Tag: ಕರ್ನಾಟಕ ವಿಶ್ವವಿದ್ಯಾಲಯ

  • ಕರ್ನಾಟಕ ವಿವಿಯಲ್ಲಿದ್ದ ಉಗಾಂಡ ದೇಶದ ವಿದ್ಯಾರ್ಥಿ ನಾಪತ್ತೆ

    ಕರ್ನಾಟಕ ವಿವಿಯಲ್ಲಿದ್ದ ಉಗಾಂಡ ದೇಶದ ವಿದ್ಯಾರ್ಥಿ ನಾಪತ್ತೆ

    ಧಾರವಾಡ: ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ (Karnataka University) ಸಂಶೋಧನಾ ವಿದ್ಯಾರ್ಥಿ (Student) ಉಗಾಂಡ (Uganda) ದೇಶದ ವಿದ್ಯಾರ್ಥಿಯೊಬ್ಬ ಹೇಳದೇ ಕೇಳದೇ ಎಲ್ಲೋ ಹೋಗಿ ಬಿಟ್ಟಿದ್ದಾನೆ. ಈಗ ಆತನಿಗಾಗಿ ಕರ್ನಾಟಕ ವಿವಿ ಆಡಳಿತ ಮಂಡಳಿ ಶೋಧ ನಡೆಸುತ್ತಿದೆ.

    ವಿಶ್ವವಿದ್ಯಾಲಯದ ಭೀಮಾ ವಸತಿ ನಿಲಯದಲ್ಲಿದ್ದ ಉಗಾಂಡಾದ ಜೋಯೆಲ್ ಕನ್ಯನಾ ಎಂಬ ವಿದ್ಯಾರ್ಥಿ ಸಂಶೋಧನಾ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸ ಮಾಡುತ್ತಿದ್ದ. ತತ್ವಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಮಾಡುತ್ತಿದ್ದ ಈತ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಾಪತ್ತೆಯಾಗಿದ್ದು, ಆತನ ಶೋಧ ಕಾರ್ಯಕ್ಕೆ ಕರ್ನಾಟಕ ವಿವಿ ಆಡಳಿತ ಮಂಡಳಿ ಉಗಾಂಡ ಸರ್ಕಾರಕ್ಕೂ ಪತ್ರ ಬರೆದಿದೆ. ಅಲ್ಲದೇ ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಲಾಗಿದೆ.

    ಕವಿವಿಯ ಭೀಮಾ ವಸತಿ ನಿಲಯದಲ್ಲಿದ್ದ ಈ ಜೋಯೆಲ್, ಲಾಕ್‍ಡೌನ್ ಅವಧಿಯಲ್ಲೂ ವಸತಿ ನಿಲಯದಲ್ಲಿದ್ದುಕೊಂಡೇ ಓದುತ್ತಿದ್ದ. ಆದರೆ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ತನ್ನ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿರುವ ಈತ ಮರಳಿ ಬಂದೇ ಇಲ್ಲ. ಪಿಎಚ್.ಡಿ ಕುರಿತು ಮಾರ್ಗದರ್ಶನ ನೀಡುತ್ತಿದ್ದ ಶಿಕ್ಷಕರಿಗೂ ಈತ ಭೇಟಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮೇನಲ್ಲಿ ತನಿಖೆ ನಡೆಸಿದಾಗ ಅವರು ನಾಪತ್ತೆ ಆಗಿರುವುದು ತಿಳಿಸಿದೆ. ಹೀಗಾಗಿ ಜುಲೈನಲ್ಲಿ ಆತನ ಪತ್ತೆಗಾಗಿ ಉಗಾಂಡ ಸರ್ಕಾರ ಹಾಗೂ ಹುಬ್ಬಳ್ಳಿ, ಧಾರವಾಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ. ಇದೀಗ ಉಂಗಾಂಡ ಹೈಕಮಿಷನರ್‌ಗೂ ದೂರು ನೀಡಲಾಗಿದೆ. ಇದನ್ನೂ ಓದಿ: ಪಿಒಕೆ ಮರಳಿ ಪಡೆದಾಗಲೇ ನಮ್ಮ ಸಂಕಲ್ಪ ಪೂರ್ಣಗೊಳ್ಳುತ್ತದೆ: ರಾಜನಾಥ್ ಸಿಂಗ್

    ತತ್ವಶಾಸ್ತ್ರ ವಿಷಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಜೋಯೆಲ್, ಭೀಮಾ ವಸತಿ ನಿಲಯದ 6ನೇ ನಂಬರ್ ಕೊಠಡಿಯಲ್ಲಿ ಉಳಿದುಕೊಂಡಿದ್ದ. ತಾನು ಹಾಸ್ಟೆಲ್ ಬಿಟ್ಟು ಹೋಗುವಾಗ ತನ್ನ ಕೊಠಡಿಗೆ ಬೀಗ ಹಾಕಿಕೊಂಡು ಹೋಗಿದ್ದು, ಬೀಗ ಕೈಯನ್ನೂ ತನ್ನ ಜೊತೆಗೆ ತೆಗೆದುಕೊಂಡು ಹೋಗಿದ್ದಾನೆ. ಆತ ಹೋದಾಗಿನಿಂದ ಯಾರೂ ಕೂಡ ಆ ಕೊಠಡಿಯ ಬೀಗ ತೆಗೆದು ನೋಡಿಲ್ಲ. ಇನ್ನು ಇಲ್ಲಿ ಇದ್ದಾಗ ಈ ವಿದ್ಯಾರ್ಥಿಯ ಪಾಸ್‍ಪೋರ್ಟ್ ವೀಸಾ ಕೂಡಾ ಮುಗಿದಿತ್ತು. ಹೀಗಾಗಿ ಅವನಿಗೆ ವೀಸಾ ಅವಧಿ ವಿಸ್ತರಣೆ ಮಾಡಿಕೊಳ್ಳಲು ಮಾಹಿತಿ ನೀಡಲಾಗಿತ್ತು. ಅಷ್ಟರಲ್ಲೇ ಈತ ವೀಸಾ ವಿಸ್ತರಣೆ ಮಾಡದೇ ಹೇಳದೇ ಕೇಳದೇ ಹೋಗಿದ್ದಾನೆ. ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‍ಗೆ ಬೈಕ್ ಸ್ಟಂಟ್ ಮಾಡಿದ ಜೋಡಿಗಳು

    Live Tv
    [brid partner=56869869 player=32851 video=960834 autoplay=true]

  • ಕುಲಪತಿಗಳ ಸರ್ಕಾರಿ ಬಂಗಲೆಗೆ ಬೇಕಾಬಿಟ್ಟಿ ಖರ್ಚು – ಕುಲಪತಿ ಮೇಲೆ ಗಂಭೀರ ಆರೋಪ

    ಕುಲಪತಿಗಳ ಸರ್ಕಾರಿ ಬಂಗಲೆಗೆ ಬೇಕಾಬಿಟ್ಟಿ ಖರ್ಚು – ಕುಲಪತಿ ಮೇಲೆ ಗಂಭೀರ ಆರೋಪ

    ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು ಬೇಕಾಬಿಟ್ಟಿಯಾಗಿ ಸರ್ಕಾರಿ ಬಂಗಲೆಗೆ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಧಾರವಾಡದಲ್ಲಿ ಹೇಳಿಬರುತ್ತಿದೆ.

    ಕುಲಪತಿಗಳು ಸುಖಾಸುಮ್ಮನೆ ಖರ್ಚು ಮಾಡುತ್ತಿದ್ದಾರೆ ಎಂಬುದು ಆರ್‌ಟಿಐ ಮಾಹಿತಿಯನ್ನು ಬಯಲು ಮಾಡಿದೆ. ಈಗ ಇರುವ ಕುಲಪತಿ ಕೆ.ಬಿ.ಗುಡಸಿ ಅವರು ಬಂದು ಒಂದು ವರ್ಷ ಕಳೆಯುತ್ತಾ ಬಂತು. ಆದರೆ ಅಷ್ಟರಲ್ಲೇ ಅವರು ಕರ್ನಾಟಕ ವಿವಿಯ ಬಂಗಲೆಗೆ ಶಿಫ್ಟ್ ಕೂಡಾ ಆಗಿದ್ದಾರೆ. ಇಲ್ಲಿಗೆ ಬಂದ ಮೇಲೆ ಅವರು ಆ ಮನೆಗೆ 11 ಲಕ್ಷ ಖರ್ಚು ಮಾಡಿದ್ದಾರೆ. ಇದನ್ನ ಟೆಂಡರ್ ಕರೆಯದೇ, ತುಂಡು ಗುತ್ತಿಗೆ ನೀಡಿದ್ದಾರೆ. ಹೀಗಾಗಿ 1 ಲಕ್ಷದ ಒಳಗಿನ ಕೆಲಸದ ಮಾಹಿತಿ ನೀಡಲಾಗಿದೆ. ಈ ಕಾಮಗಾರಿಯಲ್ಲಿ ಕಿಟಕಿಯ ಕರ್ಟನ್, ಹೊಸ ಕಾಟು, ತಲೆದಿಂಬು ಸೇರಿ ಹಲವು ಬಿಲ್ ಹಚ್ಚಲಾಗಿದೆ. ಇದನ್ನೂ ಓದಿ: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಗಮನ ಸೆಳೆದ ಸೀಮಂತ ಕಾರ್ಯ

    ಈ ಖರ್ಚು ಮಾಡುವುದಕ್ಕೆ ಏನೂ ಅಭ್ಯಂತರ ಇಲ್ಲ. ಆದರೆ ಇವರು ಬರುವ ಕೆಲವೇ ದಿನಗಳ ಹಿಂದೆ, ಇದೇ ಬಂಗಲೆಗೆ 33 ಲಕ್ಷ ಖರ್ಚು ಮಾಡಿದ್ದಾರೆ. ಅದು ಯಾಕೆ ಅಂತಾ ಗೊತ್ತಾಗಬೇಕು. ಒಟ್ಟು ಒಂದೇ ವರ್ಷದಲ್ಲಿ 45 ಲಕ್ಷ ರೂ. ಈ ಬಂಗಲೆಗೆ ಹೋಗಿದೆ. ಅದರಲ್ಲಿ ಹೊಸ ಬಂಗಲೆಯನ್ನೆ ಕಟ್ಟಬಹುದಾಗಿತ್ತು ಎಂದು ಮಾಜಿ ಸಿಂಡಿಕೇಟ್ ಸದಸ್ಯ ಜಯಂತ್ ಆರೋಪಿಸಿದ್ದಾರೆ.

    ಈ ವಿಷಯ ಇಲ್ಲಿಗೆ ನಿಂತಿಲ್ಲ. ಇದು ರಾಜ್ಯಪಾಲರ ಗಮನಕ್ಕೆ ಕೂಡಾ ತರಲಾವುದು. ಸರ್ಕಾರಿ ದುಡ್ಡು ಅಂದರೆ ಅದು ಜನರ ದುಡ್ಡು. ಅಧಿಕಾರಕ್ಕೆ ಬಂದ ಮೇಲೆ ಹೇಗೆಲ್ಲಾ ಬಳಕೆ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಹಿಂದೆ ಇದ್ದ ಕುಲಪತಿಗಳೂ ಈ ಬಂಗಲೆಗೆ ಖರ್ಚು ಮಾಡಿದ್ದಾರೆ. ವಾಲಿಕಾರ್ ಕುಲಪತಿ ಆಗಿದ್ದಾಗ 7 ಲಕ್ಷದಷ್ಟು ಖರ್ಚು ಮಾಡಿದ್ದಾರೆ. ಅದರ ನಂತರ ಪ್ರಮೋದ ಗಾಯ್ ಇದ್ದಾಗಲೂ 9 ಲಕ್ಷ ಖರ್ಚು ಮಾಡಿದ್ದಾರೆ. ಇದನ್ನೂ ಓದಿ: ಹಾಲಿವುಡ್ ಖ್ಯಾತ ನಟಿ ಜೊತೆ ಸೆಕ್ಸ್ ಮಾಡಿದ್ದೇನೆ ಎಂಬ ಹೇಳಿಕೆಗೆ 50 ಲಕ್ಷ ಆಫರ್: ಖ್ಯಾತ ನಟ ಬಿಚ್ಚಿಟ್ಟ ರಹಸ್ಯ

    ಈ ಲೆಕ್ಕದಂತೆಯೇ ಹೋದರೆ ಈ ಬಂಗಲೆಗೆ 10 ವರ್ಷಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ಆದರೆ ಸರ್ಕಾರದ ಉನ್ನತ ಶಿಕ್ಷಣ ಸಚಿವರಿಗೆ ಈ ಬಗ್ಗೆ ಕೇಳಿದರೆ, ನನ್ನ ವ್ಯಾಪ್ತಿಗೆ ಬರಲ್ಲ ಎಂದು ಹೇಳುತ್ತಿದ್ದಾರೆ. ಸದ್ಯ ಇದನ್ನ ಸರ್ಕಾರವೇ ಬಗೆಹರಿಸಬೇಕಿದೆ.

  • ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕರ್ನಾಟಕ ವಿವಿ – ಅನಿರ್ದಿಷ್ಟಾವಧಿಗೆ ಪರೀಕ್ಷೆ ಮುಂದೂಡಿಕೆ

    ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕರ್ನಾಟಕ ವಿವಿ – ಅನಿರ್ದಿಷ್ಟಾವಧಿಗೆ ಪರೀಕ್ಷೆ ಮುಂದೂಡಿಕೆ

    ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನ ಅನಿರ್ದಿಷ್ಟಾವಧಿಗೆ ಮುಂದೂಡಿ ಆದೇಶ ಮಾಡಲಾಗಿದೆ.

    ಇವತ್ತು ಧಾರವಾಡ ಕರ್ನಾಟಕ ವಿವಿಯ ಕುಲಪತಿ ಕಚೇರಿ ಬಳಿ ದಿಢೀರನೇ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ನಮಗೆ ಸದ್ಯಕ್ಕೆ ಪರೀಕ್ಷೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೊಂಕು ಹೆಚ್ಚಳವಾಗುಗತ್ತಿದೆ. ಹಲವು ಹಾಸ್ಟೆಲ್‍ಗಳಲ್ಲಿ ಕೊವಿಡ್ ಪ್ರಕರಣ ಬಂದಿರುವ ಹಿನ್ನೆಲೆ ಪರೀಕ್ಷೆ ಬೇಡ ಎಂದು ಬೇಡಿಕೆ ಇಟ್ಟ ವಿದ್ಯಾರ್ಥಿಗಳು, ಕೊರೊನಾ ಕಡಿಮೆಯಾದ ಮೇಲೆ ಪರೀಕ್ಷೆ ನಡೆಸಿ ಎಂದು ಮನವಿ ಮಾಡಿಕೊಂಡಿದ್ದರು.

    ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಕರ್ನಾಟಕ ವಿವಿ ಆಡಳಿತ ಮಂಡಳಿ, ಅನಿರ್ಧಿಷ್ಟಾವಧಿಗೆ ಪರೀಕ್ಷೆ ಮುಂದೂಡಿ ಆದೇಶ ಮಾಡಿದೆ. ಕರ್ನಾಟಕ ವಿವಿ ಶಾರ್ಟ ನೋಟಿಸ್ ನೀಡಿ ಪರೀಕ್ಷೆ ನಡೆಸುತ್ತೇವೆ, ತಾವು ಅದಕ್ಕೆ ಸಹಕರಿಸಿ ಎಂದು ಸೂಚನೆ ನೀಡಿದರು.

    ಹಾಸ್ಟೆಲ್‍ಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಸ್ಟೆಲ್ ಸ್ಯಾನಿಟೈಸ್ ಮಾಡಿದ ಬಳಿಕವೇ ಒಳಗೆ ಬರುತ್ತೇವೆ. ಪರೀಕ್ಷೆ ನಡೆಸುವ ಒಂದು ವಾರ ಮುಂಚಿತವಾಗಿ ನಮಗೆ ಸೂಚನೆ ನೀಡಬೇಕು. ಹಾಸ್ಟೆಲ್ ಕ್ಲೀನ್ ಮಾಡಿಸಿದರೆ ಹಿಂದಿರುಗುತ್ತೇವೆ. ಸದ್ಯಕ್ಕೆ ಪರೀಕ್ಷೆ ಮುಂದೂಡಿದ್ದಕ್ಕೆ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

  • ಧಾರವಾಡದಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ- ಪರೀಕ್ಷೆ ಸಮಯದಲ್ಲೇ ವಕ್ಕರಿಸಿದ ಸೋಂಕು

    ಧಾರವಾಡದಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ- ಪರೀಕ್ಷೆ ಸಮಯದಲ್ಲೇ ವಕ್ಕರಿಸಿದ ಸೋಂಕು

    – ಬಸ್ ಇಲ್ಲದ್ದಕ್ಕೆ ಕರ್ನಾಟಕ ವಿವಿ ಪರೀಕ್ಷೆ ಮುಂದೂಡಿಕೆ

    ಧಾರವಾಡ: ವಿದ್ಯಾಕಾಶಿಯಲ್ಲಿ ವಿದ್ಯಾರ್ಥಿಗಳಲ್ಲಿ ಕೊರೊನಾ ಸೊಂಕು ಹೆಚ್ಚು ಕಂಡು ಬರುತ್ತಿದೆ. ಇಷ್ಟು ದಿನ ಕಾಲೇಜುಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ ಇದೀಗ ಹಾಸ್ಟೆಲ್‍ಗೂ ಮಹಾಮಾರಿ ಒಕ್ಕರಿಸಿಕೊಳ್ಳುತ್ತಿದೆ.

    ಸಪ್ತಾಪುರದಲ್ಲಿರುವ ಗೌರಿಶಂಕರ ಹಾಸ್ಟೆಲ್‍ನ 10, ಕೆಸಿಡಿ ಕಾಲೇಜಿನಲ್ಲಿರುವ ಕಾವೇರಿ ಹಾಸ್ಟೆಲ್‍ನಲ್ಲಿ 7 ಹಾಗೂ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ 13 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆ ಪರೀಕ್ಷೆ ಸಮಯದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದೆ. ಮತ್ತೊಂದು ಕಡೆ ಬಿವಿಬಿ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಸೋಂಕಿತರಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿ ಮಾಡಲಾಗಿದೆ.

    ಹಾಸ್ಟೆಲ್‍ಗಳಲ್ಲಿರುವ ಕೊರೊನಾ ಸೋಂಕಿತ ವಿದ್ಯಾರ್ಥಿಗಳಿಗೆ ಅಲ್ಲೇ ಐಸೋಲೇಷನ್ ಮಾಡಲಾಗುತ್ತಿದೆ. ರೋಗಲಕ್ಷಣ ಕಂಡು ಬಂದರೆ ಮಾತ್ರ ಅವರಿಗೆ ಆಸ್ಪತ್ರೆಗೆ ಕಳಿಸುವ ಕೆಲಸ ನಡೆದಿದೆ. ಕರ್ನಾಟಕ ವಿವಿ ವ್ಯಾಪ್ತಿಗೆ ಬರುವ ಕಾವೇರಿ ಹಾಸ್ಟೇಲ್‍ನಲ್ಲಿ ವಿದ್ಯಾರ್ಥಿನಿಯರೇ ಇದ್ದು, ಕೆಲವರನ್ನು ಪೋಷಕರು ವಾಪಸ್ ಕರೆದುಕೊಂಡು ಹೋಗಿದ್ದಾರೆ. ರೋಗ ಲಕ್ಷಣ ಇಲ್ಲದೆಯೇ ಸೊಂಕು ಬರುತಿದ್ದು, ಆರ್ಟಿಪಿಸಿಆರ್ ಮಾಡಿದ ವರದಿ ಬಳಿಕ ಸೋಂಕು ಇರುವದು ಗೊತ್ತಾಗುತ್ತಿದೆ.

    ಕಳೆದ ವಾರವಷ್ಟೇ ಧಾರವಾಡದ ಎಸ್‍ಡಿಎಂ ಇಂಜಿನಯರಿಂಗ್ ಕಾಲೇಜಿನಲ್ಲಿ 15 ಹಾಗೂ ಹುಬ್ಬಳ್ಳಿಯ ವಿದ್ಯಾನಿಕೇತನ ಕಾಲೇಜಿನಲ್ಲಿ 15 ವಿದ್ಯಾರ್ಥಿಗಳಿಗೆ ಕೊವಿಡ್ ಪತ್ತೆಯಾಗಿತ್ತು.

    ಮೂರನೇ ಬಾರಿಗೆ ವಿವಿ ಪರೀಕ್ಷೆ ಮುಂದೂಡಿಕೆ
    ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮತ್ತೆ ಮುಂದೂಡಲಾಗಿದೆ. ಕಳೆದ ಒಂದು ವಾರದಲ್ಲಿ ಮೂರನೇ ಬಾರಿಗೆ ಪರೀಕ್ಷೆಗಳನ್ನು ಮುಂದೂಡಿ ಕರ್ನಾಟಕ ವಿವಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಸಾರಿಗೆ ಬಸ್ ಆರಂಭವಾಗಬಹುದು ಎಂಬ ಉದ್ದೇಶದಿಂದ ಪದೇ ಪದೇ ಪರೀಕ್ಷೆ ಮುಂದೂಡಲಾಗುತ್ತಿದೆ ಎಂದು ಕಾರಣ ನೀಡಿದ್ದಾರೆ. ಸೋಮವಾರ ಹಾಗೂ ಮಂಗಳವಾರದ ಎರಡು ದಿನ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿದ ಕರ್ನಾಟಕ ವಿವಿ, ಮುಂದಿನ ದಿನಾಂಕ ಪ್ರಕಟ ಮಾಡುವದಾಗಿ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ವಿವಿ ಕುಲಪತಿ ಕೆ.ಬಿ.ಗುಡಸಿ, ಗ್ರಾಮೀಣ ಭಾಗದಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇಲ್ಲದೇ ಇರುವುದರಿಂದ ಪರೀಕ್ಷೆ ನಡೆಸುತ್ತಿಲ್ಲ, ಬಸ್ ಆರಂಭಕ್ಕಾಗಿ ಕಾಯುತಿದ್ದೇವೆ, ಒಮ್ಮೆ ಬಸ್ ಆರಂಭವಾದರೆ ಪರೀಕ್ಷೆ ಮುಗಿಸುವದಾಗಿ ತಿಳಿಸಿದರು.

  • ಕವಿವಿ ಹಸಿರುಹಾಸಿನ ಮೇಲೆ ಸರ್ಕಾರಿ ನೌಕರಿ ಕನಸು ಹೊತ್ತವರಿಗೆ ‘ಜ್ಞಾನದಾಸೋಹ’

    ಕವಿವಿ ಹಸಿರುಹಾಸಿನ ಮೇಲೆ ಸರ್ಕಾರಿ ನೌಕರಿ ಕನಸು ಹೊತ್ತವರಿಗೆ ‘ಜ್ಞಾನದಾಸೋಹ’

    ಧಾರವಾಡ: ಸರ್ಕಾರಿ ಉದ್ಯೋಗ ಪಡೆಯಬೇಕೆಂದು ಓದುತ್ತಿರುವ ಅಭ್ಯರ್ಥಿಗಳಿಗೆ ಧಾರವಾಡ ಕವಿವಿ ಆವರಣದ ಹಸಿರುಹಾಸಿನ ಮೇಲೆ ಉಚಿತ ತರಬೇತಿ ನೀಡಲಾಗುತ್ತಿದೆ. ತಾನು ಕಲಿಯಯಲು ಕಷ್ಟ ಪಟ್ಟದ್ದನ್ನ ಇನ್ನೊಬ್ಬರು ಪಡಬಾರದು ಎಂದು, ವಿದ್ಯಾರ್ಥಿಗಳಿಗೆ ಫ್ರೀ ಕೊಚಿಂಗ್ ಕೊಡುತ್ತಿರುವ ಸಂಶೋಧನಾ ವಿದ್ಯಾರ್ಥಿ ಅನಿಲ್ ರಜಪೂತ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ.

    ವಿದ್ಯಾನಗರಿ ಧಾರವಾಡದ ಕರ್ನಾಟಕ ವಿವಿ ಆವರಣದಲ್ಲಿರುವ ಗಾರ್ಡನ್ ಲೈಬ್ರರಿಯಲ್ಲಿ ಆಸಕ್ತ ವಿದ್ಯಾರ್ಥಿಗಳು ಇಲ್ಲಿ ಉಚಿತ ತರಬೇತಿ ಪಡೆಯುತ್ತಿದ್ದಾರೆ. ಈ ಗಾರ್ಡನ್ ನಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ವ್ಯಾಸಂಗ ಮಾಡುತ್ತಿರೋದರಿಂದ ಇದನ್ನು ಗಾರ್ಡನ್ ಲೈಬ್ರರಿ ಎಂದು ಕರೆಯಲಾಗುತ್ತದೆ. ಈ ಗಾರ್ಡನ್ ನ ಒಂದು ಮೂಲೆಯಲ್ಲಿ ಅನಿಲ್ ರಜಪೂತ ವಿಶ್ವವಿದ್ಯಾಲಯದ ಅನುಮತಿ ಪಡೆದು ತರಬೇತಿಯನ್ನು ಆರಂಭಿಸಿದ್ದಾರೆ.

    ಉತ್ತರ ಕರ್ನಾಟಕದ ಹಲವು ಭಾಗಗಳಿಂದ ಸರ್ಕಾರಿ ಉದ್ಯೋಗದ ಕನಸು ಹೊತ್ತು ಧಾರವಾಡಕ್ಕೆ ಬರೋ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್ ಕ್ಲಾಸ್‍ಗೆ ಹೋಗಲು ಹಣ ಇರಲ್ಲ. ಇಂಥವರನ್ನು ಗಮನದಲ್ಲಿಟ್ಟುಕೊಂಡು ಅನಿಲ್ ರಜಪೂತ್ ವಿವಿ ಸಹಕಾರದಲ್ಲಿ 9 ತಿಂಗಳ ಹಿಂದೆ ಹಸಿರುಹಾಸಿನ ಮೇಲೆ ಫ್ರೀ ಕೋಚಿಂಗ್ ಕ್ಲಾಸ್ ಆರಂಭಿಸಿದ್ದಾರೆ. ಇಲ್ಲಿಗೆ ನೂರಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಜ್ಜಾಗುತ್ತಿದ್ದಾರೆ.

    ಕೋಚಿಂಗ್ ಪಡೆದವರಲ್ಲಿ ಕೆಲವರು ಕೆಎಎಸ್, ಪಿಎಸ್‍ಐ, ಎಸ್‍ಡಿಸಿ, ಎಫ್‍ಡಿಸಿ ಪರೀಕ್ಷೆಗಳನ್ನು ಪಾಸ್ ಮಾಡಿದ್ದಾರೆ. ಇನ್ನೂ ಕೆಲವರ ಫಲಿತಾಂಶ ಕೂಡಾ ಬರಬೇಕಿದೆ. ಫ್ರೀ ಕೊಚಿಂಗ್ ಪಡೆಯುವ ವಿದ್ಯಾರ್ಥಿಗಳು, ಪರೀಕ್ಷೆಗೆ ಮಾತ್ರ 5 ರೂಪಾಯಿ ಕೊಡಬೇಕು. ಇಲ್ಲಿ ಕಲಿತು ನೌಕರಿ ಪಡೆದವರು ಇದೀಗ ಅನಿಲ್ ಅವರಿಗೆ ಕೋಚಿಂಗ್‍ನಲ್ಲಿ ಸಾಥ್ ನೀಡುತ್ತಿದ್ದಾರೆ.

  • 3 ವರ್ಷದ ಬಾಲಕನನ್ನ ಕಿಡ್ನಾಪ್ ಮಾಡಿ, 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ 16ರ ಪೋರ

    3 ವರ್ಷದ ಬಾಲಕನನ್ನ ಕಿಡ್ನಾಪ್ ಮಾಡಿ, 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ 16ರ ಪೋರ

    ಧಾರವಾಡ: ಮೂರು ವರ್ಷದ ಬಾಲಕನನ್ನು 16 ವರ್ಷದ ಬಾಲಕನೊಬ್ಬ ಕಿಡ್ನಾಪ್ ಮಾಡಿ ಐದು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು ಸಿಕ್ಕಿಬಿದ್ದ ಘಟನೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.

    ಧಾರವಾಡದ ಜಯನಗರದಲ್ಲಿನ ಸಂಕಲ್ಪ ಪಿಜಿ ಸೆಂಟರ್‌ನ ಮಾಲೀಕರ ಮಗುವನ್ನು 16 ವರ್ಷದ ಅಪ್ರಾಪ್ತ ಬಾಲಕ ಇಂದು ಮಧ್ಯಾಹ್ನ ಅಪಹರಿಸಿದ್ದ. ಬಳಿಕ ಭಾರತಿ ಅವರಿಗೆ ಕರೆ ಮಾಡಿ, ನಿಮ್ಮ ಮಗ ನಮ್ಮ ಬಳಿಯೇ ಇದ್ದಾನೆ. ಐದು ಲಕ್ಷ ರೂ. ತಂದುಕೊಟ್ಟು ಮಗನನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದ. ಇದರಿಂದ ಗಾಬರಿಗೊಳಗಾದ ಭಾರತಿ ಪೊಲೀಸರು ಮೊರೆ ಹೋಗಿದ್ದರು.

    ಭಾರತಿ ಅವರಿಗೆ ಕರೆ ಮಾಡಿದ್ದ ಅಪ್ರಾಪ್ತನ ಮೊಬೈಲ್ ನಂಬರ್ ಅನ್ನು ಪೊಲೀಸರು ಟ್ರೇಸ್ ಮಾಡಿದ್ದರು. ಈ ವೇಳೆ ಅಪಹರಣಕಾರ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಸುತ್ತಾಡುತ್ತಿರುವುದು ಖಚಿತವಾಗಿತ್ತು. ಕವಿವಿ ಆವರಣದಲ್ಲಿ ಕಾರ್ಯಾಚರಣೆಗೆ ಇಳಿದ 30ಕ್ಕೂ ಹೆಚ್ಚು ಪೊಲೀಸರು ಕ್ಯಾಂಪಸ್ ಸುತ್ತಲೂ ನಾಕಾಬಂಧಿ ಮಾಡಿದ್ದರು. ಇತ್ತ ಭಾರತಿ ಅವರು 5 ಲಕ್ಷ ರೂ. ತೆಗೆದುಕೊಂಡು ವಿಶ್ವವಿದ್ಯಾಲಯ ಕ್ಯಾಂಪಸ್‍ಗೆ ಬಂದಿದ್ದರು.

    ಬಟಾನಿಕಲ್ ಗಾರ್ಡನ್‍ನಲ್ಲಿ ಬಾಲಕನ ಸಮೇತ ಬಚ್ಚಿಟ್ಟುಕೊಂಡಿದ್ದ ಅಪ್ರಾಪ್ತನನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಬಳಿಕ ಭಾರತಿ ಅವರ ಮಗುವನ್ನ ರಕ್ಷಿಸಿ ಅಪ್ರಾಪ್ತನನ್ನು ವಶಕ್ಕೆ ಪಡಿದಿದ್ದಾರೆ.

    ಅಪ್ರಾಪ್ತನು ಈ ಹಿಂದೆ ಸಂಕಲ್ಪ ಪಿಜಿ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಹೋಗಿದ್ದ. ಶುಕ್ರವಾರ ಮನೆಗೆ ಬಂದು ಭಾರತಿ ಅವರನ್ನು ಮಾತನಾಡಿಸಿ ವಾಪಸ್ ಹೋಗಿದ್ದ. ಹಾಗೆಯೇ ಇವತ್ತು ಕೂಡ ಮನೆಗೆ ಬಂದು, ವಾಪಸ್ ಹೋಗುವಾಗ ಮನೆಯ ಮುಂದೆ ಆಡುತ್ತಿದ್ದ ಮಗುವನ್ನು ಎತ್ತಿಕೊಂಡು ಹೋಗಿದ್ದಾನೆ. ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್ ಸೇರಿದ ನಂತರ ಭಾರತಿ ಅವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ವಿದ್ಯಾರ್ಥಿನಿಯನ್ನ ‘ಡುಮ್ಮಿ’ ಎಂದು ಕರೆದಿದ್ದ ಪ್ರಾಧ್ಯಾಪಕ ಸಸ್ಪೆಂಡ್

    ವಿದ್ಯಾರ್ಥಿನಿಯನ್ನ ‘ಡುಮ್ಮಿ’ ಎಂದು ಕರೆದಿದ್ದ ಪ್ರಾಧ್ಯಾಪಕ ಸಸ್ಪೆಂಡ್

    ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ದಿನೇಶ್ ನಾರಾಯಣಕರ್ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಅಮಾನುತು ಮಾಡಿ ಆದೇಶಿಸಲಾಗಿದೆ.

    ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಪರಾಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದಿನೇಶ್, ತಮ್ಮ ವಿಭಾಗದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿಗೆ ಮೈ-ಕೈ ಮುಟ್ಟುವ ಮೂಲಕ ಕಿರುಕುಳ ನೀಡ್ತಾಯಿದ್ದರು. ಈ ಸಂಬಂಧ ವಿದ್ಯಾರ್ಥಿನಿ ಕುಲಪತಿಗಳಿಗೆ ಡಿಸೆಂಬರ್‍ನಲ್ಲಿ ದೂರು ನೀಡಿದ್ದರು. ಅಲ್ಲದೇ ಇಂಟರನಲ್ ಅಂಕ ಬೇಕಾದ್ರೆ ನನ್ನ ಜೊತೆ ಅಡ್ಜೆಸ್ಟ್ ಆಗಬೇಕು ಎಂದು ಹೇಳುತ್ತಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದರು.

    ಇದನ್ನೂ ಓದಿ: ವಿದ್ಯಾರ್ಥಿನಿ ಕುಲಪತಿಗಳಿಗೆ ನೀಡಿದ ದೂರಿನಲ್ಲಿ ಹೀಗೆ ಬರೆಯಲಾಗಿತ್ತು!

    ಈ ಹಿನ್ನೆಲೆ ಕರ್ನಾಟಕ ವಿವಿ ಪ್ರಕರಣದ ವಿಚಾರಣೆ ನಡೆಸಲು ಲೈಂಗಿಕ ದೌರ್ಜನ್ಯ ಸಮಿತಿಗೆ ನೀಡಿತ್ತು. ಸಮಿತಿ ನೀಡಿದ ವರದಿ ಆಧರಿಸಿ ಕರ್ನಾಟಕ ವಿವಿ ಅಪರಾಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ದಿನೇಶ್ ನಾರಾಯಣಕರ್ ಅವರನ್ನು ಅಮಾನತು ಮಾಡಿದೆ. ಈ ಪ್ರಕರಣವನ್ನ ಕರ್ನಾಟಕ ವಿವಿ ಸಿಂಡಿಕೆಟ್ ಸಭೆಯಲ್ಲಿಟ್ಟ ಕುಲಪತಿ ಪ್ರಮೋದ ಗಾಯಿ, ನಿವೃತ್ತ ನ್ಯಾಯಮೂರ್ತಿಗಳನ್ನ ನೇಮಿಸಿ ಈ ಪ್ರಕರಣದ ತನಿಖೆ ಕೂಡಾ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ.

  • ಧಾರವಾಡ ಕರ್ನಾಟಕ ವಿವಿಯಲ್ಲಿ ಸಂಸ್ಕೃತಿ ದಿನದ ಸಂಭ್ರಮ- ಫೋಟೋಗಳಲ್ಲಿ ನೋಡಿ

    ಧಾರವಾಡ ಕರ್ನಾಟಕ ವಿವಿಯಲ್ಲಿ ಸಂಸ್ಕೃತಿ ದಿನದ ಸಂಭ್ರಮ- ಫೋಟೋಗಳಲ್ಲಿ ನೋಡಿ

    ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಇಂದು ಸ್ವಲ್ಪ ಡಿಫ್ರೆಂಟಾಗಿ ಕಾಣ್ತಾ ಇದ್ರು. ಯಾಕಪ್ಪಾ ಅಂದ್ರೆ ಇವರ ವಿಭಾಗದಲ್ಲಿ ಇಂದು ಸಂಸ್ಕೃತಿ ದಿನಾಚರಣೆ ಮಾಡಲಾಯ್ತು.

    ಇದಕ್ಕೆಂದೇ ವಿದ್ಯಾರ್ಥಿಗಳೆಲ್ಲ ಸೇರಿ ಎತ್ತಿನ ಬಂಡಿ ಸವಾರಿ ಕೂಡಾ ಮಾಡಿದ್ರು. ವಿದ್ಯಾರ್ಥಿಗಳು ಜಿನ್ಸ್ ಟಿ-ಶರ್ಟ್ ಬಿಟ್ಟು ಹಳ್ಳಿ ಶೈಲಿಯಲ್ಲಿ ಹಸಿರು ಶಾಲಿನ ಜೊತೆ ಧೋತಿ ತೊಟ್ಟು ಬಂದಿದ್ದರು. ಇನ್ನು ವಿದ್ಯಾರ್ಥಿನಿಯರು ಇಳಕಲ್ ಸೀರೆಯನ್ನ ತೊಟ್ಟು ಬಂದಿದ್ರು. ಕ್ಯಾಂಪಸ್‍ನಲ್ಲಿ ಎತ್ತಿನ ಬಂಡಿ ಏರಿ ಬಂದಿದ್ದ ವಿದ್ಯಾರ್ಥಿಗಳು, ಜಾನಪದ ಹಾಡುಗಳನ್ನ ಹಾಡುತ್ತ ಸಾಗಿದರು. ಕಳೆದ ಒಂದು ವಾರದಿಂದ ಫನ್ ವೀಕ್ ಆಚರಣೆ ಮಾಡಿದ ಈ ವಿದ್ಯಾರ್ಥಿಗಳು, ಇಂದು ಸ್ವಲ್ಪ ವಿಭಿನ್ನವಾಗಿಯೇ ಸಂಸ್ಕೃತಿ ದಿನವನ್ನ ಆಚರಿಸಿದ್ರು.

    ಕ್ಯಾಂಪಸ್ ತುಂಬೆಲ್ಲ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿದ ವಿದ್ಯಾರ್ಥಿನಿಯರು, ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು. ವಿದೇಶಿ ಸಂಸ್ಕೃತಿಯನ್ನ ಮರೆತು, ಪಕ್ಕಾ ಸ್ವದೇಶಿ ಶೈಲಿಯಲ್ಲಿ ಮಿಂಚಿದ್ರು. ಎತ್ತಿನ ಬಂಡಿಗೆ ಕಟ್ಟಿದ ಎತ್ತುಗಳು ಕೂಡಾ ಇಂದು ಸಿಂಗಾರಗೊಂಡಿದ್ದವು. ಒಟ್ಟಾರೆ ಹಳ್ಳಿ ಹಾಗೂ ಗ್ರಾಮೀಣ ಸಂಸ್ಕೃತಿಯನ್ನ ನೆನಪಿಸುವಂತೆ ಸಂಸ್ಕೃತಿ ದಿನಾಚರಣೆ ಇದಾಗಿತ್ತು.