Tag: ಕರ್ನಾಟಕ ಮಳೆ

  • ಬಿಎಸ್‍ವೈ ಸರ್ಕಾರದಲ್ಲಿ ಲಂಚ ನೀಡದೇ ನಯಾಪೈಸೆ ಬಿಡುಗಡೆಯಾಗಲ್ಲ: ಸಿದ್ದರಾಮಯ್ಯ

    ಬಿಎಸ್‍ವೈ ಸರ್ಕಾರದಲ್ಲಿ ಲಂಚ ನೀಡದೇ ನಯಾಪೈಸೆ ಬಿಡುಗಡೆಯಾಗಲ್ಲ: ಸಿದ್ದರಾಮಯ್ಯ

    – ಕಟೀಲ್ ಒಬ್ಬ ಯಕಶ್ಚಿತ್ ರಾಜಕಾರಣಿ
    – ಪ್ರವಾಹ ಬಂದ್ರೂ ಒಮ್ಮೆಯಾದ್ರೂ ಪ್ರಧಾನಿಗಳು ಬಂದರಾ?
    – ಯಾರಿಗಾದ್ರೂ ಪರಿಹಾರ ನೀಡಿದ್ದೀರಾ?

    ಬೆಂಗಳೂರು: ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಪ್ರವಾಹ ಪರಿಸ್ಥಿತಿ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಯಕಶ್ಚಿತ್ ರಾಜಕಾರಣಿಯಾಗಿದ್ದು, ತಾವಿರುವ ಹುದ್ದೆಯ ಬಗ್ಗೆ ಅರಿವಿಲ್ಲದವರು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸಾಲು ಸಾಲು ಟ್ವೀಟ್ ಗಳ ಮೂಲಕ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಹಾಗೆ ನಳಿನ್ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರದ್ದು ಪರ್ಸಂಟೇಜ್ ಸರ್ಕಾರ, ಲಂಚ ನೀಡದೆ ಇಲ್ಲಿ ನಯಾಪೈಸೆ ಬಿಡುಗಡೆಯಾಗಲ್ಲ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೊಸ ಅನುದಾನವಂತೂ ಇಲ್ಲ, ಇದರ ಜೊತೆಗೆ ಹಿಂದೆ ಘೋಷಿಸಿದ್ದ ಅನುದಾನವನ್ನೂ ತಡೆಹಿಡಿಯಲಾಗಿದೆ. ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅವುಗಳಿಗೆ ಹಣ ಬಿಡುಗಡೆ ಮಾಡುವಂತೆ ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಅವರನ್ನು ಕೇಳಿದರೆ, ಮುಖ್ಯಮಂತ್ರಿಗಳು ತಮ್ಮ ಇಲಾಖೆಗೆ ನಯಾಪೈಸೆ ಹಣ ಕೊಟ್ಟಿಲ್ಲ ಅಂತಾರೆ. ಸರ್ಕಾರ ದಿವಾಳಿಯಾಗಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದ್ದಾರೆ.

    ಪ್ರವಾಹ ಪರಿಸ್ಥಿತಿ ಇರುವಾಗ ವೈಮಾನಿಕ ಸಮೀಕ್ಷೆ ಮಾಡುವುದು ಸರಿ. ಆದರೆ ಈಗ ಪ್ರವಾಹ ಪೀಡಿತ ಸ್ಥಳಗಳಿಗೆ ರಸ್ತೆ ಮೂಲಕ ಸಂಚರಿಸಲು, ನಿರಾಶ್ರಿತ ಕೇಂದ್ರಗಳಲ್ಲಿರುವ ಜನರನ್ನು ಭೇಟಿ ಮಾಡಲು ಅವಕಾಶವಿದ್ದಾಗ್ಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಮಾನದಲ್ಲೇ ಸಮೀಕ್ಷೆ ಮಾಡಿದರೆ ಜನರ ಕಷ್ಟ ಏನು ಅಂತ ಹೇಗೆ ತಿಳಿಯುತ್ತೆ? ಕಳೆದ ವರ್ಷದ ಆಗಸ್ಟ್ ನಲ್ಲಿ, ಈ ಬಾರಿಯ ಆಗಸ್ಟ್ ನಲ್ಲಿ, ಮತ್ತೆ ಅಕ್ಟೋಬರ್ ನಲ್ಲಿ ರಾಜ್ಯದಲ್ಲಿ ಪ್ರವಾಹ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಒಮ್ಮೆಯಾದರೂ ರಾಜ್ಯಕ್ಕೆ ಭೇಟಿ ನೀಡಿ ಜನರ ಕಷ್ಟ ಕೇಳಿದ್ದಾರ? ಬಿಜೆಪಿಯ 25 ಸಂಸದರನ್ನು ರಾಜ್ಯದಿಂದ ಆರಿಸಿ ಕಳಿಸಿರುವುದೇ ಮೋದಿ ಅವರು ಕರ್ನಾಟಕವನ್ನು ಇಷ್ಟು ತಾತ್ಸಾರ ಮಾಡಲು ಕಾರಣ ಎಂದು ಕಿಡಿಕಾರಿದ್ದಾರೆ.

    ಯಕಶ್ಚಿತ್ ರಾಜಕಾರಣಿ: ತಾನಿರುವ ಹುದ್ದೆಯ ಗೌರವದ ಅರಿವಿಲ್ಲದ ನಳಿನ್ ಕುಮಾರ್ ಕಟೀಲ್ ಒಬ್ಬ ಯಕಶ್ಚಿತ್ ರಾಜಕಾರಣಿ. ಬೆಂಕಿ ಹಾಕೋದು, ಸಮುದ್ರಕ್ಕೆ ಬಿಸಾಕೋದು ಬರೀ ಇಂತಹುದನ್ನೇ ತಲೆಯಲ್ಲಿ ತುಂಬಿಕೊಂಡಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಹೀಗೆ ತನ್ನನ್ನು ಮುಳುಗಿಸ್ತೇನೆ ಅಂತ ಬಂದ ಬಹಳಷ್ಟು ಜನರನ್ನು ನೋಡಿದೆ. ನಳಿನ್ ಕುಮಾರ್ ಕಟೀಲ್ ಅವರೇ, ರಾಜ್ಯದಲ್ಲಿ ರೈತರು, ನೇಕಾರರು, ಕೂಲಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದನ್ನು ತಡೆಯಲು ತಾವೇನು ಮಾಡಿದ್ದೀರಿ? ಮೊದಲು ಜನರಿಗೆ ಲಾಕ್‍ಡೌನ್ ಮತ್ತು ಪ್ರವಾಹದಿಂದ ಉಂಟಾದ ನಷ್ಟವನ್ನು ತುಂಬಿಕೊಡುವ ವ್ಯವಸ್ಥೆ ಮಾಡಿ. ನಿಮ್ಮ ಭಾಷಣದಿಂದ ಜನರ ಹೊಟ್ಟೆ ತುಂಬಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಿಮ್ ಹತ್ರ ಬಂಡೆ ಇರ್ಬೋದು, ನಿಮ್ಮಿಂದ ಬಂದಿರುವ ಒಂದೊಂದು ಡೈನಾಮೈಟ್‍ ಅದನ್ನು ಪುಡಿ ಮಾಡ್ತಾರೆ: ಕಟೀಲ್

    ಕಳೆದ ವರ್ಷದ ಪ್ರವಾಹದಲ್ಲಿ ಬಿದ್ದ ಮನೆಗಳನ್ನೇ ಕಟ್ಟಿಸಿಕೊಟ್ಟಿಲ್ಲ. ಈ ವರ್ಷದ ಪ್ರವಾಹದಲ್ಲಿ ಇನ್ನಷ್ಟು ಮನೆಗಳು ಬಿದ್ದಿವೆ. ಜಿಲ್ಲಾಧಿಕಾರಿಗಳಿಗೆ ದುಡ್ಡು ಕೊಟ್ಟಿದ್ದೇವೆ ಎಂದು  ಮುಖ್ಯಮಂತ್ರಿಗಳು ಹೇಳ್ತಾರೆ. ಅವರ ಪಿಡಿ ಖಾತೆಯಲ್ಲಿ ದುಡ್ಡಿದ್ದರೆ ಸಂತ್ರಸ್ತರಿಗೆ ತಲುಪತ್ತಾ? ಈ ವರ್ಷ ಯಾರಿಗಾದರೂ ಪರಿಹಾರ ಕೊಟ್ಟಿದ್ದಾರಾ? ನಮ್ಮ ಸರ್ಕಾರ ಪ್ರಾರಂಭಿಸಿದ್ದ ಯೋಜನೆಗಳನ್ನೆಲ್ಲ ಒಂದೊಂದಾಗಿ ನಿಲ್ಲಿಸ್ತಿದ್ದಾರೆ. ಅನ್ನಭಾಗ್ಯದ ಅಕ್ಕಿಯನ್ನು 7ಕೆ.ಜಿಯಿಂದ 5ಕ್ಕೆ ಇಳಿಸಿದ್ದಾರೆ. ಇಂದಿರಾಕ್ಯಾಂಟೀನ್ ಗೆ ದುಡ್ಡು ಕೊಡದೆ ಮುಚ್ಚಲು ಹೊರಟಿದ್ದಾರೆ. ದನ-ಕುರಿ ಸತ್ತರೆ ಪರಿಹಾರ ಕೊಡ್ತಿಲ್ಲ, ಕ್ಷೀರಧಾರೆಯಲ್ಲಿ ಹಾಲಿನ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಕೃಷಿಭಾಗ್ಯವೂ ನಿಂತಿದೆ.

    ಪರಿಹಾರ ಬಂದಿದೆಯಾ?: ಕೇಂದ್ರ ತಂಡ ರಾಜ್ಯದ ಪ್ರವಾಹ ಸಮೀಕ್ಷೆ ನಡೆಸಿ ಇಷ್ಟು ದಿನವಾಯ್ತಲ್ಲ ಒಂದು ರೂಪಾಯಿಯಾದ್ರೂ ಪರಿಹಾರ ಬಂದಿದೆಯಾ? ಸಚಿವ ಆರ್. ಅಶೋಕ್ ಅವರು ಪರಿಹಾರ ಇವತ್ತು ಬರುತ್ತೆ, ನಾಳೆ ಬರುತ್ತೆ ಅಂತನೇ ದಿನ ದೂಡುತ್ತಿದ್ದಾರೆ, ಜನ ಕಷ್ಟದಲ್ಲಿರುವಾಗ ಪರಿಹಾರ ಕೊಡದೆ ಯಾವಾಗ ಕೊಡ್ತೀರ? ನಮ್ಮ ಕಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೀಗಿತ್ತಾ? ಬಿಎಸ್ವೈ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಗೋಲಿಬಾರ್ ನಡೆಸಿ ರೈತರನ್ನು ಕೊಂದರು, ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಎರಡು ಬಾರಿ ಗೋಲಿಬಾರ್ ನಡೆಸಿ ಅಮಾಯಕರನ್ನು ಕೊಂದರು. ಇದು ಕಾನೂನು ಮತ್ತು ಸುವ್ಯವಸ್ಥೆನಾ?

    ಉಪಚುನಾವಣೆಯಲ್ಲಿ ಆರ್.ಆರ್ ನಗರದಲ್ಲಿ ಕಾಂಗ್ರೆಸ್- ಬಿಜೆಪಿ ಮಧ್ಯೆ ನೇರ ಸ್ಪರ್ಧೆಯಿದ್ದರೆ, ಶಿರಾದಲ್ಲಿ ತ್ರಿಕೋನ ಸ್ಪರ್ಧೆಯಿದೆ. ಎರಡೂ ಕ್ಷೇತ್ರಗಳ ಜನರ ಒಲವು ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕಂಡುಬರುತ್ತಿರುವುದರಿಂದ ಎರಡರಲ್ಲೂ ಗೆಲ್ಲುವ ಹೆಚ್ಚಿನ ಅವಕಾಶವಿರುವುದು ನಮ್ಮ ಪಕ್ಷಕ್ಕೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಮತ್ತೆ ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರ-ಭಾರೀ ಮಳೆಯ ಎಚ್ಚರಿಕೆ!

    ಮತ್ತೆ ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರ-ಭಾರೀ ಮಳೆಯ ಎಚ್ಚರಿಕೆ!

    ಬೆಂಗಳೂರು: ಕೊರೊನಾ ಮಧ್ಯೆ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಅಲ್ಲದೇ ಸಾಕಷ್ಟು ಅವಾಂತರ ಸೃಷ್ಟಿಸಿದ್ದಾನೆ. ಮಳೆರಾಯ ರುದ್ರನರ್ತನಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಮಹಾ ಮಳೆ ಮುಂದುವರಿದಿದ್ದು, ಇದು ಇಲ್ಲಿಗೆ ನಿಲ್ಲೋ ಲಕ್ಷಣಗಳು ಕಾಣುತ್ತಿಲ್ಲ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ರಾಜ್ಯದ ಬಹುತೇಕ ಕಡೆ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದ್ದು ಜನ ತತ್ತರಿಸಿ ಹೋಗಿದ್ದಾರೆ.

    ಕೊರೊನಾದಿಂದ ಈಗಾಗಲೇ ಜನ ಇನ್ನಿಲ್ಲದ ಕಷ್ಟ ಅನುಭವಿಸುತ್ತಿದ್ದಾರೆ. ಈ ಮಧ್ಯೆ ವರುಣನ ಅವಾಂತರಕ್ಕೆ ಜನರು ಕಂಗಾಲಾಗಿ ಹೋಗಿದ್ದಾರೆ. ರಣಮಳೆಯಿಂದಾದ ಅವಾಂತರ ಒಂದೊಂದಲ್ಲ. ನೂರಾರು ಎಕರೆ ಜಮೀನು ನೀರುಪಾಲಾಗಿದ್ದು, ಒಂದೊತ್ತು ತಿನ್ನೋಕು, ವಾಸ ಸ್ಥಳಕ್ಕೂ ಪರದಾಡುವಂತಾಗಿದೆ. ಕೊಪ್ಪಳದ ಕುಷ್ಟಗಿಯ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಬೈಕ್ ಸವಾರರನ್ನು ರಕ್ಷಣೆ ಮಾಡಲಾಗಿದೆ. ಮುದೇನೂರ ಗ್ರಾಮದ ಬನ್ನಟ್ಟಿ ಸೇತುವೆ ಕೊಚ್ಚಿ ಹೋಗಿದ್ದು, 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ವಿಜಯಪುರದ ಸಾತಿಹಾಳದಲ್ಲಿಯೂ ಜಲಾವೃತವಾದ ಸೇತುವೆ ದಾಟುವ ವೇಳೆ ಬೈಕ್ ಸಮೇತ ಇಬ್ಬರು ಕೊಚ್ಚಿ ಹೋಗಿದ್ದರು. ಕೂಡಲೇ ಕಷ್ಟ ಪಟ್ಟು ದಡ ಸೇರಿದ್ದಾರೆ. ಜೊತೆ ಬೈಕನ್ನು ನೀರಿಂದ ಎಳೆದು ತಂದಿದ್ದಾರೆ.

    ರಾಜ್ಯದ ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ತಿಕೋಟದ ಸಂಗಮನಾಥ ದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ. ತುಂಬಿದ ನೀರಲ್ಲೇ ಅರ್ಚಕರು ಪೂಜೆ ನೆರವೇರಿಸಿದ್ದಾರೆ. ಯಾದಗಿರಿಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು ಭೀಮಾ ನದಿಯಿಂದ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಭೀಮಾ ತೀರದ ವೀರಾಂಜನೇಯ, ಕಂಗಳೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಶಹಾಪುರದಲ್ಲಿ ವರುಣನ ಅಬ್ಬರಕ್ಕೆ 20ಕ್ಕೂ ಹೆಚ್ಚು ಮನೆಗಳು ನೆಲಸಮಗೊಂಡಿದೆ. 2 ದಿನಗಳಿಂದ ಬಿದ್ದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಮನೆ ಕಳೆದುಕೊಂಡ ಕುಟುಂಬ ಕಣ್ಣೀರು ಹಾಕುತ್ತಿದ್ದಾರೆ.

    ಬಾಗಲಕೋಟೆಯ ಹುನಗುಂದದ ಓಂ ಶಾಂತಿ ನಗರ ಬಡಾವಣೆ ಸಂಪೂರ್ಣ ಜಲಾವೃತಗೊಂಡಿದೆ. ರಾಯಚೂರಿನ ಮಸ್ಕಿಯಲ್ಲಿ ಎರಡು ದಿನದ ಹಿಂದೆ ಹಳ್ಳದಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ. ಶೋಧ ಕಾರ್ಯ ಮುಂದುವರಿದಿದೆ. ಬಳ್ಳಾರಿ, ರಾಯಚೂರು, ಚಿಕ್ಕೋಡಿ ಭಾಗದಲ್ಲಿ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು, ಅನ್ನದಾತ ಕಂಗಾಲಾಗಿದ್ದಾನೆ. ಮಹಾರಾಷ್ಟದ ಕೊಯ್ನಾ ಡ್ಯಾಂನಿಂದ 12 ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಚಿತ್ರದುರ್ಗದ ಅಕ್ಕಿತಿಮ್ಮಯ್ಯನಹಟ್ಟಿ ಗ್ರಾಮದ ಕೆರೆ ಏರಿ ಬಿರುಕು ಬಿಟ್ಟಿದೆ. ಇನ್ನುಳಿದಂತೆ ಮಡಿಕೇರಿ, ಉಡುಪಿ ಭಾಗದಲ್ಲಿಯೂ ಭಾರೀ ಮಳೆಯಾಗುತ್ತಿದೆ. ಕೊಪ್ಪಳದಲ್ಲೂ ಭಾರೀ ಮಳೆಯಾಗ್ತಿದೆ. ಪರಿಣಾಮ ಕನಕಗಿರಿಯ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ವರ್ಷಗಳ ಬಳಿಕ ಲಕ್ಷ್ಮೀದೇವಿ ಕೆರೆ ಮೈದುಂಬಿಕೊಂಡಿದ್ದಾಳೆ.

    ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಕಾರಣ ರಾಜ್ಯದಲ್ಲಿ ಇನ್ನೂ 3 ದಿನಗಳ ಕಾಲ ಧಾರಕಾರ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆ ನಾಡಿದ್ದು ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಬೆಳಗಾವಿಯಲ್ಲಿ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಿದೆ.

  • ರಾಜ್ಯದಲ್ಲಿ ಮಳೆಯ ಅವಾಂತರ-ಮಸ್ಕಿ ಹಳ್ಳದಲ್ಲಿ ಸಿಲುಕಿದ್ದ ಓರ್ವ ಸಾವು

    ರಾಜ್ಯದಲ್ಲಿ ಮಳೆಯ ಅವಾಂತರ-ಮಸ್ಕಿ ಹಳ್ಳದಲ್ಲಿ ಸಿಲುಕಿದ್ದ ಓರ್ವ ಸಾವು

    – ಹಳ್ಳದಲ್ಲಿ ಕೊಚ್ಚಿ ಹೋದ ಸೈಕಲ್ ಸವಾರ
    – ಧಾರವಾಡದಲ್ಲಿ ತಪ್ಪಿದ ದುರಂತ
    – ಯಾದಗಿರಿ ಕೆಲ ಗ್ರಾಮಗಳು ಜಲಾವೃತ

    ಬೆಂಗಳೂರು: ಶನಿವಾರ ತಡರಾತ್ರಿ ಸುರಿದ ಮಳೆ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತಲಾ ಓರ್ವ ಹಳ್ಳದಲ್ಲಿ ಕೊಚ್ಚಿ ಹೋಗಿದ್ರೆ, ಯಾದಗಿರಿಯ ಕೆಲ ಗ್ರಾಮಗಳು ಜಲಾವೃತಗೊಂಡಿವೆ. ಯಾದಗಿರಿಯ ಗ್ರಾಮವೊಂದರಲ್ಲಿ ಸುಮಾರು 20ಕ್ಕೂ ಹೆಚ್ಚು ಕುರಿಗಳು ಸಿಡಿಲು ತಾಗಿ ಸಾವನ್ನಪ್ಪಿದ್ದು, ಕುರಿಗಾಹಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ.

    ಕೊಪ್ಪಳ ಮತ್ತು ಧಾರವಾಡದಲ್ಲಿ ಕೆರೆಯ ಕೋಡಿಗಳು ಒಡೆದಿದ್ದು, ನೀರು ರಸ್ತೆಯ ಮೇಲೆ ಹರಿದಿದೆ. ಧಾರವಾಡದಲ್ಲಿ ಸಾರಿಗೆ ಬಸ್ ಚಾಲಕ ದುಸ್ಸಾಹಸಕ್ಕೆ ಮುಂದಾಗಿದ್ದನು. ಕೊನೆಗೆ ಬಸ್ ಚಾಲಕನ ನಿಯಂತ್ರಣಕ್ಕೆ ಸಿಕ್ಕಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

    ರಾಯಚೂರು: ಜಿಲ್ಲೆಯ ಮಸ್ಕಿಯ ಮಾರಲದಿನ್ನಿ ಕಿರು ಜಲಾಶಯ ಭರ್ತಿಹಿನ್ನೆಲೆ ಹಳ್ಳಕ್ಕೆ ಭಾರೀ ಪ್ರಮಾಣದ ನೀರು ಹರಿಸಲಾಗಿದೆ. ಏಕಾಏಕಿ ನೀರು ಬಿಟ್ಟಿದ್ದರಿಂದ ಮಸ್ಕಿ ಪಟ್ಟಣದಲ್ಲಿ ಹರಿಯುವ ಹಳ್ಳದಲ್ಲಿ ಓರ್ವ ಯುವಕ ಕೊಚ್ಚಿಹೋಗಿದ್ದು ಇನ್ನೋರ್ವ ವ್ಯಕ್ತಿಯನ್ನ ರಕ್ಷಿಸಲಾಗಿದೆ. ಹಳ್ಳಕ್ಕೆ ಬಹಿರ್ದಸೆಗೆ ಹೋಗಿದ್ದ ಚನ್ನಬಸಪ್ಪ ಹಾಗು ಜಲೀಲ ಹಳ್ಳದ ಮಧ್ಯೆ ಸಿಲುಕಿಕೊಂಡಿದ್ದರು.

    ಮುಂಜಾಗ್ರತೆಯಿಲ್ಲದೆ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದ ಹಿನ್ನೆಲೆ ಹಗ್ಗ ತುಂಡಾಗಿ ಚನ್ನಬಸಪ್ಪ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರು ಸಿಬ್ಬಂದಿಯನ್ನ ರಕ್ಷಿಸಲಾಗಿದೆ. ಜಲೀಲನನ್ನ ಕ್ರೇನ್ ಬಳಸಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ. ಭಯದಲ್ಲಿ ಸಿಬ್ಬಂದಿಯೊಂದಿಗೆ ಹೊರಬರಲು ಜಲೀಲ ಹಿಂದೇಟು ಹಾಕಿದ್ದ, ಮನವೊಲಿಸಿ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಮಸ್ಕಿ ನಾಲೆಯ ಜಲಾನಯನ ಪ್ರದೇಶಗಳಾದ ಗಜೇಂದ್ರಗಡ, ಕುಷ್ಟಗಿ ಭಾಗದಲ್ಲಿ ಮಳೆಯಾಗಿದ್ದರಿಂದ ಮಸ್ಕಿ ಆಣೆಕಟ್ಟೆಯಿಂದ ಹೆಚ್ಚು ಪ್ರಮಾಣದ ನೀರು ಬಿಡಲಾಗಿದೆ. ನಾಲ್ಕು ಗೇಟ್‍ಗಳ ಮೂಲಕ ಸದ್ಯ 2000 ಕ್ಯೂಸೆಕ್ ನೀರು ಬಿಡಲಾಗಿದೆ. ಮಳೆ ಹಿನ್ನೆಲೆ ಮಸ್ಕಿ ನಾಲಾ ಯೋಜನೆಯಿಂದ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನಲೆ ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.

    ಕಣ್ಣೆದುರೆ ಚನ್ನಬಸಪ್ಪ ಕೊಚ್ಚಿಹೋಗಿದ್ದನ್ನ ಕಂಡ ಜಲೀಲ ಆತಂಕಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪತ್ತೆಯಾದ ಚನ್ನಬಸಪ್ಪನ ಮೃತದೇಹ ಪತ್ತೆಯಾಗಿದೆ.

    ಧಾರವಾಡದಲ್ಲಿ ತಪ್ಪಿದ ದುರಂತ: ತುಂಬಿ ಹರಿಯುತಿದ್ದ ಹಳ್ಳದಲ್ಲಿ ಸ್ವಲ್ಪದರಲ್ಲೇ ಸಾರಿಗೆ ಬಸ್ ಬಚಾವಾದ ಘಟನೆ ಧಾರವಾಡ ಜಿಲ್ಲೆಯ ಹಾರೋಬೆಳವಡಿ ಗ್ರಾಮದ ಬಳಿಯ ತಾತ್ಕಾಲಿಕ ಸೇತುವೆ ಬಳಿ ನಡೆದಿದೆ. ತುಪ್ಪರಿಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಬಂದ ಹಿನ್ನೆಲೆ ಧಾರವಾದ ಸವದತ್ತಿ ರಸ್ತೆ ಕಡಿತವಾಗಿತ್ತು. ಇನ್ನು ನೀರು ಬಂದಿದ್ದರಿಂದ ತಾತ್ಕಾಲಿಕ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದನ್ನು ನೋಡಿಯೂ ಸಾರಿಗೆ ಬಸ್ ಚಾಲಕ ಬಸ್ ದಾಟಿಸಲು ಮುಂದಾಗಿದ್ದ. ಈ ವೇಳೆ ಬಸ್ ಹಳ್ಳದಲ್ಲಿ ಒಂದು ಬದಿಗೆ ವಾಲಿ ಬಚಾವ್ ಆಗಿದೆ.

    ಯಾದಗಿರಿ ಗ್ರಾಮಗಳು ಜಲಾವೃತ: ಬೆಳಗಿನ ಜಾವದಿಂದ ಸುರಿಯುತ್ತಿರುವ ಭಾರಿ ಮಳೆಗೆ ಯಾದಗಿರಿ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜಿಲ್ಲೆಯ ಶಹಪುರ ತಾಲೂಕಿನ ಎಂ ಕೊಳ್ಳೂರು, ಯಾದಗಿರಿ ತಾಲೂಕಿನ ಗಾಜರಕೋಟ, ಮತ್ತು ಸುರಪುರ ತಾಲೂಕಿನಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮಳೆಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

    ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇಡೀ ರಾತ್ರಿ ಸುರಿದ ಮಳೆಗೆ ಕೆಲ ಮನೆಗಳು ಜಖಂಗೊಂಡಿದ್ದರೆ, ಇನ್ನು ಕೆಲವು ಮನೆಗಳು ಹಾಗೂ ಶೆಡ್ ಗಳ ಒಳಗಡೆ ನೀರು ತುಂಬಿಕೊಂಡಿದೆ. ಮನೆಯಲ್ಲಿರುವ ಗೃಹಪಯೋಗಿ ವಸ್ತುಗಳು ಜೋಳ, ಅಕ್ಕಿ ಹಾಗೂ ಇನ್ನಿತರೆ ಧವಸಧಾನ್ಯಗಳು ನೀರು ಪಾಲಾಗಿವೆ. ಗ್ರಾಮದ ರಸ್ತೆಗಳು ನದಿಯಂತಾಗಿದ್ದು, ಕೆಲ ಮನೆಗಳ ಒಳಗಡೆ ಅರ್ಧದಷ್ಟು ನೀರು ತುಂಬಿಕೊಂಡಿದ್ದರಿಂದ ಜನರು ಇಡೀ ರಾತ್ರಿ ನಿದ್ದೆ ಮಾಡದೇ ಎದ್ದು ಕುಳಿತಿದ್ದಲ್ಲದೆ, ಊಟವಿಲ್ಲದೆ ಪರದಾಡಿದ್ದಾರೆ. ಇನ್ನೂ ಇದೇ ಗ್ರಾಮದ ಹೊರ ವಲಯದಲ್ಲಿರುವ ಸಣ್ಣನರಸಪ್ಪ ಎಂಬವರು ದೊಡ್ಡಿಯಲ್ಲಿದ್ದ ಸುಮಾರು 25 ಕುರಿಗಳು ಸಿಡಲು ಬಡಿದು ಸಾವನ್ನಪ್ಪಿವೆ.

    ಈರುಳ್ಳಿ ಬೆಳೆ ಹಾನಿ: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆ ಕೆ. ಮರಿಯನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜನಜೀವನ ಅಸ್ತವ್ಯಸ್ತವಾಗಿದ್ದು ರಾತ್ರಿಯಲ್ಲ ಜನ ಮನೆಯಿಂದ ನೀರು ಹೊರಹಾಕಿದ್ದಾರೆ. ಲಿಂಗಸುಗೂರು ತಾಲೂಕಿನ ಕಿಲ್ಲರಹಟ್ಟಿ ಗ್ರಾಮದ ಜಮೀನುಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

    ಗ್ರಾಮದ ಬಸವರಾಜ್ ಗದ್ದೆಪ್ಪ ಅನ್ನೋ ರೈತನ ಲಕ್ಷಾಂತರ ರೂಪಾಯಿ ಈರುಳ್ಳಿ ಬೆಳೆ ನೀರುಪಾಲಾಗಿದೆ. ಜಮೀನುಗಳಲ್ಲಿ ನೀರು ನಿಂತಿದ್ದು ಮಳೆ ಮುಂದುವರಿದಿದೆ. ಇದೇ ಪರಸ್ಥಿತಿ ಮುಂದುವರಿದರೆ ಹತ್ತಿ ,ಈರುಳ್ಳಿ ಸೇರಿ ಎಲ್ಲಾ ಬೆಳೆಗಳು ಸಂಪೂರ್ಣ ಹಾನಿಯಾಗಲಿವೆ. ಮೋಡ ಕವಿದ ವಾತಾವರಣ ಜಿಲ್ಲೆಯಾದ್ಯಂತ ಮುಂದುವರೆದಿದ್ದು ಜಿಟಿ ಜಿಟಿ ಮಳೆ ಸುರಿಯುತ್ತಿದೆ.

    ಕೊಪ್ಪಳದಲ್ಲಿ ಕೊಚ್ಚಿ ಹೋದ ಸವಾರ: ಕೊಪ್ಪಳ ತಾಲೂಕಿನ ಹಿರೇಹಳ್ಳ ಜಲಾಶಯ ತುಂಬಿ ಹರಿಯುತ್ತಿದೆ. ನೀರಿನ ರಭಸಕ್ಕೆ ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಬಳಿ ಕಟ್ಟಲಾದ ಬ್ರಿಡ್ಜ ಕಂ ಬ್ಯಾರೇಜ್ ನ ತಡೆಗೋಡೆ ಕೊಚ್ಚಿಹೋಗಿದೆ. ಕಾಲು ಭಾಗವಷ್ಟು ಬ್ಯಾರೇಜ್ ತಡೆಗೋಡೆ ಒಡೆದು ಹೋಗಿದ್ದು ಕಳಪೆ ಕಾಮಗಾರಿ ಎಂದು ಜನರು ಆರೋಪಿಸುತ್ತಿದ್ದಾರೆ. ಅದರಂತೆ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ ಘಟನೆ ಕೂಡ ನಡೆದಿದೆ. ಕೊಪ್ಪಳ ತಾಲೂಕಿನ ಶಿವಪುರ ಮತ್ತು ಹುಲಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಹಳ್ಳ ಹರಿಯುತ್ತಿದ್ದು, ಸೈಕಲ್ ಮೇಲೆ ಹಳ್ಳ ದಾಟಲು ಹೋಗಿ ನೀರಿನ ರಭಸಕ್ಕೆ ಸವಾರ ಕೊಚ್ಚಿ ಹೋಗಿದ್ದಾನೆ.

  • ಭಾರೀ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ

    ಭಾರೀ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ

    ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಮಧ್ಯಾಹ್ನದಿಂದ ಬಿಟ್ಟು ಬಿಟ್ಟು ಭಾರೀ ಮಳೆ ಆಗ್ತಿದೆ. ಮಳೆಯಿಂದಾಗಿ ನಗರದ ಜನಜೀವನ ಅಸ್ತವ್ಯಸ್ತ ಆಗಿದೆ. ಟ್ರಾಫಿಕ್ ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡಿದರು.

    ಶಿವನಾಂದ ವೃತ್ತದ ರೈಲ್ವೇ ಅಂಡರ್ ಪಾಸ್‍ನಲ್ಲಿ ಪರಿಸ್ಥಿತಿ ಕೆಟ್ಟದಾಗಿತ್ತು. ಬೈಕ್ ಸವಾರರೊಬ್ರು ದಾರಿ ಗೊತ್ತಾಗದೇ ಕೆಳಗೆ ಬಿದ್ದರು. ಆಟೋವೊಂದು ಕೆಟ್ಟು, ಚಾಲಕ ತಳ್ಳಿಕೊಂಡು ಹೋದರು. ಮಧ್ಯಾಹ್ನದ ಮೂರು ಗಂಟೆಯ ಬಳಿಕ ಬಿಡುವು ನೀಡಿದ ವರುಣರಾಯ ರಾತ್ರಿ ಮತ್ತೆ ಸುರಿಯಲಾರಂಭಿಸಿದನು. ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡಿದರು.

    ಮಲ್ಲೇಶ್ವರಂ, ಯಶವಂತಪುರ ಶೇಷಾದ್ರಿಪುರಂ, ಗೋರಗುಂಟೆಪಾಳ್ಯ, ರಾಜಾಜಿನಗರ ಮತ್ತಿಕೆರೆ, ಬಿಇಎಲ್ ಸರ್ಕಲ್, ಸದಶಿವನಗರ, ಸಂಜಯ್ ನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಮಂಡ್ಯ ಜಿಲ್ಲೆಯಾದ್ಯಂತ ಮಳೆ ಆಗುತ್ತಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಿಕ್ಕೋಡಿಯ ಮಾಂಜರಿ ಗ್ರಾಮದ ನೆರೆ ಸಂತ್ರಸ್ಥರು ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ್ರು. 527 ಫಲಾನುಭವಿಗಳಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದ್ರು. ತಹಶೀಲ್ದಾರ್ ಸುಭಾಷ್ ಮನವೊಲಿಕೆಗೂ ಬಗ್ಗದೇ ಪ್ರತಿಭಟನೆ ಮುಂದುವರಿಸಿದ್ದಾರೆ.

  • ತುಂಬಿ ಹರಿದ ಸೀತಾನದಿ- ಬ್ರಹ್ಮಾವರದಲ್ಲಿ ಅಣೆಕಟ್ಟು ಜಲಾವೃತ

    ತುಂಬಿ ಹರಿದ ಸೀತಾನದಿ- ಬ್ರಹ್ಮಾವರದಲ್ಲಿ ಅಣೆಕಟ್ಟು ಜಲಾವೃತ

    -ಕೊಡಗಿನಲ್ಲಿ ಮತ್ತೆ ಪ್ರವಾಹದ ಆತಂಕ

    ಉಡುಪಿ/ಕೊಡಗು: ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕೊಡಗಿನ ಜನತೆಗೆ ಆಗಸ್ಟ್ ನಲ್ಲಿ ಸಂಭವಿಸಿದ ಪ್ರವಾಹ ಮತ್ತೆ ಮರುಕಳಿಸಿದರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಕೊಡಗು ಭಾಗದಲ್ಲಿ ಮಳೆಯಾಗುತ್ತಿದ್ದು, ಜನ ಪ್ರವಾಹದ ಆತಂಕದಲ್ಲಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿದೆ. ಬ್ರಹ್ಮಾವರ ತಾಲೂಕಿನ ಸೀತಾನದಿ ವಿಪರೀತ ಮಟ್ಟ ತಲುಪಿದ್ದು ಕಿಂಡಿ ಅಣೆಕಟ್ಟಿನ ಮೇಲೆ ನೀರು ಹರಿಯುತ್ತಿದೆ. ಸುತ್ತಮುತ್ತಲಿನ ಮನೆ ಕೃಷಿ ಭೂಮಿ ಭತ್ತದ ಬೇಸಾಯದ ಗದ್ದೆಗಳಿಗೆ ನೀರು ನುಗ್ಗಿದೆ. ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು ಮುಳುಗಡೆಯಾದ ಪ್ರದೇಶಗಳ ಜನರ ರಕ್ಷಣೆ ಮಾಡಲಾಗಿದೆ. ಸ್ಥಳೀಯ ನಾಡದೋಣಿ ಮೀನುಗಾರಿಕೆ ,ಮರಳುಗಾರಿಕೆ ನಡೆಸುವವರ ದೋಣಿ ಬಳಸಿ ಜನರನ್ನು ಎತ್ತರ ಪ್ರದೇಶಗಳಿಗೆ ಕರೆದುಕೊಂಡು ಬರಲಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಓ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿಕೊಟ್ಟು ಜನರಿಗೆ ಶಾಲೆ ದೇವಸ್ಥಾನಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.

    ತುಂಬಿದ ನದಿಗಳು: ಉಡುಪಿ ತಾಲೂಕಲ್ಲಿ ಕಳೆದ 24 ತಾಸುಗಳಲ್ಲಿ 316 ಮಿಲಿ ಮೀಟರ್ ಮಳೆ ಬಿದ್ದಿದೆ. ಉಡುಪಿ ತಾಲೂಕು ಒಂದರಲ್ಲಿಯೇ ಇಷ್ಟು ಪ್ರಮಾಣದ ಮಳೆ ಸುರಿದಿದೆ. ಶನಿವಾರ ಮಧ್ಯಾಹ್ನದಿಂದ ಉಡುಪಿಯಲ್ಲಿ ಹನಿ ನಿಲ್ಲದೆ ಮಳೆಯಾಗಿದೆ. ನಿರಂಂತರವಾಗಿ ಸುರಿದ ಮಳೆಗೆ ಉಡುಪಿ ನಗರವೂ ಸೇರಿದಂತೆ, ಸುತ್ತಮುತ್ತಲ ಗ್ರಾಮಗಳಲ್ಲಿ ತೀವ್ರ ನೆರೆ ಏರಿದೆ.ಸ್ವರ್ಣಾ, ಸೀತಾ, ಮಡಿಸಾಲು, ಉದ್ಯಾವರ, ಶಾಂಭವಿ, ಪಾಪನಾಶಿನಿ, ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ನಗರದ ಮಧ್ಯಭಾಗದಲ್ಲಿ ಹರಿಯುವ ಇಂದ್ರಾಣಿ ನದಿಯೂ ಅಪಾಯದ ಮಟ್ಟವನ್ನು ಮೀರಿದೆ. ಉಡುಪಿ, ಕಾರ್ಕಳ ಭಾಗದಲ್ಲಿ ಮುಸಲಧಾರೆ ಮುಂದುವರಿದಿದೆ.

    ದಾಖಲೆ ಮಳೆ: ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 197 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ ಅತ್ಯಧಿಕ 315.3 ಮಿ.ಮೀ. ಮಳೆ ದಾಖಲಾಗಿದೆ. ಮಲೆನಾಡಿನ ತಪ್ಪಲಿನಲ್ಲಿರುವ ಕಾರ್ಕಳ ತಾಲೂಕಿನಲ್ಲಿ 256.5 ಮಿ.ಮೀ. ಮಳೆ ಬಿದ್ದಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಹೆಚ್ಚು ಮಳೆಯಾಗುತ್ತಿದ್ದ ಕುಂದಾಪುರ ತಾಲೂಕಿನಲ್ಲಿ ಕನಿಷ್ಠ 54.5 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಬಿದ್ದ ಮಳೆ ಪ್ರಮಾಣದ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

    ಕೊಡಗಿನಲ್ಲಿ ಪ್ರವಾಹ ಆತಂಕ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ತಲಕಾವೇರಿ ಮತ್ತು ಭಾಗಮಂಡಲ ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿದ್ದು, ತ್ರಿವೇಣಿ ಸಂಗಮ ಬಹುತೇಕ ಮುಳುಗಡೆ ಆಗಿದೆ. ಪರಿಣಾಮವಾಗಿ ಭಾಗಮಂಡಲ ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ.

    ನಾಪೋಕ್ಲು ರಸ್ತೆ ಮೇಲೆ 4 ಅಡಿಯಷ್ಟು ನೀರು ಹರಿಯುತ್ತಿದ್ದು, ನೆಲಜಿ, ಅಯ್ಯಂಗೇರಿ, ಸಣ್ಣಪುಲಿಕೋಟು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ವಾಹನಗಳ ಸಂಚಾರವಿಲ್ಲದ ಪರಿಣಾಮ ಜನರು ಪ್ರವಾಹದ ನೀರಿನಲ್ಲೇ ನದಿ ದಾಟುತ್ತಿದ್ದಾರೆ. ಮಳೆ ಹೀಗೆ ಮುಂದುವರೆದಲ್ಲಿ ಮತ್ತೆ ಪ್ರವಾಹ ಉಕ್ಕಿ ಹರಿಯುವ ಸಾಧ್ಯತೆ ಇದೆ. ನಾಳೆ ಬೆಳಗ್ಗೆಯವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಏನಾಗುವುದೋ ಎಂಬ ಆತಂಕದಲ್ಲಿ ಜನರಿದ್ದಾರೆ.

  • ಕೃಷ್ಣ ನದಿ ನೀರಿನಲ್ಲಿ ಏರಿಕೆ- ಕೊಯ್ನಾದಿಂದ 55 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ಕೃಷ್ಣ ನದಿ ನೀರಿನಲ್ಲಿ ಏರಿಕೆ- ಕೊಯ್ನಾದಿಂದ 55 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ಬೆಳಗಾವಿ: ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಏರಿಕೆಯಾಗಿದೆ. ಕೊಯ್ನಾ ಜಲಾಶಯದಿಂದ 55,486 ಕ್ಯೂಸೆಕ್ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಕೃಷ್ಣಾ, ದುದಗಂಗಾ ಹಾಗೂ ಹಿರಣ್ಯಕೇಶಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.

    1.95ಲಕ್ಷ ಕ್ಯೂಸೆಕ್ ಗಿಂತ ಹೆಚ್ಚು ನೀರು ಕೃಷಾ ನದಿಗೆ ಹರಿದು ಬರುತ್ತಿದೆ. ಕೃಷ್ಣಾ ನದಿ ತೀರದ ಬಹುತೇಕ ಜನರು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಆಗಿದ್ದಾರೆ. ಇತ್ತ ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಮಳೆ ತಗ್ಗಿದ್ದು, ಜನ ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ. ಕೊಯ್ನಾದಿಂದ ಬರುತ್ತಿರುವ ನೀರಿನಿಂದ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

    ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಸಂಪೂರ್ಣ ಮುಳುಗಡೆಯಾಗಿದೆ. ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗೋಡಗೇರಿ- ನೊಗಿನಹಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲಿಂದ ಅಪಾರ ಪ್ರಮಾಣದ ನೀರು ಹರಿಯುತ್ತಿದೆ.

  • ನೀರಿನ ರಭಸಕ್ಕೆ ಕುಸಿದ ಸೇತುವೆ- ಮೂರು ಗ್ರಾಮಗಳ ಸಂಪರ್ಕ ಕಡಿತ

    ನೀರಿನ ರಭಸಕ್ಕೆ ಕುಸಿದ ಸೇತುವೆ- ಮೂರು ಗ್ರಾಮಗಳ ಸಂಪರ್ಕ ಕಡಿತ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ಸಮೀಪದ ಬಿಳಿಗಿರಿಯಲ್ಲಿ ಸೇತುವೆ ಕುಸಿದಿದೆ.

    ಈ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಮೂರು ಗ್ರಾಮಗಳ ನೂರಕ್ಕೂ ಹೆಚ್ಚು ಮನೆಗಳು ಸಂಪರ್ಕ ಕಡಿತಗೊಂಡಿದೆ. ಸೇತುವೆ ದಾಟಲು ಗ್ರಾಮಸ್ಥರು ತಾತ್ಕಾಲಿಕವಾಗಿ ಮರದ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಕೆಳಗೆ ರಭಸವಾಗಿ ನೀರು ಹರಿಯೋದನ್ನ ನೋಡಿದ್ರೆ ಸೇತುವೆ ದಾಟಲು ಒಂದು ಕ್ಷಣ ಭಯವಾಗುತ್ತದೆ.

    ನದಿಯಲ್ಲಿ ಹೂಳು ಎತ್ತದ ಕಾರಣ ಸೇತುವೆ ಕುಸಿದಿದೆ. ಸರ್ಕಾರದ ನಿರ್ಲಕ್ಷ್ಯವೇ ಸೇತುವೆ ಕುಸಿಯಲು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಗತ್ಯ ವಸ್ತುಗಳಿಗಾಗಿ ಸೇತುವೆ ದಾಟಿ ಹೋಗುವುದು ಅನಿವಾರ್ಯವಾಗಿದೆ. ಸ್ಥಳೀಯರು ಭಯದಲ್ಲೇ ಸೇತುವೆ ದಾಟುತ್ತಿದ್ದಾರೆ.

    ಕೊಡಗಿನ ಭಾಗಮಂಡಲದ ಬ್ರಹ್ಮಗಿರಿ ಯ ಬೆಟ್ಟದ ಸಾಲು ಕುಸಿದು ಆರ್ಚಕರ ಕುಟುಂಬ ಭೂ ಸಮಾಧಿಯಾಗಿದ್ದ ಸ್ಥಳದಲ್ಲಿ ಮೃತ ದೇಹಗಳ ಪತ್ತೆ ಕಾರ್ಯಕ್ಕೆ ಮಳೆ ಅಡ್ಡಿಯಾಗುತ್ತಿದೆ. ಬೆಳಗ್ಗಿನಿಂದ ಎರಡು ತಾಸು ಪತ್ತೆ ಕಾರ್ಯಚರಣೆ ನಡೆಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಮಳೆ ಹೆಚ್ಚಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

  • ಜಲ ಗಂಡಾಂತರದ ಆತಂಕದಲ್ಲಿ ಕೊಡಗು

    ಜಲ ಗಂಡಾಂತರದ ಆತಂಕದಲ್ಲಿ ಕೊಡಗು

    ಮಡಿಕೇರಿ: ಕೊಡಗಿಗೆ ಮತ್ತೆ ಜಲಗಂಡಾಂತರ ಎದುರಾಗಿದೆ. ಎರಡು ವರ್ಷದ ಹಿಂದೆ ಭಾರೀ ಮಳೆಯಿಂದಾಗಿ ನಡೆದಿದ್ದ ಭೂಕುಸಿತ ಮತ್ತೆ ಮರುಕಳಿಸುವಂತ ಲಕ್ಷಣ ದಟ್ಟವಾಗಿದೆ.

    ಕೊಡಗು ಜಿಲ್ಲೆಯಾದ್ಯಂತ ಎಡಬಿಡೆ ಸುರಿಯತ್ತಿರುವ ಮಳೆ ಇನ್ನೂ ಎರಡು ದಿನಗಳ ಕಾಲ ತನ್ನ ಅಬ್ಬರ ಮುಂದುವರಿಸುವ ಸಾಧ್ಯತೆ ಇದೆ. ಕೊಡಗಿನಲ್ಲಿ ಹಲವು ಗುಡ್ಡಗಳು ಕುಸಿಯುವುದು ಬಹುತೇಕ ಸ್ಪಷ್ಟವಾಗಿದ್ದು, ಎರಡು ದಿನಗಳ ಮಳೆಗೆ 40 ಪ್ರದೇಶದಲ್ಲಿ ಈಗಾಗಲೇ ಗುಡ್ಡ ಕುಸಿತವಾಗಿದೆ. ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಗಳ ಸಂಪರ್ಕ ರಸ್ತೆ ಮುಚ್ಚಿಹೋಗಿವೆ.

    ಭಗಂಡೇಶ್ವರ ದೇವಾಲಯದ ಅರ್ಚಕರ ಕುಟುಂಬ ಭೂ ಸಮಾಧಿಯಾಗಿದ್ದು ಬಹುತೇಕ ಅಧಿಕೃತವಾಗಿದ್ದು, ನಾಪತ್ತೆಯಾದ 5 ಮಂದಿ ಮೃತದೇಹಗಳ ಪತ್ತೆಕಾರ್ಯ ನಡೆಸುತ್ತಿದೆ. ಆದರೆ ಈ ಕಾರ್ಯಚರಣೆಗೆ ಎಡಬಿಡದೆ ಸುರಿಯುವ ಮಳೆ ಅಡ್ಡಿಯುಂಟುಮಾಡಿದ್ದು ಎನ್‍ಡಿಆರ್‍ಎಫ್ ರಕ್ಷಣಾ ತಂಡಕ್ಕೆ ಕಾರ್ಯಚರಣೆ ಮಾಡಲು ಸಮಸ್ಯೆ ಎದುರಾಗಿದೆ. ಜಿಲ್ಲೆಯಲ್ಲಿ ಮತ್ತಷ್ಟು ಜಾಗದಲ್ಲಿ ಗುಡ್ಡಗಳು ಬಿರುಕು ಬಿಟ್ಟಿರುವ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದು. ಆ ಗುಡ್ಡಗಾಡು ಪ್ರದೇಶದಲ್ಲಿ ಇರುವ ಜನರನ್ನ ಸ್ಥಳಾಂತರ ಮಾಡಲು ಕಾರ್ಯಚರಣೆಯೂ ಆರಂಭವಾಗಲಿದೆ.

    ಪ್ರಮುಖವಾಗಿ ಅಯ್ಯಪ್ಪಬೆಟ್ಟ ಹಾಗೂ ಕರಡಿಗೂಡು ಪ್ರದೇಶದಲ್ಲಿ ಗುಡ್ಡ ಬಿರುಕು ಬಿಟ್ಟಿದ್ದು ಅಲ್ಲಿನ ಜನರ ಸ್ಥಳಾಂತರ ಕಾರ್ಯಚರಣೆ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಈ ಜೊತೆಗೆ ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯುತ್ತಿದ್ದು ಕೊರೊನಾ ಆತಂಕ ನಡುವೆ ಕಾಳಜಿ ಕೇಂದ್ರಗಳ ನಿರ್ವಹಣೆ ದೊಡ್ಡ ಸವಾಲಾಗಿದೆ. ಪರಿಸ್ಥಿತಿ ಅರಿತ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ದಿಢೀರ್ ಕೊಡಗಿಗೆ ಆಗಮಿಸಿ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದಾರೆ.

    ಇನ್ನು ಮೂರು ದಿನಗಳ ಕಾಲ ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಹಾಗು ಸ್ಥಳೀಯ ಶಾಸಕರ ಜೊತೆ ಪರಿಹಾರ ಕಾರ್ಯದಲ್ಲಿ ತೊಡಗಲಿದ್ದು, ಇಂದು ದುರಂತದ ಸ್ಥಳದ ಬ್ರಹ್ಮಗಿರಿ ಬೆಟ್ಟಕ್ಕೆ ಭೇಟಿ ನೀಡಿ ಕಾರ್ಯಚರಣೆ ಹಾಗೂ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಕೊಡಗಿಗೆ ಈ ವರ್ಷವು ಮಹಾಮಳೆಯ ಆತಂಕ ಎದುರಾಗಿದೆ.

  • ಬಸವಸಾಗರ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

    ಬಸವಸಾಗರ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

    -ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಕಟ್ಟೆಚ್ಚರ

    ಯಾದಗಿರಿ: ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆ ಇಂದು ಬಸವಸಾಗರ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನಾಳೆ ವೇಳೆಗೆ ನೀರಿನ ಹೊರ ಹರಿವು ಜಾಸ್ತಿಯಾಗುವ ಸಾಧ್ಯತೆಯಿದೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿರುವ ಬಸವಸಾಗರ ಜಲಾಶಯ ಇದಾಗಿದ್ದು, ಈಗಾಗಲೇ ಜಲಾಶಯ ಭರ್ತಿಯಾಗಿದೆ. ಇನ್ನೂ ಮತ್ತೆ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದವಾಗುತ್ತಿದ್ದು, ಕೃಷ್ಣಾ ನದಿ ತೀರಕ್ಕೆ ಜನರು ತೆರಳದಂತೆ ಯಾದಗಿರಿ ಜಿಲ್ಲಾಡಳಿತ ಸೂಚನೆ ನೀಡಿದೆ.

    ಈಗಾಗಲೇ ನದಿ ತೀರದ ತಾಲೂಕಗಳಾದ ಶಹಾಪುರ, ಸುರಪುರ, ವಡಗೇರಾ, ಹುಣಸಗಿಯಲ್ಲಿ ಕಾಳಜಿ ಕೇಂದ್ರ ಗುರುತಿಸುವ ಕಾರ್ಯ ಆರಂಭಗೊಂಡಿದೆ. ಒಂದು ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಯುವ ತನಕ ಜಿಲ್ಲೆಯ ಯಾವುದೇ ಗ್ರಾಮಕ್ಕೆ ಅಪಾಯವಾಗುವುದಿಲ್ಲ. ಆದರೆ ಜಲಾಶಯದ ಹೊರ ಹರಿವು ಒಂದು ಲಕ್ಷ ಕ್ಯೂಸೆಕ್ ದಾಟಿದ್ರೆ, ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಸಂಪೂರ್ಣ ಸಂಪರ್ಕ ಕಳೆದುಕೊಂಡು, ನಡುಗಡ್ಡೆಯಾಗಲಿದೆ. ಇನ್ನೂ ಕೊಳ್ಳೂರು ಸೇತುವೆ ಮುಳುಗಡೆಯಾಗುವ ಸಾಧ್ಯತೆಯಿದೆ. ಛಾಯಾಭಗವತಿ ದೇವಸ್ಥಾನ ಮುಳುಗಡೆ ಸೇರಿದಂತೆ ಯಕ್ಷಚಿಂತಿ, ಗೌಡೂರು, ಯಮನೂರು, ಸೂಗೂರು ಗ್ರಾಮಗಳ ಜಮೀನಿಗಳು ಸಂಪೂರ್ಣ ನೀರಿನಲ್ಲಿ ಜಲಾವೃತಗೊಳ್ಳಲಿವೆ. ನೀರಿನ ಪ್ರಮಾಣ ಹೆಚ್ಚಾದಂತೆ ಗ್ರಾಮಗಳಿಗೂ ನೀರು ನುಗ್ಗುವ ಸಾಧ್ಯತೆ ಇದೆ.

    ಬಸವಸಾಗರ ಜಲಾಶಯ ಒಟ್ಟು 33.31 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ ಡ್ಯಾಂ ನಲ್ಲಿ 30.06 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಸದ್ಯ 50 ಸಾವಿರ ಕ್ಯೂಸೆಕ್ ಒಳಹರಿವು ಇದ್ದರೆ, ಒಟ್ಟು 24 ಗೇಟ್ ಗಳ ಪೈಕಿ ಏಳು ಗೇಟ್ ಗಳ ಮೂಲಕ 50 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಹಂತ ಹಂತವಾಗಿ ಹೊರ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.

  • ಭಾಗಮಂಡಲದಲ್ಲಿ ದಾಖಲೆ 48 ಸೆಂ.ಮೀ.ಮಳೆ – ಕಳೆದ ವರ್ಷ ಈ ದಿನ ಎಷ್ಟು ಮಳೆಯಾಗಿತ್ತು?

    ಭಾಗಮಂಡಲದಲ್ಲಿ ದಾಖಲೆ 48 ಸೆಂ.ಮೀ.ಮಳೆ – ಕಳೆದ ವರ್ಷ ಈ ದಿನ ಎಷ್ಟು ಮಳೆಯಾಗಿತ್ತು?

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಮಳೆ ಸುರಿಯುತ್ತಿದೆ. ಜಿಲ್ಲೆಯ ಭಾಗಮಂಡಲದಲ್ಲಿ ದಾಖಲೆಯ 48 ಸೆಂ.ಮೀ. ಮಳೆಯಾಗಿದೆ. ಗುರುವಾರ ಬೆಳಗ್ಗೆ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಕಂಡುಬಂದರೂ ಸಹ, ಮಧ್ಯಾಹ್ನದ ನಂತರ ಬಿರುಗಾಳಿ ಸಹಿತ ಮಳೆ ಮುಂದುವರಿದಿದೆ.

    ಕೊಡಗು ಜಿಲ್ಲೆಯ ಮಳೆ ವಿವರ: ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ ಮಳೆ 177.07 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 76.97 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1298.78 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1016.13 ಮಿ.ಮೀ ಮಳೆಯಾಗಿತ್ತು.

    ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 238.75 ಮಿ.ಮೀ. ಕಳೆದ ವರ್ಷ ಇದೇ ದಿನ 95.10 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1841.30 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1388.45 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 157.25 ಮಿ.ಮೀ. ಕಳೆದ ವರ್ಷ ಇದೇ ದಿನ 77.92 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1169.39 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1036.12 ಮಿ.ಮೀ. ಮಳೆಯಾಗಿತ್ತು.

    ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 135.20 ಮಿ.ಮೀ. ಕಳೆದ ವರ್ಷ ಇದೇ ದಿನ 57.89 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 885.65 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 623.83 ಮಿ.ಮೀ. ಮಳೆಯಾಗಿತ್ತು.

    ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 176, ನಾಪೋಕ್ಲು 214.20, ಸಂಪಾಜೆ 78.20, ಭಾಗಮಂಡಲ 486, ವಿರಾಜಪೇಟೆ ಕಸಬಾ 140, ಹುದಿಕೇರಿ 165, ಶ್ರೀಮಂಗಲ 142, ಪೊನ್ನಂಪೇಟೆ 245, ಅಮ್ಮತ್ತಿ 61.50, ಬಾಳೆಲೆ 190, ಸೋಮವಾರಪೇಟೆ ಕಸಬಾ 140.60, ಶನಿವಾರಸಂತೆ 120, ಶಾಂತಳ್ಳಿ 255.20, ಕೊಡ್ಲಿಪೇಟೆ 165.80, ಕುಶಾಲನಗರ 46.60, ಸುಂಟಿಕೊಪ್ಪ 83 ಮಿ.ಮೀ. ಮಳೆಯಾಗಿದೆ.

    ಹಾರಂಗಿ: ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಇಂದಿನ ನೀರಿನ ಮಟ್ಟ 2855.16 ಅಡಿಗಳು, ಕಳೆದ ವರ್ಷ ಇದೇ ದಿನ 2835.16 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 38.20 ಮಿ.ಮೀ., ಕಳೆದ ವರ್ಷ ಇದೇ ದಿನ 16.80 ಮಿ.ಮೀ. ಇಂದಿನ ನೀರಿನ ಒಳಹರಿವು 9081 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 2559 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 11811, ನಾಲೆಗೆ 300. ಕಳೆದ ವರ್ಷ ಇದೇ ದಿನ ನದಿಗೆ 1400, ನಾಲೆಗೆ 700 ಕ್ಯುಸೆಕ್.

    ಕಳೆದ ಐದು ದಿನಗಳಿಂದ ಸುರಿದ ಬಿರುಗಾಳಿ ಸಹಿತ ಮಳೆಗೆ ಸಾಕಷ್ಟು ಹಾನಿ ಉಂಟಾಗಿದೆ. ಜಿಲ್ಲೆಯ ಹಲವು ಕಡೆ ರಸ್ತೆಗೆ ಮತ್ತು ವಿದ್ಯುತ್ ಕಂಬಕ್ಕೆ ಮರಗಳು ಬಿದ್ದು ತೆರವುಗೊಳಿಸಿ ಸಾರಿಗೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹಾಗೆಯೇ ಹೆದ್ದಾರಿಗಳಲ್ಲಿ ಬರೆ ಕುಸಿದಿರುವುದನ್ನು ತೆರವುಗೊಳಿಸಿ, ಸುಗಮ ಸಾರಿಗೆ ಸಂಚಾರಕ್ಕೆ ವ್ಯತ್ಯಯ ಉಂಟಾಗದಂತೆ ಜಿಲ್ಲಾಡಳಿತ ನೋಡಿಕೊಂಡಿದೆ. ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ, ನೆಲ್ಯಹುದಿಕೇರಿ ಹಾಗೆಯೇ ವಿರಾಜಪೇಟೆಯ ನೆಹರು ನಗರ, ಅಯ್ಯಪ್ಪ ಸ್ವಾಮಿ ಬಡಾವಣೆ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹೀಗೆ ಹಲವು ರಕ್ಷಣಾ ಕಾರ್ಯಗಳಲ್ಲಿ ಜಿಲ್ಲಾಡಳಿತ, ಪೊಲೀಸ್, ಅರಣ್ಯ, ಸೆಸ್ಕ್, ಅಗ್ನಿ ಶಾಮಕ, ಎನ್‍ಡಿಆರೆಫ್ ತಂಡಗಳು ಕಾರ್ಯ ಪ್ರವೃತ್ತವಾಗಿವೆ.

    ನಾಡಿನ ಜೀವನದಿ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಬಲಮುರಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗಿದೆ. ಮಲ್ಲಳ್ಳಿ, ಅಬ್ಬಿ, ಇರ್ಪು, ಚೇಲಾವರ ಸೇರಿದಂತೆ ಹಲವು ಜಲಪಾತಗಳು ಭೋರ್ಗರೆಯುತ್ತಿವೆ. ಜಿಲ್ಲೆಯಾದ್ಯಂತ ಮುಂಗಾರು ಚುರುಕಾಗಿದೆ. ಜುಲೈ ತಿಂಗಳ ಅಂತ್ಯದ ವೇಳೆಗೆ ಕೊಂಚ ವಿರಾಮ ನೀಡಿದ್ದ ಮಳೆ, ಆಗಸ್ಟ್ ಮೊದಲನೆಯ ವಾರದಲ್ಲಿ ಮತ್ತಷ್ಟು ಬಿರುಸುಗೊಂಡಿದೆ. ಈ ಮೂಲಕ ಜಿಲ್ಲೆಯ ಕೆರೆ ಕಟ್ಟೆ ಮತ್ತು ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಕರುನಾಡ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ.

    ಆಗಸ್ಟ್ 1 ರ ಶನಿವಾರ ದಂದು 15.51 ಮಿ.ಮೀ ಇದ್ದ ಜಿಲ್ಲಾ ಸರಾಸರಿ ಮಳೆ, ಆಗಸ್ಟ್ 2 ರ ಭಾನುವಾರದಂದು 11.53 ಮಿ.ಮೀಗೆ ಇಳಿಕೆ ಕಂಡಿತು. ಆದರೆ ಸೋಮವಾರದ ವೇಳೆಗೆ ಮುಂಗಾರು ಬಿರುಸುಗೊಂಡಿದ್ದರಿಂದ ಆಗಸ್ಟ್ 3 ರಂದು ಜಿಲ್ಲಾ ಸರಾಸರಿ ಮಳೆ 50.92 ಮಿ.ಮೀ ಗೆ ಏರಿಕೆ ಕಂಡಿತು. ಬಳಿಕ ಮತ್ತಷ್ಟು ಚುರುಕಾದ ಮುಂಗಾರಿನಿಂದಾಗಿ ಆಗಸ್ಟ್ 4 ರಂದು ಜಿಲ್ಲಾ ಸರಾಸರಿ 106.12 ಮಿ.ಮೀಗೆ ಏರಿತು. ಆಗಸ್ಟ್ 5 ರ ಬುಧವಾರದಂದು ಜಿಲ್ಲಾ ಸರಾಸರಿ ಮಳೆಯು 142.59 ಮಿ.ಮೀ ದಾಖಲಾಯಿತು. ಆಗಸ್ಟ್ 6 ರ ಗುರುವಾರದ ವೇಳೆಗೆ ಜಿಲ್ಲಾ ಸರಾಸರಿ ಮಳೆಯು 162.4 ಮಿ.ಮೀಗೆ ಏರಿಕೆ ಕಂಡಿತು.

    ಭಾಗಮಂಡಲ ಹೋಬಳಿಯಲ್ಲಿ ಗುರುವಾರ ಬೆಳಗ್ಗೆ 8:30 ರ ವೇಳೆಗೆ ಸುರಿದ ಮಳೆಯ ಪ್ರಮಾಣ 486.6 ಮಿ.ಮೀ ಆಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿದೆ. ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡ ತಕ್ಷಣ ಕಾರ್ಯಾಚರಣೆ ತಂಡವು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದು, ಅವರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಎರಡು ಮನೆಗಳ ಪೈಕಿ ಒಬ್ಬರು ಅರ್ಚಕರು ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ಭಾಗಮಂಡಲದಲ್ಲಿ ನೆಲೆಸಿದ್ದಾರೆ.