Tag: ಕರ್ನಾಟಕ ಮಳೆ

  • KRS ಡ್ಯಾಂ ಭರ್ತಿಗೆ ಇನ್ನೆರಡು ಅಡಿ ಮಾತ್ರ ಬಾಕಿ – ಒಂದೂವರೆ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

    KRS ಡ್ಯಾಂ ಭರ್ತಿಗೆ ಇನ್ನೆರಡು ಅಡಿ ಮಾತ್ರ ಬಾಕಿ – ಒಂದೂವರೆ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

    ಮಂಡ್ಯ: ಕೃಷ್ಣರಾಜಸಾಗರ ಜಲಾಶಯ(ಕೆಆರ್‌ಎಸ್‌)ದ ನೀರಿನ ಮಟ್ಟ ಇಂದು 122 ಅಡಿ ತಲುಪಿದೆ. ಮಧ್ಯಾಹ್ನ ವೇಳೆಗೆ ಕೆಆರ್‌ಎಸ್‌ ಒಳಹರಿವು ಮತ್ತು ಹೊರ ಹರಿವಿನಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ.

    ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಹಾರಂಗಿ, ಹೇಮಾವತಿ ಜಲಾಶಯದಿಂದಲೂ ಹೊರ ಹರಿವು ಇಳಿಸಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಅಣೆಕಟ್ಟಿನ ಹೊರ ಹರಿವಿನಲ್ಲೂ ಗಣನೀಯ ಇಳಿಕೆಯಾಗುವ ಸಾಧ್ಯತೆ ಇದೆ.

    ಒಳ ಹರಿವು ನೋಡಿಕೊಂಡು ಡ್ಯಾಂನ ಹೊರ ಹರಿವು ಇಳಿಸಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಮಧ್ಯಾಹ್ನದ ನಂತರ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ತಗ್ಗಲಿದೆ. ಒಟ್ಟು 124.80 ಅಡಿ ಸಂಗ್ರಹ ಸಾಮರ್ಥ್ಯದ ಕೆಆರ್‌ಎಸ್‌ನ ಇಂದಿನ ನೀರಿನ ಮಟ್ಟ 122.30 ಅಡಿ ಇದ್ದು, 204200 ಕ್ಯೂಸೆಕ್ ಒಳ ಹರಿವು ಇದೆ. 151365 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಲಾಗುತ್ತಿದೆ. ಸದ್ಯ ಅಣೆಕಟ್ಟಿನಲ್ಲಿ 46.032 ಟಿಎಂಸಿ ನೀರಿನ ಸಂಗ್ರಹವಿದೆ.

    ನೀರಿಗೆ ಬಣ್ಣದ ಚಿತ್ತಾರ:
    ಕೆಆರ್‌ಎಸ್‌ನಿಂದ 1 ಲಕ್ಷದ 50 ಸಾವಿರ ಕ್ಯೂಸೆಗೂ ಅಧಿಕ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ಅಣೆಕಟ್ಟಿನಿಂದ ರಭಸವಾಗಿ ಹೊರ ಹೋಗುತ್ತಿರುವ ನೀರು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹೀಗಾಗಿ ರಾತ್ರಿ ವೇಳೆ ಕೆಆರ್‌ಎಸ್‌ ಅಣೆಕಟ್ಟಿನಿಂದ ಹೊರ ಹೋಗುವ ಮನೋಹರವಾಗಿ ಕಾಣುವಂತೆ ಮಾಡಲು ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಹೊರ ಹೋಗುತ್ತಿರುವ ನೀರಿನ ಮೇಲೆ ಬಣ್ಣ ಬಣ್ಣದ ಬೆಳಕು ಬೀಳುವಂತೆ ಹಾಗೂ ದೂರದಿಂದ ನಿಂತು ನೋಡಿದರೂ ಹೊರಹರಿವು ಕಾಣುವಂತೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.

    ಚಂದ್ರವನ ಆಶ್ರಮ ಜಲಾವೃತ:
    ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣದ, ಪಶ್ಚಿಮವಾಹಿನಿ ಸಮೀಪ ಇರುವ ಚಂದ್ರವನ ಆಶ್ರಮ ಜಲಾವೃತಗೊಂಡಿದೆ. ಕಾವೇರಿ ನದಿ ದಂಡೆಯಲ್ಲಿರುವ ಚಂದ್ರವನ ಆಶ್ರಮದಲ್ಲಿರುವ ಗೋವುಗಳ ರಕ್ಷಣೆ ಮಾಡಲಾಗಿದೆ.

  • ರಾಯರ ಏಕಶಿಲಾ ವೃಂದಾವನ ಜಲಾವೃತ- ತೆಲಂಗಾಣ ಗಡಿಭಾಗದಲ್ಲಿ ಮುಳುಗಿದ ಹಳ್ಳಿ

    ರಾಯರ ಏಕಶಿಲಾ ವೃಂದಾವನ ಜಲಾವೃತ- ತೆಲಂಗಾಣ ಗಡಿಭಾಗದಲ್ಲಿ ಮುಳುಗಿದ ಹಳ್ಳಿ

    ರಾಯಚೂರು: ಕೃಷ್ಣಾ ನದಿಯಲ್ಲಿ ಪ್ರವಾಹ ಸ್ವಲ್ಪಮಟ್ಟಿಗೆ ಇಳಿಕೆಯಾಗಿದ್ದು, ಆದರೆ ತುಂಗಭಾದ್ರಾ ನದಿ ಅಬ್ಬರಿಸುತ್ತಿದೆ. ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ರಾಯರ ಏಕಶಿಲಾ ವೃಂದಾವನ ಜಲಾವೃತಗೊಂಡಿದೆ.

    ರಾಯಚೂರಿನ ಎಲೆಬಿಚ್ಚಾಲಿಯ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ನೀರು ಬಂದಿದೆ. ಈ ಸ್ಥಳದಲ್ಲಿ ರಾಯರು ಸುಮಾರು 12 ವರ್ಷ ಜಪ ಮಾಡಿದ್ದರಂತೆ. ಹೀಗಾಗಿ ರಾಯರು ಜಪ ಮಾಡಿದ್ದ ಸ್ಥಳದಲ್ಲಿ ಏಕಶಿಲಾ ವೃಂದಾವನವನ್ನು ನಿರ್ಮಿಸಲಾಗಿತ್ತು. ಮಂತ್ರಾಲಯದ ಪಕ್ಕದಲ್ಲಿಯೂ ತುಂಗಭದ್ರಾ ಪ್ರವಾಹ ಉಂಟಾಗಿದೆ. ಆದರೆ ಮಂತ್ರಾಲಯದ ಮಠಕ್ಕೆ ಯಾವುದೇ ತೊಂದರೆಯಾಗಿಲ್ಲ.

    ಇತ್ತ ಗಡಿನಾಡು ಕನ್ನಡಿಗರಿಗೂ ಕೃಷ್ಣಾ ನದಿಯ ಪ್ರವಾಹದ ಎಫೆಕ್ಟ್ ತಟ್ಟಿದೆ. ತೆಲಂಗಾಣಕ್ಕೆ ಸೇರಿದ ಹಿಂದುಪೂರ, ಕೃಷ್ಣ, ಗುರ್ಜಾಲ್, ಮುಳುವಲ್ ಗ್ರಾಮಗಳಿಗೆ ನೀರು ನುಗ್ಗಿದೆ. ಕನ್ನಡಿಗರೇ ವಾಸಿಸುತ್ತಿರುವ ಕೃಷ್ಣಾ ನದಿ ದಂಡೆಯ ತೆಲಂಗಾಣದ ಗ್ರಾಮಗಳಲ್ಲಿಯೂ ಪ್ರವಾಹದ ಭೀತಿ ಎದುರಾಗಿದೆ.

    ಕೃಷ್ಣ ಗ್ರಾಮದ ರೈಲ್ವೆ ಸ್ಟೇಷನ್, ದತ್ತಾತ್ರೇಯ ದೇವಸ್ಥಾನ ಜಲಾವೃತಗೊಂಡಿದೆ. ಕೃಷ್ಣ ರೈಲ್ವೆ ಸೇತುವೆ ಮುಳುಗಡೆಯ ಹಂತದಲ್ಲಿದೆ. ಹೀಗಾಗಿ ತೆಲಂಗಾಣ ಸರ್ಕಾರ ಗಡಿನಾಡು ಗ್ರಾಮಗಳನ್ನ ಖಾಲಿ ಮಾಡಿಸುತ್ತಿದೆ.

  • ದಶ ದಿನಗಳ ಪ್ರಳಯಕ್ಕೆ 17 ಜಿಲ್ಲೆ ತತ್ತರ – 40 ಸಾವಿರ ಕೋಟಿ ರೂ. ನಷ್ಟ

    ದಶ ದಿನಗಳ ಪ್ರಳಯಕ್ಕೆ 17 ಜಿಲ್ಲೆ ತತ್ತರ – 40 ಸಾವಿರ ಕೋಟಿ ರೂ. ನಷ್ಟ

    – ತುರ್ತಾಗಿ 10 ಸಾವಿರ ಕೋಟಿಗೆ ಕೇಂದ್ರಕ್ಕೆ ಮನವಿ
    – ಕರಾವಳಿಯಲ್ಲಿಂದು ಬಿಎಸ್‍ವೈ ಪ್ರವಾಸ

    ಬೆಂಗಳೂರು: 10 ದಿನಗಳ ಕಾಲ ಸುರಿದ ಭಾರೀ ಮಳೆ ಕರ್ನಾಟಕವನ್ನೇ ಮುಳುಗಿಸಿದ್ದ ಪ್ರವಾಹದಿಂದ ಉಂಟಾಗಿರುವ ನಷ್ಟ ಬರೋಬ್ಬರೀ 30 ರಿಂದ 40 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

    ಉತ್ತರ ಕರ್ನಾಟಕ, ಹೈದಾರಾಬಾದ್ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದ 17 ಜಿಲ್ಲೆಗಳಲ್ಲಿ ಪ್ರಳಯಕ್ಕೆ ಇದುವರೆಗೂ ಆಹುತಿ ಆದವರ ಸಂಖ್ಯೆ 40 ತಲುಪಿದೆ. 14 ಮಂದಿ ಇನ್ನೂ ಕಣ್ಮರೆ ಆಗಿದ್ದಾರೆ. 136 ಪ್ರಮುಖ ಹೆದ್ದಾರಿಗಳು ಹಾಳಾಗಿದ್ದು, 5 ಲಕ್ಷದ 81 ಸಾವಿರ ಮಂದಿಯನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

    ಬೆಳಗಾವಿ ಒಂದರಲ್ಲೇ 3 ಲಕ್ಷದ 45 ಸಾವಿರ ಮಂದಿಯನ್ನ ಶಿಫ್ಟ್ ಮಾಡಲಾಗಿದೆ. ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಯಡಿಯೂರಪ್ಪ ತುರ್ತಾಗಿ 10 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ.

    ಆಗಸ್ಟ್ 1ರಿಂದ ಸುರಿದಿದ್ದ ಕುಂಭದ್ರೋಣ ಮಳೆ ಉತ್ತರ ಕರ್ನಾಟಕ ಭಾಗದಲ್ಲಿ ತಗ್ಗಿದೆ. ಆದರೆ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಇನ್ನೂ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರದಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ.

    ಇತ್ತ ಉತ್ತರ ಕರ್ನಾಟಕದಲ್ಲಿ ಪ್ರವಾಹ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದ ಸಿಎಂ ಯಡಿಯೂರಪ್ಪ ಇಂದು ಕರಾವಳಿಗೆ ಹೋಗುತ್ತಿದ್ದಾರೆ. ಬೆಳಗ್ಗೆ 11.30ರಿಂದ ಮಂಗಳೂರು, ಧರ್ಮಸ್ಥಳ, ಬೆಳ್ತಂಗಡಿ, ಬಂಟ್ವಾಳದಲ್ಲಿ ಪ್ರವಾಹ ಹಾನಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅದಾದ ಬಳಿಕ ಸಂಜೆ 6.15ಕ್ಕೆ ನಂಜನಗೂಡು, ಮೈಸೂರಿಗೂ ಭೇಟಿ ನೀಡಲಿದ್ದಾರೆ. ರಾತ್ರಿ 9.15ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

  • ಶೀಘ್ರವೇ ಮೋದಿ ಪ್ರವಾಹ ಸ್ಥಳಕ್ಕೆ ಭೇಟಿ ಕೊಡ್ಬೇಕು- ಸಿದ್ದರಾಮಯ್ಯ ಆಗ್ರಹ

    ಶೀಘ್ರವೇ ಮೋದಿ ಪ್ರವಾಹ ಸ್ಥಳಕ್ಕೆ ಭೇಟಿ ಕೊಡ್ಬೇಕು- ಸಿದ್ದರಾಮಯ್ಯ ಆಗ್ರಹ

    – ಇಷ್ಟೊಂದು ಪ್ರವಾಹ ನಾನು ನೋಡಿಲ್ಲ
    – ಕೇಂದ್ರ 5 ಸಾವಿರ ಕೋಟಿ ವಿಶೇಷ ಅನುದಾನ ಕೊಡಬೇಕು
    – ಸಿಎಂ ಬಿಎಸ್‍ವೈ ವಿರುದ್ಧ ಕಿಡಿ
    – ನನ್ನ ಕ್ಷೇತ್ರಕ್ಕೆ ಬೆಡ್‍ಶೀಟ್ ಕೊಟ್ಟಿಲ್ಲ

    ಬೆಂಗಳೂರು: ರಾಜ್ಯದಲ್ಲಿ ಭೀಕರ ಪ್ರವಾಹ ಎದುರಾಗಿದ್ದು, ಕೇಂದ್ರ ಸರ್ಕಾರಕ್ಕೆ ಗಂಭೀರತೆ ಇದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ಪ್ರವಾಹ ಪೀಡಿತವಾದ ಸ್ಥಳಗಳಿಗೆ ಭೇಟಿ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೈಮಾನಿಕ ಸಮೀಕ್ಷೆ ಮಾಡಿ ಹೋಗಿದ್ದಾರೆ. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕಿತ್ತು. ಆದರೆ ಕೇಂದ್ರ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಪ್ರಧಾನಿ ಅವರೇ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು. ಆದರೆ ಮೋದಿ ಇನ್ನೂ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಜ್ಯಕ್ಕೆ ಬರುತ್ತಾರೆ. ಶಾ, ನಿರ್ಮಲಾ ಬರುವುದರಿಂದ ಗಂಭೀರತೆ ಬರಲ್ಲ. ಕೇಂದ್ರ ಸರ್ಕಾರಕ್ಕೆ ಗಂಭೀರತೆ ಇದ್ದರೆ ಮೋದಿ ಪ್ರವಾಹ ಸ್ಥಳಕ್ಕೆ ಭೇಟಿ ಕೊಡಬೇಕು. ಇದು ನನ್ನ ಆಗ್ರಹ ಎಂದರು.

    ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಬಂದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ರಾಜ್ಯದ 17 ಜಿಲ್ಲೆಗಳು ಜಲಾವೃತವಾಗಿದೆ. ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆ ಆಗಿದ್ದು ನಮಗೆ ಪ್ರವಾಹ ಆಗಲು ಕಾರಣವಾಗಿದೆ. 6.5 ಲಕ್ಷ ಕ್ಯೂಸೆಕ್ ನೀರು ಆಲಮಟ್ಟಿ ಮತ್ತು ನಾರಾಯಣಪುರ ಡ್ಯಾಮ್ ನಿಂದ ಹೊರ ಬಿಡುತ್ತಿದ್ದಾರೆ. ಇಷ್ಟು ನೀರು ಹೊರ ಬಿಟ್ಟಿರೋದು ಇದೇ ಮೊದಲು. ನಾನು ಇಷ್ಟು ನೀರು ಬಿಟ್ಟಿದ್ದು ನೋಡಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರ ತಕ್ಷಣ 5 ಸಾವಿರ ಕೋಟಿ ರೂ.ವನ್ನು ವಿಶೇಷ ಅನುದಾನವೆಂದು ಕೊಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು 6 ಸಾವಿರ ಕೋಟಿ ನಷ್ಟ ಎಂದು ಹೇಳಿದ್ದಾರೆ. ನನ್ನ ಪ್ರಕಾರ 1 ಲಕ್ಷ ಕೋಟಿ ನಷ್ಟ ಆಗಿದೆ. 10 ಲಕ್ಷ ಎಕರೆ ಬೆಳೆ ನಾಶ ಆಗಿದೆ. ಜಾನುವಾರು, ರಸ್ತೆ, ರೈಲ್ವೇ ಹಳಿ ಕುಸಿದಿವೆ. ಜಾನುವಾರುಗಳು ಕೊಚ್ಚಿ ಹೋಗಿವೆ. ಸರ್ಕಾರದ, ಖಾಸಗಿ ಆಸ್ತಿ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. 15-20 ಜನ ನಾಪತ್ತೆ ಆಗಿದ್ದಾರೆ. 25-30 ಜನ ಸತ್ತಿದ್ದಾರೆ ಅನ್ನೋ ರೀತಿಯಲ್ಲಿ ಸರ್ಕಾರ ಹೇಳುತ್ತಿದೆ. ಇಷ್ಟು ಪ್ರಮಾಣದಲ್ಲಿ ದೊಡ್ಡ ಪ್ರವಾಹ ಹಿಂದೆ ಆಗಿರಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

    ನಾನು ವಿಪಕ್ಷ ನಾಯಕನಾಗಿದ್ದಾಗ ಪ್ರವಾಹ ಆಗಿತ್ತು. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಗಿರಲಿಲ್ಲ. ಆಗ ನಾವು ಅಂದಿನ ಪ್ರಧಾನಿಗೆ ಒತ್ತಾಯ ಮಾಡಿದ್ದೆವು. ಹೀಗಾಗಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಬಂದು ಭೇಟಿ ಕೊಟ್ಟಿದ್ದರು. ಮನಮೋಹನ್ ಸಿಂಗ್ ಅವರು ವೈಮಾನಿಕ ಸಮೀಕ್ಷೆ ಮಾಡಿ 1600 ಕೋಟಿ ಸ್ಥಳದಲ್ಲೇ ಕೊಟ್ಟಿದ್ದರು. ಈಗಿನ ಸರ್ಕಾರ ಎನ್‍ಡಿಆರ್‍ಎಫ್ ನಿಂದ 126 ಕೋಟಿ ಕೊಟ್ಟಿದ್ದಾರೆ ಎಂದು ಕೇಂದ್ರದ ವಿರುದ್ಧ ಗರಂ ಆದರು.

    ಸಿಎಂ ಯಡಿಯೂರಪ್ಪ ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಅವರದ್ದೇ ಸರ್ಕಾರ ಇದೆ. 25 ಜನ ಸಂಸದರು ಇದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚು ಹಣ ಬಿಡುಗಡೆ ಮಾಡಿಸಬೇಕು. ಕೇಂದ್ರ ಸರ್ಕಾರ  NDRF ಹಣ ಬಿಟ್ಟು ಬೇರೆ ಹಣ ಕೊಟ್ಟಿಲ್ಲ. ಕೂಡಲೇ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ಏನೂ ಆಗಿಲ್ಲ ಅನ್ನೋ ರೀತಿ ವರ್ತನೆ ಮಾಡುತ್ತಿದೆ. ಜನರ ಕಷ್ಟಕ್ಕೆ ಸ್ಪಂದಿಸಬೇಕು. ಕೇವಲ ಎಮೋಷನ್ ವಿಚಾರದಲ್ಲಿ ರಾಜಕೀಯ ಮಾಡೋಕೆ ಆಗಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.

    ನವಿಲು ತೀರ್ಥ ಡ್ಯಾಂ ತುಂಬಿದೆ. ನನ್ನ ಕ್ಷೇತ್ರದ ಅನೇಕ ಹಳ್ಳಿಗಳೂ ಮುಗಿದೆ. ಪಟ್ಟದ ಕಲ್ಲಿನಲ್ಲಿ 10-15 ಜನ ಸಿಕ್ಕಿ ಹಾಕಿಕೊಂಡಿದ್ದಾರೆ. ಏರ್ ಲಿಫ್ಟ್ ಮಾಡಿಸಿ ಎಂದು ಹೇಳಿದ್ರೂ ಮಾಡೋಕೆ ಆಗಲಿಲ್ಲ. ನಾನು ಜಿಲ್ಲಾಧಿಕಾರಿಗೆ ಬೈದು ದೋಣಿ ಮೂಲಕ ಅವರನ್ನು ರಕ್ಷಣೆ ಮಾಡಿದೆವು. ಅಮಿತ್ ಶಾ ಹೋಂ ಮಿನಿಸ್ಟರ್ ಇದ್ದಾರೆ, ಇನ್ನೂ ಸ್ವಲ್ಪ ಹೆಲಿಕಾಪ್ಟರ್ ಕಳುಹಿಸಬೇಕು. ಡಿಸಿ ಕೂಡ ಹೆಲಿಕಾಪ್ಟರ್ ಕಳುಸುತ್ತಿಲ್ಲ ಎಂದು ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

    ಸರ್ಕಾರ ಇಲ್ಲದಂತೆ ಆಗಿದೆ. ಇನ್ನೂ ಹೆಚ್ಚು ಗಂಜಿ ಕೇಂದ್ರಗಳನ್ನು ಪ್ರಾರಂಭ ಮಾಡಬೇಕು. ಬಾದಾಮಿ ಬಗ್ಗೆ ನಿತ್ಯ ಮಾಹಿತಿ ಪಡೆಯುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ಬೆಡ್ ಶೀಟ್ ಕೊಟ್ಟಿಲ್ಲ. ಔಷಧಿ ಪೂರೈಕೆ ಇನ್ನೂ ಆಗಿಲ್ಲ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಸರ್ಕಾರಿ, ಖಾಸಗಿ ವೈದ್ಯರನ್ನು ಸರ್ಕಾರ ಬಳಸಿಕೊಳ್ಳಬೇಕು. ಜನರಿಗೆ ಆಹಾರ, ಬೆಡ್ ಶೀಟ್, ಕನಿಷ್ಟ ಸೌಲಭ್ಯ ಒದಗಿಸುವ ಕೆಲಸ ಆಗಬೇಕು. ಜಾನುವಾರುಗಳಿಗೆ ಅಗತ್ಯ ವ್ಯವಸ್ಥೆ ಕೂಡಲೇ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

    ಸಂತ್ರಸ್ತರ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ನಮ್ಮ ಕಾಂಗ್ರೆಸ್ ನಿಂದ ಎರಡು ತಂಡ ಹೋಗಿದೆ. ಸಂತ್ರಸ್ತರ ಕೇಂದ್ರದಲ್ಲಿ ಸೌಲಭ್ಯವಿಲ್ಲ ಎಂಬ ಮಾಹಿತಿ ಬಂದಿದೆ. ಕೂಡಲೇ ಪರಿಹಾರ ಕಾರ್ಯ ಮಾಡಬೇಕು. ಪ್ರಧಾನಿ ನಾಳೆ, ನಾಡಿದ್ದರಲ್ಲೇ ರಾಜ್ಯಕ್ಕೆ ಬರಬೇಕು. ಇನ್ನೂ ರಾಜ್ಯ ಸರ್ಕಾರ ರಿಪೋರ್ಟ್ ಕೇಂದ್ರಕ್ಕೆ ಕಳಿಸಿದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಪ್ರಹ್ಲಾದ್ ಜೋಷಿ ವರದಿ ಬಂದಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಸಿಎಂ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ 5 ಸಾವಿರ ಕೋಟಿ ರಾಜ್ಯಕ್ಕೆ ಬಿಡುಗಡೆ ಮಾಡಬೇಕು. ಹೆಚ್ಚು ಹೆಲಿಕಾಪ್ಟರ್ ಗಳನ್ನು ಕಳುಹಿಸಿ ಕೊಡಬೇಕು ಎಂದರು.

    ಕೇರಳ, ಮಹಾರಾಷ್ಟ್ರಕ್ಕೆ ಕೇಂದ್ರ ಹಣ ಕೊಟ್ಟಿದೆ. ಆದರೆ ರಾಜ್ಯಕ್ಕೆ ಇನ್ನೂ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ಮಲತಾಯಿ ಧೋರಣೆ ಮಾಡಬಾರದು. 25 ಜನ ಸಂಸದರನ್ನ ಬಿಜೆಪಿಗೆ ಕೊಟ್ಟಿದೆ. ಯಡಿಯೂರಪ್ಪಗೆ ಅಹವಾಲು ಕೇಳಿದ್ದಕ್ಕೆ ಲಾಠಿಚಾರ್ಜ್ ಮಾಡಿಸಿದ್ದಾರೆ. ಲಾಠಿಚಾರ್ಜ್ ಮಾಡಿಸೋದ್ರಲ್ಲಿ ಯಡಿಯೂರಪ್ಪ ನಿಸ್ಸೀಮರು. ಈ ಹಿಂದೆ ಗೋಲಿಬಾರ್ ಮಾಡಿಸಿದ್ದರು. ಹಸಿರು ಶಾಲು ಹಾಕಿಕೊಳ್ತಾರೆ. ಜನ ಕಷ್ಟ ಹೇಳಿದ್ದಕ್ಕೆ ಲಾಠಿಚಾರ್ಜ್ ಮಾಡಿಸಿದ್ದಾರೆ. ಇವರಿಗೆ ಮನುಷ್ಯತ್ವ ಇದೆಯಾ? ಕೂಡಲೇ ಯಡಿಯೂರಪ್ಪ ಪ್ರಧಾನಿ ಮನವರಿಕೆ ಮಾಡಿ ಪ್ರವಾಹ ಸ್ಥಳಕ್ಕೆ ಭೇಟಿ ಕೊಡಿಸಬೇಕು. ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಆಗಬೇಕು ಎಂದರು ಆಗ್ರಹಿಸಿದರು.

  • 9 ದಿನದಲ್ಲಿ ಸುರಿದ 4 ತಿಂಗಳ ಮಳೆ – ಕರಾವಳಿ, ಮಲೆನಾಡಲ್ಲಿ ರೆಡ್ ಅಲರ್ಟ್

    9 ದಿನದಲ್ಲಿ ಸುರಿದ 4 ತಿಂಗಳ ಮಳೆ – ಕರಾವಳಿ, ಮಲೆನಾಡಲ್ಲಿ ರೆಡ್ ಅಲರ್ಟ್

    ಬೆಂಗಳೂರು: ನಾಲ್ಕು ತಿಂಗಳಲ್ಲಿ ಆಗಬೇಕಿದ್ದ ಮಳೆ ಕೇವಲ ಒಂಬತ್ತು ದಿನಗಳಲ್ಲಿಯೇ ಸುರಿದಿದೆ.

    ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ಸುರಿಯಬೇಕಿದ್ದ ಮಳೆ ಕೇವಲ 9 ದಿನಗಳಲ್ಲಿಯೇ ಸುರಿಯುವ ಮೂಲಕ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಆಗಸ್ಟ್ 1ರಿಂದ 9ರವರೆಗೆ ಭಾರೀ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. 10 ದಿನಗಳಲ್ಲಿ ಕಂಡುಕೇಳರಿಯದ ವರ್ಷಧಾರೆಯಾಗಿದೆ.

    ಬೆಳಗಾವಿ, ಧಾರವಾಡ- ವಾಡಿಕೆಗಿಂತ 6 ಪಟ್ಟು ಹೆಚ್ಚು ಮಳೆಯಾಗಿದೆ. ಹಾವೇರಿಯಲ್ಲಿ ವಾಡಿಕೆಗಿಂತ 7 ಪಟ್ಟು ಮಳೆಯಾದರೆ ಹಾಸನ, ಹಾವೇರಿ, ಶಿವಮೊಗ್ಗ, ಕೊಡಗಲ್ಲಿ 4 ಪಟ್ಟು ಮಳೆಯಾಗಿದೆ. ಒಟ್ಟಿನಲ್ಲಿ ಹಿಂದೆಂದೂ ಕಂಡು ಕೇಳರಿಯದಂತೆ ಮಳೆಯಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕೇವಲ ಮನುಷ್ಯರಷ್ಟೇ ಅಲ್ಲ ಮೂಕ ಪ್ರಾಣಿಗಳು ಕೂಡ ನಲುಗಿ ಹೋಗಿವೆ.

    ಸೋಮವಾರದವರೆಗೂ ಪ್ರಳಯ ಮಳೆ ಎಚ್ಚರಿಕೆಯಿದ್ದು, ಕರ್ನಾಟಕದ 6 ಜಿಲ್ಲೆಗಳಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

  • ಮುಂಗಾರು ಚುರುಕಾಯ್ತು! – ದಕ್ಷಿಣ ಕೇರಳದಲ್ಲಿ ಎಡೆ ಬಿಡದೆ ಸುರಿಯುತ್ತಿದೆ ಮಳೆ

    ಮುಂಗಾರು ಚುರುಕಾಯ್ತು! – ದಕ್ಷಿಣ ಕೇರಳದಲ್ಲಿ ಎಡೆ ಬಿಡದೆ ಸುರಿಯುತ್ತಿದೆ ಮಳೆ

    ತಿರುವನಂತಪುರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೇ ನೈಋತ್ಯ ಮಾರುತವು ಕೇರಳ ಹಾಗೂ ಈಶಾನ್ಯ ರಾಜ್ಯಗಳನ್ನು ಪ್ರವೇಶಿಸಿದ್ದು ಈ ಬಾರಿಯ ಮುಂಗಾರು ಮಳೆ ಅಧಿಕೃತವಾಗಿ ಶುರುವಾಗಿದೆ.

    ಬಿರು ಬಿಸಿಲಿನಿಂದ ತತ್ತರಿಸುತ್ತಿದ್ದ ಕೇರಳದ ಜನತೆಗೆ ಮಂಗಳವಾರ ಮುಂಜಾನೆಯಿಂದ ಆರಂಭವಾದ ಮಳೆ ರಿಲೀಫ್ ನೀಡಿದೆ. ಕೇರಳಕ್ಕೆ ಮುಂಗಾರು ಮಾರುತ ಪ್ರವೇಶಿಸಿದೆ ಎಂದು ಕೇರಳ ಹವಾಮಾನ ಇಲಾಖೆ ಹೇಳಿದೆ.

    ಮುಂಗಾರು ಮಾರುತ ಪ್ರವೇಶ ಮಾಡಿದ್ದರಿಂದ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಕಣ್ಣೂರು, ಮಲಪ್ಪುರಂ, ಕೋಯಿಕ್ಕೋಡ್‍ನಲ್ಲಿ ಮುಂಜಾನೆ ಬಿರುಸಿನ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೇರಳದ ವೈಕಂ ಹಾಗೂ ಮಾವೇಲಿಕ್ಕರ ಎಂಬಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ 4 ದಿನಗಳ ಕಾಲ ಕೇರಳದಾದ್ಯಂತ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳ ಹಾಗೂ ಲಕ್ಷದ್ವೀಪದಲ್ಲಿ ಜೋರಾಗಿ ಸುರಿಯುತ್ತಿದೆ. ಕರ್ನಾಟಕಕ್ಕೆ ಜೂನ್ ಮೊದಲ ವಾರ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.