Tag: ಕರ್ನಾಟಕ ವಿಧಾನ ಸಭೆ ಚುನಾವಣೆ 2018

  • ಚುನಾವಣೆಯಲ್ಲಿ ಪ್ರಚಾರ ಮಾಡಲು ಅಭ್ಯರ್ಥಿಗಳಿಗೆ ಷರತ್ತು ವಿಧಿಸಿದ ರಾಕಿಂಗ್ ಸ್ಟಾರ್

    ಚುನಾವಣೆಯಲ್ಲಿ ಪ್ರಚಾರ ಮಾಡಲು ಅಭ್ಯರ್ಥಿಗಳಿಗೆ ಷರತ್ತು ವಿಧಿಸಿದ ರಾಕಿಂಗ್ ಸ್ಟಾರ್

    ಬೆಂಗಳೂರು: ಮರ ಮತ್ತು ಕೆರೆಯನ್ನು ಯಾರು ಅಭಿವೃದ್ಧಿ ಮಾಡುತ್ತಾರೋ ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

    ಫೇಸ್‍ಬುಕ್ ಲೈವ್ ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುವ ವೇಳೆ ಅಭಿಮಾನಿಯೊಬ್ಬರು ನೀವು ರಾಜಕೀಯಕ್ಕೆ ಬರುತ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ, ಬೆಂಗಳೂರು ನಗರದಲ್ಲಿ ಈಗ 5 ಲಕ್ಷ ಗಿಡ ನೆಡಬೇಕಾಗಿದೆ. ಇದಕ್ಕೆ ಪ್ರೋತ್ಸಾಹ ನೀಡುವ ಅಭ್ಯರ್ಥಿಗಳಿಗೆ ನಾನು ಬೆಂಬಲ ನೀಡುತ್ತೇನೆ. ಬೆಂಗಳೂರು ಅಷ್ಟೇ ಅಲ್ಲದೇ ಬೇರೆ ಯಾವುದೇ ಕ್ಷೇತ್ರದಲ್ಲಾದರೂ ಸರಿ ಮರಗಳನ್ನು ನೆಡುವ ಅಭ್ಯರ್ಥಿಗಳಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಉತ್ತರಿಸಿದರು.

    ಯಾವುದೇ ಪಕ್ಷದ ಬಗ್ಗೆ ನನಗೆ ಸ್ಪಷ್ಟನೆ ಸಿಗುತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ನನ್ನ ಸ್ನೇಹಿತರು ರಾಜಕೀಯಲ್ಲಿ ತೊಡಗಿದ್ದಾರೆ, ಶಾಸಕರಾಗಿದ್ದಾರೆ. ಕೆಲವು ಗೆಳೆಯರು ಪ್ರಚಾರಕ್ಕೆ ಬರುವಂತೆ ಕೇಳುತ್ತಿದ್ದಾರೆ. ಆಗ ಅವರಿಗೆ ನಾನು ಪ್ರಚಾರಕ್ಕೆ ಬರುತ್ತೇನೆ. ಆದರೆ, ನೀನು ಕೆಲಸ ಮಾಡದಿದ್ದರೆ ಜನರು ನನ್ನ ಕೇಳುತ್ತಾರೆ. ನಾನು ಏನು ಉತ್ತರ ಕೊಡಬೇಕು. ಆಗ ನಾನೇ ನಿಮಗೆ ವಿರುದ್ಧವಾಗಿ ನಿಲ್ಲುತ್ತೇನೆ. ಅದಕ್ಕೆ ನಾವು ಗೆಳೆಯರಾಗಿಯೇ ಇರುವುದು ಒಳ್ಳೆಯದು ಎಂದು ತಿಳಿಸುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ:ನಾನು ಯಾವುದೇ ಬಾಡಿಗೆ ಹಣ ಇಟ್ಟುಕೊಂಡಿಲ್ಲ: ಅಭಿಮಾನಿಗಳ ಪ್ರಶ್ನೆಗಳಿಗೆ ಯಶ್ ಸ್ಪಷ್ಟನೆ

    ನನಗೆ ರಾಜಕೀಯಕ್ಕೆ ಬರುವ ಆಸೆ ಇಲ್ಲ. ಒಂದು ವೇಳೆ ಬರುವುದಾದರೆ ತಿಳಿಸುತ್ತೇನೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಒಂದೊಂದು ರೀತಿಯ ಸಮಸ್ಯೆಗಳಿರುತ್ತವೆ. ಅಲ್ಲಿನ ಪ್ರತಿನಿಧಿಗಳು ಆ ವಿಷಯವನ್ನು ಬಗೆಹರಿಸಲು ಹೋರಾಡಬೇಕು. ನಾನು ಭ್ರಮೆಯಲ್ಲಿ ಬದುಕುತ್ತಿಲ್ಲ. ಇಂದು ಮಾಧ್ಯಮಗಳಲ್ಲಿ ಟಿಕೆಟ್ ಸಿಗದ ಆಕಾಂಕ್ಷಿಗಳ ಬೆಂಬಲಿಗರ ವರ್ತನೆ ಹಾಗೂ ಬಂಡಾಯಗಳ ವೇಳೆ ಅವರ ವರ್ತನೆ ಹೇಗೆ ಇರುತ್ತದೆ ಎಂದು ನಾನು ನೋಡಿದೆ. ಇಲ್ಲಿ ಯಾರ ವಿರುದ್ಧ ಕಳಂಕ, ತಕರಾರುಗಳಿಲ್ಲ? ಯಾರು ಸರಿಯಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.

    ಇತ್ತೀಚೆಗೆ ಒಬ್ಬರು ತಮ್ಮ ಕ್ಷೇತ್ರದಲ್ಲಿ ಹತ್ತು ಕೆರೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಾನು ಅವರಿಗೆ ಬೆಂಬಲ ನೀಡುತ್ತೇನೆ. ನಾಲ್ಕು ಜನಕ್ಕೆ ಒಳ್ಳೆಯದು ಆಗುವುದಾದರೆ ನಾನು ಕೆಟ್ಟವನಾಗುವುದಕ್ಕೂ ಸಿದ್ಧ. ಯಾರಿಗೂ ಒಳ್ಳೆಯದನ್ನು ಮಾಡದೇ ಒಳ್ಳೆಯವನು ಅಂಥ ಅನಿಸಿಕೊಂಡು ಬದುಕುವುದು ಸರಿಯಲ್ಲ. ನಾನು ಏನು ಇಲ್ಲದೇ ಬಂದವನು. ಈಗ ಎಲ್ಲವೂ ಸಿಕ್ಕಿದೆ. ಇದನ್ನು ಕೊಟ್ಟಿದ್ದು ಜನ. ಈ ಜನ್ಮದಲ್ಲಿ ಜನರಿಗೆ ಉಪಯೋಗವಾಗುವಂತಹ ಕೆಲಸ ಮಾಡುತ್ತೇನೆ. ನನ್ನ ಮೇಲೆ ನೀವು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಯಾವುದೇ ಕೆಲಸ ಮಾಡುವ ವೇಳೆ ಸರ್ಕಾರ ಬೇಕಾಗುತ್ತದೆ. ಸರ್ಕಾರದ ಬೆಂಬಲ ಇಲ್ಲದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ, ಸರ್ಕಾರದ ಕೆಲಸವನ್ನು ಹೇಗೆ ಮಾಡಿಸಬೇಕು. ನಾನು ರಾಜಕಾರಣಕ್ಕೆ ಬರಬೇಕಾ, ಅದು ಆಗಲ್ಲ. ನಮ್ಮ ಮಾತನ್ನು ಕೇಳುವ ನಾಲ್ಕು ಜನ ರಾಜಕಾರಣಿಗಳು ಸಿಕ್ಕರೆ ಅವರ ಮೂಲಕ ಕೆಲಸ ಮಾಡಿಸಬಹುದು ಎಂದು ಅವರು ವಿವರಿಸಿದ್ದಾರೆ.

     

    https://www.facebook.com/TheOfficialYash/videos/2291921764368555/

  • ಅಂಬರೀಶ್ ಮನವೊಲಿಕೆಗೆ ಮುಂದಾದ ಕೈ ಬಳಗ

    ಅಂಬರೀಶ್ ಮನವೊಲಿಕೆಗೆ ಮುಂದಾದ ಕೈ ಬಳಗ

    ಬೆಂಗಳೂರು: ಚುನಾವಣೆ ಹಾಗೂ ಪ್ರಚಾರದ ಕುರಿತಾಗಿ ಏನನ್ನು ಮಾತನಾಡದೇ ಸಿಎಂ ಹಾಗೂ ಕಾಂಗ್ರೆಸ್ ಮುಖಂಡರನ್ನು ಸತಾಯಿಸುತ್ತಿರುವ ನಟ ಅಂಬರೀಶ್ ಅವರ ಮನವೊಲಿಸಲು ಕೈ ಬಳಗವೇ ಮುಂದಾಗಿದೆ.

    ಇಲ್ಲಿನ ಗಾಲ್ಫ್ ರಸ್ತೆಯಲ್ಲಿರುವ ನಟ ಅಂಬರೀಶ್ ನಿವಾಸಕ್ಕೆ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿ ಮಂಡ್ಯ ಮತಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಚುನಾವಣೆ ಪ್ರಚಾರಕ್ಕೆ ಸಿದ್ಧರಾಗುವಂತೆ ಒಂದು ಗಂಟೆ ಜಾರ್ಜ್ ಅವರು ಅಂಬರೀಶ್ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

    ಈ ಮುನ್ನ ಟಿಕೆಟ್ ಸಿಗಲಿ ನೋಡೋಣ ಎನ್ನುತ್ತಿದ್ದ ಅಂಬರೀಶ್, ಟಿಕೆಟ್ ಸಿಕ್ಕ ಮೇಲೂ ಪಕ್ಷದ ಮುಖಂಡರನ್ನು ಸಂಪರ್ಕಿಸಿಲ್ಲ. ಅಲ್ಲದೇ ಬಿ ಫಾರ್ಮ್ ಅನ್ನು ಕೂಡ ಪಡೆದಿಲ್ಲ. ಸ್ಪರ್ಧೆ ಮಾಡುವ ಕುರಿತಾಗಿಯೂ ಅವರು ಏನನ್ನೂ ಹೇಳದೆ ಕಾಂಗ್ರೆಸ್ ನಾಯಕರನ್ನು ಸತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮತ್ತು ಸಿಎಂ ಸಿದ್ದರಾಮಯ್ಯನವರ ಸಲಹೆಯಂತೆ ಸಚಿವ ಕೆ.ಜೆ.ಜಾರ್ಜ್ ಅವರನ್ನು ಅಂಬಿ ನಿವಾಸಕ್ಕೆ ಸಂಧಾನಕ್ಕೆ ಕಳುಹಿಸಲಾಗಿತ್ತು ಎನ್ನಲಾಗಿದೆ.

    ಅಂಬರೀಶ್ ಭೇಟಿ ನಂತರ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ನಾನು ಅಂಬರೀಶ್ ಒಳ್ಳೆಯ ಸ್ನೇಹಿತರು. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಅವರನ್ನು ಭೇಟಿ ಮಾಡುತ್ತೇನೆ. ಯಾವುದೇ ಸಂಧಾನ ಮಾತುಕತೆಗೆ ನಾನು ಇಲ್ಲಿಗೆ ಬಂದಿಲ್ಲ. ನನ್ನ ಮತಕ್ಷೇತ್ರದ ಪ್ರಚಾರಕ್ಕೆ ಬೆಂಬಲ ನೀಡುವಂತೆ ಕೇಳಲು ಬಂದಿದ್ದೆ. ಅವರಿಗೆ ಟಿಕೆಟ್ ಸಿಕ್ಕಿದೆ. ಬಿ ಫಾರ್ಮ್ ಪಡೆಯುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ನನಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಪ್ರಚಾರದ ಕುರಿತಾಗಿ ಏನು ಹೇಳಿಲ್ಲ. ಅವರ ಆರೋಗ್ಯ ಚೆನ್ನಾಗಿದೆ. ಸಿನಿಮಾ ಚಿತ್ರೀಕರಣಕ್ಕೂ ಹೋಗುತ್ತಿದ್ದಾರೆ. ಅವರು ಸಿನಿಮಾ ಹೀರೋ. ಹೀಗಾಗಿ ಅವರಿಗೆ ಬಿ ಫಾರ್ಮ್ ಅನ್ನು ಮನೆಗೆ ಕೊಟ್ಟು ಕಳಿಸಬಹುದು ಎಂದು ತಿಳಿಸಿದ್ದಾರೆ.

  • ಮನೆಗೆ ಭೇಟಿ ನೀಡಿದ ಶಾಗೆ ಚಿದಾನಂದ ಮೂರ್ತಿ ನೀಡಿದ್ರು 5 ಸಲಹೆ

    ಮನೆಗೆ ಭೇಟಿ ನೀಡಿದ ಶಾಗೆ ಚಿದಾನಂದ ಮೂರ್ತಿ ನೀಡಿದ್ರು 5 ಸಲಹೆ

    ಬೆಂಗಳೂರು: ನಗರಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಸಾಹಿತಿ ಚಿದಾನಂದ ಮೂರ್ತಿ ಅವರನ್ನು ಭೇಟಿಯಾಗಿದ್ದಾರೆ.

    ಹಿರಿಯ ಸಂಶೋಧಕ ಡಾ ಚಿದಾನಂದ ಮೂರ್ತಿ ಅವರನ್ನು ಭೇಟಿಯಾದ ಶಾ ಮುಂದೆ ಬಿಜೆಪಿ ಪ್ರಣಾಳಿಕೆಗೆ ರಚನೆ ಸಂಬಂಧ ಸಲಹೆ ನೀಡುವಂತೆ ಕೇಳಿಕೊಂಡಿದ್ದಾರೆ.

    ಅಮಿತ್ ಶಾ ಭೇಟಿಗೂ ಮುನ್ನ ಪಬ್ಲಿಕ್ ಟಿವಿ ಜೊತೆ ಚಿದಾನಂದ ಮೂರ್ತಿ ಮಾತನಾಡಿದ್ದರು. ಈ ವೇಳೆ ನಾನು ಶಾ ಅವರಿಗೆ ಏನು ಸಲಹೆ ನೀಡತ್ತೇನೆ ಎನ್ನುವುದನ್ನು ತಿಳಿಸಿದ್ದರು.

    ಸಾಹಿತಿ ಚಿಮೂ ಹೇಳಿದ್ದೇನು?
    1. ವೀರಶೈವ ಹಾಗೂ ಲಿಂಗಾಯಿತ ಎರಡೂ ಒಂದೇ. ಹೀಗಾಗಿ, ಪ್ರತ್ಯೇಕ ಲಿಂಗಾಯತ ಧರ್ಮ ಬೇಡ ಹಾಗೂ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಬಾರದು.

    2. ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಗಡಿ ವಿವಾದದಿಂದಾಗಿ ಮಹಾರಾಷ್ಟ್ರವೂ ಪದೇ ಪದೇ ಕರ್ನಾಟಕದ ಜೊತೆ ತಗಾದೆ ತೆಗೆಯುತ್ತಿದೆ. ಕರ್ನಾಟಕ ಬೆಳಗಾವಿಗೆ ಸೇರುತ್ತದೆ ಎನ್ನುವ ಭರವಸೆ ಇದೆ. ಕೇಂದ್ರ ಸರ್ಕಾರ ಕರ್ನಾಟಕದ ವಾದವನ್ನು ಸರಿಯಾಗಿ ಪರಿಶೀಲಿಸಬೇಕು.

    3. ಆಂಗ್ಲರು ಬಿಟ್ಟು ಹೋಗಿರುವ `ಇಂಡಿಯಾ’ ಎನ್ನುವ ಪದ ಕೈಬಿಟ್ಟು `ಭಾರತ್’ ಎನ್ನುವ ಪದ ಬಳಕೆ ಮಾಡಬೇಕು. ಸಂವಿಧಾನದಲ್ಲಿರುವ ಇಂಡಿಯಾ ಪದವನ್ನು ಕೂಡ ತೆಗೆಯಬೇಕು. ಇಂಡಿಯಾ ಎಂದು ಬರೆದಿರುವ ಕಡೆ ಭಾರತ್ ಎಂದು ಬರೆಯಬೇಕು. ದೇಶದಲ್ಲಿ ಮಾತೃಭಾಷಾ ಮಾಧ್ಯಮ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು.

    4. ಒಬ್ಬ ಹಿಂದೂ ಉತ್ತಮ ಹಿಂದೂವಾಗಿ ಬದುಕಬೇಕು, ಒಬ್ಬ ಮುಸ್ಲಿಮ್ ಉತ್ತಮ ಮುಸ್ಲಿಮನಾಗಿ ಬದುಕಬೇಕು, ಒಬ್ಬ ಕ್ರಿಶ್ಚಿಯನ್ ಉತ್ತಮ ಕ್ರಿಶ್ಚಿಯನ್ ಆಗಿ ಬದುಕಬೇಕು. ಆದರೆ, ಮತಾಂತರ ಸಲ್ಲದು. ದೇಶದಲ್ಲಿ ಹಿಂದೂ ಧರ್ಮದವರನ್ನು ಮತಾಂತರ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು.

    5. ಬಿಜೆಪಿ ಮೇಲ್ವರ್ಗದವರ ಪಕ್ಷ ಎಂದು ಗುರುತಿಸಿಕೊಂಡಿದೆ. ಇದು ಬದಲಾಗಬೇಕು. ಸ್ವಲ್ಪ ಮಟ್ಟಿಗೆ ಭಾರತೀಯ ಸಂಸ್ಕೃತಿಯನ್ನು ಉಳಿಸುತ್ತಿರುವ ಪಕ್ಷ ಬಿಜೆಪಿಯಾಗಿದೆ. ಹೀಗಾಗಿ, ದಲಿತರನ್ನು ನಿರ್ಲಕ್ಷಿಸದೆ, ಅವರ ಅಭಿವೃದ್ಧಿಗೆ ಕೆಲಸ ಮಾಡಬೇಕು. ರೈತರಿಗೆ ಸಕಾಲದಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು

  • ಜನರನ್ನು ಬಿಜೆಪಿಯತ್ತ ಸೆಳೆಯುವುದು ಹೇಗೆ? ಯಾವ ಸಮಯದಲ್ಲಿ ಎಲ್ಲಿ ಪ್ರಚಾರ ಮಾಡಬೇಕು?- ನಾಯಕರಿಗೆ ಚಾಣಕ್ಯನಿಂದ ಸ್ಪೆಷಲ್ ಕ್ಲಾಸ್

    ಜನರನ್ನು ಬಿಜೆಪಿಯತ್ತ ಸೆಳೆಯುವುದು ಹೇಗೆ? ಯಾವ ಸಮಯದಲ್ಲಿ ಎಲ್ಲಿ ಪ್ರಚಾರ ಮಾಡಬೇಕು?- ನಾಯಕರಿಗೆ ಚಾಣಕ್ಯನಿಂದ ಸ್ಪೆಷಲ್ ಕ್ಲಾಸ್

    ಬೆಂಗಳೂರು: 2017ರಲ್ಲಿ ರಾಜ್ಯ ನಾಯಕರಿಗೆ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವುದು ಹೇಗೆ ಎಂದು ಪಾಠ ಮಾಡಿ ಹೋಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಗ ಕೊನೆ ಕ್ಷಣದಲ್ಲಿ ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳುವುದು ಹೇಗೆ ಎನ್ನುವುನ್ನು ಪಾಠ ಮಾಡಲಿದ್ದಾರೆ.

    ಹೌದು, ನಗರಕ್ಕೆ ನಾಳೆ ಭೇಟಿ ನೀಡಲಿರುವ ಅಮಿತ್ ಶಾ ಅವರು ಚುನಾವಣೆಯಲ್ಲಿ ಜನರ ಮನಸ್ಸನ್ನು ತಮ್ಮತ್ತ ಒಲಿಸಿಕೊಳ್ಳುವುದು ಹೇಗೆ? ಯಾವ ವಯಸ್ಸಿನವರನ್ನು ಹೇಗೆ ಸೆಳೆಯಬಹುದು? ಮಕ್ಕಳನ್ನು ಇಷ್ಟಪಡಿಸುವುದು ಹೇಗೆ? ಯಾವ ಸಮಯದಲ್ಲಿ ಎಲ್ಲಿ ಪ್ರಚಾರ ಮಾಡಿದರೆ ಯಾರನ್ನು ಒಲಿಸಿಕೊಳ್ಳಬಹುದು ಇತ್ಯಾದಿ ವಿಚಾರಗಳ ಬಗ್ಗೆ ರಾಜ್ಯದ ನಾಯಕರು ಮತ್ತು ಕಾರ್ಯಕರ್ತರಿಗೆ ಪಾಠ ಮಾಡಲಿದ್ದಾರೆ.

    ಗುಜರಾತ್, ಉತ್ತರ ಪ್ರದೇಶದಲ್ಲಿ ಈ ತಂತ್ರಗಳನ್ನು ಅನುಸರಿಸಿ ಬಿಜೆಪಿ ಗೆದ್ದಿದೆ. ಅದೇ ತಂತ್ರವನ್ನು ರಾಜ್ಯದಲ್ಲೂ ಅನುಸರಿಲು ಶಾ ಮುಂದಾಗಿದ್ದಾರೆ. ಅಮಿತ್ ಶಾ ನಾಯಕರಿಗೆ ಮಾಡಲಿರುವ “ಚುನಾವಣಾ ಸ್ಪೆಷಲ್ ಕ್ಲಾಸ್” ನಲ್ಲಿರುವ ಪಠ್ಯದಲ್ಲಿರುವ ಅಂಶಗಳು ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಅವುಗಳನ್ನು ಇಲ್ಲಿ ನೀಡಲಾಗಿದೆ.

    ಸ್ಪೆಷಲ್ ಕ್ಲಾಸ್ ನಲ್ಲಿ ಏನಿದೆ?
    ಪ್ರತಿನಿತ್ಯ ಮಧ್ಯಾಹ್ನ ಕಾರ್ಯಕರ್ತರ ಜೊತೆಗೆ ರಸ್ತೆ ಬದಿಯಲ್ಲಿಯೇ ನಿಂತು ಊಟ ಮಾಡಬೇಕು. ನಾಯಕ ಎನ್ನುವ ಹಮ್ಮು ಬಿಟ್ಟು ಅಲ್ಲೇ ಊಟ ಮಾಡಿದರೆ ನೀವು ಜನ ಸಾಮಾನ್ಯರಂತೆ ಗುರುತಿಸಿಕೊಳ್ಳುತ್ತಿರಿ. ಇದರಿಂದಾಗಿ ಕಾರ್ಯಕರ್ತರಿಗೆ ಪ್ರಚಾರ ಮಾಡಲು ಉತ್ಸಾಹ ಬರುತ್ತದೆ. ಸಾಧಾರಣವಾಗಿ ಮಧ್ಯಾಹ್ನದ ಬಳಿಕ ಕಾಲೇಜು ಕ್ಯಾಂಪಸ್, ಗ್ರಂಥಾಲಯದ ಬಳಿ ಹೋಗಿ ಪ್ರಚಾರ ಮಾಡಬೇಕು.

    ಸಂಜೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಟೀ, ಕಾಫಿ ಕುಡಿಯಲು ಟೀ ಶಾಪ್ ಗೆ ಬರುತ್ತಾರೆ. ಹೀಗಾಗಿ ಪಕ್ಷವನ್ನು ಪ್ರಚಾರ ಮಾಡಲು ಸಂಜೆ 4 ಗಂಟೆಗೆ ಟೀ ಶಾಪ್ ಗೆ ಭೇಟಿ ನೀಡಿ. ಈ ವೇಳೆ ಜನರ ಜೊತೆ ಟೀ ಕುಡಿಯುತ್ತಾ ಬೆರೆತು ಪಕ್ಷವನ್ನು ಪ್ರಚಾರ ಮಾಡಿ. ಕತ್ತಲಾಗುತ್ತಿದ್ದಂತೆ ಚಾಟ್ ಸೆಂಟರ್ ಗಳ ಬಳಿ ಹೆಚ್ಚು ಜನರು ಸೇರಿರುತ್ತಾರೆ. ಹೀಗಾಗಿ 6 ಗಂಟೆಗೆ ಚಾಟ್ ಸೇವಿಸುತ್ತಾ ನಾಯಕರ ಬಗ್ಗೆ ತಿಳಿ ಹೇಳಬೇಕು.

    ತರಕಾರಿ ಹಾಗೂ ಹಣ್ಣಿನ ಮಳಿಗೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಕ್ಕಳು ರಾತ್ರಿ 7 ಗಂಟೆಯಿಂದ 8 ರವರೆಗೆ ಬರುತ್ತಿರುತ್ತಾರೆ. ಅವರ ಜೊತೆ ಮಾತನಾಡಿ ಪಕ್ಷದ ಕಡೆಗೆ ಗಮನ ಸೆಳೆಯಲು ಪ್ರಯತ್ನಿಸಿ. ಹಳ್ಳಿಗಳಲ್ಲಿ ಹಿರಿಯ ವ್ಯಕ್ತಿಗಳು ಸಂಜೆ ವೇಳೆ ಕಟ್ಟೆಯ ಮೇಲೆ ಕುಳಿತು ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಅವರ ಚರ್ಚೆಯಲ್ಲಿ ಭಾಗಿಯಾಗಿ 15 ನಿಮಿಷ ಕಮಲದ ನಾಯಕರ ಬಗ್ಗೆ ತಿಳಿಸಬೇಕು.

    ಮಧ್ಯಾಹ್ನದ ಟೈಂ ಟೇಬಲ್ ಈ ಮೇಲಿನಂತಿದ್ದರೆ, ಬೆಳಗ್ಗೆಯೂ ಪ್ರಚಾರಕ್ಕೆ ಸಮಯ ನಿಗದಿಯಾಗಿದೆ. ಬೆಳಿಗ್ಗೆ 5.30 ರಿಂದ 7.30 ಗಂಟೆವರೆಗೆ ಉದ್ಯಾನವನಗಳಲ್ಲಿ, 7.30ರಿಂದ 8 ಗಂಟೆಯವರೆಗೆ ಕಾಫಿ ಸ್ಟಾಲ್‍ಗಳಲ್ಲಿ ಪ್ರಚಾರ ಮಾಡಬೇಕು. 8 ರಿಂದ 9 ಗಂಟೆವರೆಗೆ ಹೋಟೆಲ್, 9 ಗಂಟೆಗೆ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಪ್ರಚಾರ ಮಾಡಬೇಕು. ಇಷ್ಟು ಮಾಡಿದ ಮೇಲೆ 10 ಗಂಟೆಯ ಬಳಿಕ ಮನೆ ಮನೆ ಪ್ರಚಾರ ಆರಂಭಿಸಬೇಕು.

    ಮನೆ ಮನೆ ಪ್ರಚಾರ ಮಾಡುವ ವೇಳೆ ಕೈಯಲ್ಲಿ ಬರೀ ಕರಪತ್ರವನ್ನು ಹಿಡಿದು ಪ್ರಚಾರ ಮಾಡುವುದಲ್ಲ. ಕೈಯಲ್ಲಿ ಚಾಕಲೇಟ್ ಹಿಡಿದುಕೊಳ್ಳಿ. ಮಕ್ಕಳಿಗೆ ಚಾಕಲೇಟ್ ಕೊಟ್ಟರೆ ಅವರ ಪೋಷಕರಿಗೆ ಖುಷಿಯಾಗಿ ನೀವು ಅವರ ನೆನಪಿನಲ್ಲಿ ಇರಲು ಸಾಧ್ಯವಾಗುತ್ತದೆ. ಪ್ರಚಾರಕ್ಕೆ ಕೇವಲ ಬೆಳಗ್ಗೆ ಮತ್ತು ರಾತ್ರಿ ಹೋಗಬೇಕು ಎನ್ನುವ ಹಳೆ ಸಮಯ ಪರಿಪಾಲನೆಯನ್ನು ಬಿಟ್ಟು ಎಲ್ಲ ಸಮಯದಲ್ಲೂ ಪಕ್ಷಕ್ಕಾಗಿ ದುಡಿಯಿರಿ. ಚುನಾವಣೆಗೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿ ಉಳಿದಿರುವುದು ಸಾಧ್ಯವಾದಷ್ಟು ಜನರ ಮಧ್ಯದಲ್ಲಿ ನೀವು ಇರಬೇಕು.