Tag: ಕರ್ನಾಟಕ ಚುನವಾಣೆ

  • ರಾಜಕೀಯಕ್ಕೆ ಬರುವ ಮುನ್ಸೂಚನೆ ನೀಡಿದ ನಟ ರಾಕಿಂಗ್ ಸ್ಟಾರ್ ಯಶ್

    ರಾಜಕೀಯಕ್ಕೆ ಬರುವ ಮುನ್ಸೂಚನೆ ನೀಡಿದ ನಟ ರಾಕಿಂಗ್ ಸ್ಟಾರ್ ಯಶ್

    ಬೆಂಗಳೂರು: ರಾಜ್ಯದ ಯಾವುದೇ ಮೂಲೆಯಲ್ಲಿ ಸ್ಪರ್ಧೆ ಮಾಡಿದ್ರೂ ಗೆಲ್ತೀನಿ ಎಂದು ರಾಜಕೀಯಕ್ಕೆ ಬರುವ ಮುನ್ಸೂಚನೆಯನ್ನ ನಟ ರಾಕಿಂಗ್ ಸ್ಟಾರ್ ಯಶ್ ನೀಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ವಿ ನಾಗರಾಜು ಪರ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದ್ದಾರೆ. ಪಟ್ಟಣದ ವೀವರ್ಸ್ ಕಾಲೋನಿಯಿಂದ ಆರಂಭಗೊಂಡ ರೋಡ್ ಶೋ ಸರ್ಕಾರಿ ಬಸ್ ನಿಲ್ದಾಣದ, ಮುಖ್ಯ ಸರ್ಕಲ್‍ ವರೆಗೂ ಸಾಗಿತು. ಇದನ್ನೂ ಓದಿ: ನಟರನ್ನು ಬಚ್ಚಾ ಎಂದಿದ್ದ ಶಾಸಕ ತಿಪ್ಪೇಸ್ವಾಮಿಗೆ ಯಶ್ ತಿರುಗೇಟು

    ಈ ವೇಳೆ ಮಾತನಾಡಿದ ನಟ ಯಶ್, ನೆಲಮಂಗಲ ತಾಲೂಕಿನಲ್ಲಿರುವ 56 ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿ ಮಾಡಿ ಮತ್ತೆ ಕೆರೆಗಳನ್ನು ತುಂಬಿಸುತ್ತೇನೆ ಎಂಬ ಉತ್ಸಾಹದಲ್ಲಿ ಮಾಜಿ ಶಾಸಕ ನಾಗರಾಜು ಅವರಿದ್ದಾರೆ. ಹೀಗಾಗಿ ನಾನು ನಾಗರಾಜ್ ಪರ ಮತಯಾಚನೆ ಮಾಡಲು ಬಂದಿದ್ದೇನೆ ಎಂದರು.

    ಒಂದು ವೇಳೆ ನಾಗರಾಜ್ ಗೆದ್ದ ಮೇಲೆ ಕೆರೆಗಳನ್ನು ಅಭಿವೃದ್ಧಿ ಮಾಡದೇ ಇದ್ದರೆ, ನಾನೇ ಖುದ್ದು ಜನರ ಮಧ್ಯೆ ಕೂತು ಪ್ರತಿಭಟನೆ ಮಾಡುತ್ತೇನೆ ಎಂದು ಮತದಾರರಿಗೆ ಭರವಸೆ ನೀಡಿದರು.

    ಇದೇ ವೇಳೆ ಯಶ್ ರಾಜಕೀಯ ಪ್ರವೇಶ ಕುರಿತ ಹೇಳಿಕೆಯನ್ನು ತಮ್ಮ ಸಿನಿಮಾ ಡೈಲಾಗ್ ಮೂಲಕವೇ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಎಂಎಲ್‍ಎ, ಎಂಪಿ ಮಿನಿಸ್ಟರ್ ಆಗಬೇಕಾದರೆ ನಾನು ತಲೆಕೆಡಿಸಿಕೊಳ್ಳಬೇಕಿಲ್ಲ. ಕರ್ನಾಟಕ ಯಾವುದೇ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡಿದರೂ ಚುನಾವಣೆಯಲ್ಲಿ ಜನ ನನ್ನನ್ನು ಗೆಲ್ಲಿಸುತ್ತಾರೆ. ಜನರು ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವಷ್ಟು ಅಭಿಮಾನ ಇಟ್ಟಿದ್ದಾರೆ. ಈ ಅಭಿಮಾನವೇ ಚುನಾವಣೆಯಲ್ಲಿ ಗೆಲ್ಲಿಸುತ್ತೆ ಅಂತ ಪರೋಕ್ಷವಾಗಿ ರಾಜಕೀಯ ಪ್ರವೇಶದ ಬಗ್ಗೆ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.

    ಬಿಜೆಪಿ ಅಭ್ಯರ್ಥಿ ನಾಗರಾಜು ಮಾತನಾಡಿ ಯಶ್ ಬಂದ ಮೇಲೆ ನನಗೆ ಆನೆ ಬಲ ಬಂದಂತಾಗಿದೆ ಎಂದ್ರು.

  • ನಟರನ್ನು ಬಚ್ಚಾ ಎಂದಿದ್ದ ಶಾಸಕ ತಿಪ್ಪೇಸ್ವಾಮಿಗೆ ಯಶ್ ತಿರುಗೇಟು

    ನಟರನ್ನು ಬಚ್ಚಾ ಎಂದಿದ್ದ ಶಾಸಕ ತಿಪ್ಪೇಸ್ವಾಮಿಗೆ ಯಶ್ ತಿರುಗೇಟು

    ಬೆಂಗಳೂರು: ನಟ, ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು ಎಂದು ಹೇಳಿಕೆ ನೀಡಿದ್ದ ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿಗೆ ರಾಕಿಂಗ್ ಸ್ಟಾರ್ ತಿರುಗೇಟು ನೀಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಎಂ.ವಿ.ನಾಗರಾಜು ಪರ ನಟ ಯಶ್ ಮತಯಾಚನೆ ಮಾಡಿದ್ದಾರೆ. ನಂತರ ತಿಪ್ಪೇಸ್ವಾಮಿ ಯಶ್ ಬಚ್ಚಾ ಎನ್ನುವ ವಿಚಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ರಾಜಕೀಯ ಒಂದು ಗೇಮ್. ಅದು ನಿಜ ಇರಬೇಕು. ಅವರ ವಯಸ್ಸೇನು, ಅವರು ತುಂಬಾ ಹಿರಿಯರು, ಅವರ ಮುಂದೆ ನಾನು ಬಚ್ಚಾನೆ. ಅದನ್ನ ಜನ ಡಿಸೈಡ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈ ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು: ತಿಪ್ಪೇಸ್ವಾಮಿ

    ರಾಜಕೀಯದಲ್ಲಿ ಒಬ್ಬ ಗೆಲ್ಲಬೇಕಾದರೆ ನಾಲ್ಕು ಜನ ಸೋಲಲೇಬೇಕು. ಶ್ರೀರಾಮುಲು ನನಗೆ ಪರಿಚಯ ಹೀಗಾಗಿ ಅವರ ಹಾಗೂ ನನ್ನ ಅಭಿಮಾನಿಗಳಿಗೋಸ್ಕರ ಪ್ರಚಾರ ಮಾಡಿದೆ. ಜನಕ್ಕೆ ಏನೂ ಮಾಡಬೇಕು ಅನ್ನೋದು ನನ್ನ ಬುದ್ಧಿವಂತಿಕೆ, ವ್ಯವಸ್ಥೆಯನ್ನು ಬದಲಾಯಿಸುವ ನಂಬಿಕೆ ನನ್ನಲ್ಲಿಲ್ಲ. ಶಕ್ತಿವಂತರು, ಬುದ್ಧಿವಂತರು, ಜನರ ಪ್ರೀತಿಗಳಿಸಲು ಪ್ರಯತ್ನ ಪಡುವವರಿಗೆ ನಾನು ಸಹಕಾರಿಯಾಗುತ್ತೇನೆ. ನಾನು ಪ್ರಚಾರ ಮಾಡುವ ಸ್ಥಳಗಳಲ್ಲಿ ವಿರೋಧಿಗಳಿಗೆ ಭಯ ಹುಟ್ಟಿರಬಹುದು ಎಂದು ತಿರುಗೇಟು ನೀಡಿದ್ರು.

    ನಾನು ಪ್ರಚಾರ ಮಾಡುತ್ತಿರುವ ಅಭ್ಯರ್ಥಿಗಳ ಗೆಲುವು ಸೋಲಿಗಿಂತ ಹೇಗೆ ಕೆಲಸ ಮಾಡುತ್ತಾರೆ ಎನ್ನುವುದು ಮುಖ್ಯ. ಕಲಾವಿದನಾಗಿ ಜನ ನನಗೆ ಪ್ರೀತಿ ತೋರಿಸುತ್ತಾ ಇದ್ದಾರೆ. ಅದಕ್ಕೆ ನಾನು ಏನು ಮಾಡಬೇಕು ಅಂತಾ ಅವರ ಪರವಾಗಿ ಯೋಚನೆ ಮಾಡುತ್ತಾ ಇದ್ದೇನೆ. ನನಗೆ ಒಳ್ಳೆಯವನು ಕೆಟ್ಟವನು ಅನ್ನಿಸಿಕೊಳ್ಳುವ ಬಗ್ಗೆ ಯೋಚನೆ ಇಲ್ಲ. ಎಸ್ಟೋ ಸಲ ಕೆಟ್ಟೋನು ಎಂದವರು ನಂತರ ಒಳ್ಳೆಯವನು ಅಂದಿದ್ದಾರೆ ಎಂದು ವಿರೋಧಿಗಳಿಗೆ ಯಶ್ ಟಾಂಗ್ ನೀಡಿದ್ದಾರೆ.

  • ಅಭಿಮಾನಿಗಳ ವಿರುದ್ಧ ರೇಗಾಡಿದ ಕುಮಾರಸ್ವಾಮಿ!

    ಅಭಿಮಾನಿಗಳ ವಿರುದ್ಧ ರೇಗಾಡಿದ ಕುಮಾರಸ್ವಾಮಿ!

    ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಗೆಂದು ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿಮಾನಿಗಳ ಮೇಲೆ ಕೋಪಗೊಂಡು ರೇಗಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಇಂದು ಕುಮಾರಸ್ವಾಮಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮಕ್ಕೆ ಪ್ರಚಾರಕ್ಕೆಂದು ಹೋಗಿದ್ದರು. ಆಗ ಅಭಿಮಾನಿಗಳು ಕುಮಾರಸ್ವಾಮಿ ಅವರಿಗೆ ಪದೇ ಪದೇ ಬಸ್ಸಿನಿಂದ ಕೆಳಗಿಳಿಯುವಂತೆ ಬೇಡಿಕೆಯಿಡುತ್ತಿದ್ದರು. ಈ ವೇಳೆ ಅಭಿಮಾನಿಗಳ ವಿರುದ್ಧ ಕುಮಾರಸ್ವಾಮಿ ರೇಗಾಡಿದ್ದು, ನನಗೆ ಸಮಯ ಇಲ್ಲ ಇನ್ನು ತುಂಬಾ ಗ್ರಾಮಗಳಿಗೆ ತೆರಳಬೇಕಿದೆ ಎಂದು ಹೇಳಿದ್ದಾರೆ.

    ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಪರವಾಗಿ ರೋಡ್ ಶೋ ಆರಂಭಿಸಿದಾಗ ಬಸ್‍ನಿಂದ ಕೆಳಗಿಳಿದು ಪ್ರಚಾರ ಮಾಡಿ. ಅಲ್ಲದೇ ವಾಹನದ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಅಭಿಮಾನಿಗಳು ಕೇಳಿಕೊಂಡಿದ್ದರು. ಈ ವೇಳೆ ಪ್ರಚಾರ ವಾಹನದ ಮೇಲಿದ್ದ ಕುಮಾರಸ್ವಾಮಿ ಕೆಳಗಿಳಿಯಲು ಆಗಲ್ಲ ನಾನಿನ್ನು ಸಾಕಷ್ಟು ಊರುಗಳಿಗೆ ಹೋಗಬೇಕಿದೆ. ನನ್ ಆರೋಗ್ಯದ ಗತಿ ಏನಾಗಬೇಕು. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಕಾರ್ಯಕರ್ತರ ಮನವೊಲಿಸಿ ಮುಂದೆ ಹೋಗಿದ್ದಾರೆ.

  • ಅಂಬರೀಶ್ ಅವ್ರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿದ್ದವರೇ ಕಾರಣ: ಕಾಂಗ್ರೆಸ್ ಮುಖಂಡ ಪರೋಕ್ಷ ವಾಗ್ದಾಳಿ

    ಅಂಬರೀಶ್ ಅವ್ರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿದ್ದವರೇ ಕಾರಣ: ಕಾಂಗ್ರೆಸ್ ಮುಖಂಡ ಪರೋಕ್ಷ ವಾಗ್ದಾಳಿ

    ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರು ಚುನಾವಣೆಯಿಂದೆ ಹಿಂದೆ ಸರಿದರೂ ಅವರ ಬಗ್ಗೆ ಜಿಲ್ಲೆಯಲ್ಲಿ ದಿನಕ್ಕೊಂದು ಚರ್ಚೆ ನಡೆಯುತ್ತಿದೆ. ಅಂಬರೀಶ್ ಅವರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿ ಇದ್ದವರೇ ಕಾರಣ. ಅಕ್ಕಪಕ್ಕದಲ್ಲಿದ್ದವರೇ ಅವರನ್ನು ಹಾಳು ಮಾಡಿದ್ರು ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಎಚ್‍.ಬಿ.ರಾಮು ಪರೋಕ್ಷವಾಗಿ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ಅವರು, ಅಂಬಿ ಉತ್ತಮ ನಟ, ಉತ್ತಮ ವ್ಯಕ್ತಿ. ರಾಜಕಾರಣಕ್ಕೆ ಅವರ ನಡವಳಿಕೆ ಇಷ್ಟವಾಗಲಿಲ್ಲ. ಅವರ ಅಕ್ಕಪಕ್ಕ ಇದ್ದ ಹತ್ತಾರು ಮಂದಿ ಸ್ವಾರ್ಥಕ್ಕಾಗಿ ಅವರನ್ನು ಬಳಸಿಕೊಂಡರು. ಅಂಬಿ ಮೇಲೆ ಜನತೆ ಇಟ್ಟಂತಹ ಪ್ರೀತಿ ವಿಶ್ವಾಸಕ್ಕೆ ತಿಂಗಳಿಗೊಮ್ಮೆಯಾದ್ರೂ ಅವರು ಕಚೇರಿಯಲ್ಲಿ ಕುಳಿತುಕೊಂಡು ಜನಸಾಮಾನ್ಯರ ಕೆಲಸ ಮಾಡಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಅಂಬಿ ಆಪ್ತರ ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದೇ ತಪ್ಪಾಗಿದೆ ಎಂದು ಹೇಳಿದ್ದಾರೆ.

    ಅಂಬರೀಶ್ ಜೊತೆಯಲ್ಲಿ ಇದ್ದಂತವರಾದ್ರೂ ವ್ಯವಸ್ಥಿತವಾಗಿ ಕೆಲಸ ಮಾಡಿಸಿದ್ದರೆ ಅವರ ಇಮೇಜ್ ಇಷ್ಟು ಹಾಳಾಗುತ್ತಿರಲಿಲ್ಲ. ಅಂಬರೀಶ್ ಅವರು ಕೆಲವರಿಗೆ ಮಾತ್ರ ಸೀಮಿತವಾದರು. ಪಕ್ಕದಲ್ಲಿ ಇದ್ದವರು ಮರ ಬೆಳೆದರೆ ಅದರ ನೆರಳಲ್ಲಿ ಹಲವರು ಇರಬಹುದು ಎಂದು ಯೋಚಿಸಬಹುದಿತ್ತು. ಆದರೆ ಮರವನ್ನು ಪೋಷಿಸುವ ಕೆಲಸ ಪಕ್ಕದಲ್ಲಿದ್ದವರು ಮಾಡಲಿಲ್ಲ ಎಂದ್ರು.

    ಅಂಬರೀಶ್ ಅವರು ಕಿವಿ ಮಾತನ್ನು ಹೆಚ್ಚು ಕೇಳುತ್ತಿದ್ದರು. ಕಬ್ಬಿಣ ಯಾವುದು ಚಿನ್ನ ಯಾವುದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಅವರಲ್ಲಿ ಉದಾರತನವಿತ್ತು ಅದನ್ನು ಜೊತೆಯಲ್ಲಿದ್ದವರು ದುರ್ಬಳಕೆ ಮಾಡಿಕೊಂಡು. ಇದು ತುಂಬಾ ನೋವಾಗುತ್ತೆ ಎಂದು ಅಮರಾವತಿ ಚಂದ್ರಶೇಖರ್ ವಿರುದ್ಧ ಮಾಜಿ ಶಾಸಕ ರಾಮು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಆದ್ರೆ ರಾಮು ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅಮರಾವತಿ ಚಂದ್ರಶೇಖರ್, ನಾನು ಈ ಬಗ್ಗೆ ನೋಡು ಇಲ್ಲ. ಕೇಳು ಇಲ್ಲ. ಇದರ ಬಗ್ಗೆ ನಾನೇನು ಮಾತನಾಡಲ್ಲ ಎಂದಿದ್ದಾರೆ.

  • ಪ್ರಧಾನಿಯವರು ನನಗೆ ಬೌಲಿಂಗ್ ಮಾಡೋಕೆ ಆಗಲ್ಲ: ಮೋದಿಗೆ ಕುಮಾರಸ್ವಾಮಿ ಟಾಂಗ್

    ಪ್ರಧಾನಿಯವರು ನನಗೆ ಬೌಲಿಂಗ್ ಮಾಡೋಕೆ ಆಗಲ್ಲ: ಮೋದಿಗೆ ಕುಮಾರಸ್ವಾಮಿ ಟಾಂಗ್

    ವಿಜಯಪುರ: ರಾಷ್ಟ್ರೀಕೃತ ಬ್ಯಾಂಕ್‍ ಗಳಲ್ಲಿ ಸಾಲ ಮನ್ನಾ ಮಾಡುವ ಬಗ್ಗೆ ಯಡಿಯೂರಪ್ಪ ಅವರಿಗೆ ಈಗ ಜ್ಞಾನೋದಯವಾಗಿದೆ. ಹಾಗಾಗಿ ಈಗ ಟ್ವೀಟ್ ಮಾಡಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಯಡ್ಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.

    ನಗರದ ಜೆಡಿಎಸ್ ಅಭ್ಯರ್ಥಿ ಎಸ್.ಕೆ ಬೆಳ್ಳುಬ್ಬಿ ಪರ ಮತಯಾಚನೆ ಮಾಡುವ ಹಿನ್ನೆಲೆಯಲ್ಲಿ ನಗರದ ದರಬಾರ್ ಮೈದಾನದಲ್ಲಿ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನ ಆಯೋಜಿಸಲಾಗಿತ್ತು. ಗಿಡಕ್ಕೆ ನೀರು ಹಾಕುವ ಮುಖಾಂತರ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಇದನ್ನೂ ಓದಿ: ಕೃಷ್ಣನೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ `ನಮೋ’- ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸುಳಿವು ಕೊಟ್ರಾ ಪ್ರಧಾನಿ?

    ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಚ್‍ಡಿಕೆ, ರಿಸರ್ವ್ ಬ್ಯಾಂಕ್ ನವರು ನೋಟ್ ಪ್ರಿಂಟ್ ಮಾಡುವ ಮಷೀನ್ ನೀಡಿಲ್ಲ. ಹಾಗಾಗಿ ಸಾಲ ಮನ್ನಾ ಮಾಡಲು ಆಗಲ್ಲ ಎಂದು ಯಡಿಯೂರಪ್ಪ ಮೊದಲು ಹೇಳಿದ್ದರು. ಚುನಾವಣೆ ಬಂದಾಕ್ಷಣ ಯಡಿಯೂರಪ್ಪ ಅವರಿಗೆ ರೈತರ ಮೇಲೆ ಕನಿಕರ ಬಂತಾ ಎಂದು ಪ್ರಶ್ನಿಸಿದ್ದಾರೆ. ರೈತರ ಸಾಲ ಮನ್ನಾ ವಿಚಾರ ಪ್ರಸ್ತಾಪ ಮಾಡದೇ ಹೋದರೆ ರೈತರು ಮತ ಹಾಕಲ್ಲ ಎಂದು ಈಗ ಸಾಲ ಮನ್ನಾ ಬಗ್ಗೆ ಮಾತಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಸವಾಲಿನಂತೆ ರಾಜೀನಾಮೆ ಕೊಟ್ಟರೂ ಮೋದಿ ಸ್ವೀಕರಿಸದೇ ವಿನಂತಿಸಿಕೊಂಡ್ರು: ಅಂದಿನ ಘಟನೆಯನ್ನು ನೆನಪಿಸಿಕೊಂಡ ಎಚ್‍ಡಿಡಿ

    ದೇವೇಗೌಡರ ಬಗ್ಗೆ ಅನುಕಂಪದ ಮಾತಾಡಿದ ಮೋದಿ ಕುರಿತು ಪ್ರತಿಕ್ರಿಯಿಸಿದ ಅವರು, 2014 ರ ಲೋಕಸಭಾ ಚುನಾವಣೆ ವೇಳೆ ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಕಳಿಸುತ್ತೇನೆಂದು ಯಾಕೆ ಹೇಳಿದ್ರು ಎಂದು ಪ್ರಶ್ನಿಸಿದ್ದಾರೆ. ಈಗೇಕೆ ದೇವೇಗೌಡರ ಬಗ್ಗೆ ಅನುಕಂಪ ಬಂತು. ರಾಜ್ಯದ ಜನತೆ ಈಗಾಗಲೇ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಮೋದಿ ಅವರು ಬಿಟ್ಟಿರುವಂತ ಪದ ಪುಂಜಗಳು ಎಲ್ಲರಲ್ಲಿ ಗೊಂದಲ ಸೃಷ್ಟಿಸಿದೆ. ಮೋದಿ ಅವರು ನನಗೆ ಬಾಲ್ ಹಾಕೋಕೆ ಆಗಲ್ಲ ಎಂದು ಟಾಂಗ್ ನೀಡಿದ್ದಾರೆ.

  • ಎಲೆಕ್ಷನ್ ಎಫೆಕ್ಟ್ – ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್

    ಎಲೆಕ್ಷನ್ ಎಫೆಕ್ಟ್ – ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್

    ಬೆಂಗಳೂರು: ಪ್ರತಿ ವರ್ಷ ವೋಟ್ ಮಾಡುವವರ ಸಂಖ್ಯೆಯನ್ನ ಅಧಿಕ ಮಾಡಲು ಚುನಾವಣಾ ಆಯೋಗ ನಾನಾ ರೀತಿಯ ಕಸರತ್ತು ಮಾಡುತ್ತಾ ಇದೆ. ಆದರೆ ಸಂಖ್ಯೆ ಮಾತ್ರ ವೃದ್ದಿಸುತ್ತಿಲ್ಲ. ಅದಕ್ಕಾಗಿ ಇಲ್ಲೊಬ್ಬರು ಸಮಾಜ ಸೇವಕ ಜೆರಾಕ್ಸ್ ಅಂಗಡಿ ಇಟ್ಟು ಮೊದಲ ಬಾರಿ ವೋಟ್ ಮಾಡುವ ಕಾಲೇಜು ವಿಧ್ಯಾರ್ಥಿಗಳಿಗೆ ವಿಶೇಷ ಆಫರ್ ನೀಡಿದ್ದಾರೆ.

    ಈ ಬಾರಿಯ ಚುನಾವಾಣೆ ನಾನಾ ಕಾರಣಗಳಿಗೆ ತೀವ್ರ ಕುತೂಹಲ ಕೆರಳಿಸಿದೆ. ಹಾಗಾಗಿ ಪ್ರತಿಯೊಬ್ಬರು ವೋಟ್ ಮಾಡಿ ನಮಗೆ ಸೂಕ್ತವೆನಿಸುವ ಜನ ಪ್ರತಿನಿಧಿಯನ್ನು ಆಯ್ಕೆ ಮಾಡಿ ಅನ್ನೋ ಘೋಷಣೆಗಳು ಎಲ್ಲೆಡೆ ಕೇಳಿ ಬರುತ್ತಿದೆ. ಈ ಘೋಷಣೆಗಳ ಮಧ್ಯೆ ವಿಶ್ವೇಶ್ವರ ಅವರು ತುಂಬ ವಿಭಿನ್ನವಾಗಿಯೇ ಚುನಾವಣೆ ಪ್ರಚಾರ ಮಾಡಿದ್ದಾರೆ.

    ನಾನು ವೋಟ್ ಮಾಡಿ ಅಂತ ಜನಜಾಗೃತಿ ಮೂಡಿಸುವ ಜೊತೆಗೆ ಮೊದಲ ಬಾರಿಗೆ ವೋಟ್ ಮಾಡುವ ಕಾಲೇಜು ವಿದ್ಯಾರ್ಥಿಗಳಿಗೆ ಕೇವಲ 25 ಪೈಸೆಗೆ ಜೆರಾಕ್ಸ್ ಮಾಡಿಕೊಡುವುದಾಗಿ ಘೋಷಣೆ ಮಾಡಿದ್ದೇನೆ. ಅಷ್ಟೇ ಅಲ್ಲದೇ ತನ್ನ ಅಂಗಡಿ ಮುಂದೆ ದೊಡ್ಡ ಬೋರ್ಡ್ ಹಾಕಿದ್ದು, ನನ್ನ ಶಾಪಿಗೆ ಬರುವ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಹ ಮಾಡುತ್ತಿದ್ದೇನೆ ಎಂದು ಸಮಾಜ ಸೇವಕ ವಿಶ್ವೇಶ್ವರ ಹೇಳಿದ್ದಾರೆ. ಇದನ್ನೂ ಓದಿ: ಮತ ಹಾಕಿದ್ರೆ 5 ವರ್ಷ ಡಿಸ್ಕೌಂಟ್ – ಗ್ರಾಹಕರಿಗೆ ಮೆಡಿಕಲ್ ಶಾಪ್ ಓನರ್ ಆಫರ್

    ಈ ಆಫರ್ 1 ತಿಂಗಳ ಕಾಲ ಜಾರಿಯಲ್ಲಿರಲಿದ್ದು, ವೋಟ್ ಹಾಕಿದವರು ಕಾಲೇಜು ಐಡಿ ಮತ್ತು ಮತದಾನದ ಗುರುತಿನೊಂದಿಗೆ ಅಂಗಡಿಗೆ ಬಂದರೆ ಸಾಕು ಈ ಆಫರ್ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಪ್ರಾಜೆಕ್ಟ್ ವರ್ಕ್ ಮಾಡುವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ ನೆಟ್ ಸೌಲಭ್ಯವನ್ನು ಸಹ ನೀಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.

  • ಸಿನಿಮಾ ನಟ-ನಟಿಯರಿಂದ ಕೈ ಅಭ್ಯರ್ಥಿಯ ಪರ ಪ್ರಚಾರ

    ಸಿನಿಮಾ ನಟ-ನಟಿಯರಿಂದ ಕೈ ಅಭ್ಯರ್ಥಿಯ ಪರ ಪ್ರಚಾರ

    ರಾಮನಗರ: ಕರ್ನಾಟಕ ವಿಧಾನ ಸಭಾ ಚುನಾವಣೆ ದಿನೆದಿನೇ ರಂಗೇರುತ್ತಿದ್ದು, ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ  ಸ್ಯಾಂಡಲ್‍ ವುಡ್‍ನ ನಟ-ನಟಿಯರು ಕಾಂಗ್ರೇಸ್ ಅಭ್ಯರ್ಥಿ ಎಚ್.ಎಂ ರೇವಣ್ಣ ಪರ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದ್ದಾರೆ.

    ನಟರಾದ ಅನೂಪ್ ರೇವಣ್ಣ, ಬಿಗ್ ಬಾಸ್ ವಿನ್ನರ್ ಪ್ರಥಮ್, ಕೋಟೆ ಪ್ರಭಾಕರ್, ನಟಿಯರಾದ ಮಯೂರಿ, ರೂಪಿಕಾ ಹಾಗೂ ನಿರ್ದೇಶಕ ಆರ್. ಚಂದ್ರ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿ ರೇವಣ್ಣ ಪರ ಮತಯಾಚನೆ ನಡೆಸಿದ್ದಾರೆ.

    ನಗರದ ಮಂಗಳವಾರ ಪೇಟೆಯಿಂದ ಭೈರಾಪಟ್ಟಣದವರೆಗೆ ರೋಡ್ ಶೋ ನಡೆಸಿದ್ದು, ಇದೇ ವೇಳೆ ಮಾತನಾಡಿದ ಪ್ರಥಮ್, ಚನ್ನಪಟ್ಟಣದಲ್ಲಿ ಸತತವಾಗಿ 20 ವರ್ಷಗಳಿಂದ ಯೋಗೇಶ್ವರ್ ಆಯ್ಕೆಯಾಗುತ್ತಲೇ ಬಂದಿದ್ದಾರೆ. ಈ ಬಾರಿ ಅವರು ರಾಜಕೀಯದಿಂದ ವಿಶ್ರಾಂತಿ ಪಡೆಯಲಿ, ಇನ್ನೂ ಎಚ್.ಡಿ ಕುಮಾರಸ್ವಾಮಿಯವರು ಎರಡೂ ಕಡೆ ಸ್ಪರ್ಧಿಸಿರುವುದರಿಂದ ಹಣ ಪೋಲಾಗಲಿದೆ. ಈ ಬಾರಿ ಎಚ್.ಎಂ ರೇವಣ್ಣಗೆ ಒಂದು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

    ಇನ್ನು ಈ ಬಗ್ಗೆ ಮಾತನಾಡಿದ ನಟಿ ಮಯೂರಿ ಕೂಡಾ ರೇವಣ್ಣರನ್ನ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.