Tag: ಕರ್ನಾಟಕ ಬಂದ್

  • ಯಡಿಯೂರಪ್ಪ ನನ್ನ ಹೆದರಿಸ್ಬೇಡಿ, ನೀವು ನನಗಿಂತ ವಿಧಾನಸಭೆಗೆ ಜ್ಯೂನಿಯರ್: ವಾಟಾಳ್

    ಯಡಿಯೂರಪ್ಪ ನನ್ನ ಹೆದರಿಸ್ಬೇಡಿ, ನೀವು ನನಗಿಂತ ವಿಧಾನಸಭೆಗೆ ಜ್ಯೂನಿಯರ್: ವಾಟಾಳ್

    – ಕರ್ನಾಟಕದಲ್ಲಿ ವಿರೋಧ ಪಕ್ಷವೇ ಇಲ್ಲ, ಇಲ್ಲಿ ಬಿಎಸ್‍ವೈ ಪಕ್ಷ ಅಷ್ಟೇ

    ಬೆಂಗಳೂರು: ಯಡಿಯೂರಪ್ಪ ನನ್ನನ್ನು ಹೆದರಿಸಬೇಡಿ, ನೀವು ನನಗಿಂತ ವಿಧಾನಸಭೆಗೆ ಜ್ಯೂನಿಯರ್ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

    ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಲು 50 ಕೋಟಿ ಮೀಸಲಿಟ್ಟಿರುವುದಕ್ಕೆ, ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕನ್ನಡಪರ ಹೋರಾಟಗಾರರು ಸರ್ಕಾರದ ಈ ತೀರ್ಮಾನವನ್ನು ವಿರೋಧಿಸಿ ಡಿಸೆಂಬರ್ 5ರಂದು ಕರ್ನಾಟಕ ಬಂದ್ ಮಾಡಲು ತೀರ್ಮಾನ ಮಾಡಿದ್ದು ಇಂದು ಈ ವಿಚಾರವಾಗಿ ಸಭೆ ನಡೆಯಿತು.

    ಈ ಸಭೆಯ ನಂತರ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಯಾರು ಏನ್ ಬೇಕಾದರೂ ಕಠಿಣ ಕ್ರಮಕೈಗೊಳ್ಳಲಿ. ನಾವಂತೂ ಬಂದ್ ಮಾಡೇ ಮಾಡುತ್ತೇವೆ. ಡಿಸೆಂಬರ್ 5ರಂದು ಬಂದ್ ನಡೆದೇ ನಡೆಯುತ್ತದೆ. ಮರಾಠಿ ಪ್ರಾಧಿಕಾರ ಮಾಡಿದರೆ ಯಡಿಯೂರಪ್ಪನವರ ರಾಜೀನಾಮೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಬಂದ್ ಮಾಡುತ್ತೇವೆ. ಕಠಿಣ ಕ್ರಮ ಏನ್ರೀ ಮಾಡುತ್ತೀರಾ ಯಡಿಯೂರಪ್ಪ? ನಾವು ಕರ್ನಾಟಕದ ಜನ ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಇದೇ ವೇಳೆ ವಿರೋಧ ಪಕ್ಷದ ಬಗ್ಗೆ ಮಾತನಾಡಿ, ಕರ್ನಾಟಕದಲ್ಲಿ ವಿರೋಧ ಪಕ್ಷವೇ ಇಲ್ಲ. ಇಲ್ಲಿ ಯಡಿಯೂರಪ್ಪನ ಪಕ್ಷ ಅಷ್ಟೇ. ವಿರೋಧ ಪಕ್ಷದವರು ಈ ಪ್ರಾಧಿಕಾರದ ವಿರುದ್ಧ ಮಾತಾನಾಡದೇ ಮನೆಯಲ್ಲಿ ಸೇರಿಕೊಂಡಿದ್ದಾರೆ. ಈಗ ಮರಾಠಿಯವರನ್ನು ಎದುರು ಹಾಕೊಂಡರೆ ವೋಟು ಸಿಗಲ್ಲ ಎಂದು ಕಾಂಗ್ರೆಸ್‍ಗೆ ಭಯ ಎಂದರು.

  • ಕಾಂಗ್ರೆಸ್-ಜೆಡಿಎಸ್ ಹೋರಾಟ ರೈತ ಪರವಲ್ಲ, ದಲ್ಲಾಳಿಗಳ ಪರ : ಸಿ.ಟಿ.ರವಿ

    ಕಾಂಗ್ರೆಸ್-ಜೆಡಿಎಸ್ ಹೋರಾಟ ರೈತ ಪರವಲ್ಲ, ದಲ್ಲಾಳಿಗಳ ಪರ : ಸಿ.ಟಿ.ರವಿ

    -ನಾನು ರೈತ ಚಳುವಳಿಯಿಂದ ಬಂದವನು
    -ರೈತರ ತಾಕತ್ತೇನೆಂದು ನನಗೆ ಗೊತ್ತು

    ಚಿಕ್ಕಮಗಳೂರು: ಕಾಂಗ್ರೆಸ್, ಜೆಡಿಎಸ್ ಹೋರಾಟ ರೈತರ ಪರವೆಂದು ಅನ್ನಿಸೋದಿಲ್ಲ. ಅವರದ್ದು ದಲ್ಲಾಳಿಗಳ ಪರ ಹೋರಾಟ. ಕೇರಳದಲ್ಲಿ ಎಪಿಎಂಸಿಯೇ ಇಲ್ಲ. ಇಲ್ಲಿ ಕಮ್ಯುನಿಸ್ಟ್ರು ಕೂಗಾಡ್ತಾರೆ. ಅವರ ರಾಜ್ಯವಿರುವ ತ್ರಿಪುರದಲ್ಲಿ ಎಪಿಎಂಸಿಯೇ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕರ್ನಾಟಕ ಬಂದ್ ಜನರು ತಿರಸ್ಕರಿಸಿದ್ದಾಹರೆ. ರೈತರು ನಮ್ಮ ಜತೆಯೇ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರ ಕೆಲಸ ಮಾಡುತ್ತಿದೆ. ರೈತರಿಗೆ ಹಾಕಿದ್ದ ಬೇಡಿಯನ್ನ ಕಳಚುವ ಕೆಲಸ ಎಪಿಎಂಸಿ ಕಾಯ್ದೆ ಮೂಲಕ ಆಗಿದೆ. ರೈತ ದೇಶದಲ್ಲಿ ಎಲ್ಲಿ ಬೇಕಾದ್ರು ತಾವು ಬೆಳೆದ ಬೆಳೆಯನ್ನ ಮಾರಬಹುದು ಎಂಬ ಅನುಮತಿ ಕೊಟ್ಟಿದೆ. ಮೊದಲು ಎಪಿಎಂಸಿಯಲ್ಲೇ ಮಾರಬೇಕು ಎಂದು ಮಾಡಿದ್ದರು. ಈಗ ದೇಶದಲ್ಲಿ ಎಲ್ಲಿ ಬೇಕಾದರೂ ಮಾರಬಹುದು. ಎಲ್ಲಿ ಬೆಲೆ ಜಾಸ್ತಿ ಇರುತ್ತೋ ಅಲ್ಲಿಗೆ ಹೋಗಿ ಮಾರುತ್ತಾರೆ. ಅದರಿಂದ ರೈತರ ಶೋಷಣೆ ತಪ್ಪಿದೆ. ಸ್ಫರ್ದೆ ಬರುತ್ತೆ ಜೊತೆಗೆ ರೈತ ಬೆಳೆದ ಬೆಳೆಗಳಿಗೆ ಹೆಚ್ಚಿನ ಬೆಲೆ ಬರುತ್ತೆ ಎಂದರು. ಊರಲ್ಲಿ ಒಬ್ಬನೇ ಕೊಳ್ಳುವವನಿದ್ದರೆ ಅವನು ಹೇಳಿದ್ದೇ ದರ. ಆದರೆ 10 ಜನ ಬಂದರೆ ಸ್ಪರ್ಧೆ ಬರುತ್ತೆ. ಲಾಭ ಬರುತ್ತೆ. ರೈತ ವಿಚಾರಿಸುತ್ತಾನೆ. ಯಾರಿಗೆ ಮಾರಿದರೆ ಲಾಭ ಬರುತ್ತೋ, ಯಾರು ಜಾಸ್ತಿ ರೇಟ್ ಕೊಡ್ತಾರೋ ಅವನಿಗೆ ಮಾರುತ್ತಾರೆ ಎಂದಿದ್ದಾರೆ.

    ಎಲ್ಲದಕ್ಕೂ ವಿರೋಧ ಮಾಡಬೇಕು. ಬಿಜೆಪಿ-ಮೋದಿ ವಿರೋಧಿಸಬೇಕು. ಅದಕ್ಕೆ ಮುಖವಾಡ ತೊಟ್ಟಿಕೊಂಡು ಈ ಕೆಲಸ ಮಾಡುತ್ತಾರೆ ಅಷ್ಟೆ. ಅವರು ಸಾರ್ವಜನಿಕ ಚರ್ಚೆಗೆ ಬರಲಿ ಎಂದಿದ್ದಾರೆ. ಈಗಿರೋ ಎಪಿಎಂಸಿ ಕಾಯ್ದೆಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನ ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂದು ಇದೆ. ಬೆಳೆದಿರೋನು ರೈತ, ಬೆವರು ಸುರಿಸಿರೋನು ರೈತ. ಅವನಿಗೆ ಇಷ್ಟ ಬಂದೆಡೆ ಮಾರಾಟ ಮಾಡುತ್ತಾನೆ. ತಿದ್ದುಪಡಿ ಮಾಡಿರೋ ಕಾಯ್ದೆ ದೇಶದಲ್ಲಿ ಎಲ್ಲಿ ಬೇಕಾದ್ರು ಮಾರಬಹುದು. ಈ ಕಾಯ್ದೆ ರೈತನಿಗೆ ಸ್ವತಂತ್ರ ಕೊಟ್ಟಿರೋದು. ಅವನಿಗೆ ಸಹಾಯ ಮಾಡಿರೋ ಕಾಯ್ದೆ ಇದು ಎಂದಿದ್ದಾರೆ. ಮುಂಚೆ ಮೋಸ ಮಾಡಿರೋ ಕಾಯ್ದೆ ಇತ್ತು. ದಲ್ಲಾಳಿಗಳು ಬಲಿತಿದ್ರು. ಈಗ ರೈತ ಬಲಿಯುತ್ತಾನೆ. ತಾತ್ಕಾಲಿಕವಾಗಿ ಸುಳ್ಳು ಹೇಳಿಕೊಂಡು ತಿರುಗಬಹುದು. ಮುಂದೆ ಹೋಗ್ತಾ-ಹೋಗ್ತಾ ಸತ್ಯ ಏನು ಅಂತ ಗೊತ್ತಾಗುತ್ತಲ್ಲ ಎಂದರು. ನಾವು ಜನಜಾಗೃತಿ ಮಾಡ್ತೀವಿ. 90 ಪರ್ಸೆಂಟ್ ರೈತರು ನಮ್ಮ ಜೊತೆ ಇದ್ದಾರೆ. ಅದಕ್ಕೆ ಯಾರೂ ರೈತರು ಬೀದಿಗೆ ಇಳಿದಿಲ್ಲ.

    ನಾನು ರೈತ ಚಳುವಳಿಯಿಂದ ಬಂದವನು : ನಾನು ರೈತ ಚಳುವಳಿಯಿಂದ 1983, 84, 85ರವರೆಗೂ ರೈತ ಚಳುವಳಿಯಲ್ಲಿದ್ದು, ಅಲ್ಲಿಂದ ರಾಜಕೀಯ ಜೀವನ ಪ್ರಾರಂಭ ಮಾಡಿದೋನು. ರೈತರ ತಾಕತ್ತೇನು ಅಂತ ನನಗೆ ಗೊತ್ತು. ರೈತರು ಬೀದಿಗೆ ಇಳಿದರೆ ಯಾವ ಸರ್ಕಾರನೂ ಉಳಿಯಲ್ಲ. ಇವರ ಜೊತೆ ಯಾರು ಬೀದಿಗೆ ಇಳಿದವರು. ದಿನಾ ಬಿಜೆಪಿ ವಿರೋಧಿಸುವ ಒಂದು ಸೆಟ್ ಜನ ಮಾತ್ರ ಇಂದು ಬೀದಿಗೆ ಇಳಿದವರು. ಅವರು ದಿನಾ ಬೈಯೋರು. ಚೀನಾ-ಭಾರತ ಯುದ್ಧವಾದರೆ ಭಾರತವನ್ನ ಬೈಯೋರು. ಭಾರತ-ಪಾಕಿಸ್ತಾನ ಜಗಳ ಮಾಡಿದರೆ ಭಾರತವನ್ನೇ ಬೈಯೋರು. ಈ ಜನ ಮಾತ್ರ ಇಂದು ಬೀದಿಗೆ ಇಳಿದವರು. ರೈತರು ನಮ್ಮ ಜೊತೆಯೇ ಇದ್ದಾರೆ ಎಂದಿದ್ದಾರೆ.

  • ಬಿಜೆಪಿ ಸರ್ಕಾರಕ್ಕೆ ಭವಿಷ್ಯವಿಲ್ಲ, ಆರು ತಿಂಗಳಲ್ಲಿ ಪತನವಾಗಲಿದೆ: ಎಂಎಲ್‍ಸಿ ಗೋಪಾಲಸ್ವಾಮಿ

    ಬಿಜೆಪಿ ಸರ್ಕಾರಕ್ಕೆ ಭವಿಷ್ಯವಿಲ್ಲ, ಆರು ತಿಂಗಳಲ್ಲಿ ಪತನವಾಗಲಿದೆ: ಎಂಎಲ್‍ಸಿ ಗೋಪಾಲಸ್ವಾಮಿ

    ಹಾಸನ: ರೈತರು, ಕಾರ್ಮಿಕರ ವಿರೋಧ ಕಟ್ಟಿಕೊಂಡರೆ ಈ ಸರ್ಕಾರ ಉಳಿಯಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಕಿಡಿಕಾರಿದ್ದಾರೆ.

    ರೈತ ವಿರೋಧಿ ನಡೆ ಖಂಡಿಸಿ ಸರ್ಕಾರದ ವಿರುದ್ಧ ಹಾಸನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ರೈತ ವಿರೋಧಿ ಕಾಯ್ದೆ ವಿರುದ್ಧ ನಡೆಸುತ್ತಿರುವ ಬಂದ್‍ಗೆ ನಮ್ಮ ಬೆಂಬಲವಿದೆ. ಈಗಾಗಲೇ ಯಡಿಯೂರಪ್ಪ ಅವರನ್ನು ಕೆಳಗಿಸಲು ಅವರ ಪಕ್ಷದಲ್ಲೇ ಒಂದು ಸಂಘಟನೆ ಇದ್ದು, ಸರ್ಕಾರ ಬೀಳಿಸಲು ಬಿಜೆಪಿಯವರೇ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ನಮ್ಮ ಪಕ್ಷದಿಂದ ಬಿಜೆಪಿಗೆ ಹೋದವರು ಈ ಕಾಯ್ದೆ ವಿರೋಧಿಸಿ. ದಯವಿಟ್ಟು ನಮ್ಮ ಪಕ್ಷಕ್ಕೆ ಮರಳಿ ಬನ್ನಿ. ಈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಭವಿಷ್ಯವಿಲ್ಲ. ಇನ್ನು ಕೇವಲ ಆರು ತಿಂಗಳಲ್ಲಿ ಈ ಸರ್ಕಾರ ಪತನವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ಮಸೂದೆ ಖಂಡಿಸಿ ನಡೆಸುತ್ತಿರುವ ಬಂದ್‍ಗೆ ಹಾಸನದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಲಾಗುತ್ತಿದೆ.

    ಕೃಷಿ ಮಸೂದೆ ಖಂಡಿಸಿ ರಾಜ್ಯಾದ್ಯಂತ ಕರೆ ನೀಡಿರುವ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರೆ, ಇನ್ನೂ ಹಲವೆಡೆ ಅಂಗಡಿ ಮುಂಗಟ್ಟಿಗಳನ್ನು ತೆರೆಯಲಾಗಿದ್ದು, ಬಸ್ ಸಂಚಾರ ಸಹ ಎಂದಿನಂತೆ ಇದೆ. ಹೀಗೆ ಬಂದ್‍ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ ಸಂಘಟನೆ ಕಾರ್ಯಕರ್ತರು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದ್ದಾರೆ.

  • ರೈತ ವಿರೋಧಿ ಮಸೂದೆ ವಿರುದ್ಧ ಜೆಡಿಎಸ್ ಶಾಸಕ ಏಕಾಂಗಿ ಪ್ರತಿಭಟನೆ

    ರೈತ ವಿರೋಧಿ ಮಸೂದೆ ವಿರುದ್ಧ ಜೆಡಿಎಸ್ ಶಾಸಕ ಏಕಾಂಗಿ ಪ್ರತಿಭಟನೆ

    ಹಾಸನ: ಸದಾ ಒಂದಿಲ್ಲೊಂದು ವಿಶೇಷ ಪ್ರತಿಭಟನೆಯಲ್ಲಿ ಭಾಗಿಯಾಗುವ ಶಾಸಕರಾದ ಎ.ಟಿ.ರಾಮಸ್ವಾಮಿ ಇಂದು ಅರಕಲಗೂಡು ತಾಲೂಕು ಕಚೇರಿ ಮುಂದೆ ರಾಜ್ಯ ಸರ್ಕಾರದ ಕಾಯ್ದೆ ಜಾರಿ ವಿರುದ್ಧ ಏಕಾಂಗಿ ಪ್ರತಿಭಟನೆ ನಡೆಸಿದರು.

    ಅರಕಲಗೂಡು ತಾಲೂಕು ಕಚೇರಿ ಎದುರು ರೈತರ, ಬಡವರ ವಿರೋಧಿ ಕಾನೂನುಗಳಿಗೆ ಧಿಕ್ಕಾರ ಎಂಬ ನಾಮಫಲಕ ಹಿಡಿದು, ಸರ್ಕಾರದ ರೈತ ವಿರೋಧಿ ನಡೆ ವಿರುದ್ಧ ಆಕ್ರೋಶ ಹೊರಹಾಕಿದರು.

    ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದ ಶಾಸಕರು ತಮ್ಮದೇ ಆದ ರೀತಿಯಲ್ಲಿ ಬಂದ್‍ಗೆ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು. ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಹೆಸರನ್ನು ಹೊಂದಿರುವ ರಾಮಸ್ವಾಮಿಯವರು ಜೆಡಿಎಸ್ ಪಕ್ಷದ ನಿಷ್ಠಾವಂತ ರಾಜಕೀಯ ಮುಖಂಡರಲ್ಲಿ ಒಬ್ಬರು. ನೇರ ಮಾತುಗಾರಿಕೆಯಿಂದ ಹೆಸರಾಗಿರುವ ಅವರು ಏಕಾಂಗಿಯಾಗಿ ಪ್ರತಿಭಟನೆ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.

    ಇತ್ತೀಚೆಗೆ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ವಿರುದ್ಧವೇ ಮಾತನಾಡಿದ್ದ ಶಾಸಕರು ಇಂದು ಏಕಾಂಗಿ ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ ಎನ್ನಬಹುದು. ಇದನ್ನೂ ಓದಿ: ರೇವಣ್ಣ ಸರ್ವಾಧಿಕಾರಿ ಮನೋಭಾವ ಬಿಡಲೇಬೇಕು – ಜೆಡಿಎಸ್ ಶಾಸಕ ಎಟಿ.ರಾಮಸ್ವಾಮಿ

  • ಕಾಂಗ್ರೆಸ್ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ: ಬಿ.ಸಿ.ಪಾಟೀಲ್

    ಕಾಂಗ್ರೆಸ್ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ: ಬಿ.ಸಿ.ಪಾಟೀಲ್

    -ಕರ್ನಾಟಕ ಬಂದ್ ದುರದೃಷ್ಟಕರ

    ಹಾವೇರಿ: ಕರ್ನಾಟಕ ಬಂದ್ ಮಾಡಿರುವುದು ದುರದೃಷ್ಟಕರವಾಗಿದ್ದು, ಇಂದಿನ ಬಂದ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ಜಿಲ್ಲೆಯ ಹಿರೇಕೆರೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರೈತ ಮುಖಂಡರ ಸಭೆ ಮಾಡಿ ತಿದ್ದುಪಡಿಯಿಂದ ರೈತರಿಗೆ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದ್ದರು. ಪ್ರಧಾನಿ ಮೋದಿ ಅವರು ಕೂಡ ಈ ಬಗ್ಗೆ ಮಾಹಿತಿ ಹಂಚಿಕೊಂಡು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಆದರೂ ಬಂದ್ ಮಾಡುತ್ತಿರುವುದು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟರು.

    ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗಳಿಂದ ಆಗುವ ಲಾಭಗಳ ಬಗ್ಗೆ ಪ್ರಧಾನಿಗಳೇ ಹೇಳಿದ್ದಾರೆ. ಅನವಶ್ಯಕವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬಂದ್‍ಗೆ ಬೆಂಬಲ ಕೊಟ್ಟಿದ್ದಾರೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆಯನ್ನು ತೆಗಿಯಬೇಕು ಎಂದು ಹೇಳಿದ್ದರು. ಭೂ ಸುಧಾರಣೆ ಕಾಯ್ದೆಯ 79 ಮತ್ತು 80 ಕಲಂ ಕೈಬಿಡಬೇಕು ಎಂದು ಈ ಹಿಂದೆ ಪ್ರಿಯಾಂಕ್ ಖರ್ಗೆ, ದೇಶಪಾಂಡೆ, ಡಿಕೆ ಶಿವಕುಮಾರ್ ಅವರೇ ವಿಧಾನಸಭೆಯಲ್ಲೇ ಹೇಳಿದ್ದರು. ಆದರೆ ಈಗ ಬಂದ್‍ಗೆ ಬೆಂಬಲ ಸೂಚಿಸಿರುವುದು ಅವರ ದ್ವಿಮುಖ ನೀತಿ ಎದ್ದುಕಾಣುತ್ತದೆ ಎಂದು ಟೀಕಿಸಿದರು.

    ಕಾಂಗ್ರೆಸ್ ಪಕ್ಷದ ನಾಯಕರು ಮಾತನಾಡಿರುವ ದಾಖಲೆಗಳು ವಿಧಾನಸಭೆಯ ರೆಕಾರ್ಡ್ ನಲ್ಲಿದೆ. ಕಾಂಗ್ರೆಸ್ ನಾಯಕರದ್ದು ದ್ವಿಮುಖ ನೀತಿ. ಹೇಳುವುದು ಒಂದು, ಮಾಡುವುದು ಮತ್ತೊಂದು. ಕಾಂಗ್ರೆಸ್ ಪಕ್ಷ ಇಂದು ಸಂಪೂರ್ಣ ಅಸ್ತಿತ್ವ ಕಳೆದುಕೊಂಡಿದ್ದು, ತಮ್ಮ ಅಸ್ತಿತ್ವದ ಉಳಿವಿಗಾಗಿ ಕಾಂಗ್ರೆಸ್ ನಾಯಕರು ಬಂದ್‍ಗೆ ಬೆಂಬಲ ನೀಡಿದ್ದಾರೆ. ಬಂದ್ ಬೇಡ ಎಂದು ಸಿಎಂ ರೈತ ಬಾಂಧವರಲ್ಲಿ ಮನವಿ ಮಾಡಿದ್ದರು. ಆದರೂ ರೈತರು ಬಂದ್ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದರು.

  • ರಾಜ್ಯ ಬಂದ್‍ಗೆ ರಾಯಚೂರಿನಲ್ಲಿ ಸಂಪೂರ್ಣ ಬೆಂಬಲ- ಬಿಸಿಲನಾಡು ಸ್ತಬ್ಧ

    ರಾಜ್ಯ ಬಂದ್‍ಗೆ ರಾಯಚೂರಿನಲ್ಲಿ ಸಂಪೂರ್ಣ ಬೆಂಬಲ- ಬಿಸಿಲನಾಡು ಸ್ತಬ್ಧ

    ರಾಯಚೂರು: ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗೆ ವಿರೋಧಿಸಿ ರೈತ, ಕಾರ್ಮಿಕ ಸಂಘಟನೆಗಳಿಂದ ಕರೆ ನೀಡಲಾದ ಕರ್ನಾಟಕ ಬಂದ್‍ಗೆ ರಾಯಚೂರಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಅಂಗಡಿ ಮುಗ್ಗಟ್ಟು, ತರಕಾರಿ ಮಾರಾಟ, ಹೋಟೆಲ್ ವ್ಯಾಪಾರ, ಸಾರಿಗೆ ಬಸ್ ಸಂಚಾರ, ಎಂಪಿಎಂಸಿ ಎಲ್ಲವೂ ಸ್ಥಬ್ಧವಾಗಿತ್ತು. ರೈತ ಹೋರಾಟಕ್ಕೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಸಾಥ್ ನೀಡಿದರು.

    ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಯ್ದೆ ಹಿಂಪಡೆಯಲು ಆಗ್ರಹಿಸಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆ ಕಾರ್ಯಕರ್ತರು, ಕಾಂಗ್ರೆಸ್, ಜೆಡಿ ಎಸ್ ಮುಖಂಡರು ಭಾಗವಹಿಸಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

    ರಾಯಚೂರು ನಗರ ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಲ್ಲೂ ಬಂದ್ ಜೋರಾಗಿತ್ತು. ಪ್ರತಿಭಟನಾ ಮೆರವಣಿಗೆ ಹಾಗೂ ನಿರಂತರ ಹೋರಾಟಗಳು ನಡೆದವು. ಕೇಂದ್ರ ಸರ್ಕಾರ ರೈತನಿಗೆ ಅನ್ನದಾತ ಅಂತ ಹೇಳುತ್ತಲೇ ಬೆನ್ನಿಗೆ ಚೂರಿ ಹಾಕುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಾದ್ಯಂತ ಬಂದ್ ಯಶಸ್ವಿಯಾಗಿದ್ದು ಎಲ್ಲೂ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲಾಯಿತು.

  • 6 ತಿಂಗಳಲ್ಲಿ ರೈತರಿಗೆ ಹೇಗೆ ಒಳ್ಳೆದಾಗುತ್ತೆ ನೋಡಿ – ವಿರೋಧಿಗಳಿಗೆ ಸಿಎಂ ಸವಾಲು

    6 ತಿಂಗಳಲ್ಲಿ ರೈತರಿಗೆ ಹೇಗೆ ಒಳ್ಳೆದಾಗುತ್ತೆ ನೋಡಿ – ವಿರೋಧಿಗಳಿಗೆ ಸಿಎಂ ಸವಾಲು

    – ರೈತ ಈಗ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು
    – ಮಧ್ಯವರ್ತಿಗಳ ಹಾವಳಿ ಕೈತಪ್ಪಲಿದೆ
    – ಎಪಿಎಂಸಿಯಲ್ಲೂ ರೈತರು ಮಾರಾಟ ಮಾಡಬಹುದು

    ಬೆಂಗಳೂರು: ಆರು ತಿಂಗಳಲ್ಲಿ ರೈತರಿಗೆ ಯಾವ ರೀತಿ ಒಳ್ಳೆಯದು ಆಗುತ್ತದೆ ಎಂಬುದನ್ನು ನೋಡಿ ಎಂದು ಸಿಎಂ ಯಡಿಯೂರಪ್ಪ ಮಸೂಧೆ ವಿರೋಧಿಸಿ ಪ್ರತಿಭಟನೆ ನಡೆಸಿದವರಿಗೆ ಸವಾಲು ಎಸೆದಿದ್ದಾರೆ.

    ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ನಿರ್ಣಯವಾಗಿದ್ದು. ಎಪಿಎಂಸಿಯ ಬಾಗಿಲು ಮುಚ್ಚಿಲ್ಲ. ರೈತರು ಈಗ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. 6 ತಿಂಗಳ ಕಾದು ನೋಡಿ. ರೈತರಿಗೆ ಇದರಿಂದ ಎಷ್ಟು ಅನುಕೂಲವಾಗಲಿದೆ ಎಂಬುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಂದ್ ಎಫೆಕ್ಟ್ – ಗ್ರಾಹಕರಿಗಾಗಿ ಕಾದು ಸುಸ್ತಾಗಿ ನಿದ್ರೆಗೆ ಜಾರಿದ ವ್ಯಾಪಾರಸ್ಥರು

    ನಾನು ರೈತನ ಮಗ, ಅನ್ನ ಕೊಡುವ ರೈತನಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕೂರುವವನು ಅಲ್ಲ. ವಿಧಾನಸಭೆಯಲ್ಲಿ ಚರ್ಚೆ ಮಾಡಲಾಗಿದೆ. ನನ್ನ ಬೆಳೆ, ನನ್ನ ಹಕ್ಕು. ರೈತ ಈಗ ತಾನು ಬೆಳೆಯುವ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಅನಾವಶ್ಯಕವಾಗಿ ಬೇರೆ ರೈತರನ್ನು ಗೊಂದಲ ಮಾಡಬೇಡಿ ಎಂದು ರೈತರ ಜೊತೆ ಮನವಿ ಮಾಡುತ್ತೇನೆ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ಹಿತಕ್ಕೆ ಧಕ್ಕೆ ಆಗುವ ಕೆಲಸ ಈ ಯಡಿಯೂರಪ್ಪ ಮಾಡುವುದಿಲ್ಲ ಎಂದು ಹೇಳಿದರು. ಎಪಿಎಂಸಿ ಪೂರ್ಣ ಬಾಗಿಲು ಮುಚ್ಚಿಲ್ಲ. ಎಪಿಎಂಸಿಯಲ್ಲೂ ರೈತರು ಮಾರಾಟ ಮಾಡಬಹುದು. ಈ ಕಾಯ್ದೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು ಎಂದು ಸಮರ್ಥಿಸಿಕೊಂಡರು.

    ಕಾಯ್ದೆಯಿಂದ ಶೇ.70ರಿಂದ 80ರಷ್ಟು ಅನುಕೂಲ ಆಗಲಿದೆ. ನಾನು ಶೀಘ್ರದಲ್ಲೇ ರಾಜ್ಯ ಪ್ರವಾಸ ಮಾಡುತ್ತೇನೆ. ಆಗ ರೈತರು ಎಷ್ಟು ಮೆಚ್ಚುಗೆ ವ್ಯಕ್ತಪಡಿಸ್ತಾರೆ ಎಂಬುದು ಗೊತ್ತಾಗುತ್ತದೆ. ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿಯೇ ಈ ಕಾಯ್ದೆ ತರಲಾಗಿದೆ ಎಂದರು.

    ಕಾಂಗ್ರೆಸ್ ನಾಯಕರ ಕಥೆ ಏನು ಅಂತಾ ಗೊತ್ತಿದೆ. ಈ ಹಿಂದೆ ಕಾಂಗ್ರೆಸ್‍ನವರು ಕಾಯ್ದೆ ಜಾರಿ ಬಗ್ಗೆ ಏನೆಲ್ಲಾ ಮಾಡಿದ್ದರು ಎಂಬುದು ಗೊತ್ತಿದೆ. ಹಿಂದೆ ಇದನ್ನು ಜಾರಿ ಮಾಡಲು ಕಾಂಗ್ರೆಸ್ ಮುಂದಾಗಿದ್ದರು. ಈಗ ಅದನ್ನು ಪ್ರಾಮಾಣೀಕವಾಗಿ ಜಾರಿ ಮಾಡಲು ಮುಂದಾಗಿದ್ದೇವೆ. ಈ ಕಾಯ್ದೆಯಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲ ಆಗಲಿದೆ ಎಂದು ಸಮರ್ಥಿಸಿಕೊಂಡರು.

  • ಬಂದ್ ಎಫೆಕ್ಟ್ – ಗ್ರಾಹಕರಿಗಾಗಿ ಕಾದು ಸುಸ್ತಾಗಿ ನಿದ್ರೆಗೆ ಜಾರಿದ ವ್ಯಾಪಾರಸ್ಥರು

    ಬಂದ್ ಎಫೆಕ್ಟ್ – ಗ್ರಾಹಕರಿಗಾಗಿ ಕಾದು ಸುಸ್ತಾಗಿ ನಿದ್ರೆಗೆ ಜಾರಿದ ವ್ಯಾಪಾರಸ್ಥರು

    ಬೆಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ರೈತರು ಬೀದಿಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಲ್ಲದೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

    ಹೌದು. ಬಂದ್ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಗ್ರಾಹಕರಿಗಾಗಿ ಕಾದು ಕಾದು ಸುಸ್ತಾಗಿ ಕುಳಿತಲ್ಲಿಯೇ ನಿದ್ದೆಗೆ ಜಾರಿರುವ ಪ್ರಸಂಗ ನಡೆದಿದೆ.

    ವಿವಿಧ ಸಂಘಟನೆಗಳು ಇಂದು ಬಂದ್‍ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ನಗರದ ಪ್ರತಿಷ್ಠಿತ ಶ್ರೀ ಕೃಷ್ಣ ರಾಜೇಂದ್ರ ಮಾರುಕಟ್ಟೆ(ಸಿಟಿ) ಗಿರಾಕಿಗಳಿಲ್ಲದೆ ಭಣಗುಡುತ್ತಿತ್ತು. ಹೀಗಾಗಿ ಬೀದಿ ಬದಿಯ ವ್ಯಾಪಾರಿಗಳು ಗಿರಾಕಿಗಳನ್ನು ಕಾದು ಸುಸ್ತಾಗಿ ತರಕಾರಿ ಇದ್ದ ಗೋಣಿಚೀಲದ ಮೇಲೆ ತಲೆಯಿಟ್ಟು ನಿದ್ದೆ ಮಾಡಿದ್ದಾರೆ.

    ಇತ್ತ ಮೆಜೆಸ್ಟಿಕ್‍ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ವಾಟಾಳ್ ನಾಗರಾಜ್ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದು, ಮೆಜೆಸ್ಟಿಕ್ ಮುಂಭಾಗ ಪೇಟ ತೊಟ್ಟು ಕತ್ತೆಯ ಮೇಲೆ ಮೆರವಣಿಗೆ ಬರುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೇ ವಾಟಾಳ್ ಮಂಗಳವಾದ್ಯಗಳ ದೊಡ್ಡ ತಂಡದೊಂದಿಗೆ ಆಗಮಿಸಿದ್ದರು. ಇವರ ಜೊತೆಗೆ ಕನ್ನಡಪರ ಹೋರಾಟಗಾರರು ಭಾಗಿಯಾಗಿದ್ದಾರೆ.

    ಮಂಗಳವಾದ್ಯಗಳ ಮಧ್ಯೆ ಕತ್ತೆಯ ಮೇಲೆ ಕುಳಿತುಕೊಂಡು ವಾಟಾಳ್ ನಾಗರಾಜ್ ಇಡೀ ಮೆಜೆಸ್ಟಿಕ್ ರೌಂಡ್ಸ್ ಹಾಕಿದ್ದಾರೆ. ಇದೇ ವೇಳೆ ಮಾತನಾಡಿದ ವಾಟಾಳ್, ಇದು ಒಂದು ಅಪರೂಪದ ಚಳುವಳಿ. ವಿಶ್ವದಲ್ಲೇ ಇಂತಹ ಚಳುವಳಿ ನಡೆದಿಲ್ಲ. ಕತ್ತೆಯ ಮೇಲೆ ಕುಳಿತುಕೊಂಡು ಮೆರವಣಿಗೆ ಮಾಡುವ ಮೂಲಕ ರಾಜ್ಯ ಸರ್ಕಾರದ ನೀತಿಯನ್ನ ವಿರೋಧಿಸುತ್ತಿದ್ದೇವೆ. ಇಂತಹ ಪ್ರತಿಭಟನೆ ನೂರು ವರ್ಷಗಳಾದರೂ ಬರುವುದಿಲ್ಲ. ನಾವೆಲ್ಲರೂ ಪ್ರಾಮಾಣಿಕ ಕನ್ನಡ ಒಕ್ಕೂಟದ ಮುಖಂಡರು ಬಹಳ ನಿರಂತರವಾಗಿ ಹೋರಾಟ ಮಾಡಿದ್ದೇವೆ. ರೈತರಿಗಾಗಿ ನಾವು 50 ವರ್ಷಗಳಿಂದ ಹೋರಾಟ ಮಾಡಿದ್ದೇವೆ. ಇನ್ಮುಂದೆ ಮುಂದೆಯೂ ನಮ್ಮ ಉಸಿರುವ ಇರುವವರೆಗೂ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

  • ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಅಧಿಕಾರಿ ಕಾಲಿಗೆ ಬಿದ್ದ ರೈತ

    ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಅಧಿಕಾರಿ ಕಾಲಿಗೆ ಬಿದ್ದ ರೈತ

    ಬೆಳಗಾವಿ: ರೈತ ಸಂಘಟನೆಗಳಿಂದ ಇಂದು ಕರ್ನಾಟಕ ಬಂದ್‍ಗೆ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ರೈತನೊಬ್ಬ ಬಸ್‍ಗಳ ಸಂಚಾರ ಸ್ಥಗಿತಗೊಳಿಸುವಂತೆ ಅಧಿಕಾರಿ ಕಾಲಿಗೆ ಬಿದ್ದ ಪ್ರಸಂಗ ನಡೆದಿದೆ.

    ಈ ಘಟನೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ರೈತ ಮುಖಂಡ ಚೂನಪ್ಪ ಅವರು NWKSRTC ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಕಾಲಿಗೆ ಬಿದ್ದಿದ್ದಾರೆ.

    ಬೆಳಗ್ಗೆ ಬಸ್ ನಿಲ್ದಾಣದ ಎದುರು ರೈತಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪ್ರತಿಭಟನಾಕಾರರು ತೆರಳಿದ ಮೇಲೆ ಪೊಲೀಸ್ ಭದ್ರತೆಯಲ್ಲಿ ಬಸ್ಸುಗಳ ಸಂಚಾರ ಆರಂಭಿಸಲಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರೈತ ಮುಖಂಡ ಚೂನಪ್ಪ, ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಎನ್‍ಡಬ್ಯುಕೆಎಸ್‍ಆರ್‍ಟಿಸಿ ಡಿಸಿ ಕಾಲಿಗೆ ಬಿದ್ದು ಮನವಿ ಮಾಡಿಕೊಂಡಿದ್ದಾರೆ.

    ರೈತ ವಿರೋಧಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ಬಂದ್ ವೇಳೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಟೈಯರ್‍ಗೆ ಬೆಂಕಿ ಹಚ್ಚಲು ಯತ್ನಿಸಲಾಗಿತ್ತು. ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕನ್ನಡಪರ ಸಂಘಟನೆಗಳ ಧರಣಿ ವೇಳೆ ಟೈಯರ್ ಕಿತ್ತುಕೊಳ್ಳಲು ಹೋಗಿ ಪೊಲೀಸೊಬ್ಬರು ನೆಲಕ್ಕೆ ಬಿದ್ದಿದ್ದಾರೆ. ಕಡೆಗೂ ಪೊಲೀಸರು ಹರಸಾಹಸ ಮಾಡಿ ಟೈಯರ್ ಕಿತ್ತುಕೊಂಡರು.

  • ನಾಳೆ ಹೋಟೆಲ್ ಓಪನ್ ಮಾಡಿದ್ರೆ, ಊಟ ತಿಂದು ಬಿಲ್ ಕೊಡ್ಬೇಡಿ: ವಾಟಾಳ್ ನಾಗರಾಜ್

    ನಾಳೆ ಹೋಟೆಲ್ ಓಪನ್ ಮಾಡಿದ್ರೆ, ಊಟ ತಿಂದು ಬಿಲ್ ಕೊಡ್ಬೇಡಿ: ವಾಟಾಳ್ ನಾಗರಾಜ್

    ಹಾಸನ: ನಾಳೆ ಹೋಟೆಲ್ ಓಪನ್ ಮಾಡಿದರೆ, ಊಟ ತಿಂದು ಬಿಲ್ ಕೊಡಬೇಡಿ ಎಂದು ಹೋರಾಟಗಾರರಿಗೆ ವಾಟಾಳ್ ನಾಗರಾಜ್ ಹೇಳಿದ್ದಾರೆ.

    ಇಂದು ಹಾಸನದಲ್ಲಿ ಮಾತನಾಡಿದ ಅವರು, ಸುಮಾರು 3 ಸಾವಿರ ಕನ್ನಡಪರ ಸಂಘಟನೆಗಳು ಮತ್ತು ರೈತರು ಒಂದಾಗಿ ಬಂದ್‍ಗೆ ಬೆಂಬಲವನ್ನು ಕೊಟ್ಟಿದೆ. ಕನ್ನಡ ಒಕ್ಕೂಟದ ಮುಖಂಡರುಗಳಾದ ಸಾ.ರಾ. ಗೋವಿಂದ್, ಶಿವರಾಮೇಗೌಡ, ನಾರಾಯಣಗೌಡ, ಪ್ರವೀಣ್ ಶೆಟ್ಟಿ, ಕೆ.ಆರ್ ಕುಮಾರ್, ಮಂಜುನಾಥ್ ದೇವ್, ಗಿರೀಶ್ ಗೌಡ ಸೇರಿದಂತೆ ಅನೇಕ ಸಂಘಟನೆಗಳು ಬಂದ್‍ಗೆ ಕೈಜೋಡಿಸಿದೆ ಎಂದು ತಿಳಿಸಿದರು.

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಿದ್ದು ರೈತರ ಹೆಸರಿನಲ್ಲಿ ಹೊರತು ಬಿಜೆಪಿ ಹೆಸರಿನಲ್ಲಿಯಲ್ಲ. ಹಸಿರು ಶಾಲು ಹಾಕಿಕೊಂಡು ಕೈಬೀಸುತ್ತಿದ್ದವರು ಈಗ ರೈತರನ್ನು ತುಳಿಯಲು ಹೊರಟಿದ್ದಾರೆ. ರೈತರುಗಳೆಲ್ಲಾ ಇವರ ಗುಲಾಮರಲ್ಲ ಎಂದು ಕಿಡಿಕಾರಿದರು. ರೈತರನ್ನು ಕೊಲ್ಲುವ ಎರಡು ಮಸೂದೆಗಳನ್ನು ಯಡಿಯೂರಪ್ಪನವರ ಸರ್ಕಾರವು ಹಿಂಪಡೆಯಲೇಬೇಕು. ರೈತರ ಜಮೀನನ್ನು ದೊಡ್ಡ ದೊಡ್ಡ ಕಾರ್ಖಾನೆ ಮಾಲೀಕರು, ಶ್ರೀಮಂತರು ಸೇರಿದಂತೆ ಯಾರು ಬೇಕಾದರೂ ಕೊಂಡುಕೊಳ್ಳಬಹುದಾದ ಮಸೂದೆ ರೈತರ ಮರಣ ಶಾಸನವಾಗಿದೆ. ಭೂ ಶಾಸನ ಜಾರಿಗೆ ತರಬಾರದಿತ್ತು ಎಂದು ಕಿಡಿಕಾರಿದರು.

    ನಾಳೆ ವಿನೂತನವಾದ ಚಳುವಳಿ ನಡೆಯಲಿದೆ. ಪೊಲೀಸರು ಈ ಬಂದ್‍ನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಮಿಷನರ್ ಮತ್ತು ಡಿಜಿಗೆ ಪೂರ್ಣ ಅಧಿಕಾರ ನೀಡಿದ್ದಾರೆ. ಕಮಿಷನರ್ ಮತ್ತು ಡಿಜಿ ಇಬ್ಬರೂ ಕನ್ನಡಿಗರಲ್ಲ. ಬೆಂಗಳೂರು ಮಹಾನಾಗರಿಕಾ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಮಾರವಾಡಿಯಾಗಿದ್ದು, ಸಿಎಂ ಯಡಿಯೂರಪ್ಪನವರು ಎಲ್ಲಾ ಕಡೆ ಪರಭಾಷೆಯವರನ್ನು ಹಾಕುತ್ತಿದ್ದಾರೆ ಎಂದು ದೂರಿದರು. ಬಂದ್ ಹೋರಾಟದ ವೇಳೆ ಏನಾದರೂ ದಬ್ಬಾಳಿಕೆ ಮಾಡಿದರೆ ಭಾರಿ ಹೋರಾಟ ಮಾಡಬೇಕಾದ ಅನಿವಾರ್ಯ ಬರುತ್ತದೆ ಎಂದು ಕಿಡಿಕಾರಿದರು.