Tag: ಕರ್ನಾಟಕ ನೈಟ್ ಕರ್ಫ್ಯೂ

  • ಕೇವಲ ಪ್ರಚಾರಕ್ಕಾಗಿ ಬಂದ್ ಮಾಡಬಾರದು: ನಿಖಿಲ್ ಕುಮಾರಸ್ವಾಮಿ

    ಕೇವಲ ಪ್ರಚಾರಕ್ಕಾಗಿ ಬಂದ್ ಮಾಡಬಾರದು: ನಿಖಿಲ್ ಕುಮಾರಸ್ವಾಮಿ

    ರಾಮನಗರ: ಕೇವಲ ಮಾಧ್ಯಮದಲ್ಲಿ ಪ್ರಚಾರ ಪಡೆಯಲು ಬಂದ್ ಮಾಡಬಾರದು ಎಂದು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

    ನಿಖಿಲ್ ಕುಮಾರಸ್ವಾಮಿ ಅವರು ಅಭಿನಯಿಸಿರುವ ರೈಡರ್ ಸಿನಿಮಾ ರಾಜ್ಯಾದ್ಯಂತ ಡಿಸೆಂಬರ್ 22ರಂದು ಬಿಡುಗಡೆಗೊಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ಈ ಸಿನಿಮಾದ ಪ್ರಮೋಷನ್‍ಗಾಗಿ ರಾಮನಗರದ ಶಾನ್ ಚಿತ್ರಮಂದಿರಕ್ಕೆ ನಿಖಿಲ್ ಭೇಟಿ ನೀಡಿದ್ದರು. ಇದನ್ನೂ ಓದಿ: ಮತಾಂತರ ನಿಷೇಧ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನಾ ಮಸೂದೆಯನ್ನು ಹಿಂಪಡೆಯಿರಿ: SDPI

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 31 ನೇ ತಾರೀಖು ಕರ್ನಾಟಕ ಬಂದ್ ಕರೆ ನೀಡಿರುವುದರಿಂದ ನಮ್ಮ ಚಿತ್ರರಂಗಕ್ಕೆ ಬಹಳ ದೊಡ್ಡ ಹೊಡೆತ ಬೀಳಲಿದೆ. 31 ನೇ ತಾರೀಖು ಹಲವು ಕನ್ನಡ ಸಿನಿಮಾಗಳು ರಿಲೀಸ್ ಆಗಲಿದ್ದು, ಆ ಸಿನಿಮಾಗಳಿಗೆ ಹೊಡೆತ ಬೀಳಲಿದೆ. ನಮಗೆ ಮೊದಲ 3 ದಿನದ ಕಲೆಕ್ಷನ್ ಬಹಳ ಮುಖ್ಯ. ಆದರೆ ಆ ದಿನವೇ ಬಂದ್ ಮಾಡಿದರೆ ತೊಂದರೆಯಾಗುತ್ತದೆ. ಸಾರ್ವಜನಿಕರಿಗೆ ಸಹಾಯವಾಗುತ್ತದೆ ಎಂದರೆ  ಬಂದ್ ಮಾಡಲಿ. ಆದರೆ ಕೇವಲ ಮಾಧ್ಯಮದಲ್ಲಿ ಪ್ರಚಾರ ಪಡೆಯಲು ಬಂದ್ ಮಾಡಬಾರದು. ಆ ರೀತಿಯ ಬಂದ್‍ಗೆ ಯಾವುದೇ ಕಾರಣಕ್ಕೂ ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅನಾರೋಗ್ಯದಿಂದ ಜಾಮೀನಿನ ಮೇಲೆ ಹೊರಬಂದಿರೋ ಪ್ರಜ್ಞಾ ಸಿಂಗ್‌ರಿಂದ ಕ್ರಿಕೆಟ್, ಡ್ಯಾನ್ಸ್ – ವೀಡಿಯೋ ವೈರಲ್

    ಇದೇ ವೇಳೆ ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಸರ್ಕಾರ ಡಿಸೆಂಬರ್ 28ರಿಂದ ನೈಟ್ ಕರ್ಫ್ಯೂ ಜಾರಿಗೊಳಿಸಿದ್ದು, ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೈಟ್ ಕರ್ಫ್ಯೂ ಮಾಡಿರುವುದರಿಂದ ಚಿತ್ರರಂಗಕ್ಕೆ ಹೊಡೆತ ಬೀಳುವುದು ನಿಜ. ಆದರೆ ಜನರ ಆರೋಗ್ಯ ಸಹ ನಮಗೆ ಮುಖ್ಯ. ಹಾಗಾಗಿ ಸರ್ಕಾರದ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.

     

  • 8 ನಗರಗಳಲ್ಲಿ ನೈಟ್‍ಕರ್ಫ್ಯೂ ಮೊದಲ ದಿನ ಅಂತ್ಯ – ಕಂಡಕಂಡಲ್ಲಿ ಬ್ಯಾರಿಕೇಡ್, ಖಾಕಿ ಗಸ್ತು

    8 ನಗರಗಳಲ್ಲಿ ನೈಟ್‍ಕರ್ಫ್ಯೂ ಮೊದಲ ದಿನ ಅಂತ್ಯ – ಕಂಡಕಂಡಲ್ಲಿ ಬ್ಯಾರಿಕೇಡ್, ಖಾಕಿ ಗಸ್ತು

    – ದಂಡ, ಲಾಠಿ ಏಟು, ವಾಹನ ಸೀಜ್

    ಬೆಂಗಳೂರು: ರಾಜ್ಯದ 7 ಜಿಲ್ಲೆಗಳ 8 ನಗರಗಳಲ್ಲಿ ಮೊದಲ ದಿನದ ನೈಟ್‍ಕರ್ಫ್ಯೂ ಮುಕ್ತಾಯವಾಗಿದ್ದು, ಇನ್ನೂ 9 ದಿನ ನೈಟ್‍ಕರ್ಫ್ಯೂ ಇರಲಿದೆ. ಬೆಂಗಳೂರು ನಗರ, ಮೈಸೂರು, ಮಂಗಳೂರು, ತುಮಕೂರು, ಕಲಬುರಗಿ, ಬೀದರ್, ಉಡುಪಿ, ಮಣಿಪಾಲದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್‍ಕರ್ಫ್ಯೂ ಜಾರಿಯಲ್ಲಿದೆ. ಏಪ್ರಿಲ್ 20ರವರೆಗೆ ನೈಟ್‍ಕರ್ಫ್ಯೂ ಇರಲಿದೆ.

    ನೈಟ್‍ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಗೆ ಎಲ್ಲ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದ್ದವು. ಹೋಟೆಲ್, ಬೀದಿಬದಿ ಹೋಟೆಲ್‍ಗಳು, ಅಂಗಡಿ ಮುಂಗಟ್ಟುಗಳು, ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್, ಮಾಲ್, ಥಿಯೇಟರ್ ಎಲ್ಲವೂ 10 ಗಂಟೆಯಷ್ಟೊತ್ತಿಗೆ ಬಾಗಿಲು ಹಾಕಿದ್ದವು. ನೈಟ್‍ಕರ್ಫ್ಯೂ ಹೇರಿಕೆ ಆಗಿರುವ ನಗರಗಳಲ್ಲಿ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಾಕಾಬಂಧಿ ಹಾಕಿದ್ದರು. ಮುಖ್ಯರಸ್ತೆ, ಫ್ಲೈಓವರ್ ಗಳನ್ನು ಬಂದ್ ಮಾಡಿದ್ದರು. ಆದರೆ ಖಾಸಗಿ ಕಂಪನಿಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಐಡಿ ಕಾರ್ಡ್ ತೋರಿಸಿದರೆ ಓಡಾಡಲು ಅವಕಾಶ ಇದೆ. ಝೊಮ್ಯಾಟೋ, ಸ್ವಿಗ್ಗಿ ಸೇರಿದಂತೆ ಆನ್‍ಲೈನ್ ಹೋಂ ಡೆಲಿವರಿ ಸೇವೆ, ಆಸ್ಪತ್ರೆ, ಔಷಧಿ ಅಂಗಡಿಗಳಿಗೆ ರಾತ್ರಿ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ.

    ಬೆಂಗಳೂರು: ನೈಟ್‍ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಯ ಬಳಿಕ ಬೆಂಗಳೂರು ನಗರ ಬಹುತೇಕ ಬಿಕೋ ಎನ್ನುತ್ತಿತ್ತು. ರಾಜಧಾನಿಯ ಪ್ರಮುಖ ಫ್ಲೈಓವರ್ ಗಳು, ಮುಖ್ಯರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದರು. 10 ಗಂಟೆ ಬಳಿಕವೂ ಓಡಾಡ್ತಿದ್ದ ವಾಹನ ಸವಾರರನ್ನು ತಪಾಸಣೆ ಬಿಗಿ ಆಗಿತ್ತು. ಯಶವಂತಪರದಲ್ಲಿ ಮಾಸ್ಕ್ ಹಾಕದೇ ಒಂದೇ ಕಾರಲ್ಲಿ ಪ್ರಯಾಣಿಸ್ತಿದ್ದ ನಾಲ್ವರಿಗೆ ಪೊಲೀಸರು ದಂಡ ವಿಧಿಸಿದರು. ನೈಟ್‍ಪಾರ್ಟಿಯ ಹಾಟ್‍ಸ್ಪಾಟ್ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್‍ಸ್ಟ್ರೀಟ್, ಇಂದಿರಾ ನಗರದಲ್ಲಿ ರಾತ್ರಿ 10 ಗಂಟೆಯ ಬಳಿಕ ಎಲ್ಲವೂ ಬಂದ್ ಆಗಿತ್ತು. ಬನ್ನೇರುಘಟ್ಟದಲ್ಲಿ ಪೊಲೀಸರು ಬೈಕ್‍ಗಳನ್ನು ವಶಕ್ಕೆ ಪಡೆದು ದಂಡ ಹಾಕಿದರು.

    ಕಲಬುರಗಿ: ಕಲಬುರಗಿ ನಗರದಲ್ಲೂ ನೈಟ್‍ಕರ್ಫ್ಯೂ ಬಿಗಿಯಾಗಿತ್ತು. ನೈಟ್‍ಕರ್ಫ್ಯೂ ವೇಳೆಯೂ ಸಂಚರಿಸ್ತಿದ್ದ ಬೈಕ್ ಸವಾರನಿಗೆ ಪೊಲೀಸ್ ಅಧಿಕಾರಿಯೊಬ್ಬರು ಲಾಠಿಯಿಂದ ಬಾರಿಸಿದರು. ರಾತ್ರಿ 11 ಗಂಟೆ ವೇಳೆಗೆ ಶಾಸಕ ಜಮೀರ್ ಅಹ್ಮದ್ ಖಾನ್ ನೈಟ್‍ಕರ್ಫ್ಯೂ ನಡುವೆಯೂ ಓಡಾಡಿದರು. ಆದರೆ ಅವರ ವಾಹನವನ್ನು ಪೊಲೀಸರು ತಡೆಯಲಿಲ್ಲ. ಬಸವಕಲ್ಯಾಣದಲ್ಲಿ ಉಪ ಚುನಾವಣೆ ಪ್ರಚಾರ ಮುಗಿಸಿಕೊಂಡು ಖಾಸಗಿ ಕಾರ್ಯಕ್ರಮಕ್ಕಾಗಿ ಜಮೀರ್ ಕಲಬುರಗಿಗೆ ಬಂದಿದ್ದರು.

    ಮಂಗಳೂರು: ನೈಟ್‍ಕರ್ಫ್ಯೂ ವೇಳೆ ಮಂಗಳೂರಲ್ಲಿ ಪೊಲೀಸ್ ಜೀಪ್ ಮೇಲೆ ದುಷ್ಕರ್ಮಿಯೊಬ್ಬ ಕಲ್ಲು ತೂರಾಟ ನಡೆಸಿದ. ತೊಕ್ಕೊಟ್ಟು ಫ್ಲೈಓವರ್ ಕೆಳಗೆ ನಿಲ್ಲಿಸಿದ ಪೊಲೀಸ್ ಜೀಪ್‍ಗೆ ಕಲ್ಲು ಎಸೆದು ಬಳಿಕ ಪಕ್ಕದಲ್ಲೇ ಇದ್ದ ದೇವಸ್ಥಾನಕ್ಕೆ ನುಗ್ಗಿದ. ಆತನನ್ನು ಹಿಡಿದ ಸ್ಥಳೀಯರು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದರು. ನೈಟ್‍ಕರ್ಫ್ಯೂ ಹಿನ್ನೆಲೆಯಲ್ಲಿ ಖುದ್ದು ಪೊಲೀಸ್ ಆಯುಕ್ತ ಶಶಿಕುಮಾರ್ ಗಸ್ತು ಕೈಗೊಂಡರು. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಾಕಾಬಂಧಿ, ತಪಾಸಣೆಯನ್ನು ಬಿಗಿಗೊಳಿಸಿದ್ದರು. ಈ ವೇಳೆ ಯುವಕನೊಬ್ಬ ತನ್ನನ್ನು ಬಿಡುವಂತೆ ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದ ಘಟನೆಯೂ ನಡೆಯಿತು.

    ಮೈಸೂರು: ಮೈಸೂರು ನಗರದಲ್ಲಿ ನೈಟ್‍ಕರ್ಫ್ಯೂ ಬಿಗಿ ಆಗಿತ್ತು. ರಾತ್ರಿ 10 ಗಂಟೆ ಬಳಿಕ ಜನರ ಓಡಾಟ ಸ್ತಬ್ಧವಾಗಿತ್ತು. ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ನೇತೃತ್ವದಲ್ಲಿ ಅಶ್ವಾರೋಹಿ ದಳ ಗಸ್ತು ತಿರುಗಿತು. ನಗರದಲ್ಲಿ ನೈಟ್‍ಕರ್ಫ್ಯೂ ಜಾರಿಗಾಗಿಯೇ 1,200 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ನಗರ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ನಾಕಾಬಂಧಿ, ತಪಾಸಣೆ ಎಲ್ಲವೂ ಬಿಗಿ ಆಗಿತ್ತು.

    ಬೀದರ್: ಬೀದರ್ ನಗರದಲ್ಲೂ ನೈಟ್‍ಕರ್ಫ್ಯೂ ಜಾರಿ ಬಿಗಿ ಆಗಿತ್ತು. ನೈಟ್‍ಕರ್ಫ್ಯೂ ಉಲ್ಲಂಘಿಸಿ ಓಡಾಡ್ತಿದ್ದವರಿಗೆ ಪೊಲೀಸರು ದಂಡ ಹಾಕಿದರು. ಕೆಲವರಿಗೆ ಎಚ್ಚರಿಕೆಯನ್ನೂ ನೀಡಿದರು. ನಗರದ ಬಸವೇಶ್ವರ ವೃತ, ಅಂಬೇಡ್ಕರ್ ವೃತ, ಹರಳಯ್ಯ ವೃತ, ಚೌಬಾರ್, ಗವಾನ್ ಚೌಕ್, ಬೊಮ್ಮಗೊಂಡೆಶ್ವರ ವೃತದಲ್ಲಿ ಪೊಲೀಸರ ತಪಾಸಣೆ ಹೆಚ್ಚಿತ್ತು.

    ಉಡುಪಿ: ಉಡುಪಿ, ಮಣಿಪಾಲದಲ್ಲೂ ಮೊದಲ ದಿನ ನೈಟ್‍ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಆಗಿತ್ತು. ವಿದೇಶಿ, ಹೊರರಾಜ್ಯದ ವಿದ್ಯಾರ್ಥಿಗಳೇ ಹೆಚ್ಚಿರುವ ಮಣಿಪಾಲ ತಡರಾತ್ರಿವರೆಗೂ ಗಿಜಿಗುಡುವ ನಗರ. ಆದ್ರೆ ನೈಟ್‍ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಗೆ ಎಲ್ಲವೂ ಸ್ತಬ್ಧ ಆಗಿತ್ತು. ಖುದ್ದು ಜಿಲ್ಲಾಧಿಕಾರಿ ಜಗದೀಶ್ ನೈಟ್‍ಕರ್ಫ್ಯೂ ಉಲ್ಲಂಘಿಸಿ ಓಡಾಡ್ತಿದ್ದವರಿಗೆ ಎಚ್ಚರಿಕೆ ನೀಡಿದರು.