Tag: ಕರ್ನಾಟಕ ಚಿತ್ರಕಲಾ ಪರಿಷತ್

  • ಹಿಂದುಸ್ತಾನ್ ಆರ್ಟ್ ಅಂಡ್ ಕ್ರಾಫ್ಟ್ ಮೇಳಕ್ಕೆ ನ.12 ರಂದು ಚಾಲನೆ

    ಹಿಂದುಸ್ತಾನ್ ಆರ್ಟ್ ಅಂಡ್ ಕ್ರಾಫ್ಟ್ ಮೇಳಕ್ಕೆ ನ.12 ರಂದು ಚಾಲನೆ

    – ದೇಶದ ವಿವಿಧ ಭಾಗಗಳಿಂದ ಆಗಮಿಸಲಿರುವ ಕರಕುಶಲ ಕರ್ಮಿಗಳು
    – 80 ಕ್ಕೂ ಹೆಚ್ಚು ಅಂಗಡಿಗಳು ಉತ್ಪಾದಕರಿಂದ ನೇರವಾಗಿ ಖರೀದಿಸುವ ಅವಕಾಶ

    ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನವೆಂಬರ್ 12 ರಿಂದ ಆರಂಭವಾಗಲಿರುವ ಹಿಂದುಸ್ತಾನ್ ಆರ್ಟ್ ಅಂಡ್ ಕ್ರಾಫ್ಟ್ ಮೇಳಕ್ಕೆ ಖ್ಯಾತ ಚಲನಚಿತ್ರ ನಟಿ ಸಿಂಧು ಲೋಕನಾಥ್ ಚಾಲನೆ ನೀಡಲಿದ್ದಾರೆ.

    ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನವೆಂಬರ್ 12 ರಿಂದ 10 ದಿನಗಳ ಕಾಲ ಆಯೋಜಿಸಿರುವ ಈ ಕಲಾ ಮತ್ತು ಕರಕುಶಲ ಮೇಳವನ್ನು ಸಿಂಧು ಲೋಕನಾಥ್ ಚಾಲನೆ ನೀಡಲಿದ್ದು, ಈ ಮೇಳೆಕ್ಕೆ ದೇಶದ ವಿವಿಧ ಭಾಗಗಳಿಂದ ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳ ಪ್ರದರ್ಶನ ಮಾಡಲಿದ್ದಾರೆ. ಅದು ಅಲ್ಲದೆ, ಈ ಉತ್ಪನ್ನಗಳನ್ನು ಖರೀದಿಸುವ ಅವಕಾಶವೂ ಈ ಮೇಳದಲ್ಲಿ ಇರಲಿದೆ. ಇದನ್ನೂ ಓದಿ: ಕಾರಿನಲ್ಲಿ ಕೈ ಸನ್ನೆ ಮಾಡಿ ಜೀವ ಉಳಿಸಿಕೊಂಡ ಬಾಲಕಿ

    ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ವಿವಿಧ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ. ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್‍ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.

    ಚಿತ್ತಾರ ಹಾಗೂ ಗ್ರಾಂಡ್ ಫ್ಲಿಯಾ ಆಯೋಜಿಸಿರುವ ಈ ಮೇಳದ ಪ್ರಮುಖ ಉದ್ದೇಶ ಕುಶಲಕರ್ಮಿಗಳನ್ನು ಉತ್ತೇಜಿಸಿ ಅವರಿಗೊಂದು ಮಾರುಕಟ್ಟೆ ಕಲ್ಪಿಸುವುದಾಗಿದೆ. 80ಕ್ಕೂ ಹೆಚ್ಚಿನ ಅಂಗಡಿಗಳ ಮೂಲಕ ಉತ್ಪಾದಕರಿಂದ ನೇರವಾಗಿ ಕರಕುಶಲ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ ಎಂದು ಮೇಳದ ಆಯೋಜಕರಾದ ಅಫ್ತಾಬ್ ತಿಳಿಸಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ ಬಿಡುಗಡೆ

  • ಬೆಂಗ್ಳೂರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ 16ನೇ ಚಿತ್ರಸಂತೆ

    ಬೆಂಗ್ಳೂರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ 16ನೇ ಚಿತ್ರಸಂತೆ

    ಬೆಂಗಳೂರು: ನಗರದ ಕುಮಾರಕೃಪಾ ರಸ್ತೆ ಮತ್ತು ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಇಂದು 16ನೇ ಚಿತ್ರಸಂತೆ ನಡೆಯುತ್ತಿದ್ದು, ಚಿತ್ರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ.

    16 ನೇ ಚಿತ್ರಸಂತೆಗೆ ಲೋಕಾಸಭಾ ಸದಸ್ಯ ಪಿ.ಸಿ.ಮೋಹನ್ ಅವರು ಗಾಂಧಿ ಚಿತ್ರವಿರುವ ಕ್ಯಾನ್ವಾಸ್ ಗೆ ಸಹಿ ಹಾಕಿ ಇಂದು ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಇನ್ನಿತರರು ಭಾಗಿಯಾಗಿದ್ದಾರೆ.

    ಮಹಾತ್ಮ ಗಾಂಧೀಜಿಗೆ ಸಮರ್ಪಣೆ:
    ಪ್ರತೀ ವರ್ಷದಂತೆ ಈ ವರ್ಷವೂ ಚಿತ್ರಸಂತೆ ನಡೆಯುತ್ತಿದ್ದು, ಈ ವರ್ಷದ ಚಿತ್ರಸಂತೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಸಮರ್ಪಣೆ ಮಾಡಲಾಗಿದೆ. ಯಾಕಂದ್ರೆ ಪ್ರಸ್ತುತ ವರ್ಷ ಗಾಂಧೀಜಿಯವರ 150ನೇ ಜನ್ಮ ವರ್ಷವಾಗಿದೆ. ಹೀಗಾಗಿ ಇಂದಿನ ಚಿತ್ರಸಂತೆಯ ಸಂಪೂರ್ಣ ಅಲಂಕಾರವನ್ನು ಅವರಿಗೆ ಸಮರ್ಪಿಸಲಾಗಿದೆ.

    ಮಹಾತ್ಮ ಗಾಂಧಿಯವರು ಬೆಂಗಳೂರಿಗೆ ಬಂದಾಗಲೆಲ್ಲ ಕುಮಾರಕೃಪಾದಲ್ಲಿಯೇ ವಾಸ್ತವ್ಯ ಹೂಡುತ್ತಿದ್ದು, ಆಗ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿನ ಗಾಂಧಿ ಕುಟೀರದ ಕಲ್ಲು ಬಂಡೆಯ ಮೇಲೆ ವಿರಮಿಸಿದ್ದರು ಎಂಬುದು ಇಂದು ಐತಿಹಾಸಿಕ ದಾಖಲೆಯಾಗಿದೆ. ಹೀಗಾಗಿ ಚಿತ್ರಕಲಾ ಪರಿಷತ್ತು ಮಹಾತ್ಮ ಗಾಂಧಿಯವರಿಗೆ ತನ್ನದೇ ಆದ ರೀತಿಯಲ್ಲಿ ದೃಶ್ಯ ಕಲೆಯ ಮೂಲಕ ಗೌರವವನ್ನು ಅರ್ಪಿಸುತ್ತಿದೆ.

    ಗಾಂಧೀಜಿ ಛಾಯಾಚಿತ್ರ ಪ್ರದರ್ಶನ:
    ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಂಪೂರ್ಣ ಆವರಣವನ್ನು ಮಹಾತ್ಮ ಗಾಂಧಿಯವರ ಕನ್ನಡಕ, ಚರಕ ಮೊದಲಾದ ವಸ್ತುಗಳನ್ನು ಬೃಹತ್ ರೂಪದಲ್ಲಿ ನಿರ್ಮಿಸಿದ್ದಾರೆ. ಗಾಂಧೀಜಿಯವರು ವಿರಮಿಸಿದ ಸ್ಥಳದಲ್ಲಿ ಕುಟೀರವನ್ನು ನಿರ್ಮಿಸಿ ಗಾಂಧಿಭವನದಿಂದ ಎರವಲು ಪಡೆದ ಗಾಂಧೀಜಿಯವರ ಕುರಿತಾದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಚಿತ್ರಕಲಾ ಪರಿಷತ್ತಿನ 4 ಗ್ಯಾಲರಿಗಳಲ್ಲೂ ಆಹ್ವಾನಿತ ಕಲಾವಿದರು ರಚಿಸಿರುವ ಗಾಂಧಿಯವರ ಕುರಿತಾದ ಕಲಾಕೃತಿಗಳನ್ನು ಕೂಡ ಪ್ರದರ್ಶಿಸಲಾಗಿದೆ.

    ಉಳಿದಂತೆ ಪ್ರತಿ ವರ್ಷದಂತೆ ಈ ಬಾರಿಯೂ ದೇಶದ ವಿವಿಧ ಭಾಗಗಳಿಂದ ಬರುವ ಸುಮಾರು 1,500 ಕಲಾವಿದರ ಕಲಾಕೃತಿಗಳು ಪ್ರದರ್ಶನವಾಗುತ್ತಿವೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಮೊದಲಾದ ರಾಜ್ಯಗಳಿಂದ ಕಲಾವಿದರು ಭಾಗವಹಿಸಿದ್ದಾರೆ.

    ಒಟ್ಟಿನಲ್ಲಿ ಚಿತ್ರಸಂತೆಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದಾರೆ. ಸಾಮಾನ್ಯವಾಗಿ ಚಿತ್ರಸಂತೆಯಲ್ಲಿ ಮೈಸೂರು ಸಾಂಪ್ರದಾಯಿಕ ಶೈಲಿ, ತಂಜಾವೂರು, ರಾಜಸ್ಥಾನಿ, ಮಧುಬನಿಯ, ತೈಲ ಮತ್ತು ಜಲವರ್ಗಗಳ ಕಲಾಕೃತಿಗಳು ಲಭ್ಯವಿರುತ್ತದೆ, ಇವಲ್ಲದೆ ಅಕ್ರಿಲಿಕ್, ಕೊಲಾಜ್, ಲಿಥೋಗ್ರಾಫ್ ಮೊದಲಾದ ಪ್ರಕಾರಗಳ ಕಲಾಕೃತಿಗಳು ಇಲ್ಲಿ ದೊರೆಯುತ್ತವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv