Tag: ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ

  • ಪ್ರವಾಸಿಗರ ಮನಸೆಳೆಯುವ ಕಡಲಾಳದ ಸ್ಕೂಬಾ ಡೈವಿಂಗ್-ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್

    ಪ್ರವಾಸಿಗರ ಮನಸೆಳೆಯುವ ಕಡಲಾಳದ ಸ್ಕೂಬಾ ಡೈವಿಂಗ್-ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್

    ಕಾರವಾರ : ಕಡಲಾಳದ ವಿಸ್ಮಯ ನೋಡಬೇಕೆಂದರೇ ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಈ ವಿಸ್ಮಯ ಜಗತ್ತನ್ನು ನೋಡಲು ವಿದೇಶಕ್ಕೂ ಅಥವಾ ಅಂಡಮಾನ್ ನಿಕೋಬಾರ್ ಗೆ ತೆರಳಿ ಸಾವಿರಾರು ರೂ. ವ್ಯಯಿಸಿ ಕಣ್ತುಂಬಿಕೊಳ್ಳಬೇಕಿತ್ತು. ಆದರೆ ಈಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ನೇತ್ರಾಣಿ ಗುಡ್ಡದ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಗೆ ಅವಕಾಶ ನೀಡಲಾಗಿದೆ.

    ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಸ್ಕೂಬಾ ಡೈವ್ ಗೆ ಕಳೆದ ಒಂದು ವರ್ಷಗಳಿಂದ ಅವಕಾಶ ಮಾಡಿಕೊಟ್ಟಿದ್ದು, ಮೊದಲ ಬಾರಿಗೆ ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್ ನಡೆಯಿತು. ಎರಡು ದಿನಗಳಿಂದ ದೇಶ ವಿದೇಶದ 150 ಸ್ಕೂಬಾ ಡೈವರ್ಸ್ ಗಳು ಸಮುದ್ರದಾಳದಲ್ಲಿ ಇಳಿದು ಎಂಜಾಯ್ ಮಾಡಿದರು.

    ಏನಿದು ಸ್ಕೂಬಾ ಡೈವಿಂಗ್?
    ಆಮ್ಲಜನಕ ಸಿಲಿಂಡರನ್ನು ಹೆಗಲಿಗೆ ಕಟ್ಟಿಕೊಂಡು ನೀರಿಗೆ ಧುಮುಕಿ ಕಡಲಾಳದ ಜಲಚರಗಳ ವೀಕ್ಷಣೆ ಮಾಡುವುದು ಸ್ಕೂಬಾ ಡೈವಿಂಗ್ ಆಗಿದೆ. ಮುರಡೇಶ್ವರದ ನೇತ್ರಾಣಿಯಲ್ಲಿ 2007 ರಿಂದಲೇ ಸ್ಕೂಬಾ ಡೈವಿಂಗ್ ನಡೆಯುತ್ತಿದೆ. ಆದರೆ, ಇದು ಪ್ರವಾಸಿಗರಿಗೆ ತೆರೆದುಕೊಂಡಿರಲಿಲ್ಲ. ಹೆಚ್ಚು ಪ್ರಚಾರವು ಆಗಿರಲಿಲ್ಲ. ಕೆಲವು ಕಡಲ ಜೀವ ವಿಜ್ಞಾನಿಗಳು ಮಾತ್ರ ಇಲ್ಲಿಗೆ ಬಂದು ಈ ಕಾರ್ಯ ನಡೆಸುತ್ತಿದ್ದರು. ಆದರೆ 2017 ರಲ್ಲಿ ಅಧಿಕೃತವಾಗಿ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಾರ್ವಜನಿಕರಿಗೆ ಸ್ಕೂಬಾ ಡೈವಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿದೆ.

    ಯಾರು ಯಾರು ಸ್ಕೂಬಾ ಡೈವಿಂಗ್ ಮಾಡಬಹುದು?
    ತೀವ್ರ ತರಹದ ಕಾಯಿಲೆ ಅಥವಾ ತೊಂದರೆ ಇರುವವರನ್ನು ಹೊರತುಪಡಿಸಿ ಉಳಿದೆಲ್ಲರೂ ಸ್ಕೂಬಾ ಡೈವಿಂಗ್ ಮಾಡಬಹುದಾಗಿದೆ. ವಯಸ್ಸಿನ ಬೇಧವಿಲ್ಲ. ನಿಮಗೆ ಈಜಲು ಬರಬೇಕೆಂದಿಲ್ಲ. ಅನುಭವಿ ತರಬೇತುದಾರರ ತಂಡ ನಮ್ಮನ್ನು ನೀರಿನಾಳಕ್ಕೆ ಕರೆದೊಯ್ದು ವಾಪಸ್ ಕರೆ ತರುತ್ತದೆ. ಇದಕ್ಕಾಗಿ ನುರಿತ ಸ್ಕೂಬಾ ತರಬೇತಿದಾರರು ಅರ್ಧ ಗಂಟೆಗಳ ಕಾಲ ಮಾಹಿತಿ ಮತ್ತು ತರಬೇತಿ ನೀಡುತ್ತಾರೆ.

    ನೇತ್ರಾಣಿ ಗುಡ್ಡದ ಮಹತ್ವವೇನು?
    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರಡೇಶ್ವರ ಕಡಲ ತೀರದಿಂದ ಅರಬ್ಬಿ ಸಮುದ್ರದಲ್ಲಿ (10 ನಾಟಿಕಲ್ ಮೈಲು) 19 ಕಿಲೋಮೀಟರ್ ಬೋಟ್ ನಲ್ಲಿ ಸಾಗಿದರೆ ನೇತ್ರಾಣಿ ಗುಡ್ಡ ಸಿಗುತ್ತದೆ. ಸುಮಾರು 2 ಕಿಲೋಮೀಟರ್ ಸುತ್ತಳತೆ ಹೊಂದಿರುವ ಬೃಹದಾಕಾರದ ಕಲ್ಲುಬಂಡೆಗಳಿಂದ ಆವೃತವಾಗಿದೆ.

    ಅಪರೂಪದ ಜೀವ ವೈವಿದ್ಯ: ನೇತ್ರಾಣಿ ದ್ವೀಪ ಜಲಚರಗಳ ಜೊತೆ ಅಪರೂಪದ ಕಾಡು ಕುರಿ ಹಾಗೂ ಪಕ್ಷಿಗಳಿಗೂ ವಾಸಸ್ಥಳವಾಗಿದೆ. ಪಾರಿವಾಳದ ದ್ವೀಪ ಎಂದೇ ಪ್ರಸಿದ್ಧವಾಗಿದ್ದು, ಈ ಹಿಂದೆ ಗುಡ್ಡದ ಬಳಿ ಭಾರತೀಯ ನೌಕಾದಳವು ಸಮರಾಭ್ಯಾಸ ಮಾಡುತಿತ್ತು. ಪರಿಸರವಾದಿಗಳ ಹೋರಾಟದಿಂದ ಈಗ ನಿಲ್ಲಿಸಲಾಗಿದೆ. ಈ ಗುಡ್ಡವನ್ನ ಹತ್ತಿದರೆ ಕಾಡು ಕುರಿಗಳು, ಕಾಡುಕೋಳಿ, ಪಾರಿವಾಳ, ವಿವಿಧ ಜಾತಿಯ ಹದ್ದು, ಗಿಡುಗಗಳ ಜೊತೆ ಸಮರಾಭ್ಯಾಸದ ವೇಳೆ ಉಳಿದ ಕಾಲಿಷಲ್ ಗಳು, ನಿಷ್ಕ್ರಿಯ ಬಾಂಬ್‍ಗಳು ನೋಡಸಿಗುತ್ತದೆ.

    ಗುಡ್ಡದ ಭಾಗದಲ್ಲಿ ಗುಹೆ ಕೂಡ ಇದ್ದು ಇದರ ವೀಕ್ಷಣೆಗೆ ನಿಷೇಧವಿದೆ. ಇನ್ನು ಈ ಗುಡ್ಡದ ಬಳಿ ನೀಲಿ ಬಣ್ಣದ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದರೆ ಹವಳದ ದಿಬ್ಬ, ಪ್ಯಾರೆಟ್ ಫಿಶ್, ಕ್ವೀನ್ ಫಿಷ್, ಮಿಂಚುಳ್ಳಿ ಮೀನು, ಚಿಟ್ಟೆಮೀನು, ಮುಳ್ಳಿನ ಮೀನು, ಸಮುದ್ರದ ಹಾವುಗಳು, ಜಲ್ಲಿ ಫಿಷ್, ವಿವಿಧ ಬಣ್ಣದ ಮೀನು, ವಿವಿಧ ಜಾತಿಯ ಸಮುದ್ರ ಸಸ್ಯಗಳು, ಸಮುದ್ರದ ಆಮೆಗಳು, ಚಿಕ್ಕ ಜಾತಿಯ ಷಾರ್ಕ್‍ಗಳು, ಡಾಲ್ಫಿನ್‍ಗಳು ಕೂಡ ನೋಡಲು ಸಿಗುತ್ತವೆ.

    ಸ್ಕೂಬಾ ಡೈವಿಂಗ್ ಗಾಗಿ ಜಿಲ್ಲಾಡಳಿ ಮಾನ್ಯತೆ ಪಡೆದ ಮೂರು ಸಂಸ್ಥೆಗಳಿಗೆ ಗುತ್ತಿಗೆ ನೀಡಿದೆ. ವೆಸ್ಟ್ ಕೋಸ್ಟ್ ಅಡ್ವೆಂಚರ್ಸ್, ನೇತ್ರಾಣಿ ಅಡ್ವೆಂಚರ್ಸ್ ಹಾಗೂ ಡೈವ್ ಗೋವಾ ಎಂಬ ಮೂರು ಕಂಪನಿಗಳು ಇಲ್ಲಿ ಸ್ಕೂಬಾ ಡೈವಿಂಗ್ ನಡೆಸುತ್ತಿವೆ. ಇವುಗಳಲ್ಲಿ ನೇತ್ರಾಣಿ ಅಡ್ವೆಂಚರ್ಸ್ ಹಾಗೂ ಡೈವ್ ಗೋವಾ ಎಂಬ ಕಂಪನಿಗಳು ಹೆಚ್ಚಿನ ತಾಂತ್ರಿಕತೆ ಹಾಗೂ ಭದ್ರತೆವದಗಿಸುವ ಜೊತೆ ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಪ್ರತಿ ವ್ಯಕ್ತಿಗೆ 5000 ದರ ನಿಗದಿ ಮಾಡಿದೆ. ಆದರೇ ಸಮುದ್ರದಲ್ಲಿ ತೊಂದರೆಗಳಾದರೇ ಯಾವ ಗುತ್ತಿಗೆ ಪಡೆದ ಕಂಪನಿಗಳೂ ಪ್ರಥಮ ಚಿಕಿತ್ಸೆಗೆ ಬೇಕಾದ ಸವಲತ್ತುಗಳನ್ನು ಹೊಂದಿರದ ಕಾರಣ ಡೈವಿಂಗ್ ಮಾಡುವವರು ಮುನ್ನೆಚ್ಚರಿಕೆ ವಹಿಸುವುದುವಳಿತು. ಇಲ್ಲವಾದಲ್ಲಿ ಪ್ರಾಣಕ್ಕೆ ಸಂಚುಕಾರ ಕಟ್ಟಿಟ್ಟ ಬತ್ತಿಯಾಗಿದೆ.

    ಸಂಪರ್ಕ ಹೇಗೆ ..?
    ಸ್ಕೂಬಾ ಡೈವಿಂಗ್ ಎಂಬುದು ಒಂದು ದಿನದ ಪ್ಯಾಕೇಜ್. ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರ ತೀರದಿಂದ 19 ಕಿಮೀ ದೂರದಲ್ಲಿರುವ ನೇತ್ರಾಣಿ ದ್ವೀಪಕ್ಕೆ ದೋಣಿಯಲ್ಲಿ ಬೆಳಗ್ಗೆ ತೆರಳಿದರೆ ಸಂಜೆ ಹೊತ್ತಿಗೆ ವಾಪಸ್ ಬರಬಹುದು. ದೋಣಿಯಿಂದಲೇ ಸಮುದ್ರಾಳಕ್ಕೆ ಧುಮುಕುವ ವ್ಯವಸ್ಥೆ ಮಾಡಲಾಗುತ್ತದೆ.

    ಮಹಾರಾಷ್ಟ್ರ, ಗೋವಾ ಬೆಂಗಳೂರಿನಿಂದ ಇಲ್ಲಿಗೆ ಬರುವವರು ಸಾರಿಗೆ ಮುಖಾಂತರ ಅಥವಾ ವಿಮಾನದ ಮೂಲಕವೂ ಬರಬಹುದಾಗಿದ್ದು, ವಿಮಾನದಲ್ಲಿ ಬರುವವರು ಮಂಗಳೂರಿನಿಂದ ಬರಬಹುದಾಗಿದೆ. ರೈಲ್ವೆ ಸಂಪರ್ಕ ಕೂಡ ಇರುವುದರಿಂದ ಹಣ ಉಳಿತಾಯ ಮಾಡಬಹುದು.

    ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸ್ಕೂಬಾ ಡೈವಿಂಗ್ ಗೆ ಹೆಚ್ಚಿನ ಪ್ರೋತ್ಸಹ ನೀಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ದಲ್ಲಿ ಮೊದಲ ಬಾರಿ ಸ್ಕೂಬಾ ಡೈವಿಂಗ್ ಪ್ರಾರಂಭಿಸಿದ್ದು ಪ್ರತಿ ದಿನ 60 ಕ್ಕೂ ಹೆಚ್ಚು ಜನರು ಡೈವಿಂಗ್ ಮಾಡುತಿದ್ದಾರೆ. ಇನ್ನು ಕಾರವಾರ ಹಾಗೂ ಉಡುಪಿಯ ಕಾಪುವಲ್ಲಿ ಸಹ ಸ್ಕೂಬಾ ಡೈವಿಂಗ್ ಗೆ ಅವಕಾಶ ವದಗಿಸಲು ಅನುಮತಿ ನೀಡಲಾಗಿದ್ದು ಪ್ರಾರಂಭದ ಹಂತದಲ್ಲಿದೆ. ಇನ್ನು ಕರ್ನಾಟಕದಲ್ಲೇ ಮೊದಲ ಬಾರಿ ಎರಡು ದಿನಗಳ ಸ್ಕೂಬಾ ಡೈವಿಂಗ್ ಫೆಸ್ಟಿವಲ್ ಆಯೋಜನೆ ಮಾಡುವ ಮೂಲಕ ಪ್ರವಾಸಿರನ್ನು ಹೆಚ್ಚು ಆಕರ್ಷಿಸುವ ಜೊತೆಗೆ ವಿದೇಶಿಯರನ್ನೂ ಆಕರ್ಷಿಸುತ್ತಿದೆ. ಇದಲ್ಲದೇ ಕಾರವಾರ ಜಿಲ್ಲಾಡಳಿತ ಡೈವಿಂಗ್ ತರಬೇತಿ ಪಡೆಯುವವರಿಗಾಗಿ ಕಲಿಕಾ ಕೇಂದ್ರವನ್ನು ಸದ್ಯದರಲ್ಲೇ ಸ್ಥಾಪನೆ ಮಾಡಲಿದೆ.