Tag: ಕರ್ನಾಟಕ ಚುಣಾವಣೆ

  • ಪಕ್ಷಾಂತರಿಗಳ ಜಿದ್ದಾಜಿದ್ದಿ – ಯಾರ ಪಾಲಾಗುತ್ತೆ ಅರಸೀಕೆರೆ?

    ಪಕ್ಷಾಂತರಿಗಳ ಜಿದ್ದಾಜಿದ್ದಿ – ಯಾರ ಪಾಲಾಗುತ್ತೆ ಅರಸೀಕೆರೆ?

    ಹಾಸನ: ಪಕ್ಷಾಂತರಿಗಳ ಸ್ಪರ್ಧೆಯಿಂದಾಗಿ ಈ ಬಾರಿ ಅರಸೀಕೆರೆ ಕ್ಷೇತ್ರ ವಿಧಾನಸಭಾ ಚುನಾವಣೆಯಲ್ಲಿ ಗಮನ ಸೆಳೆಯಲಿದೆ. ಈ ಪಕ್ಷದಿಂದ ಆ ಪಕ್ಷಕ್ಕೆ ಮತ್ತು ಆ ಪಾರ್ಟಿಯಿಂದ ಈ ಪಾರ್ಟಿಗೆ ಜಿಗಿದವರು ಅಖಾಡದಲ್ಲಿದ್ದಾರೆ. ಅರಸೀಕೆರೆ (Arasikere) ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಕ್ಷೇತ್ರದಲ್ಲಿ ಜಾತಿ ರಾಜಕಾರಣ ಮತ್ತು ತಾವಿದ್ದ ಪಕ್ಷಗಳಿಗೆ ಮೋಸ ಮಾಡಿದ ಆರೋಪ ವಿಷಯವೇ ಮುಖ್ಯ ಆಗಲಿದೆ.

    ಕಳೆದ ಮೂರು ಚುನಾವಣೆಗಳಲ್ಲಿ ಜೆಡಿಎಸ್‌ನಿಂದ (JDS) ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿರುವ ಕೆ.ಎಂ.ಶಿವಲಿಂಗೇಗೌಡ (Shivalinge Gowda) ಅವರು ಪಕ್ಷ ತೊರೆದು ಕಾಂಗ್ರೆಸ್‌ (Congress) ಸೇರಿ ಕಣದಲ್ಲಿದ್ದಾರೆ. ಅಂತೆಯೇ ಬಿಜೆಪಿಯಿಂದ (BJP) ಟಿಕೆಟ್‌ ಸಿಗದಿದ್ದಕ್ಕೆ ಎನ್.ಆರ್‌.ಸಂತೋಷ್‌ ಜೆಡಿಎಸ್‌ ಸೇರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಜಿ.ವಿ.ಬಸವರಾಜು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಸುದೀಪ್ ವಿಚಾರದಲ್ಲಿ ನನಗೆ ಬೇಸರವಿಲ್ಲ: ಶ್ರೀರಾಮುಲು

    ಅಖಾಡದಲ್ಲಿರುವ ಪೈಲ್ವಾನರು
    ಕೆ.ಎಂ.ಶಿವಲಿಂಗೇಗೌಡ (ಕಾಂಗ್ರೆಸ್)
    ಎನ್.ಆರ್.ಸಂತೋಷ್ (ಜೆಡಿಎಸ್)
    ಜಿ.ವಿ.ಬಸವರಾಜು (ಬಿಜೆಪಿ)

    ಅಭ್ಯರ್ಥಿಗಳ ಪ್ಲಸ್‌, ಮೈನಸ್‌ ಏನು?
    ಕೆ.ಎಂ.ಶಿವಲಿಂಗೇಗೌಡ: ಕಳೆದ ಮೂರು ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ. 538 ಹಳ್ಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿರುವುದು. ಸರ್ಕಾರ ಯಾವುದೇ ಇದ್ದರೂ ಅನುದಾನ ತರುವ ಛಾತಿ ಇರುವುದು ಶಿವಲಿಂಗೇಗೌಡರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಮೈನಸ್‌ ಅಂಶವೆಂದರೆ, ಇತ್ತೀಚೆಗೆ ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿದ್ದು. ʼಕೈʼ ಪಕ್ಷದೊಳಗಿನ ಒಳೇಟು ಭಯ. ದಳಪತಿಗಳನ್ನು ಮೊದಲ ಬಾರಿಗೆ ಎದುರು ಹಾಕಿಕೊಂಡಿರುವುದಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ ನೀಡಿದ್ರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಯತ್ನಾಳ್

    ಎನ್.ಆರ್.ಸಂತೋಷ್: ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯದ ಬಲ ಮತ್ತು ಜೆಡಿಎಸ್ ಬೆಂಬಲ ಅಭ್ಯರ್ಥಿಗೆ ಪ್ಲಸ್‌ ಪಾಯಿಂಟ್‌ ಆಗಲಿದೆ ಎನ್ನಲಾಗಿದೆ. ಈವರೆಗೂ ಬಿಜೆಪಿಯಲ್ಲಿದ್ದು, ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ಗೆ ಬಂದಿರುವುದು. ಜನರ ಜನರ ನಡುವೆ ಜಗಳ ತಂದಿಟ್ಟು, ಕೇಸು ಹಾಕಿಸುತ್ತಾರೆ ಎಂಬ ಆರೋಪ. ಮೂಲ ಜೆಡಿಎಸ್ ಮುಖಂಡರ ವಿರೋಧ ಭೀತಿ ಇವರಿಗೆ ಮೈನಸ್‌ ಪಾಯಿಂಟ್‌ ಆಗಿದೆ.

    ಜಿ.ವಿ.ಬಸವರಾಜು: ಬಿಜೆಪಿ ಬೆಂಬಲ ಜೊತೆಗೆ ಪಕ್ಷ ನಿಷ್ಠರು ಎಂಬುದು ಬಸವರಾಜುಗೆ ಪ್ಲಸ್‌ ಪಾಯಿಂಟ್‌ ಆಗಲಿದೆ. ಸಂಘಟನೆ ಕೊರತೆ, ಕ್ಷೇತ್ರದ ಸಮಗ್ರ ಪರಿಚಯ ಇಲ್ಲದೇ ಇರುವುದು ಇವರಿಗೆ ಮೈನಸ್‌ ಅಂಶವಾಗಲಿದೆ ಎಂಬ ಮಾತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಹಮದಾಬಾದ್‌ ತಂತ್ರ – ಒಂದೇ ದಿನ ಮೆಗಾ ರೋಡ್‌ ಶೋ

    ಜಾತಿ ಲೆಕ್ಕಾಚಾರ ಏನು?
    ಕ್ಷೇತ್ರದಲ್ಲಿ ಸುಮಾರು 70 ರಿಂದ 80 ಸಾವಿರ ಲಿಂಗಾಯತ ಮತದಾರರಿದ್ದು, ಇವರು ಅಭ್ಯರ್ಥಿಯ ಸೋಲು-ಗೆಲುವಿನಲ್ಲಿ ನಿರ್ಣಾಯಕ ಆಗಲಿದ್ದಾರೆ. ಉಳಿದಂತೆ ಒಕ್ಕಲಿಗ 22,000, ಕುರುಬ, ಎಸ್‌ಸಿ 26,000, ಎಸ್ಟಿ 18,000, ಮುಸ್ಲಿಂ 17,000 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2,14,763 ಮತದಾರರಿದ್ದು, ಈ ಪೈಕಿ 1,08,152 ಪುರುಷರು, 1,05,604 ಮಂದಿ ಮಹಿಳೆಯರು ಹಾಗೂ 7 ಮಂದಿ ಇತರೆ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ 8 ಬಾರಿ ಕಾಂಗ್ರೆಸ್, 4 ಬಾರಿ ಜೆಡಿಎಸ್, ಪಿಎಸ್‌ಪಿ ಹಾಗೂ ಪಕ್ಷೇತರರು ಒಂದು ಬಾರಿ ಗೆದ್ದಿದ್ದಾರೆ.

  • ಈ ಬಾರಿ ಉಡುಪಿ – ಮಂಗಳೂರಲ್ಲಿ ಬಿಜೆಪಿ ಒಂದೂ ಸೀಟ್ ಗೆಲ್ಲಲ್ಲ: ಸಿಎಂ

    ಈ ಬಾರಿ ಉಡುಪಿ – ಮಂಗಳೂರಲ್ಲಿ ಬಿಜೆಪಿ ಒಂದೂ ಸೀಟ್ ಗೆಲ್ಲಲ್ಲ: ಸಿಎಂ

    ಮಂಗಳೂರು: ಈ ಬಾರಿ ಉಡುಪಿ, ಮಂಗಳೂರಲ್ಲಿ ಬಿಜೆಪಿಗೆ ಒಂದೂ ಸೀಟು ಬರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರಾವಳಿ ಬಿಜೆಪಿಯ ಕೋಮುವಾದವನ್ನು ಮೆಟ್ಟಿ ನಿಂತಿದ್ದು ಇಲ್ಲಿಯ ಜನ ಮತ್ತೊಮ್ಮೆ ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ ನಾಯಕರಿಗೆ ಮೂರು ಕಾಸಿನ ಮಾನ ಮರ್ಯಾದೆ ಇಲ್ಲ. ಚುನಾವಣೆ ಘೋಷಣೆಯಾದ ಕೂಡಲೇ 2008 ರ ಲೂಟಿ ಕೋರರು ಮತ್ತೆ ಒಂದಾಗಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಟೀಂ ವಿರುದ್ಧ ಸಿಎಂ ಆಕ್ರೋಷ ವ್ಯಕ್ತಪಡಿಸಿದರು.

    ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ, ಶ್ರೀರಾಮುಲು, ಬಿಎಸ್‍ವೈ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಶೋಭಾ ಕರಂದ್ಲಾಜೆ ದೊಡ್ಡ ಲೂಟಿಕೋರರು. 5 ವರ್ಷದಲ್ಲಿ 1 ಲಕ್ಷ ಕೋಟಿ ಲೂಟಿಯಾಗಿದೆ ಎಂದು ಸಿಎಂ ಗಂಭೀರ ಆರೋಪ ಮಾಡಿದರು.

    ಬಳ್ಳಾರಿಯ ಭಯದ ವಾತಾವರಣ ಮತ್ತೆ ಈಗ ಒಂದಾಗಿದೆ. ರಿಪಬ್ಲಿಕ್ ಆಫ್ ಬಳ್ಳಾರಿ ಅಂತ ಲೋಕಾಯುಕ್ತ ಸಂತೋಷ್ ಹೆಗ್ಡೆ ಕರೆದಿದ್ದರು. ನಾನು ಒಬ್ಬಂಟಿಯಾಗಿ ರೆಡ್ಡಿಯ ರಿಪಬ್ಲಿಕ್ ಆಫ್ ಬಳ್ಳಾರಿಗೆ ಹೋಗಿದ್ದೇನೆ. ರೆಡ್ಡಿ ಬ್ರದರ್ಸ್ ದು ಗೂಂಡಾ ಗ್ಯಾಂಗ್, ಆಗ ಜೈಲಿಗೆ ಹೋದವರೆಲ್ಲಾ ಈಗ ಬೇಲ್ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ ಎಂದು ಸಿಎಂ ಟಾಂಗ್ ಕೊಟ್ಟರು.