Tag: ಕರ್ನಾಟಕ ಪೊಲಿಟಿಕ್ಸ್

  • ಪರಿಶೀಲನೆಗೆ ಸಮಯ ಬೇಕು – ಸುಪ್ರೀಂ ಮುಂದೆ ಸ್ಪೀಕರ್ ಮಂಡಿಸಿದ ವಾದವೇನು?

    ಪರಿಶೀಲನೆಗೆ ಸಮಯ ಬೇಕು – ಸುಪ್ರೀಂ ಮುಂದೆ ಸ್ಪೀಕರ್ ಮಂಡಿಸಿದ ವಾದವೇನು?

    ಬೆಂಗಳೂರು: ಇಂದು ಸಂಜೆ 6 ಗಂಟೆಯ ಒಳಗಡೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರದ ನಿರ್ಧಾರ ತಿಳಿಸಲು ಸಾಧ್ಯವಿಲ್ಲ ಎಂದು ಹೇಳಿ ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಈಗ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಸ್ಪೀಕರ್, ನನಗೆ ಆದೇಶ ನೀಡಲು ನ್ಯಾಯಾಲಯಗಳಿಗೆ ಆದೇಶವಿಲ್ಲ. ನಾನು ನಿಯಮಗಳ ಪ್ರಕಾರವೇ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಹೇಳಿ ಸುಪ್ರೀಂ ಮೆಟ್ಟಿಲೇರಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಇಂದು ತುರ್ತು ವಿಚಾರಣೆ ನಡೆಸುವುದಿಲ್ಲ. ಶುಕ್ರವಾರ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದೆ.

    ಸ್ಪೀಕರ್ ವಾದವೇನು?
    ಸ್ಪೀಕರ್ ಆಗಿರುವ ನನಗೆ ಗಡುವು ಕೊಟ್ಟು ನೀವು ಆದೇಶ ಕೊಡಲು ಬರುವುದಿಲ್ಲ. ಸ್ಪೀಕರ್ ಆಗಿ ನನಗೆ ಸಾಂವಿಧಾನಿಕ ಕರ್ತವ್ಯಗಳಿದ್ದು, ಸಾಂವಿಧಾನಿಕ ಮತ್ತು ವಿಧಾನಸಭೆಯ ನಿಯಮಗಳನ್ನು ಪಾಲಿಸಲೇಬೇಕಿದೆ. ಶಾಸಕರ ರಾಜೀನಾಮೆ ಸ್ವಯಂಪ್ರೇರಿತವೋ? ಬಲವಂತವೋ ಎಂಬ ಬಗ್ಗೆ ಪರಿಶೀಲಿಸಬೇಕಿದೆ. ಅತೃಪ್ತ ಶಾಸಕರ ವಿರುದ್ಧ ಸಲ್ಲಿಕೆಯಾಗಿರುವ ಅನರ್ಹತೆ ಅರ್ಜಿಯ ಪರಿಶೀಲನೆ ಕೆಲಸ ಬಾಕಿ ಇದೆ. ಹೀಗಾಗಿ ಅನರ್ಹತೆಯ ಅರ್ಜಿ ಪರಿಶೀಲನೆ ಸಮಯವಕಾಶ ಬೇಕಾಗುತ್ತದೆ. ಹೀಗಾಗಿ ಅತೃಪ್ತರ ರಾಜೀನಾಮೆಯ ಬಗ್ಗೆ ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.

    ಸುಪ್ರೀಂ ಹೇಳಿದ್ದೇನು?
    ನಿಮ್ಮ ಅರ್ಜಿಯ್ನು ಈ ಕ್ಷಣವೇ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಶಾಸಕರ ರಾಜೀನಾಮೆ ಪರಿಶೀಲನೆ ಸಂಬಂಧ ನಾವು ಬೆಳಗ್ಗೆ ಆದೇಶ ಕೊಟ್ಟಿದ್ದೇವೆ. ಹಾಗಾಗಿ ಶಾಸಕರ ರಾಜೀನಾಮೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ನಾಳೆ (ಶುಕ್ರವಾರ) ಅತೃಪ್ತ ಶಾಸಕರ ಅರ್ಜಿಯ ಜೊತೆಗೆ ನಿಮ್ಮ ವಾದವನ್ನು ಆಲಿಸುತ್ತೇವೆ.

    ಸುಪ್ರೀಂ ಆದೇಶ ಏನು?
    ಅತೃಪ್ತ ಶಾಸಕರು ಸ್ಪೀಕರ್ ಅವರನ್ನು ಇಂದು ಸಂಜೆ 6 ಗಂಟೆಯೊಳಗೆ ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಬೇಕು. ಅಲ್ಲದೆ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆ ಕುರಿತು ಇಂದೇ ನಿರ್ಧಾರ ಕೈಗೊಳ್ಳಬೇಕು. ಆ ನಿರ್ಧಾರವನ್ನು ನಾಳೆ ತನಗೆ ತಿಳಿಸಬೇಕು.

  • ಅತೃಪ್ತರ ರಾಜೀನಾಮೆ ಇಂದೇ ನಿರ್ಧರಿಸಿ-ಸುಪ್ರೀಂ ಆದೇಶ

    ಅತೃಪ್ತರ ರಾಜೀನಾಮೆ ಇಂದೇ ನಿರ್ಧರಿಸಿ-ಸುಪ್ರೀಂ ಆದೇಶ

    ಬೆಂಗಳೂರು: ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರ ಅರ್ಜಿಯನ್ನು ಇಂದೇ ನಿರ್ಧರಿಸಿ. ಇಂದು ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಿರುವ 10 ಶಾಸಕರು ಸ್ಪೀಕರ್ ಮುಂದೆ ಹಾಜರಾಗಬೇಕು. ಹಾಗಾಗಿ ಇಂದು ಎಲ್ಲ ಅತೃಪ್ತ ಶಾಸಕರು ಎಲ್ಲರೂ ಸ್ಪೀಕರ್ ಮುಂದೆ ಹಾಜರಾಗಬೇಕು. ರಾಜೀನಾಮೆ ನೀಡಿರುವ ಎಲ್ಲ ಶಾಸಕರಿಗೆ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರು ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

    ಅತೃಪ್ತ ಶಾಸಕರು ಬುಧವಾರ ಸ್ಪೀಕರ್ ವಿಳಂಬ ನೀತಿಯನ್ನು ವಿರೋಧಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅತೃಪ್ತರ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡು ವಿಚಾರಣೆ ನಡೆಸಿತು. ಮುಖ್ಯ ನ್ಯಾ.ರಂಜನ್ ಗೊಗಯ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಸಿತು. ಅತೃಪ್ತರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಕುಲ್ ರೋಹಟಿಗೆ ವಾದವನ್ನು ಆಲಿಸಿತು. ಇತ್ತ ಸಿಎಂ, ರಾಜ್ಯ ಸರ್ಕಾರ ಮತ್ತು ಸ್ಪೀಕರ್ ಅವರಿಗೆ ನೋಟಿಸ್ ರವಾನಿಸಿದ್ದು, ನಿಮ್ಮ ವಾದವನ್ನು ಮಂಡಿಸಬಹುದು ಎಂದು ತಿಳಿಸಿದೆ.

    ಅತೃಪ್ತ ಶಾಸಕರ ದೂರು ಏನು?
    ಜುಲೈ 6ರಂದು ಎಲ್ಲ 10 ಶಾಸಕರು ರಾಜೀನಾಮೆ ಸಲ್ಲಿಸಲು ವಿಧಾನಸೌಧಕ್ಕೆ ಆಗಮಿಸುತ್ತಿರುವ ವಿಷಯ ತಿಳಿದು ಸ್ಪೀಕರ್ ಕಚೇರಿಯಿಂದ ಹೊರ ನಡೆದಿದ್ದಾರೆ. ಹೀಗಾಗಿ ಸ್ಪೀಕರ್ ಕಚೇರಿಯ ಕಾರ್ಯದರ್ಶಿಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದೇವೆ. ಅಲ್ಲಿಂದ ನೇರವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆಯನ್ನು ಸಲ್ಲಿಸಲಾಗಿದೆ. ಜುಲೈ 9ರಂದು ಕಚೇರಿಗೆ ಆಗಮಿಸಿದ ಸ್ಪೀಕರ್, ಎಂಟು ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ, ಐವರ ಶಾಸಕರ ಪತ್ರಗಳು ಕ್ರಮಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಜುಲೈ 12ರಂದು ವಿಚಾರಣೆಗೆ ಹಾಜರಾಗಬೇಕೆಂದು ಐವರಲ್ಲಿ ಮೂವರಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕರು ರಾಜೀನಾಮೆ ಸಲ್ಲಿಸಿರುವ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸ್ವೀಕರ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ. 10 ಶಾಸಕರು ತಮ್ಮ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ರೆ ಅವರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸ್ವೀಕರ್ ಅವರಿಗೆ ಸಲ್ಲಿಸಿರುವ ಅರ್ಜಿಯನ್ನು ರದ್ದುಗೊಳಿಸಬೇಕು.

    ಜುಲೈ 12ರಂದು ಅಧಿವೇಶನ ಆರಂಭಗೊಳ್ಳಲಿದ್ದು, ಅಂದೇ ಸ್ಪೀಕರ್ ರಾಜೀನಾಮೆ ಕ್ರಮಬದ್ಧವಾಗಿರುವ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಸ್ಪೀಕರ್ ನಡೆ ಯಾರದ್ದೊ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ. ಬಹುಮತವಿಲ್ಲದ ಸರ್ಕಾರ ಶಾಸಕರನ್ನು ಅನರ್ಹಗೊಸುವಂತೆ ಬೆದರಿಕೆಯನ್ನು ಹಾಕಿದೆ. ಶಾಸಕರಾದ ನಾವು ಯಾವುದೇ ಭಯ, ಒತ್ತಡ, ಪ್ರಲೋಭನೆಗೆ ಬಲಿಯಾಗದೇ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ.

    ನಮ್ಮ ರಾಜೀನಾಮೆ ಅಂಗೀಕಾರವಾಗದೇ ಇರೋದು ಸಂವಿಧಾನದ 14ನೇ ಪರಿಚ್ಚೇದದ ಸ್ಪಷ್ಟ ಉಲ್ಲಂಘನೆ ಆಗಿದೆ. ನಾವು ಕರ್ನಾಟಕ ವಿಧಾನಸಭಾ ನಿಯಮಾವಳಿ ರೂಲ್ ನಂಬರ್ 202 ಪ್ರಕಾರ ರಾಜೀನಾಮೆ ಪತ್ರ ಸಲ್ಲಿಸಿದೇವೆ. ಆರ್ಟಿಕಲ್ 190 ರ ಪ್ರಕಾರ ರಾಜೀನಾಮೆ ಪತ್ರದಲ್ಲಿ ಕೇವಲ ಸಹಿ ಇದ್ರೆ ಸಾಕು ಜೊತೆಗೆ ಸ್ಪೀಕರ್ ಗೆ ತೃಪ್ತಿ ಆದ್ರೆ ಸಾಕು. ರಾಜೀನಾಮೆ ಪತ್ರ ಹೀಗೆ ಇರಬೇಕು ಎಂಬ ಕಾನೂನು ಇಲ್ಲ. ನಾವು ಸ್ಪೀಕರ್ ಕಚೇರಿಗೆ ಹೋಗಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ, ಅದನ್ನು ಸ್ಪೀಕರ್ ಕೂಡಾ ನೋಡಿದ್ದಾರೆ.

    ಸ್ಪೀಕರ್ ಕಾನೂನು ಪ್ರಕಾರ ನಡೆದುಕೊಳ್ಳುತ್ತಿಲ್ಲ ಮತ್ತು ಪಕ್ಷಪಾತ ನೀತಿ ಅನುಸರಿಸುತ್ತಿದ್ದಾರೆ. ಈಗ ಮೈತ್ರಿ ಸರ್ಕಾರ ಅಧಿಕೃತವಾಗಿ ಬಹುಮತ ಕಳೆದುಕೊಂಡಿದೆ. ಹೀಗಿದ್ದರೂ ರಮೇಶ್ ಕುಮಾರ್ ತಾವು ಸದನದ ಸ್ಪೀಕರ್ ಅಂತಾ ಅಂದುಕೊಂಡಿದ್ದಾರೆ. ಬಹುಮತ ಕಳೆದುಕೊಂಡ ಸರ್ಕಾರದಲ್ಲಿ ಸ್ಪೀಕರ್ ಮತ್ತು ಸಿಎಂ ಪವರ್ ಲೇಸ್ ಇದ್ದಂಗೆ. ಹಾಗಾಗಿ ನ್ಯಾಯಾಲಯ ಮಧ್ಯಪ್ರವೇಶಿಸಿ, ಸಂವಿಧಾನ ಉಳಿಸಬೇಕು. ನಮ್ಮ ಅರ್ಜಿಯನ್ನ ಮಾನ್ಯ ಮಾಡಬೇಕು. ಸ್ಪೀಕರ್ ನಮ್ಮ ರಾಜೀನಾಮೆಯನ್ನ ಅಂಗೀಕರಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು.

    ಸ್ಪೀಕರ್ ವಾದವೇನು?
    ಸದನದ ನಡಾವಳಿ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಲ್ಲಿಕೆಯಾಗಿರುವ 13 ರಾಜೀನಾಮೆ ಪತ್ರಗಳ ಪೈಕಿ 5 ರಾಜೀನಾಮೆ ಪತ್ರಗಳು ನಿಯಮ ಬದ್ಧವಾಗಿವೆ. ಖುದ್ದು ಹಾಜರಾಗಿ ಮತ್ತೊಮ್ಮೆ ರಾಜೀನಾಮೆ ಪತ್ರ ನೀಡುವಂತೆ ಶಾಸಕರಿಗೆ ತಿಳುವಳಿಕೆ ಪತ್ರದ ಮೂಲಕ ಸೂಚಿಸಿದ್ದೇನೆ. ಕ್ರಮಬದ್ಧವಾಗಿ ರಾಜೀನಾಮೆ ನೀಡಿದವರಿಗೆ ವಿಚಾರಣೆಗೆ ಆಗಮಿಸಲು ಸಮಯ ನಿಗದಿಪಡಿ, ಈ ಎಲ್ಲಾ ಪ್ರಕ್ರಿಯೆ ಬಗ್ಗೆ ರಾಜ್ಯಪಾಲರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಬಹುದು.