Tag: ಕರ್ನಾಟಕ ಮಳೆ

  • ಬದುಕು ಕೊಡೋಕಾದ್ರೆ ಬನ್ನಿ, ಆಶ್ವಾಸನೆ ನೀಡೋಕಾದ್ರೆ ಬರಲೇಬೇಡಿ : ಸಚಿವ, ಶಾಸಕರಿಗೆ ಮಲೆನಾಡಿಗರ ಕ್ಲಾಸ್

    ಬದುಕು ಕೊಡೋಕಾದ್ರೆ ಬನ್ನಿ, ಆಶ್ವಾಸನೆ ನೀಡೋಕಾದ್ರೆ ಬರಲೇಬೇಡಿ : ಸಚಿವ, ಶಾಸಕರಿಗೆ ಮಲೆನಾಡಿಗರ ಕ್ಲಾಸ್

    ಚಿಕ್ಕಮಗಳೂರು: ಬದುಕು ಕಟ್ಟಿಕೊಡಲು ಬರುವುದಾದರೆ ಬನ್ನಿ. ಮತ್ತದೇ ಭರವಸೆ, ಆಶ್ವಾಸನೆ ನೀಡುವುದಾದರೆ ಬರಲೇಬೇಡಿ ಎಂದು ಸಚಿವ ಎಸ್.ಅಂಗಾರ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದಾರೆ.

    2019ರ ಮಳೆ ಮುಗಿದು ಈಗ ಮೂರನೇ ಮಳೆಗಾಲ ಬಂದಿದೆ. ಸರ್ಕಾರ ಹಾಗೂ ಅಧಿಕಾರಿಗಳು ಅಂದು ಕೊಟ್ಟ ಆಶ್ವಾಸನೆಗಳೇ ಇಂದಿಗೂ ಒಂದೂ ಈಡೇರಿಲ್ಲ. ಈಗ ಮತ್ತೆ ಏಕೆ ಬಂದಿದ್ದೀರಾ? ನಾವು ಸತ್ತಿದ್ದೀವಾ ಅಥವಾ ಬದುಕಿದ್ದೀವಾ ಎಂದು ನೋಡಲು ಬಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. 2019ರ ಆಗಸ್ಟ್ ತಿಂಗಳಲ್ಲಿ ಸುರಿದ ಕುಂಭದ್ರೋಣ ಮಳೆಯ ಅಬ್ಬರಕ್ಕೆ ಮಲೆಮನೆ ಗ್ರಾಮಸ್ಥರ ಬದುಕು ಬೀದಿಗೆ ಬಂದಿತ್ತು. ಸುಮಾರು ಆರು ಮನೆಗಳು ಸಂಪೂರ್ಣ ನೆಲಸಮವಾಗಿದ್ದವು. ಸುಮಾರು 40 ಎಕರೆಗೂ ಅಧಿಕ ಭೂಮಿ ಕೊಚ್ಚಿ ಹೋಗಿತ್ತು. ಆರು ಕುಟುಂಬಗಳ ಮನೆ ಸಂಪೂರ್ಣ ನೆಲಸಮವಾಗಿ ಮನೆಯ ಒಂದು ಚಮಚ ಕೂಡ ಕೈಗೆ ಸಿಗದಂತೆ ಐದಾರು ಅಡಿ ಗುಡ್ಡದ ಮಣ್ಣು ಮನೆ ಸಾಮಾಗ್ರಿಗಳ ಮೇಲೆ ಬಿದ್ದಿತ್ತು. ಜನ ಆ ಗುಡುಗು-ಸಿಡಿಲು-ಮಳೆಯಿಂದ ಬದುಕು ಉಳಿಸಿಕೊಳ್ಳುವುದೇ ಸವಾಲಾಗಿತ್ತು. ಉಟ್ಟ ಬಟ್ಟೆಯಲ್ಲಿ ಓಡಿಬಂದು ಬದುಕು ಉಳಿಸಿಕೊಂಡಿದ್ದರು.

    ಅಂದಿನಿಂದ ಹೊಸ ಬದುಕಿಗಾಗಿ ಹೋರಾಡುತ್ತಲೇ ಇದ್ದಾರೆ. ಅಂದು ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಐದೇ ನಿಮಿಷಕ್ಕೆ ಪ್ರವಾಸ ಮುಗಿಸಿದ್ದರು. ಆ ಐದು ನಿಮಿಷದಲ್ಲೇ ನಿಮಗೆ ಹೊಸ ಬದುಕು ಕಟ್ಟಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಆರ್.ಅಶೋಕ್, ಮಾಧುಸ್ವಾಮಿಯೂ ಸ್ಥಳಕ್ಕೆ ಭೇಟಿ ನೀಡಿ ಹೊಸ ಬದುಕು ಕಟ್ಟಿಕೊಡುವ ಭರವಸೆ ನೀಡಿದ್ದರು. ಅಂದು ಸಿಎಂ, ಸಚಿವರು ಹೇಳಿದ ಒಂದೇ ಒಂದು ಭರವಸೆ ಕೂಡ ಈಡೇರಿಲ್ಲ. ಮನೆ ಕೊಡ್ತೀವಿ ಅಂದ ಸರ್ಕಾರ ಇಂದಿಗೂ ಕೊಟ್ಟಿಲ್ಲ. ಒಂದು ಲಕ್ಷ ಹಣ ಕೊಟ್ಟಿದೆ. ಮನೆ ಕಟ್ಟಿಕೊಳ್ಳಲು ಜಾಗ ತೋರಿಸಿಲ್ಲ. ಬಾಡಿಗೆ ಮನೆಯಲ್ಲಿ ಇರಿ ಎಂದ ಸರ್ಕಾರ ಮೂರು ವರ್ಷಕ್ಕೆ 25 ಸಾವಿರ ಹಣ ನೀಡಿ ಕೈತೊಳೆದುಕೊಂಡಿದೆ. ಕೊಚ್ಚಿ ಹೋದ ಜಮೀನು ಇಲ್ಲ. ಮನೆ ಇಲ್ಲ. ಹಣವೂ ಇಲ್ಲ. ಬದುಕೂ ಇಲ್ಲದಂತೆ ಮಲೆಮನೆ ಗ್ರಾಮಸ್ಥರು ಅತಂತ್ರರಾಗಿದ್ದಾರೆ.

    ಬದುಕಿಗಾಗಿ ಓಡಾಡದ ಕಚೇರಿ ಉಳಿದಿಲ್ಲ. ಮಾಡದ ಮನವಿಗಳಿಲ್ಲ. ಹಾಗಾಗಿ ಇಂದು ಸಚಿವರು ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳೀಯರ ತಾಳ್ಮೆಯ ಸಹನೆಯ ಕಟ್ಟೆ ಒಡೆದಿತ್ತು. ಸಚಿವರು, ಅಧಿಕಾರಿಗಳನ್ನ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಸಚಿವರು ಆಗ ಬೇರೆ, ಈಗ ಬೇರೆ. ನಿಮ್ಮ ಸಮಸ್ಯೆಗೆ ಶೀಘ್ರವೇ ಪರಿಹಾರ ನೀಡುತ್ತೇವೆ ಎಂದಿರೋದು ಸ್ಥಳೀಯರಿಗೆ ಹೊಸ ಆಸೆ ಮೂಡಿದೆ. ಸರ್ಕಾರ, ಸಚಿವರು ಏನು ಮಾಡುತ್ತಾರೋ ಕಾದುನೋಡಬೇಕು.

  • ಉತ್ತಮ ಮಳೆ, ಹಾಸನದ ಯಗಚಿ ಡ್ಯಾಂ ಭಾಗಶಃ ಭರ್ತಿ

    ಉತ್ತಮ ಮಳೆ, ಹಾಸನದ ಯಗಚಿ ಡ್ಯಾಂ ಭಾಗಶಃ ಭರ್ತಿ

    – 135 ವಿದ್ಯುತ್ ಕಂಬ ಧರೆಗೆ, ಎಂಟು ಮನೆಗೆ ಹಾನಿ

    ಹಾಸನ: ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಬೇಲೂರಿನ ಸಮೀಪದಲ್ಲಿರುವ ಯಗಚಿ ಡ್ಯಾಂ ಭರ್ತಿಯಾಗುವ ಹಂತ ತಲುಪಿದೆ. ನದಿಗೆ ಸುಮಾರು 900 ಕ್ಯೂಸೆಕ್‍ಗೂ ಅಧಿಕ ನೀರು ಹರಿದು ಬರ್ತಿದೆ. ಇದೇ ರೀತಿ ಒಳಹರಿವು ಮುಂದುವರಿದರೆ ಅಣೆಕಟ್ಟೆ ಶೀಘ್ರವೇ ಭರ್ತಿಯಾಗಲಿದೆ.

    ಯಗಚಿ ಅಣೆಕಟ್ಟೆ 964.60 ಮೀಟರ್ ಗರಿಷ್ಠ ಮಟ್ಟ ಹೊಂದಿದ್ದು, ಈಗಾಗಲೇ ಅಣೆಕಟ್ಟೆಯಲ್ಲಿ 963.90 ಮೀಟರ್ ಗಳಷ್ಟು ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಾದರೆ ಡ್ಯಾಂನಿಂದ ನೀರು ಬಿಡುಗಡೆ ಸಾಧ್ಯತೆಯಿದೆ. ಅಣೆಕಟ್ಟೆಯು 3.6 ಟಿಎಂಸಿಯಷ್ಟು ಗರಿಷ್ಟ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಇಂದು 3.31 ಟಿಎಂಸಿಯಷ್ಟು ಸಂಗ್ರಹವಿದೆ.

    135 ವಿದ್ಯುತ್ ಕಂಬ ಧರೆಗೆ, ಎಂಟು ಮನೆಗೆ ಹಾನಿ:
    ಜಿಲ್ಲೆಯಲ್ಲಿ ಜೂ.18 ರವರೆಗೆ ವಾಡಿಕೆಗಿಂತ ಶೇ.19 ರಷ್ಟು ಹೆಚ್ಚು ಮಳೆಯಾಗಿದ್ದು, ಇದುವರೆಗೂ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದ್ದಾರೆ. ಸಿಎಂ ವಿಡಿಯೋ ಕಾನ್ಫರೆನ್ಸ್ ನಂತರ ಮಾಹಿತಿ ನೀಡಿದ ಅವರು ಜೂನ್ 18 ರವರೆಗೆ 88.3 ಸೆ.ಮಿ. ವಾಡಿಕೆ ಮಳೆ ಆಗಬೇಕಿತ್ತು, 105.5 ಮಳೆಯಾಗಿದ್ದು, ವಾಡಿಕೆಗಿಂತ ಶೇ.19 ರಷ್ಟು ಮಳೆಯಾಗಿದೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ-ಮಲೆನಾಡು ಭಾಗದಲ್ಲಿ ಮನೆ ಕುಸಿತ

    ಆಲೂರು, ಬೇಲೂರು, ಸಕಲೇಶಪುರದಲ್ಲಿ ಹೆಚ್ಚಿನ ಮಳೆಯಾಗಿದೆ. ಸಕಲೇಶಪುರದಲ್ಲಿ ವಾಡಿಕೆಗಿಂತ ಶೇ.89 ರಷ್ಟು ಹೆಚ್ಚು ಮಳೆಯಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದರು. ಮಳೆಯಿಂದ ಜಿಲ್ಲೆಯಲ್ಲಿ ಒಟ್ಟು ಎಂಟು ಮನೆಗಳು ಕುಸಿದಿವೆ. ಸಕಲೇಶಪುರ ತಾಲ್ಲೂಕಿನ ಹಾನುಬಾಳು ಹೋಬಳಿಯ ದೋನಹಳ್ಳಿ ಗ್ರಾಮದ ಸೇತುವೆಗೆ ಹಾನಿಯಾಗಿದೆ. ಇದನ್ನೂ ಓದಿ: ಧಾರವಾಡ ಜಿಲ್ಲೆಯಲ್ಲಿ ಮಳೆ – ಕೆರೆಯ ಕಟ್ಟೆ ಒಡೆದು ನೂರಾರು ಎಕರೆ ಜಮೀನು ಜಲಾವೃತ!

    ಕಳೆದ ವರ್ಷವೂ ಸೇತುವೆ ಕೊಚ್ಚಿ ಹೋಗಿತ್ತು. ಐವತ್ತು ಲಕ್ಷ ಅಂದಾಜು ಪಟ್ಟಿ ತಯಾರಿಸಿ ಪಂಚಾಯತ್ ರಾಜ್ ಇಲಾಖೆಗೆ ಕಳಿಹಿಸಲಾಗಿದೆ. ಜಿಲ್ಲೆಯಲ್ಲಿ ಮಳೆ ಗಾಳಿಗೆ 135 ವಿದ್ಯುತ್ ಕಂಬಗಳು ಬಿದ್ದಿವೆ. ದುರಸ್ಥಿ ಕಾರ್ಯ ಭರದಿಂದ ನಡೆಯುತ್ತಿದೆ. ಜಿಲ್ಲೆಯ ಯಾವುದೇ ಗ್ರಾಮದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿಲ್ಲ. ಅಗ್ನಿಶಾಮಕ ದಳ, ಅರಣ್ಯ ಇಲಾಖೆಗೆ ಎಲ್ಲಾ ರೀತಿಯ ಸಲಕರಣೆಗಳನ್ನು ಒದಗಿಸಿದ್ದೇವೆ. 95 ಗ್ರಾಮಗಳನ್ನು ಅತೀಸೂಕ್ಷ್ಮ ಎಂದು ಗುರುತಿಸಲಾಗಿದೆ ಎಂದರು.

  • ಮುಂದಿನ ಮೂರು ದಿನ ಕೆಲವೆಡೆ ಭಾರೀ ಮಳೆ ಸಾಧ್ಯತೆ

    ಮುಂದಿನ ಮೂರು ದಿನ ಕೆಲವೆಡೆ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ಕರ್ನಾಟಕದ ಕೆಲವೆಡೆ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಮಾನ ಇಲಾಖೆ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ದಿನಗಳಲ್ಲಿ, ಹಲವು ಪ್ರದೇಶಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

    ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಮಾತನಾಡಿ, ಜಾರ್ಖಂಡ್ ನಲ್ಲಿ ವಾಯುಭಾರ ಕುಸಿತವಾಗಿರೋದ್ರಿಂದ ಹಾಗೂ ಪೂರ್ವ ಅರಬ್ಬೀ ಸಮುದ್ರದಲ್ಲಿ ಮತ್ತೊಂದು ಟ್ರಫ್ ಕರ್ನಾಟಕದ ಕರಾವಳಿ ಪ್ರದೇಶ ಸಮೀಪಿಸತ್ತಾ ಇರೋದರಿಂದ ಮಳೆಯಾಗುತ್ತಿದೆ. ಇದರ ಪರಿಣಾಮ ಕರಾವಳಿ ಪ್ರದೇಶಗಳಲ್ಲಿ ಇಂದಿನಿಂದ 18ರವರೆಗೆ ವ್ಯಾಪಕ ಮಳೆಯಾಗಲಿದೆ.

    ಇಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು, ಮಾನ್ಸೂನ್ ಚುರುಕಾಗಿದೆ. ಉತ್ತರ ಒಳನಾಡಿನಲ್ಲಿ ಕೆಲವೆಡೆ ಮಳೆಯಾಗಿದೆ. ಮುಖ್ಯವಾಗಿ ಇಂದು ಪೆಣಂಬೂರು, ಭಾಗಮಂಡಲ, ಆಗುಂಬೆಯಲ್ಲಿ 9 ಸೆಂಟಿಮೀಟರ್ ಹಾಗೂ ಮಂಗಳೂರು 8 ಸೆಂಟಿ ಮೀಟರ್ ಮಳೆಯಾಗಿದೆ.

    ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ. ಕರಾವಳಿ ಜಿಲ್ಲೆಗಳಿಗೆ ಜೂನ್ 16 ಹಾಗೂ 17 ರಂದು ಆರೆಂಜ್ ಅಲರ್ಟ್ ನ್ನು ಕೊಡಲಾಗಿದೆ. ಜೂನ್ 18 ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜೂನ್ 14-17ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಿಗೆ ಜೂನ್ 14-17 ರವರೆಗೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

    ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಲವಾದ ಗಾಳಿ ಬೀಸುವ ಹಿನ್ನೆಲೆ ಮೀನಗಾರರು ಇಂದಿನಿಂದ ಜೂನ್ 17ರವರೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಡಲಾಗಿದೆ.

  • ಕೊಡಗಿನಲ್ಲಿ ಮಳೆ ಅರ್ಭಟ – ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ

    ಕೊಡಗಿನಲ್ಲಿ ಮಳೆ ಅರ್ಭಟ – ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ

    – 77 ಗ್ರಾಮಗಳ ಗ್ರಾಮಸ್ಥರ ಸ್ಥಳಾಂತರಕ್ಕೆ ಮುಂದಾದ ಜಿಲ್ಲಾಡಳಿತ

    ಕೊಡಗು: ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲ್ಲೂ ಮಳೆ ಅರ್ಭಟ ಹೆಚ್ಚಾಗಿದೆ. ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದೆ.

    ಕೊಡಗು- ಕೇರಳ ಗಡಿಭಾಗ ಇದಾಗಿದ್ದು ನಿರಂತರ ಮಳೆಯಾಗುತ್ತಿದೆ. ಪಕ್ಕದ ಭಾಗಮಂಡಲದ ನದಿಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಜಿಲ್ಲೆಯ ಇತರ ಭಾಗಗಳಲ್ಲಿ ಮಳೆಯ ಅರ್ಭಟ ಹೆಚ್ಚಾಗುತ್ತಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಕೆಲವು ಭಾಗಗಳಲ್ಲಿ ಸಣ್ಣ ಪುಟ್ಟ ಬರೆ ಕುಸಿದ ಘಟನೆಗಳು ನಡೆದಿದೆ. ಮಡಿಕೇರಿ ನಗರದ ಆಂಜನೇಯ ದೇವಸ್ಥಾನದ ಬಳಿ ಚೇತನ್ ಅವರಿಗೆ ಸೇರಿದ ಜಾಗದಲ್ಲಿ ಕಳೇದ ರಾತ್ರಿ ಸಣ್ಣ ಪ್ರಮಾಣದಲ್ಲಿ ಬರೆ ಜರಿದು ದನದ ಕೊಟ್ಟಿಗೆ ಸಂಪೂರ್ಣವಾಗಿ ಹಾನಿಯಾಗಿದೆ. ಮಡಿಕೇರಿ ಹಾಗೂ ಚೆಟ್ಟಳ್ಳಿ ಮಾರ್ಗದ ಕಡಗದಾಳು ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ತೆರೆವುಗೊಳಿಸಿ ರಸ್ತೆ ಸಂಪರ್ಕಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

    ಸ್ಥಳಾಂತರಗೊಳ್ಳುತ್ತಿರುವ ಜನರಿಗೆ ಲಸಿಕೆ:
    ಈ ಬಾರಿಯೂ ಪ್ರವಾಹ ಪರಿಸ್ಥಿತಿ ಎದುರಾದರೆ, ಮತ್ತೊಂದೆಡೆ ಭೂಕುಸಿತದಂತ ಘಟನೆಗಳು ನಡೆಯಬಹುದು. ಹೀಗಾಗಿ ಜಿಲ್ಲಾಡಳಿತ ಪ್ರವಾಹ ಮತ್ತು ಭೂಕುಸಿತ ಎದುರಾಗುವಂತಹ ಪ್ರದೇಶಗಳ ಜನರನ್ನು ಸ್ಥಳಾಂತರ ಮಾಡುವುದಕ್ಕೆ ನಿರ್ಧರಿಸಿದೆ. ಈ ಬಾರಿ ಜಿಲ್ಲೆಯಲ್ಲಿ 77 ಗ್ರಾಮಗಳು ಪ್ರವಾಹ ಮತ್ತು ಭೂಕುಸಿತಕ್ಕೆ ನಲುಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇಷ್ಟು ಗ್ರಾಮಗಳ 2,800 ಮನೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಹೀಗಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಅಷ್ಟು ಕುಟುಂಬಗಳಿಗೂ ಜಿಲ್ಲಾಡಳಿತ ಈಗಾಗಲೇ ನೊಟೀಸ್ ಜಾರಿ ಮಾಡಿದೆ.

    ದೂರದ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದಲ್ಲಿ ಅಲ್ಲಿಗೆ ಜನರು ಹೋಗಲು ಹಿಂದೇಟು ಹಾಕುತ್ತಾರೆ. ಜೊತೆಗೆ ಸ್ಥಳಾಂತರದ ಕೆಲಸವೂ ಕಷ್ಟಕರವಾಗುತ್ತದೆ. ಈ ಎಲ್ಲಾ ದೃಷ್ಟಿಯಿಂದ ಆಯಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.

    ಕೆಲವು ಕಡೆಗಳಲ್ಲಿ ಜನರು ಸ್ಥಳಾಂತರಗೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದರೆ ಇದು ಒಳ್ಳೆಯದಲ್ಲ, ಒಂದು ವೇಳೆ ಪ್ರವಾಹ ಅಥವಾ ಭೂಕುಸಿತದಂತಹ ಘಟನೆಗಳು ನಡೆದರೆ, ತಕ್ಷಣವೇ ಎಲ್ಲರನ್ನೂ ರಕ್ಷಣೆ ಮಾಡುವ ಕೆಲಸ ಕಷ್ಟವಾಗುತ್ತದೆ. ಆದ್ದರಿಂದ ಜನರು ಸ್ಥಳಾಂತರಗೊಳ್ಳುವುದು ಉತ್ತಮ ಎಂದಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಪ್ರವಾಹದಂತಹ ಸಂದರ್ಭದಲ್ಲಿ ಎಷ್ಟೋ ಜನರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಇರುವುದರಿಂದ ಜನರು ಸಂಬಂಧಿಕರ ಮನೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಥಳಾಂತರಗೊಳ್ಳಬೇಕಾಗಿರುವ ಕುಟುಂಬಗಳ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೂಡಲೇ ವ್ಯಾಕ್ಸಿನ್ ಹಾಕಲು ಜಿಲ್ಲಾಡಳಿತ ನಿರ್ಧರಿಸಿದ್ದು, ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಆರೋಗ್ಯ ಇಲಾಖೆ ತಹಶೀಲ್ದಾರ್ ಗಳಿಂದ ಮಾಹಿತಿ ಪಡೆದು ಸ್ಥಳಾಂತರಗೊಳ್ಳುತ್ತಿರುವ ಕುಟುಂಬಗಳಿಗೆ ವ್ಯಾಕ್ಸಿನ್ ವಿತರಣೆಗೆ ಮುಂದಾಗಿದೆ.

  • NFSM ಅಭಿಯಾನದಡಿ 12.60 ಕೋ.ರೂ. ಮೌಲ್ಯದ ಬಿತ್ತನೆ ಬೀಜ ಮಿನಿಕಿಟ್ ವಿತರಣೆ: ಬಿ.ಸಿ.ಪಾಟೀಲ್

    NFSM ಅಭಿಯಾನದಡಿ 12.60 ಕೋ.ರೂ. ಮೌಲ್ಯದ ಬಿತ್ತನೆ ಬೀಜ ಮಿನಿಕಿಟ್ ವಿತರಣೆ: ಬಿ.ಸಿ.ಪಾಟೀಲ್

    ಬೆಂಗಳೂರು: ತೊಗರಿ, ಹೆಸರು, ಶೇಂಗಾ, ಸೋಯಾ, ಅವರೆ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಲು ರೈತರಿಗೆ ಪ್ರಮುಖವಾಗಿ ಬೆಳೆಯುವ 19 ಜಿಲ್ಲೆಗಳಲ್ಲಿ ಬಿತ್ತನೆ ಬೀಜಗಳ ಮಿನಿಕಿಟ್ ರೂಪದಲ್ಲಿ “ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ”(ಎನ್.ಎಫ್.ಎಸ್.ಎಂ)ಯೋಜನೆಯಡಿ ರೈತರಿಗೆ ಉಚಿತವಾಗಿ ಬಿತ್ತನೆ ಬೀಜಗಳನ್ನು ನೀಡಲಾಗುತ್ತಿದ್ದು, ಇಲ್ಲಿಯವರೆಗೆ 12.60 ಕೋ.ರೂ. ಮೌಲ್ಯದ ಮಿನಿಕಿಟ್ ಗಳನ್ನು ವಿತರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿ.ಸಿ.ಪಾಟೀಲ್, ಎನ್.ಎಫ್.ಎಸ್.ಎಂ ಯೋಜನೆಯಡಿ 4 ಕೆಜಿ ತೊಗರಿಯನ್ನು 16 ಜಿಲ್ಲೆಗಳಿಗೆ, 4 ಕೆ.ಜಿ.ಹೆಸರು 4 ಜಿಲ್ಲೆಗಳಿಗೆ 20 ಕೆ.ಜಿಯಂತೆ 8 ಜಿಲ್ಲೆಗಳಿಗೆ ಹಾಗೂ 8 ಕೆ.ಜಿಯಂತೆ 2 ಜಿಲ್ಲೆಗಳಿಗೆ ಸೋಯಾ ಅವರೆಗಳ ಮಿನಿಕಿಟ್ ಗಳನ್ನು ವಿತರಿಸಲಾಗಿದ್ದು, ಮಿಶ್ರಬೆಳೆಗಳನ್ನು ಬೆಳೆಯಲು ಸಹ ಈ ಅಭಿಯಾನದಡಿ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

    2020-21 ನೇ ಸಾಲಿನಲ್ಲಿ 153.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗಿದ್ದು, ದೇಶದ ಸರಾಸರಿಗೆ ಹೋಲಿಸಿದಲ್ಲಿ ಶೇ.2 ರಷ್ಟು ಹಾಗೂ ರಾಜ್ಯದ ಸರಾಸರಿಗೆ ಇದನ್ನು ಹೋಲಿಸಿದರೆ ಕರ್ನಾಟಕದಲ್ಲಿ ಶೇ.10 ರಷ್ಟು ಹೆಚ್ಚಿನ ಆಹಾರ ಧಾನ್ಯಗಳ ಉತ್ಪಾದನೆಯಾಗಿದೆ. ಕೋವಿಡ್ ಸಂಕಷ್ಟದಲ್ಲಿಯೂ ಕೂಡ ಕಳೆದ ಬಾರಿ ದಾಖಲೆಯ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗಿರುವುದನ್ನು ನೋಡಿದರೆ ಕೃಷಿಯತ್ತ ಜನರ ಒಲವು ಹಾಗೂ ಕೋವಿಡ್ ಅವಧಿಯಲ್ಲಿಯೂ ಸಹ ರೈತರ ಶ್ರಮಕ್ಕೆ ಇದು ಸಾಧನೆಯಾಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

    ಬಿತ್ತನೆ ಗುರಿ:
    ಮುಂಗಾರು ಹಂಗಾಮಿಗೆ 77 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಇಲ್ಲಿಯವರೆಗೆ 11.73 ಲಕ್ಷ ಹೆಕ್ಟೇರ್ ಬಿತ್ತನೆ ಅಂದರೆ ಶೇ.15.23 ಬಿತ್ತನೆಯಾಗಿದೆ. ಈ ಬಾರಿ 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, 7.74 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯತೆಯಿದ್ದು, ಇಲ್ಲಿಯವರೆಗೆ 1.79 ಲಕ್ಷ ಕ್ವಿಂಟಾಲ್ ವಿತರಣೆಯಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ 1.15 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನುಯಿದೆ.

    ರಸಗೊಬ್ಬರ ವಿವರ:
    ಏಪ್ರಿಲ್ ನಿಂದ ಜೂನ್ ವರೆಗೆ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಹಾಗೂ ಯೂರಿಯಾ ಸೇರಿದಂತೆ ಒಟ್ಟು 12,77,815 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಇದರಲ್ಲಿ ಒಟ್ಟು 8,02.504 ಮೆ.ಟನ್ ಸರಬರಾಜು, ಒಟ್ಟು 11,54,320 ಆರಂಭಿಕ ಶಿಲ್ಕು, 7,84,075 ಮಾರಾಟವಾಗಿದ್ದು, ಇನ್ನೂ 11,72,750 ದಾಸ್ತಾನು ಉಳಿದಿದೆ. ಈ ಬಾರಿ ಹಂಗಾಮಿನಲ್ಲಿ ಇಲ್ಲಿಯವರೆಗೆ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಇಲ್ಲಿಯವರೆಗೆ ಎಲ್ಲಿಯೂ ರಸಗೊಬ್ಬರವಾಗಲೀ, ಬಿತ್ತನೆ ಬೀಜದ ಕೊರತೆ ಕಂಡುಬಂದಿಲ್ಲ. ಕಾಳಸಂತೆಯಲ್ಲಿ ಕೃತಕ ಅಭಾವ ಸೃಷ್ಟಿಸುವ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ಕೃಷಿ ವಿಚಕ್ಷಣಾ ದಳ ನಿರಂತರವಾಗಿ ಕಾಳಸಂತೆಕೋರರು ನಕಲಿ ಮಾರಾಟಗಾರರ ಮೇಲೆ ದಾಳಿ ಮಾಡುತ್ತಲೇ ಇದೆ. ಕಳೆದ ಬಾರಿ 1731.63 ಲಕ್ಷ ಮೌಲ್ಯದ ಕೃಷಿ ಪರಿಕರ ನಕಲಿಬಿತ್ತನೆ ಬೀಜ ರಸಗೊಬ್ಬರ ವಶಪಡಿಸಿಕೊಳ್ಳಲಾಗಿದ್ದು, 263 ಮೊಕ್ಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಲಾಗಿದೆ. ಈ ಬಾರಿ 2021-22 ನೇ ಸಾಲಿನಲ್ಲಿ ಏಪ್ರಿಲ್ 1 ರಿಂದ ಜೂನ್ 11 ರವರೆಗೆ 424.52 ಲಕ್ಷ ಮೌಲ್ಯದ ವಿವಿಧ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಹಾವೇರಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಪ್ತಿ ಮಾಡಲಾಗಿದೆ. ಇನ್ನೂ ಏಪ್ರಿಲ್ 1 ರಿಂದ ಜೂ 13 ರವರೆಗೆ ಶೇ.31 ಹೆಚ್ಚುವರಿ ಅಂದರೆ 169 ಮಿಮೀ ವಾಡಿಕೆ ಮಳೆಯಾಗಿದ್ದು, 222 ಮಿ.ಮೀ ವಾಸ್ತವಿಕ ಮಳೆಯಿತ್ತು.

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ:
    2021-22 ನೇ ಸಾಲಿನಲ್ಲಿ 53,35.967 ಕೇಂದ್ರ ಸರ್ಕಾರದಿಂದ ರೈತ ಫಲಾನುಭವಿಯಾಗಿದ್ದು, ಇದರಲ್ಲಿ 1067.1934 ಕೋ.ರೂ.ಆರ್ಥಿಕ ನೆರವು ನೀಡಲಾಗಿದ್ದು, 55,07,256 ಫಲಾನುಭವಿಗಳಿಗೆ ಇಲ್ಲಿಯವರೆಗೆ 7017.1520 ಕೋ.ರೂ. ಆರ್ಥಿಕ ನೆರವು ನೀಡಲಾಗಿದೆ.ರಾಜ್ಯ ಸರ್ಕಾರ 47,98.095 ರೈ ಫಲಾನುಭವಿಗಳಿಗೆ 2849.1632 ಕೋ.ರೂ. ಆರ್ಥಿಕ ನೆರವು ನೀಡಲಾಗಿದೆ. ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಈಗಾಗಲೇ ಶೇಕಡಾ 85 ರಷ್ಟು ಆಧಾರ್ ಲಿಂಕ್ ಮಾಡಿದ್ದೇವೆ. ಶೇಕಡ 15 ರಷ್ಟು ಅಕೌಂಟ್ ಮೂಲಕ ನೀಡಲಾಗುತ್ತಿದೆ. 2020-21 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 5.01 ಲಕ್ಷ ಟಾರ್ಪಲಿನ್ ಗಳನ್ನು ವಿತರಿಸಲಾಗಿದೆ. ರಾಜ್ಯದಲ್ಲಿ 690 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಿದ್ದು, 210 ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಗಳ ಸ್ಥಾಪನೆ ಮಾಡಲಾಗಿದೆ.

  • ನೈಋತ್ಯ ಮುಂಗಾರು ಚುರುಕು- ಉಡುಪಿಯಲ್ಲಿ ಗಾಳಿ ಮಳೆ

    ನೈಋತ್ಯ ಮುಂಗಾರು ಚುರುಕು- ಉಡುಪಿಯಲ್ಲಿ ಗಾಳಿ ಮಳೆ

    ಉಡುಪಿ: ಕಳೆದೊಂದು ವಾರದಿಂದ ದುರ್ಬಲಗೊಂಡಿದ್ದ ನೈಋತ್ಯ ಮುಂಗಾರು ಚುರುಕು ಪಡೆದಿದೆ. ಉಡುಪಿ ಜಿಲ್ಲೆಯಲ್ಲಿ ಮಧ್ಯರಾತ್ರಿಯಿಂದ ನಿರಂತರವಾಗಿ ಭಾರೀ ಗಾಳಿ ಮಳೆಯಾಗುತ್ತಿದೆ.

    ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು ಗುಡುಗು, ಮಿಂಚು ಸಹಿತ ಅತಿ ಭಾರೀ ಗಾಳಿ ಮಳೆಯ ಮುನ್ಸೂಚನೆ ನೀಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ಪ್ರತೀ 24 ತಾಸುಗಳಲ್ಲಿ ಜಿಲ್ಲೆಯಲ್ಲಿ 64 ರಿಂದ 115 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

    ತಾಸಿಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಕಾಪು, ಬ್ರಹ್ಮಾವರ, ಬೈಂದೂರು, ಹೆಬ್ರಿ, ಉಡುಪಿ ಎಲ್ಲಾ ತಾಲೂಕುಗಳಲ್ಲಿಯೂ ವ್ಯಾಪಕ ಮಳೆ ಸುರಿಯುತ್ತಿದೆ. ಇದರಿಂದ ಭತ್ತದ ಬೇಸಾಯ ಆರಂಭಿಸಲು ಕಾದಿದ್ದ ಕೃಷಿಕರಿಗೆ ಅನುಕೂಲವಾಗಿದೆ.

    ಉಡುಪಿ ನಗರ ಭಾಗದಲ್ಲಿ ಭಾರಿ ಮಳೆಯಾಗಿರುವುದರಿಂದ ವಾಹನ ಸಂಚಾರಕ್ಕೆ ಕೊಂಚ ವ್ಯತ್ಯಯವಾಯ್ತು. ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಜಿಲ್ಲೆಯಾದ್ಯಂತ ಮೋಡಮುಸುಕಿದ ವಾತಾವರಣವಿದೆ.

  • ಬೆಂಗಳೂರಿನಲ್ಲಿ ಧಾರಾಕಾರ ಮಳೆ – ಕರ್ನಾಟಕದಲ್ಲಿ ಮೂರು ದಿನ ಯೆಲ್ಲೋ ಅಲರ್ಟ್

    ಬೆಂಗಳೂರಿನಲ್ಲಿ ಧಾರಾಕಾರ ಮಳೆ – ಕರ್ನಾಟಕದಲ್ಲಿ ಮೂರು ದಿನ ಯೆಲ್ಲೋ ಅಲರ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣರಾಯ ತಂಪರೆದಿದ್ದಾನೆ. ಮುಂದಿನ ಮೂರು ದಿನ ವ್ಯಾಪಕ ಮಳೆಯಾಗುವ ಹಿನ್ನೆಲೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಮಲ್ಲೇಶ್ವರಂ, ವಸಂತನಗರ, ಶೇಷಾದ್ರಿಪುರಂ, ವೈಯಾಲಿಕಾವಲ್, ಕೋದಂಡ ರಾಂಪುರದಲ್ಲಿ ಭಾರೀ ಮಳೆಯಾಗಿದೆ. ನೆಹರು ಸರ್ಕಲ್ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತಿನ ರಸ್ತೆಗಳು ಕೆರೆಗಳಾಗಿ ಬದಲಾದವು. ಬೆಂಗಳೂರಿನಲ್ಲಿ ಎರಡು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ.

    ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ. ಜೂನ್ 3ರಿಂದ 5ರವರೆಗೆ ಈ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಹಿನ್ನೆಲೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ 3 ದಿನ ಭಾರಿ ಮಳೆಯಾಗುವ ಸಾಧ್ಯತೆ. ಶಿವಮೊಗ್ಗ, ಚಿತ್ರದುರ್ಗ, ಹಾಸನ, ಕೊಡಗು, ಚಾಮರಾಜನಗರ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರದಲ್ಲಿಯೂ ಮಳೆ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.

    ಹಾಸನ ನಗರ ಹಲವೆಡೆ ಸಾಧಾರಣ ಮಳೆಯಾಗಿದ್ದು, ನಿನ್ನೆ ರಾತ್ರಿ ಚನ್ನರಾಯಪಟ್ಟಣ ತಾಲ್ಲೂಕಿನ ಹಲವೆಡೆ ಉತ್ತಮ ಮಳೆಯಾಗಿತ್ತು. ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲಿ ನಿನ್ನೆ ರಾತ್ರಿಯಿಂದಲೇ ಮಳೆಯಾಗುತ್ತಿದೆ.

    ಎರಡು ದಿನಗಳು ತಡವಾದರೂ ಅಂತಿಮವಾಗಿ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಿವೆ. ಕೇರಳದ ದಕ್ಷಿಣ ಭಾಗಗಳಿಗೆ ನೈಋತ್ಯ ಮಾನ್ಸೂನ್ ಪ್ರವೇಶಿಸಿವೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ಮಾಹಿತಿ ನೀಡಿದ್ದು, ಸಾಮಾನ್ಯವಾಗಿ ಜೂನ್ 1ರಂದೇ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸುತ್ತಿದ್ದವು. ಆದರೆ ಈ ವರ್ಷ 2 ದಿನಗಳ ಕಾಲ ತಡವಾಗಿದೆ. ಕೇರಳ ಪ್ರವೇಶಿಸಿರುವ ಮಾನ್ಸೂನ್ ಮಾರುತಗಳು ಭಾರತದಲ್ಲಿ ಬಾಲ್ಕು ತಿಂಗಳ ಕಾಲ ಸುಧೀರ್ಘ ಮಳೆಗಾಲದ ಆರಂಭವನ್ನು ಸೂಚಿಸುತ್ತವೆ ಎಂದು ಹೇಳಿದ್ದಾರೆ.

    ಅರಬ್ಬಿ ಸಮುದ್ರ ದಕ್ಷಿಣ ಭಾಗ, ಲಕ್ಷದ್ವೀಪ ಪ್ರದೇಶ, ದಕ್ಷಿಣ ಕೇರಳ, ದಕ್ಷಿಣ ತಮಿಳುನಾಡು, ಕೊಮೊರಿನ್- ಮಾಲ್ಡೀವ್ಸ್ ನ ಕೆಲ ಭಾಗಗಳು ಹಾಗೂ ಬಂಗಾಳಕೊಲ್ಲಿಯ ನೈಋತ್ಯ ಭಾಗಗಳಲ್ಲಿ ಇಂದು ಮಳೆಯಾಗಲಿದೆ ಎಂದು ವಿವರಿಸಿದ್ದಾರೆ.

  • ಉಡುಪಿಯಲ್ಲಿ ಭಾರೀ ವರ್ಷಧಾರೆ- ಅಕಾಲಿಕ ಮಳೆಗೆ ಜನ ಹೈರಾಣು

    ಉಡುಪಿಯಲ್ಲಿ ಭಾರೀ ವರ್ಷಧಾರೆ- ಅಕಾಲಿಕ ಮಳೆಗೆ ಜನ ಹೈರಾಣು

    ಉಡುಪಿ: ರಾಜ್ಯದಲ್ಲಿ ಎರಡು ದಿನಗಳಿಂದ ಅಲ್ಲಲ್ಲಿ ಮಳೆಯಾದರೂ ಕರಾವಳಿ ಜಿಲ್ಲೆ ಉಡುಪಿ ಅಕಾಲಿಕ ಮಳೆಯಿಂದ ವಿನಾಯಿತಿ ಪಡೆದಿತ್ತು. ಭಾನುವಾರ ಮಾತ್ರ ಭಾರೀ ಮಳೆ ಸುರಿದು ವಾತಾವರಣದ ಚಿತ್ರಣವೇ ಬದಲಾಗಿದೆ.

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಅದರ ಪರಿಣಾಮ ಕರಾವಳಿ ಕಡಲ ತೀರ ಉಡುಪಿ ಜಿಲ್ಲೆ ಮೇಲೂ ಬಿದ್ದಿದೆ. ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ತಾಲೂಕುಗಳಲ್ಲಿ ಭಾರೀ ಮಳೆ ಬಿದ್ದಿದೆ. ಮಧ್ಯಾಹ್ನದವರೆಗೆ ಕಾರ್ಕಳ ಹೆಬ್ರಿಯಲ್ಲಿ ಭಾರೀ ಬಿಸಿಲಿತ್ತು. ಎರಡು ಗಂಟೆ ಕಳೆಯುತ್ತಿದ್ದಂತೆ ವಾತಾವರಣದ ಚಿತ್ರಣ ದಿಢೀರ್ ಬದಲಾಯ್ತು.

    ಮೋಡ ಕವಿದು ಮಳೆ ಆರಂಭವಾಯ್ತು. ಉಡುಪಿ, ಕುಂದಾಪುರ ನಗರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ನಗರ ಪ್ರದೇಶದಲ್ಲಿ ರೈನ್ ಕೋಟ್ ತಾರದ ದ್ವಿಚಕ್ರ ವಾಹನ ಸವಾರರು ಪರದಾಡಿದರು. ಉಡುಪಿ ಜಿಲ್ಲೆಯಾದ್ಯಂತ ನೂರಾರು ಧಾರ್ಮಿಕ, ಕೌಟುಂಬಿಕ ಕಾರ್ಯಕ್ರಮ ಇಂದು ನಿಗದಿಯಾಗಿತ್ತು. ದಿಢೀರ್ ಮಳೆ ಅಲ್ಲೆಲ್ಲ ಜನರಿಗೆ ಸಮಸ್ಯೆ ತಂದಿಟ್ಟಿತು. ಒಂದೆರಡು ಗಂಟೆ ಮಳೆ ಬಿದ್ದ ಕೂಡಲೇ ಉಡುಪಿಯಲ್ಲಿ ವಾತಾವರಣ ಸಂಪೂರ್ಣ ತಂಪಾಗಿದೆ.

    ಮಳೆ ಮುಂದುವರಿಯುವ ಸಾಧ್ಯತೆ ಇದೆ. ಅಡಿಕೆ, ಗೇರು ಮಾವಿನ ಬೆಳೆ ಮೇಲೆ ಅಡ್ಡ ಪರಿಣಾಮ ಬೀಳಲಿದೆ. ತರಕಾರಿ, ಆಹಾರದ ಬೆಳೆ ಈ ಭಾಗದಲ್ಲಿ ಕಡಿಮೆ ಬೆಳೆಯುವ ಕಾರಣ ದೊಡ್ಡ ಪ್ರಮಾಣದ ನಷ್ಟ ಆಗಲಿಕ್ಕಿಲ್ಲ. ಮುಂಜಾನೆ ಚಳಿ, ಮಧ್ಯಾಹ್ನ ಬಿಸಿಲು, ಸಂಜೆ ಮಳೆ ಹೀಗೆ ಒಂದೇ ದಿನ ಮೂರು ತರದ ವಾತಾವರಣ ಉಡುಪಿಯಲ್ಲಿ ಕಾಣಿಸಿಕೊಂಡಿತು.

  • ರಾಜ್ಯದಲ್ಲಿ ವರುಣನ ಅಬ್ಬರ – ಮುಂದಿನ 2 ದಿನ ಮಳೆ ಸಾಧ್ಯತೆ

    ರಾಜ್ಯದಲ್ಲಿ ವರುಣನ ಅಬ್ಬರ – ಮುಂದಿನ 2 ದಿನ ಮಳೆ ಸಾಧ್ಯತೆ

    ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆರಾಯನ ಅಬ್ಬರ ಮುಂದುವರಿದಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದ್ಲೂ ಮೊಡ ಕವಿದ ವಾತಾವರಣ ಇತ್ತು. ಸಂಜೆ ಮಳೆ ಸುರಿದು, ಕೆಲ ಕಾಲ ಜೀವನ ಅಸ್ತವ್ಯಸ್ತ ಆಗಿತ್ತು.

    ದೀಪಾವಳಿ ಸಂಭ್ರಮದಲ್ಲಿದ್ದ ಸಿಲಿಕಾನ್ ಸಿಟಿ ಮಂದಿಯ ಪಟಾಕಿ ಹೊಡೆಯೋದಕ್ಕೂ ತಣ್ಣೀರು ಎರಚಿತು. ಇನ್ನು ಸಂಜೆ ದೇವಸ್ಥಾನ, ಪಾರ್ಕ್, ಮಾಲ್ ಎಂದು ಸುತ್ತಲೂ ಹೋಗಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡುವಂತಾಗಿತ್ತು. ಮಧ್ಯಾಹ್ನದಿಂದು ನಗರದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರೋ ಮಳೆಗೆ ರಸ್ತೆ ಬದಿ ವ್ಯಾಪಾರಿಗಳು, ಹೂ-ಹಣ್ಣು ಮಾರಾಟಗಾರರು ಸುಸ್ತಾದರು.

    ರಾಜ್ಯದಲ್ಲಿ ಇನ್ನೂ ಮುಂದಿನ 2 ದಿನ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ ಆರ್ಭಟವಿರಲಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇದ್ದು, ಮಳೆಯಾಗೋ ಸಂಭವ ಇದೆ ಅಂತ ಪಬ್ಲಿಕ್ ಟಿವಿಗೆ ನೈಸರ್ಗಿಕ ವಿಕೋಪ ನಿರ್ದೇಶನಾಲಯ ಮಾಹಿತಿ ನೀಡಿದೆ.

  • ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ

    ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ

    ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಹಲವೆಡೆ ಮಳೆ ಆಗಿದೆ. ಇಂದು ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕೋಡಿ, ಕಲಬುರಗಿ, ಬಾಗಲಕೋಟೆ ಸೇರಿ ಹಲವೆಡೆ ಭಾರೀ ಮಳೆಯಾಗಿದ್ದು, ಒಟ್ಟು 9 ಮಂದಿ ಬಲಿ ಆಗಿದ್ದಾರೆ.

    ಸಂಜೆ ವೇಳೆಗೆ ಬೆಂಗಳೂರಿನ ಮಲ್ಲೇಶ್ವರಂ, ಶಾಂತಿನಗರ, ಜಯನಗರ, ಟೌನ್ ಹಾಲ್, ಮಾರ್ಕೆಟ್, ಯಶವಂತಪುರ ಸೇರಿದಂತೆ ಹಲವು ಭಾಗಗಳಲ್ಲಿ ಜೋರು ಮಳೆಯಾಗಿದೆ. ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ ಜನರು ಮಳೆಯಲ್ಲಿ ಸಿಲುಕಿ ಹೈರಾಣಾದ್ರು. ಇಂದು ಬೆಳಗ್ಗೆ ಸಹ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಸಂಜೆ ಮಳೆಗೆ ವಾಹನ ಸವಾರರು ಫ್ಲೈಓವರ್ ಕೆಳಗೆ ರಕ್ಷಣೆ ಪಡೆದಿರುವ ದೃಶ್ಯಗಳು ಬೆಂಗಳೂರಿನಲ್ಲಿ ಸಾಮಾನ್ಯವಾಗಿತ್ತು.

    ಹಾವೇರಿ ರಾಣೆಬೆನ್ನೂರಿನಲ್ಲಿ ಮತ್ತು ಬಳ್ಳಾರಿಯ ಬೈರಾಪುರದಲ್ಲಿ ಸಿಡಿಲಿಗೆ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಕೊಪ್ಪಳದ ಗೆದಗೇರಿ ತಾಂಡಾದಲ್ಲಿ, ವಿಜಯಪುರದ ಹತ್ತಳ್ಳಿಯಲ್ಲಿ, ಬೆಳಗಾವಿಯ ಅಷ್ಟಗಾದಲ್ಲಿ ತಲಾ ಒಬ್ರು ಸಿಡಿಲಿಗೆ ಬಲಿಯಾಗಿದ್ದಾರೆ. ಬೆಳಗಾವಿಯ ಚಿಕ್ಕ ಉಳ್ಳಿಗೇರಿಯಲ್ಲಿ ಮರ ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಗಣೇಶ ನಗರ ಸಂಪೂರ್ಣ ಜಲಾವೃತವಾಗಿದೆ. ಮೊಣಕಾಲೆತ್ತರ ನೀರು ನಿಂತಿದೆ. ನೂರಾರು ಮನೆಗಳಿಗೆ ನೀರು ನುಗ್ಗಿ ಜರ ಪರದಾಡಿದ್ದಾರೆ.

    ಬೆಳಗಾವಿಯ ಬೈಲಹೊಂಗಲ-ಮುನವಳ್ಳಿ, ಸವದತ್ತಿ-ಬೈಲಹೊಂಗಲ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದೆ. ಚಿಕ್ಕೋಡಿಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ. ಕೋರೇನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿದ್ದು, ಬೆಳೆ ಹಾಳಾಗಿದೆ. ಜಾತವಾರ-ಹೊಸಹಳ್ಳಿ ಬಳಿಯ ರೈಲ್ವೇ ಅಂಡರ್ ಪಾಸಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ರು. ಬಾಗಲಕೋಟೆಯ ತೇರದಾಳದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

    ಗದಗ ಜಿಲ್ಲೆಯ ಹಲವೆಡೆ ತಡರಾತ್ರಿ ಹಾಗೂ ಬೆಳಗಿನ ಜಾವ ಬಾರಿ ಮಳೆಯಾಗಿದೆ. ಜಿಲ್ಲೆಯ ಲಕ್ಷ್ಮೇಶ್ವರ ಭಾಗದಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲಾ ಜಲಾವೃತವಾಗಿವೆ. ಪಟ್ಟಣದ ಹಳೆ ಬಸ್‍ನಿಲ್ದಾಣ ಬಳಿ, ಸೋಮೇಶ್ವರ ಟೆಂಪಲ್, ಹಳೆ ಸ್ಟೇಷನ್, ದೂದಪೀರ್ ನಾನಾ ದರ್ಗಾ ಭಾಗದ ರಸ್ತೆಗಳ ತುಂಬೆಲ್ಲಾ ಮಳೆನೀರು ನದಿಗಳಂತೆ ಹರಿದಿದೆ. ಸಾರ್ವಜನಿಕರು, ವಾಹನ ಸವಾರರು ಸಾಕಷ್ಟು ಪರದಾಡಿದ್ದಾರೆ. ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಬಾರಿ ಮಳೆಯಿಂದ ಮಣ್ಣಿನ ಮನೆಗಳ ಕೆಲವು ಕುಟುಂಬಗಳು ಜಾಗರಣೆ ಮಾಡುವಂತಾಗಿತ್ತು.