Tag: ಕರ್ನಾಟಕ ಬಂದ್

  • ಒಂದು ಆಶೀರ್ವಾದ ಕರ್ನಾಟಕ ಬಂದ್ – ಮೊದಲು ‘ನೋ’ ಎಂದ ಸಿಎಂ ‘ಓಕೆ’ ಎಂದಿದ್ದು ಯಾಕೆ?

    ಒಂದು ಆಶೀರ್ವಾದ ಕರ್ನಾಟಕ ಬಂದ್ – ಮೊದಲು ‘ನೋ’ ಎಂದ ಸಿಎಂ ‘ಓಕೆ’ ಎಂದಿದ್ದು ಯಾಕೆ?

    – ಸರ್ಕಾರದ ಮಹತ್ವದ ಆದೇಶದ ಹಿಂದಿದೆ ಆ ಮೂರು ಕಾರಣ
    – ಕೊರೊನಾ ಕರ್ನಾಟಕ ರೆಡ್ ಅಲರ್ಟ್

    ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಒಂದು ವಾರದ ಮಟ್ಟಿಗೆ ಕರ್ನಾಟಕ ತಾತ್ಕಾಲಿಕವಾಗಿ ಬಂದ್ ಆಗಲಿದೆ. ಒಂದು ವಾರ ಬಂದ್ ನಿರ್ಧಾರ ತೆಗೆದುಕೊಳ್ಳಲು ಪ್ರಮುಖ ಕಾರಣ ಒಂದು ಆಶೀರ್ವಾದವಂತೆ.

    ಕೊರೊನಾ ವೈರಸಿಗೆ ದೇಶದಲ್ಲಿ ಮೊದಲು ಎಂಬಂತೆ ಕಲಬುರಗಿ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಸಿಎಂ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವತ್ಥ್ ನಾರಾಯಣ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಶಿಕ್ಷಣ ಸಚಿವ ಸುರೇಶ್ ಕುಮಾರ್, ಡಾ. ದೇವಿಶೆಟ್ಟಿ ಸೇರಿದಂತೆ ಸರ್ಕಾರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

    ಸಭೆಯಲ್ಲಿ ಕಲಬರುಗಿ ಪ್ರಕರಣದ ಬಗ್ಗೆ ಚರ್ಚೆ ನಡೆದಾಗ ಆರೋಗ್ಯ ಇಲಾಖೆ ಅಧಿಕಾರಿಗಳು, ಉಮ್ರಾದಿಂದ ಬಂದ ಬಳಿಕ ಕೊರೊನಾ ಸೋಂಕಿತ ವ್ಯಕ್ತಿಯ ಕಾಲನ್ನು ಮುಟ್ಟಿ ಹಲವು ಜನ ಆಶೀರ್ವಾದ ಪಡೆದಿದ್ದಾರೆ. ಮೆಕ್ಕಾ ಮದೀನಾಕ್ಕೆ ಹೋಗಿ ಬಂದ ಕಾರಣ ಸಂಪ್ರದಾಯದಂತೆ ಕಾಲು ಮುಟ್ಟಿ ನಮಸ್ಕರಿಸಿದ್ದರು. ಹೀಗಾಗಿ ಆಶೀರ್ವಾದ ಪಡೆದ ವ್ಯಕ್ತಿಗಳಿಗೂ ಸೋಂಕು ಬಂದಿರುವ ಸಾಧ್ಯತೆಯಿದೆ. ಇದರ ಜೊತೆ ಅವರು ಸಂಪರ್ಕಕ್ಕೆ ಬಂದವರಿಗೂ ಇದು ಬರಬಹುದು ಎನ್ನುವ ವಿಚಾರವನ್ನು ಗಮನಕ್ಕೆ ತಂದಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಕುಟುಂಬಸ್ಥರಿಂದ ಪಡೆದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಂತೆ ಸರ್ಕಾರಕ್ಕೆ ತೀವ್ರತೆಯ ಅರಿವಾಗಿದೆ.

    ಇನ್ನು ಕೇರಳದಲ್ಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಅಲ್ಲಿಯ ಜನ ಕರ್ನಾಟಕಕ್ಕೆ ಬರುವುದರಿಂದ ಸಮಸ್ಯೆ ಜಾಸ್ತಿಯಾಗಬಹುದು ಎಂದು ಸಭೆಯಲ್ಲಿದ್ದ ವೈದ್ಯರು ತಿಳಿಸಿದ್ದಾರೆ. ಇದರ ಜೊತೆ ಕೇಂದ್ರ ಸರ್ಕಾರ ಕಲಬುರಗಿ ಪ್ರಕರಣವನ್ನು ಆರೋಗ್ಯ ಇಲಾಖೆ ನಿರ್ಲಕ್ಷ್ಯಸಿದ್ದಕ್ಕೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ವ್ಯಕ್ತಿಯಿಂದ ಅರ್ಶೀವಾದ ಪಡೆದವರ ಎಲ್ಲರ ವಿವರ ಕಲೆಹಾಕಿ ಗೃಹಬಂಧನದಲ್ಲಿ ಇಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಇದನ್ನು ಓದಿ: ಮದ್ವೆ ನಿಗದಿಯಾಗಿದ್ರೆ ಏನು ಕಥೆ? ಯಾವುದೆಲ್ಲ ಬಂದ್? ಇಲ್ಲಿದೆ ಪೂರ್ಣ ವಿವರ

    ಈ ನಡುವೆ ರಾಜ್ಯದ ಬೆಂಗಳೂರಿನಲ್ಲೂ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೇವಿಶೆಟ್ಟಿ ಸೇರಿದಂತೆ ಹಲವು ವೈದ್ಯರು, ಒಂದು ವಾರಗಳ ಕಾಲ ಸಾರ್ವಜನಿಕವಾಗಿ ಜನ ಹೆಚ್ಚು ಸೇರದಂತೆ ಮಾಡಬೇಕು. ಹೀಗಾಗಿ ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳವನ್ನು ಬಂದ್ ಮಾಡಿ ಕಾರ್ಯಕ್ರಮಗಳನ್ನು ನಿರ್ಬಂಧಿಸುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ.

    ಬಂದ್ ಸಲಹೆ ಕೇಳಿ ಸಿಎಂ ಯಾವುದೇ ಕಾರಣ ಬಂದ್ ಮಾಡಲು ಆದೇಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಕಲಬುರಗಿ ವ್ಯಕ್ತಿಯಿಂದ ಆಶೀರ್ವಾದ ಪಡೆದ ವ್ಯಕ್ತಿಗಳಿಂದ ಮತ್ತಷ್ಟು ಜನರಿಗೆ ಸೋಂಕು ಹರಡಿದರೆ ನಿಯಂತ್ರಣ ಮಾಡಲು ಯಾರಿಂದಲೂ ಸಾಧ್ಯವೇ ಇಲ್ಲ. ಇದು ಬಹಳ ಕಷ್ಟವಾಗುತ್ತದೆ ಎಂದು ಹೇಳಿದಾಗ ಸಿಎಂ ಶಾಕ್ ಆಗಿದ್ದಾರೆ. ವಿಶ್ವದ ವಿವಿಧ ದೇಶಗಳಿಗೆ ಕೊರೊನಾ ಬಂದಿದ್ದು ಹೇಗೆ? ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮವನ್ನು ತಿಳಿಸಿದಾಗ ಸಿಎಂ ಒಂದು ವಾರ ಕಾಲ ಬಂದ್ ಮಾಡುವ ನಿರ್ಧಾರಕ್ಕೆ ಒಪ್ಪಿಗೆ ನೀಡಿದರು ಎನ್ನುವ ವಿಚಾರವನ್ನು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • 1 ವಾರ ಕರ್ನಾಟಕ ಲಾಕ್ ಡೌನ್- ಮಾಲ್, ಕಾಲೇಜುಗಳಿಗೆ ರಜೆ, ಜಾತ್ರೆ ರದ್ದು

    1 ವಾರ ಕರ್ನಾಟಕ ಲಾಕ್ ಡೌನ್- ಮಾಲ್, ಕಾಲೇಜುಗಳಿಗೆ ರಜೆ, ಜಾತ್ರೆ ರದ್ದು

    ಬೆಂಗಳೂರು: ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಒಂದು ವಾರ ಕಾಲ ಕರ್ನಾಟಕದಲ್ಲಿ ಮಾಲ್, ಸಿನಿಮಾ ಥಿಯೇಟರ್, ಎಲ್ಲ ಸಮಾರಂಭಗಳು ಬಂದ್ ಆಗಲಿದೆ.

    ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆಯ ಬಳಿಕ ಮಾಲ್, ಚಿತ್ರ ಮಂದಿರ, ಮದುವೆ, ಸಮ್ಮರ್, ನೈಟ್ ಕ್ಲಬ್, ಸ್ವಿಮ್ಮಿಂಗ್ ಫುಲ್, ನಿಶ್ಚಿತಾರ್ಥ, ನಾಮಕರಣ, ಸಭೆ ಸಮಾರಂಭ ಜಾತ್ರೆ ಎಲ್ಲ ಒಂದು ವಾರ ಕಾಲ ನಿಲ್ಲಿಸಲು ಸೂಚನೆ ನೀಡಲಾಗಿದೆ. ಎಲ್ಲ ವಿವಿಗಳು ಬಂದ್ ಆಗಲಿದ್ದು, ಸಾಧ್ಯವಾದಷ್ಟು ಪ್ರವಾಸ ಮಾಡುವುದನ್ನು ರದ್ದು ಮಾಡಬೇಕೆಂದು ಸರ್ಕಾರ ಕೇಳಿಕೊಂಡಿದೆ.

    ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಐಟಿ ಯವರಿಗೆ ವರ್ಕ್ ಫ್ರಂ ಹೋಮ್ ಮಾಡಲು ಈಗಾಗಲೇ ಸೂಚನೆ ನೀಡಿದ್ದೇವೆ. ಅಧಿವೇಶನ ಎಂದಿನಂತೆ ನಡೆಯುತ್ತದೆ. ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯುತ್ತವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

    https://twitter.com/publictvnews/status/1238398685504868352

    ಇಂದು ತೆಗೆದುಕೊಂಡ ನಿರ್ಧಾರ ಇಡಿ ರಾಜ್ಯಕ್ಕೆ ಅನ್ವಯವಾಗಲಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಂಡಿದ್ದೇವೆ ಎಂದು ಸಿಎಂ ತಿಳಿಸಿದರು.

  • ಸರೋಜಿನಿ ಮಹಿಷಿ ವರದಿ ಜಾರಿಯಾಗದ್ದಕ್ಕೆ ಧಾರವಾಡದಲ್ಲಿರುವ ಮಹಿಷಿ ಕುಟುಂಬ ಬೇಸರ

    ಸರೋಜಿನಿ ಮಹಿಷಿ ವರದಿ ಜಾರಿಯಾಗದ್ದಕ್ಕೆ ಧಾರವಾಡದಲ್ಲಿರುವ ಮಹಿಷಿ ಕುಟುಂಬ ಬೇಸರ

    ಧಾರವಾಡ: ಸರೋಜಿನಿ ಮಹಿಷಿ ವರದಿ ಜಾರಿಯಾಗದ ಹಿನ್ನೆಲೆಯಲ್ಲಿ ಮಹಿಷಿ ಸಹೋದರಿ ಸಾವಿತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಧಾರವಾಡದಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎಂದು ನನ್ನ ಸಹೋದರಿ ವರದಿ ನೀಡಿದ್ದರು. ಆದರೆ ಅದು ಇಂದು ಜಾರಿಯಾಗದೇ ಇರುವುದು ಬೇಸರ ತಂದಿದೆ ಎಂದು ಸರೋಜಿನಿ ಮಹಿಷಿ ಸಹೋದರಿ ಸಾವಿತ್ರಿ ಹೇಳಿದ್ದಾರೆ.

    ಈ ವರದಿ ಜಾರಿಗೆ ಅವರು ಸಾಕಷ್ಟು ಅಭ್ಯಾಸ ಮಾಡಿ ವರದಿ ತಯಾರಿಸಿದ್ದರು. ಆದರೆ ಸರ್ಕಾರ ಅದನ್ನು ಯಾಕೆ ಜಾರಿಗೆ ತರುತ್ತಿಲ್ಲ ಎನ್ನುವುದು ಬೇಸರವಾಗಿದೆ. ವರದಿ ಜಾರಿಗೆ ತರುವುದು ಮನಸ್ಸು ಮಾಡಿದರೆ ದೊಡ್ಡ ಮಾತಲ್ಲ ಎಂದರು.

    ಕರ್ನಾಟಕದಲ್ಲಿ ಕನ್ನಡಿಗರಿಗೆ ಅವಕಾಶ ನೀಡಬೇಕು ಎಂಬುದು ವರದಿಯಲ್ಲಿದೆ. ಬೇರೆ ರಾಜ್ಯದಲ್ಲಿ ನಮ್ಮವರಿಗೆ ಕೆಲಸ ಸಿಗಲ್ಲ, ಅದಕ್ಕಾಗಿ ಅವರು ಈ ವರದಿ ತಯಾರಿಸಿ ಕೊಟ್ಟಿದ್ದರು. ಆದರೆ 3 ವರ್ಷಗಳಲ್ಲಿ ಅವರು ರಾಜ್ಯದ ತುಂಬೆಲ್ಲ ಓಡಾಡಿ ವರದಿ ತಯಾರಿಸಿದ್ದರು. ಬೇರೆ ರಾಜ್ಯದ ಜನರು ರಾಜ್ಯಕ್ಕೆ ಬಂದಾಗ ಅವರಿಗೆ ಇಲ್ಲಿ ಕೆಲಸ ಸಿಗುತ್ತಿದೆ ಎನ್ನುವ ಕಳವಳ ಅವರು ವ್ಯಕ್ತಪಡಿಸಿದ್ದರು ಎಂದು ಸಾವಿತ್ರಿ ಹೇಳಿದರು.

    ಎಲ್ಲ ಕಡೆ ಪ್ರಾದೇಶಿಕ ಅಸಮಾನಾತೆ ಇರುವ ಕಾರಣ ಸರೋಜಿನಿ ಅವರು ಈ ವರದಿ ಕೊಟ್ಟಿದ್ದರು, ಹೀಗಿನ ಸರ್ಕಾರವಾದರೂ ಮಾಡಬೇಕು. ಏಕೆಂದರೆ ಸರ್ಕಾರಕ್ಕೆ ಆ ಶಕ್ತಿ ಇದೆ ಎಂದು ಸಾವಿತ್ರಿ ಹೇಳಿದರು. ನಮ್ಮ ಅಕ್ಕಳಿಗೆ ಕನ್ನಡಿಗರ ಬಗ್ಗೆ ಬಹಳ ಕಳಕಳೀ ಇತ್ತು ಎಂದು ಅವರು ಹೇಳಿದರು.

  • ಬಂದ್‍ಗೆ ಬೆಂಬಲವಿಲ್ಲ, ಆದ್ರೆ ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕು – ಉರುಳು ಸೇವೆ ಮಾಡಿದ ಪ್ರತಿಭಟನಾಕಾರರು

    ಬಂದ್‍ಗೆ ಬೆಂಬಲವಿಲ್ಲ, ಆದ್ರೆ ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕು – ಉರುಳು ಸೇವೆ ಮಾಡಿದ ಪ್ರತಿಭಟನಾಕಾರರು

    ಬೆಂಗಳೂರು: ಡಾ. ಸರೋಜಿನಿ ಮಹಿಷಿಯವರ ಪರಿಷ್ಕೃತ ವರದಿ ಜಾರಿಗೆ ಆಗ್ರಹಿಸಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿಗಾಗಿ ಆಗ್ರಹಿಸಿ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ನಮ್ಮ ಜನಸೈನ್ಯ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಐಬಿ ಸರ್ಕಲ್‍ನಲ್ಲಿ ಜಮಾಯಿಸಿ ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಬಂದ್‍ಗೆ ವಿರೋಧ ವ್ಯಕ್ತಪಡಿಸಿ ಬಂದ್‍ನಿಂದ ಯಾವುದೇ ಪ್ರಯೋಜನವಿಲ್ಲ, ಬಂದ್ ನಿಂದ ಕೇವಲ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಅನಾನುಕೂಲ ಹೀಗಾಗಿ ಕರ್ನಾಟಕ ಬಂದ್‍ಗೆ ನಮ್ಮ ವಿರೋಧವಿದೆ. ಆದರೆ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಕೂಡಲೇ ಜಾರಿಗೆ ಬರುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

    ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಮಾತನಾಡಿ, ಈ ಬಂದ್ ಜನಸಾಮಾನ್ಯರಿಗೆ ಮತ್ತಷ್ಟು ಸಮಸ್ಯೆ ತಂದಿದೆ. ನಾವು ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಬೇಕು ಇಂತಹ ಬಂದ್‍ಗೆ ನಮ್ಮ ಸಂಘಟನೆಯ ವಿರೋಧ ಇದೆ ಎಂದು ತಿಳಿಸಿದರು.

  • ಬಂದ್ ನಡುವೆ ‘ಎಣ್ಣೆ ಡ್ಯಾನ್ಸ್’- ನಾನೇ ಮಂತ್ರಿ ಎಂದ ಕುಡುಕ ಮಹಾಶಯ

    ಬಂದ್ ನಡುವೆ ‘ಎಣ್ಣೆ ಡ್ಯಾನ್ಸ್’- ನಾನೇ ಮಂತ್ರಿ ಎಂದ ಕುಡುಕ ಮಹಾಶಯ

    ಬೆಂಗಳೂರು : ಇಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಟೌನ್ ಹಾಲ್ ಬಳಿ ಹಾಕಿದ್ದ ಬ್ಯಾರಿಕೇಡ್ ಸರಿಸಿ ಒಳಗೆ ನುಗ್ಗಿದ ಕುಡುಕನೋರ್ವ ಭರ್ಜರಿ ಸ್ಟೆಪ್ಸ್ ಹಾಕಿದ್ದಾನೆ.

    ನಗರದ ಮೆಜೆಸ್ಟಿಕ್, ರೈಲ್ವೇ ನಿಲ್ದಾಣ ಸೇರಿದಂತೆ ಬಹುತೇಕ ಕಡೆ ಬಿಗಿ ಭದ್ರತೆಗಾಗಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅದರಂತೆ ನಗರದ ಟೌನ್ ಹಾಲ್ ನಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಎರಡೂ ಕೆಎಸ್‍ಆರ್ ಪಿ ತುಕಡಿ ಹಾಗೂ 100 ಜನರ ಪೊಲೀಸ್ ಬ್ಯಾರಿಕೇಡ್ ಸರ್ಪಗಾವಲನ್ನು ಹಾಕಲಾಗಿತ್ತು. ಇದರ ನಡುವೆ ಬ್ಯಾರಿಕೇಡ್ ಒಳಗೆ ನುಗ್ಗಿದ ಫುಲ್ ಟೈಟಾಗಿದ್ದ ಕುಡುಕನೊಬ್ಬ ಭರ್ಜರಿ ಸ್ಪೆಪ್ಸ್ ಹಾಕಿದ್ದಾನೆ. ಅದು ಮಟ ಮಟ ಮಧ್ಯಾಹ್ನ, ಸುಡು ಬಿಸಿಲಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾನೆ.

    ತನ್ನ ಸುತ್ತ ಪೊಲೀಸರು ಇದ್ರೂ, ಕುಡುಕ ಮಹಾಶಯ ಸ್ವಲ್ಪವೂ ವಿಚಲಿತನಾಗದೇ ರಸ್ತೆಯಲ್ಲೇ ಭರ್ಜರಿ ಕುಣಿದಿದ್ದಾನೆ. ಜೊತೆಗೆ ಟೌನ್ ಹಾಲ್ ನನ್ನದೇ ಅಂತಾ ಸಾರ್ವಜನಿಕರಿಗೆ ಡೋಂಟ್ ಕೇರ್ ಎಂದಿದ್ದಾನೆ. ನಾನೇ ಮಂತ್ರಿ ಅಂತಾ ಬಂಧಿಸಲು ಬಂದ ಪೊಲೀಸರಿಗೆ ಫುಲ್ ಆವಾಜ್ ಹಾಕಿದ್ದಾನೆ. ಜೊತೆಗೆ ಮುಖ್ಯಮಂತ್ರಿಗಳಿಗೆ ಕಾಲ್ ಮಾಡ್ತೇನೆ ಅಂತಾ ಪೋಲಿಸ್ರಿಗೆ ವಾರ್ನ್ ಮಾಡಿದ್ದಾನೆ. ನಂತರ ಪೊಲೀಸರು ಕುಡುಕನನ್ನು ಸ್ಥಳದಿಂದ ಬೇರೆಯೆಡೆಗೆ ಕಳುಹಿಸಿದ್ದಾರೆ.

  • ತೆಲುಗು, ತಮಿಳು, ಮರಾಠಿಗರ ಮಧ್ಯೆ ಕನ್ನಡಿಗ ಅನಾಥ – ಅಣಕು ಪ್ರದರ್ಶನದ ಮೂಲಕ ಬಂದ್‍ಗೆ ಬೆಂಬಲ

    ತೆಲುಗು, ತಮಿಳು, ಮರಾಠಿಗರ ಮಧ್ಯೆ ಕನ್ನಡಿಗ ಅನಾಥ – ಅಣಕು ಪ್ರದರ್ಶನದ ಮೂಲಕ ಬಂದ್‍ಗೆ ಬೆಂಬಲ

    ದಾವಣಗೆರೆ: ರಾಜ್ಯದಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಕನ್ನಡ ಪರ ಸಂಘಟನೆಗಳು ಬಂದ್‍ಗೆ ಕರೆ ನೀಡಿದ್ದು, ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಮಾತ್ರ ವಿನೂತನವಾಗಿ ಪ್ರತಿಭಟನೆ ಮಾಡುವುದರ ಮೂಲಕ ರಾಜ್ಯ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ರಾಜಕೀಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಜಯದೇವ ಸರ್ಕಲ್‍ನಲ್ಲಿ ಕನ್ನಡ ಪರ ಸಂಘಟನೆಯ ಹೋರಾಟಗಾರರು ಜಮಾಯಿಸಿದ್ದರು. ವಿನೂತನವಾಗಿ ಪ್ರತಿಭಟನೆ ಮಾಡುವುದರ ಮೂಲಕ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ, ಕನ್ನಡಿಗರಿಗೆ ಉದ್ಯೋಗವಕಾಶಗಳನ್ನು ಓದಗಿಸುವಂತೆ ಒತ್ತಾಯಿಸಿದರು. ಕಾರ್ಯಕರ್ತರಿಗೆ ತೆಲುಗು, ತಮಿಳು, ಮರಾಠಿಗ ಎಂದು ಬರೆದಿರುಬ ನಾಮ ಫಲಕಗಳನ್ನು ಹಾಕಿ ಕನ್ನಡಿಗ ಅನಾಥನಾಗಿರುವಂತೆ ಬಿಂಬಿಸುವ ಅಣಕು ಪ್ರದರ್ಶನವನ್ನು ಮಾಡಿದರು. ಕನ್ನಡಿಗರು ಪರ ಭಾಷಿಗರ ಬಳಿ ಕೆಲಸಕ್ಕಾಗಿ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಅಣಕು ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಿದರು.

    ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಭಾವ ಚಿತ್ರ ಹಿಡಿದು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ವಿನೂತನವಾಗಿ ಪ್ರತಿಭಟನೆ ನಡೆಸಿದರು. ವಿನೂತನ ಪ್ರತಿಭಟನೆ ಮೂಲಕ ಗಮನ ಸೆಳೆದ ಪ್ರತಿಭಟನಾಕಾರರು, ಜಯದೇವ ಸರ್ಕಲ್‍ನಿಂದ ಎಸಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿ ಉಪವಿಭಾಗಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸಿಎಂ ಅವರಿಗೆ ತಲುಪಿಸುವಂತೆ ಮನವಿ ಮಾಡಿದರು.

    ದಾವಣಗೆರೆಯಲ್ಲಿ ಬಂದ್‍ಗೆ ಹೆಚ್ಚು ಬೆಂಬಲ ಸಿಗದಿದ್ದರೂ ಸಾರಿಗೆ ಸಂಚಾರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಎಸ್ಆರ್‌ಟಿಸಿ ಬಸ್ಸುಗಳು ಖಾಲಿ ಖಾಲಿಯಾಗಿದ್ದು, ಪ್ರಯಾಣಿಕರಿಲ್ಲದೆ ಖಾಲಿ ಬಸ್ಸುಗಳನ್ನು ಸಿಬ್ಬಂದಿ ಚಲಾಯಿಸುತ್ತಿದ್ದಾರೆ. ವ್ಯಾಪಾರ ವಹಿವಾಟು ಹಾಗೂ ಶಾಲಾ ಕಾಲೇಜುಗಳು ತೆರೆದಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದೆ ಯಥಾಸ್ಥಿತಿ ಕೆಲಸ ಕಾರ್ಯಗಳನ್ನು ನಡೆಯುತ್ತಿವೆ.

  • ಕರ್ನಾಟಕ ಬಂದ್- ಕೈಗಾರಿಕಾ ಪ್ರದೇಶದಲ್ಲಿ ಎಂದಿನಂತೆ ಕಾರ್ಯ ಚಟುವಟಿಕೆ

    ಕರ್ನಾಟಕ ಬಂದ್- ಕೈಗಾರಿಕಾ ಪ್ರದೇಶದಲ್ಲಿ ಎಂದಿನಂತೆ ಕಾರ್ಯ ಚಟುವಟಿಕೆ

    ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿ ತರುವಂತೆ ಕೈಗೊಂಡಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಅತಿ ದೊಡ್ಡ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶ ಎಂದಿನಂತೆ ಕಾರ್ಯ ಚಟುವಟಿಕೆ ನಡೆಸಿದೆ.

    ಕೈಗಾರಿಕಾ ಪ್ರದೇಶ ಎಂದಿನಂತೆ ಕಂಡು ಬಂದಿದ್ದು, ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಕಂಪೆನಿಗಳು ಉತ್ತಮ ಕಾರ್ಯ ಚಟುವಟಿಕೆ ನಡೆಸುತ್ತಿರುವುದು ಕಂಡು ಬಂದಿದ್ದು, ಯಾವುದೇ ಬಂದ್ ಬಿಸಿ ಇರಲಿಲ್ಲ.

    ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಇಂದು ಬೆಳಗ್ಗೆ ಮೊದಲನೇ ಪಾಳಿ ಕೆಲಸ ಕೈಗೊಂಡಿರುವ ಹಲವಾರು ಕಂಪನಿಗಳು, ಎರಡನೇ ಪಾಳಿ ಕೆಲಸವನ್ನು ಮಧ್ಯಾಹ್ನದ ವೇಳೆಗೆ ಪ್ರಾರಂಭಿಸುವ ಲಕ್ಷಣ ತೋರಿಸಿತ್ತು.

    ಕರ್ಲಾನ್, ಟಿಡಿಪಿಎಸ್, ಮಾರುತಿ ಸುಜುಕಿ, ಜಿಂದಾಲ್ ನಂತಹ ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ಎಂದಿನಂತೆ ಸಾಗಿದ್ದು, ಬಂದ್ ಸಂಪೂರ್ಣ ವಿಫಲವಾಗಿದೆ. ಬುಧವಾರ ಆಟೋ ಮತ್ತು ಟ್ಯಾಕ್ಸಿ ಮತ್ತು ಚಾಲಕರ ಮಾಲೀಕರ ಸಂಘದವರು ಬಂದ್‍ಗೆ ಪಾಲ್ಗೊಳ್ಳುವುದಿಲ್ಲ. ನಮಗೆ ರಾಜ್ಯ ಸಂಘಟನೆಯಿಂದ ಬಂದ್ ಮಾಹಿತಿ ಯಾವುದು ಬಂದಿಲ್ಲ ಎಂದು ತಿಳಿಸಿದ್ದರು.

  • ಕೆಲವರು ಸಮಯ ಬಂದಾಗಷ್ಟೇ ವರದಿಗಳ ಬಗ್ಗೆ ಹೇಳ್ಕೊಂಡು ತಿರುಗುತ್ತಾರೆ: ಎಚ್‍ಡಿಡಿ ಬೇಸರ

    ಕೆಲವರು ಸಮಯ ಬಂದಾಗಷ್ಟೇ ವರದಿಗಳ ಬಗ್ಗೆ ಹೇಳ್ಕೊಂಡು ತಿರುಗುತ್ತಾರೆ: ಎಚ್‍ಡಿಡಿ ಬೇಸರ

    ರಾಯಚೂರು: ಕರ್ನಾಟಕ ಬಂದ್ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕೆಲವರು ಸಮಯ ಬಂದಾಗ ವರದಿಗಳ ಬಗ್ಗೆ ಹೇಳಿಕೊಂಡು ತಿರುಗುತ್ತಾರೆ. ಕರ್ನಾಟಕ ಬಂದ್‍ಗೆ ಬಗ್ಗೆ ನನಗೆ ಹೆಚ್ಚು ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಅವರು, ಡಾ. ಸರೋಜಿನಿ ಮಹಿಷಿ, ನಂಜುಂಡಪ್ಪ ವರದಿ 40 ವರ್ಷಗಳಿಂದ ಚರ್ಚೆಯಲ್ಲಿವೆ. ವರದಿಗಳ ಬಗ್ಗೆ ವಿಶ್ಲೇಷಣೆ ಮಾಡಿ ತಿಳಿದುಕೊಳ್ಳಬೇಕು. ಪ್ರತಿಯೊಂದಕ್ಕೂ ಬಂದ್ ಅಂದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿ, ಬಿಜೆಪಿ ಮೂರು ವರ್ಷ ಪೂರೈಸಲಿ ಅವರೇ ಸಿಎಂ ಆಗಿ ಕೆಲಸ ಮಾಡಲು ನನ್ನ ವಿರೋಧವಿಲ್ಲ ಎಂದರು. ಬಿಜೆಪಿ ಬಂದ ಮೇಲೆ ಭಷ್ಟಾಚಾರ ಹೆಚ್ಚಾಗಿದೆ ಎಂದು ಅವರೇ ಹೇಳಿದ್ದಾರೆ ನಾನು ಹೇಳಿಲ್ಲ. ಮುಚ್ಚುಮರೆಯಿಲ್ಲದೆ ಬಿಜೆಪಿ ಹೇಳಿಕೊಳ್ಳುತ್ತಿದೆ ಅದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು. ಅವರ ಪಕ್ಷದವರೇ ಭ್ರಷ್ಟಚಾರದ ಬಗ್ಗೆ ಹೈಕಮಾಂಡಗೆ ದೂರು ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

    ದೇಶದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ದೆಹಲಿಯಲ್ಲಿ ಶೇಕಡಾವಾರು ಮತದಾನ ಬಿಜೆಪಿಗೆ ಕಡಿಮೆಯಾಗಿದೆ. ದೆಹಲಿ ಫಲಿತಾಂಶ ಕಾಂಗ್ರೆಸ್, ಬಿಜೆಪಿಗೆ ಒಂದು ಪಾಠ ಎಂದು ಕಿಡಿಕಾರಿದರು. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಕಷ್ಟ ಇದೆ. ತಮಿಳುನಾಡು, ಕೇರಳದಲ್ಲಿ ಕಷ್ಟವಾಗುತ್ತೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಸ್ಥಿತ್ವ ಇಲ್ಲ ಎಂದು ಹೇಳಿದರು.

    ರಾಜಕೀಯ ವಾಸ್ತವಾಂಶಗಳ ಪುಸ್ತಕ ಬಿಡುಗಡೆ ಮಾಡುತ್ತೇನೆ. ಪುಸ್ತಕದಲ್ಲಿ ರಾಜಕೀಯ ವಿಚಾರಗಳು ಎಲ್ಲವೂ ಇವೆ. ಒಂದೂವರೆ ತಿಂಗಳಲ್ಲಿ ಪುಸ್ತಕ ಬಿಡುಗಡೆ ಆಗುತ್ತೆ. ಕೇಂದ್ರ ಸರ್ಕಾರ ನೀರಾವರಿ ಯೋಜನೆಗೆ ಮಹತ್ವ ಕೊಟ್ಟಿಲ್ಲ. ಮೋದಿ ಅವರ ಸ್ವಭಾವ ಬೇರೆಯಿದೆ ನಾನು ಯಾರ ಮನೆ ಬಾಗಿಲಿಗೆ ಹೋಗಿ ಮನವಿ ಮಾಡಲ್ಲ ಎಂದು ಎಚ್‍ಡಿಡಿ ಕಿಡಿಕಾರಿದರು.

  • ಕರ್ನಾಟಕ ಬಂದ್ – ಟೈರ್‌ಗೆ ಬೆಂಕಿ ಹಚ್ಚಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿದ ಕನ್ನಡಿಗರು

    ಕರ್ನಾಟಕ ಬಂದ್ – ಟೈರ್‌ಗೆ ಬೆಂಕಿ ಹಚ್ಚಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿದ ಕನ್ನಡಿಗರು

    ಬೆಂಗಳೂರು: ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಇಂದು ಕರ್ನಾಟಕ ಬಂದ್‍ಗೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‍ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಹೊಸೂರು ರಸ್ತೆಯಲ್ಲಿ ಪ್ರತಿಭಟನಾಕಾರರು ಟೈರ್‌ಗೆ  ಬೆಂಕಿ ಹಚ್ಚಿ ಪ್ರತಿಭಟನೆ ಇಳಿದಿದ್ದಾರೆ.

    ಕಳೆದ 101 ದಿನಗಳಿಂದ ಮೌರ್ಯ ಸರ್ಕಲ್‍ನಲ್ಲಿ ಕನ್ನಡ ಪರ ಸಂಘಟನೆಗಳು ಧರಣಿ ಮಾಡುತ್ತಿದ್ದು, ಇಂದು ಬಂದ್‍ಗೆ ಕರೆಕೊಟ್ಟಿದ್ದಾರೆ. ಈ ಹಿನ್ನೆಲೆ ಇಂದು ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ, ಸರ್ಕಾರ ಡಾ. ಸರೋಜಿನಿ ಮಹಿಷಿ ವರದಿಯನ್ನ ಜಾರಿಗೆ ತರಬೇಕೆಂದು ಕನ್ನಡ ಪರ ಸಂಘಟನೆಗಳು ಪ್ರತಿಭಟಿಸುತ್ತಿವೆ.

    ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು 400ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಬಂದ್ ಮಾಡುತ್ತಿದ್ದು, ಇತ್ತ ಬೆಳಗ್ಗೆಯೇ ಮಾಗಡಿ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳನ್ನ ಕನ್ನಡ ಪರ ಸಂಘಟನೆಗಳು ಮುಚ್ಚಿಸೋ ಮೂಲಕ ಬಂದ್‍ಗೆ ಸಹಕಾರ ನೀಡುವಂತೆ ಕೇಳಿವೆ.

    ಇಂದು ಕರ್ನಾಟಕ ಬಂದ್ ಇರುವುದರಿಂದ ಅಂಗಡಿ ತರೆಯದಂತೆ ಅಂಗಡಿ ಮಾಲೀಕರಿಗೆ ಪ್ರತಿಭಟನಾಕಾರರು ಮನವರಿಕೆ ಮಾಡಿಕೊಟ್ಟು, ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿದ್ದಾರೆ.

  • ಕರ್ನಾಟಕ ಬಂದ್ – ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿ

    ಕರ್ನಾಟಕ ಬಂದ್ – ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿ

    ಬೆಂಗಳೂರು: ಯಾವಾಗಲೂ ಜನ ಸಂದಣಿಯಿಂದ ಕೂಡಿರುತ್ತಿದ್ದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲೋದಕ್ಕೆ ಬಿಡುತ್ತಿರಲಿಲ್ಲ ಜನ ಓಡೋಡಿ ಬರುತ್ತಿದ್ದರು. ಆದರೆ ಇಂದು ಬಸ್‍ಗಳ ಸಂಚಾರವಿದ್ದರೂ ಪ್ರಯಾಣಿಕರು ಮಾತ್ರ ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತಿದ್ದಾರೆ.

    ಹೌದು. ಇಂದು ಸರೋಜಿನ ಮಹಿಷಿ ವರದಿಯನ್ನ ಜಾರಿಗೆ ತರುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದೆ. ಈ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ನಾವು ಅರ್ಧ ಗಂಟೆಯಿಂದ ಕಾದರೂ ಜನ ಬರುತ್ತಿಲ್ಲ ಬಂದ್ ಅಂತ ಜನ ಭಯಪಡುತ್ತಿದ್ದಾರೆ. ವೋಲ್ವೋದಲ್ಲಂತೂ ಎರಡು ಪ್ರಯಾಣಿಕರು ಇದ್ದರೆ ಹೆಚ್ಚು ಎಂದು ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕರು ಅಳಲು ತೋಡಿಕೊಂಡರು. ಬಂದ್ ಪರಿಣಾಮ ಬಿಎಂಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಸಂಪೂರ್ಣ ಭಣಗುಟ್ಟುತ್ತಿದೆ.

    ಇತ್ತ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸರ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರತಿ ಸರ್ಕಲ್‍ಗೂ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಬಸ್ ಸಂಚಾರ ಯಥಾಸ್ಥಿತಿಯಿದ್ದು, ಎಂದಿನಂತೆ ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್‍ಗಳು ಸಂಚರಿಸುತ್ತಿದೆ. ಆದರೆ ಜನರಿಲ್ಲದೆ ಮೆಜೆಸ್ಟಿಕ್ ಬಸ್ ನಿಲ್ದಾಣ ಮಾತ್ರ ಖಾಲಿ ಖಾಲಿ ಕಾಣಿಸುತ್ತಿದೆ.

    ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಕೂಡ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೆಜೆಸ್ಟಿಕ್‍ನಿಂದ ಫ್ರೀಡಂ ಪಾರ್ಕ್ ವರೆಗೂ ರ‍್ಯಾಲಿ ನಡೆಯಲಿರುವ ಹಿನ್ನೆಲೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಭಧ್ರತೆ ಒದಗಿಸಲಾಗಿದೆ. 1 ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಯ್ಸಳ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಹಾಗೆಯೇ ರೈಲ್ವೆ ಸಂಚಾರದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಎಂದಿನಂತೆ ರೈಲುಗಳು ಸಂಚರಿಸಲಿದೆ. ಆದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಇಳಿಕೆಯಾಗಿದೆ.