Tag: ಕರ್ನಾಟಕ ಬಂದ್

  • ಬಂದ್ ಹೊತ್ತಲ್ಲೇ ಅರಮನೆ ಮುಂಭಾಗ ಪ್ರಿ ವೆಡ್ಡಿಂಗ್ ಫೋಟೋಶೂಟ್!

    ಬಂದ್ ಹೊತ್ತಲ್ಲೇ ಅರಮನೆ ಮುಂಭಾಗ ಪ್ರಿ ವೆಡ್ಡಿಂಗ್ ಫೋಟೋಶೂಟ್!

    ಮೈಸೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ ಇತ್ತ ನವ ಜೋಡಿಗಳಿಂದ ಪ್ರಿ ವೆಡ್ಡಿಂಗ್ ಫೋಟೋಶೂಟ್ ನಡೆದಿದೆ.

    ಹೌದು. ನಗರದಲ್ಲಿ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಈ ಮಧ್ಯೆ ಮೂರಕ್ಕೂ ಹೆಚ್ಚು ನವಜೋಡಿಗಳು ಅರಮನೆ ಮುಂಭಾಗ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನವಜೋಡಿಗಳು ಬಂದ್ ಮರೆತು ಫೋಟೋಶೂಟ್ ನಲ್ಲಿ ಮಗ್ನರಾಗಿದ್ದಾರೆ. ಕುದುರೆ ಸಾರೋಟ್ ನಲ್ಲಿ ಜೋಡಿಗಳ ಫೋಟೋಶೂಟ್ ನಡೆದಿದೆ.

    ಇತ್ತ ಮೈಸೂರಿನ ನಗರ ಬಸ್ ನಿಲ್ದಾದ ಬಳಿ ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ರ‍್ಯಾಲಿ ಮಾರ್ಗ ಬದಲಿಸಿ ಸಾಗಿದ ಕಾರ್ಯಕರ್ತರು, ಬಸ್ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನ ತಡೆಯಲು ಮುಂದಾಗಿದ್ದಾರೆ. ಅಲ್ಲದೆ ರಸ್ತೆಯಲ್ಲಿ ಮಲಗಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಎಲ್ಲ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಯಾರನ್ನೂ ವಿರೋಧ ಮಾಡಿ ಕನ್ನಡ ಬೆಳೆಸೋ ಅವಶ್ಯಕತೆ ಇಲ್ಲ: ತೇಜಸ್ವಿ ಸೂರ್ಯ

    ಯಾರನ್ನೂ ವಿರೋಧ ಮಾಡಿ ಕನ್ನಡ ಬೆಳೆಸೋ ಅವಶ್ಯಕತೆ ಇಲ್ಲ: ತೇಜಸ್ವಿ ಸೂರ್ಯ

    – ಬೆಳಗಾವಿಯಲ್ಲಿ ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು

    ಬೆಳಗಾವಿ: ಯಾರನ್ನು ಕೂಡ ವಿರೋಧ ಮಾಡಿ ಕನ್ನಡ ಬೆಳೆಸುವ ಅವಶ್ಯಕತೆ ಇಲ್ಲ ಎಂದು ಕನ್ನಡಪರ ಹೋರಾಟಗಾರರಿಗೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

    ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ ತೇಜಸ್ವಿ ಸೂರ್ಯ ಬಂದ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕ ಬಂದ್ ಗೆ ಕರೆ ನೀಡಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಮರಾಠಿಗರಿದ್ದಾರೆ ಅಂತ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆರು ಕೋಟಿ ಕನ್ನಡಿಗರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಜವಾಬ್ದಾರಿ. ಎಲ್ಲ ಜಾತಿ, ಎಲ್ಲ ಸಮುದಾಯದ ಏಳಿಗೆ ಸರ್ಕಾರದ ಕರ್ತವ್ಯ. ಆ ದೃಷ್ಟಿಯಿಂದ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

    ಬಂದ್ ಕರೆಯುವಂತಹದ್ದು ಸರಿಯಲ್ಲ, ಬಂದ್ ಕಲ್ಚರ್ ಬಂದ್ ಆಗಬೇಕು. ಬಂದ್ ಮಾಡುವುದನ್ನ ಈಗಾಗಲೇ ನಿಲ್ಲಿಸಿದ್ದಾರೆ. ಇಂದಿನ ಬಂದ್ ಯಾವುದೇ ಫಲ ಆಗುವುದಿಲ್ಲ. ಬಂದ್ ಕಲ್ಚರ್ ಈಗಾಗಲೇ ನಿಂತುಹೋಗಿದೆ. ಸರ್ಕಾರದ ಜೊತೆಗೆ ಕುಳಿತು ಚರ್ಚೆ ಮಾಡುವಂತೆ ಕನ್ನಡ ಸಂಘಟನೆ ಮುಖಂಡರಿಗೆ ಮನವಿ ಮಾಡಿಕೊಂಡ ಸೂರ್ಯ, ಸರ್ಕಾರ ಮತ್ತು ಯಡಿಯೂರಪ್ಪ ನಿಮ್ಮ ಮಾತುಗಳನ್ನ ಕೇಳಲು ತಯಾರಿದೆ. ಕನ್ನಡದ ಕೆಲಸವನ್ನ ಎಲ್ಲರೂ ಸೇರಿ ಮಾಡೋಣ ಎಂದು ತಿಳಿಸಿದರು.

    ಬೆಳಗಾವಿಯ ರೇಲ್ವೆ ನಿಲ್ದಾಣದಲ್ಲಿ ಬಂದಿಳಿದ ತೇಜಸ್ವಿ ಸೂರ್ಯ ಅವರನ್ನು ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು. ಬೆಳಗಾವಿ ಜಿಲ್ಲಾ ಬಿಜೆಪಿ ಯುವ ಘಟಕ ಹೂಗೂಚ್ಛ ನೀಡಿ ಸ್ವಾಗತಿಸಿತ್ತು. ಇದೇ ವೇಳೆ ತೇಜಸ್ವಿ ಸೂರ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾರ್ಯಕರ್ತರು ಮುಗಿಬಿದ್ದ ಪ್ರಸಂಗವೂ ನಡೆಯಿತು.

  • ಬೆಂಗ್ಳೂರಲ್ಲಿ 100ಕ್ಕೂ ಹೆಚ್ಚು ರೌಡಿಶೀಟರ್‌ಗಳು ಪೊಲೀಸರ ವಶಕ್ಕೆ!

    ಬೆಂಗ್ಳೂರಲ್ಲಿ 100ಕ್ಕೂ ಹೆಚ್ಚು ರೌಡಿಶೀಟರ್‌ಗಳು ಪೊಲೀಸರ ವಶಕ್ಕೆ!

    ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಇಂದು ಬೀದಿಗಿಳಿದಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ರೌಡಿಶೀಟರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

    ನಗರದ ಎಲ್ಲಾ ಡಿವಿಜನ್ ಗಳಲ್ಲೂ, ಅಪರಾಧ ಹಿನ್ನೆಲೆ ಇರುವ ರೌಡಿಶೀಟರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ವಿಭಾಗದಲ್ಲಿ ನೂರಕ್ಕೂ ಹೆಚ್ಚು ರೌಡಿಶೀಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವರನ್ನು ವಶಕ್ಕೆ ಪಡೆದ್ರೆ ಮತ್ತೆ ಕೆಲವರನ್ನು ಬಂದ್, ಪ್ರತಿಭಟನೆ ಹಾಗೂ ಗಲಾಟೆಗಳಲ್ಲಿ ಭಾಗವಹಿಸೋದಿಲ್ಲ ಅಂತ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ.

    ಇಂದು ಬೆಳಗ್ಗೆ 10:30ರಿಂದ ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್‍ವರೆಗೂ ಕನ್ನಡ ಸಂಘಟನೆಗಳ ಕಾರ್ಯಕರ್ತರು ರ್ಯಾಲಿ ಹೊರಡಲಿದ್ದಾರೆ. ಹೀಗಾಗಿ ಟೌನ್ ಹಾಲ್ ಬಳಿ ಪೊಲೀಸ್ ಭದ್ರತೆ ಹೆಚ್ಚು ಮಾಡಲಾಗಿದೆ. ಒಬ್ಬರು ಇಬ್ಬರು ಎಸಿಪಿ, ಒಬ್ಬರು ಡಿಸಿಪಿ ನೇತೃತ್ವದಲ್ಲಿ 200 ಜನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪ್ರತಿಭಟನೆ ನಿಯಂತ್ರಣಕ್ಕೆ ವಾಟರ್ ಜೆಟ್ ಕೂಡ ತರಲಾಗಿದೆ.

    ಮೆಜೆಸ್ಟಿಕ್‍ನಿಂದ ವಿವಿಧ ಪ್ರದೇಶಗಳಿಗೆ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಸಂಚಾರ ಎಂದಿನಂತೆ ಆರಂಭಗೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಒಂದು ಕೆಎಸ್‍ಆರ್‍ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.

  • ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣ ಬಂದ್‌

    ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣ ಬಂದ್‌

    ಬೆಂಗಳೂರು: ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ನಲ್ಲಿರುವ ಮೆಟ್ರೋ ನಿಲ್ದಾಣವನ್ನು ಬಂದ್‌ ಮಾಡಲಾಗಿದೆ.

    ನೆರಳೆ ಮತ್ತು ಹಸಿರು ಮಾರ್ಗಗಳನ್ನು ಜೋಡಿಸುವ ಕಂಪೇಗೌಡ ನಿಲ್ದಾಣದಿಂದ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಆದರೆ ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಈ ನಿಲ್ದಾಣವನ್ನು ಬಂದ್‌ ಮಾಡಲಾಗಿದೆ.

    ಮೇಲಾಧಿಕಾರಿಗಳ ಸೂಚನೆ ಮೇರೆಗೆ ಬಂದ್‌ ಮಾಡುತ್ತಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಬಂದ್‌ ಆದ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ಬಂದ ಪ್ರಯಾಣಿಕರು ವಾಪಸ್‌ ತೆರಳುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕರ್ನಾಟಕ ಬಂದ್‌ ಬಿಸಿಯೇ ಇಲ್ಲ- ಮಾರುಕಟ್ಟೆಯಲ್ಲಿ ಜನವೋ ಜನ

    ಪಬ್ಲಿಕ್‌ ಟಿವಿಗೆ ಭದ್ರತಾ ಸಿಬ್ಬಂದಿ ಪ್ರತಿಕ್ರಿಯಿಸಿ, ಸದ್ಯಕ್ಕೆ ನಿಲ್ದಾಣ ತೆರೆಯದಂತೆ ಸೂಚನೆ ಸಿಕ್ಕಿದೆ. ಮೇಲಾಧಿಕಾರಿಗಳು ಹೇಳುವವರೆಗೂ ಮೆಟ್ರೋ ಸಂಚಾರ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲ ಮೆಟ್ರೋ ನಿಲ್ದಾಣಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.

  • ಕರ್ನಾಟಕ ಬಂದ್ – ಏನಿರುತ್ತೆ? ಏನಿರಲ್ಲ? ನೈತಿಕ ಬೆಂಬಲ ನೀಡಿದವರು ಯಾರು?

    ಕರ್ನಾಟಕ ಬಂದ್ – ಏನಿರುತ್ತೆ? ಏನಿರಲ್ಲ? ನೈತಿಕ ಬೆಂಬಲ ನೀಡಿದವರು ಯಾರು?

    – ಬಂದ್‍ಗೆ ಯಾರು ಅನುಮತಿ ನೀಡಿಲ್ಲ
    – ಚೇಷ್ಟೆ ಮಾಡಿದ್ರೆ ಕ್ರಮ – ಪಂಥ್
    – ಬಸ್ ಓಡಿಸಿದ್ರೆ ಗಲಾಟೆ – ವಾಟಾಳ್

    ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರದಿಂದ ಹಿಂದೆ ಸರಿಯದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕನ್ನಡ ಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್‍ಗೆ ಕರೆ ನೀಡಿವೆ.

    ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್ ಕರೆ ನೀಡಲಾಗಿದ್ದು, ಕೆಲವೊಂದು ಸಂಘಟನೆಗಳು ಬಂದ್ ಬೆಂಬಲಿಸಿದರೆ ಇನ್ನು ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನಷ್ಟೇ ಘೋಷಿಸಿವೆ.

    ಬಂದ್ ಹಿನ್ನಲೆಯಲ್ಲಿ ನಾಳೆ ಬೆಂಗಳೂರಿನಾದ್ಯಂತ ಬಿಗಿ ಭದ್ರತೆ ಮಾಡಲಾಗಿದೆ. ಬಸ್ ಸ್ಟ್ಯಾಂಡ್, ಮೆಟ್ರೋ ಸ್ಟೇಷನ್ ಬಳಿ ಹೆಚ್ಚಿನ ನಿಯೋಜನೆ ಮಾಡಲಾಗಿದೆ. ಬಂದ್‍ಗೆ ಯಾರೂ ಅನುಮತಿ ಕೇಳಿಲ್ಲ, ನಾವು ಕೊಟ್ಟಿಲ್ಲ. ಬಿಎಂಟಿಸಿ, ಕೆಎಸ್‍ಆರ್‌ಟಿಸಿ ಬೆಂಬಲ ಕೊಟ್ಟಿಲ್ಲ. ಜನ ನಿರ್ಭಯವಾಗಿ ಓಡಾಡಬಹುದು. ಚೇಷ್ಟೆ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂಥ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

     

    ಕನ್ನಡ ಸಂಘಟನೆಗಳು ಕಿಡಿ:
    ಮರಾಠ ನಿಗಮ ಒಂದ್ಕಡೆಯಾದರೆ ರೋಲ್‍ಕಾಲ್‍ಗಳು, ವಸೂಲಿಕೋರರು ಅಂತ ಟೀಕಿಸಿರುವ ಹಿನ್ನೆಲೆಯಲ್ಲಿ ಕನ್ನಡ ಹೋರಾಟಗಾರರು ಮಾತ್ರ ಜಿದ್ದಿಗೆ ಬಿದ್ದಿದ್ದಾರೆ. ಬಂದ್‍ನ ಮುಂಚೂಣಿ ನಾಯಕ ವಾಟಾಳ್ ನಾಗರಾಜ್ ಅವರು, ನಾವೇನ್ ಚೇಷ್ಟೆ ಮಾಡಲ್ಲ. ಯಡಿಯೂರಪ್ಪ ಪೊಲೀಸರನ್ನು ಮಾರು ವೇಷದಲ್ಲಿ ಕಳಿಸಿ ಏನಾದ್ರೂ ಅನಾಹುತ ಮಾಡಿದರೆ ನಾವು ಜವಾಬ್ದಾರಿ ಅಲ್ಲ ಎಂದಿದ್ದಾರೆ.

    ನಾವ್ ಯಾಕ್ರೀ ಅನುಮತಿ ಕೇಳಬೇಕು. ಇತಿಹಾಸದಲ್ಲಿ ಕರ್ನಾಟಕ ಬಂದ್‍ಗೆ ನಾವು ಪೊಲೀಸರ ಅನುಮತಿ ಕೇಳಿಲ್ಲ ಕೇಳಲ್ಲ. ನಾಳೆ ರ‍್ಯಾಲಿ ಇರುತ್ತದೆ. ನಾವ್ಯಾರಿಗೂ ಜಗ್ಗಲ್ಲ. ಗುಂಡೇಟು ಹೊಡೀತಾರ ಹೊಡಿಲಿ ನೋಡೋಣ ಅಂತ ಪೊಲೀಸ್ ಕಮೀಷನರ್‌ಗೆ ವಾಟಾಳ್ ಸವಾಲ್ ಹಾಕಿದ್ದಾರೆ. ಇವತ್ತು ಸಾಂಕೇತಿಕವಾಗಿ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಉರುಳು ಸೇವೆ ಮಾಡಿದ್ದಾರೆ. ಅಲ್ಲದೆ, ಮಾರ್ಕೆಟ್, ಮೆಜೆಸ್ಟಿಕ್‍ನಲ್ಲಿ ಬಂದ್‍ಗೆ ಸಹಕರಿಸುವಂತೆ ಪ್ರಚಾರ ಆಂದೋಲನ ನಡೆಸಿದರು.

     

    ಬಸ್ ಓಡಿಸಿದರೆ ಗಲಾಟೆ ಪಕ್ಕಾ ಆಗುತ್ತದೆ. ಮಾಲ್, ಥಿಯೇಟರ್ ಓಪನ್ ಮಾಡ್ಬೇಡಿ. ರಸ್ತೆ ರಸ್ತೆಗಳಲ್ಲಿ ಹೋರಾಟ ಮಾಡುತ್ತೇವೆ. ನಿಗದಿತ ಸ್ಥಳಕ್ಕೆ ಹೋರಾಟ ಸೀಮಿತ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

    ಸಾರಾಗೋವಿಂದು ಕೂಡ ಯಡಿಯೂರಪ್ಪರನವೇ ನಿಮ್ಮ ಮನವಿ ಯಾರಿಗೆ ಬೇಕು. ಮರಾಠ ನಿಗಮ ಹಿಂಪಡೀತಿವಿ ಅಂತೇಳಿ. ಆ ಕ್ಷಣವೇ ಬಂದ್ ವಾಪಸ್ ಪಡೀತೀವಿ ಅಂದಿದ್ದಾರೆ. ಬಂದ್‍ಗೆ ಬೆಂಬಲ ಕೊಡದವರಿಗೆ ನಾಚಿಕೆ ಆಗ್ಬೇಕು ಅಂತ ಕಿಡಿಕಾರಿದ್ದಾರೆ.

    ಕರವೇ ನಾರಾಯಣಗೌಡ , ತಾಲೂಕು, ಜಿಲ್ಲಾ ಮಟ್ಟದಲ್ಲಿ ಬಂದ್ ಮಾಡ್ತೀವಿ. ನಿಮ್ಮ ಭಂಡತನ ಬಿಡಿ. ನಾಳೆ ಬೇರೆ ಸಮುದಾಯಗಳು ಕೇಳಿದರೆ ಆಗ ಏನ್ ಮಾಡ್ತೀರಿ? ಮರಾಠಿ ನಿಗಮಕ್ಕೆ ಕೊಟ್ಟಿರೋ ಹಣನಾ ಉತ್ತರ ಕರ್ನಾಟಕದ ಪ್ರವಾಹ ಬಾಧಿತರಿಗೆ ಕೊಡಿ ಅಂತ ಕಿಡಿಕಾರಿದ್ದಾರೆ.

    ನಾಳೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಆಗಲಿದೆ. ಬೆಳಗ್ಗೆ 10.30ರಿಂದ ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ವರೆಗೆ ರ‍್ಯಾಲಿ ನಡೆಯಲಿದೆ.

    ಬಂದ್‍ಗೆ ಯಾರ ಬೆಂಬಲ?
    ಕರವೇ ನಾರಾಯಣಗೌಡರ ಬಣ, ಕರವೇ ಶಿವರಾಮೇಗೌಡರ ಬಣ, ಜಯಕರ್ನಾಟಕ ಸಂಘಟನೆ, ಕರ್ನಾಟಕ ನವ ನಿರ್ಮಾಣ ಸೇನೆ, ಕರ್ನಾಟಕ ಸ್ವಾಭಿಮಾನಿ ಬಳಗ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕೆಲವು ಆಟೋ ಚಾಲಕರ ಸಂಘ, ಓಲಾ, ಊಬರ್ ಚಾಲಕರ ಸಂಘ, ಟ್ಯಾಕ್ಸಿ ಯೂನಿಯನ್ ಬೆಂಬಲ ನೀಡಿವೆ.

    ನೈತಿಕ ಬೆಂಬಲ ಕೊಟ್ಟವರು
    * ಹೋಟೆಲ್ ಮಾಲೀಕರ ಸಂಘ – ಹೋಟೆಲ್ ಓಪನ್ ಇರುತ್ತೆ
    * ರಸ್ತೆ ಬದಿ ವ್ಯಾಪಾರಿಗಳ ಸಂಘ – ರಸ್ತೆ ಬದಿ ವ್ಯಾಪಾರ ಇರುತ್ತೆ
    * ಪೆಟ್ರೋಲ್ ಬಂಕ್ ಮಾಲೀಕರ ಸಂಘ – ಪೆಟ್ರೋಲ್ ಬಂಕ್ ಓಪನ್ ಇರುತ್ತೆ
    * ಆಟೋ ಚಾಲಕರ ಸಂಘ
    * ಲಾರಿ ಮಾಲೀಕರ ಸಂಘ
    * ಮ್ಯಾಕ್ಸಿಕ್ಯಾಬ್ ಚಾಲಕರ ಸಂಘ
    * ಪೀಣ್ಯ ಕೈಗಾರಿಕಾ ಸಂಘ – ಕಾರ್ಮಿಕರು, ಕೈಗಾರಿಕೋದ್ಯಮಿಗಳ ಹಿತದೃಷ್ಟಿಯಿಂದ 1 ಗಂಟೆ ಹೆಚ್ಚು ಕೆಲಸ ಮಾಡಿ ನೈತಿಕ ಬೆಂಬಲ
    * ರೈತ ಸಂಘ
    * ಕರವೇ ಪ್ರವೀಣ್ ಶೆಟ್ಟಿ ಬಣ
    * ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್

     

    ಯಾರ ಬೆಂಬಲ ಇಲ್ಲ?
    * ಬಿಎಂಟಿಸಿ, ಕೆಎಸ್‍ಆರ್‌ಟಿಸಿ – ಓಡಾಡುತ್ತೆ
    * ಖಾಸಗಿ ಸಾರಿಗೆ ಸಂಘ – ಓಡಾಡುತ್ತೆ
    * ಹೋಟೆಲ್, ಬೇಕರಿ, ಅಂಗಡಿಗಳು – ತೆರೆಯುತ್ತದೆ
    * ಸರ್ಕಾರಿ ಕಚೇರಿ, ಬ್ಯಾಂಕ್‍ಗಳು – ಓಪನ್‌ ಇರಲಿದೆ
    * ಎಐಟಿಯುಸಿ ಸಂಘಟನೆ

  • ದಯವಿಟ್ಟು ಬಂದ್ ಮಾಡಿ ಜನರಿಗೆ ತೊಂದ್ರೆ ಕೊಡೋ ಕೆಲಸ ಮಾಡ್ಬೇಡಿ: ಸಿಎಂ ಮನವಿ

    ದಯವಿಟ್ಟು ಬಂದ್ ಮಾಡಿ ಜನರಿಗೆ ತೊಂದ್ರೆ ಕೊಡೋ ಕೆಲಸ ಮಾಡ್ಬೇಡಿ: ಸಿಎಂ ಮನವಿ

    – ಕನ್ನಡದ ಮುಖಂಡರು ಹೇಳಿದ್ದನ್ನು ಮಾಡಲು ಸಿದ್ಧ

    ಬೆಂಗಳೂರು: ನಾಳೆಯ ಕರ್ನಾಟಕ ಬಂದ್‍ಗೆ ಅವಕಾಶ ಇಲ್ಲ. ದಯಮಾಡಿ ಯಾರೂ ಬಂದ್ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕನ್ನಡಪರ ಸಂಘಟನೆಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಸುತ್ತೂರು ಮಠದ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳನ್ನು ಬನಶಂಕರಿಯಲ್ಲಿ ಸತ್ತೂರು ಸದನದಲ್ಲಿ ಭೇಟಿ ಮಾಡಿ ಸಿಎಂ ಯಡಿಯೂರಪ್ಪ ಅವರು ಶ್ರೀಗಳ ಆಶೀರ್ವಚನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಾಳೆಯ ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಂದ್ ಮಾಡದಂತೆ ಮನವಿ ಮಾಡಿಕೊಂಡರು. ಬಂದ್ ಮಾಡಿ ಜನರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ. ಬಂದ್ ಮಾಡುವ ಅಗತ್ಯ ಇಲ್ಲ. ಎಲ್ಲ ಸಮಾಜವನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದರು.

    ಕನ್ನಡಕ್ಕೆ ಏನೇನೋ ಆದ್ಯತೆ ಕೊಡಬೇಕೋ, ಇನ್ನೂ ಹೆಚ್ಚಿನದಾಗಿ ಏನೇನೋ ಕೊಡಬೇಕೋ ಅದನ್ನು ಕೊಡಲು ನಾನು ಸಿದ್ಧನಿದ್ದೇನೆ. ಕನ್ನಡದ ಮುಖಂಡರು ಏನು ಹೇಳ್ತಾರೋ ಅದನ್ನು ನಾನು ಮಾಡಲು ಸಿದ್ಧನಿದ್ದೇನೆ. ದಯಮಾಡಿ ಬಂದ್ ಗೆ ಎಲ್ಲಿಯೂ ಕೂಡ ಅವಕಾಶ ಇಲ್ಲ. ಯಾರು ಕೂಡ ಬಂದ್ ಮಾಡಬೇಡಿ. ದಯವಿಟ್ಟು ಇದಕ್ಕೆ ಎಲ್ಲರು ಸಹಕರಿಸಿಬೇಕು ಎಂದು ಸಿಎಂ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.

    ಕೋವಿಡ್ ಎರಡನೇ ಅಲೆ ಹಿನ್ನೆಲೆ ನೈಟ್ ಕರ್ಫ್ಯೂ ಜಾರಿ ವಿಚಾರದ ಬಗ್ಗೆ ಯಾವುದೇ ಯೋಚನೆ ಇಲ್ಲ ಅಂತ ಇದೇ ವೆಳೆ ಸಿಎಂ ಸ್ಪಷ್ಟಪಡಿಸಿದರು. ಇಂದು ಮಧ್ಯಾಹ್ನ ಬೆಳಗಾವಿ ಗೆ ಹೋಗ್ತಿದ್ದೇನೆ. ನಾಳೆ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಇದೆ. ಅದು ಮುಗಿಸಿ ನಾಳೆ ಸಂಜೆ ವಾಪಸ್ ಬರುತ್ತೇನೆ. ಬಂದು ಉಳಿದ ವಿಷಯಗಳ ಬಗ್ಗೆ ತಿಳಿಸುತ್ತೇನೆ ಎಂದರು.

  • ನ್ಯೂ ಇಯರ್ ನೈಟ್ ಕರ್ಫ್ಯೂ ಇರಲ್ಲ: ಬೊಮ್ಮಾಯಿ

    ನ್ಯೂ ಇಯರ್ ನೈಟ್ ಕರ್ಫ್ಯೂ ಇರಲ್ಲ: ಬೊಮ್ಮಾಯಿ

    – ಕರ್ನಾಟಕ ಬಂದ್‍ಗೆ ಅವಕಾಶ ಇಲ್ಲ

    ಉಡುಪಿ: ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಡಿ.5 ಕರ್ನಾಟಕ ಬಂದ್ ನಡೆಸಲು ಅವಕಾಶವಿಲ್ಲ. ಆ ದಿನ ಎಲ್ಲಾ ಸರ್ಕಾರಿ ಕಚೇರಿಗಳು ದಿನನಿತ್ಯದಂತೆ ನಡೆಯುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಬಂದ್ ಮಾಡಿದ್ರೆ ಸುಪ್ರೀಂ ಆದೇಶ ಉಲ್ಲಂಘನೆ ಆಗುತ್ತೆ. ಬಂದ್ ಮಾಡಬೇಡಿ ಎಂದು ಸಿಎಂ ಜೊತೆ ನಾನೂ ಮನವಿ ಮಾಡ್ತೇನೆ ಎಂದರು.

    ಹೊಸ ವರ್ಷಾಚರಣೆ ಮತ್ತು ನೈಟ್ ಕರ್ಫ್ಯೂ ಕುರಿತು ಮಾತನಾಡಿದ ಸಚಿವರು, ನೈಟ್ ಕರ್ಫ್ಯೂ ಬಗ್ಗೆ ಯಾವುದೇ ಸಭೆ ಕರೆದಿಲ್ಲ. ಆದರೆ ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ. ಇವತ್ತು ಅಥವಾ ನಾಳೆ ಸರ್ಕಾರ ಒಂದು ತೀರ್ಮಾನ ಮಾಡ್ತೇವೆ. ನೈಟ್ ಕರ್ಫ್ಯೂ ಬಗ್ಗೆ ಯಾವುದೇ ಚಿಂತನೆ ಇಲ್ಲ. ಹೊಸ ವರ್ಷಾಚರಣೆಯಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ. ನೈಟ್ ಕರ್ಫ್ಯೂ ಹೊರತಾಗಿಯೂ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.

    ಶಾಲೆಗಳು ಓಪನ್ ಮಾಡುವಂತೆ ಪೋಷಕರಿಂದ ಒತ್ತಾಯ ವಿಚಾರವಾಗಿ ಮಾತನಾಡಿ, ಕೊರೊನಾ ಸ್ಥಿತಿಗತಿಯನ್ನು ನೋಡಿಕೊಂಡು ಎಲ್ಲ ನಿರ್ಧಾರ ಆಗುತ್ತೆ, ಮೇಲ್ಮನೆ ಸದಸ್ಯರು ಒತ್ತಡ ಹಾಕುವುದು ಸಹಜ. ಕಾಲಕಾಲಕ್ಕೆ ಶಿಕ್ಷಣ ಸಚಿವರು ಎಲ್ಲಾ ವಿಭಾಗಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎಂದರು.

    ಸಂಪುಟ ವಿಸ್ತರಣೆ ಹೈಕಮಾಂಡಿಗೆ ಬಿಟ್ಟ ವಿಚಾರ. ಬಿಜೆಪಿಯಲ್ಲಿ ಯಾವುದೇ ಒಳಜಗಳ ಗುಂಪುಗಾರಿಕೆ ತಿಕ್ಕಾಟ ಇಲ್ಲ. ಹೈಕಮಾಂಡ್ ಪ್ರಧಾನಿ ಮುಖ್ಯಮಂತ್ರಿಗಳು ಪಕ್ಷ ತೀರ್ಮಾನಿಸಿದಂತೆ ಎಲ್ಲವೂ ನಡೆಯುತ್ತದೆ ಎಂದರು.

  • ಜೈಲಿಗೆ ಹೋಗಿ ಬಂದರೂ ಯಡಿಯೂರಪ್ಪರಿಗೆ ಬುದ್ಧಿ ಇಲ್ಲ: ವಾಟಾಳ್ ನಾಗರಾಜ್

    ಜೈಲಿಗೆ ಹೋಗಿ ಬಂದರೂ ಯಡಿಯೂರಪ್ಪರಿಗೆ ಬುದ್ಧಿ ಇಲ್ಲ: ವಾಟಾಳ್ ನಾಗರಾಜ್

    ಹಾಸನ: ಜೈಲಿಗೆ ಹೋಗಿ ಬಂದರೂ ಯಡಿಯೂರಪ್ಪರಿಗೆ ಬುದ್ಧಿ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಿಎಂ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಇಂದು ಹಾಸನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪರವರೇ ನಾವು ಹೋರಾಟದ ಮೂಲಕ ಜೈಲಿಗೆ ಹೋಗುತ್ತಿದ್ದೇವೆ. ನಿಮ್ಮ ಹಾಗೆ ಬೇರೆಯದಕ್ಕೆ ಜೈಲಿಗೆ ಹೋಗಿಲ್ಲ. ನಾಳೆ ಕೇರಳ ಮತ್ತು ತಮಿಳುನಾಡಿನವರು ಪ್ರಾಧಿಕಾರ ಮಾಡಲು ಕೇಳಬಹುದು. ಎಲ್ಲರೂ ಪ್ರಾಧಿಕಾರ ಮಾಡಿ ಎಂದು ಹೇಳ್ತಾರೆ ಆಗ ಪ್ರಾಧಿಕಾರ ಮಾಡ್ತೀರಾ ಎಂದು ಪ್ರಶ್ನೆ ಮಾಡಿದರು.

    ಗೋವಾದಲ್ಲಿ ಶೇ 40ರಷ್ಟು ಕನ್ನಡಿಗರಿದ್ದಾರೆ. ಕನ್ನಡ ಪ್ರಾಧಿಕಾರವನ್ನು ಅಲ್ಲಿನ ಸರ್ಕಾರದವರು ಮಾಡುತ್ತಾರಾ? ನೀವು ಈ ಪ್ರಾಧಿಕಾರ ಮಾಡಿರುವುದು ಅಕ್ಷಮ್ಯ ಅಪರಾಧ. ಪ್ರಾಧಿಕಾರ ಮಾಡಲು ನೀಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ನಾವು ಜೈಲಿಗೂ ಹೋಗುತ್ತೇವೆ. ನ್ಯಾಯಾಲಯದ ಮೊರೆ ಹೋಗಲು ತೀರ್ಮಾನ ಮಾಡಿದ್ದೇವೆ. ಡಿಸೆಂಬರ್ 5 ಕನ್ನಡಿಗರು ಮತ್ತು ಯಡಿಯೂರಪ್ಪರ ನಡುವಿನ ಸವಾಲ್‍ಗೆ ಸಾಕ್ಷಿಯಾಗಲಿದೆ. ಡಿಸೆಂಬರ್ 5ರಂದು ನೂರಕ್ಕೆ ನೂರು ಎಲ್ಲವೂ ಬಂದ್ ಆಗಬೇಕು ಎಂದರು.

    ಕನ್ನಡಪರ ಸಂಘಟನೆಗಳು ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಹೋಟೆಲ್ ಮಾಲೀಕರು ಬೆಂಬಲ ಕೊಡಲೇಬೇಕು. ಬಸ್ ನಿಲ್ದಾಣಕ್ಕೆ ಜನರು ಬರಬೇಡಿ, ಟ್ಯಾಕ್ಸಿ ಆಟೋ, ತರಕಾರಿ ಮತ್ತು ಫುಟ್ ಪಾತ್ ಅಂಗಡಿಯವರು ಬಂದ್‍ಗೆ ಬೆಂಬಲ ನೀಡಿದ್ದಾರೆ. ಚಿತ್ರದುರ್ಗ, ಸಿದ್ದಗಂಗಾ ಮಠ ಸೇರಿ ಎಲ್ಲ ಮಠಗಳೂ ಈ ಮರಾಠ ಪ್ರಾಧಿಕಾರ ಮಾಡದಂತೆ ಹೇಳಿದ್ದಾರೆ. ನ್ಯಾಯಾಲಯ ಮತ್ತು ವಕೀಲರು ಕನ್ನಡಿಗರ ಪರವಾಗಿ ನಿಂತಿದ್ದಾರೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

    ಸರ್ಕಾರಿ ಸಂಘದ ಅಧ್ಯಕ್ಷ ಸಂಪರ್ಕಕ್ಕೆ ಸಿಗುತ್ತಿಲ್ಲ. ರೈಲು ಓಡಿಸಿದರೆ ಹಳಿಮೇಲೆ ಜನರು ಕುಳಿತುಕೊಳ್ಳುತ್ತಾರೆ ಎಂದು ರೈಲು ಇಂಟಲಿಜೆನ್ಸ್ ನವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ನಾಳೆ ಮತ್ತು ನಾಡಿದ್ದು 144 ಸೆಕ್ಷನ್ ಜಾರಿ ಮಾಡುತ್ತಿದ್ದಾರೆ. ನಾನು ಈ ಹಿಂದೆ ಹಾಸನದಲ್ಲೇ ನಾಲ್ಕು ದಿನ ಜೈಲಿನಲ್ಲಿದ್ದೆ, ನಾವು ಜೈಲಿಗೆ ಹೋಗುತ್ತೇವೆ. ನ್ಯಾಯಾಲಯದಲ್ಲಿ ಬೇಲ್ ತೆಗೆದುಕೊಳ್ಳೋದಿಲ್ಲ ಎಂದು ತಿಳಿಸಿದರು.

  • ಬಲವಂತದ ಬಂದ್‍ಗೆ ಅವಕಾಶ ಕೊಡಲ್ಲ: ಬಿಎಸ್‍ವೈ

    ಬಲವಂತದ ಬಂದ್‍ಗೆ ಅವಕಾಶ ಕೊಡಲ್ಲ: ಬಿಎಸ್‍ವೈ

    ಬೆಂಗಳೂರು: ರಾಜ್ಯದಲ್ಲಿ ಎಲ್ಲಿಯೂ ಬಲವಂತದ ಬಂದ್ ಗೆ ಸರ್ಕಾರ ಅವಕಾಶ ಕೊಡಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕನ್ನಡ ಪರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ.

    ವಿಶ್ವ ಮೀನುಗಾರಿಕಾ ದಿನಾಚರಣೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ನಾನು ಕನ್ನಡದ ಪರವಾಗಿ, ಕನ್ನಡಿಗರ ಪರವಾಗಿ ಇರುವಂಥವನು. ಕನ್ನಡಿಗರಿಗೆ ಬೇಕಾದ ಹೆಚ್ಚಿನ ಸೌಲಭ್ಯ ಒದಗಿಸಲು ನಾನು ಸಿದ್ಧನಿದ್ದೇನೆ. ಬಂದ್ ಕರೆ ನೀಡುವುದು ಸೂಕ್ತ ಅಲ್ಲ. ಜನರು ಸಹ ಈ ನಡೆಯಲ್ಲ ಮೆಚ್ಚುವದಿಲ್ಲ. ಬಲವಂತದಿಂದ ಬಂದ್ ಮಾಡಲು ಎಲ್ಲಿಯೂ ನಾನು ಅವಕಾಶ ಕೊಡಲ್ಲ. ಪ್ರತಿಕೃತಿ ದಹನ ಮಾಡೋದು, ಕೆಟ್ಟದಾಗಿ ನಡೆದುಕೊಳ್ಳುತ್ತಿರುವುದನ್ನ ಗಮನಿಸಿದ್ದೇನೆ. ಬಹಳ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನ ರವಾನಿಸಿದರು.

    ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ. ಆದರೆ ಪ್ರತಿಭಟನೆಗೆ ಬೇರೆ ಸ್ವರೂಪ ಕೊಡೋದು ಬೇಡ. ಎಲ್ಲ ವರ್ಗಗಳಿಗೂ ಸರ್ಕಾರ ನ್ಯಾಯ ಒದಗಿಸೋ ಕೆಲಸ ಸರ್ಕಾರ ಮಾಡುತ್ತಿದೆ. ಸರ್ಕಾರ ಯಾರಿಗೂ ಭೇದ ಭಾವ ಮಾಡುತ್ತಿಲ್ಲ. ಸರ್ಕಾರದ ಉದ್ದೇಶ ಅರ್ಥ ಮಾಡಿಕೊಂಡು ಸಹಕಾರ ಕೊಡಲಿ ಎಂದು ಸಿಎಂ ಹೇಳಿದರು.

  • ಹಲವಾರು ಸಂಘಟನೆಗಳ ಬೆಂಬಲ – ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್

    ಹಲವಾರು ಸಂಘಟನೆಗಳ ಬೆಂಬಲ – ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್

    ಬೆಂಗಳೂರು: ಇಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡುವ ವಿಚಾರವಾಗಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡುವುದಾಗಿ ತಿಳಿಸಿದ್ದಾರೆ.

    ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಸರ್ಕಾರದ ತೀರ್ಮಾನಕ್ಕೆ ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆಯೇ ಇದರ ವಿರುದ್ಧ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಪರ ಸಂಘಟನೆಗಳು ಹೇಳಿಕೊಂಡಿದ್ದವು. ಈ ವಿಚಾರವಾಗಿ ಇಂದು ಸಭೆ ನಡೆಸಿದ್ದು, ಈ ಸಭೆಯಲ್ಲಿ ಕರ್ನಾಟಕ ಬಂದ್‍ಗೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿವೆ.

    ಇಂದು ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಸಭೆ ಸೇರಿದ್ದ ಹಲವಾರು ಸಂಘಟನೆಗಳ ಮುಖಂಡರು ಡಿಸೆಂಬರ್ 5ರಂದು ನಡೆಯುವ ಬಂದ್‍ಗೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ವಿವಿಧ ಕನ್ನಡಪರ ಸಂಘಟನೆಗಳು, ಓಲಾ, ಊಬರ್ ಅಸೋಸಿಯೇಷನ್, ಆಟೋ ಅಸೋಸಿಯೇಷನ್ ಮತ್ತು ಸ್ಕೂಲ್ ವ್ಯಾನ್ ಅಸೋಸಿಯೇಷನ್ ಬಂದ್‍ಗೆ ಬೆಂಬಲ ನೀಡಿವೆ. ಜೊತೆಗೆ ಬಂದ್ ದಿನ 5 ಲಕ್ಷ ಜನರು ಬೆಂಗಳೂರಿನಲ್ಲಿ ಮೆರವಣಿಗೆ ನಡೆಸುವ ಸಿದ್ಧತೆ ಮಾಡಿಕೊಂಡಿದ್ದಾರೆ. ಬಸ್‍ಗಳನ್ನು ಓಡಾಡಲು ಬಿಡುವುದಿಲ್ಲ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

    ಇಂದು ನಡೆದ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಫಿಲ್ಮ್ ಚೇಂಬರ್ ನ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು, ಕರವೇ ಅಧ್ಯಕ್ಷ ಶಿವರಾಮೇಗೌಡ, ಮಂಜುನಾಥ್ ದೇವ, ಗಿರೀಶ್ ಗೌಡ, ಪಾಲನೇತ್ರ, ಟಿ.ಪಿ ಪ್ರಸನ್ನಕುಮಾರ್, ಅಮ್ಮಿಚಂದ್ರು, ನಾರಾಯಣ ಸ್ವಾಮಿ, ವಾಟಾಳ್ ವೆಂಕಟೇಶ್, ನರಸಿಂಹ ಮೂರ್ತಿ, ಮುಭಾರಕ್ ಪಾಷಾ, ಸಾಧಿಕ್ ಪಾಷಾ, ಬಾಲಾಜಿ ತಿಮ್ಲಾಪುರ, ಕೊಪ್ಪಳ ವಿಜಯ್, ಸಯ್ಯದ್ ಜಿಲಾನಿ ಪಾಷಾ, ಎರ್ರಿಸ್ವಾಮಿ, ಮುನ್ನಾವರ, ಪಾರ್ಥಸಾರಥಿ, ಬಾಲಾಜಿ ಕೃಷ್ಣಮೂರ್ತಿ, ವೇಣುಗೋಪಾಲ್, ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರೆಲ್ಲರು ಭಾಗವಹಿಸಿದ್ದರು.