೇತನ ಸಹಿತ ರಜೆ ನೀಡಬೇಕು)
    * ದಿನಗೂಲಿ ನೌಕರರಿಗೆ ಸರ್ಕಾರದಿಂದಲೇ ಆಹಾರದ ವ್ಯವಸ್ಥೆ
    * ಕರ್ಫ್ಯೂ ಆದೇಶ ಉಲ್ಲಂಘಿಸಿದ್ರೆ 2 ವರ್ಷ ಜೈಲು (ಐಪಿಸಿ ಸೆಕ್ಷನ್ 270(ಸೋಂಕು ಹರಡುವವರ ವಿರುದ್ಧದ ಕೇಸ್)ರ ಅಡಿಯಲ್ಲಿ ಕೇಸ್)
    * ಸರ್ಕಾರಿ ಮತ್ತು ಸರ್ಕಾರೇತರ ಇಲಾಖೆಗಳ ಅಗತ್ಯ ಸೇವೆ ಮಾತ್ರ ಲಭ್ಯ
    * 50 ವರ್ಷ ಮೇಲ್ಪಟ್ಟ ಸರ್ಕಾರಿ ಉದ್ಯೋಗಿಗಳಿಗೆ ಕಡ್ಡಾಯ ರಜೆ
    * ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವ ಉದ್ಯೋಗಿಗಳಿಗೂ ರಜೆ

    9 ಜಿಲ್ಲೆಗಳಲ್ಲಿ ಏನೇನು ಇರುತ್ತೆ:
    * ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು, ಹಾಲು, ತರಕಾರಿ, ಮಾಂಸ, ಮೀನು, ಹಣ್ಣುಗಳು, ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳು ಮತ್ತು ಅಂಗಡಿಗಳ ಸೇವೆ ಲಭ್ಯ.
    * ಪೆಟ್ರೋಲ್ ಬಂಕ್, ಎಲ್ ಪಿಜಿ ಗ್ಯಾಸ್ ಕೇಂದ್ರಗಳು, ಆಯಿಲ್ ಏಜೆನ್ಸಿಗಳು ಮತ್ತು ಸಂಬಂಧಿತ ಗೋದಾಮುಗಳು, ಎಲ್ಲ ರೀತಿಯ ಸರಕು ಸಾಗಣೆ ಸೇವೆಗಳು ಲಭ್ಯ.
    * ಆಸ್ಪತ್ರೆಗಳು, ಕ್ಲಿನಿಕ್ ಗಳು, ಮೆಡಿಕಲ್ ಶಾಪ್‍ಗಳು, ಆಪ್ಟಿಕಲ್ ಸ್ಟೋರ್‌ಗಳು, ಡಯಾಗ್ನೋಸ್ಟಿಕ್ ಕೇಂದ್ರಗಳು, ಇತರೇ ಆರೋಗ್ಯ ಮತ್ತು ವೈದ್ಯಕೀಯ ಸಂಬಂಧಿತ ಕೇಂದ್ರಗಳು, ಗೋದಾಮುಗಳು ಮತ್ತು ಕಾರ್ಖಾನೆಗಳ ಸೇವೆ ಲಭ್ಯ.
    * ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸೇವೆಗಳು ಲಭ್ಯ.
    * ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಇಲಾಖೆ ಕಚೇರಿಗಳು ಮತ್ತು ಅಂಚೆ ಸೇವೆಗಳು ಲಭ್ಯ.
    * ಅಗತ್ಯ ಸೇವೆಗಳನ್ನು ನಿರ್ವಹಿಸುವ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ.
    * ವಿದ್ಯುತ್, ನೀರು ಮತ್ತು ಇತರೇ ಪೌರ ಸೇವೆಗಳು ಲಭ್ಯ.
    * ಬ್ಯಾಂಕ್ ಸೇವೆಗಳು, ಎಟುಎಂ ಕೇಂದ್ರಗಳು, ಟೆಲಿಕಾಂ ಕೇಂದ್ರಗಳು, ಇಂಟರ್ನೆಟ್ ಮತ್ತು ಕೇಬಲ್ ಸೇವೆಗಳು ಲಭ್ಯ.
    * ಇ ಕಾಮರ್ಸ್ ಅಥವಾ ಆನ್ ಲೈನ್ ಮೂಲಕ ಹೋಂ ಡೆಲಿವರಿ ಸೇವೆಗಳು, ರೆಸ್ಟೋರೆಂಟ್ ಹೋಂ ಡೆಲಿವರಿ ಸೇವೆಗಳು ಲಭ್ಯ.
    * ಸರ್ಕಾರದ ಕ್ಯಾಂಟೀನ್ ಸೇವೆಗಳು ಲಭ್ಯ.
    * ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳ ಸೇವೆ ಲಭ್ಯ
    * ಖಾಸಗಿ ಭದ್ರತಾ ಸೇವೆಗಳು ಲಭ್ಯ.

  • ಗುಡುಗು ಸಹಿತ ಭಾರೀ ಮಳೆ – ಕೊರೊನಾ ಹರಡೋ ಭಯದಲ್ಲಿ ಜನರು

    ಗುಡುಗು ಸಹಿತ ಭಾರೀ ಮಳೆ – ಕೊರೊನಾ ಹರಡೋ ಭಯದಲ್ಲಿ ಜನರು

    ಬೆಂಗಳೂರು: ಕೊರೊನಾ ಕರ್ಫ್ಯೂ ಜೊತೆಗೆ ಗುಡುಗು ಸಹಿತ ಮಳೆಯಾಗಿದ್ದು, ಇದರಿಂದ ಕೊರೊನಾ ರೋಗ ಹರಡುವ ಭಯದಲ್ಲಿ ಜನರು ಕಾಲ ಕಳೆಯುವಂತಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರ ಸೇರಿದಂತೆ ಸುಂಕದಕಟ್ಟೆ, ಬ್ಯಾಡರಹಳ್ಳಿ, ನಾಗರಬಾವಿ, ಬನಶಂಕರಿ ಮತ್ತು ಟೌನ್ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಗುಡುಗು ಸಹಿತ ರಭಸವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಡುವಂತಾಗಿತ್ತು.

    ನಾಳೆಯಿಂದ 9 ದಿನ ಕರ್ನಾಟಕ ಕರ್ಫ್ಯೂ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಜನರು ಮುಗಿಬಿದ್ದಿದ್ದು, ಅಗತ್ಯ ವಸ್ತುಗಳನ್ನು ಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

    ಮಳೆಯಲ್ಲಿ ಕೊರೊನಾ ವೈರಸ್ ವ್ಯಾಪಕತೆ ಹೆಚ್ಚಾಗುತ್ತಂತೆ. ಅಲ್ಲದೇ ಮಳೆಯಿಂದ ಭೂಮಿಯಲ್ಲಿ ಈ ವೈರಸ್ ನೆಲೆಗೊಳ್ಳಲು ಬಹು ಸುಲಭ. ಹೀಗಾಗಿ ನೀರಿನಲ್ಲಿ ವೈರಸ್ ಸೇರಿಕೊಂಡು ಕುಡಿಯುವ ನೀರಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಳೆಯಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆಯಿದೆ ಎಂದು ಭೂಗರ್ಭ ತಜ್ಞರು ಹೇಳಿದ್ದರು.

    ಮಳೆ ಬಂದರೆ ವಾತಾವರಣ ತಂಪಾಗಿ, ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತದೆ. ಜೊತೆಗೆ ಈ ವೈರಸ್ ನೀರಿನಲ್ಲಿ ಕೂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಕುಡಿಯುವ ನೀರಿನ ಮೂಲಕವೂ ಈ ವೈರಸ್ ನಮ್ಮ ದೇಹ ಸೇರುವ ಸಾಧ್ಯತೆ ಇದೆ. ಮಳೆಗಾಲದ ಮುಂಚೆಯೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಭೂಗರ್ಭ ಶಾಸ್ತ್ರಜ್ಞ ಪ್ರಕಾಶ್ ಎಚ್ಚರಿಕೆ ನೀಡಿದ್ದರು.

  • ‘ರಾಜ್ಯವನ್ನು ಸಂಪೂರ್ಣ ಶಟ್ ಡೌನ್ ಮಾಡಿ’- ಸಿಎಂಗೆ ವೈದ್ಯರ ಸಲಹೆ

    ‘ರಾಜ್ಯವನ್ನು ಸಂಪೂರ್ಣ ಶಟ್ ಡೌನ್ ಮಾಡಿ’- ಸಿಎಂಗೆ ವೈದ್ಯರ ಸಲಹೆ

    – ಕೊರೊನಾ ಸಂಬಂಧ ವೈದ್ಯರ ಜೊತೆ ಸಿಎಂ ಸಭೆ
    – ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ನಿಗಾ ಇಡುವುದೇ ಸಮಸ್ಯೆ

    ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಸಿಎಂ ಯಡಿಯೂರಪ್ಪ ಅವರು ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಸಭೆ ನಡೆಸಿದ್ದಾರೆ.

    ಕೋವಿಡ್ 19 ಅನ್ನು ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುವಂತೆ ಖಾಸಗಿ ಆಸ್ಪತ್ರೆಗಳು, ತಜ್ಞ ವೈದ್ಯರು ಹಾಗೂ ಪರಿಣತರನ್ನು ಸಿಎಂ ಮನವಿ ಮಾಡಿದರು. ಈ ವೇಳೆ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ದೊಡ್ಡ ಸಂಖ್ಯೆಯ ಜನರನ್ನು ಕ್ವಾರಂಟೈನ್‍ನಲ್ಲಿ ಇಡುವುದೇ ದೊಡ್ಡ ಸವಾಲು. ಹೀಗಾಗಿ ಸಂಪೂರ್ಣ ಶಟ್ ಡೌನ್ ಮಾಡುವುದೇ ಪರಿಹಾರ ಎಂದು ವೈದ್ಯರು ಸಲಹೆ ನೀಡಿದ್ದಾರೆ.

    ಇದೇ ವೇಳೆ ವೈದ್ಯರು, ಫಿವರ್ ಕ್ಲಿನಿಕ್‍ಗಳನ್ನು ಸ್ಥಾಪಿಸಿ, ಪ್ರಾಥಮಿಕ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ 30 ಫಿವರ್ ಕ್ಲಿನಿಕ್‍ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಖಾಸಗಿ ಆಸ್ಪತ್ರೆಯವರು ಶೇ. 50ರಷ್ಟು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಒದಗಿಸುವ ಭರವಸೆ ನೀಡಿದ್ದಾರೆ. 100ಕ್ಕೂ ಹೆಚ್ಚು ವೆಂಟಿಲೇಟರ್‍ಗಳನ್ನು ಒದಗಿಸಲು ಮುಂದೆ ಬಂದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1200 ಹಾಸಿಗೆಗಳ ಪ್ರತ್ಯೇಕ ಬ್ಲಾಕ್ ಗುರುತಿಸುವ ಜೊತೆಗೆ ಖಾಸಗಿ ಆಸ್ಪತ್ರೆಯೊಂದನ್ನು ಸಹ ಗುರುತಿಸಲು ಸಹಕರಿಸುವುದಾಗಿ ತಿಳಿಸಿದ್ದಾರೆ.

    ಜನರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು “ಮನೆಯಲ್ಲೇ ಇದ್ದು, ಸೋಂಕು ಮುಕ್ತರಾಗಿರಿ” ಎಂಬ ಘೋಷವಾಕ್ಯವನ್ನು ಪಾಲಿಸಬೇಕಾಗಿದೆ. ಕೊರೊನಾ ತಡೆಯಲು, ಸರ್ಕಾರ-ಖಾಸಗಿ ಸಹಭಾಗಿತ್ವವನ್ನು ಬಲಪಡಿಸಲು ತೀರ್ಮಾನಿಸಲಾಯಿತು. ಸರ್ಕಾರ ಕೊರೊನಾ ತಡೆಯುವುದರೊಂದಿಗೆ ಸೋಂಕಿತರ ಚಿಕಿತ್ಸೆಗೂ ಪೂರ್ವ ಸಿದ್ಧತೆ ನಡೆಸುತ್ತಿದೆ. ಸರ್ಕಾರವು ಜನರಿಗೆ ಈ ಸೋಂಕಿನ ಗಂಭೀರತೆಯನ್ನು ಅರಿವು ಮೂಡಿಸಲು ತೀರ್ಮಾನಿಸಿದೆ. ನಗರ ಪ್ರದೇಶದಲ್ಲಿ ವಾಸವಾಗಿರುವ ಜನರು ದಯವಿಟ್ಟು ಇನ್ನೂ ಕೊರೊನಾ ಸೋಂಕು ಮುಕ್ತವಾಗಿರುವ ಹಳ್ಳಿಗಳಿಗೆ ತೆರಳಬಾರದು. ಕೊರೊನಾ ಹರಡುವುದನ್ನು ತಡೆಯಲು ಸಹಕರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

    ಸಭೆಯ ತೀರ್ಮಾನಗಳು
    1. ರಾಜ್ಯಾದ್ಯಂತ ಮಾರ್ಚ್ 31ರ ವರೆಗೆ ಮೊನ್ನೆ ತಿಳಿಸಿದ 9 ಜಿಲ್ಲೆಗಳಲ್ಲಿ ಸೆಕ್ಷನ್ 144ನ್ನು ಮುಂದುವರಿಸಲಾಗುವುದು. ಎಲ್ಲ ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ ಇತರ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.
    2. ಸಾರಿಗೆ ಮತ್ತು ಗೃಹ ಇಲಾಖೆಯ ಸಭೆ ನಡೆಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಲಾಗಿದೆ. ಹೋಮ್ ಕ್ವಾರಂಟೈನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೀರ್ಮಾನ
    3. ಜೀವನೋಪಾಯಕ್ಕೆ ದೈನಂದಿನ ಆದಾಯದ ಮೇಲೆ ಅವಲಂಬಿತರಾಗಿರುವ ಜನರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಒದಗಿಸಲಾಗುವುದು.
    4. ಬೆಂಗಳೂರು ಕರಗ ಉತ್ಸವ ನಡೆಸಲು ಅವಕಾಶ ಇಲ್ಲ. ದೇವಾಲಯ, ಪ್ರಾರ್ಥನಾಲಯಗಳಲ್ಲಿ ಗುಂಪು ಸೇರುವಂತಿಲ್ಲ.
    5. ಟೆಲಿಕನ್ಸಲ್ಟೇಶನ್ ಗೆ ಅವಕಾಶ. ಚಿಕಿತ್ಸೆ – ಸಲಹೆಗೆ ಹೊರಬರುವ ಅಗತ್ಯ ಇಲ್ಲ.