Tag: ಕರ್ನಾಟಕ ಮಳೆ

  • ನಿರಂತರ ಮಳೆಯಿಂದ ಕೆರೆಯಂತಾದ ಬಡಾವಣೆ- ರಸ್ತೆ, ಉದ್ಯಾನವನ ಮಾಯ

    ನಿರಂತರ ಮಳೆಯಿಂದ ಕೆರೆಯಂತಾದ ಬಡಾವಣೆ- ರಸ್ತೆ, ಉದ್ಯಾನವನ ಮಾಯ

    – ತಲೆಕೆಡಿಸಿಕೊಳ್ಳದ ರಾಯಚೂರು ನಗರಸಭೆ
    – ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಿವಾಸಿಗಳು

    ರಾಯಚೂರು: ನಗರದಲ್ಲಿ ನಿರಂತರವಾಗಿ ಸುರಿದ ಮಳೆ ಕೆಲವೆಡೆ ಭಾರೀ ಅವಾಂತರ ಸೃಷ್ಟಿಸಿದೆ. ಕೆಲ ಪ್ರದೇಶದ ಜನ ಮನೆಯಿಂದ ಹೊರಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ನೀರಿನಿಂದ ರಸ್ತೆಗಳೇ ಮಾಯವಾಗಿವೆ. ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಇಲ್ಲಿನ ಬೆಲ್ಲಂ ಕಾಲೋನಿಯಲ್ಲಿ ಸುಮಾರು ಐದು ಅಡಿಯಷ್ಟು ನೀರು ನಿಂತಿದೆ. ಇದರಿಂದ ಜನ ಹೊರಗಡೆ ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ಹರಿದು ಹೋಗದೆ ನಿಂತಲ್ಲೇ ನಿಂತಿದೆ. ರಸ್ತೆ, ಗಾರ್ಡನ್ ಜಾಗ, ಖಾಲಿ ಸೈಟ್ ಯಾವುದು ಎಲ್ಲಿದೆ ಅನ್ನೋದು ತಿಳಿಯದಷ್ಟು ಮಟ್ಟಿಗೆ ನೀರು ನಿಂತಿದೆ. ಐದು ಅಡಿಯಷ್ಟು ನೀರು ರಸ್ತೆಯಲ್ಲಿ ನಿಂತಿರುವುದರಿಂದ ಕಾರು, ಬೈಕ್ ಓಡಾಟಕ್ಕೆ ಅಡ್ಡಿಯಾಗಿದೆ.

    ಚರಂಡಿ ವ್ಯವಸ್ಥೆ ಸರಿಪಡಿಸಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸಿದರೆ ಇಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಯುತ್ತದೆ. ಆದ್ರೆ ಕಳೆದ ಐದು ವರ್ಷಗಳಿಂದ ಇಲ್ಲಿನ ನಿವಾಸಿಗಳು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ಎಡಬಿಡದೆ ಎರಡು ದಿನ ಕಾಲ ಮಳೆ ಸುರಿದಿದ್ದರಿಂದ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಸ್ವಲ್ಪ ತಗ್ಗು ಪ್ರದೇಶದಲ್ಲಿ ಉದ್ಯಾನವನದ ಜಾಗ ಇರುವುದರಿಂದ ಮಳೆಯ ನೀರೆಲ್ಲಾ ತಗ್ಗುಪ್ರದೇಶದಲ್ಲಿ ನಿಂತಿದೆ. ಮಳೆ ಹೆಚ್ಚಿನ ಪ್ರಮಾಣದಲ್ಲೇ ಸುರಿದಿದ್ದರಿಂದ ಪಕ್ಕದಲ್ಲಿನ ರಸ್ತೆಯೂ ಮುಳುಗಡೆಯಾಗಿದೆ. ಭಯದಲ್ಲೇ ನೀರಿನಲ್ಲಿ ರಸ್ತೆಯನ್ನ ಹುಡುಕಿಕೊಂಡು ಕೆಲವರು ಓಡಾಡುತ್ತಿದ್ದಾರೆ. ಇನ್ನೂ ಕೆಲವರು ಮನೆಬಿಟ್ಟು ಹೊರಗೆ ಬಂದಿಲ್ಲ. ನೀರು ನಿಂತಲ್ಲೆ ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿಯೂ ಹೆಚ್ಚಾಗಿದೆ. ಕೊರೊನಾ ವೈರಸ್ ಭೀತಿಯಿಂದ ಈಗಾಗಲೇ ಕಂಗಾಲಾಗಿರುವ ಜನರಿಗೆ ಮಳೆಯಿಂದ ಇನ್ನಷ್ಟು ಆತಂಕ ಶುರುವಾಗಿದೆ.

    ಕೂಡಲೇ ನೀರನ್ನ ಖಾಲಿ ಮಾಡಿ ರಾಜಕಾಲುವೆಗೆ ಚರಂಡಿ ಸಂಪರ್ಕ ಕಲ್ಪಿಸುವಂತೆ ಬೆಲ್ಲಂ ಕಾಲೋನಿ ನಿವಾಸಿಗಳು ರಾಯಚೂರು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಸದ್ಯ ರಾಯಚೂರಿನಲ್ಲಿ ಮಳೆ ನಿಂತಿದ್ದು ಇನ್ನೂ ಹೆಚ್ಚಿನ ಪ್ರಮಾಣದ ಮಳೆ ಬಂದರೆ ಇಲ್ಲಿನ ನಿವಾಸಿಗಳು ಇನ್ನೂ ಹೆಚ್ಚಿನ ತೊಂದರೆಯನ್ನ ಅನುಭವಿಸಲಿದ್ದಾರೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತು ನೀರನ್ನು ಖಾಲಿ ಮಾಡುವ ವ್ಯವಸ್ಥೆ ಮಾಡಬೇಕು ಅನ್ನೋದು ಇಲ್ಲಿನ ನಿವಾಸಿಗಳ ಮನವಿಯಾಗಿದೆ.

  • ಕೊರೊನಾ ನಡುವೆಯೇ ರಾಜ್ಯದಲ್ಲಿ ಮಳೆಯಬ್ಬರ

    ಕೊರೊನಾ ನಡುವೆಯೇ ರಾಜ್ಯದಲ್ಲಿ ಮಳೆಯಬ್ಬರ

    ಬೆಂಗಳೂರು: ಕೊರೊನಾ ನಡುವೆಯೇ ರಾಜ್ಯದಲ್ಲಿ ಮಳೆಯಬ್ಬರ ಹೆಚ್ಚಾಗಿದೆ. ಯಾದಗಿರಿಯಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು ಚಾರ್ ಕಮಾನ್ ಬಳಿ ನೋಡನೋಡುತ್ತಿದ್ದಂತೆ ಹಳ್ಳದಲ್ಲಿ ಕಾರು ಕೊಚ್ಚಿಹೋಗಿದೆ.

    ಕಲಬುರಗಿಯಲ್ಲಿ ಭಾರೀ ಮಳೆ ಕಾರಣ ದಾರಿ ಕಾಣದೇ ಸೇತುವೆಯೊಂದಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ನೀರಿಗೆ ಬಿದ್ದು ಕೊಚ್ಚಿ ಹೋಗ್ತಿದ್ದ ಕ್ಲೀನರ್‍ನನ್ನು ಸ್ಥಳೀಯರು ರಕ್ಷಿಸಿದ್ದಾರೆ. ನಾಗರಾಳ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದ್ದು 8 ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಕನಕಪುರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಚಿಮ್ಮನಚೋಡ್-ಮನ್ನಾಖೇಳಿ ಪ್ರಮುಖ ರಸ್ತೆ ಸೇತುವೆ ಮುಳುಗಿದೆ.

    ರಾಯಚೂರಲ್ಲಿ ಶಕ್ತಿನಗರದಿಂದ ಕರೇಕಲ್ ಕಾಡ್ಲೂರು, ಗುರ್ಜಾಪುರಿಗೆ ಹೋಗುವ ಮಾರ್ಗ ಕಡಿತ ಕಡಿತಗೊಂಡಿದೆ. ನಗರದ ಬಹುತೇಕ ರಸ್ತೆಗಳಲ್ಲಿ ನೀರು ನಿಂತಿವೆ. ಮನೆಗಳು ಕುಸಿಯೋ ಭೀತಿ ಶುರುವಾಗಿದೆ. ಕರಾವಳಿಯಲ್ಲೂ ಭಾರೀ ಮಳೆಯಾಗ್ತಿದ್ದು ದಕ್ಷಿಣಕನ್ನಡ, ಉತ್ತರ ಕನ್ನಡದಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ. ಬೆಂಗಳೂರು, ಚಿಕ್ಕೋಡಿ, ದಾವಣಗೆರೆ, ಹಾವೇರಿ, ಕೊಡಗು, ಶಿವಮೊಗ್ಗ, ತುಮಕೂರು, ಮಂಡ್ಯ, ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗ್ತಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣವಿತ್ತು. ಬೆಳಗ್ಗೆಯಿಂದಲೇ ನಗರದ ಹಲವು ಭಾಗಗಳಲ್ಲಿ ತುಂತುರು ಮಳೆಯಾಗಿತ್ತು. ಮಧ್ಯಾಹ್ನದ ಬಳಿಕ ಮಳೆಯ ಅಬ್ಬರ ಹೆಚ್ಚಾಗಿತ್ತು. ಪೀಣ್ಯ, ಆರ್‍ಎಂಸಿ ಯಾರ್ಡ್, ಯಶವಂತಪುರ, ಜಾಲಹಳ್ಳಿ, ರಾಜಾಜಿನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ಶೇಷಾದ್ರಿಪುರಂ, ಟೌನ್ ಹಾಲ್, ಶಿವಾನಂದ ಸರ್ಕಲ್ ಸೇರಿದಂತೆ ಹಲವೆಡೆ ಮಳೆಯಾಗಿದೆ.

  • ಉ. ಕರ್ನಾಟಕ, ಮಲೆನಾಡು, ಕರಾವಳಿ ಭಾಗದ ಹಲವೆಡೆ ಮಳೆ

    ಉ. ಕರ್ನಾಟಕ, ಮಲೆನಾಡು, ಕರಾವಳಿ ಭಾಗದ ಹಲವೆಡೆ ಮಳೆ

    ಬೆಂಗಳೂರು: ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದ ಹಲವೆಡೆ ಮಳೆ ಮುಂದುವರೆದಿದ್ದು, ಹಳ್ಳಕೊಳ್ಳಗಳು ತುಂಬುತ್ತಿವೆ. ಕೆಲವೆಡೆ ಪ್ರವಾಹ ಪರಿಸ್ಥಿತಿಯೂ ಕಂಡುಬರಲು ಶುರುವಾಗಿದೆ. ಈ ಬೆನ್ನಲ್ಲೇ ಸರ್ಕಾರ ಎಚ್ಚೆತ್ತಿದೆ.

    ಇಂದು ನಡೆದ ಡಿಸಿಗಳ ಸಭೆಯಲ್ಲಿ ಮಳೆ ಮತ್ತು ಪ್ರವಾಹ ಸಂಬಂಧ ಮಾಹಿತಿ ಪಡೆದ ಸಿಎಂ ಯಡಿಯೂರಪ್ಪ, ಹೆಚ್ಚು ಮಳೆ ಆಗುತ್ತಿರುವ ಪ್ರದೇಶದಲ್ಲಿ ಜನರ ಸ್ಥಳಾಂತರಕ್ಕೆ ಮೊದಲೇ ಸ್ಥಳ ಗುರುತಿಸುವಂತೆ ಸೂಚಿಸಿದರು. ಮಹಾರಾಷ್ಟ್ರದ ಕೋಲ್ಹಾಪುರ ಡಿಸಿ ಜೊತೆ ಸತತ ಸಂಪರ್ಕದಲ್ಲಿದ್ದು, ಕೃಷ್ಣಾ ನದಿಗೆ ಹರಿದುಬರುವ ನೀರಿನ ಪ್ರಮಾಣದ ಕುರಿತು ಜಾಗ್ರತೆ ವಹಿಸಿ ಎಂದಿದ್ದಾರೆ. ಅಲ್ಲದೇ ರಾಜಾಪೂರ ಬ್ಯಾರೇಜಿನಲ್ಲಿ ರಾಜ್ಯದ ಎಂಜಿನಿಯರ್ ಒಬ್ಬರನ್ನು ನಿಯೋಜಿಸುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ.

    ಯಾದಗಿರಿ ಜಿಲ್ಲೆಯ ನಾರಾಯಣಪುರ ಡ್ಯಾಂಗೆ ಒಳಹರಿವು ಹೆಚ್ಚಿರುವ ಕಾರಣ ಐದು ಕ್ರೆಸ್ಟ್ ಗೇಟ್‍ಗಳನ್ನು ಓಪನ್ ಮಾಡಲಾಗಿದ್ದು, 35 ಸಾವಿರ ಕ್ಯೂಸೆಕ್ ನೀಡನ್ನು ಹೊರಬಿಡಲಾಗ್ತಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. ವಡಗೇರಾ ಬಳಿಯ ಕೃಷ್ಣಾ ನದಿಪಾತ್ರದಲ್ಲಿ ಮೊಸಳೆ ಕಾಟ ಹೆಚ್ಚಾಗಿದೆ.

  • ಮಳೆಯ ತವರು ಕೊಟ್ಟಿಗೆಹಾರದಲ್ಲಿ ಕಾಮನಬಿಲ್ಲು- ಸ್ಥಳೀಯರಲ್ಲಿ ಆಶ್ಚರ್ಯ

    ಮಳೆಯ ತವರು ಕೊಟ್ಟಿಗೆಹಾರದಲ್ಲಿ ಕಾಮನಬಿಲ್ಲು- ಸ್ಥಳೀಯರಲ್ಲಿ ಆಶ್ಚರ್ಯ

    ಚಿಕ್ಕಮಗಳೂರು: ಜಿಲ್ಲೆಯ ಮಳೆಯ ತವರೂರಾದ ಕೊಟ್ಟಿಗೆಹಾರ ಗ್ರಾಮದಲ್ಲಿ ಕಾಮನಬಿಲ್ಲು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್ ಸೇರಿದಂತೆ ಸುತ್ತಮುತ್ತ ಹಳ್ಳಿಗಳ ಜನ ಜೂನ್ 10-15ರಿಂದ ಸೆಪ್ಟೆಂಬರ್-ಅಕ್ಟೋಬರ್ ವರೆಗೂ ಸೂರ್ಯನನ್ನ ನೋಡೋದೇ ತೀರಾ ವಿರಳ. ಕಾರಣ ಇಲ್ಲಿ ಜೂನ್ ಮೊದಲು ಅಥವಾ ಎರಡನೇ ವಾರದಲ್ಲಿ ಮಳೆ ಆರಂಭವಾದರೆ ಸೆಪ್ಟೆಂಬರ್-ಅಕ್ಟೋಬರ್ ವರೆಗೂ ಒಂದೇ ಸಮನೆ ಸುರಿಯುತ್ತಿರುತ್ತದೆ. ಜನ ಮನೆಯಿಂದ ಹೊರಬರೋದಕ್ಕೂ ಹಿಂದೇಟು ಹಾಕುತ್ತಾರೆ. ಸೂರ್ಯನನ್ನ ನೋಡೋದು ತೀರಾ ವಿರಳ.

    ಜುಲೈ ಎರಡನೇ ವಾರ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರುವಂತೆ ಭಾಸವಾಗ್ತಿರೋ ಮನಮೋಹಕ ಕಾಮನಬಿಲ್ಲು ಸ್ಥಲೀಯರಲ್ಲಿ ಆಶ್ಚರ್ಯದ ಜೊತೆ ಕುತೂಹಲ ಮೂಡಿಸಿದೆ. ಸಂಜೆ 6.30ರ ವೇಳೆಗೆ ಗೋಚರವಾದ ಈ ಕಾಮನಬಿಲ್ಲಿಗೆ ಸ್ಥಳೀಯರು ಫಿದಾ ಆಗೋದ್ರ ಜೊತೆ ಕಾಮನಬಿಲ್ಲನ್ನ ಕಂಡು ಮೂಕವಿಸ್ಮಿತರಾಗಿದ್ದಾರೆ. ಅಷ್ಟೆ ಅಲ್ಲದೆ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರೋ ಕಾಮನಬಿಲ್ಲು ಹೇಮಾವತಿ ನದಿಯ ಒಡಲಿನ ಮೇಲೆ ಬೆಳಕು ಚೆಲ್ಲಿದಂತೆ ಕಾಣುತ್ತಿದ್ದನ್ನು ಕಂಡು ಸ್ಥಳೀಯರು ಮತ್ತಷ್ಟು ಪುಳಕಿತರಾಗಿದ್ದಾರೆ.

    ಕಳೆದೊಂದು ವಾರದ ಹಿಂದೆ ಇದೇ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್ ಸುತ್ತಮುತ್ತ ಸುರಿದ ಭಾರೀ ಮಳೆಗೆ ಜನ ಆತಂಕಕ್ಕೀಡಾಗಿದ್ದರು. ಮಳೆ ಆರಂಭವಾಯಿತು. ಕಳೆದ ವರ್ಷ ಬದುಕನ್ನೇ ನುಂಗಿ ಹಾಕಿದ್ದ ವರುಣದೇವ ಈ ವರ್ಷ ಇನ್ನೇನು ಅನಾಹುತ ಸೃಷ್ಠಿಸಿ ಅವಾಂತರ ಮಾಡುತ್ತಾನೋ ಎಂದು ಸ್ಥಳೀಯರು ಕಂಗಾಲಾಗಿದ್ದರು. ಆದರೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸಂಪೂರ್ಣ ಕ್ಷೀಣಿಸಿದೆ.

    ಮಳೆ ಇಲ್ಲದಿದ್ದರೂ ಸದಾ ತಣ್ಣನೆಯ ಗಾಳಿ ಜೊತೆ ಯಾವಾಗಲು ಮೋಡ ಕವಿದ ವಾತಾವರಣವಿರೋ ಕೊಟ್ಟಿಗೆಹಾರದಲ್ಲಿ ಜುಲೈ ಎರಡನೇ ವಾರದಲ್ಲಿ ಬಿಸಿಲಿನ ಮಧ್ಯೆ ಕಾಮನಬಿಲ್ಲನ್ನು ಕಂಡು ಜನ ಪುಳಕಿತರಾಗಿದ್ದಾರೆ. ಜೊತೆಗೆ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಹೋದಂತೆ ಭಾಸವಾಗ್ತಿರೋ ಕಾಮನಬಿಲ್ಲನ್ನ ಕಂಡ ಸ್ಥಳೀಯರು ಸಂತಸ ಪಟ್ಟಿದ್ದಾರೆ.

  • ಕಳೆದ ಬಾರಿ ಜಾಗದಲ್ಲೇ ಮತ್ತೆ ಭೂಕುಸಿತದ ಆತಂಕ

    ಕಳೆದ ಬಾರಿ ಜಾಗದಲ್ಲೇ ಮತ್ತೆ ಭೂಕುಸಿತದ ಆತಂಕ

    -ಅಪಾಯದಂಚಿನಲ್ಲಿ 10 ಮನೆಗಳು

    ಮಡಿಕೇರಿ : ಕಳೆದ ಎರಡು ವರ್ಷಗಳಿಂದ ಕೊಡಗಿಗೆ ಪ್ರಕೃತಿ ಹೊಡೆತದ ಮೇಲೆ ಹೊಡೆತ ನೀಡುತ್ತಲೇ ಇದೆ. ಕಳೆದ ಬಾರಿಯ ಭಾರೀ ಮಳೆಯಿಂದ ತಡೆಗೋಡೆಯೊಂದು ಕುಸಿದು ಮನೆಯೊಂದು ಸಂಪೂರ್ಣ ನೆಲಸಮವಾಗಿತ್ತು. ಆದರೀಗ ಮತ್ತದೇ ಸ್ಥಳದಲ್ಲಿ ಭಾರೀ ಭೂಕುಸಿತವಾಗುವ ಆತಂಕದಲ್ಲಿ 10ಕ್ಕೂ ಹೆಚ್ಚು ಕುಟುಂಬಗಳು ನೆಮ್ಮದಿ ಕಳೆದುಕೊಂಡಿವೆ.

    ವಿರಾಜಪೇಟೆಯ ನೆಹರು ನಗರ ಬಡಾವಣೆಯಲ್ಲಿ ಕಳೆದ ಬಾರಿಯ ಮಳೆ ಸಂದರ್ಭ ತಡೆಗೋಡೆ ಸಂಪೂರ್ಣ ಕುಸಿದು ಬಿದ್ದಿತ್ತು. ಪರಿಣಾಮವಾಗಿ ಮಹಿಳೆಯೊಬ್ಬರ ಮನೆಯ ಮೇಲೆ ತಡೆಗೋಡೆ ಬಿದ್ದು, ಇಡೀ ಮನೆ ನೆಲಸಮವಾಗಿತ್ತು. ಮಳೆಗಾಲದ ಬಳಿಕ ಆ ಸ್ಥಳದಲ್ಲಿ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ಕೊಟ್ಟಿದ್ದ ಅಧಿಕಾರಿಗಳು ಮತ್ತೊಂದು ಮಳೆಗಾಲ ಆರಂಭವಾದರೂ ತಡೆಗೋಡೆ ನಿರ್ಮಿಸಿಲ್ಲ.

    ತಡೆಗೋಡೆ ನಿರ್ಮಿಸುವದಕ್ಕಾಗಿ ಬೇಸಿಗೆಯಲ್ಲೇ ದೊಡ್ಡ ಪ್ರಮಾಣದ ಅಡಿಪಾಯವನ್ನು ತೆಗೆದಿದ್ದಾರೆ. ಆದರೆ ಲಾಕ್‍ಡೌನ್ ಆಗಿದ್ದರಿಂದ ಅಷ್ಟಕ್ಕೆ ಕೆಲಸ ಸಂಪೂರ್ಣ ಸ್ಥಗಿತವಾಗಿದೆ. ಇದೀಗ ಮಳೆಗಾಲ ಆರಂಭವಾಗಿದ್ದು ಸುಮಾರು ಇಪ್ಪತ್ತು ಅಡಿಗೂ ಹೆಚ್ಚು ಎತ್ತರದ ಭೂಮಿ ಕುಸಿಯುವ ಭೀತಿ ಇದೆ.

    ಕಳೆದ ವರ್ಷವೇ ಭೂಮಿ ಕುಸಿದಿರುವ ಮೇಲ್ಭಾಗದಲ್ಲಿ 25 ಕ್ಕೂ ಹೆಚ್ಚು ಮನೆಗಳಿದ್ದು, ಹತ್ತು ಮನೆಗಳು ಸಂಪೂರ್ಣ ಅಪಾಯದಲ್ಲಿವೆ. ಮಳೆ ಸುರಿಯಲಾರಂಭಿಸಿದ್ದು, ಜಾಸ್ತಿಯಾದಲ್ಲಿ ಯಾವ ಸಂದರ್ಭದಲ್ಲಿಯಾದರೂ ಮನೆಗಳು ಕುಸಿದು ಬೀಳಲಿವೆ. ಸದ್ಯ ಪಟ್ಟಣ ಪಂಚಾಯಿತಿ ಸಿಬ್ಬಂದಿ ಕುಸಿದಿರುವ ಸ್ಥಳಕ್ಕೆ ಪ್ಲಾಸ್ಟಿಕ್ ಹೊದಿಸಿದ್ದಾರೆ. ಆದರೂ ಮಣ್ಣು ಮಾತ್ರ ಅದರೊಳಗೆ ಕುಸಿಯುತ್ತಲೇ ಇದೆ. ಹೀಗಾಗಿ ಜನರು ಜೀವ ಕೈಯಲ್ಲಿ ಬಿಗಿ ಹಿಡಿದು ಕಾಲ ದೂಡುತ್ತಿದ್ದಾರೆ.

    ಕಷ್ಟಪಟ್ಟು ಮಾಡಿದ ಮನೆ ಹೀಗಾಯಿತಲ್ಲಾ ಎನ್ನೋ ಆತಂಕದಲ್ಲಿ ಯೋಚಿಸಿ ಹಂಸ ಎಂಬವರ 65 ವರ್ಷದ ವೃದ್ಧ ಪತ್ನಿ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ದಾರೆ. ಇತ್ತ ಮನೆಯೂ ಬೀಳುವ ಆತಂಕದಲ್ಲಿದ್ದು, ಅತ್ತ ಪತ್ನಿಯೂ ಆಸ್ಪತ್ರೆ ಸೇರಿರುವ ನೋವಿನಲ್ಲೇ ಕಾಲ ದೂಡುತ್ತಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಮಳೆಗಾಲ ಆರಂಭವಾಗಿದ್ದು ಭಾರೀ ಪ್ರಮಾಣದಲ್ಲಿ ಮಳೆ ಸುರಿದಲ್ಲಿ 10 ಮನೆಗಳು ನೆಲಸಮವಾಗುವ ಭಯದಲ್ಲೇ ಜನರು ಬದುಕುತ್ತಿದ್ದಾರೆ. ಆದಷ್ಟು ಬೇಗ ತಡೆಗೋಡೆ ನಿರ್ಮಿಸಿ ಮುಂದೆ ಆಗುವ ಅಪಾಯ ತಪ್ಪಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

  • ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ

    ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ

    ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗ್ತಿದೆ. ಉಡುಪಿ ಜಿಲ್ಲೆಯಲ್ಲಿ ಧಾರಕಾರ ಮಳೆಯಾಗುತ್ತಿದೆ. ಕಾಲುವೆಗಳೆಲ್ಲಾ ತುಂಬಿ ರಸ್ತೆಗಳಲ್ಲಿ ಮಳೆ ನೀರು ಹರಿಯುತ್ತಿದೆ. ಕಳೆದ ರಾತ್ರಿ ಕಾರ್ಕಳ, ಕುಂದಾಪುರ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು ನದಿಗಳು ತುಂಬಲು ಶುರುವಾಗಿವೆ.

    ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಳೆ ಮುಂದುವರಿದಿದ್ದು, ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಈ ಮಧ್ಯೆ ಚಾರ್ಮಾಡಿ ಘಾಟ್‍ನಲ್ಲಿ ವಾಹನ ನಿಲುಗಡೆ ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಪಾಯಕಾರಿ ಸ್ಥಳಗಳಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ನಾಳೆಯವರೆಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

    ಮಂಗಳೂರು ನಗರದಲ್ಲೂ ಭಾರೀ ಮಳೆಯಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಮಳೆಗೆ ಹೈರಾಣಾಗಿದ್ದಾರೆ. ಭಾರೀ ಮಳೆಯಿಂದ ರಸ್ತೆ ತುಂಬೆಲ್ಲಾ ನೀರು ತುಂಬಿ ವಾಹನ ಸವಾರರು ಪರದಾಡುವಂತಾಯಿತು. ಪಶ್ಚಿಮ ಘಟ್ಟ ಪ್ರದೇಶದಲ್ಲೂ ಭಾರೀ ಮಳೆ ಸುರಿಯುತ್ತಿರುವ ಕಾರಣ, ನೇತ್ರಾವತಿ, ಕುಮಾರಾಧಾರಾ, ಮಂಗಳೂರಿನ ಫಲ್ಗುಣಿ ನದಿಯಲ್ಲೂ ನೀರಿನ ಹರಿವು ಜಾಸ್ತಿಯಾಗಿದೆ. ಇನ್ನೂ ಎರಡು ದಿನಗಳ ಭಾರೀ ಗಾಳಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಜನರಿಗೆ ಸೂಚಿಸಿದೆ.

    ಗದಗ ಜಿಲ್ಲೆಯ ಹಲವೆಡೆ ವರುಣದೇವ ಅಬ್ಬರಿಸಿದ್ದು, ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಮಳೆ ಇಲ್ಲದೇ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇತ್ತ ಬೆಂಗಳೂರಿನ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಶುಕ್ರವಾರ ಸಂಜೆ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಿತ್ತು. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮುಂದುವರೆದಿದೆ. ಮುಂಬೈನ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಮುಂಬೈ, ಥಾಣೆ ರತ್ನಗಿರಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಪ್ರಕಟಿಸಲಾಗಿದೆ.

    https://www.facebook.com/publictv/videos/297544111602164/

  • ರಾಜ್ಯದಲ್ಲಿ ಮತ್ತೆರಡು ದಿನ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

    ರಾಜ್ಯದಲ್ಲಿ ಮತ್ತೆರಡು ದಿನ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ಮತ್ತೆ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಭಾಗದಲ್ಲಿ ಎರಡು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.

    ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ಮಳೆಯಾಗಿತ್ತು. ಈಗ ಇಂದು ಮತ್ತು ನಾಳೆ ಮಳೆ ಸುರಿಯುವ ಸಾಧ್ಯತೆಯಿದೆ. ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಮಳೆಯ ಅಬ್ಬರಕ್ಕೆ ಕೊರೊನಾ ಮಹಾಮಾರಿ ಹೆಚ್ಚಾಗುವ ಭೀತಿ ಈಗ ಎದುರಾಗಿದೆ. ತಂಪಾದ ವಾತಾವರಣದಲ್ಲಿ ಕೊರೊನಾ ವೈರಸ್ ಬೇಗ ಹರಡುತ್ತದೆ. ಆದ್ದರಿಂದ ಮನೆಯಿಂದ ಹೊರ ಬರಬೇಡಿ, ಮನೆಯಲ್ಲೇ ಇರಿ ಎನ್ನುವ ಸಲಹೆ ವ್ಯಕ್ತವಾಗಿದೆ.

  • ಅತ್ತ ಮನೆ ಇಲ್ಲ, ಇತ್ತ ಚಿಕಿತ್ಸೆಯೂ ಇಲ್ಲ- ಜ್ವರದಿಂದ ಬಾಲಕ ಪರದಾಟ

    ಅತ್ತ ಮನೆ ಇಲ್ಲ, ಇತ್ತ ಚಿಕಿತ್ಸೆಯೂ ಇಲ್ಲ- ಜ್ವರದಿಂದ ಬಾಲಕ ಪರದಾಟ

    – ಇಂದಿನಿಂದ ರಾಯರ ಆರಾಧನೆ

    ರಾಯಚೂರು: ಭೀಕರ ಪ್ರವಾಹದಿಂದ ಅತ್ತ ಮನೆಯೂ ಇಲ್ಲ, ಇತ್ತ ಚಿಕಿತ್ಸೆಯೂ ಸಿಗದೆ ಬಾಲಕನೋರ್ವ ಪರದಾಡುತ್ತಿರುವ ಘಟನೆ ರಾಯಚೂರಿನ ಯಳಗುಂದಿ ನಿರಾಶ್ರಿತರ ಕೇಂದ್ರದಲ್ಲಿ ನಡೆದಿದೆ.

    ಲಿಂಗಸುಗೂರಿನ ಕಡದರಗಡ್ಡಿ ನಡುಗಡ್ಡೆಯ ಬಾಲಕ ಯಲ್ಲಪ್ಪ ಕಳೆದ ಎಂಟು ದಿನಗಳಿಂದ ಬಾಲಕ ಜ್ವರ ಹಾಗೂ ಕಾಲು ಬಾವಿನಿಂದ ನರಳಾಡುತ್ತಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ವೈದ್ಯರು ಬಾಲಕನನ್ನು ರಾಯಚೂರಿಗೆ ಕಳುಹಿಸಲು ಸೂಚನೆ ನೀಡಿದ್ದಾರೆ.

    ಆದರೆ ಜಲದುರ್ಗ ಸೇತುವೆ ಮುಳುಗಡೆ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ನಿರಾಶ್ರಿತರ ಕೇಂದ್ರದಿಂದ ಹೊರಗಡೆ ಬಾರದ ಸ್ಥಿತಿಯಲ್ಲಿದ್ದಾರೆ. ಹೆಲಿಕಾಪ್ಟರ್ ಮೂಲಕವಾದರೂ ಕರೆದ್ಯೊಯ್ದು ಬಾಲಕನಿಗೆ ಚಿಕಿತ್ಸೆ ಕೊಡಿಸುವಂತೆ ಪೋಷಕರು ಜಿಲ್ಲಾಡಳಿತದ ಬಳಿ ಮನವಿ ಮಾಡಿದ್ದಾರೆ.

    ಇತ್ತ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದರೂ ಪ್ರವಾಹದ ಭೀತಿಯಂತೂ ಸದ್ಯಕ್ಕೆ ದೂರವಾಗಿದೆ. ಹೀಗಾಗಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲು ಸಕಲ ಸಿದ್ಧತೆಗಳು ನಡೆದಿದೆ. ಇಂದಿನಿಂದ ಆಗಸ್ಟ್ 18 ವರೆಗೆ ರಾಯರ 348ನೇ ಆರಾಧನಾ ಮಹೋತ್ಸವ ನಡೆಯಲಿದೆ.

    ಇಂದು ಸಂಜೆ ಗೋಪೂಜೆ, ಧ್ವಜಾರೋಹಣದೊಂದಿಗೆ ಆರಾಧನೆಗೆ ಚಾಲನೆ ಸಿಗಲಿದೆ. ಇನ್ನು ಆಗಸ್ಟ್ 16ರಂದು ಪೂರ್ವರಾಧನೆ ನಡೆಯಲಿದ್ದು ಈ ಬಾರಿಯ ವಿಶೇಷವೆಂದರೆ ತಿರುಪತಿ ತಿರುಮಲ ದೇವಸ್ಥಾನದಿಂದ ಬರುವ ಶೇಷವಸ್ತ್ರವನ್ನು ಪೂರ್ವಾರಾಧನೆ ದಿನವೇ ರಾಯರಿಗೆ ಸರ್ಮಪಣೆ ಮಾಡಲಾಗುತ್ತಿದೆ.

  • ಮನೆ ಕಟ್ಟಿಕೊಡ್ಲಿಲ್ಲವೆಂದ್ರೆ ಸರ್ಕಾರವನ್ನೇ ಕೆಡವುತ್ತೇನೆ- ಬಾಲಚಂದ್ರ ಜಾರಕಿಹೊಳಿ

    ಮನೆ ಕಟ್ಟಿಕೊಡ್ಲಿಲ್ಲವೆಂದ್ರೆ ಸರ್ಕಾರವನ್ನೇ ಕೆಡವುತ್ತೇನೆ- ಬಾಲಚಂದ್ರ ಜಾರಕಿಹೊಳಿ

    ಚಿಕ್ಕೋಡಿ(ಬೆಳಗಾವಿ): ಮನೆ ಕಟ್ಟಿಕೊಡಲಿಲ್ಲ ಅಂದರೆ ಈ ಸರ್ಕಾರವನ್ನೇ ಕೆಡವಿ ಬಿಡುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.

    ಅರಭಾವಿ ಮತಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಪ್ರವಾಸ ಮಾಡಿದ ಶಾಸಕರು, ನಿಮಗೆ ಮನೆ ಕಟ್ಟಿಸಿಕೊಡುವ ಜವಾಬ್ದಾರಿ ನಮ್ಮದು. ಒಂದು ವೇಳೆ ಸರ್ಕಾರ ಮನೆ ಕಟ್ಟಿಕೊಡಲಿಲ್ಲ ಅಂದರೆ ಸರ್ಕಾರವನ್ನೇ ಕೆಡವುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮತಕ್ಷೇತ್ರದ ಸಂತ್ರಸ್ತರಿಗೆ ಬಾಲಚಂದ್ರ ಅವರು ಅಭಯ ನೀಡಿದ್ದಾರೆ.

    ಇತ್ತ ಸತತ 12 ದಿನಗಳ ಕಾಲ ಜೀವ ರಕ್ಷಿಸಿದ ಸೈನಿಕರಿಗೆ ರಾಖಿ ಕಟ್ಟಿ ಅವರನ್ನು ಇಂದು ಹೆಮ್ಮೆಯಿಂದ ಕಳುಹಿಸಿ ಕೊಡಲಾಯಿತು. ಚಿಕ್ಕೋಡಿಯ ಲೋಕೊಪಯೋಗಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 85 ಜನ ವೀರಜವಾನರಿಗೆ ಮಹಿಳೆಯರು ರಾಖಿ ಕಟ್ಟಿ ಬೀಳ್ಕೊಟ್ಟಿದ್ದಾರೆ. ಈ ವೇಳೆ ಮಹಿಳೆಯರಿಗೆ ಸೈನಿಕರು ಉಡುಗೋರೆಯಾಗಿ ಸೀರೆಗಳನ್ನು ನೀಡಿದ್ದಾರೆ. ಸುಮಾರು 5 ಸಾವಿರಕ್ಕೂ ಹೆಚ್ಚು ಜೀವಗಳನ್ನು ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದರು.

    ಬೆಳಗಾವಿ ಜಿಲ್ಲೆ ಕೃಷ್ಣಾ ನದಿ ಪ್ರವಾಹಕ್ಕೆ ನಲುಗಿ ಹೋಗಿದೆ. ಜಿಲ್ಲೆಯ ಅನೇಕ ಗ್ರಾಮಗಳು ಜಲಾವೃತವಾಗಿದ್ದು ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹದಲ್ಲಿ ಜನರು ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದು, ಮಾತ್ರವಲ್ಲದೇ ಅವರ ಬದುಕೂ ನೀರಿನಲ್ಲಿ ಕೊಚ್ಚಿ ಹೋಗಿದೆ.

  • ಐವರು ರಕ್ಷಣಾ ಸಿಬ್ಬಂದಿಯೇ ನೀರುಪಾಲು?

    ಐವರು ರಕ್ಷಣಾ ಸಿಬ್ಬಂದಿಯೇ ನೀರುಪಾಲು?

    – ಜೀವ ಉಳಿಸಿದವರಿಗಾಗಿ ಹುಡುಕಾಟ

    ಕೊಪ್ಪಳ: ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಣೆ ಮಾಡುತ್ತಿರುವ ರಕ್ಷಣಾ ಸಿಬ್ಬಂದಿಯೇ ನೀರುಪಾಲಾದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ಬಳಿ ನಡೆದಿದೆ.

    ತುಂಗಭದ್ರಾ ನದಿ ಪ್ರವಾಹದಲ್ಲಿ ಬೋಟ್ ಮುಳುಗಿ ಐವರು ರಕ್ಷಣಾ ಸಿಬ್ಬಂದಿ ಕೊಚ್ಚಿ ಹೋಗಿದ್ದಾರೆ. ಎನ್‍ಡಿಆರ್‍ಎಫ್ ತಂಡದ ಇಬ್ಬರು ಹಾಗೂ ಬೋಟ್ ನಲ್ಲಿದ್ದ ಅಗ್ನಿ ಶಾಮಕ ದಳದ ಮೂವರು ಸಿಬ್ಬಂದಿ ನೀರುಪಾಲಾಗಿದ್ದಾರೆ.

    ವಿರುಪಾಪುರ ಗಡ್ಡಿಯಲ್ಲಿ ಸಿಲುಕಿದ್ದ ವಿದೇಶಿಗರು ಸೇರಿ ಸುಮಾರು 300 ಮಂದಿಯನ್ನು ರಕ್ಷಣೆ ಮಾಡಲು ಸಿಬ್ಬಂದಿ ತೆರಳಿದ್ದರು. ಆದರೆ ನೀರಿನ ರಭಸಕ್ಕೆ ಬೋಟ್ ಮುಗುಚಿ ಬಿದ್ದ ಹಿನ್ನಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಸಿಬ್ಬಂದಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಕಳೆದ 10 ದಿನಗಳಿಂದ ಎನ್‍ಡಿಆರ್ ಎಫ್ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.