Tag: ಕರ್ನಾಟಕ ಬಂದ್

  • ಕೋಲಾರದಲ್ಲಿ ಸರ್ಕಾರಿ ಬಸ್‍ಗೆ ಕಲ್ಲು- ತೆಲುಗು ನಟ ನಂದಮೂರಿ ತಾರಕರತ್ನ ಕಾರಿಗೆ ತಡೆ

    ಕೋಲಾರದಲ್ಲಿ ಸರ್ಕಾರಿ ಬಸ್‍ಗೆ ಕಲ್ಲು- ತೆಲುಗು ನಟ ನಂದಮೂರಿ ತಾರಕರತ್ನ ಕಾರಿಗೆ ತಡೆ

    – ಚಿಕ್ಕಬಳ್ಳಾಪುರ, ರಾಮನಗರದಲ್ಲಿ ಬೆಂಕಿ ಹಚ್ಚಿ ಕಿಡಿ
    – ಅತ್ತಿಬೆಲೆಯಲ್ಲಿ ತಮಿಳುನಾಡು ಬಸ್‍ಗೆ ತಡೆ
    – ದಕ್ಷಿಣ ಕನ್ನಡದಲ್ಲಿ ಬಂದ್ ಇಲ್ಲ

    ಕೋಲಾರ: ವಿವಿಧ ಬೇಡಿಕೆಗಳ ಈಡೆರಿಕೆಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನೀಡಿರುವ ಬಂದ್ ಗೆ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆ 5 ಗಂಟೆಯಿಂದಲೆ ಹೋರಾಟಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರು ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಸ್‍ಗಳ ಮೇಲೆ ಕಲ್ಲು ತೂರಾಟ ಮಾಡುವ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಬೆಳಗ್ಗಿನಿಂದಲೆ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ಅಟೋ, ಬಸ್ ಸಂಚಾರ ಸಂಪೂರ್ಣ ಸ್ಥಬ್ದವಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅದೇಶ ಹೊರಡಿಸಿದ್ದಾರೆ. ಮುನ್ನೆಚ್ಚರಿಜಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.

    ಈ ಮಧ್ಯೆ ತೆಲುಗು ಚಿತ್ರ ನಟ, ಎನ್‍ಟಿಆರ್ ಮೊಮ್ಮಗ ನಂದಮೂರಿ ತಾರಕ ರತ್ನ ಅವರಿಗೂ ಕರ್ನಾಟಕ ಬಂದ್ ಬಿಸಿ ತಟ್ಟಿತ್ತು. ಭಾನುವಾರದಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಕೋಲಾರಕ್ಕೆ ಆಗಮಿಸಿದ್ದರು. ಇಂದು ಬಂದ್ ವೇಳೆ ಕೋಲಾರದ ಶ್ರೀನಿವಾಸಪುರ ವೃತ್ತದಲ್ಲಿ ಅವರನ್ನ ತಡೆದು ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ತಾರಕ ರತ್ನ ಅವರು ಕಾರಿಂದ ಕೆಳಗೆ ಇಳಿದು ಕರ್ನಾಟಕ ಬಂದ್ ಗೆ ನಮ್ಮ ಕುಟುಂಬದ ಬೆಂಬಲ ಇದೆ ಎಂದು ಹೇಳಿ ಚಿಕ್ಕಬಳ್ಳಾಪುರ, ಅನಂತಪುರ ಮೂಲಕ ಆಂಧ್ರಪ್ರದೇಶಕ್ಕೆ ತೆರಳಿದ್ರು.

    ಚಿಕ್ಕಬಳ್ಳಾಪುರದಲ್ಲಿ ಬಂದ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಶಾಶ್ವತ ನೀರಾವರಿ ಹೋರಾಟಗಾರರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಳ್ಳಂಬೆಳಿಗ್ಗೆಯೇ ಪಂಜಿನ ಮೆರವಣಿಗೆ ಮೂಲಕ ಶಿಡ್ಲಘಟ್ಟ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಕಾರರು ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿದ್ರು.

    ರಾಮನಗರದಲ್ಲಿ ಬಂದ್‍ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದೆಡೆ ಪ್ರತಿಭಟನೆಗಳು ಶುರುವಾಗಿದ್ರೆ, ಮತ್ತೊಂದೆಡೆ ಕೆಎಸ್‍ಆರ್‍ಟಿಸಿ ಬಸ್‍ಗಳು ನಿರಾತಂಕವಾಗಿ ರಸ್ತೆಗಿಳಿದಿದ್ದು, ಅಂಗಡಿ ಮುಂಗಟ್ಟುಗಳು ನಿಧಾನವಾಗಿ ತೆರೆದುಕೊಳ್ತಾ ಇವೆ. ಇನ್ನೂ ಬೆಳ್ಳಂಬೆಳಿಗ್ಗೆ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ಇದೇ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆತಡೆಗೆ ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಶಾಶ್ವತ ನೀರಾವರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸದೆ ಮಲತಾಯಿ ಧೋರಣೆ ತೋರುತ್ತಿದೆ. ಕೂಡಲೇ ರಾಜ್ಯ ಸರ್ಕಾರದ ಮೇಕೆದಾಟು, ಮಹಾದಾಯಿ, ಕಳಸಾ ಬಂಡೂರಿ ನೀರಾವರಿ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸಬೇಕು ಎಂದು ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ್‍ಗೌಡ ಆಗ್ರಹಿಸಿದ್ರು.

    ವಿಜಯಪುರದಲ್ಲಿ ಬಂದ್‍ಗೆ ಪೂರ್ಣ ಬೆಂಬಲ ಸಿಕ್ಕಿದೆ. ಬಸ್ ಸಂಚಾರ ಎಂದಿನಂತೆ ಪ್ರಾರಂಭವಾಗಿತ್ತು. ಆದ್ರೆ ಬಸ್ ನಿಲ್ದಾಣಕ್ಕೆ ಲಗ್ಗೆ ಇಟ್ಟ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಬಸ್ ಸಂಚಾರ ಸ್ಥಗಿತಗೊಳಿಸಿದರಲ್ಲದೆ, ನಿಲ್ದಾಣದ ಅಂಗಡಿ ಮಂಗಟ್ಟಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದರು. ನಂತರ ನಿಲ್ದಾಣದಲ್ಲೆ ಪ್ರತಿಭಟನೆ ನಡೆಸಿದರು. ಅಲ್ಲದೆ ನಗರದ ಗಾಂಧಿಚೌಕ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣ ಹಾಗೂ ತಮಿಳುನಾಡು ಗಡಿಭಾಗವಾದ ಅತ್ತಿಬೆಲೆಯಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆನೇಕಲ್ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಿಲ್ಲಿಸಿದ್ದು, ವಾಹನ ಸಂಚಾರ ವಿರಳವಾಗಿದೆ. ದಲಿತ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ವಾಟಾಳ್ ನಾಗರಾಜ್ ಅಭಿಮಾನಿ ಬಳಗ ಹಾಗೂ ಪ್ರಜಾ ವಿಮೋಚನ ಚಳುವಳಿ ಸಂಘಟನೆಯ ಆದೂರು ಪ್ರಕಾಶ್ ಹಾಗೂ ವಾಟಳ್ ನಾಗರಾಜ್ ಅಭಿಮಾನಿ ಬಳಗದ ಸನಾವುಲ್ಲಾ ನೇತೃತ್ವದ ಕಾರ್ಯಕರ್ತರು ಆನೇಕಲ್ ಪಟ್ಟಣದಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗವಾದ ಅತ್ತಿಬೆಲೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಂಡಿದ್ದು, ತಮಿಳುನಾಡಿನ ಸಾರಿಗೆ ವಾಹನಗಳು ಕರ್ನಾಟಕಕ್ಕೆ ಪ್ರವೇಶಿಸದ ಕಾರಣ ಪ್ರಯಾಣಿಕರು ತಮಿಳುನಾಡು ಗಡಿ ಹಾಗೂ ಅತ್ತಿಬೆಲೆ ಭಾಗದಿಂದ ನಡೆದುಕೊಂಡು ಹೋಗಿ ಬಸ್‍ಗಳಲ್ಲಿ ಸಂಚರಿಸುವಂತಾಗಿದೆ.

    ಇನ್ನು ಚಿಕ್ಕಮಗಳೂರಿನಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ, ಖಾಸಗಿ ಬಸ್ ಹಾಗೂ ಆಟೋ ಸಂಚಾರ ಎಂದಿನಂತಿದೆ. ಅಂಗಡಿ, ಮುಂಗಟ್ಟುಗಳು ಎಂದಿನಂತೆ ತೆರೆದಿವೆ. ಜನಜೀವನ ಸಾಮಾನ್ಯವಾಗಿದೆ. ನಗರದಲ್ಲಿ ಪ್ರತಿಭಟನೆ ನಡೆಸ್ತಿರೋ ವಿವಿಧ ಕನ್ನಡ ಪರ ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಐ.ಜಿ.ರಸ್ತೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಣುಕು ಶವಯಾತ್ರೆ ನಡೆಸಿದ ಕಾರ್ಯಕರ್ತರು ಮೋದಿ ಹಾಗೂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಮಡಕೆ ಹಿಡಿದು ಮೆರವಣಿಗೆಯುದ್ಧಕ್ಕೂ ಶವಗಳ ಮೇಲೆ ಮಂಡಕ್ಕಿ ತೂರುತ್ತಾ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನೂ ಬಂದ್ ಹಿನ್ನಲೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಕೊಪ್ಪಳ ಹಾಗೂ ಹುಬ್ಬಳ್ಳಿಯಲ್ಲೂ ಕೂಡ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧಾರವಾಡದಲ್ಲಿ, ಬಾಗಲಕೋಟೆ, ತುಮಕೂರು ಹಾಗೂ ರಾಯಚೂರಿನಲ್ಲಿ ನೀರಸ ಪ್ರತಿಕ್ರಿಯೆ ಇದೆ. ಚಾಮರಾಜನಗರ, ಹಾವೇರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‍ಗೆ ಬೆಂಬಲ ವ್ಯಕ್ತವಾಗಿಲ್ಲ.

  • ಕರ್ನಾಟಕ ಬಂದ್: ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಗೆ ನೋಟಿಸ್

    ಕರ್ನಾಟಕ ಬಂದ್: ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಗೆ ನೋಟಿಸ್

    ಬೆಂಗಳೂರು: ರಾಜ್ಯಾದ್ಯಂತ ಕರೆ ನೀಡಿರುವ ಬಂದ್ ಗೆ ಅವಕಾಶ ಇಲ್ಲ ಎಂದು ಉತ್ತರ ವಿಭಾಗದ ಡಿಸಿಪಿ ಲಾಬೂರಾಂ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಗೆ ನೋಟಿಸ್ ನೀಡಿದ್ದಾರೆ.

    ನೋಟಿಸ್ ನಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬಂದ್‍ಗೆ ಕರೆ ನೀಡಿದವರೇ ಜವಾಬ್ದಾರರಾಗಿರುತ್ತಾರೆ. ಹೀಗಾಗಿ ಬಂದ್ ವೇಳೆ ರಾಜ್ಯದಲ್ಲಿ ಯಾವುದಾದರೂ ಅಹಿತರ ಘಟನೆಗಳು ನಡೆದರೆ ಅದಕ್ಕೆ ಬಂದ್ ಗೆ ಕರೆ ನೀಡಿರುವವರೇ ಹೊಣೆಗಾರರು ಅಂತಾ ತಿಳಿಸಲಾಗಿದೆ.

    ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ-ಕಳಸಾ ಬಂಡೂರಿ ಯೋಜನೆಯ ತ್ವರಿತ ಜಾರಿ, ಮೇಕೆದಾಟು ಯೋಜನೆ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ಹತ್ತಾರು ವಿಷಯಗಳನ್ನು ಮುಂದಿಟ್ಟುಕೊಂಡು ಇಂದು ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಬಂದ್‍ಗೆ ಕರೆ ನೀಡಿದೆ. ಆದ್ರೆ ಈ ಬಂದ್ ಗೆ ಇದೀಗ ರಾಜ್ಯದ ಬಹುತೇಕ ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ನೀರಸ ಪ್ರತಿಕ್ರಿಯೆ: ಬೆಂಗ್ಳೂರಲ್ಲಿ ಎಂದಿನಂತೆ ಬಿಎಂಟಿಸಿ ಬಸ್‍ಗಳ ಓಡಾಟ

    ಬೆಂಗಳೂರಿನಲ್ಲಿ ಈಗಾಗಲೇ ಬಿಎಸಂಟಿಸಿ ಬಸ್ ಗಳು ಸೇರಿದಂತೆ ಎಲ್ಲಾ ವಾಹನಗಳು ರಸ್ತೆಗಿಳಿದಿವೆ. ಆದ್ರೆ ಚಲನಚಿತ್ರ ಪ್ರದರ್ಶಗಳು ಇಂದು ರದ್ದಾಗುವ ಸಾಧ್ಯತೆಗಳಿವೆ.

     

     

  • ಕರ್ನಾಟಕ ಬಂದ್‍ಗೆ ನೀರಸ ಪ್ರತಿಕ್ರಿಯೆ: ಬೆಂಗ್ಳೂರಲ್ಲಿ ಎಂದಿನಂತೆ ಬಿಎಂಟಿಸಿ ಬಸ್‍ಗಳ ಓಡಾಟ

    ಕರ್ನಾಟಕ ಬಂದ್‍ಗೆ ನೀರಸ ಪ್ರತಿಕ್ರಿಯೆ: ಬೆಂಗ್ಳೂರಲ್ಲಿ ಎಂದಿನಂತೆ ಬಿಎಂಟಿಸಿ ಬಸ್‍ಗಳ ಓಡಾಟ

    – ಆಟೋ, ಟ್ಯಾಕ್ಸಿ ಸಂಚಾರ ಮಾಮೂಲು
    – ಬೆಂಗಳೂರಲ್ಲಿಂದು ಸಿನಿಮಾ ಪ್ರದರ್ಶನ ಅನುಮಾನ

    ಬೆಂಗಳೂರು: ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ-ಕಳಸಾ ಬಂಡೂರಿ ಯೋಜನೆಯ ತ್ವರಿತ ಜಾರಿ, ಮೇಕೆದಾಟು ಯೋಜನೆ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ಹತ್ತಾರು ವಿಷಯಗಳನ್ನು ಮುಂದಿಟ್ಟುಕೊಂಡು ಇಂದು ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಬಂದ್‍ಗೆ ಕರೆ ನೀಡಿದೆ.

    ಬಂದ್ ಬೇಕೆ ಬೇಡವೇ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಬಂದ್ ಹೋರಾಟದ ಭಾಗವೆಂದು ವಾದಿಸಿರುವ ಕೆಲವು ಸಂಘಟನೆಗಳು ಬೆಂಬಲ ಘೋಷಿಸಿವೆ. ಸಾರಾ ಗೋವಿಂದು ಅಧ್ಯಕ್ಷರಾಗಿರುವ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಲಾರಿ ಮಾಲೀಕರ ಸಂಘ, ಕರವೇ ಪ್ರವೀಣ್ ಶೆಟ್ಟಿ ಬಣ, ಕನ್ನಡ ಸೇನೆ, ರೈತ ಸಂಘ, ಬಯಲು ಸೀಮೆ ಹೋರಾಟಗಾರರ ಸಮಿತಿ ಬೆಂಬಲ ಘೋಷಿಸಿದೆ.

    ಆದ್ರೆ ಇವತ್ತಿನ ಬಂದ್ ಯಾಕೆ ಬೇಕು ಅನ್ನೋದು ಹಲವಾರು ಕನ್ನಡ ಪರ ಸಂಘಟನೆಗಳ ಪ್ರಶ್ನೆ. ಹೋರಾಟ ಸರಿ, ಆದ್ರೆ ಪದೇಪದೇ ಬಂದ್ ಮಾಡೋಕೆ ಇದೇನು ಹುಚ್ಚರ ಸಂತೆನಾ ಅಂತಾ ಕೆಂಡಕಾರಿವೆ. ಇವತ್ತಿನ ಬಂದ್‍ಗೆ ಕರವೇ ನಾರಾಯಣಗೌಡ ಬಣ, ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ, ಬಿಎಂಟಿಸಿ ನೌಕರರ ಸಂಘ, ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ, ಹೋಟೆಲ್ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಪೆಟ್ರೋಲ್ ಬಂಕ್ ಮಾಲೀಕರ ಸಂಘ ಬೆಂಬಲ ಸೂಚಿಸಿಲ್ಲ.

    ಬಂದ್‍ನಿಂದ ಖಾಸಗಿ ಶಾಲೆಗಳ ಸಂಘ ಹೊರಗುಳಿದಿವೆ. ಶಾಲೆಗಳು ಶುರುವಾಗಿ ಕೇವಲ ಒಂದು ವಾರವಾಗಿರೋ ಕಾರಣ ಬಂದ್‍ನಲ್ಲಿ ಭಾಗವಹಿಸಲು ಅವು ಸಿದ್ಧವಿಲ್ಲ. ಹೀಗಾಗಿ ಇವತ್ತು ಎಂದಿನಂತೆ ಶಾಲಾ-ಕಾಲೇಜುಗಳು ತೆರೆದಿರುತ್ತವೆ. ಹೀಗಾಗಿ ಎಂದಿನಂತೆ ಪೋಷಕರು ತಮ್ಮ ಮಕ್ಕಳನ್ನು ಶಾಲೆ-ಕಾಲೇಜುಗಳಿಗೆ ಕಳುಹಿಸಬಹುದು. ಆದ್ರೆ ರಾಮನಗರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಇನ್ನು ಎಂದಿನಂತೆ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳ ಓಡಾಟ ಇರಲಿದೆ. ಹೀಗಾಗಿ ಓಡಾಟಕ್ಕೆ ಜನಸಾಮಾನ್ಯರಿಗೆ ಯಾವ ತೊಂದರೆಯೂ ಇರಲ್ಲ. ಆಟೋ, ಟ್ಯಾಕ್ಸಿ ಸೇವೆ ಎಂದಿನಂತೆ ಇರಲಿದೆ. ಹೋಟೆಲ್‍ಗಳು ಓಪನ್ ಆಗಿರುತ್ತೆ. ಪೆಟ್ರೋಲ್ ಬಂಕ್ ಸೇವೆ ಎಂದಿನಂತೆ ಇರಲಿದೆ. ಆದರೆ ಚಿತ್ರಮಂದಿರಗಳಲ್ಲಿ ಇವತ್ತು ಚಿತ್ರಪ್ರದರ್ಶನ ಇರೋದು ಬಹುತೇಕ ಅನುಮಾನ. ಸರ್ಕಾರಿ ಕಚೇರಿಗಳು, ಬ್ಯಾಂಕ್, ಕೋರ್ಟ್ ಕಲಾಪಗಳು ಕೂಡಾ ಎಂದಿನಂತೆ ಸಾಗಲಿವೆ. ಅವುಗಳಿಗೆ ಬಂದ್ ಬಿಸಿ ತಟ್ಟುವ ಸಾಧ್ಯತೆ ಕಡಿಮೆ.

    ಆದರೆ ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ವಿಶ್ವವಿದ್ಯಾಲಯ ಇವತ್ತು ನಡೆಯಬೇಕಿದ್ದ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಿದೆ. ಪ್ರಥಮ ವರ್ಷದ ಡಿ.ಎಡ್ & ಡಿ.ಎಲ್.ಎಡ್ ಪರೀಕ್ಷೆಗಳು ಇವತ್ತಿನ ಮಟ್ಟಿಗೆ ರದ್ದಾಗಿದೆ. ಎರಡೂ ಪರೀಕ್ಷೆಗಳು ನಾಳೆ ನಡೆಯಲಿದೆ. ಇವತ್ತು ನಡೆಯಬೇಕಿದ್ದ ವಿಟಿಯು ಇಂಜಿನಿಯರಿಂಗ್ ಪರೀಕ್ಷೆ ಕೂಡಾ ಮುಂದೂಡಿಕೆಯಾಗಿದೆ.

  • ಕರ್ನಾಟಕ ಬಂದ್: ಎಲ್ಲೆಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ?

    ಕರ್ನಾಟಕ ಬಂದ್: ಎಲ್ಲೆಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ?

    ಬೆಂಗಳೂರು: ಸೋಮವಾರ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಕರೆ ನೀಡಿದ್ದರೂ ಕೆಲ ಜಿಲ್ಲೆಗಳ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ.

    ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಖಾಸಗಿ ಶಾಲೆಗಳು ಆಡಳಿತ ಮಂಡಳಿಗಳು ಪರಿಸ್ಥಿತಿಯನ್ನು ನೋಡಿಕೊಂಡು ರಜೆಯನ್ನು ನೀಡಲು ಮುಂದಾಗಿದೆ.

    ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ರಾಮನಗರದಲ್ಲಿ ಖಾಸಗಿ ಶಾಲೆಗಳಿಗೆ ಮಾತ್ರ ರಜೆ ಘೋಷಣೆಯಾಗಿದೆ.

    ಬೆಂಗಳೂರಿನ ಸರ್ಕಾರಿ ಶಾಲಾ ಕಾಲೇಜುಗಳಿಗೂ ರಜೆ ಇದೆಯೋ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ. ಪಬ್ಲಿಕ್ ಟಿವಿ ಬೆಂಗಳೂರು ಡಿಸಿ ಶಂಕರ್ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿತ್ತು. ಆದರೆ ಶಂಕರ್ ಅವರ ಮೊಬೈಲ್ ಸ್ವಿಚ್ ಆಫ್ ಆದ ಹಿನ್ನೆಲೆಯಲ್ಲಿ ಗೊಂದಲ ಮುಂದುವರಿದಿದೆ.

    ಇದನ್ನೂ ಓದಿ: ಕರ್ನಾಟಕ ಬಂದ್: ಸೋಮವಾರ ಏನಿರುತ್ತೆ? ಏನ್ ಇರಲ್ಲ ಇಲ್ಲಿದೆ ಪೂರ್ಣ ಮಾಹಿತಿ

  • ಸೋಮವಾರದ ಕರ್ನಾಟಕ ಬಂದ್ ಯಶಸ್ವಿಯಾಗಲ್ಲ: ಸಿಎಂ

    ಸೋಮವಾರದ ಕರ್ನಾಟಕ ಬಂದ್ ಯಶಸ್ವಿಯಾಗಲ್ಲ: ಸಿಎಂ

    ಹುಬ್ಬಳ್ಳಿ: ಸೋಮವಾರ ನಡೆಯುವ ಕರ್ನಾಟಕ ಬಂದ್ ಯಶಸ್ವಿಯಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಮಾಧ್ಯಮಗಳು ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿ ವಿಚಾರ ಮತ್ತು ಬಯಲು ಸೀಮೆ ಕುಡಿಯುವ ನೀರು ಸೇರಿದಂತೆ ಇತರ ಬೇಡಿಕೆ ಈಡೇರಿಸಿ ನಾಳೆ ಕನ್ನಡಪರ ಸಂಘಟನೆಗಳು ನಡೆಸುವ ಬಂದ್ ಕರೆ ನೀಡಿದ ಬಗ್ಗೆ ಪ್ರಶ್ನಿಸಿದ್ದಕ್ಕೆ ಈ ಬಂದ್ ಯಶಸ್ವಿಯಾಗುವುದಿಲ್ಲ ಎಂದು  ಸಿಎಂ ಉತ್ತರಿಸಿದರು.

    ಅಮಿತ್ ಶಾ ವಿರುದ್ಧ ಗರಂ: ಗಾಂಧೀಜಿಯವರನ್ನು ಚತುರ ವರ್ತಕ ಎಂದು ಕರೆದಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಗರಂ ಆದ ಸಿಎಂ ಸಿದ್ದರಾಮಯ್ಯ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಟ ನಡೆಸಿದ ಗಾಂಧೀಜಿಯ ಬಗ್ಗೆ ಅವರಿಗೆ ಗೊತ್ತಿಲ್ವಾ? ಇಡೀ ರಾಷ್ಟ್ರಕ್ಕೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿದ್ದಾರೆ. ಗಾಂಧೀಜಿಯವರ ಬಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಅಮಿತ್ ಶಾ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.

    ನಮ್ಮಲ್ಲಿ ಅವಕಾಶವಿದೆ: ಗೋಹತ್ಯೆ ನಿಷೇಧ ಕಾನೂನು ಜಾರಿ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು ಗೋಹತ್ಯೆ ಆಯಾ ಆಯಾ ರಾಜ್ಯಕ್ಕೆ ಸಂಬಂಧಪಟ್ಟಿರುತ್ತದೆ. ವಯಸ್ಸಾದ ಗೋವುಗಳನ್ನು ಯಾರು ಸಾಕುತ್ತಾರೆ, ವಯಸ್ಸಾದ ಗೋವುಗಳ ಹತ್ಯೆಗೆ ನಮ್ಮಲ್ಲಿ ಅವಕಾಶವಿದೆ ಎಂದು ಹೇಳಿದರು.

    ಜಿಎಸ್‍ಟಿ ಯಾವ ಯಾವ ಆಹಾರ ಧಾನ್ಯಗಳ ಮೇಲೆ ಹಾಕಲಾಗುತ್ತದೆ ನೋಡಬೇಕು. ಇದು ಎಷ್ಟರ ಮಟ್ಟಿಗೆ ಜನ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕು ಎಂದು ತಿಳಿಸಿದರು.

    ಇದನ್ನೂ ಓದಿ: ಕರ್ನಾಟಕ ಬಂದ್: ಸೋಮವಾರ ಏನಿರುತ್ತೆ? ಏನ್ ಇರಲ್ಲ ಇಲ್ಲಿದೆ ಪೂರ್ಣ ಮಾಹಿತಿ

  • ಕರ್ನಾಟಕ ಬಂದ್: ಸೋಮವಾರ ಏನಿರುತ್ತೆ? ಏನ್ ಇರಲ್ಲ ಇಲ್ಲಿದೆ ಪೂರ್ಣ ಮಾಹಿತಿ

    ಕರ್ನಾಟಕ ಬಂದ್: ಸೋಮವಾರ ಏನಿರುತ್ತೆ? ಏನ್ ಇರಲ್ಲ ಇಲ್ಲಿದೆ ಪೂರ್ಣ ಮಾಹಿತಿ

    ಬೆಂಗಳೂರು: ಕೋಲಾರ, ಚಿಕ್ಕಬಳ್ಳಾಪುರಕ್ಕೆ ಶಾಶ್ವತ ನೀರಾವರಿ ಮತ್ತು ಕಳಸ ಬಂಡೂರಿ ಯೋಜನೆಗೆ ಆಗ್ರಹಿಸಿ ಕೆಲ ಕನ್ನಡ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ಆದರೆ ಕೆಲ ಸಂಘಟನೆಗಳು ಬಂದ್‍ನಿಂದಾಗಿ ನಷ್ಟ ಉಂಟಾಗುತ್ತದೆ ಎಂದು ಹೇಳಿ ಬೆಂಬಲ ನೀಡದೇ ಇರಲು ನಿರ್ಧರಿಸಿದೆ. ಹೀಗಾಗಿ ಸೋಮವಾರ ಏನು ಇರುತ್ತೆ? ಏನ್ ಇರಲ್ಲ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

    ಕರ್ನಾಟಕ ಬಂದ್ ಹಿನ್ನೆಲೆ ಸೋಮವಾರ ನಡೆಯಬೇಕಿದ್ದ ಬೆಂಗಳೂರು ವಿವಿಯ ಸ್ನಾತಕೋತ್ತರ ಪರೀಕ್ಷೆಗಳು ಮುಂದೂಡಿಕೆಯಾಗಿದೆ ಎಂದು ಪಬ್ಲಿಕ್ ಟಿವಿಗೆ ವಿವಿ ಮೌಲ್ಯಮಾಪನ ಕುಲಪತಿ ತಿಳಿಸಿದ್ದಾರೆ.

    ಏನೇನು ಇರುತ್ತೆ?
    ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಸಂಚಾರ ಯಥಾಸ್ಥಿತಿ ಇರುತ್ತದೆ. ಆಟೋ, ಟ್ಯಾಕ್ಸಿ, ಮೆಟ್ರೋ ಸೇವೆ, ಎಪಿಎಂಸಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಮೆಡಿಕಲ್ ಸ್ಟೋರ್‍ಗಳು, ಆಸ್ಪತ್ರೆಗಳು ತೆರೆಯಲಿವೆ. ಹೋಟೆಲ್, ಮಾರುಕಟ್ಟೆಗಳು ತೆರೆಯಲಿದ್ದು, ಪೆಟ್ರೋಲ್ ಬಂಕ್‍ಗಳಲ್ಲಿ ಪೆಟ್ರೋಲ್ ಸಿಗಲಿದೆ. ಸರ್ಕಾರಿ ಶಾಲೆ, ಖಾಸಗಿ ಶಾಲೆಗಳಿಗೆ ರಜೆಯಿಲ್ಲ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ

    ಏನೇನು ಇರಲ್ಲ?
    ಚಿತ್ರಮಂದಿರಗಳಲ್ಲಿ ಪ್ರದರ್ಶನ ಸ್ಥಗಿತವಾಗಲಿದ್ದು, ಮಲ್ಟಿಪ್ಲೆಕ್ಸ್ ಗಳಲ್ಲೂ ಪ್ರದರ್ಶನ ರದ್ದಾಗಲಿದೆ. ಕೆಲವೊಂದು ಖಾಸಗಿ ಶಾಲೆಗಳು ರಜೆ ಸಾಧ್ಯತೆ ನೀಡುವ ಸಾಧ್ಯತೆ ಇದೆ. ಆಟೋ, ಕ್ಯಾಬ್‍ನ ಕೆಲವು ಸಂಘಟನೆ ಬೆಂಬಲ ನೀಡಿದ್ದರಿಂದ ಈ ಸೇವೆಯಲ್ಲೂ ವ್ಯತ್ಯಯವಾಗಲಿದೆ.

    ನಾಳೆ ಏನಾಗಬಹುದು?
    ಬಂದ್, ಪ್ರತಿಭಟನೆ ವೇಳೆ ಅಹಿತಕರ ಘಟನೆಯಾದರೆ ಬಸ್ ಸಂಚಾರ ಮತ್ತು ಮೆಟ್ರೋ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಕೆಲವೊಂದು ಖಾಸಗಿ ಶಾಲೆಗಳು ರಜೆ ಘೋಷಿಸುವ ಸಾಧ್ಯತೆಯಿದೆ.

    ಬಂದ್‍ಗೆ ಯಾರು ಬೆಂಬಲಿಸಿದ್ದಾರೆ?
    ಕರ್ನಾಟಕ ವಾಟಾಳ್ ಪಕ್ಷ, ಪ್ರವೀಣ್ ಶೆಟ್ಟಿ ಕರವೇ ಬಣ, ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್‍ಕುಮಾರ್ ಅಭಿಮಾನಿಗಳ ಸಂಘ,ಲಾರಿ ಮಾಲೀಕರ ಸಂಘ, ರೈತ ಸಂಘ, ಶಾಶ್ವತ ನೀರಾವರಿ ಹೋರಾಟ ಸಮಿತಿ

    ಬಂದ್‍ಗೆ ಯಾರ ಬೆಂಬಲವಿಲ್ಲ?
    ನಾರಾಯಣ ಗೌಡರ ಕರವೇ ಬಣ, ಹೋಟೆಲ್ ಮಾಲೀಕರ ಸಂಘ, ಟ್ಯಾಕ್ಸಿ, ಆಟೋ ಚಾಲಕರ, ಮಾಲೀಕರ ಸಂಘ, ಪೆಟ್ರೋಲ್ ಬಂಕ್ ಮಾಲೀಕರ ಸಂಘ, ಖಾಸಗಿ ಶಾಲೆಗಳ ಒಕ್ಕೂಟ, ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನೌಕರರ ಸಂಘ ಬೆಂಬಲ ನೀಡಿಲ್ಲ.

    ಇದನ್ನೂ ಓದಿ: ಸೋಮವಾರ ಬಂದ್ ಆಗೇ ಆಗುತ್ತೆ, ಬಸ್ ಸಂಚಾರ, ಹೋಟೆಲ್ ತೆರೆಯಲು ಬಿಡಲ್ಲ: ವಾಟಾಳ್

  • ಸೋಮವಾರ ಬಂದ್ ಆಗೇ ಆಗುತ್ತೆ, ಬಸ್ ಸಂಚಾರ, ಹೋಟೆಲ್ ತೆರೆಯಲು ಬಿಡಲ್ಲ: ವಾಟಾಳ್

    ಸೋಮವಾರ ಬಂದ್ ಆಗೇ ಆಗುತ್ತೆ, ಬಸ್ ಸಂಚಾರ, ಹೋಟೆಲ್ ತೆರೆಯಲು ಬಿಡಲ್ಲ: ವಾಟಾಳ್

    ಬೆಂಗಳೂರು: ರಾಜ್ಯದ ಜನರಿಗೆ, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹಾಗೂ ನೆಲ-ಜಲ, ನಾಡು-ನುಡಿ ರಕ್ಷಣೆಗಾಗಿ ಅನೇಕ ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಸೋಮವಾರ ನಡೆಯುವ ಬಂದ್ ಗೆ ಬೆಂಬಲ ನೀಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ ನಿಲ್ಲಿಸಲು ಕೆಲವರು ಪಿತೂರಿ ಮಾಡುತ್ತಿದ್ದಾರೆ. ಅವರಿಗೆ ಭಯವಿದೆ, ಎಲ್ಲಿ ಮುಂದೆ ಪ್ರಾದೇಶಿಕ ಪಕ್ಷ ಕಟ್ತಾರೆ ಅಂತಾ. ನಾನು ಇದಕ್ಕೆಲ್ಲ ಬಗ್ಗಲ್ಲ, ಬಂದ್ ನಡೆಸೇ ನಡೆಸ್ತೀವಿ. ಕೆಲ ಸಂಘಟನೆಗಳ ವಿರೋಧ ಇದೆ. ಬಂದ್ ಆದ್ರೇ ಏನಾಗಿ ಹೋಗುತ್ತೆ. ಬಂದ್ ವಾಪಸು ಪಡೆದುಕೊಳ್ಳುವ ಮಾತೇ ಇಲ್ಲ. ಹೀಗಾಗಿ ನಾಳೆ ಬಂದ್ ಆಗೇ ಆಗುತ್ತೆ. ಬಸ್ ಸಂಚಾರ, ಹೋಟೆಲ್ ತೆರೆಯಲು ಬಿಡಲ್ಲ ಅಂತಾ ವಾಟಾಳ್ ಸ್ಪಷ್ಟಪಡಿಸಿದ್ದಾರೆ.

    ಬಳಿಕ ಸಾರಿಗೆ ನೌಕರರ ಸಂಘದ ಅನಂತ್ ಸುಬ್ಬರಾವ್ ಹಾಗು ನಾಗರಾಜ್ ವಿರುದ್ಧ ಕಿಡಿಕಾರಿದ ವಾಟಾಳ್ ನಾಗರಾಜ್, ನನ್ನ ಕರೆಯನ್ನು ಇವರು ಸ್ವೀಕರಿಸುತ್ತಿಲ್ಲ. ನಾನು ಅವರ ಹೋರಾಟಕ್ಕೆ ಸಾಕಷ್ಟು ಬೆಂಬಲ ನೀಡಿದ್ದೇನೆ. ಆದ್ರೆ ಈಗ ನನ್ನಂಥವನ ಕರೆಯನ್ನು ಸ್ಪೀಕರಿಸಲ್ಲ. ನಾಳೆ ಬಸ್ ಸಂಚಾರಕ್ಕೂ ಬಿಡಲ್ಲ ಅಂತಾ ಹೇಳಿದರು.

    ಮಾಧ್ಯಮದ ವಿರುದ್ಧ ಕಿಡಿ: ಬಂದ್ ಗೆ ಕೆಲ ಸಂಘಟನೆಗಳ ವಿರೋಧವಿದೆ. ವಿರೋಧಿಸುವ ಸಂಘಟನೆಗಳು ಕೆಲ ಸಣ್ಣಪುಟ್ಟ ಹೇಳಿಕೆಗಳನ್ನು ಕೊಟ್ಟರೆ ಮಾಧ್ಯಮದವರು ಅದನ್ನೇ ದೊಡ್ಡದು ಮಾಡುತ್ತೀರಿ. ಒಟ್ಟಿನಲ್ಲಿ ಬಂದ್ ಗೆ ವಿರೋಧ ಮಾಧ್ಯಮ ಸೃಷ್ಠಿ ಅಂತಾ ಮಾಧ್ಯಮದ ಮೇಲೆ ಗೂಬೆ ಕೂರಿಸಿದರು.

  • ಕರ್ನಾಟಕ ಬಂದ್: ಯಾರು ಬೆಂಬಲ ನೀಡಿದ್ದಾರೆ? ಯಾರು ನೀಡಿಲ್ಲ? ಇನ್ನೂ ನಿರ್ಧಾರ ಪ್ರಕಟಿಸದ ಸಂಘಟನೆಗಳು ಯಾವುವು?

    ಕರ್ನಾಟಕ ಬಂದ್: ಯಾರು ಬೆಂಬಲ ನೀಡಿದ್ದಾರೆ? ಯಾರು ನೀಡಿಲ್ಲ? ಇನ್ನೂ ನಿರ್ಧಾರ ಪ್ರಕಟಿಸದ ಸಂಘಟನೆಗಳು ಯಾವುವು?

    ಬೆಂಗಳೂರು: ರಾಜ್ಯದ ಜನರಿಗೆ, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹಾಗೂ ನೆಲ-ಜಲ, ನಾಡು-ನುಡಿ ರಕ್ಷಣೆಗಾಗಿ ಅನೇಕ ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಇದೇ ಜೂನ್ 12 ಕ್ಕೆ ಕನ್ನಡ ಒಕ್ಕೂಟ ರಾಜ್ಯ ಬಂದ್‍ಗೆ ಕರೆ ನೀಡಿದೆ. ಬಂದ್ ಗೆ ಬೆಂಬಲಿಸಿ ಅಂತಾ ವಾಟಾಳ್ ನಾಗರಾಜ್ ಬೀದಿ ಬೀದಿ ಸುತ್ತುತ್ತಿದ್ರೆ, ಬಂದ್‍ನಿಂದ ಜನರಿಗೆ ತೊಂದರೆಯಾಗುತ್ತೆ ಅಂತಾ ಕೆಲ ಕನ್ನಡ ಪರ ಸಂಘಟನೆಗಳು ಬಂದ್ ವಿರೋಧಿಸಿದ್ದಾರೆ.

    ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶ, ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಗಡೀಪಾರು, ಮೇಕೆದಾಟು, ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ 12 ರಂದು ಬಂದ್ ನಡೆಸಲು ಕನ್ನಡ ಒಕ್ಕೂಟ ಮುಂದಾಗಿದೆ. ಶುಕ್ರವಾರದಂದು ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಬೀದಿ ಬೀದಿ ಸುತ್ತಿ ಬಂದ್‍ಗೆ ಬೆಂಬಲಿಸಿ ಅಂತಾ ಪ್ರಚಾರ ಮಾಡಿದ್ರು. ಬಂದ್ ಮಾಡಿದ್ರೇನೇ ಸರ್ಕಾರದ ಗಮನಕ್ಕೆ ಬರೋದು. ಬಂದ್ ಮಾಡಿದ್ರೆ ಏನೂ ನಷ್ಟವಾಗಿಲ್ಲ. ಜನರೇ ಸ್ವಪ್ರೇರಣೆಯಿಂದ ಬೆಂಬಲ ನೀಡ್ತಾರೆ. ಹಲವು ಕನ್ನಡ ಪರ ಸಂಘಟನೆಗಳು ಸೇರಿ ಬಂದ್‍ಗೆ ಕರೆ ನೀಡಿದ್ದೇವೆ, ಇದು ಯಶಸ್ವಿಯಾಗುತ್ತೆ ಅಂತಾ ವಾಟಾಳ್ ಹೇಳಿದ್ರು.

    ಒಂದು ಕಡೆ ವಾಟಾಳ್ ನಾಗರಾಜ್ ಬೆಂಬಲಿಗರು ಬಂದ್‍ಗೆ ಕರೆ ನೀಡಿದ್ರೆ, ಮತ್ತೊಂದೆಡೆ ಕೆಲ ಕನ್ನಡ ಪರ ಸಂಘಟನೆಗಳಿಂದ ಬಂದ್‍ಗೆ ವಿರೋಧ ವ್ಯಕ್ತವಾಗಿದೆ. ಬಂದ್‍ನಿಂದ ರಾಜ್ಯದ ಬೊಕ್ಕಸಕ್ಕೆ ಬರೆ ಬೀಳುತ್ತೆ. ನಮ್ಮ ರಾಜ್ಯಕ್ಕೆ ಇದ್ರಿಂದ ನಷ್ಟವುಂಟಾಗೋದು. ಇದರ ಬದಲು ಸತ್ಯಾಗ್ರಹ ಮಾಡೋಣ. ಬೆರಳೆಣಿಕೆಯಷ್ಟು ಸಂಘಟನೆಗಳು ಮಾತ್ರ ಬಂದ್‍ಗೆ ಬೆಂಬಲ ನೀಡುತ್ತಿದ್ದು, ಸುಮಾರು 100 ಕನ್ನಡ ಪರ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡುತ್ತಿಲ್ಲ. ನಾವೂ ಕೂಡ ನೀರಿಗಾಗಿ, ರೈತರ ಪರ ಹೋರಾಡುತ್ತೇವೆ. ಆದ್ರೆ ಈ ರೀತಿ ಬಂದ್ ಮಾಡೋದಿಲ್ಲ. ಬದಲಾಗಿ ಜೂನ್ 11 ರಂದು ಟೌನ್ ಹಾಲ್ ಮುಂದೆ ಸತ್ಯಾಗ್ರಹ ಮಾಡ್ತೀವಿ. ಆದ್ರೆ ಬಂದ್‍ಗೆ ನಮ್ಮ ಬೆಂಬಲವಿಲ್ಲ ಅಂತಾ ಕರ್ನಾಟಕ ಯುವಶಕ್ತಿ ರಾಜ್ಯಧ್ಯಕ್ಷ ಕೆಎನ್ ಲಿಂಗೇಗೌಡ ಹೇಳಿದ್ರು.

    ಬಂದ್‍ಗೆ ಯಾರೆಲ್ಲಾ ಬೆಂಬಲವಿದೆ?: ಡಾ. ರಾಜ್ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಳಗ), ಕನ್ನಡ ಸೇನೆ, ಕರುನಾಡ ಜಾಗೃತಿ ವೇದಿಕೆ, ವಾಟಾಳ್ ನಾಗರಾಜ್, ಹೋಟೆಲ್ ಮಾಲೀಕರ ಸಂಘಟನೆ, ಮಾಲ್ ಗಳು, ಅಂಗಡಿ ಮುಂಗಟ್ಟುಗಳು, ಚಿತ್ರಮಂದಿರಗಳು, ತರಕಾರಿ ಮಾರುಕಟ್ಟೆ ಹಾಗೂ ಇನ್ನೂ ಹಲವು ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿವೆ.

    ಬಂದ್‍ಗೆ ಯಾರ ಬೆಂಬಲವಿಲ್ಲ?: ಕರ್ನಾಟಕ ಯುವಶಕ್ತಿ, ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆ, ಅಖಿಲ ಭಾರತ ಕಾರ್ಮಿಕ ಕ್ರಿಯಾ ಹಿತರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ಕನ್ನಡ ಸೇನೆ ಹಾಗೂ ಇತರರು ಬಂದ್‍ಗೆ ಬೆಂಬಲ ನೀಡಿಲ್ಲ.

    ಇನ್ನೂ ನಿರ್ಧಾರ ತೆಗೆದುಕೊಳ್ಳದ ಸಂಸ್ಥೆಗಳು: ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಆಟೋ ಸಂಘಟನೆಗಳು, ಟ್ಯಾಕ್ಸಿ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಬೇಕೋ ಬೇಡ್ವೋ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

    ನಮಗೆ ಬಂದ್ ಬೇಕಾ?: ಸಮಾನ್ಯ ಜನರಿಗೆ ಕಾಡುತ್ತಿರುವುದು ಬಂದ್ ಬೇಕಾ? ಎಂಬ ಪ್ರಶ್ನೆ. ವಾರದ ಮೊದಲ ದಿನವೇ ಬಂದ್ ಆದ್ರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕೆಲಸಕ್ಕೆ ಹೊಗೋದಕ್ಕೆ, ಶಾಲೆಗೆ ಹೋಗುವ ಮಕ್ಕಳಿಗೆ, ದೂರದ ಊರಿಂದ ಬರುವ ಪ್ರಯಾಣಿಕರಿಗೆ, ಹೋಟೆಲ್ ಊಟವನ್ನೇ ನಂಬಿಕೊಂಡಿರೋ ಎಷ್ಟೋ ಜನಕ್ಕೆ ಈ ಬಂದ್‍ನಿಂದ ಸಮಸ್ಯೆಯಾಗುತ್ತೆ. ಜೊತೆಗೆ ಕನ್ನಡ ಸಂಘಟನೆಯಲ್ಲಿಯೇ ಬಂದ್ ಗೆ ಪರ ವಿರೋಧ ವ್ಯಕ್ತವಾಗಿರೋದ್ರಿಂದ ಈ ಬಂದ್ ಬೇಕಾ? ಎಂಬ ಪ್ರಶ್ನೆ ಕೇಳಿಬರುತ್ತಿದೆ.

  • ವರ್ಷಕ್ಕೆ 8-10 ಬಾರಿ ಬಂದ್ ಮಾಡಿದ್ರೆ ಆಗೋ ನಷ್ಟಕ್ಕೆ ಹೊಣೆ ಯಾರು: ಕರ್ನಾಟಕ ಯುವ ಶಕ್ತಿ ವೇದಿಕೆ

    ವರ್ಷಕ್ಕೆ 8-10 ಬಾರಿ ಬಂದ್ ಮಾಡಿದ್ರೆ ಆಗೋ ನಷ್ಟಕ್ಕೆ ಹೊಣೆ ಯಾರು: ಕರ್ನಾಟಕ ಯುವ ಶಕ್ತಿ ವೇದಿಕೆ

    ಬೆಂಗಳೂರು: ಜೂನ್ 12 ರ ಕರ್ನಾಟಕ ಬಂದ್‍ಗೆ ನಮ್ಮ ಬೆಂಬಲವಿಲ್ಲ. ಇದಕ್ಕೆ ನಮ್ಮ ವಿರೋಧವಿದೆ ಎಂದು ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ಲಿಂಗೇಗೌಡ ಹೇಳಿದ್ದಾರೆ.

    ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವರ್ಷಕ್ಕೆ 8-10 ಬಾರಿ ಕರ್ನಾಟಕ ಬಂದ್‍ಗೆ ಕರೆ ಮಾಡುವುದರಿಂದ ಜನಸಾಮಾನ್ಯರಿಗೆ ಆಗುವ ನಷ್ಟಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ ಅವರು, ‘ಬಂದ್ ಬಂದ್ ಬಂದ್’ ಅಂತಾ ಮೂರು ಸಾರಿ ಹೇಳಿದ್ರೆ ಎಲ್ಲರೂ ಜೊತೆಗಿದ್ದಾರೆ  ಅಂದುಕೊಂಡರೆ  ಆಗಲ್ಲ, ಕೇವಲ ನಾಲ್ಕು ಜನರಿಗೆ ಬಂದ್ ಕರೆ ಕೊಟ್ಟರೆ ಸಾಲದೆಂದು ಆಕ್ರೋಶ ವ್ಯಕ್ತಪಡಿಸಿದರು.

    ಜೂನ್ 11 ರಂದು ಬಯಲು ಸೀಮೆ ಶಾಶ್ವತ ನೀರಾವರಿ ಯೋಜನೆಗೆ ಬೆಂಬಲ ಸೂಚಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಟೌನ್ ಹಾಲ್ ಬಳಿ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಹೇಳಿದರು.

    ಬಂದ್ ಮಾಡ್ತೀವಿ: ಏನೇ ಆಗಲಿ ಜೂನ್ 12ರಂದು ಕರ್ನಾಟಕ ಬಂದ್ ಮಾಡೇ ಮಾಡ್ತೀವಿ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ. ಅನೇಕ ಬೇಡಿಕೆಗಳನ್ನ ಈಡೇರಿಸಲು ಬಂದ್ ಅತ್ಯಗತ್ಯ ಅಂತಾ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

    ಇದನ್ನೂ ಓದಿ: ಜೂನ್ 12 ರಂದು ಈ ಎಲ್ಲ ಕಾರಣಕ್ಕಾಗಿ ಬಂದ್ ಅಗತ್ಯ: ವಾಟಾಳ್ ನಾಗರಾಜ್

  • ಜೂನ್ 12 ರಂದು ಈ ಎಲ್ಲ ಕಾರಣಕ್ಕಾಗಿ ಬಂದ್ ಅಗತ್ಯ: ವಾಟಾಳ್ ನಾಗರಾಜ್

    ಜೂನ್ 12 ರಂದು ಈ ಎಲ್ಲ ಕಾರಣಕ್ಕಾಗಿ ಬಂದ್ ಅಗತ್ಯ: ವಾಟಾಳ್ ನಾಗರಾಜ್

    ಬೆಂಗಳೂರು: ಜೂನ್ 12 ರಂದು ಕರ್ನಾಟಕ ಹಾಗೂ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಂದ್ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಏಳು, ಎಂಟು ಬಾರಿ ಬಂದ್ ಮಾಡಲಾಗಿತ್ತು. ಆದರೆ ಆ ಬಂದ್‍ನಲ್ಲಿ ಯಾವುದೇ ರೀತಿಯ ನಷ್ಟ ಉಂಟಾಗಿಲ್ಲ. ಮಹಾದಾಯಿ, ಕಳಸಬಂಡೂರಿ ಯೋಜನೆ ಆಗ್ರಹಿಸಿ ಮತ್ತು ಬೆಳಗಾವಿ ಎಂಇಎಸ್ ಪುಂಡರ ಹಾವಳಿ ಹತ್ತಿಕ್ಕಲು ಬಂದ್ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

    ನಾಳೆ ದಿನ ಮೆರವಣಿಗೆ ಆಥವಾ ಸತ್ಯಾಗ್ರಹ ಮಾಡಿದ್ರೂ ಕೂಡ ಅದನ್ನೂ ಯಾಕೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೆ. ಬೆಂಬಲ ನೀಡದೇ ಇರುವವವರು ಬೆಂಬಲ ನೀಡುವಂತೆ ಮನವಿ ಮಾಡುತ್ತೇವೆ. ಇದು ನಮ್ಮ ಹೋರಾಟ, ಜನರು ಪ್ರೀತಿಯಿಂದ ಬಂದ್‍ಗೆ ಬೆಂಬಲ ವ್ಯಕ್ತಪಡಿಸಬೇಕು. ಇಂದು ಎಲ್ಲಾ ಮಾಲ್‍ಗಳಿಗೆ ತೆರಳಿ ಬಂದ್‍ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

    ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ. ಆರ್ ಕುಮಾರ್ ಮಾತನಾಡಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಹೋರಾಟ ನಡೆಯುತ್ತಿದೆ. ಮಹಾರಾಷ್ಟ್ರದ ಎಂಇಎಸ್ ಪುಂಡರನ್ನು ಹೊಡೆದು ಓಡಿಸಬೇಕು. ಅಲ್ಲದೇ ರೈತರ ಸಾಲಮನ್ನಾ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸೋಮವಾರ ಬಂದ್‍ಗೆ ಕರೆ ನೀಡಲಾಗಿದೆ ಎಂದರು.