Tag: ಕರ್ನಾಟಕ ಉಪ ಚುನಾವಣೆ

  • ಸುಧಾಕರ್ V/S ಕುಮಾರಸ್ವಾಮಿ- ಜೆಡಿಎಸ್ ಚುನಾವಣಾ ಉಸ್ತುವಾರಿಯಾಗಿ ನಿಖಿಲ್ ನೇಮಕ

    ಸುಧಾಕರ್ V/S ಕುಮಾರಸ್ವಾಮಿ- ಜೆಡಿಎಸ್ ಚುನಾವಣಾ ಉಸ್ತುವಾರಿಯಾಗಿ ನಿಖಿಲ್ ನೇಮಕ

    -ಹೆಚ್‍ಡಿಕೆ ಶಪಥ ಪೂರ್ಣಗೊಳಿಸಲು ರಣೋತ್ಸಾಹಿಗಳಾದ ದಳ ಕಾರ್ಯಕರ್ತರು

    ಚಿಕ್ಕಬಳ್ಳಾಪುರ: ಉಪಚುನಾವಣೆಗೆ ತಯಾರಿ ನಡೆಸಿತ್ತಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಉರುಳೋಕೆ ಪ್ರಮುಖ ಕಾರಣಕರ್ತರಾದ ಶಾಸಕರ ವಿರುದ್ದ ಸಮರ ಸಾರಿದ್ದಾರೆ. ಉಪಚುನಾವಣೆಯಲ್ಲಿ ಚಿಕ್ಕಬಳ್ಳಾಪುರದ ಅನರ್ಹ ಶಾಸಕರಾದ ಸುಧಾಕರ್ ಅವರನ್ನ ಸೋಲಿಸಲೇಬೇಕು ಅಂತ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಸುಧಾಕರ್ ಅಂದರೆ ಕುಮಾರಸ್ವಾಮಿ ಅವರಿಗೆ ಒಂದು ರೀತಿ ಕೋಪ. ಸಕಾರಣ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸುಧಾಕರ್ ನಡೆದುಕೊಂಡ ರೀತಿ ಅನ್ನೋದು ಮಾಜಿ ಸಿಎಂ ಆಪ್ತವಲಯದವರ ಮಾತು. ಹೀಗಾಗಿ ಉಪಚುನಾವಣೆಯಲ್ಲಿ ಅನರ್ಹ ಶಾಸಕ ಸುಧಾಕರ್ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಕುಮಾರಸ್ವಾಮಿ ತಮ್ಮ ಮಗನನ್ನೇ ಈಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಚ್ಚೇಗೌಡರನ್ನ ಅಂತಿಮ ಮಾಡಿರೋ ಹೆಚ್‍ಡಿಕೆ ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದು, ಏನೇ ಆದರೂ ಸಮ್ಮಿಶ್ರ ಸರ್ಕಾರ ಉರುಳಿಸಿದ ಅನರ್ಹ ಶಾಸಕ ಸುಧಾಕರ್ ವಿರುದ್ಧ ಸೇಡು ತೀರಿಸಿಕೊಳ್ಳಲೇಬೇಕು ಅಂತ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

    ಸುಧಾಕರ್ ಅಥವಾ ಅವರ ಬೆಂಬಲಿತ ಅಭ್ಯರ್ಥಿಯನ್ನ ಸೋಲಿಸಲು ರಣತಂತ್ರ ರೂಪಿಸಿರೋ ಹೆಚ್‍ಡಿಕೆ ಸ್ವತಃ ಚಿಕ್ಕಬಳ್ಳಾಪುರ ಕ್ಷೇತ್ರದ ಹಳ್ಳಿ ಹಳ್ಳಿಗೂ ಬಂದು ಚುನಾವಣಾ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಇದಲ್ಲದೇ ಎಲ್ಲವನ್ನೂ ನೋಡಿಕೋಳ್ಳೋಕೆ ಅಂತ ತಮ್ಮ ಮಗ ನಿಖಿಲ್ ಕುಮಾರ್ ಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹೊಣೆಗಾರಿಕೆಯನ್ನ ಕೊಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮಾಜಿ ಶಾಸಕ ಬಚ್ಚೇಗೌಡ ಸಹ ಅನರ್ಹ ಶಾಸಕ ಸುಧಾಕರ್ ಗೆ ವೋಟ್ ಹಾಕಲೇಬೇಡಿ ಅಂತ ಉಪಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.

    ಸುಧಾಕರ್ ಸ್ಪರ್ಧೆ ಮಾಡ್ತಾರೋ ಇಲ್ವೋ ಅನ್ನೋದು ಇನ್ನೂ ಸುಪ್ರಿಂಕೋರ್ಟ್ ಆದೇಶದ ಮೇಲೆ ನಿಂತಿದೆ. ಆದರೆ ಇತ್ತ ಸುಧಾಕರ್ ಅಥವಾ ಅವರ ಕಡೆಯಿಂದ ಯಾರೇ ಸ್ಪರ್ಧೆ ಮಾಡಿದ್ರೂ ಅವರನ್ನ ಸೋಲಿಸಲೇಬೇಕು ಅಂತ ಮಾಜಿ ಸಿಎಂ ಶಪಥ ಮಾಡಿದ್ದಾರಂತೆ. ಹೀಗಾಗಿ ಇಷ್ಟು ದಿನ ಚುನಾವಣೆಗೆ ನಮಗೂ ಸಂಬಂಧವೇ ಇಲ್ಲದಂತಿದ್ದ ಜೆಡಿಎಸ್ ಮುಖಂಡರು ಈಗ ಕುಮಾರಸ್ವಾಮಿಯವರ ಮಾತುಗಳಿಂದ ರಣೋತ್ಸಾಹಿಗಳಾಗಿ ಮೈಕೊಡವಿ ಎದ್ದಿದ್ದು ಚುನವಣಾ ಅಖಾಡಕ್ಕೆ ಧುಮುಕಿದ್ದಾರೆ.

  • ಶ್ರೀರಾಂಪುರದ ಫುಟ್‍ಪಾತ್‍ನಿಂದ ಇಲ್ಲಿಯವರೆಗೂ ಬಂದವನು: ಜಗ್ಗೇಶ್ ಕಿಡಿ

    ಶ್ರೀರಾಂಪುರದ ಫುಟ್‍ಪಾತ್‍ನಿಂದ ಇಲ್ಲಿಯವರೆಗೂ ಬಂದವನು: ಜಗ್ಗೇಶ್ ಕಿಡಿ

    -ಚಾಲೆಂಜ್ ಸ್ವೀಕರಿಸಿ ಗೆದ್ದರೆ ನಾನು ನಿಮ್ಮ ದಾಸ
    -ಫೇಕ್ ಐಡಿ ಆಗದಿರಿ ಪ್ಲೀಸ್

    ಬೆಂಗಳೂರು: ನಾನು ಶ್ರೀರಾಂಪುರದ ಫುಟ್‍ಪಾತ್‍ನಿಂದ ಇಲ್ಲಿಯವರೆಗೂ ಬಂದವನು. ನಾನು ಯಾವುದನ್ನು ಹುಡುಕಿಕೊಂಡು ಹೋದ ವ್ಯಕ್ತಿ ಅಲ್ಲ ಎಂದು ನವರಸನಾಯಕ ಜಗ್ಗೇಶ್ ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

    ಕರ್ನಾಟಕದಲ್ಲಿ ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ ನಟ ಜಗ್ಗೇಶ್ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿತಯುವ ಇಂಗಿತವನ್ನು ಮಾರ್ಮಿಕವಾಗಿಯೇ ಹೊರ ಹಾಕಿದ್ದರು. ಈ ಹಿಂದೆಯೂ ನಾನು 9 ದಿನದಲ್ಲಿ 64 ಸಾವಿರ ಮತಗಳನ್ನು ಪಡೆದಿದ್ದೇನೆ. ಈ ಬಾರಿಯ ಉಪಚುನಾವಣೆಗೆ ಸ್ಪರ್ಧಿಸಬೇಕಾ ಅಥವಾ ತ್ಯಾಗ ಮಾಡಬೇಕಾ ಎಂದು ಪ್ರಶ್ನೆ ಮಾಡಿದ್ದರು. ಇಂದು ಮತ್ತೊಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

    ಜಗ್ಗೇಶ್ ಟ್ವೀಟ್:
    ಪ್ರತಿಯೊಬ್ಬರಿಗೂ ಅವರ ಭಾವನೆ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ಹಂಚಿಕೊಂಡಿದ್ದೇನೆ ಅಷ್ಟೆ. ಎಲ್ಲೋ ಇದ್ದ ಅನ್ಯ ಪಕ್ಷದ ಫೇಕ್ ಐಡಿಗಳೆಲ್ಲ ದಿಢೀರ್ ಅಂತ ಹುಡುಕಿ ಬಂದು ನನ್ನ ಪೇಜ್ ಮೇಲೆ ವಾಂತಿ ಮಾಡಿದರು. ನೆನಪಿಡಿ ನಾನು ಜಗ್ಗೇಶ್ ರಾಯರ ಮಗ. ನನಗೆ ಬೇಕಾದ್ದು ನನ್ನ ಹುಡುಕಿ ಬರುತ್ತದೆ. ಶ್ರೀರಾಮಪುರದ ಫುಟ್ ಪಾತ್‍ನಿಂದ ಇಲ್ಲಿಯವರೆಗು ಬಂದವ ನಾನು ಎಂದು ವಿರೋಧಿಗಳಿಗೆ ಮಾತಿನ ಮೂಲಕ ಚಾಟಿ ಬೀಸಿದ್ದಾರೆ.

    ಒಬ್ಬರಿಗೆ ಹಂಗಿಸುವ ಮುನ್ನ ನನ್ನ ಚಾಲೆಂಜ್ ಸ್ವೀಕರಿಸಿ. ಹಂಗಿಸುವ ಮುನ್ನ ನಿಮ್ಮ ಬದುಕಲ್ಲಿ 1 ಗಂಟೆ ಯಾರ ನೀವು ಅಣಕಿಸುತ್ತೀರಿ ಅಂತವರು ಮಾಡಿದಷ್ಟು ಸಾಧನೆ ನಿಮ್ಮ ಬದುಕಲ್ಲಿ ಸಾಧಿಸಿ ತೋರಿಸಿ. ಹಾಗೆ ನೀವು ಸಾಧಿಸಿದರೆ ನಾನು ನಿಮ್ಮ ದಾಸ. ಆಗದಿದ್ದರೆ ನಿಮ್ಮ ಅನ್ನಕ್ಕೆ ದಾರಿ ಹುಡುಕಿ ಬದುಕಿ ತಂದೆ-ತಾಯಿ ಜೊತೆ ಸಂತೋಷವಾಗಿ ಬಾಳಿ. ಫೇಕ್ ಐಡಿ ಆಗದಿರಿ ಪ್ಲೀಸ್.

    ನನ್ನ ಬದುಕಲ್ಲಿ ಕಂಡಿರುವಷ್ಟು ಕಷ್ಟ-ಸುಖ, ಏಳು-ಬೀಳು, ಅಪಮಾನ, ಸನ್ಮಾನ, ನಂಬಿಕೆ ದ್ರೋಹ ಬೆನ್ನಿಗೆ ಚೂರಿ ಹಾಕಿಸಿಕೊಂಡರು ಯಾರಿಗು ಅರಿವಾಗದಂತೆ ಒಳಗೊಳಗೆ ನೋವುಂಡು ಅನ್ಯರ ನಗಿಸಿ 57ರ ಗಡಿಗೆ ಬೇಕಾದ್ದು ರಾಯರ ದಯೆಯಿಂದ ಪಡೆದು ದಡ ಸೇರಿರುವೆ. ಬಹುತೇಕರು ನನ್ನ ಮಕ್ಕಳ ವಯಸ್ಕರರು. ನೀವಂದುಕೊಂಡಷ್ಟು ಸುಲಭವಲ್ಲ ಬದುಕು. ನಾನು ಇಷ್ಟು ಮಾತ್ರ ಹೇಳಲು ಸಮರ್ಥ.

    ರಾಯರ ಭಕ್ತರು ಸ್ವಾಭಿಮಾನಿಗಳು, ರಾಯರೇ ಭಕ್ತರ ಬೆನ್ನಿಗೆ ಇರಬೇಕಾದರೆ ಭಿಕ್ಷೆ ಬೇಡುವುದಿಲ್ಲ ಮತ್ತು ತಲೆ ಬಾಗುವುದಿಲ್ಲ. ಆಟೋ ಬೇಕು ಎಂದ ನನ್ನಂಥ ಪಾಮರನಿಗೆ ಜಗಮೆಚ್ಚಿದ ಮಗನ ಮಾಡಿದ್ದಾರೆ. ಅಧಿಕಾರ ದುಡ್ಡು ಮಿತ್ಯ, ರಾಯರು ಸತ್ಯ. ವರ್ಷಾನುಗಟ್ಟಲೆ ನನ್ನ ಅಣಕಿಸಿದವರ ಮುಂದೆ ರಾಯರು ನನಗೆ ಬೇಕಾದ್ದು ಕೊಟ್ಟು ಹರಸಿದ್ದಾರೆ. ರವಿಚಂದ್ರನ್ ಕಂಪನಿಯಲ್ಲಿ 1987ರಲ್ಲಿ 18 ರೂ.ಗೆ ಕೂಲಿ ಮಾಡುತ್ತಿದ್ದ ನಾನು ಇಂದು ವರ್ಷಕ್ಕೆ 20 ಲಕ್ಷ ರೂ. ತೆರಿಗೆ ಕಟ್ಟುವ ಶಕ್ತಿ ನೀಡಿರುವ ರಾಯರು ಹಾಗೂ ನನ್ನ ಪ್ರೀತಿಸುವ ಕನ್ನಡಿಗರೆ ಸಾಕು. ಬದುಕಿದ್ದಾಗಲೆ ಈ ಹಳ್ಳಿ ಹುಡುಗನ ಕಥೆ ಬದುಕುವ ಛಲದವರಿಗೆ ಮಾರ್ಗದರ್ಶನವಾಗಲಿ. ನಾನು ಸತ್ತಾಗ ಹೊಗಳಬೇಡಿ ಬದುಕಿದ್ದಾಗ ಅನುಸರಿಸಿ ಸಾಕು. ಶುಭರಾತ್ರಿ

    ಶನಿವಾರ ಜಗ್ಗೇಶ್ ಚುನಾವಣೆ ಕುರಿತು ತಮ್ಮ ಭಾವನೆಗಳನ್ನು ಟ್ವಿಟ್ಟರ್ ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಜಗ್ಗೇಶ್ ಟ್ವೀಟ್‍ಗೆ ಕಮೆಂಟ್ ಪರ-ವಿರೋಧ ಅಭಿಪ್ರಾಯಗಳು ಸಹ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಎಲ್ಲ ಕಮೆಂಟ್ ಗಳಿಗೆ ಉತ್ತರ ನೀಡಿದ್ದಾರೆ.

    ಶನಿವಾರದ ಟ್ವೀಟ್:
    ಬೈ ಎಲೆಕ್ಷನ್ ಬಂತು. 2018ರಲ್ಲಿ ಕಡೆಗಳಿಗೆ ಅಭ್ಯರ್ಥಿಯಾದ ನಾನು ಮಾಜಿ ಶಾಸಕ, ವಿಧಾನ ಪರಿಷತ್ ಸದಸ್ಯ. ತನು, ಮನ, ಧನ ಕಳೆದುಕೊಂಡು 9 ದಿನದಲ್ಲಿ 60,400 ಮತಗಳನ್ನು ಪಡೆದ ಅಭ್ಯರ್ಥಿ ನಾನು. ಮೌನವಾಗಿ ಇರಲೋ? ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ..? ಇಲ್ಲಾ ಮೌನವಾಗಿ ತ್ಯಾಗಿಯಾಗಲೋ..? ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ ಎಂದು ಬರೆದುಕೊಂಡಿದ್ದರು.

    ಜಗ್ಗೇಶ್ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ 59,308 ಮತಗಳನ್ನು ಪಡೆದು ಸೋತಿದ್ದರು. ಈ ವೇಳೆ ಭರ್ಜರಿ ಪೈಪೋಟಿ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಟಿ.ಸೋಮಶೇರ್ 1,15,273 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಜೆಡಿಎಸ್‍ನ ಅಭ್ಯರ್ಥಿ 1,04,562 ಮತಗಳನ್ನು ಗಳಿಸಿ ಪರಾಭವಗೊಂಡಿದ್ದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಎಸ್.ಟಿ.ಸೋಮಶೇಖರ್ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ.

  • ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಹವಾ-ಮತದಾರರ ಒಲವು ಯಾರ ಅತ್ತ?

    ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಹವಾ-ಮತದಾರರ ಒಲವು ಯಾರ ಅತ್ತ?

    ಬೆಂಗಳೂರು: ಜಿದ್ದಾಜಿದ್ದಿನ ಕ್ಷೇತ್ರಗಳಾದ ಮಂಡ್ಯ, ರಾಮನಗರ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಮನಗರದಲ್ಲಿ ಯುದ್ಧಕ್ಕೂ ಮುನ್ನವೇ ಬಿಜೆಪಿ ಶಸ್ತ್ರತ್ಯಾಗ ಮಾಡಿದೆ. ಮಂಡ್ಯದಲ್ಲಿ ಬದ್ಧ ವೈರಿಗಳೇ ದೋಸ್ತಿಗಳಾಗಿರೋದ್ರಿಂದ ಮತದಾರರು ಯಾರ ಕೈ ಹಿಡಿದಿದ್ದಾರೆ. ಇಬ್ಬರ ಜಗಳದಲ್ಲಿ ಲಾಭ ಮೂರನೇಯವರಿಗೆ ಸಿಗುತ್ತಾ? ಎಲ್ಲಕ್ಕೂ ಉತ್ತರ ಇಂದಿನ ಫಲಿತಾಂಶ

    ರಾಮನಗರದಲ್ಲಿ ಉಪ ಸಮರ ರಂಗೇರಿದ ಅನ್ನುವ ಮುನ್ನವೇ ಬಿಜೆಪಿ ಅಭ್ಯರ್ಥಿ ಶಸ್ತ್ರತ್ಯಾಗ ಮಾಡಿದ್ರೆ, ಕಾಂಗ್ರೆಸ್‍ನಿಂದ ವಲಸೆ ಬಂದ ಮುಖಂಡನನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿ ಟಾಂಗ್ ಕೊಟ್ಟಿದ್ದೇವೆ ಅಂತ ಬೀಗುತ್ತಿದ್ದ ಯಡಿಯೂರಪ್ಪ-ಯೋಗೇಶ್ವರ್ ದಂಡಿಗೆ ಮತದಾನಕ್ಕೆ ಎರಡು ದಿನಗಳ ಹಿಂದೆ ಗರ್ವಭಂಗ ಆಯ್ತು. ಡಿಕೆಶಿ ಬ್ರದರ್ಸ್ ಆಡಿದ ಕಡೇ ಕ್ಷಣದ ಆಟದಲ್ಲಿ ಎದುರಾಳಿಯೇ ಇಲ್ಲದೇ ರಾಮನಗರದಲ್ಲಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಯವ್ರದ್ದೇ ಆಟವಾಗಿ ಮಾರ್ಪಟ್ಟಿತ್ತು. ಪತಿ ಖಾಲಿ ಮಾಡಿದ್ದ ಕ್ಷೇತ್ರಕ್ಕೆ ಪತ್ನಿಯೇ ಅಧಿಪತಿ ಆಗ್ತಾರಾ ಅನ್ನೋದಕ್ಕೆ ಕೆಲವೇ ಹೊತ್ತಲ್ಲಿ ಉತ್ತರ ಸಿಗಲಿದೆ.

    ರಾಮಗರದಲ್ಲಿ ಜೆಡಿಎಸ್ ನಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ರೆ ಬಿಜೆಪಿಯಿಂದ ಎಲ್ ಚಂದ್ರಶೇಖರ್ ಅವರು ಅಭ್ಯರ್ಥಿಯಾಗಿದ್ದರು. ಆದ್ರೆ ಚಂದ್ರಶೇಖರ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ರಾಮನಗರದಲ್ಲಿ ಯಾರ ನಡುವೆ ಪೈಪೋಟಿ..?
    1. ಜೆಡಿಎಸ್+ಕಾಂಗ್ರೆಸ್ ಮೈತ್ರಿಕೂಟ – ಅನಿತಾ ಕುಮಾರಸ್ವಾಮಿ
    2. ಎಲ್.ಚಂದ್ರಶೇಖರ್ – ಬಿಜೆಪಿ ( ಚುನಾವಣೆಯಿಂದ ಹಿಂದಕ್ಕೆ)

    ರಾಮನಗರ ವಿಧಾನಸಭಾ ಕ್ಷೇತ್ರದ ಚಿತ್ರಣ:
    ರಾಮನಗರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,07,005 ಇದೆ. ಅದರಲ್ಲಿ ಪುರುಷರ ಸಂಖ್ಯೆ 1,02,948 ಇದ್ದು, 1,04,032 ಮಹಿಳಾ ಮತದಾರರಿದ್ದಾರೆ. ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಒಕ್ಕಲಿಗರು- 99,572, ಎಸ್ಸಿ/ ಎಸ್ಟಿ- 45,953, ಮುಸ್ಲಿಂ- 35,990, ಲಿಂಗಾಯತರು- 16,900 ಹಾಗೂ ಇತರ 8190 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ.

    ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 04 ಹೋಬಳಿಗಳು ಹಾಗೂ 20 ಗ್ರಾಮ ಪಂಚಾಯತ್‍ಗಳಿವೆ. ಅದರಲ್ಲಿ 123 ಜನವಸತಿ ಇರುವ ಗ್ರಾಮಗಳಿದ್ದು, ಕ್ಷೇತ್ರದಲ್ಲಿ 2,85,466 ಜನರಿದ್ದಾರೆ. ಇದರಲ್ಲಿ ಪುರುಷರು- 1,45,187 ಹಾಗೂ 1,40,279 ಮಹಿಳಾ ಮತದಾರರಿದ್ದಾರೆ.

    ರಾಮನಗರ 2018ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಎಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಿ, 92,926 ಮತಗಳನ್ನು ಪಡೆದುಕೊಂಡಿದ್ದರು. ಇನ್ನು ಕಾಂಗ್ರೆಸ್ ನಿಂದ ಇಕ್ಭಾಲ್ ಹುಸೇನ್ ಅವರು ಸ್ಪರ್ಧಿಸಿದ್ದು 69,990 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ಜೆಡಿಎಸ್ ಅಭ್ಯರ್ಥಿ ಎಚ್‍ಡಿ ಕುಮಾರಸ್ವಾಮಿಯವರು 22,289 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಡಿಎಸ್ ಗೆ ಬೆಂಬಲ ನೀಡಲೂ ಸಾಧ್ಯವೇ ಇಲ್ಲ- ಕಾಂಗ್ರೆಸ್ ಸಭೆಯಲ್ಲಿ ಭುಗಿಲೆದ್ದ ಭಿನ್ನಮತ

    ಜೆಡಿಎಸ್ ಗೆ ಬೆಂಬಲ ನೀಡಲೂ ಸಾಧ್ಯವೇ ಇಲ್ಲ- ಕಾಂಗ್ರೆಸ್ ಸಭೆಯಲ್ಲಿ ಭುಗಿಲೆದ್ದ ಭಿನ್ನಮತ

    -ಮೈಕ್ ಎಸೆದು ಅಸಮಾಧಾನ ಹೊರಹಾಕಿದ ಚಲುವರಾಯಸ್ವಾಮಿ

    ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಿವರಾಮೇಗೌಡರಿಗೆ ಸಹಕಾರ ನೀಡಲು ಆಗಲ್ಲ ಎಂದು ಗಲಾಟೆ ಮಾಡುತ್ತಿದ್ದ ಬೆಂಬಲಿಗರ ವಿರುದ್ಧ ಅಸಮಾಧಾನಗೊಂಡು ಮಾಜಿ ಸಚಿವ ಚಲುವರಾಯಸ್ವಾಮಿ ಆಕ್ರೋಶದಿಂದ ಮೈಕ್ ಎಸೆದ ಘಟನೆ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.

    ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸದ ಚಲುವರಾಯಸ್ವಾಮಿ ಇಂದು ನಾಗಮಂಗಲದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದರು. ಸಭೆಗೆ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರು ಕೂಡ ಆಗಮಿಸಿದ್ದರು. ಸಭೆಯಲ್ಲಿ ವರಿಷ್ಠರ ಮಾತಿನಂತೆ ಜೆಡಿಎಸ್ ಪಕ್ಷಕ್ಕೆ ಸಹಕಾರ ನೀಡಿ ಎನ್ನುತ್ತಿದ್ದಂತೆ ಜೋರು ಧ್ವನಿಯಲ್ಲಿ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು ಅದು ನಮ್ಮಿಂದ ಸಾಧ್ಯವಿಲ್ಲ ಎಂದು ಸಿಟ್ಟು ಹೊರಹಾಕಿದರು. ಈ ವೇಳೆ ಸುಮ್ಮನಿರಿ ಎಂದು ಎಷ್ಟೇ ಹೇಳಿದರು ಬೆಂಬಲಿಗರು ತಮ್ಮ ಮಾತು ಕೇಳದಿದ್ದಾಗ ಚಲುವರಾಯಸ್ವಾಮಿ ಸಿಟ್ಟಿನಿಂದ ಮೈಕ್ ಕೆಳಕ್ಕೆ ಎಸೆದು ಅಸಮಾಧಾನ ಹೊರಹಾಕಿದರು.

    ಕಾರ್ಯಕರ್ತರನ್ನು ಸಮಾಧಾನ ಮಾಡಿದ ಚಲುವರಾಯಸ್ವಾಮಿ ಜೆಡಿಎಸ್ ಪಕ್ಷದಿಂದ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಆಗುತ್ತಿರುವ ತೊಂದರೆ ಬಗ್ಗೆ ನನಗೂ ಅರಿವಿದೆ. ನಮ್ಮ ವಿಷಯದಲ್ಲಿ ಜೆಡಿಎಸ್ ನಡೆದುಕೊಳ್ಳುತ್ತಿರುವುದು ರಾಜ್ಯದ ಅಧ್ಯಕ್ಷರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಹೀಗಾಗಿ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ. ಹಳೆಯ ಮೈಸೂರಿನವರಿಗೆ ಸಮನ್ವಯ ಸಮಿತಿ ಕರೆದು ಮಾತನಾಡುತ್ತೇನೆ. ಅದು ಆದ ನಂತರವೂ ಮುಂದುವರಿದರೆ ಕಡೆಗಣಿಸಲು ಸಾಧ್ಯವಿಲ್ಲ. ಹಾಗಾಗಿ ನಾಗಮಂಗಲದಿಂದ ಆರಂಭಿಸಿ ಏಳು ತಾಲೂಕುಗಳಲ್ಲಿ ಸಭೆ ನಡೆಸಲಾಗುವುದು. ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

    ಚುನಾವಣೆಯ ಬಳಿಕ ಜೆಡಿಎಸ್ ನಲ್ಲಿ ಬದಲಾವಣೆ ಆಗದಿದ್ರೆ ಮುಂದಿನ ಚುನಾವಣೆ ಬಹಳ ದೂರವಿಲ್ಲ. ಆಗ ನಿರ್ಧಾರ ತೆಗೆದುಕೊಳ್ಳೋಣ. ಒಮ್ಮೆ ಸಪೋರ್ಟ್ ಮಾಡಿ ಪರಿಸ್ಥಿತಿ ನೋಡೋಣ ಎಂದು ಕಾರ್ಯಕರ್ತರನ್ನು ಸಮಾಧಾನ ಮಾಡಿದ್ರು. ಇದೇ ವೇಳೆ ಸಚಿವ ಪುಟ್ಟರಾಜು ತಮ್ಮ ವಿರುದ್ಧ ನೀಡಿದ್ದ ಡೆಡ್ ಹಾರ್ಸ್ ಹೇಳಿಕೆ ನೆನಪಿಸಿಕೊಂಡ ಚಲುವರಾಯಸ್ವಾಮಿ, ಅವರು ಹೇಳಿದ್ದು ಸತ್ಯ. ನಮ್ಮ ಜನ ನಮ್ಮನ್ನು ರಕ್ಷಣೆ ಮಾಡಿಕೊಳ್ಳದಿದ್ದಾಗ ಬೇರೆಯವರನ್ನು ಯಾಕೆ ದೂರಬೇಕು. ಕನಕಪುರದಲ್ಲಿ ಡಿಕೆ.ಶಿವಕುಮಾರ್ ಬೇಕು ಅನ್ನುವ ರೀತಿ ನೀವು ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಬೇಕು ಎನ್ನಬೇಕಿತ್ತು. ಹಾಗೇ ನಡೆದುಕೊಂಡಿದ್ರೆ ಪುಟ್ಟರಾಜು ಯಾಕೆ ಡೆಡ್ ಹಾರ್ಸ್ ಅಂತಿದ್ರು. ನಾನು ಶಿವರಾಮೇಗೌಡ ಅಥವಾ ಕುಮಾರಸ್ವಾಮಿ ಅವರಿಂದ ನಿರೀಕ್ಷೆ ಇಟ್ಟುಕೊಂಡು ಚುನಾವಣೆ ಮಾಡುತ್ತಿಲ್ಲ. ಪಕ್ಷ ಹೇಳಿದಂತೆ ಚುನಾವಣೆ ಮಾಡುತ್ತಿದ್ದೇವೆ ಅಷ್ಟೆ. ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಪತನ: ಬಿಎಸ್‍ವೈ

    ಉಪ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಪತನ: ಬಿಎಸ್‍ವೈ

    ಬಳ್ಳಾರಿ: ಉಪ ಚುನಾವಣೆ ಬಳಿಕ ದೋಸ್ತಿ ಸರ್ಕಾರ ಪತನ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಪಬ್ಲಿಕ್ ಟಿವಿಗೆ ಕಿರು ಸಂದರ್ಶನ ನೀಡಿರೋ ಯಡಿಯೂರಪ್ಪ, ಸರ್ಕಾರ ಹೇಗೆ ಪತನ ಆಗುತ್ತೆ.. ಅದು ಆಪರೇಷನ್ ಕಮಲದ ಮೂಲಕನಾ ..? ಅಂತ ಹೇಳೋದು ಈಗ ಟೂ ಅರ್ಲಿ ಆಗುತ್ತೆ ಅಂತ ಭವಿಷ್ಯ ನುಡಿದಿದ್ದಾರೆ.

    ಅಕ್ಟೋಬರ್ 30 ಹಾಗೂ 31ರಂದು ಶಿವಮೊಗ್ಗದಲ್ಲಿ ಪ್ರಚಾರ ಕೈಗೊಳ್ಳುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿಗೂ ಟಾಂಗ್ ನೀಡಿರೋ ಬಿಎಸ್‍ವೈ, ಅಪ್ಪ-ಮಕ್ಕಳ ರಾಜಕೀಯ ನಿವೃತ್ತಿಗೂ ಈ ಫಲಿತಾಂಶ ಕಾರಣವಾಗಲಿದೆ. 75 ವರ್ಷ ವಯಸ್ಸಾದವರು ಸಿಎಂ ಆಗಬಾರದು ಅಂತ ಬಿಜೆಪಿಯಲ್ಲೇನೂ ಕಾನೂನು ಇಲ್ಲ. ನಾನು ಇನ್ನೂ 10 ವರ್ಷ ರಾಜಕೀಯದಲ್ಲಿರುತ್ತೇನೆ ಅಂತ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

    ನನಗೆ ಸಿಎಂ ಆಗಬೇಕೆಂಬ ಆಸೆ ಇಲ್ಲ. ಈಗಾಗಲೇ ಆ ಪದವಿಯನ್ನು ನೋಡಿದ್ದೇನೆ. 2019ರ ಚುನಾವಣೆಗೆ ಕರ್ನಾಟಕದಿಂದ 20 ರಿಂದ 22 ಸಂಸದರನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸುವ ಮೂಲಕ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡುವುದೇ ನಮ್ಮ ಗುರಿ. ಉಪ ಚುನಾವಣೆ ಫಲಿತಾಂಶದ ಬಳಿಕ ಏನು ಆಗುತ್ತೆ ಎಂಬುದನ್ನು ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಣಯಿಸುತ್ತೇವೆ. ಚುನಾವಣಾಯಲ್ಲಿ ಸೋಲು ಎಂದು ಮಾಜಿ ಪ್ರಧಾನಿ ದೇವೇಗೌಡರಿಗೆ ನಿಶ್ಚಿತವಾಗಿದ್ದರಿಂದ ನಿಂತಲ್ಲಿ, ಕೂತಲ್ಲಿ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಎಮೋಷನಲ್ ಬ್ಲಾಕ್‍ಮೇಲ್ ಬಿಡಿ, ಜನರನ್ನ ಎಷ್ಟ ಸಲ ಮೋಸ ಮಾಡ್ತಿರಾ- ಸಿಎಂ ಎಚ್‍ಡಿಕೆಗೆ ಯೋಗೇಶ್ವರ್ ಟಾಂಗ್

    ಇದಕ್ಕೂ ಮುನ್ನ ಮಾತನಾಡಿದ್ದ ಯಡಿಯೂರಪ್ಪನವರು, ನಾನು ಶಿವಮೊಗ್ಗದಲ್ಲಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದೇನೆ. ಈಗ ರಾಘವೇಂದ್ರ ಸಹ ಅಷ್ಟೇ ಅಂತರಗಳದಿಂದ ಗೆಲ್ಲುತ್ತಾರೆ. ಬಳ್ಳಾರಿಯಲ್ಲಿಯೂ ಜೆ.ಶಾಂತಾ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ಜಮಖಂಡಿಯನ್ನು ಈಗಾಗಲೇ ಗೆದ್ದಿದ್ದೇವೆ. ಮಂಡ್ಯ ಮತ್ತು ರಾಮನಗರದಲ್ಲಿ ಜೆಡಿಎಸ್ ಗೆ ಟಫ್ ಫೈಟ್ ಕೊಡಲಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.

    ಉಪ ಚುನಾವಣೆ ಬಳಿಕ ರಾಜ್ಯ ಸರ್ಕಾರಕ್ಕೆ ಕಂಟಕ ಎದುರಾಗುತ್ತೆ ಅಂತ ಭವಿಷ್ಯ ನುಡಿದಿರೋ ಬಿಎಸ್‍ವೈ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸರ್ಕಾರ ಬಿದ್ದು ಹೋಗುತ್ತೆ ಅಂದರೆ ಅಧಿಕಾರಿಗಳು ಕೆಲಸ ಮಾಡೋದಕ್ಕೆ ನಿರ್ಲಕ್ಷ್ಯ ಮಾಡುತ್ತಾರೆ. ಖಜಾನೆಯಲ್ಲಿ ಹಣ ಖಾಲಿ ಆಗಿದೆ ಅಂತ ಬಿಎಸ್‍ವೈ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾರೆ. ಏನೋ ಇವರಪ್ಪನ ಆಸ್ತಿ ತಗೊಂಡು ಮಂಡ್ಯಕ್ಕೆ ಬಂದೆ ಅನ್ನೋ ರೀತಿ ಯಡಿಯೂರಪ್ಪ ಮಾತನಾಡುತ್ತಾರೆ. ಯಾವ ಮುಖ ಇಟ್ಟುಕೊಂಡು ನಿಮ್ಮ ಬಳಿ ಮತ ಕೇಳುತ್ತಾರೆ ಅಂತ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಶುಕ್ರವಾರ ಮಳವಳ್ಳಿಯಲ್ಲಿ ಸಾವಿನ ಬಗ್ಗೆ ಪ್ರಸ್ತಾಪಿಸಿದ ಸಿಎಂ, ನನ್ನದು ಮೊಸಳೆ ಕಣ್ಣೀರು ಅನ್ನೋವ್ರಿಗೆ ಮಾನವೀಯತೆ ಇಲ್ಲ. ನಾನು ಇನ್ನು 85 ವರ್ಷ ಬದುಕಿ ಬಾಳುತ್ತೇನೆ ಅಂದಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸಹವಾಸ ಮಾಡಿದ ಮೇಲೆ ಕುಮಾರಸ್ವಾಮಿ ಅವರ ಆರೋಗ್ಯ ಹದಗೆಟ್ಟಿದೆ ಅಂತ ವ್ಯಂಗ್ಯ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಿಕೆಶಿ ಪಂಥಹ್ವಾನಕ್ಕೆ ನಾನು ಸಿದ್ಧ ಎಂದ ಶ್ರೀರಾಮುಲು

    ಡಿಕೆಶಿ ಪಂಥಹ್ವಾನಕ್ಕೆ ನಾನು ಸಿದ್ಧ ಎಂದ ಶ್ರೀರಾಮುಲು

    ಬಳ್ಳಾರಿ: ಬಳ್ಳಾರಿ ಚುನಾವಣಾ ರಣಕಣದಲ್ಲಿ ನಾಯಕರು ಜಿದ್ದಾಜಿದ್ದಿಗೆ ಬಿದ್ದಂತೆ ಕಾಣುತ್ತಿದೆ. ಸಚಿವ ಡಿ.ಕೆ.ಶಿವಕುಮಾರ್ ಆಹ್ವಾನವನ್ನು ಶಾಸಕ ಶ್ರೀರಾಮುಲು ಒಪ್ಪಿಕೊಂಡಿದ್ದಾರೆ. ಬಹಿರಂಗ ಚರ್ಚೆಯಲ್ಲಿ ಇಬ್ಬರು ನಾಯಕರು ಭಾಗಿಯಾಗುತ್ತೇವೆ ಎಂದು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    24 ಗಂಟೆ ಮುಂಚಿತವಾಗಿ ಸಮಯ, ಸ್ಥಳ ನಿಗದಿ ಮಾಡಿ ನನಗೆ ಮಾಹಿತಿ ರವಾನಿಸಿವೆ. ನಾನು ಶ್ರೀರಾಮುಲು ವಿರುದ್ಧ ಬಹಿರಂಗ ಚರ್ಚೆಯಲ್ಲಿ ಭಾಗಿಯಾಗುತ್ತೇನೆ. ಕೂಡಲೇ ಅಂದ್ರೆ ಆಗಲ್ಲ ಕೆಲವು ಕಾರ್ಯಕ್ರಮಗಳು ನಿಗದಿ ಆಗಿರುತ್ತವೆ. ಸ್ಥಳವನ್ನು ಶ್ರೀರಾಮುಲು ಅವರೇ ನಿರ್ಧರಿಸಲಿ ಎಂದು ಹೇಳಿದರು.

    ಸರ್ಕಾರದ ಪರವಾಗಿ ನಾನು ಬಳ್ಳಾರಿಯ ಉಸ್ತುವಾರಿ ಮಂತ್ರಿಯಾಗಿದ್ದು, ಚುನಾವಣೆಯ ಜವಾಬ್ದಾರಿ ನನ್ನ ಮೇಲಿದೆ. ಶ್ರೀರಾಮುಲು ಸಹ ಹೊರಗಿನವರು, ನಾನು ಬೇರೆ ಜಿಲ್ಲೆಯವನು. ಬಳ್ಳಾರಿಯನ್ನು ತೊರೆದು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಚುನಾವಣೆ ನಡೆಯುತ್ತಿರೋದು ಉಗ್ರಪ್ಪ ವರ್ಸಸ್ ಶಾಂತಕ್ಕ ಅಥವಾ ಕಾಂಗ್ರೆಸ್ ವರ್ಸಸ್ ಬಿಜೆಪಿ. ನಮ್ಮಿಬ್ಬರ ಮಧ್ಯೆ ಎಲೆಕ್ಷನ್ ಇದೆ ಅನ್ನೋದು ಸುಳ್ಳು. ನಾನು ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ರು.

    ನಾನು ಮತ್ತು ಶ್ರೀರಾಮುಲು ಒಳ್ಳೆಯ ಗೆಳೆಯರು. ಒಂದು ರೀತಿ ಗಳಸ್ಯ-ಕಂಠಸ್ಯ ಇದ್ದಂತೆ. ಆದ್ರೆ ರಾಜಕಾರಣದ ಸಿದ್ದಾಂತದ ಮೇಲೆ ಭಿನ್ನಾಭಿಪ್ರಾಯಗಳಿವೆ. ನಾನು ಜಾತಿ ಮೇಲೆ ರಾಜಕಾರಣ ಮಾಡುವ ವ್ಯಕ್ತಿ ಅಲ್ಲ. ಕಾಂಗ್ರೆಸ್ ನೀತಿ ಮೇಲೆ ರಾಜಕಾರಣ ಮಾಡುತ್ತೇವೆ. ಕುಸ್ತಿ ಮಾಡುವವರ ಮೇಲೆ ಕುಸ್ತಿ ಮಾಡಬೇಕು. ಪಾಪ ಶ್ರೀರಾಮುಲು ಅವರಿಂದ ಏನ್ ಆಗುತ್ತೆ ಎಂದು ಕಳವಳ ವ್ಯಕ್ತಪಡಿಸುವ ಮೂಲಕ ಕಾಲೆಳೆದ್ರು.

    ಇತ್ತ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶ್ರೀರಾಮುಲು, ನಾನು ಈ ಭಾಗದಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈ ಭಾಗದಲ್ಲಿಯ ಜನರು ಮುಂಚೆಯಿಂದಲೂ ನನಗೆ ಸ್ಫೂರ್ತಿಯನ್ನು ತುಂಬಿದ್ದಾರೆ. ನಾನು ಹೇಳಿದ ಸ್ಥಳಕ್ಕೆ ಡಿಕೆ ಶಿವಕುಮಾರ್ ಬರೋದು ಬೇಡ. 24 ಗಂಟೆಯ ಸಮಯವನ್ನು ತೆಗೆದುಕೊಂಡು ಸ್ಥಳವನ್ನು ನಿಗದಿ ಮಾಡಿ, ತಿಳಿಸಿ ದಾಖಲೆ ಸಹಿತ ನಾನು ಚರ್ಚೆಯಲ್ಲಿ ಭಾಗಿಯಾಗುತ್ತೇನೆ ಎಂದು ಉತ್ತರ ನೀಡಿದ್ದಾರೆ.

    ಇಬ್ಬರು ನಾಯಕರು ಚರ್ಚೆಗೆ ಸಿದ್ಧರಾಗಿದ್ದು, ವೇದಿಕೆ ಮಾತ್ರ ಎಲ್ಲಿ ಎಂಬುವುದು ನಿಗದಿಯಾಗಿಲ್ಲ. ಹಾಗಾಗಿ ಪಬ್ಲಿಕ್ ಟಿವಿ ಇಬ್ಬರು ನಾಯಕರಿಗೆ ವೇದಿಕೆಯನ್ನು ಮಾಡಿಕೊಡಲಿದೆ. ಒಂದು ವೇಳೆ ನಾಯಕರು ಸಮಯ, ಸ್ಥಳ ಎಲ್ಲವೂ ನಿಗದಿಪಡಿಸಿದ್ರೆ, ಪಬ್ಲಿಕ್ ಟಿವಿ ವೇದಿಕೆ ಮೂಲಕ ನಾಡಿನ ಜನತೆ ಈ ಚರ್ಚೆಯನ್ನು ನೋಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಇಂದು ಗುರು-ಶಿಷ್ಯರ ಸಮಾಗಮ

    ಇಂದು ಗುರು-ಶಿಷ್ಯರ ಸಮಾಗಮ

    ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯದಲ್ಲಿ ಗುರು-ಶಿಷ್ಯ ಎಂದೇ ಗುರುತಿಸಿಕೊಳ್ಳುತ್ತಾರೆ. ರಾಜಕೀಯ ಕಾಲಂತಾರದಲ್ಲಿ ಸಿದ್ದರಾಮಯ್ಯನವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇಂದು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಗುರು-ಶಿಷ್ಯರ ಸಮಾಗಮ ಆಗಲಿದೆ.

    ಗುರು-ಶಿಷ್ಯರ ಸಮಾಗಮದಲ್ಲಿಂದು ಮಹತ್ವದ ಸಭೆ ನಡೆಯಲಿದೆ. ಉಪಸಮರದಲ್ಲಿ ಕಮಲ ಪಾಳಯ ಕಟ್ಟಿಹಾಕಲು ಭಾರೀ ರಣತಂತ್ರ ರೂಪಿಸಲಿದ್ದಾರೆ. ಉಪ ಲೋಕಸಭಾ ಚುನಾವಣೆ ಚುನಾವಣಾ ಸಿದ್ಧತೆ, ಪ್ರಚಾರ ಕುರಿತಂತೆ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಮಹತ್ವದ ಸಭೆ ನಡೆಯಲಿದೆ.

    ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಎರಡು ಪಕ್ಷಗಳು ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆ ಬಳಿಕ ದೋಸ್ತಿ ನಾಯಕರಿಂದ ಜಂಟಿ ಸುದ್ದಿಗೋಷ್ಠಿ ಸಹ ನಡೆಯಲಿದೆ. ಸುದ್ದಿಗೋಷ್ಠಿ ವೇಳೆ 2 ವಿಧಾನಸಭೆ, 3 ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವ ಕುರಿತು ಮಾಹಿತಿ ನೀಡಲಿದ್ದಾರೆ.

    ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಪಕ್ಷದ ಕಾರ್ಯಕರ್ತಗಳು ಯಾವುದೇ ಗೊಂದಲ ಮಾಡಿಕೊಳ್ಳದೆ ಒಟ್ಟಾಗಿ ಹೋಗಬೇಕು ಎಂಬ ಮಾಹಿತಿ ರವಾನಿಸಲು ಈ ಜಂಟಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಉಪ ಚುನಾವಣೆ ಕಾರಣಕ್ಕಾಗಿ ಒಟ್ಟಾಗುತ್ತಿರುವ ಗುರು ಶಿಷ್ಯರಾದ ದೇವೇಗೌಡರು ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಸುದ್ದಿಗೋಷ್ಠಿ ನಡೆಸುತ್ತಿರುವುದು ವಿಶೇಷ. ಒಂದೇ ವೇದಿಕೆಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಲಿದ್ದು. ಗುರು ಶಿಷ್ಯರು ಜಂಟಿಯಾಗಿತೇ ಪ್ರಚಾರ ನಡೆಸ್ತಾರಾ ಎಂಬ ಕುತೂಹಲಕ್ಕೂ ಈ ಬೆಳವಣಿಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಳ್ಳಾರಿ ಲೋಕಸಭೆ ಬೈ ಎಲೆಕ್ಷನ್‍ನಲ್ಲಿ ಬಲಭೀಮರ ವಾರ್ ಟೀಂ ಹೀಗಿದೆ

    ಬಳ್ಳಾರಿ ಲೋಕಸಭೆ ಬೈ ಎಲೆಕ್ಷನ್‍ನಲ್ಲಿ ಬಲಭೀಮರ ವಾರ್ ಟೀಂ ಹೀಗಿದೆ

    ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿ ಬದಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರತಿಷ್ಠೆಯ ಕಣವಾಗಿ ಏರ್ಪಟ್ಟಿದ್ದರಿಂದ ರಾಜ್ಯ ನಾಯಕರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಉಸ್ತುವಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದರೆ, ಬಿಜೆಪಿ ನಾಯಕತ್ವವನ್ನು ಶಾಸಕ ಶ್ರೀರಾಮುಲು ಪಡೆದಿದ್ದಾರೆ. ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಗಳಿಗಿಂತ ನಾಯಕರ ನಡುವಿನ ಬಿಗ್ ಫೈಟ್ ಅಂತಾನೇ ಕರೆಯಲಾಗುತ್ತಿದೆ.

    ಇಬ್ಬರು ನಾಯಕರು ಚುನಾವಣೆಗಾಗಿ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಚುನಾವಣೆ ಚದುರಂಗದಾಟಕ್ಕೆ ಇಳಿದಿದ್ದಾರೆ. ಅಕ್ಟೋಬರ್ 21ರಿಂದ ಎರಡೂ ಪಕ್ಷಗಳ ವಾರ್ ಟೀಂ ಚುನಾವಣೆ ಮೈದನಾವನ್ನು ಪ್ರವೇಶಿಸಲಿದೆ. ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆಯೂ ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ ಮಾಡಿದ್ದರು.

    ಡಿಕೆಶಿ ವಾರ್ ಟೀಂ ಹೀಗಿದೆ:
    * 200 ಜನರ ಶಾಶ್ವತ ವಾರ್ ಟೀಂನ್ನು ಡಿಕೆ ಶಿವಕುಮಾರ್ ರಚನೆ ಮಾಡಿದ್ದಾರೆ.
    * ವಾರ್ ಟೀಂನಲ್ಲಿ ಕನಕಪುರ, ಬೆಂಗಳೂರು, ಮೈಸೂರಿನ ಭಾಗದವರನೇ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.
    * ಎಲೆಕ್ಷನ್‍ಗೆ 12 ದಿನ ಮೊದಲು ಕ್ಷೇತ್ರಗಳಲ್ಲಿ ಟೀಂ ವಾಸ್ತವ್ಯ ಹೂಡಲಿದೆ.
    * ತಂಡವನ್ನು ಎರಡು ಗುಂಪುಗಳಾಗಿ ವಿಂಗಡನೆ
    1. ವಿರೋಧಿಗಳ ತಂತ್ರಗಾರಿಕೆಯ ಮೇಲೆ ಕಣ್ಣಿಡಲು ಒಂದು ಗುಂಪು
    2. ತಮ್ಮ ತಂತ್ರಗಾರಿಕೆಯನ್ನ ಅನುಷ್ಠಾನಗೊಳಿಸಲು ಇನ್ನೊಂದು ಗುಂಪು

    ಶ್ರೀರಾಮುಲು ವಾರ್ ಟೀಂ ಹೀಗಿದೆ:
    * 150 ಜನರು ಉಳ್ಳು ಟೀಂ ರಚನೆ
    * ಈ ತಂಡ ಪ್ರತಿ ಚುನಾವಣೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದೆ.
    * ತಂಡದಲ್ಲಿ ಆಂಧ್ರ ಮತ್ತು ರಾಯಲ ಸೀಮೆಯವರನ್ನು ನೇಮಕ ಮಾಡಲಾಗಿದೆ
    * ಬೆಂಗಳೂರು, ರಾಯಚೂರು, ಗದಗ್ ಯುವಕರು ವಾರ್ ಟೀಂನಲ್ಲಿ ಸಕ್ರಿಯ
    * ಪಕ್ಷ ವೀಕ್ ಇರುವ ಕ್ಷೇತ್ರಗಳಲ್ಲೇ ಹೆಚ್ಚು ಕೆಲಸ ಮಾಡುವ ತಂತ್ರಗಾರಿಕೆ
    * ಎಲೆಕ್ಷನ್‍ಗೆ 12 ದಿನ ಮೊದಲು ಆ ಕ್ಷೇತ್ರಗಳಲ್ಲಿ ಬೀಡು ಬಿಡುವ ಟೀಂ

    ಶಾಸಕ ಶ್ರೀರಾಮುಲು ಜಾತಿ ಅಸ್ತ್ರಕ್ಕೆ ಸಚಿವ ಡಿಕೆಶಿಯಿಂದ ಯಾರು ನಿರೀಕ್ಷೆ ಮಾಡದ ಅಣ್ಣಾಸ್ತ್ರ ಪ್ರಯೋಗ ಮಾಡುತ್ತಿದ್ದು, ನಾಯಕ ವರ್ಸಸ್ ಗೌಡ ಎಂದು ಬಿಂಬಿಸಿ ಸಿಂಪತಿ ಗಿಟ್ಟಿಸುವ ರಾಮುಲು ಯತ್ನಕ್ಕೆ `ಅಣ್ಣ’ ಪ್ರತ್ಯಸ್ತ್ರ ಮಾಡುತ್ತಿದ್ದಾರೆ ಎಂದು ಪಕ್ಷದ ಮೂಲದಿಂದ ತಿಳಿದು ಬಂದಿದೆ.

    ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಶಿವಮೊಗ್ಗ ಮತ್ತು ಬಳ್ಳಾರಿಯನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಭಾರೀ ಚಕ್ರವ್ಯೂಹವನ್ನೇ ರಚಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಉಪ ಚುನಾವಣೆ ಪ್ರತಿಷ್ಠೆಯ ಕಣವಾಗಿ ಹೊರ ಹೊಮ್ಮಿದೆ. ಇತ್ತ ಶಾಸಕ ಶ್ರೀರಾಮುಲು ಸಹ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಲು ಸಜ್ಜಾಗಿದ್ದಾರಂತೆ.

  • ಬಳ್ಳಾರಿ, ಶಿವಮೊಗ್ಗ ಗೆಲುವಿಗಾಗಿ ಪಕ್ಷಗಳು ಹರಿಸಲಿವೆ ಹಣದ ಹೊಳೆ

    ಬಳ್ಳಾರಿ, ಶಿವಮೊಗ್ಗ ಗೆಲುವಿಗಾಗಿ ಪಕ್ಷಗಳು ಹರಿಸಲಿವೆ ಹಣದ ಹೊಳೆ

    ಬೆಂಗಳೂರು: ಕರ್ನಾಟಕದಲ್ಲಿ ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಚುನಾವಣೆ ನಡೆಯಲಿದೆ. ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು. ಚುನಾವಣಾ ಅಖಾಡ ರಣರಂಗವಾಗುತ್ತಿದೆ. ಮೈತ್ರಿ ಸರ್ಕಾರ ವರ್ಸಸ್ ಬಿಜೆಪಿ ಅಂತಾ ಆಗಿರುವ ಚುನಾವಣೆಯನ್ನು ಗೆಲ್ಲಲು ಮೂರು ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ. ಆದ್ರೆ ಶಿವಮೊಗ್ಗ ಮತ್ತು ಬಳ್ಳಾರಿ ಕ್ಷೇತ್ರಗಳ ಜಿದ್ದಾಜಿದ್ದಿನ ಆಟ ರಾಜಕೀಯದಲ್ಲಿ ರಣಕಹಳೆಯನ್ನು ಮೊಳಗಿಸುತ್ತಿದೆ.

    ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಶಿವಮೊಗ್ಗ ಮತ್ತು ಬಳ್ಳಾರಿಯನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಭಾರೀ ಚಕ್ರವ್ಯೂಹವನ್ನೇ ರಚಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಉಪ ಚುನಾವಣೆ ಪ್ರತಿಷ್ಠೆಯ ಕಣವಾಗಿ ಹೊರ ಹೊಮ್ಮಿದೆ. ಇತ್ತ ಶಾಸಕ ಶ್ರೀರಾಮುಲು ಸಹ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಲು ಸಜ್ಜಾಗಿದ್ದಾರಂತೆ.

    ಇತ್ತ ಶಿವಮೊಗ್ಗವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮೈತ್ರಿ ಸರ್ಕಾರ ಮಾಜಿ ಸಿಎಂ ಯಡಿಯೂರಪ್ಪರ ಪುತ್ರ ಬಿ.ವೈ.ರಾಘವೇಂದ್ರರನ್ನು ಸೋಲಿಸಿ ಬಿಜೆಪಿಗೆ ಮುಖಭಂಗ ಮಾಡಲು ರಾಜಕೀಯ ರೂಪರೇಷಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ರೂಪಿಸುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಾತಾಗಿದ್ದು, ನಾಲ್ವರು ಘಟಾನುಘಟಿಗಳ ನಡುವಿನ ಪ್ರತಿಷ್ಠೆಯ ಸಮರ ಎಂದೇ ಉಪಕದನವನ್ನು ವರ್ಣಿಸಲಾಗುತ್ತಿದೆ. ನಾಯಕರಿಗೆ 4 ತಿಂಗಳ ಆಧಿಕಾರವಧಿಗಿಂತ ಪ್ರತಿಷ್ಠೆ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಹಣದ ಹೊಳೆಯೇ ಹರಿಸಲು ಮುಂದಾಗಿದೆಯಂತೆ.

    ಬಳ್ಳಾರಿಗಾಗಿ ಬರೋಬ್ಬರಿ 200 ಕೋಟಿ!
    ಬಳ್ಳಾರಿ ಲೋಕಸಭಾ ಕ್ಷೇತ್ರದ ಗೆಲುವಿಗಾಗಿ ಕಾಂಗ್ರೆಸ್ ಬರೋಬ್ಬರಿ 300 ಕೋಟಿ ರೂ. ಹಣವನ್ನು ವಿನಿಯೋಗಿಸಲಿದೆಯಂತೆ. ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪರಿಗೆ ಡಿ.ಕೆ.ಶಿವಕುಮಾರ್ ಮನಿ ಟ್ರೀ (ಹಣದ ಮೂಲ) ಆದ್ರೆ, ಬಿಜೆಪಿ ಅಭ್ಯರ್ಥಿ ಜೆ.ಶಾಂತಾರ ಪರವಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಸೋದರ ಶ್ರೀರಾಮುಲು ಹಣದ ಹೊಳೆ ಹರಿಸಲಿದ್ದಾರೆ ಎಂಬ ಮಾತುಗಳು ಬಳ್ಳಾರಿ ರಾಜಕಾರಣದಲ್ಲಿ ಕೇಳಿ ಬರುತ್ತಿರುವೆ. ಬಳ್ಳಾರಿ 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ 25 ಕೋಟಿಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಖರ್ಚು ಮಾಡಲಿದೆಯಂತೆ.

    ಶಿವಮೊಗ್ಗಕ್ಕಾಗಿ 100 ಕೋಟಿ!
    ಒಂದು ವೇಳೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೋತರೆ ಯಡಿಯೂರಪ್ಪರಿಗೆ ಭಾರೀ ಮುಖಭಂಗವಾಗಲಿದೆ. ಇತ್ತು ಜೆಡಿಎಸ್ ನಿಂದ ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಬಿಜೆಪಿಯ ಎದುರಾಳಿ ಆಗಿದ್ದಾರೆ. ಮಧು ಬಂಗಾರಪ್ಪ ಅವರಿಗೆ ಸಿಎಂ ಕುಮಾರಸ್ವಾಮಿ ಮನಿ ಟ್ರೀ ಆದ್ರೆ, ಬಿ.ವೈ.ರಾಘವೇಂದ್ರರಿಗೆ ತಂದೆ ಬಿ.ಎಸ್.ಯಡಿಯೂರಪ್ಪ ಮನಿ ಟ್ರೀ ಎಂದು ಹೇಳಲಾಗುತ್ತಿದೆ. ಶಿವಮೊಗ್ಗದ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ 12.50 ಕೋಟಿ ಖರ್ಚಿಗೆ ಬಿಜೆಪಿ ಮತ್ತು ಜೆಡಿಎಸ್ ಪ್ಲಾನ್ ಮಾಡಿದೆಯಂತೆ. ಒಟ್ಟು 8 ಕ್ಷೇತ್ರಗಳಿಗೆ 100 ಕೋಟಿ ರೂ.ಖರ್ಚು ಆಗಲಿದೆ ಎಂಬ ಸುದ್ದಿಯೂ ಶಿವಮೊಗ್ಗ ರಾಜಕೀಯದ ಪಡಸಾಲೆಯನ್ನು ಹರಿದಾಡುತ್ತಿವೆ.

    ನಾಲ್ಕು ತಿಂಗಳ ಅವಧಿಗಿಂತ ಪ್ರತಿಷ್ಠೆಯ ಕಣವಾಗಿ ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳು ಏರ್ಪಟ್ಟಿವೆ. ಕರ್ನಾಟಕ ಉಪ ಚುನಾವಣೆಯನ್ನು 2019ರ ಎಲೆಕ್ಷನ್ ಗೆ ದಿಕ್ಸೂಚಿ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಿಕೆಶಿ ಜೊತೆ ಪ್ರಚಾರಕ್ಕೆ ಹೋಗಲ್ಲ: ರಮೇಶ್ ಜಾರಕಿಹೊಳಿ

    ಡಿಕೆಶಿ ಜೊತೆ ಪ್ರಚಾರಕ್ಕೆ ಹೋಗಲ್ಲ: ರಮೇಶ್ ಜಾರಕಿಹೊಳಿ

    ಬೆಂಗಳೂರು: ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ನಾನು ಸಚಿವ ಡಿ.ಕೆ.ಶಿವಕುಮಾರ್ ಜೊತೆ ಪ್ರಚಾರಕ್ಕೆ ಹೋಗಲ್ಲ. ಹೈಕಮಾಂಡ್ ಸೂಚಿಸಿದ್ರೆ ಅಲ್ಲಿಯೂ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ನಾಯಕರು ಆದೋರು ಕೇವಲ ಎದೆ ಉಬ್ಬಿಸಿಕೊಂಡು ಓಡಾಡೋದಲ್ಲ. ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತನು ಪ್ರಬಲ ಮುಖಂಡ. ಮಾಧ್ಯಮದ ಪೋಸ್ ಕೊಟ್ಟು ತಾನು ದೊಡ್ಡ ನಾಯಕ ಅಂತಾ ತೋರಿಸಿಕೊಳ್ಳುವುದು ಅಲ್ಲ. ಪಕ್ಷಕ್ಕಾಗಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಯಕರ್ತನು ಅತ್ಯಂತ ಮುಖ್ಯ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟರು.

    ನಾಮಪತ್ರ ವಾಪಾಸ್ಸಾತಿ ಪ್ರಕ್ರಿಯೆ ಮುಗಿದ ನಂತರ, ಬಳ್ಳಾರಿ ಚುನಾವಣೆ ಪ್ರಚಾರಕ್ಕೆ ತೆರಳುತ್ತೇನೆ. ನಾವೆಲ್ಲ ಶಾಸಕ ನಾಗೇಂದ್ರ ಪ್ರಸಾದ್ ಸೋದರ ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ನೀಡಬೇಕು ಅಂತಾ ಇಚ್ಛೆಯನ್ನು ವ್ಯಕ್ತಪಡಿಸಿದ್ದೇವು. ಆದ್ರೆ ಹೈಕಮಾಂಡ್ ಉಗ್ರಪ್ಪರ ಹೆಸರನ್ನು ಅಂತಿಮಗೊಳಿಸಿದೆ. ಎಲ್ಲರನ್ನು ಮತ್ತು ಎಲ್ಲ ವಿಷಯವನ್ನು ಗಮನದಲ್ಲಿರಿಸಿ ಉಗ್ರಪ್ಪ ಅವರ ಹೆಸರನ್ನು ಅಂತಿಮ ಮಾಡಿದೆ. ಯಾಕೆ ಮಾಡಿದ್ದಾರೆ? ಪಕ್ಷದಲ್ಲಿ ಏನಾಯ್ತು ಎಂಬುದನ್ನು ಮಾಧ್ಯಮಗಳ ಮುಂದೆ ಹೇಳೋದಕ್ಕೆ ಸಾಧ್ಯವಿಲ್ಲ. ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಗೆ ನಮ್ಮೆಲ್ಲರ ಸಹಮತವಿದೆ. ಚುನಾವಣೆಯಲ್ಲಿ ಉಗ್ರಪ್ಪನವರು ಗೆಲ್ಲೋದು ಖಂಡಿತ. ಉಪ ಚುನಾವಣೆಯ ಫಲಿತಾಂಶ ಏನೇ ಬಂದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗಟ್ಟಿಯಾಗಿರುತ್ತದೆ ಅಂತಾ ತಿಳಿಸಿದರು.

    ಡಿಕೆಶಿ ಜೈಲಿಗೆ ಹೋಗ್ತಾರೆ ಅಂತ ಶ್ರೀರಾಮುಲು ಹೇಳಿದ್ದು ತಪ್ಪು. ಅವರ ನಸೀಬು ಇದ್ದಂಗೆ ಆಗುತ್ತದೆ. ಈ ವಿಷಯದಲ್ಲಿ ನಾನು ಡಿಕೆಶಿ ಪರ ನಿಲ್ಲುತ್ತೇನೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನ ಅವರ ರಾಜಕೀಯ ವಿಷಯ, ವೈಯುಕ್ತಿಕ ಸ್ನೇಹ ಏನೇ ಇರಬಹುದು. ಈ ವಿಷಯದಲ್ಲಿ ನಾನು ಅವರ ಪರ ನಿಲ್ಲುತ್ತೇನೆ. ರಾಜಕೀಯ ವಿಚಾರ ಬಂದಾಗ ನಾನು ಅವರ ಪರ ಇರುತ್ತೇನೆ. ಸರ್ಕಾರ ಭದ್ರವಾಗಿದೆ ವೈಯಕ್ತಿಕ ವಿಚಾರಗಳಲ್ಲಿ ಅನೇಕ ಭಿನ್ನಭಿಪ್ರಾಯಗಳು ಇರಬಹುದು ಶ್ರೀರಾಮುಲು ಹಾಗೇ ಮಾತನಾಡೋದು ಸರಿಯಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv