Tag: ಕರ್ನಾಟಕ ಮಳೆ

  • ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಭರ್ತಿ, ಮುಳುಗಡೆ ಭೀತಿ- ಇತ್ತ ತುಂಬಿದ ತುಂಗಾ ನದಿ

    ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಭರ್ತಿ, ಮುಳುಗಡೆ ಭೀತಿ- ಇತ್ತ ತುಂಬಿದ ತುಂಗಾ ನದಿ

    -ತುಂಗಾ ನದಿಗೆ ಈಶ್ವರಪ್ಪ ಬಾಗಿನ

    ಮಂಗಳೂರು/ಶಿವಮೊಗ್ಗ: ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಮುಳುಗುವ ಭೀತಿ ಎದುರಾಗಿದೆ.

    ಕಳೆದ ಎರಡು ದಿನದಿಂದ ಕರಾವಳಿ ಹಾಗೂ ಮಲೆನಾಡು, ಪಶ್ಚಿಮ ಘಟ್ಟದಲ್ಲಿ ಹೆಚ್ಚಿನ ಮಳೆಯಾಗಿದೆ. ಇಂದೂ ಕೂಡಾ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆ ನೀರು ಸಮುದ್ರ ಸೇರಲು ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ, ಕುಮಾರಧಾರ ನದಿಗಳಲ್ಲಿ ಹರಿದು ಬರುತ್ತಿದೆ. ಹೀಗಾಗಿ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಬಳಿ ಇರುವ ನೇತ್ರಾವತಿ ನದಿ ನೀರು ತುಂಬಿ ಹರಿಯುತ್ತಿದ್ದು ಸ್ನಾನಘಟ್ಟದ ಮೇಲ್ಭಾಗದವರೆಗೂ ನದಿ ನೀರು ಬರುತ್ತಿದೆ.

    ನದಿ ನೀರು ಅಪಾಯದ ಮಟ್ಟಮೀರಿ ಹರಿಯುತ್ತಿರೋದ್ರಿಂದ ನೇತ್ರಾವತಿ ಸ್ನಾನಘಟ್ಟದ ಬಳಿಗೆ ಭಕ್ತರಿಗೆ ಸಂಪೂರ್ಷವಾಗಿ ನಿಷೇಧ ಹೇರಲಾಗಿದೆ. ಪಶ್ಚಿಮ ಘಟ್ಟದಲ್ಲಿ ಇದೇ ರೀತಿ ಮಳೆ ಮುಂದುವರೆದರೆ ಸ್ನಾನಘಟ್ಟ ಸಂಪೂರ್ಣವಾಗಿ ಮುಖುಗಡೆಯಾಗುವ ಸಾಧ್ಯತೆ ಇದೆ.

    ಈಶ್ವರಪ್ಪ ಬಾಗಿನ: ಕಳೆದೆರೆಡು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ತುಂಗಾ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಡ್ಯಾಂ ನಿಂದ ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಹರಿಯುವ ತುಂಗಾ ನದಿ ಭರ್ತಿಯಾಗಿ ಹರಿಯುತ್ತಿದ್ದು, ಕೋರ್ಪಲಯ್ಯನ ಛತ್ರದ ಬಳಿಯ ಮಂಟಪ ಮುಳುಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಚಿವ ಕೆ.ಎಸ್. ಈಶ್ವರಪ್ಪ ಕುಟುಂಬ ಸಮೇತರಾಗಿ ತುಂಗಾ ನದಿಗೆ ಬಾಗಿನ ಅರ್ಪಿಸಿದರು.

    ಈ ವೇಳೆ ಮಾತನಾಡಿದ ಸಚಿವರು, ತುಂಗಾ ನದಿ ಸಂಪೂರ್ಣವಾಗಿ ತುಂಬಿ ಹರಿಯುತ್ತಿರುವುದು ಸಂತಸ ತಂದಿದೆ. ರೈತರ ಮೊಗದಲ್ಲಿ ಹರ್ಷ ಕಾಣುತ್ತಿದ್ದೇವೆ. ಕಳೆದ ಭಾರಿ ನಿರೀಕ್ಷೆ ಮೀರಿ ನೆರೆ ಬಂದ ಹಿನ್ನೆಲೆಯಲ್ಲಿ, ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರಸ್ತೆ ದುರಸ್ತಿ ಸೇರಿದಂತೆ, ಇತರೇ, ಪರಿಹಾರಕ್ಕಾಗಿ ಸ್ಪಂದಿಸಿ, 1500 ಕೋಟಿ ರೂ. ಬಿಡುಗಡೆ ಮಾಡಿದ್ದು, ತುರ್ತು ಪರಿಹಾರ ಕಾರ್ಯ ಕೈಗೊಳ್ಳಲಾಗಿತ್ತು. ಈ ಬಾರಿ ಯಾವುದೇ ತೊಂದರೆ ಇಲ್ಲದಂತೆ ಮಳೆಯಾಗುತ್ತಿದ್ದು, ಯಾವುದೇ ತೊಂದರೆಯಾಗದಂತೆ ತುಂಗೆಗೆ ಬಾಗಿನ ಅರ್ಪಿಸಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.

  • ಶೃಂಗೇರಿಯ ಕಪ್ಪೆ ಶಂಕರ ದೇವಾಲಯ, ಗಾಂಧಿ ಮೈದಾನ ಮುಳುಗಡೆ

    ಶೃಂಗೇರಿಯ ಕಪ್ಪೆ ಶಂಕರ ದೇವಾಲಯ, ಗಾಂಧಿ ಮೈದಾನ ಮುಳುಗಡೆ

    ಚಿಕ್ಕಮಗಳೂರು : 48 ಗಂಟೆಗಳ ರೆಡ್‌ ಅಲರ್ಟ್‌ ಘೋಷಣೆಯ ಬೆನ್ನಲ್ಲೇ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ತುಂಗೆ ಮೈದುಂಬಿ ಹರಿಯುತ್ತಿದ್ದಾಳೆ.

    ಶೃಂಗೇರಿಯ ಗಾಂಧಿ ಮೈದಾನ, ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ಪ್ರವಾಸಿಗರ ವಾಹನ ನಿಲುಗಡೆಯ ಮೈದಾನ ಸಂಪೂರ್ಣ ಮುಳುಗಡೆಯಾಗಿದೆ.

    ಮೂಡಿಗೆರೆ ತಾಲೂಕಿನ ಕೆಂಬತ್ ಮಕ್ಕಿಯಲ್ಲಿ ಮಳೆಗೆ 6 ಎಕರೆ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಪಾತ್ರದ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ.

    ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಭದ್ರಾ ನದಿ ಬೋರ್ಗರೆದು ಹರಿಯುತ್ತಿದೆ. ಮೂಡಿಗೆರೆ ತಾಲೂಕಿನ ಕಳಸ- ಹೊರನಾಡು ಸಂಪರ್ಕ ಸೇತುವೆಯಾಗಿರುವ ಹೆಬ್ಬಾಳೆ ಸೇತುವೆ ಮುಳುಗಡೆ ಭೀತಿ ಎದುರಿಸುತ್ತಿದೆ. ಸೇತುವೆ ಮುಳುಗಡೆಗೆ 1 ಅಡಿಯಷ್ಟೇ ಬಾಕಿಯಿದೆ.

    ಕೊಪ್ಪ ತಾಲ್ಲೂಕಿನಲ್ಲಿ ಭಾರೀ ಮಳೆ‌ಯಾಗುತ್ತಿದ್ದು ಮಳೆ‌-ಗಾಳಿಯಿಂದ ನೆಲಕ್ಕೆ ಮರಗಳು ರಸ್ತೆಗೆ ಉರುಳಿ ಬೀಳುತ್ತಿವೆ. ಭಾರೀ ಮಳೆಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆಗೆ ಅಡ್ಡಾಲಾಗಿ ಬಿದ್ದ ಪರಿಣಾಮ ಕೊಪ್ಪ ಶೃಂಗೇರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಮರ ತೆರವು ಕಾರ್ಯ ನಡೆಯುತ್ತಿದೆ.

  • ಚಾರ್ಮಾಡಿಯಲ್ಲಿ ರಸ್ತೆ ಮೇಲೆ ಬೀಳುತ್ತಿವೆ ಬಂಡೆಗಳು – ಈಗ ಮೂಡಿಗೆರೆ, ಚಿಕ್ಕಮಗಳೂರು ಸಂಪರ್ಕ ಬಂದ್‌

    ಚಾರ್ಮಾಡಿಯಲ್ಲಿ ರಸ್ತೆ ಮೇಲೆ ಬೀಳುತ್ತಿವೆ ಬಂಡೆಗಳು – ಈಗ ಮೂಡಿಗೆರೆ, ಚಿಕ್ಕಮಗಳೂರು ಸಂಪರ್ಕ ಬಂದ್‌

    – 48 ಗಂಟೆ ಕಾಲ ರೆಡ್‌ ಅಲರ್ಟ್‌
    – ಮಲೆನಾಡಿನಲ್ಲಿ ವ್ಯಕ್ತಿ ಬಲಿ
    – ಹೆಬ್ಬಾಳೆ ಸೇತುವೆ ಮುಳುಗಡೆಗೆ ಒಂದು ಅಡಿಯಷ್ಟೇ ಬಾಕಿ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಂತೂ ಕಳೆದ 2 ದಿನಗಳಿಂದ ವರುಣನ ಅಬ್ಬರ ಜೋರಾಗಿದೆ. ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನಲ್ಲಿ ಮತ್ತೆ ಗುಡ್ಡ ಕುಸಿದಿದೆ. ರಸ್ತೆಯ ಮೇಲೆ ಬೃಹತ್ ಬಂಡೆಗಳು ಉರುಳಿ ಬೀಳುತ್ತಿದ್ದು, ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗಳ ಸಂಪರ್ಕ ಬಂದ್ ಆಗಿದೆ.

    ಈಗ ಮೂಡಿಗೆರೆ ತಾಲೂಕಿನ ಕುದ್ರೆಗುಂಡಿ ಬಳಿ ರಸ್ತೆಗೆ ಮರ ಬಿದ್ದ ಪರಿಣಾಮ ಚಿಕ್ಕಮಗಳೂರು-ಮೂಡಿಗೆರೆ ಸಂಚಾರವೂ ಬಂದ್ ಆಗಿದೆ. ರಾತ್ರಿ ಮೂರು ಗಂಟೆಯಿಂದ ವಾಹನಗಳು ನಿಂತಲ್ಲೇ ಇದೆ.

    ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗಿದ್ದು ತುಂಗಾ ನದಿ ಆಪಾಯ ಮಟ್ಟದಲ್ಲಿ ಹರಿಯುತ್ತಿದೆ. ಮೂಡಿಗೆರೆ ತಾಲೂಕಿನ ಕೆಂಬತ್ ಮಕ್ಕಿಯಲ್ಲಿ ಮಳೆಗೆ 6 ಎಕರೆ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಪಾತ್ರದ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ.

    ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಭದ್ರಾ ನದಿ ಬೋರ್ಗರೆದು ಹರಿಯುತ್ತಿದೆ. ಮೂಡಿಗೆರೆ ತಾಲೂಕಿನ ಕಳಸ- ಹೊರನಾಡು ಸಂಪರ್ಕ ಸೇತುವೆಯಾಗಿರುವ ಹೆಬ್ಬಾಳೆ ಸೇತುವೆ ಮುಳುಗಡೆ ಭೀತಿ ಎದುರಿಸುತ್ತಿದೆ. ಸೇತುವೆ ಮುಳುಗಡೆಗೆ 1 ಅಡಿಯಷ್ಟೇ ಬಾಕಿಯಿದೆ.

    ಮೊದಲ ಬಲಿ: ಮಲೆನಾಡಿನಲ್ಲಿ ಸುರಿಯುತ್ತಿರುವ ಮಹಾಮಳೆಗೆ ಮೊದಲ ಬಲಿಯಾಗಿದೆ. ಕಡೂರು ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

    ಪರಮೇಶ್ವರಪ್ಪ (38) ಮೃತ ರೈತ. ವಿದ್ಯುತ್ ತಂತಿ ತುಳಿದು ಪರಮೇಶ್ವರ ಮೃತಪಟ್ಟಿದ್ದಾರೆ.ಭಾರೀ ಗಾಳಿ-ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ತೋಟದಿಂದ ಹಿಂದಿರುಗುವಾಗ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಹಳ್ಳಿ ಸೇತುವೆ ಅಪಾಯದ ಅಂಚಿನಲ್ಲಿದೆ. ಕಳೆದ ಬಾರಿ ಶಿಥಿಲಾವಸ್ಥೆ ತಲುಪಿದ ಹಳ್ಳಿ ಸೇತುವೆ ಈ ವರ್ಷ ಕುಸಿಯುವ ಭೀತಿ ಎದುರಾಗಿದೆ. ಒಂದು ವೇಳೆ ಈ ಸೇತುವೆ ಕಳಚಿ ಬಿದ್ದರೆ ನಾಲ್ಕೈದು ಗ್ರಾಮಗಳ ಜನಕ್ಕೆ ನಗರ ಸಂಪರ್ಕಕ್ಕೆ ದಾರಿ ಇಲ್ಲದಂತಾಗುತ್ತದೆ.

  • ಹಾಸನ ಜಿಲ್ಲೆಯ ಹಲವೆಡೆ ವ್ಯಾಪಕ ಮಳೆ-ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ

    ಹಾಸನ ಜಿಲ್ಲೆಯ ಹಲವೆಡೆ ವ್ಯಾಪಕ ಮಳೆ-ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ

    -ಯಗಚಿ, ವಾಟೆಹೊಳೆ ಜಲಾಶಯ ಬಹುತೇಕ ಭರ್ತಿ

    ಹಾಸನ: ಜಿಲ್ಲೆಯ ಹಲವೆಡೆ ಸತತ ಎರಡು ದಿನದಿಂದ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಯಗಚಿ ಮತ್ತು ವಾಟೆಹೊಳೆ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ.

    ಬೇಲೂರು ತಾಲೂಕಿನಲ್ಲಿರುವ ವಾಟೆಹೊಳೆ ಜಲಾಶಯ ಗರಿಷ್ಟ 1.5 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಅಣೆಕಟ್ಟೆಯಿಂದ ನೀರನ್ನು ಹೊರಬಿಡಲಾಗಿದೆ. ಅದೇ ರೀತಿ ಆಲೂರು ತಾಲೂಕಿನಲ್ಲಿರುವ ಯಗಚಿ ಜಲಾಶಯ ಗರಿಷ್ಟ 3.4 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಣೆಕಟ್ಟೆಯಿಂದ ನೀರು ಹೊರಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ.

    ಹೇಮಾವತಿ ಅಣೆಕಟ್ಟು ಗರಿಷ್ಟ 37.103 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಈಗ ಪ್ರಸ್ತುತ ಅಣೆಕಟ್ಟೆಯಲ್ಲಿ 21 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಹೇಮಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ನದಿಯ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

    ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸಕಲೇಶಪುರ ತಾಲೂಕಿನ ಹಲವೆಡೆ ರಸ್ತೆಗೆ ಮರ ಉರುಳಿ ಬಿದ್ದಿದೆ. ಕೆಲವೆಡೆ ಮನೆ ಮೇಲೆ ಮರ ಬಿದ್ದಿದ್ದು ಜಖಂ ಆಗಿದೆ. ಬಿಸಿಲೆ ಸಮೀಪ ಚಲಿಸುತ್ತಿದ್ದ ಕಾರ್ ಮೇಲೆ ಮರ ಬಿದ್ದಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಕೊಡಗು ಜಿಲ್ಲೆಯಲ್ಲಿ ಮಳೆ ಅರ್ಭಟ- ಜನರಲ್ಲಿ ಭೂಕುಸಿತದ ಆತಂಕ

    ಕೊಡಗು ಜಿಲ್ಲೆಯಲ್ಲಿ ಮಳೆ ಅರ್ಭಟ- ಜನರಲ್ಲಿ ಭೂಕುಸಿತದ ಆತಂಕ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಆಶ್ಲೇಷ ಮಳೆ ಆರ್ಭಟಿಸುತ್ತಿದೆ. ಮಡಿಕೇರಿ ತಾಲೂಕಿನ ಅಬ್ಬಿಯಾಲ ಬಳಿ ಭಾರಿ ಭೂಕುಸಿತವಾಗಿದೆ. ಪರಿಣಾಮ ಮಡಿಕೇರಿ ಸಿದ್ದಾಪುರ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ.

    ಅಬ್ಬಿಯಾಲ ಚೆಟ್ಟಳ್ಳಿಯ ನಡುವಿನ ಈ ಮಾರ್ಗದಲ್ಲಿ ರಸ್ತೆಯ ಒಂದು ಬದಿ ಸಂಪೂರ್ಣ ಕುಸಿದು ಸುಮಾರು 50 ಅಡಿ ಆಳಕ್ಕೆ ಬಿದ್ದಿದೆ. ವಾಹನಗಳ ಓಡಾಟ ಮುಂದುವರಿದಲ್ಲಿ ಮತ್ತೆ ಇಡೀ ರಸ್ತೆಯೇ ಕುಸಿದು ಹೋಗುವ ಸಾಧ್ಯತೆ ಇದೆ. ಹೀಗಾಗಿ ವಾಹನಗಳ ಸಂಚಾರ ಬಂದ್ ಮಾಡಿರುವುದರಿಂದ ಮಡಿಕೇರಿ ಸಿದ್ದಾಪುರ ಸಂಪರ್ಕ ಕಡಿತವಾಗಿದೆ.

    ಮತ್ತೊಂದಡೆ ಸೋಮವಾರಪೇಟೆ ತಾಲೂಕಿನ ಮಾದಾಪುರ ಗರ್ವಾಲೆ ಮಾರ್ಗದಲ್ಲಿ ಕಿರುದಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪ್ರವಾಹದ ನೀರಿಗೆ ಕೊಚ್ಚಿಹೋಗಿದೆ. ಹಟ್ಟಿ ಹೊಳೆಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು ನೀರಿನ ಸೆಳೆತಕ್ಕೆ ಕಿರುದಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಹೋಗಿದ್ದು, ಅವಾಂತರ ಸೃಷ್ಟಿಯಾಗಿದೆ.

    ಕಳೆದ ಎರಡು ವರ್ಷಗಳಲ್ಲೂ ಈ ರಸ್ತೆ ಮಳೆಗಾಲದಲ್ಲಿ ಕೊಚ್ಚಿಹೋಗುತ್ತಿದ್ದು, ಈ ಭಾರಿಯೂ ರಸ್ತೆ ಕೊಚ್ಚಿಹೋಗಿರುವುದು ಜನರಿಗೆ ಆತಂಕ ಮೂಡಿಸಿದೆ.

  • KRS ಡ್ಯಾಂಗೆ ಒಂದೇ ದಿನ 20,488 ಕ್ಯೂಸೆಕ್ ಒಳಹರಿವು

    KRS ಡ್ಯಾಂಗೆ ಒಂದೇ ದಿನ 20,488 ಕ್ಯೂಸೆಕ್ ಒಳಹರಿವು

    ಮಂಡ್ಯ: ಕೊಡಗು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಡ್ಯಾಂಗೆ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನಿನ್ನೆ ಕೆಆರ್‍ಎಸ್‍ಗೆ 5,056 ಕ್ಯೂಸೆಕ್ ಒಳ ಹರಿವು ಇದ್ದರೆ ಇಂದು 20,488 ಕ್ಯೂಸೆಕ್ ನೀರು ಕೆಆರ್‍ಎಸ್‍ಗೆ ಸೇರುತ್ತಿದೆ.

    ಈ ಮೂಲಕ ಒಂದೇ ದಿನದ ಅಂತರದಲ್ಲಿ ದುಪ್ಪಟ್ಟಕ್ಕೂ ಹೆಚ್ಚು ನೀರು ಕೆಆರ್‍ಎಸ್ ಜಲಾಶಯದಲ್ಲಿ ಸಂಗ್ರಹವಾಗುತ್ತಿದೆ. ಸದ್ಯ ಕೆಆರ್‍ಎಸ್ ಡ್ಯಾಂನಲ್ಲಿ ನೀರಿನಮಟ್ಟ 107.17 ಅಡಿ, ಒಳಹರಿವು 20488 ಕ್ಯೂಸೆಕ್, ಹೊರ ಹರಿವು 4659 ಕ್ಯೂಸೆಕ್, ನೀರಿನ ಸಂಗ್ರಹ 28.971 ಟಿಎಂಸಿ ಇದ್ದರೇ, ಡ್ಯಾಂನ ಗರಿಷ್ಠ ಸಾಮರ್ಥ್ಯ 49.50 ಟಿಎಂಸಿ ಇದೆ.

    ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ. ಕೊಡಗಿನ 15 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 100 ಮಿಲಿ ಮೀಟರ್ ಗೂ ಅಧಿಕ ಮಳೆಯಾಗಿದ್ದು, ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸಿದೆ.

  • ಮಳೆ ಅಬ್ಬರಕ್ಕೆ ಮಲೆನಾಡು ಅಲ್ಲೋಲ-ಕಲ್ಲೋಲ

    ಮಳೆ ಅಬ್ಬರಕ್ಕೆ ಮಲೆನಾಡು ಅಲ್ಲೋಲ-ಕಲ್ಲೋಲ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಧಾರಾಕಾರ ಮಳೆಗೆ ಮಲೆನಾಡು ಅಲ್ಲೋಲ-ಕಲ್ಲೋಲವಾಗಿದೆ. ಸೋಮವಾರ ಮಧ್ಯಾಹ್ನದಿಂದ ಆರಂಭವಾದ ಮಳೆ ಒಂದೇ ಸಮನೆ ಸುರಿಯುತ್ತಿರೋದ್ರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡು ಮಲೆನಾಡಿಗರು ಕಂಗಾಲಾಗಿದ್ದಾರೆ.

    ಜಿಲ್ಲೆಯ ಏಳು ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು ಇಡೀ ಕಾಫಿನಾಡು ಮಳೆನೀರಿನಿಂದ ತೊಯ್ದಿದೆ. ಚಿಕ್ಕಮಗಳೂರು ತಾಲೂಕು ಸೇರಿದಂತೆ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿಯಲ್ಲಿ ಮಳೆ ಅಬ್ಬರಕ್ಕೆ ಜನಜೀವನ ಹೈರಾಣಾಗಿದೆ. ಮೂಡಿಗೆರೆ ತಾಲೂಕಿನ ಬಣಕಲ್, ಕೊಟ್ಟಿಗೆಹಾರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿವೆ. ಅಲ್ಲದೆ ಕೊಟ್ಟಿಗೆಹಾರದಲ್ಲಿ ಅಂಗಡಿ ಮಳಿಗೆಗಳ ಮೇಲೆ ಹಾಕಿದ್ದ ಶೀಟ್‍ಗಳು ಗಾಳಿ ಹಾರಿ ಹೋಗಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಮಲೆನಾಡಿಗರು ಮನೆಯಿಂದ ಹೊರಬರೋದಕ್ಕೂ ಹಿಂದೇಟು ಹಾಕುವಂತಹಾ ಸ್ಥಿತಿ ನಿರ್ಮಾಣವಾಗಿದೆ.

    ಇನ್ನು ಗೌಡಹಳ್ಳಿ, ಭೈರಾಪುರ, ಗುತ್ತಿ, ದೇವರಮನೆ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಊಹಿಸಲು ಆಗದಂತಹ ಮಳೆ ಸುರಿಯುತ್ತಿದೆ. ನಾಟಿ ಮಾಡಿದ ಗದ್ದೆಯ ಮೇಲೆ ಮೂರ್ನಾಲ್ಕು ಅಡಿ ನೀರು ನಿಂತಿದ್ದು, ಅನ್ನದಾತ ರೈತರು ಕಂಗಲಾಗಿದ್ದಾರೆ. ಗೌಡಹಳ್ಳಿಯಲ್ಲಿ ರಸ್ತೆಯ ಮೇಲೆ ನೀರು ಹರಿದು ಹೋಗುತ್ತಿರುವ ಹಿನ್ನೆಲೆ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ನಿನ್ನೆಯಿಂದ ಸತತವಾಗಿ ಬಿರುಗಾಳಿ ಸಹಿತ ಮಳೆ ಆರ್ಭಟಿಸುತ್ತಿರುವುದರಿಂದ ಜನರು ಜೀವವನ್ನ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.

    ಎನ್.ಆರ್.ಪುರದಲ್ಲೂ ಭಾರೀ ಮಳೆಯಿಂದ ಮುಡುಬ ರಸ್ತೆ ಮೇಲೆ ನೀರು ಹರಿದ ಪರಿಣಾಮ ಮುಡುಬ ರಸ್ತೆ ಸಂಪೂರ್ಣ ಬಂದ್ ಆಗಿದೆ. ಮೂಡಿಗೆರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ರಸ್ತೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ವಾಹನ ಸವಾರರು ಕತ್ತಲಲ್ಲಿ ಮರವನ್ನ ಕಡಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ ತಾಲೂಕಿನ ಬಿನ್ನಡಿ ಗ್ರಾಮದಲ್ಲಿ ಲಕ್ಷ್ಮಮ್ಮ ಎಂಬುವರ ಮನೆಯ ಹೆಂಚುಗಳು ಹಾರಿ ಹೋಗಿವೆ. ಒಂದೇ ದಿನಕ್ಕೆ ಮಳೆರಾಯ ಮಲೆನಾಡಿಗರಿಗೆ ಈ ವರ್ಷ ಇನ್ನೇನು ಅವಾಂತರ ಸೃಷ್ಠಿಸ್ತಾನೋ ಎಂಬ ಆತಂಕದಲ್ಲಿ ಬದುಕುವಂತಾಗಿದೆ.

  • ದುರ್ಗಾಪರಮೇಶ್ವರಿಗೆ ನದಿ ನೀರ ಅಭಿಷೇಕ- ಕಮಲಶಿಲೆ ದೇಗುಲದೊಳಕ್ಕೆ ಹರಿದ ಕುಬ್ಜಾ ನದಿ

    ದುರ್ಗಾಪರಮೇಶ್ವರಿಗೆ ನದಿ ನೀರ ಅಭಿಷೇಕ- ಕಮಲಶಿಲೆ ದೇಗುಲದೊಳಕ್ಕೆ ಹರಿದ ಕುಬ್ಜಾ ನದಿ

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕು ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿಯ ನೀರು ಹರಿದಿದೆ. ಕುಬ್ಜಾ ನದಿ ತೀರದಲ್ಲಿರುವ ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಕುಬ್ಜೆ ದುರ್ಗಾ ದೇವಿಯ ಪಾದ ತೊಳೆಯಲು ಗರ್ಭಗುಡಿಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಈ ಬಾರಿಯೂ ಸಂಪ್ರದಾಯ ಮುಂದುವರಿದಿದೆ.

    ಈ ರೀತಿ ಪ್ರವಾಹದ ನೀರು ಉಕ್ಕಿ ಗರ್ಭಗುಡಿಗೆ ಪ್ರವೇಶ ಮಾಡಿದಾಗ ದೇವರಿಗೆ ವಿಶೇಷ ಮಂಗಳಾರತಿ ನಡೆಯುತ್ತದೆ. ಪ್ರತಿವರ್ಷ ಈ ರೀತಿ ನದಿಯ ನೀರು ಗರ್ಭಗುಡಿ ಪ್ರವೇಶ ಮಾಡಿದ ಸಮಯದಲ್ಲಿ ಊರಿನ ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಮಹಾಮಾರಿ ಇರುವ ಕಾರಣ ದೇವಾಲಯದ ಆಸುಪಾಸಿನ ಒಂದಷ್ಟು ಕುಟುಂಬಗಳು ಮಾತ್ರ ಈ ವಿಶೇಷ ಸಂದರ್ಭದಲ್ಲಿ ದೇವರ ದರ್ಶನ ಗೈದರು.

    ಪಶ್ಚಿಮ ಘಟ್ಟದ ತಪ್ಪಲಲ್ಲಿ ಭಾರೀ ಮಳೆಯಾದರೆ ನದಿನೀರು ಉಡುಪಿಯತ್ತ ಹರಿಯುತ್ತದೆ. ಕುಬ್ಜಾ ತುಂಬಿ ಹರಿಯುತ್ತದೆ. ಈ ಪುಣ್ಯ ಕಾಲದಲ್ಲಿ ಕುಬ್ಜಾ ನದಿ ಸ್ನಾನ ಬಹಳಷ್ಟು ಪರಿಣಾಮಕಾರಿ ಎಂಬ ಪ್ರತೀತಿ ಇದೆ. ಕಮಲಶಿಲೆಯಲ್ಲಿ ದುರ್ಗೆ ಲಿಂಗ ರೂಪದಲ್ಲಿ ನೆಲೆನಿಂತಿದ್ದಾಳೆ ಎಂಬ ನಂಬಿಕೆ ಇದೆ.

  • ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ – ಬುಧವಾರ ರಾತ್ರಿವರೆಗೂ ರೆಡ್ ಅಲರ್ಟ್

    ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ – ಬುಧವಾರ ರಾತ್ರಿವರೆಗೂ ರೆಡ್ ಅಲರ್ಟ್

    ಮಂಗಳೂರು: ರಾಜ್ಯದ ಕರಾವಳಿಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.

    ಇಂದು ಸಂಜೆಯಿಂದ ನಾಳೆ ರಾತ್ರಿಯವರೆಗೂ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ ಈ ಸಂದರ್ಭ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ನಾಳೆಯಿಂದ ಆಗಸ್ಟ್ 9ರವರೆಗೂ ಆರೆಂಜ್ ಅಲರ್ಟ್ ಘೋಷಿಸಿದ್ದು ಈ ಎಲ್ಲಾ ದಿನದಲ್ಲಿ ಕರಾವಳಿಯಾದ್ಯಂತ ಮೀನುಗಾರಿಕೆ ಸಂಪೂರ್ಣವಾಗಿ ನಿಷೇಧಿಸಲು ಸೂಚಿಸಿದೆ.

    ಸಮುದ್ರ ಹಾಗೂ ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಹಾಗೂ ಮೀನುಗಾರರು ಮೀನುಗಾರಿಕೆ ನಡೆಸದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಕೊಡಗು ಜಿಲ್ಲೆಯ 15 ಪಂಚಾಯ್ತಿ ವ್ಯಾಪ್ತಿಯಲ್ಲಿ 100 ಮಿಲಿ ಮೀಟರ್ ಗೂ ಅಧಿಕ ದಾಖಲೆ ಮಳೆಯಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಸೂಚಿಸಿದೆ. ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದೆ. ಚಿಕ್ಕಮಗಳೂರು- ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿಯಲ್ಲಿ ಗುಡ್ಡ ಕುಸಿತವಾಗಿದೆ.

  • ಕೊಡಗಿನ 15 ಪಂಚಾಯಿತಿ ವ್ಯಾಪ್ತಿಯಲ್ಲಿ 100 ಮಿ.ಮೀಟರ್ ದಾಖಲೆ ಮಳೆ

    ಕೊಡಗಿನ 15 ಪಂಚಾಯಿತಿ ವ್ಯಾಪ್ತಿಯಲ್ಲಿ 100 ಮಿ.ಮೀಟರ್ ದಾಖಲೆ ಮಳೆ

    – ಎಚ್ಚರಿಕೆಯಿಂದಿರುವಂತೆ ಹೇಳಿದ ಜಿಲ್ಲಾಡಳಿತ
    – ಮಡಿಕೇರಿಯಲ್ಲಿ ಗುಡ್ಡ ಕುಸಿತ

    ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಜೋರು ಗಾಳಿ- ಮಳೆ ಬೀಳುತ್ತಿರುವ ಪ್ರದೇಶಗಳ ವ್ಯಾಪ್ತಿಯ ಜನತೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಮನವಿ ಮಾಡಿದ್ದಾರೆ.

    ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 74 ಮಿ.ಮಿಟರ್ ಮಳೆಯಾಗಿದೆ. ಅದರಲ್ಲೂ 104 ಗ್ರಾಮ ಪಂಚಾಯಿತಿಗಳ ಪೈಕಿ 15 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 100 ಮಿ.ಮಿಟರ್‍ಗಿಂತಲೂ ಅಧಿಕ ಮಳೆಯಾಗಿರುವುದು ದಾಖಲಾಗಿದೆ. ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 172 ಮಿ.ಮೀಟರ್ ಹಾಗೆಯೇ ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 170.5 ಮಿ.ಮೀಟರ್ ಪ್ರಮಾಣದ ದಾಖಲೆಯ ಮಳೆಯಾಗಿದೆ.

    ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಆಗಸ್ಟ್ 7 ರವರಗೆ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ. ಆದ್ದರಿಂದ ಮುನ್ನೆಚ್ಚರಿಕಾ ದೃಷ್ಟಿಯಿಂದ ಹೆಚ್ಚಿನ ಮಳೆಯಾಗುತ್ತಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭೂ ಕುಸಿತವಾಗುವ ಹಾಗೂ ತಗ್ಗಿನ ಪ್ರದೇಶಗಳು ಜಲಾವೃತವಾಗುವ ಸಾಧ್ಯತೆಗಳು ಇರುವುದರಿಂದ ಅಲ್ಲಿ ವಾಸಿಸುವವರು ಎಚ್ಚರಿಕೆಯಿಂದ ಇರಬೇಕು. ಮಡಿಕೇರಿ ನಗರದ ಓಂಕಾರೇಶ್ವರ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದೆ.

    ಒಂದು ವೇಳೆ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ವಿಪತ್ತುಗಳು ಎದುರಾದರೆ ಜಿಲ್ಲಾಡಳಿತದ ತುರ್ತು ದೂರವಾಣಿ ಸಂಖ್ಯೆ 8550001077 ಸಂಪರ್ಕಿಸಲು ಜಿಲ್ಲಾಡಳಿತ ಮನವಿ ಮಾಡಿದೆ.