Tag: ಕರ್ನಾಟಕ ಬಂದ್

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಬೆಂಬಲವಿಲ್ಲದಿದ್ರೂ ಸರ್ಕಾರಿ ಬಸ್ ಸೇವೆ ಸ್ಥಗಿತ- ಜನರ ಆಕ್ರೋಶ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಬೆಂಬಲವಿಲ್ಲದಿದ್ರೂ ಸರ್ಕಾರಿ ಬಸ್ ಸೇವೆ ಸ್ಥಗಿತ- ಜನರ ಆಕ್ರೋಶ

    ಮಂಗಳೂರು: ಮಹದಾಯಿ ವಿಚಾರದ ಹಿನ್ನೆಲೆಯಲ್ಲಿ ಇಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ ಬೆಂಬಲ ನೀಡದಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸೇವೆ ಬಂದ್ ಆಗಿದೆ.

    KSRTC ಅಧಿಕಾರಿಗಳ ಸೂಚನೆಯ ಮೇರೆಗೆ ಬಸ್ ಬಂದ್ ಆಗಿದ್ದು, ಬಂದ್ ಗೆ ಬೆಂಬಲ ಇಲ್ಲದಿದ್ದರೂ ಅಧಿಕಾರಿಗಳು ಬಸ್ ಬಂದ್ ಮಾಡಿರುವುದರಿಂದ ಅವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಅಧಿಕಾರಿಗಳ ಈ ಸೂಚನೆಯಿಂದ ಸರ್ಕಾರಿ ಬಸ್ ಬಂದ್ ಆಗಿದ್ದು, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲೂ ಸರ್ಕಾರಿ ಬಸ್ ಸೇವೆ ಬಂದ್ ಆಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡುತ್ತಿದ್ದು, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

    ಮಂಗಳೂರಿನಲ್ಲಿ ಕರ್ನಾಟಕ ಬಂದ್ ಗೆ ಬೆಂಬಲ ನೀಡಿಲ್ಲ. ಇಲ್ಲಿನ ವರ್ತಕರಿಂದ ನೋ ಬಂದ್ ಡೇ ಆಚರಣೆ ಮಾಡಲಾಗ್ತಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳ ಮುಂದೆ ಬಂದ್ ಇಲ್ಲ ಎಂಬ ಪೋಸ್ಟರ್ ಹಾಕಲಾಗಿದೆ. ನಮಗೆ ನೀರಿಲ್ಲ, ನಮಗೆ ನೋವಿದೆ. ಹಾಗಂತ ಪದೇ ಪದೇ ಬಂದ್ ಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೀಬೇಡಿ. ಈ ಬಾರಿ ಬಂದ್‍ಗೆ ನಮ್ಮ ಬೆಂಬಲ ಇಲ್ಲ ಎಂದು ಪೋಸ್ಟರ್ ಅಂಟಿಸಲಾಗಿದೆ. ಮಂಗಳೂರಿನಲ್ಲಿ ಜನಜೀವನ ಎಂದಿನಂತೆ ಆರಂಭವಾಗಿದೆ. ಬೆಳಗ್ಗೆ 11 ಗಂಟೆಗೆ ಕರವೇ ಯಿಂದ ರೈಲ್ವೆ ತಡೆದು ಸಾಂಕೇತಿಕ ಪ್ರತಿಭಟನೆ ನಡೆಯಲಿದೆ. ಇದನ್ನು ಓದಿ: ಮಂಗಳೂರು, ಕೊಪ್ಪಳ, ವಿಜಯಪುರದಲ್ಲಿ ಬಂದ್ ಗೆ ಇಲ್ಲ ಬೆಂಬಲ- ಜನಜೀವನ ಎಂದಿನಂತೆ ಆರಂಭ

  • ಕರ್ನಾಟಕ ಬಂದ್- ಸರ್ಕಾರಿ ವೈದ್ಯರಿಗೆ ರಜೆ ಇಲ್ಲ, ಎಲ್ರೂ ತಪ್ಪದೆ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ ಸೂಚನೆ

    ಕರ್ನಾಟಕ ಬಂದ್- ಸರ್ಕಾರಿ ವೈದ್ಯರಿಗೆ ರಜೆ ಇಲ್ಲ, ಎಲ್ರೂ ತಪ್ಪದೆ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ ಸೂಚನೆ

    ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಇಂದು ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದು, ಇಂದು ಎಲ್ಲಾ ಸರ್ಕಾರಿ ವೈದ್ಯರ ರಜೆಯನ್ನು ರದ್ದುಗೊಳಿಸಲಾಗಿದೆ.

    ಎಲ್ಲರೂ ತಪ್ಪದೆ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆಯನ್ನು ನೀಡಿದೆ. ಬಂದ್ ವೇಳೆ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಅಹಿತಕರ ಘಟನೆಗಳು ನಡೆದಾಗ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಹಾಗಾಗಿ ಯಾರೂ ರಜೆ ಹಾಕುವುಂತಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಇದನ್ನು ಓದಿ: ಮಹದಾಯಿಗಾಗಿ ಕರ್ನಾಟಕ ಬಂದ್- ರಸ್ತೆಗಿಳಿಯದ BMTC, KSRTC ಬಸ್

  • ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ- ಬಸ್ ನಿಲ್ಲಿಸಿದ್ದಕ್ಕೆ ಆಕ್ರೋಶ

    ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ- ಬಸ್ ನಿಲ್ಲಿಸಿದ್ದಕ್ಕೆ ಆಕ್ರೋಶ

    ಮೈಸೂರು: ಮಹದಾಯಿಗಾಗಿ ಇಂದು ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸಂಸದ ಪ್ರತಾಪ್ ಸಿಂಹ ದಿಢೀರ್ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಸ್ ನಿಲ್ಲಿಸಿದ್ದಕ್ಕೆ ಪೊಲೀಸರಿಂದ ಪ್ರತಾಪ್ ಸಿಂಹ ಮಾಹಿತಿ ಕೇಳಿದ್ರು. ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಕುಳಿತಿದ್ದ ಪ್ರಯಾಣಿಕರನ್ನ ಮಾತನಾಡಿಸಿ, ಜನರ ಸಮಸ್ಯೆ ಆಲಿಸಿದ್ರು. ಸ್ಥಳದಲ್ಲೇ ಅಧಿಕಾರಿಗಳನ್ನ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡ್ರು. ಯಾರೂ ಪ್ರತಿಭಟನೆ ಮಾಡುತ್ತಿಲ್ಲ, ಯಾಕಾಗಿ ಬಸ್ ನಿಲ್ಲಿಸಿದ್ದೀರಿ ಅಂತ ಅಧಿಕಾರಿಗಳಿಗೆ ಪ್ರಶ್ನಿಸಿದ್ರು.

    ಇಂದು ಬೆಳಗ್ಗೆ ಮೈಸೂರಿನಲ್ಲಿ ಯಾವುದೇ ಪ್ರತಿಭಟನೆ ನಡೆಸಿರಲಿಲ್ಲ. ಆದ್ರೆ ಸ್ವಯಂ ಪ್ರೇರಿತವಾಗಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಪ್ರತಾಪ್ ಸಿಂಹ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ನಂತರ ಕಾರ್ಯಕರ್ತರು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದು ಪ್ರತಿಭಟನೆ ಆರಂಭಿಸಿದ್ದಾರೆ.

    ಇಂದು ಪರಿವರ್ತನಾ ಯಾತ್ರೆ ಕೂಡ ಇದ್ದು, ಮಧ್ಯಾಹ್ನದ ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಘಟನಾವಳಿಗಳು ಏನಾಗಲಿದೆ ಎಂಬ ಕುತೂಹಲ ಮೂಡಿದೆ.

    ಬಸ್ ಸಂಚಾರ ನಿಲ್ಲಿಸಿರೋದ್ರಿಂದ ಸ್ವಲ್ಪ ಮಟ್ಟಿಗೆ ಬಂದ್ ಬಿಸಿ ತಟ್ಟಿದ್ದು ಬಿಟ್ಟರೆ ಮೈಸೂರಿನಲ್ಲಿ ಜನಜೀವನ ಎಂದಿನಂತೆ ಸಾಗಿದೆ.

  • ಮಂಗಳೂರು, ಕೊಪ್ಪಳ, ವಿಜಯಪುರದಲ್ಲಿ ಬಂದ್ ಗೆ ಇಲ್ಲ ಬೆಂಬಲ- ಜನಜೀವನ ಎಂದಿನಂತೆ ಆರಂಭ

    ಮಂಗಳೂರು, ಕೊಪ್ಪಳ, ವಿಜಯಪುರದಲ್ಲಿ ಬಂದ್ ಗೆ ಇಲ್ಲ ಬೆಂಬಲ- ಜನಜೀವನ ಎಂದಿನಂತೆ ಆರಂಭ

    ಮಂಗಳೂರು/ಕೊಪ್ಪಳ/ವಿಜಯಪುರ: ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಇಂದು ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಆದ್ರೆ ಕೊಪ್ಪಳ, ವಿಜಯಪುರ ಮತ್ತು ಮಂಗಳೂರಿನಲ್ಲಿ ಬಂದ್‍ಗೆ ಬೆಂಬಲ ವ್ಯಕ್ತವಾಗಿಲ್ಲ.

    ಮಂಗಳೂರಿನಲ್ಲಿ ಕರ್ನಾಟಕ ಬಂದ್ ಗೆ ಬೆಂಬಲ ನೀಡಿಲ್ಲ. ಇಲ್ಲಿನ ವರ್ತಕರಿಂದ ನೋ ಬಂದ್ ಡೇ ಆಚರಣೆ ಮಾಡಲಾಗ್ತಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳ ಮುಂದೆ ಬಂದ್ ಇಲ್ಲ ಎಂಬ ಪೋಸ್ಟರ್ ಹಾಕಲಾಗಿದೆ. ನಮಗೆ ನೀರಿಲ್ಲ, ನಮಗೆ ನೋವಿದೆ. ಹಾಗಂತ ಪದೇ ಪದೇ ಬಂದ್ ಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೀಬೇಡಿ. ಈ ಬಾರಿ ಬಂದ್‍ಗೆ ನಮ್ಮ ಬೆಂಬಲ ಇಲ್ಲ ಎಂದು ಪೋಸ್ಟರ್ ಅಂಟಿಸಲಾಗಿದೆ. ಮಂಗಳೂರಿನಲ್ಲಿ ಜನಜೀವನ ಎಂದಿನಂತೆ ಆರಂಭವಾಗಿದೆ. ಬೆಳಗ್ಗೆ 11 ಗಂಟೆಗೆ ಕರವೇ ಯಿಂದ ರೈಲ್ವೆ ತಡೆದು ಸಾಂಕೇತಿಕ ಪ್ರತಿಭಟನೆ ನಡೆಯಲಿದೆ.

    ಕೊಪ್ಪಳದಲ್ಲಿ ಕೂಡ ಬಂದ್ ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ. ಬಸ್ ಸಂಚಾರ ಹಾಗೂ ಆಟೋ ಸಂಚಾರ ಸಹ ಯತಾಸ್ಥಿತಿಯಲ್ಲಿದ್ದು, ಪ್ರಯಾಣಿಕರು ಎಂದಿನಂತೆ ಪ್ರಯಾಣ ಮಾಡುತ್ತಿದ್ದಾರೆ. ಆದ್ರೆ ಬಂದ್ ಇದೆ ಎಂದುಕೊಂಡು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸ್ಥಗಿತ ಮಾಡಿದ್ದರ ಪರಿಣಾಮವಾಗಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಅಂಗಡಿಗಳು ಆರಂಭವಾಗಿದ್ದು, ವ್ಯಾಪಾರ ವಹಿವಾಟು ಸುಗುಮವಾಗಿ ಸಾಗುತ್ತಿದೆ.

    ಜಿಲ್ಲಾ ಆಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಇದರಿಂದಾಗಿ ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲಿವೆ. ಆದ್ರೆ ಕೆಲವೊಂದು ಖಾಸಗಿ ಶಾಲಾ ಕಾಲೇಜುಗಳಿಗೆ ತಾವೇ ರಜೆ ಘೋಷಣೆ ಮಾಡಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಕೆಲವೊಂದು ಕನ್ನಡಪರ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಲಿವೆ. ಬಂದ್ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿದೆ.

    ವಿಜಯಪುರ ಜಿಲ್ಲೆಯಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸರ್ಕಾರಿ ಮತ್ತು ಖಾಸಗಿ ಬಸ್ ಹಾಗು ಆಟೋ ಸಂಚಾರ ಎಂದಿನಂತೆ ಆರಂಭವಾಗಿದೆ. ಹೊಟೇಲ್ ಮತ್ತು ವ್ಯಾಪಾರ ವಹಿವಾಟು ಹಾಗು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲ. ಕರವೇ ಸೇರಿದಂತೆ ಇನ್ನಿತರ ಸಂಘಟನೆಗಳಿಂದ ಮಾತ್ರ ಮಹಾದಾಯಿ ಹೋರಾಟಕ್ಕೆ ಬೆಂಬಲ ವ್ಯಕ್ತವಾಘಿದೆ. ಜಿಲ್ಲೆಯ ಸಿಂದಗಿ, ಮುದ್ದೇಬಿಹಾಳ, ತಾಳಿಕೋಟೆ ಇಂಡಿ ತಾಲುಕುಗಳಲ್ಲೂ ಕೂಡ ಕರ್ನಾಟಕ ಬಂದ್ ಗೆ ಬೆಂಬಲ ಇಲ್ಲವಾಗಿದ್ದು, ಜನ ಜೀವನ ಎಂದಿನಂತಿದೆ.

  • ಬೆಳಗಾವಿಯಲ್ಲಿ ತಡರಾತ್ರಿಯೇ ಪ್ರತಿಭಟನೆ ಬಿಸಿ- ಗೋವಾಗೆ ಹೋಗುವ ತರಕಾರಿ, ಹಾಲಿನ ವಾಹನಕ್ಕೆ ತಡೆ

    ಬೆಳಗಾವಿಯಲ್ಲಿ ತಡರಾತ್ರಿಯೇ ಪ್ರತಿಭಟನೆ ಬಿಸಿ- ಗೋವಾಗೆ ಹೋಗುವ ತರಕಾರಿ, ಹಾಲಿನ ವಾಹನಕ್ಕೆ ತಡೆ

    ಬೆಳಗಾವಿ: ರಾಜ್ಯಾದ್ಯಂತ ಇಂದು ಕರವೇ ಸಂಘಟನೆಯ ನೇತೃತ್ವದಲ್ಲಿ ಕರ್ನಾಟಕ ಬಂದ್ ನಡೆಯುತ್ತಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ತಡರಾತ್ರಿಯೇ ಪ್ರತಿಭಟನೆಯ ಬಿಸಿ ತಟ್ಟಿದೆ.

    ಬೆಳಗಾವಿಯ ಪೀರನವಾಡಿ ಕ್ರಾಸ್ ಬಳಿ ಕರ್ನಾಟಕದಿಂದ ಗೋವಾಗೆ ಹೋಗುವ ತರಕಾರಿ, ಹಾಲಿನ ವಾಹನಗಳನ್ನು ತಡೆಯಲು ಕರವೇ ಕಾರ್ಯಕರ್ತರು ಪ್ರಯತ್ನಿಸಿದರು. ಈ ವೇಳೆ ಪೊಲೀಸರು 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇಂದು ನಗರದಲ್ಲಿ ಬಸ್‍ಗಳು ರಸ್ತೆಗೆ ಇಳಿಯದಿದ್ದರಿಂದ ಕೇಂದ್ರಿಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ನಗರದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿಸಿ ಬಸ್‍ಗಳನ್ನು ರಸ್ತೆಗೆ ಇಳಿಸಲಾಗುತ್ತದೆ ಎಂದು ಹೇಳಲಾಗಿದೆ. ಇಂದು ಗೋವಾದಿಂದ ಯಾವುದೇ ಬಸ್ ಗಳು ರಾಜ್ಯದತ್ತ ಬಂದಿಲ್ಲ. ಕರ್ನಾಟಕದ ಬಸ್ ಗಳು ಮಾತ್ರ ರಾಜ್ಯದತ್ತ ಆಗಮಿಸುತ್ತಿವೆ.

  • ಮಹದಾಯಿಗಾಗಿ ಒಂದಾಗಿದೆ ಉತ್ತರ ಕರ್ನಾಟಕ ಜನತೆ- ಹುಬ್ಬಳ್ಳಿ, ಧಾರವಾಡ ಸಂಪೂರ್ಣ ಬಂದ್

    ಮಹದಾಯಿಗಾಗಿ ಒಂದಾಗಿದೆ ಉತ್ತರ ಕರ್ನಾಟಕ ಜನತೆ- ಹುಬ್ಬಳ್ಳಿ, ಧಾರವಾಡ ಸಂಪೂರ್ಣ ಬಂದ್

    ಧಾರವಾಡ: ಮಹದಾಯಿಗಾಗಿ ಉತ್ತರ ಕರ್ನಾಟಕದ ಜನತೆ ಒಂದಾಗಿದ್ದು, ಹುಬ್ಬಳ್ಳಿ, ಧಾರವಾಡ, ಗದಗ ಸಂಪೂರ್ಣ ಬಂದ್ ಆಗಿದೆ. ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಬಸ್ ಸಂಚಾರ ಸಂಪೂರ್ಣ ರದ್ದಾಗಿದೆ. ಕೇಂದ್ರ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದು, ಜನಸಾಮನ್ಯರು ಬಸ್‍ಗಳಿಲ್ಲದೆ ಪರದಾಡುತ್ತಿದ್ದಾರೆ.

    ಹುಬ್ಬಳ್ಳಿಯಲ್ಲಿ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಪ್ರತಿಭಟನಾಕಾರರು ಭಜನೆ ಮಾಡುತ್ತಾ ನಗರದಲ್ಲೆಡೆ ಸಂಚರಿಸುತ್ತಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ನಗರದ ಚನ್ನಮ್ಮ ವೃತ್ತದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಕಲ್ಲು ತೂರಾಟ ಸಹ ನಡೆದಿದೆ ಎಂದು ತಿಳಿದು ಬಂದಿದೆ.

    ಧಾರವಾಡದ ಅಳ್ನಾವರ್ ಹೋಟೆಲ್ ಬಳಿ ಧಾರವಾಡ-ಗೋವಾ ರಸ್ತೆ ಬಂದ್ ಮಾಡಲಾಗಿದೆ. ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾ ಅಧ್ಯಕ್ಷ ಗಿರೀಶ್ ಪೂಜಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದಿಂದ ಗೋವಾದತ್ತ ತೆರಳುತ್ತಿರುವ ವಾಹನಗಳನ್ನು ತಡೆದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

  • ಮಹದಾಯಿಗಾಗಿ ಕರ್ನಾಟಕ ಬಂದ್- ರಸ್ತೆಗಿಳಿಯದ BMTC, KSRTC ಬಸ್

    ಮಹದಾಯಿಗಾಗಿ ಕರ್ನಾಟಕ ಬಂದ್- ರಸ್ತೆಗಿಳಿಯದ BMTC, KSRTC ಬಸ್

    ಬೆಂಗಳೂರು: ಕನ್ನಡ ಪರ ಹೋರಾಟಗಾರರು ನಡೆಸುತ್ತಿರುವ ಬಂದ್ ಬಿಸಿ ಜನ ಸಾಮನ್ಯರಿಗೆ ತಟ್ಟಿದೆ. ಬೆಂಗಳೂರಿನ ಜೀವನಾಡಿ ಬಿಎಂಟಿಸಿ ಕೂಡ ತನ್ನ ಸಂಚಾರವನ್ನು ರದ್ದುಗೊಳಿಸಿದೆ. ಬೇರೆ ಊರುಗಳಿಂದ ಬೆಂಗಳೂರು ನಗರಕ್ಕೆ ಬಂದ ಜನರು ಬಸ್ ಗಳಿಲ್ಲದೆ ಪರದಾಡುತ್ತಿರುವ ದೃಶ್ಯಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಂಡು ಬಂದಿದೆ.

    ರಾಜ್ಯದ ಹಲವೆಡೆ ಬಂದ್‍ಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಬೆಳಗಿನ ಜಾವವೇ ಕನ್ನಡ ಪರ ಹೋರಾಟಗಾರರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಮೆಟ್ರೋ ತನ್ನ ಸಂಚಾರವನ್ನು ಎಂದಿನಂತೆ ನಡೆಸುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

    ನಗರದ ಐಟಿ-ಬಿಟಿ ಕಂಪೆನಿಗಳ ಉದ್ಯೋಗಿಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿನಿಮಾ ಚಿತ್ರೀಕರಣ ಮತ್ತು ಪ್ರದರ್ಶನ, ಹೋಟೆಲ್‍ಗಳು ಸಹ ಬಂದ್ ಆಗಿವೆ. ಕೆಎಸ್‍ಆರ್‍ಟಿಸಿ ಬಸ್‍ಗಳು ಸಹ ಡಿಪೋಗಳಿಂದ ಹೊರ ಬರುತ್ತಿಲ್ಲ.

  • ಗುರುವಾರ ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ? – ಇಲ್ಲಿದೆ ಸಂಪೂರ್ಣ ಮಾಹಿತಿ

    ಗುರುವಾರ ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ? – ಇಲ್ಲಿದೆ ಸಂಪೂರ್ಣ ಮಾಹಿತಿ

    ಬೆಂಗಳೂರು: ಗುರುವಾರ ಬಂದ್ ನಡೆಯುತ್ತದೆ. ಇದರಲ್ಲಿ ಯಾವುದೇ ರಾಜಕೀಯ, ಗೊಂದಲಗಳು ಇಲ್ಲ ಎಂದು ಕನ್ನಡ ಪರ ಸಂಘಟನೆಗಳು ಹೇಳಿವೆ.

    ಮಹದಾಯಿಗಾಗಿ ಕರೆಯಲಾದ ಬಂದ್ ವಿಚಾರವಾಗಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ನಾಯಕರು ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬಂದ್ ನಡೆಯುತ್ತದೆ ಎಂದು ವಾಟಾಳ್ ತಿಳಿಸಿದರು.

    ಕೆಎಸ್‍ಆರ್ ಟಿಸಿ , ಬಿಎಂಟಿಸಿ, ಮೆಟ್ರೋ ರೈಲುಗಳು ಯಾವುದು ಸಂಚರಿಸಬಾರದು. ಐಟಿ ಕಂಪೆನಿಗಳು ಕೆಲಸ ಮಾಡಬಾರದು ಎಲ್ಲ ಕಂಪೆನಿಗಳು ಬೆಂಬಲ ನೀಡಬೇಕು ಎಂದು ಪ್ರವೀಣ್ ಶೆಟ್ಟಿ ಮನವಿ ಮಾಡಿದರು. ಬೆಳಗ್ಗೆ 9 ಗಂಟೆಗೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ಮಾಡಲು ಕನ್ನಡ ಸಂಘಟನೆಗಳು ಮುಂದಾಗಿದ್ದು, ಒಂದು ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆಯಿದೆ.

    ಅಂಬುಲೆನ್ಸ್, ವೈದ್ಯಕೀಯ ಸೇವೆ, ಹಾಲು ಸಾಗಾಟದ ವಾಹನಕ್ಕಷ್ಟೇ ವಿನಾಯಿತಿ ನೀಡಲಾಗಿದ್ದು ಉಳಿದ ಎಲ್ಲ ಸೇವೆಗಳು ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಯಾವುದು ಇರಲ್ಲ?
    ಬುಧವಾರ ಬೆಳಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್‍ಗಳು ರಸ್ತೆಗೆ ಇಳಿಯಲಿದೆ ಎಂದು ತಿಳಿಸಿದ್ದರು. ಆದರೆ ಸಂಜೆ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಚೆನ್ನೇಗೌಡ ಈ ಬಂದ್ ಗೆ ನಮ್ಮ ಸಂಘ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಕೆಎಸ್‍ಆರ್ ಟಿಸಿ ಬಸ್ ಗಳು ರಸ್ತೆಗೆ ಇಳಿಯಲ್ಲ.

    ಬಂದ್ ಗೆ ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಾಕಷ್ಟು ಜನ ಪ್ರಯಾಣಕ್ಕೆ ಬಿಎಂಟಿಸಿ ಬಸ್ ಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಬಸ್ ನಿಲ್ಲಿಸಿದ್ರೆ ಪ್ರಯಾಣಿಕರಿಗೆ ತೊಂದರೆ ಅಗುತ್ತದೆ ಎಂದು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.  ಆದರೂ ಗುರುವಾರ ಬೆಳಗ್ಗೆ ಬಂದ್ ಜೋರಾಗಿದ್ದರೆ ಬಿಎಂಟಿಸಿ ರಸ್ತೆಗೆ ಇಳಿಯುವುದು ಅನುಮಾನ.

    ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಬಂದ್ ಗೆ ಬೆಂಬಲ ಇಲ್ಲ. ಎಂದಿನಂತೆ ಒಂದು ಲಕ್ಷಕ್ಕೂ ಹೆಚ್ಚು ಓಲಾ ಊಬರ್ ಕ್ಯಾಬ್ ಸೇವೆ ಇರುತ್ತೆ. ಏಕಾಏಕಿ ನಿರ್ಧಾರ ತೆಗೆದುಕೊಂಡು ಈಗ ಬೆಂಬಲಿಸಿ ಅಂತ ಕರೆ ಮಾಡಿ ಕೇಳ್ತಿದ್ದಾರೆ ಎಂದು ಊಬರ್ ಕ್ಯಾಬ್ ಸಂಘ ಅಧ್ಯಕ್ಷ ತನ್ವೀರ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ರೈತರು ತರಕಾರಿಯನ್ನು ಮಾರುಕಟ್ಟೆಗೆ ತಂದರೆ ವ್ಯಾಪಾರ ಮಾಡುತ್ತೇವೆ. ಇಲ್ಲದಿದ್ದರೆ ರೈತರಿಗೆ ತೊಂದರೆಯಾಗುತ್ತದೆ. ಗುರುವಾರದ ಪರಿಸ್ಥಿತಿಯನ್ನು ನೋಡಿಕೊಂಡು ಬಂದ್ ಮಾಡುತ್ತೇವೆ. ಎಲ್ಲರೂ ಸಹಕಾರ ಕೊಟ್ಟರೆ ನಾವು ಸಹ ಬಂದ್ ಮಾಡುತ್ತೇವೆ ಎಂದು ವರ್ತಕರು ತಿಳಿಸಿದ್ದಾರೆ.

    ಮಹದಾಯಿ ವಿಚಾರವಾಗಿ ನಾಳೆ ನಡೆಯೋ ಬಂದ್ ಗೆ ನಮ್ಮ ಬೆಂಬಲ ಇದ್ದು ನಾವು ಹೋರಾಟದಲ್ಲಿ ಭಾಗಿಯಾಗುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಟ್ಯಾಕ್ಸಿಗಳ ಓಡಾಟವನ್ನು ನಿಲ್ಲಿಸುವುದಿಲ್ಲ ಎಂದು ಬೆಂಗಳೂರು ಟೂರಿಸ್ಟ್ ವಾಹನಗಳ ಸಂಘದ ಅಧ್ಯಕ್ಷ ರಾಧಕೃಷ್ಣ ಹೊಳ್ಳ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕಂಪೆನಿಗಳಿಗೆ ರಜೆ:
    ಈ ಹಿಂದೆ ಕರೆಯಲಾಗಿದ್ದ ಬಂದ್ ವೇಳೆ ಕನ್ನಡ ಪರ ಸಂಘಟನೆಗಳು ರಜೆ ನೀಡದ ಐಟಿ ಕಂಪೆನಿಗಳ ಮುಂದೆ ಪ್ರತಿಭಟನೆ ನಡೆಸಿತ್ತು. ಹೀಗಾಗಿ ಹಲವು ಐಟಿ ಮತ್ತು ಖಾಸಗಿ ಕಂಪೆನಿಗಳು ರಜೆ ಘೋಷಣೆ ಮಾಡಿವೆ. ಇನ್ನು ಕೆಲ ಕಂಪೆನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚಿಸಿವೆ.

    ಕನ್ನಡ ಚಿತ್ರೋದ್ಯಮ ಬಂದ್ ಗೆ ಬೆಂಬಲ ಕೊಟ್ಟಿದ್ದು ಚಿತ್ರೀಕರಣ ಹಾಗೂ ಚಿತ್ರಪ್ರದರ್ಶನ ರದ್ದಾಗಲಿದೆ. ಆದರೆ ನಟ, ನಟಿಯರು ನೇರವಾಗಿ ಬಂದ್ ನಲ್ಲಿ ಭಾಗವಹಿಸುವುದಿಲ್ಲ. ಕೆಲ ಆಟೋ ಸಂಘಟನೆ, ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಬೆಂಬಲ ಕೊಟ್ಟಿದೆ. ನಗರದ ಮಾಲ್ ಗಳು ಬೆಂಬಲ ನೀಡಿದ್ದು ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಬಂದ್ ಆಗಲಿದೆ.

    ಪರೀಕ್ಷೆ ಮುಂದೂಡಿಕೆ
    ಗುರುವಾರ ನಡೆಯಬೇಕಿದ್ದ ವಿಟಿಯು ಸ್ನಾತಕೋತ್ತರ ಪರೀಕ್ಷೆಗಳು ಫೆಬ್ರವರಿ 5ಕ್ಕೆ ಮುಂದೂಡಿಕೆಯಾಗಿದೆ. ಖಾಸಗಿ ಶಾಲಾ ಕಾಲೇಜುಗಳಿಗೆ ಕ್ಯಾಮ್ಸ್ ಸಂಘಟನೆ ರಜೆ ಘೋಷಣೆ ಮಾಡಿದೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಸರ್ಕಾರ ಜಿಲ್ಲಾಧಿಕಾರಿಗಳ ಹೆಗಲಿಗೆ ನೀಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದ ಪರೀಕ್ಷೆಗಳು ಫೆಬ್ರವರಿ, 2, 5, 8ಕ್ಕೆ ಮುಂದೂಡಿಕೆಯಾಗಿದೆ.

    ಹೋಟೆಲ್ ಮತ್ತು ಲಾರಿ ಮಾಲೀಕರ ಸಂಘಟನೆಗಳು ಬಂದ್ ಬೆಂಬಲ ನೀಡಬೇಕೇ? ಬೇಡವೇ ಎನ್ನುವ ನಿರ್ಧಾರವನ್ನು ತಿಳಿಸಿಲ್ಲ.

    ಆಸ್ಪತ್ರೆ, ಕ್ಲಿನಿಕ್ ಬಂದ್ ಆಗಲ್ಲ. ಮಹದಾಯಿ ಹೋರಾಟಕ್ಕೆ ನೈತಿಕ ಬೆಂಬಲ ನೀಡುವುದಾಗಿ ಐಎಂಎ ಅಧ್ಯಕ್ಷ ರವೀಂದ್ರ ಮಾಹಿತಿ ನೀಡಿದ್ದಾರೆ. ಮಹದಾಯಿ ಸಮಸ್ಯೆ ಬಗೆಹರಿಸುವಂತೆ ವೈದ್ಯರಿಂದ ಪ್ರಧಾನಿ ಮೋದಿಗೆ ಇಮೇಲ್ ನಲ್ಲಿ ಪತ್ರ ಅಭಿಯಾನ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

    ರೈಲು ತಡೆ:
    ಕರವೇ ರೈಲು ತಡೆ ಮಾಡಲು ಸಿದ್ಧತೆ ನಡೆಸಿದೆ. ಹೀಗಾಗಿ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಲು ರೈಲ್ವೇ ಇಲಾಖೆ ಸಿದ್ಧತೆ ನಡೆಸಿದೆ. ಬೆಂಗಳೂರಿನ ರೈಲ್ವೇ ಸ್ಟೇಷನ್ ಸೇರಿದಂತೆ ಎಲ್ಲಾ ಕಡೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಪಬ್ಲಿಕ್ ಟಿವಿಗೆ ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಪೆಟ್ರೋಲ್ ಬಂಕ್ ಇರುತ್ತೆ:
    ಗುರುವಾರ ಎಂದಿನಂತೆ ಪೆಟ್ರೋಲ್ ಬಂಕ್ ಗಳು ಕಾರ್ಯನಿರ್ವಹಿಸಲಿವೆ. ಜನಸಾಮಾನ್ಯರಿಗೆ ತೊಂದರೆಯಾಗಬಾರದು ಅನ್ನೋ ಹಿತದೃಷ್ಟಿಯಿಂದ ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸಲಿವೆ. ಮಹದಾಯಿ ಹೋರಾಟಕ್ಕೆ ನಮ್ಮ ನೈತಿಕ ಬೆಂಬಲವಿದೆ ಎಂದು ಪಬ್ಲಿಕ್ ಟಿವಿಗೆ ಬೆಂಗಳೂರು ಪೆಟ್ರೋಲ್ ಸಂಘದ  ಅಧ್ಯಕ್ಷ ರವೀಂದ್ರನಾಥ್ ಮಾಹಿತಿ ನೀಡಿದ್ದಾರೆ.

  • ಕರ್ನಾಟಕ ಬಂದ್‍ಗೆ ಯಾರ ಬೆಂಬಲ ಇದೆ, ಯಾರ ಬೆಂಬಲ ಇಲ್ಲ- ಇಲ್ಲಿದೆ ಸಂಪೂರ್ಣ ಮಾಹಿತಿ

    ಕರ್ನಾಟಕ ಬಂದ್‍ಗೆ ಯಾರ ಬೆಂಬಲ ಇದೆ, ಯಾರ ಬೆಂಬಲ ಇಲ್ಲ- ಇಲ್ಲಿದೆ ಸಂಪೂರ್ಣ ಮಾಹಿತಿ

    ಬೆಂಗಳೂರು: ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಆಗ್ರಹಿಸಿ, ವಾಟಾಳ್ ನೇತೃತ್ವದ ಕನ್ನಡ ಒಕ್ಕೂಟ ಕರೆ ನೀಡಿರುವ ಬಂದ್ ರಾಜಕೀಯ ತಿರುವು ಪಡೆದುಕೊಂಡಿದೆ. ಬಂದ್‍ಗೆ ಕೆಲವು ಸಂಘಟನೆಗಳು ಬೆಂಬಲ ನೀಡಿದ್ರೆ, ಮತ್ತೆ ಕೆಲವರು ಬಂದ್‍ಗೆ ಬೆಂಬಲ ಘೋಷಿಸಿಲ್ಲ.

    ಕಾಂಗ್ರೆಸ್ ಪ್ರಾಯೋಜಿತ ಬಂದ್ ಅಂತ ಬಿಜೆಪಿ ಆರೋಪ ಮಾಡುತ್ತಿದೆ. ಆದ್ರೆ ಇದಕ್ಕೆ ಸೊಪ್ಪು ಹಾಕದ ವಾಟಾಳ್ ನಾಗರಾಜ್, ಬಿಜೆಪಿ ಹೇಳಿದಕ್ಕೆಲ್ಲ ತಲೆಕೆಡಿಸಿಕೊಡಲ್ಲ ಬಂದ್ ನಡೆಸೇ ನಡೆಸುತ್ತೇನೆ ಅಂತಾ ಹೇಳಿದ್ದಾರೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರು ಬಂದ್‍ಗೆ ಬೆಂಬಲ ಸೂಚಿಸಿಲ್ಲ. ಕರವೇ ಮತ್ತೊಂದು ಬಣದ ಪ್ರವೀಣ್ ಶೆಟ್ಟಿ ಫೆಬ್ರವರಿ ನಾಲ್ಕರಂದು ಬೆಂಗಳೂರು ಬಂದ್‍ಗೆ ಬೆಂಬಲ ನೀಡಲ್ಲ ಮತ್ತು ಬಂದ್ ಪದೇ ಪದೇ ನಡೆಸೋದು ಸರಿಯಲ್ಲ. ನಾವು ವಾಟಾಳ್ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಅಷ್ಟೇ ಅಂತ ಹೇಳಿದ್ದಾರೆ.

    ಬಂದ್‍ಗೆ ಯಾರ ಬೆಂಬಲ ಇದೆ?
    ಸದ್ಯದ ಮಟ್ಟಿಗೆ ಕನ್ನಡ ಚಿತ್ರೋದ್ಯಮ ಬೆಂಬಲ ಕೊಟ್ಟಿದ್ದು, ಚಿತ್ರೀಕರಣ ಹಾಗೂ ಚಿತ್ರಪ್ರದರ್ಶನ ರದ್ದಾಗಲಿದೆ. ಕೆಲ ಆಟೋ ಸಂಘಟನೆ, ಎಪಿಎಂಸಿ ನೌಕರರ ಸಂಘ, ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಬೆಂಬಲ ಕೊಟ್ಟಿದೆ. ಸರ್ಕಾರ ಬಂದ್‍ಗೆ ಬೆಂಬಲ ನೀಡೋದ್ರಿಂದ ಸಾರಿಗೆ ಸಂಸ್ಥೆಯೂ ಬೆಂಬಲ ನೀಡುವ ಸಾಧ್ಯತೆಗಳಿವೆ. ಮಕ್ಕಳ ಹಿತದೃಷ್ಟಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ನಾಳೆ ನಡೆಯಲಿರುವ ಬಂದ್ ಗೆ ಕನ್ನಡ ಚಿತ್ರೋದ್ಯಮದ ಸಂಪೂರ್ಣ ಸಹಕಾರ ಇರುತ್ತೆ. ಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣವನ್ನು ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಗೆ ವರೆಗೆ ಬಂದ್ ಮಾಡಲಿದ್ದೇವೆ. ಆದರೆ ಈ ಬಂದ್ ನಲ್ಲಿ ಚಲನಚಿತ್ರ ಕಲಾವಿದರು ಪಾಲ್ಗೊಳ್ಳುವುದಿಲ್ಲ. ಆದರೆ ಸಹಕರಿಸಿ ಬೆಂಬಲ ನೀಡುತ್ತಿದ್ದೇವೆ. ಸಂಜೆ ವೇಳೆಗೆ ಕರ್ನಾಟಕ ಬಂದ್ ಯಶಸ್ವಿಯಾಗೋದರ ಬಗ್ಗೆ ಸ್ಪಷ್ಟ ಚಿತ್ರಣ ಸಾಧ್ಯತೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ತಿಳಿಸಿದ್ದಾರೆ.

    ಯಾರು ಬೆಂಬಲ ಘೋಷಿಸಿಲ್ಲ?
    ಟ್ಯಾಕ್ಸಿ ಮಾಲೀಕರ ಸಂಘ, ಹೊಟೇಲ್ ಮಾಲೀಕರ ಸಂಘ, ಕೆಲ ಆಟೋ ಸಂಘಟನೆ, ವರ್ತಕರು ಇನ್ನೂ ಕೂಡ ಬೆಂಬಲ ಘೋಷಿಸಿಲ್ಲ. ಮೆಟ್ರೋ ಸಂಚಾರದಲ್ಲೂ ಯಾವುದೇ ವ್ಯತ್ಯಯ ಇಲ್ಲ. ಮೆಟ್ರೋ ರೈಲು ಎಂದಿನಂತೆ ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ಓಡಲಿದೆ ಎಂದು ಮೆಟ್ರೋ ಅಧಿಕಾರಿಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಓಲಾ ಮತ್ತು ಊಬರ್ ಎಂದಿನಂತೆ ಸಂಚಾರ ನಡೆಸಲಿವೆ.

    ನಾಳೆ ನಡೆಯೋ ಬಂದ್ ಗೆ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕ ಸಂಘಟನೆಗಳಿಂದ ಬೆಂಬಲ ನೀಡುತ್ತಿಲ್ಲ. ಎಂದಿನಂತೆ ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿ ಬಸ್‍ಗಳು ಸಂಚಾರ ಮಾಡಲಿವೆ. ಕೆಎಸ್‍ಆರ್‍ಟಿಸಿ ಆನ್‍ಲೈನ್ ಬುಕಿಂಗ್ ಗೆ ಯಾವುದೇ ಸಮಸ್ಯೆಯಿಲ್ಲ. ಎಲ್ಲಾ ಬಸ್ ಗಳು ಸಂಚಾರ ನಡೆಸಲಿವೆ ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ದೊರೆಕಿದೆ.

  • ಬಿಜೆಪಿ ನಾಯಕರಿಗೆ ವಾಟಾಳ್ ನಾಗರಾಜ್ ಸವಾಲ್

    ಬಿಜೆಪಿ ನಾಯಕರಿಗೆ ವಾಟಾಳ್ ನಾಗರಾಜ್ ಸವಾಲ್

    ಬೆಂಗಳೂರು: ಮಹದಾಯಿ ಬಂದ್ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪ ಮಾಡಿದ್ದ ಬಿಜೆಪಿ ನಾಯಕರಿಗೆ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸವಾಲು ಹಾಕಿದ್ದಾರೆ.

    ಕರ್ನಾಟಕ ಬಂದ್ ರಾಜಕೀಯ ಪ್ರೇರಿತ ಎಂದು ಹೇಳುತ್ತಿರುವ ಬಿಜೆಪಿ ನಾಯಕರು ಇಂದೇ ಪ್ರಧಾನಿ ಮೋದಿ ಅವರ ಜೊತೆ ಮಾತಾನಾಡಿ ಮಹದಾಯಿ ಸಮಸ್ಯೆಗೆ ನಾನು ಸ್ಪಂದಿಸುತ್ತೇವೆ ಎಂಬುದಾಗಿ ಹೇಳಿಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

    ಬಿಜೆಪಿ ನಾಯಕರು ಪ್ರಧಾನಿಗಳಿಂದ ಅಶ್ವಾಸನೆ ಹೇಳಿಕೆ ಕೊಟ್ಟರೆ ಒಂದು ಗಂಟೆಯೊಳಗೆ ಬಂದ್ ವಿಚಾರವನ್ನು ಕೈ ಬಿಡಲಿದ್ದೇವೆ. ಆದರೆ ಪರಿಕ್ಕರ್ ರಿಂದ ಪತ್ರದ ತರುವ ಮೂಲಕ ಯಡಿಯೂರಪ್ಪ ಅವರು ನಾಟಕ ಮಾಡಿದ್ದಾರೆ. ಆ ರೀತಿ ನಮಗೆ ನಾಟಕ ಮಾಡಲು ಬರುವುದಿಲ್ಲ ಎಂದು ಟಾಂಗ್ ನೀಡಿದರು.

    ಕನ್ನಡ ಸಂಘಟನೆಗಳು ಯಾವ ಪಕ್ಷದ ಸ್ವತ್ತು ಅಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕರ್ನಾಟಕ ಬಂದ್‍ಗೆ ಬೆಂಬಲ ನೀಡಿದೆ. ಯಡಿಯೂರಪ್ಪ ನವರೇ ನೀವು ಬಂದ್ ಗೆ ಬೆಂಬಲ ಕೊಡಿ ನಿಮ್ಮನ್ನು ಯಾರು ಬೇಡ ಎಂದು ಹೇಳುತ್ತಾರೆ. ನಿಮ್ಮ ನಡುವಿನ ರಾಜಕೀಯಕ್ಕೆ ಹೋರಾಟಕ್ಕೆ ನಮ್ಮನ್ನು ತಳುಕು ಹಾಕುವುದಕ್ಕೆ ಹೋಗಬೇಡಿ ಎಂದು ವಾಗ್ದಾಳಿ ನಡೆಸಿದರು.