Tag: ಕರ್ನಾಟಕ ಉಪ ಚುನಾವಣೆ

  • ಗೆಲುವಿಗಾಗಿ ಸ್ವಾಮೀಜಿಗಳ ಮೊರೆ ಹೋದ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ

    ಗೆಲುವಿಗಾಗಿ ಸ್ವಾಮೀಜಿಗಳ ಮೊರೆ ಹೋದ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ

    ಕಾರವಾರ: ಉಪ ಚುನಾವಣೆ ಮತದಾನಕ್ಕೆ ಎರಡೇ ದಿನ ಬಾಕಿ ಉಳಿದಿದೆ. ಬಿಜೆಪಿ ಸೇರಿದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್‍ರನ್ನು ಸೋಲಿಸಲು ಕಾಂಗ್ರೆಸ್ ಪಣ ತೊಟ್ಟಿದ್ದು, ಮತ ಬೇಟೆಗೆ ಭರ್ಜರಿ ತಂತ್ರ ಹೆಣೆದಿದೆ. ಇದರಿಂದಾಗಿ ಹೆದರಿದ ಹೆಬ್ಬಾರ್, ಜಾತಿ ಮತ ಭೇಟೆಗಾಗಿ ಮಠಗಳ ಮೊರೆ ಹೋಗಿದ್ದಾರೆ.

    ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಶಿವರಾಮ್ ಹೆಬ್ಬಾರ್ ಅವರಿಗೆ ಗೆಲ್ಲುವ ಅನಿವಾರ್ಯತೆಯಿದೆ. ಇತ್ತ ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕರನ್ನು ಕಣಕ್ಕಿಳಿಸಿದ್ದು, ಖುದ್ದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾಳತ್ವ ವಹಿಸಿದ್ದಾರೆ. ಹೀಗಾಗಿ ಹೆಬ್ಬಾರ್ ಪರ ಇದ್ದ ಮತದಾರರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಕಾಂಗ್ರೆಸ್ ತಂತ್ರಗಾರಿಕೆಯಿಂದ ಹೆದರಿರುವ ಹೆಬ್ಬಾರ್, ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರೆನಿಸಿರುವ ಬ್ರಾಹ್ಮಣ ಹಾಗೂ ಹಿಂದುಳಿದ ಮತಗಳ ಓಲೈಕೆಗೆ ಇಳಿದಿದ್ದಾರೆ. ರಾತ್ರೋರಾತ್ರಿ ಬ್ರಾಹ್ಮಣ ಜನಾಂಗದ ಮಠಾಧೀಶರರಾದ ಸ್ವರ್ಣವಳ್ಳಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಮೊರೆ ಹೋಗಿ, ತಮ್ಮ ಪರ ಇರುವಂತೆ ಕೇಳಿಕೊಂಡಿದ್ದಾರೆ. ತನ್ನ ಹೆಸರು ಬಳಸಿ ಕಾಂಗ್ರೆಸ್‍ಗೆ ಮತ ನೀಡಿ ಎಂದು ಕೇಳುತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಆರೋಪಿಸಿದ್ದಾರೆ.

    ಕಾಂಗ್ರೆಸ್‍ಗೆ ದ್ರೋಹ ಬಗೆದ ಹೆಬ್ಬಾರ್‍ರನ್ನು ಸೋಲಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಖುದ್ದು ಕ್ಷೇತ್ರದ ತುಂಬಾ ಓಡಾಡಿ, ದಲಿತ ಮತ್ತು ಅಹಿಂದ ಮತಗಳನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ಇದು ಕಾಂಗ್ರೆಸ್‍ನ ಭರವಸೆಯನ್ನು ಹೆಚ್ಚಿಸಿದೆ. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಕ್ಷೇತ್ರದಲ್ಲಿ ಎರಡನೇ ಅತಿಹೆಚ್ಚು ಮತದಾರರಾಗಿರುವ ನಾಯಕ ಜನಾಂಗದವರಾಗಿದ್ದು, ನಾಯಕ ಜನಾಂಗ ಇವರ ಪರ ನಿಂತಿದೆ.

  • ಮೈಸೂರಲ್ಲಿ ಮತಬೇಟೆಗೆ ಇಳಿದ ಶ್ರೀರಾಮುಲು- ಹುಣಸೂರಲ್ಲಿ ರೀಪಿಟ್ ಆಗ್ತಿದೆ ಬಾದಾಮಿ ಫೈಟ್

    ಮೈಸೂರಲ್ಲಿ ಮತಬೇಟೆಗೆ ಇಳಿದ ಶ್ರೀರಾಮುಲು- ಹುಣಸೂರಲ್ಲಿ ರೀಪಿಟ್ ಆಗ್ತಿದೆ ಬಾದಾಮಿ ಫೈಟ್

    ಮೈಸೂರು: ಸಚಿವ ಶ್ರೀರಾಮುಲು ಹುಣಸೂರು ಬೈ ಎಲೆಕ್ಷನ್‍ನಲ್ಲಿ ಬಿಜೆಪಿ ಉಸ್ತುವಾರಿಯಾಗಿದ್ದಾರೆ. ಸಿದ್ದರಾಮಯ್ಯ ಅಖಾಡದಲ್ಲೇ ರಾಮುಲು ಮತಬೇಟೆಯಾಡ್ತಿದ್ದಾರೆ. ಹಾಗಾಗಿ ಮೈಸೂರಲ್ಲಿ ಬಾದಾಮಿ ಫೈಟ್ ಪಕ್ಕಾ ಆಗಿದೆ. ಬಾದಾಮಿಯಲ್ಲಿ ಚುನಾವಣೆ ಬಳಿಕ ಸಿದ್ದರಾಮಯ್ಯ ವಿರುದ್ಧ ರಾಮುಲು ಸೋಲನುಭವಿಸಿದ್ದರು. ಅಂದಿನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ರಾಮುಲು ಈಗ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ್ದಾರೆ.

    ಸಚಿವ ಶ್ರೀರಾಮುಲು ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಗೆಲ್ಲಿಸಲು ಹೋರಾಟಕ್ಕೆ ಇಳಿದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪರಮ ಶಿಷ್ಯ ಎಚ್.ಪಿ. ಮಂಜುನಾಥ್ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ನಡುವೆ ಇವರಿಬ್ಬರೂ ಹುಣಸೂರನ್ನು ಬಾದಾಮಿ ಅಂದುಕೊಂಡಂತೆ ಕಾಣುತ್ತಿದೆ. ಏಕೆಂದರೆ ಬಾದಾಮಿಯಲ್ಲಿ ಸಿದ್ದರಾಮಯ್ಯ 1,696 ಮತಗಳಿಂದ ಗೆದ್ದು ನಿಟ್ಟುಸಿರು ಬಿಟ್ಟಿದ್ದರು. ರಾಮುಲುಗೆ ಆ ಸೋಲಿನ ಸಿಟ್ಟು ಕಡಿಮೆ ಆದಂತೆ ಕಾಣುತ್ತಿಲ್ಲ. ಹೀಗಾಗಿ, ಇಬ್ಬರು ಇಲ್ಲಿ ಮತ್ತೆ ತಾವೇ ಅಭ್ಯರ್ಥಿಗಳು ಎಂಬಂತೆ ಕಾದಾಟಕ್ಕೆ ಇಳಿದಿದ್ದಾರೆ.

    ಹುಣಸೂರಿನಲ್ಲೇ ಬೀಡುಬಿಟ್ಟಿರುವ ರಾಮುಲು ತಮ್ಮ ಸಮುದಾಯದ ಮತಗಳ ಸೆಳೆಯುತ್ತಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ನಾಯಕ ಸಮುದಾಯದ ಸುಮಾರು 35 ಸಾವಿರ ಮತಗಳಿವೆ. ಈ ಮತಗಳಲ್ಲಿ ಬಹುಪಾಲು ಮತಗಳು ಬಿಜೆಪಿಗೆ ಬಂದರೆ ಅದು ಬಿಜೆಪಿ ಅಭ್ಯರ್ಥಿಗೆ ದೊಡ್ಡ ಶಕ್ತಿ. ತಮ್ಮ ಸಮುದಾಯದ ಮತಗಳ ಸೆಳೆಯುವ ಮೂಲಕ ರಾಮುಲು ತಮ್ಮ ಅಭ್ಯರ್ಥಿ ಗೆಲುವಿನ ಹಾದಿ ಹಿಡಿಯುವಂತೆ ಮಾಡಿ ತಾವು ನಾಯಕ ಸಮುದಾಯದ ದೊಡ್ಡ ನಾಯಕ ಅಂತ ಮತ್ತೆ ಸಾಬೀತು ಮಾಡಲು ಮುಂದಾಗಿದ್ದಾರೆ.

    ಹೀಗಾಗಿ, ಶ್ರೀರಾಮುಲು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ಶಕ್ತಿ ಇದ್ದರೆ ಮತ್ತೆ ಚುನಾವಣೆಗೆ ಬನ್ನಿ ಅಂತಾ ಸವಾಲ್ ಹಾಕುತ್ತಿದ್ದಾರೆ. ಒಂದರ್ಥದಲ್ಲಿ ಇವರಿಬ್ಬರು ಟೀಕೆ – ಪ್ರತಿ ಟೀಕೆ ನೋಡಿದರೆ ಜನರು ಕೂಡ ಬಾದಾಮಿ ಚುನಾವಣೆಯನ್ನು ಕಣ್ಮುಂದೆ ತಂದುಕೊಳ್ತಿದ್ದಾರೆ. ಶ್ರೀರಾಮುಲು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಾದಾಮಿ ಸೇಡು ತೀರಿಸಿ ಕೊಳ್ತಾರಾ? ಅಥವಾ ಸಿದ್ದರಾಮಯ್ಯ ತಮ್ಮ ಶಿಷ್ಯನನ್ನು ಗೆಲ್ಲಿಸೋ ಮೂಲಕ ಶ್ರೀರಾಮುಲುಗೆ ಮತ್ತೆ ಮುಖ ಭಂಗ ಮಾಡ್ತಾರಾ ಕಾದು ನೋಡಬೇಕಿದೆ.

  • ಎಕ್ಕಡದಲ್ಲಿ ಹೊಡೆದ್ರು, ದೇವರಾಜು ಅದನ್ನ ಅನುಭವಿಸಲೇ ಬೇಕು: ನಾರಾಯಣಗೌಡ ಆಕ್ರೋಶ

    ಎಕ್ಕಡದಲ್ಲಿ ಹೊಡೆದ್ರು, ದೇವರಾಜು ಅದನ್ನ ಅನುಭವಿಸಲೇ ಬೇಕು: ನಾರಾಯಣಗೌಡ ಆಕ್ರೋಶ

    ಮಂಡ್ಯ: ನಾಮಪತ್ರ ಸಲ್ಲಿಸಲು ಬರೋವಾಗ ನನಗೆ ಜೆಡಿಎಸ್ ನವರು ಎಕ್ಕಡದಲ್ಲಿ ಹೊಡೆದರು. ಜೆಡಿಎಸ್ ಅಭ್ಯರ್ಥಿ ದೇವರಾಜು ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ನಾರಾಯಣಗೌಡ ಗುಡುಗಿದ್ದಾರೆ.

    ಇಂದು ಬಿಜೆಪಿ ಅಭ್ಯರ್ಥಿಯಾಗಿರುವ ನಾರಾಯಣಗೌಡರು ಚುನಾವಣಾ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ಆಗಮಿಸುತ್ತಿದ್ದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಸಹ ಇಂದೇ ನಾಮಪತ್ರ ಸಲ್ಲಿಕೆಗೆ ತಾಲೂಕು ಕಚೇರಿಗೆ ಆಗಮಿಸಿದ್ದರು. ಮೂರು ಪಕ್ಷಗಳ ಬೆಂಬಲಿಗರು ಒಂದೆಡೆ ಸೇರಿದ್ದರಿಂದ ಘೋಷಣೆಗಳು ಜೋರಾಗಿದ್ದವು. ಈ ವೇಳೆ ಕೆಲ ಕಿಡಿಗೇಡಿಗಳು ನಾರಾಯಣಗೌಡರ ಮೇಲೆ ಚಪ್ಪಲಿ ಎಸೆದಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಕೋಟೆ ಛಿದ್ರ ಮಾಡಲು ನಾರಾಯಣಗೌಡ ಮಾಸ್ಟರ್ ಪ್ಲಾನ್!

    ಈ ಕುರಿತು ಪ್ರತಿಕ್ರಿಯಿಸಿರುವ ನಾರಾಯಣಗೌಡ, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಅವರ ಸೋದರ ತಮ್ಮ ಬೆಂಬಲಿಗರೊಂದಿಗೆ ಹಲ್ಲೆ ನಡೆಸಿದ್ದಾರೆ. ನನಗೆ ಎಕ್ಕಡದಲ್ಲಿ ಹೊಡೆಸಿ, ಜೊತೆಯಲ್ಲಿದ್ದ ಸಚಿವ ಮಾಧುಸ್ವಾಮಿ ಅವರನ್ನು ನೂಕಾಡಿದ್ದಾರೆ. ಚಪ್ಪಲಿಯಲ್ಲಿ ಹೊಡಿಸುವ ಅಧಿಕಾರ ಯಾರಿಗಿದೆ ಎಂದು ಪ್ರಶ್ನೆ ಮಾಡಿ ಮುಂದಿನ ದಿನಗಳಲ್ಲಿ ಎಲ್ಲರು ಪರಿಣಾಮ ಎದುರಿಸಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿಗಾಗಿ ದೇವಿ ಮುಂದೆ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದ ನಾರಾಯಣಗೌಡ

    ನಾಮಪತ್ರ ಸಲ್ಲಿಸಿ ಹೊರ ಬಂದ ಕೂಡಲೇ ಜೆಡಿಎಸ್ ಕಾರ್ಯಕರ್ತರ ಗುಂಪು ‘ಬಾಂಬೆ ಕಳ್ಳ’ ಎಂದು ಕೂಗಲು ಆರಂಭಿಸಿದರು. ಕಾರ್ಯಕರ್ತರ ಗಲಾಟೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ತಮ್ಮ ವಾಹನದಲ್ಲಿಯೇ ನಾರಾಯಣಗೌಡರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋದರು. ಇದನ್ನೂ ಓದಿ: ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

    ಬಿಜೆಪಿ ಕಾರ್ ಮುಂದೆ ಕಾಂಗ್ರೆಸ್ ಪಟಾಕಿ: ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಮುಖಾಮುಖಿ ಆಗುತ್ತಿದ್ದಂತೆ ಪಕ್ಷದ ಪರವಾಗಿ ಘೋಷಣೆಯ ಧ್ವನಿ ಹೆಚ್ಚಾಯ್ತು. ಇತ್ತ ಬಿಜೆಪಿ ಮೆರವಣಿಗೆ ಸಾಗುತ್ತಿದ್ದ ವಾಹನಗಳ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹೊಡೆದಿದ್ದರಿಂದ ಗಲಾಟೆಯ ಹಂತಕ್ಕೆ ತಲುಪಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದರು. ಇದನ್ನೂ ಓದಿ:   ಬಿಜೆಪಿಯಲ್ಲಿ ಆಗುತ್ತಿರುವ ಕೆಲಸ ಹೆಚ್‍ಡಿಕೆ ಸರ್ಕಾರದಲ್ಲಿ ಆಗಿದ್ದರೆ, ನಾನು ಅಲ್ಲೆ ಇರುತ್ತಿದ್ದೆ: ನಾರಾಯಣಗೌಡ

    ಬಿಜೆಪಿ ಅಭ್ಯರ್ಥಿಯಾಗಿರುವ ನಾರಾಯಣ ಗೌಡರಿಗೆ ಸಚಿವ ಮಾಧುಸ್ವಾಮಿ, ಸಿಎಂ ಪುತ್ರ ವಿಜಯೇಂದ್ರ, ಶಾಸಕ ಪ್ರೀತಂಗೌಡ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಅವರಿಗೆ ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್, ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಪತ್ನಿ ರಮಾಮಣಿ ಸಾಥ್ ನೀಡಿದರು. ಜೆಡಿಎಸ್ ಅಭ್ಯರ್ಥಿ ದೇವರಾಜುಗೆ ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ, ಜಿಪಂ ಸದಸ್ಯ ಮಂಜುನಾಥ್ ಸಾಥ್ ನೀಡಿದರು. ಇದನ್ನೂ ಓದಿ: ಅನರ್ಹ ಶಾಸಕ ನಾರಾಯಣಗೌಡರನ್ನ ಹಾಡಿ ಹೊಗಳಿದ ಬಿಎಸ್‍ವೈ

  • ಡಿಕೆಶಿ ಜೊತೆ ಸಿದ್ದರಾಮಯ್ಯ ಸಂಧಾನ-‘ಟಗರು’ ರಾಜಿ ಆಫರ್​ಗೆ ‘ಬಂಡೆ’ ಉತ್ತರ

    ಡಿಕೆಶಿ ಜೊತೆ ಸಿದ್ದರಾಮಯ್ಯ ಸಂಧಾನ-‘ಟಗರು’ ರಾಜಿ ಆಫರ್​ಗೆ ‘ಬಂಡೆ’ ಉತ್ತರ

    -ಮೂರು ವಿಷಯಗಳಲ್ಲಿ ಇಬ್ಬರ ಮಧ್ಯೆ ಮುನಿಸು

    ಬೆಂಗಳೂರು: ಕರ್ನಾಟಕ ಉಪಚುನಾವಣೆಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಸಂಧಾನಕ್ಕೆ ಮುಂದಾಗಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಚುನಾವಣಾ ಕಣದಿಂದ ಕಾಂಗ್ರೆಸ್ ಹಿರಿಯ ನಾಯಕರು ಅಂತರ ಕಾಯ್ದುಕೊಳ್ಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯನವರ ಮೇಲಿನ ಮುನಿಸನ್ನು ಹೊರ ಹಾಕಿದ್ದರು. ಉಪ ಚುನಾವಣೆ ಫಲಿತಾಂಶ ಕ್ರೆಡಿಟ್ ಸಿದ್ದರಾಮಯ್ಯನವರು ಬೇಕಾದರೆ ತೆಗೆದುಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಆಪ್ತರಿಗೆ ಸಿದ್ದರಾಮಯ್ಯ ಮಣೆ ಹಾಕಿದ್ದಾರೆ ಎಂದು ಹಿರಿಯ ನಾಯಕರು ಅಸಮಾಧಾನ ಹೊರ ಹಾಕಿದ್ದರು ಎಂದು ತಿಳಿದು ಬಂದಿದೆ.

    ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ. ಏಕಾಂಗಿ ಆಗುವ ಭೀತಿಯಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮೂಲಕ ಸಂದೇಶವೊಂದನ್ನು ಡಿಕೆ ಶಿವಕುಮಾರ್ ಅವರಿಗೆ ರವಾನಿಸಿದ್ದಾರಂರೆ. ಪಕ್ಷದಲ್ಲಿಯ ಮನಸ್ತಾಪಗಳು ಏನೇ ಇರಲಿ. ಕುಳಿತು ಮಾತಾಡೋಣ ಎಂಬ ಸಿದ್ದರಾಮಯ್ಯನವರ ಸಂದೇಶಕ್ಕೆ ಸಮಯ ಬಂದಾಗ ನೋಡೋಣ, ಅವಸರ ಬೇಡ ಎಂದು ಡಿಕೆ ಶಿವಕುಮಾರ್ ಟಕ್ಕರ್ ನೀಡಿದ್ದಾರೆ ಎನ್ನಲಾಗಿದೆ.

    ಮೂರು ವಿಷಯ:
    ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಮಧ್ಯೆ ಮೂರು ವಿಷಯಗಳಿಗೆ ಮನಸ್ತಾಪ ಉಂಟಾಗಿದೆ ಎನ್ನಲಾಗಿದ್ದು, ಇದರ ಪರಿಣಾಮವೇ ಡಿಕೆಶಿ ಸಂಧಾನಕ್ಕೆ ಹಿಂದೇಟು ಹಾಕಿರುವ ಸಾಧ್ಯತೆಗಳಿವೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಿ ದಿನೇಶ್ ಗುಂಡೂರಾವ್ ಅವರಿಗೆ ನೀಡಲಾಯ್ತು. ನಂತರ ನಾನು ಜೈಲಲ್ಲಿದ್ದಾಗಲೇ ಏಕಪಕ್ಷೀಯವಾಗಿ ಉಪ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಾಗಿದೆ. ಮೂರನೇಯದ್ದು ಆಪರೇಷನ್ ಕಮಲದ ವೇಳೆ ಬೇರೆ ಪಕ್ಷದ ಅಭ್ಯರ್ಥಿ ಸೆಳೆಯಲು ಯತ್ನಿಸಿದಾಗ ಸಿದ್ದರಾಮಯ್ಯ ಅಡ್ಡಿಪಡಿಸಿದರು ಎಂದು ಡಿಕೆ ಶಿವಕುಮಾರ್ ಮುನಿಸಿಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ನನ್ನ ಹೆಸ್ರು ಹೇಳಿದ್ರೆ ಬಿಜೆಪಿಗೆ ಮಾರ್ಕೆಟ್ – ಶತಾಬ್ಧಿಯಲ್ಲಿ ಜೈಲಿನ ಅನುಭವ ಹಂಚಿಕೊಂಡ ಡಿಕೆಶಿ

    ನನ್ನ ಹೆಸ್ರು ಹೇಳಿದ್ರೆ ಬಿಜೆಪಿಗೆ ಮಾರ್ಕೆಟ್ – ಶತಾಬ್ಧಿಯಲ್ಲಿ ಜೈಲಿನ ಅನುಭವ ಹಂಚಿಕೊಂಡ ಡಿಕೆಶಿ

    – ನೆಲದ ಮೇಲೆಯೇ ಕುಳಿತುಕೊಳ್ಳಬೇಕಿತ್ತು
    – ಐಎಎಸ್, ಕೆಎಎಸ್ ಅಧಿಕಾರಿಗಳ ಪತ್ನಿಯರಿಂದ ಪ್ರತಿಭಟನೆ

    ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶತಾಬ್ಧಿಯಲ್ಲಿ ಜೈಲಿನಲ್ಲಿದ್ದ ದಿನಗಳನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಡಿಕೆ ಶಿವಕುಮಾರ್ ಪಬ್ಲಿಕ್ ಟಿವಿಗೆ ಸಂದರ್ಶನ ನೀಡಿ, ಹಲವು ವಿಚಾರಗಳನ್ನು ಹಂಚಿಕೊಂಡರು.

    ನನ್ನ ಆರೋಗ್ಯ ಇನ್ನು ಸುಧಾರಿಸಿಲ್ಲ. ಬೆನ್ನು, ಕಾಲು ನೋವು, ಬಿಪಿ ಎಲ್ಲ ಇದೆ. ನಾನು ಫಿಟ್ ಆಗಿದ್ದೆ, ಆದರೆ ಜೈಲಿನ ಕೆಲವು ದಿನಚರಿ ನನ್ನ ಆರೋಗ್ಯ ಹಾಳುಮಾಡಿದೆ. ಜೈಲಲ್ಲಿ ನನಗೆ ಕುಳಿತುಕೊಳ್ಳಲು ಒಂದು ಕುರ್ಚಿ ಸಹ ಕೊಡಲಿಲ್ಲ. ಒಂದು ಟಿವಿಯು ಕೊಡಲಿಲ್ಲ ಅಷ್ಟರ ಮಟ್ಟಿಗೆ ನನ್ನನ್ನು ನಡೆಸಿಕೊಂಡರು. ಆ ವಿಚಾರವಾಗಿ ನೋವಿದ್ದು, ಸಮಯ ಬಂದಾಗ ಎಲ್ಲಾ ಮಾತನಾಡುತ್ತೇನೆ.

    ಜೈಲು ಮಂತ್ರಿ ಆಗಿದ್ದಾಗ ನಾನೇ ಜೈಲುಗಳಿಗೆ ಮೊದಲು ಟಿವಿ ಕೊಟ್ಟಿದ್ದೆ ಎಂಬ ವಿಷಯ ನ್ಯಾಯಾಧೀಶರಿಗೆ ಹೇಳಿದೆ. ವಿಷಯ ತಿಳಿದ ಕೂಡಲೇ ನ್ಯಾಯಾಧೀಶರು ಕುರ್ಚಿ ಮತ್ತು ಟಿವಿ ಕೊಡಲು ಹೇಳಿದರು. ಜಡ್ಜ್ ಹೇಳಿದರೂ ಟಿವಿ ಕೊಡಲಿಲ್ಲ. ಕೊನೆಯ ದಿನ ಒಂದು ಕುರ್ಚಿ ನೀಡಿದರು. ನಾನು ನೆಲದ ಮೇಲೆಯೇ ಕುಳಿತುಕೊಳ್ಳಬೇಕಿತ್ತು. ಕುರ್ಚಿ ನೀಡದೇ ಇದ್ದಿದ್ದರಿಂದ ನೆಲದ ಮೇಲೆಯೇ ಕುಳಿತುಕೊಳ್ಳಬೇಕಿತ್ತು.

    ನನ್ನ ವಿರುದ್ಧ ಯಾರು ದೂರು ನೀಡಿದ್ರು, ಯಾರು ಪತ್ರ ಬರೆದರು ಎಲ್ಲವೂ ಗೊತ್ತು. ಅಧಿಕಾರಿಗಳು ಎಲ್ಲಾ ಪತ್ರ ತೋರಿಸಿದ್ದಾರೆ. ಸಮಯ ಬಂದಾಗ ಎಲ್ಲವನ್ನು ಹೇಳುತ್ತೇನೆ. ನನ್ನೊಂದಿಗೆ ಏನು ನಡೆಯಿತು ಎಂಬುವುದು ಸಮಾಜಕ್ಕೆ ಗೊತ್ತಾಗಬೇಕಿದೆ. ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್ ನಲ್ಲೂ ನಾನೇನು ಒತ್ತಾಯ ಮಾಡಿರಲಿಲ್ಲ ಯಾವಾಗಲೋ ಅದರ ಮಾಲೀಕ ಕೊಟ್ಟಿದ್ದ ಅರ್ಜಿ ಅದು ವಿಚಾರಣೆಗೆ ಬಂದಿದೆ.

    ಈ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರೆ. ಆದರೆ ಸಿಬಿಐ ನವರು ದಡ್ಡರಲ್ಲ, ಎಲ್ಲವನ್ನು ನೋಡಿಕೊಂಡು ಬರ್ತಾರೆ. ಅಲ್ಲಿ ಏನಿದೆ, ಏನಿಲ್ಲ ನೋಡಿ ಮುಂದವರಿಯುತ್ತಾರೆ ಜಾರಿ ನಿರ್ದೇಶನಾಲಯ ರೀತಿಯಲ್ಲಿ ಸಿಬಿಐ ಕೆಲಸ ಮಾಡಲ್ಲ. ನನ್ನ ಬಗ್ಗೆ ಜನ ತೋರಿಸಿದ ಅಭಿಮಾನಕ್ಕೆ ನಾನು ಋಣಿ. ಐಎಎಸ್ ಆಫಿಸರ್ಸ್ ಪತ್ನಿಯರು, ಐಪಿಎಸ್ ಅಧಿಕಾರಿಗಳ ಹೆಂಡತಿಯರು, ಕೆಎಎಸ್ ಆಫಿಸರ್ ಗಳ ಹೆಂಡತಿಯರು ನನ್ನ ಪರವಾಗಿ ರಸ್ತೆಗಿಳಿದು ಪ್ರತಿಭಟನೆ ಮಾಡಿರುವ ವಿಡಿಯೋ ನೋಡಿದ್ದೇನೆ.

    ಸಾಕಷ್ಟು ವಿಷಯಗಳು ಮಾತನಾಡುವುದಿದೆ. ಈ ಎಲ್ಲಾ ಸಮಸ್ಯೆ ಮುಗಿದ ಮೇಲೆ ಮಾತನಾಡುತ್ತೇನೆ. ನನ್ನ ಬಗ್ಗೆ ಯಾರು ಏನು ಮಾತನಾಡಿದ್ದಾರೆ ಎಲ್ಲಾ ಗೊತ್ತಿದೆ. ಅದರ ಬಗ್ಗೆ ನಾನು ರಿಯಾಕ್ಟ್ ಮಾಡಿಲ್ಲ. ನನ್ನ ವಿರುದ್ಧ ಕುಮಾರಸ್ವಾಮಿಯವರು ಮಾತನಾಡಿದ್ದಾರೆ ಅನ್ನೋದಕ್ಕೆ ನಾನು ಪ್ರತಿಕ್ರಿಯಿಸಲ್ಲ. ನಾನು ಅವರ ಕೈ ಕೆಳಗೆ ಕೆಲಸ ಮಾಡಿದ್ದೇನೆ. ಬದಲಾದ ಸನ್ನಿವೇಶದಲ್ಲಿ ರಾಜಕೀಯವಾಗಿ ವಿರೋಧಿಯಾಗಿದ್ದ ಕುಮಾರಸ್ವಾಮಿ ಅವರ ಕೈ ಕೆಳಗೆ ಕೆಲಸ ಮಾಡಿದ್ದೇನೆ. ಎಸ್.ಎಂ.ಕೃಷ್ಣ, ಬಂಗಾರಪ್ಪ, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಮ್ಮ ನಾಯಕರೆಂದು ಒಪ್ಪಿಕೊಂಡು ಅವರ ಕೈ ಕೆಳಗೆ ಕೆಲಸ ಮಾಡಿದ್ದೇನೆ. ಹಾಗಾಗಿ ಅವರ ಯಾರ ವಿರುದ್ಧವೂ ಕಮೆಂಟ್ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

    ನಾನು ತಪ್ಪು ಮಾಡಿದ್ದೇನೋ ಇಲ್ಲವೋ, ಎಲ್ಲವೂ ಕಾನೂನು ಮೂಲಕ ಗೊತ್ತಾಗಲಿದೆ. ಕೆಲವರಿಗೆ ನಾನು ಅನಾವಶ್ಯಕ ಟಾರ್ಗೆಟ್ ಆಗಿದ್ದೇನೆ. ನನ್ನ ಮನಸ್ಸು ಒಪ್ಪಿದ ಕೆಲಸವನ್ನ ಮಾಡುತ್ತೇನೆ. ಯಾರು ಏನು ಅಂದುಕೊಳ್ಳುತ್ತಾರೆ ಅನ್ನೋದು ನನಗೆ ಮುಖ್ಯವಲ್ಲ. ಉಪ ಚುನಾವಣೆ ಟಿಕೆಟ್ ಹಂಚಿಕೆ ಹಾಗೂ ಇತ್ತೀಚಿನ ಬೆಳವಣಿಗೆ ಬಗ್ಗೆ ಸಾಕಷ್ಡು ನಾಯಕರು ನನ್ನ ಜೊತೆ ಮಾತನಾಡಿದ್ದಾರೆ. ಅದನ್ನ ನಾನು ಬಹಿರಂಗ ಪಡಿಸಲ್ಲ.

  • ಬಿಎಸ್‌ವೈಗೆ ಹೆಚ್‌ಡಿಡಿ ಫೋನ್ ಕಾಲ್-ಮತ್ತೆ ಮೈತ್ರಿಗೆ ಗೌಡರು ಕೊಟ್ರಾ ಆಫರ್!

    ಬಿಎಸ್‌ವೈಗೆ ಹೆಚ್‌ಡಿಡಿ ಫೋನ್ ಕಾಲ್-ಮತ್ತೆ ಮೈತ್ರಿಗೆ ಗೌಡರು ಕೊಟ್ರಾ ಆಫರ್!

    ಬೆಂಗಳೂರು: ವಿರೋಧ ಪಕ್ಷದಲ್ಲಿದ್ದಾಗ ಅಪ್ಪ-ಮಕ್ಕಳನ್ನು ರಾಜಕೀಯವಾಗಿ ಮುಗಿಸೋದೇ ನನ್ನ ಗುರಿ ಅಂತಿದ್ದ ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಸಾಫ್ಟ್ ಕಾರ್ನರ್ ಬೆಳೆಸಿಕೊಂಡಿದ್ದಾರೆ. ಇತ್ತ ಜೆಡಿಎಸ್ ವರಿಷ್ಠರಾದ ದೇವೇಗೌಡರೇ ಯಡಿಯೂರಪ್ಪ ಅವರಿಗೆ ಫೋನ್ ಮಾಡಿ ಮೈತ್ರಿ ಆಫರ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಮತ್ತೆ ಮಹಾಮೈತ್ರಿ ಅಸ್ತಿತ್ವಕ್ಕೆ ಬರುತ್ತಾ ಅನ್ನೋ ಚರ್ಚೆ ಶುರುವಾಗಿವೆ.

    ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಸರ್ಕಾರ ಬೀಳಿಸಲ್ಲ, ಕೆಲಸ ಮಾಡಲು ಸಮಯ ನೀಡೋಣ ಎಂಬ ಮಾತು ಈಗಾಗಲೇ ರಾಜ್ಯ ರಾಜಕೀಯದಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾಗಿತ್ತು. ಯಡಿಯೂರಪ್ಪನವರ ಬಗ್ಗೆ ಕುಮಾರಸ್ವಾಮಿ ಅವರ ಸಾಫ್ಟ್ ಕಾರ್ನ್ ಆಗಿದ್ದು, ರಾಜ್ಯದಲ್ಲಿ ಹೊಸ ಬೆಳವಣಿಗೆ ನಡೆಯುತ್ತೆ ಅನ್ನೋ ಮಾತುಗಳು ಕಳೆದೊಂದು ವಾರದಿಂದ ಜೋರಾಗಿಯೇ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಮಹಾ ಬೆಳವಣಿಗೆಯೊಂದು ನಡೆದಿದೆ.

    ದೇವೇಗೌಡರ ಜೊತೆ ಫೋನ್ ನಲ್ಲಿ ಮಾತುಕತೆ ನಡೆಸಿದ್ದೇನೆ ಎಂದು ಸಿಎಂ ಹೇಳಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ಮಾತು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹಾಮೈತ್ರಿಯ ಮುನ್ಸೂಚನೆ ನೀಡಿದೆ. ದೇವೇಗೌಡರು ಯಡಿಯೂರಪ್ಪ ಅವರಿಗೆ ಮೈತ್ರಿ ಆಫರ್ ನೀಡಿದ್ದಾರೆ. ಇದಕ್ಕೆ ಸಿಎಂ ಯಡಿಯೂರಪ್ಪ ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಹೆಚ್‌ಡಿ ಕುಮಾರಸ್ವಾಮಿ ವಿದೇಶದಲ್ಲಿದ್ದಾಗಲೇ ಮಹಾಮೈತ್ರಿಯ ಮಾತುಕತೆ ನಡೀತಾ? ಇತ್ತ ಬಿಜೆಪಿ ಹೈಕಮಾಂಡ್‌ನ ಒಪ್ಪಿಗೆ ಇಲ್ಲದೇ ಇಬ್ಬರ ನಡುವಿನ ಮಾತುಕತೆ ಹೇಗೆ ಸಾಧ್ಯ ಅಂತಾ ಎರಡೂ ಪಕ್ಷಗಳಲ್ಲೂ ಚರ್ಚೆ ಶುರುವಾಗಿದೆ.

    ರಾಜ್ಯದಲ್ಲಿ ಮತ್ತೆ ಮೈತ್ರಿಯಾದ್ರೆ ಬಿಎಸ್‌ವೈ ಲೆಕ್ಕಾಚಾರ ಏನು?
    * ಉಪಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶ ಬಂದರೆ ಬಿಜೆಪಿಗೆ ಜೆಡಿಎಸ್ ಬೆಂಬಲ ಅನಿವಾರ್ಯ.
    * ಬೈಎಲೆಕ್ಷನ್‌ನಲ್ಲಿ ನಿರೀಕ್ಷಿಸಿದಷ್ಟು ಸ್ಥಾನ ಬರದಿದ್ದರೆ ಜೆಡಿಎಸ್ ಜೊತೆ ದೋಸ್ತಿ?
    * ಈ ಮೂಲಕ ತಮ್ಮ ಸರ್ಕಾರ ಡೇಂಜರ್ ಝೋನ್‌ನಲ್ಲಿಲ್ಲ ಅನ್ನೋ ಸ್ಪಷ್ಟ ಸಂದೇಶ ರವಾನೆಗೆ ಬಿಎಸ್‌ವೈ ಚಿಂತನೆ.
    * ಬಿಜೆಪಿಯಲ್ಲಿ ಬಿಎಸ್‌ವೈ ವಿರೋಧಿ ಬಣಕ್ಕೆ ಸರ್ಕಾರ ಸೇಫ್ ಅಂತಾ ಮೆಸೇಜ್ ಪಾಸ್ ಮಾಡಲು ಅನುಕೂಲಕರ.
    * ಜೆಡಿಎಸ್ ಬಾಹ್ಯ ಬೆಂಬಲ ಕೊಟ್ರೆ ಸರ್ಕಾರ ಸೇಫ್. ಜೊತೆಗೆ ಅಧಿಕಾರ ಹಂಚಿಕೆ ಸಮಸ್ಯೆ ಇಲ್ಲ

    ಮಹಾಮೈತ್ರಿಯಾದರೆ ದೇವೇಗೌಡರ ಲೆಕ್ಕಾಚಾರ ಏನು?
    * ಪಕ್ಷದ ಶಾಸಕರ ಹಿತದೃಷ್ಟಿಯಿಂದ ಜೆಡಿಎಸ್‌ನಿಂದಲೇ ಬಾಹ್ಯಮೈತ್ರಿಗೆ ಒಲವು.
    * ಸರ್ಕಾರ ರಚಿಸುವ ಸಿದ್ದರಾಮಯ್ಯ ಕನಸಿಗೆ ಬ್ರೇಕ್ ಹಾಕಲು ಜೆಡಿಎಸ್ ತಂತ್ರ.
    * ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಗಿದ ಅಧ್ಯಾಯ ಅನ್ನೋ ಸ್ಪಷ್ಟ ಸಂದೇಶ ರವಾನೆ.
    * ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಪಕ್ಷದ ಶಾಸಕರನ್ನು ಹಿಡಿದಿಡುವ ಪ್ಲಾನ್.
    * ಸಮ್ಮಿಶ್ರ ಸರ್ಕಾರದಲ್ಲಿ ಆಗದ ಕೆಲಸವನ್ನು ಬಿಜೆಪಿ ಸರ್ಕಾರದಲ್ಲಿ ಮಾಡಿಕೊಟ್ಟು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ತಂತ್ರ.
    * ಶಾಸಕರಿಗೆ ಅನುಕೂಲವಾಗಲಿದೆ ಅನ್ನೋದು ಜೆಡಿಎಸ್ ಲೆಕ್ಕಾಚಾರ
    * ಪುತ್ರ ಕುಮಾರಸ್ವಾಮಿಯ ನಿರ್ಲಕ್ಷ್ಯ ಧೋರಣೆಗೆ ಈ ಮೈತ್ರಿ ಮೂಲಕ ದೇವೇಗೌಡರ ಖಡಕ್ ಉತ್ತರ.

    ಒಟ್ಟಾರೆಯಾಗಿ ಸಿಎಂ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಹಲವು ಚರ್ಚೆಗಳು ಆರಂಭಗೊAಡಿವೆ. ಕಾಂಗ್ರೆಸ್ ಗೆ ಟಕ್ಕರ್ ನೀಡಿ ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತಾ? ಉಪ ಚುನಾವಣೆ ಫಲಿತಾಂಶದ ನಂತರವೇ ಈ ಕುರಿತ ಬೆಳವಣಿಗೆಗಳು ನಡೆಯುತ್ತಾ ಎಂಬಿತ್ಯಾದಿ ಲೆಕ್ಕಾಚಾರದ ಮಾತುಗಳು ಎರಡೂ ಪಕ್ಷಗಳ ಅಂಗಳದಲ್ಲಿ ಬಲವಾಗಿ ಕೇಳಿ ಬರುತ್ತಿವೆ.

  • ಗೋಕಾಕ್‌ನಲ್ಲಿ ಯಾರಿಗೆ ಸಿಗುತ್ತೆ ‘ಕೈ’ ಟಿಕೆಟ್-ಶುರುವಾಯ್ತು ಭಾರೀ ಪೈಪೋಟಿ

    ಗೋಕಾಕ್‌ನಲ್ಲಿ ಯಾರಿಗೆ ಸಿಗುತ್ತೆ ‘ಕೈ’ ಟಿಕೆಟ್-ಶುರುವಾಯ್ತು ಭಾರೀ ಪೈಪೋಟಿ

    ಬೆಳಗಾವಿ: ಡಿಸೆಂಬರ್ ೫ರಂದು ಗೋಕಾಕ್ ಕ್ಷೇತ್ರ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. 15 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಸುಪ್ರೀಂಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದಾರೆ. ಆದರೆ ಗೋಕಾಕ್, ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಫೈನಲ್ ಆಗಿಲ್ಲ. ಸದ್ಯ ಮೂರು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿದೆ.

    ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ದಿನದಿಂದಲೇ ಲಖನ್ ಜಾರಕಿಹೊಳಿ ಮುಂದಿನ ಅಭ್ಯರ್ಥಿ ಎನ್ನುವ ನಿಟ್ಟಿನಲ್ಲಿ ಬಿಂಬಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಒಂದು ಹಂತದಲ್ಲಿ ಸಿದ್ದರಾಮಯ್ಯ ಕೂಡ ಸಹಮತ ಸೂಚಿಸಿದ್ದರು. ಈಗ ಲಖನ್ ಜಾರಕಿಹೊಳಿಗೆ ಟಿಕೆಟ್ ಕೊಡಬೇಕಾ ಅಥವಾ ಬೇಡ್ವಾ ಎಂಬ ಗೊಂದಲದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಕಳೆದ 2 ತಿಂಗಳಿನಿಂದ ಲಖನ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಪ್ರಚಾರ ಕೂಡ ನಡೆಸಿ ಮತದಾರರನ್ನ ಸೆಳೆಯುವ ಕೆಲಸ ಮಾಡಿದ್ದಾರೆ. ಒಂದು ವಾರದ ಹಿಂದೆ ಸಿದ್ದರಾಮಯ್ಯ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ರಾಮದುರ್ಗದ ಅಶೋಕ ಪಟ್ಟಣ ಮತ್ತು ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ ಫಿರೋಜ್ ಸೇಠ್ ಇಬ್ಬರು ನಾಯಕರು ಲಖನ್ ಜಾರಕಿಹೊಳಿ ಟಿಕೆಟ್ ನೀಡದಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

    ಒಂದು ವೇಳೆ ಟಿಕೆಟ್ ನೀಡಿದರೆ ಮುಂದಿನ ದಿನಗಳಲ್ಲಿ ಜಾರಕಿಹೊಳಿ ಸಹೋದರರು ಒಂದಾಗಿ ರಮೇಶ್ ಜಾರಕಿಹೊಳಿಯನ್ನ ಗೆಲ್ಲಿಸುತ್ತಾರೆ. ಈ ರೀತಿ ಹಲವು ಬಾರಿ ಜಿಲ್ಲೆಯಲ್ಲಿ ನಡೆದಿದೆ ಎಂದು ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಟ್ಟಿದ್ದಾರಂತೆ. ಇಬ್ಬರು ಶಾಸಕರು ಟಿಕೆಟ್ ತಪ್ಪಿಸುವ ಕುರಿತು ಖುದ್ದು ಸತೀಶ್ ಜಾರಕಿಹೊಳಿ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೇ ಹೆಸರು ಹೇಳದೇ ಇಬ್ಬರ ವಿರುದ್ಧ ಕಿಡಿಕಾರಿದ್ದಾರೆ.

    ಈ ಕುರಿತು ಇಬ್ಬರು ಮಾಜಿ ಶಾಸಕರನ್ನ ಕೇಳಿದ್ರೆ ಈ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಸದ್ಯ ಇದರಿಂದ ಸತೀಶ್ ಮತ್ತು ಲಖನ್‌ಗೆ ಒಂದು ಹಂತದಲ್ಲಿ ಶಾಕ್ ಆಗಿದೆ. ಇತ್ತ ಗೋಕಾಕ್‌ನ ಎಲ್ಲಾ ಚುನಾಯಿತ ಪ್ರತಿನಿಧಿಗಳು ಕೈಕೊಟ್ಟಿದ್ದು, ಇದರಿಂದ ಗೋಕಾಕ್‌ನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.

    ಗೋಕಾಕ್‌ನಲ್ಲಿ ನಡೆಯಲಿರುವ ಬೈ ಎಲೆಕ್ಷನ್‌ನಲ್ಲಿ ಲಖನ್ ಜಾರಕಿಹೊಳಿಗೆ ಟಿಕೆಟ್ ನೀಡಬಾರದು ಅಂತಾ ಮಾಜಿ ಶಾಸಕರು ಲಾಬಿ ನಡೆಸಿದ್ದಾರೆ. ಮತ್ತೊಂದು ಕಡೆ ಲಖನ್ ಕಣಕ್ಕಿಳಿದರೇ ಸೋಲಿಸಲೇಬೇಕೆಂದುಕೊಂಡು ರಮೇಶ್ ಜಾರಕಿಹೊಳಿ ಮಾಸ್ಟರ್ ಪ್ಲಾನ್ ಮಾಡಿಕೊಂಡು ಗೋಕಾಕ್‌ನ ಚುನಾಯಿತ ಸ್ಥಳೀಯ ಸದಸ್ಯರನ್ನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಎರಡೆರಡು ಶಾಕ್‌ಗೆ ಒಳಗಾಗಿರುವ ಸಹೋದರರು ಕೈ ಟಿಕೆಟ್ ಹೇಗೆ ಗಿಟ್ಟಿಸಿಕೊಳ್ಳುತ್ತಾರೆ ಎಂಬುವುದನ್ನ ಕಾದುನೋಡಬೇಕಿದೆ.

  • ಪ್ರಾಣ ಹೋದ್ರೂ ಪರವಾಗಿಲ್ಲ, ಮೆಡಿಕಲ್ ಕಾಲೇಜು ಬಿಟ್ಟು ಕೊಡಲ್ಲ: ಡಿಕೆಶಿ ಗುಡುಗು

    ಪ್ರಾಣ ಹೋದ್ರೂ ಪರವಾಗಿಲ್ಲ, ಮೆಡಿಕಲ್ ಕಾಲೇಜು ಬಿಟ್ಟು ಕೊಡಲ್ಲ: ಡಿಕೆಶಿ ಗುಡುಗು

    -ಯಡಿಯೂರಪ್ಪ ಧೋರಣೆ ಸರಿ ಇಲ್ಲ

    ಬೆಂಗಳೂರು: ನನ್ನ ಪ್ರಾಣ ಹೋದರು ಮೆಡಿಕಲ್ ಕಾಲೇಜು ಬಿಟ್ಟು ಕೊಡಲ್ಲ. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆಗಬೇಕೆಂದು ನಮ್ಮ ಸರ್ಕಾರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದೀಗ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡುತ್ತಿರುವ ಸಿಎಂ ಯಡಿಯೂರಪ್ಪ ಧೋರಣೆ ಸರಿ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಗುಡುಗಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಕಾಲೇಜು ಮಾಡೋದಕ್ಕೆ ನನ್ನ ವಿರೋಧವಿಲ್ಲ. ಆದರೆ ಕನಕಪುರ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡೋದು ತಪ್ಪು. ಕನಕಪುರ ಕಾಲೇಜಿಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿದ್ದಾರೆ. ಯಡಿಯೂರಪ್ಪನವರು ಸಹ ಬಜೆಟ್ ನಲ್ಲಿ ಪ್ರಶ್ನೆ ಮಾಡದೇ ಕನಕಪುರ ಮೆಡಿಕಲ್ ಕಾಲೇಜಿಗೆ ಒಪ್ಪಿಗೆ ಸೂಚಿಸಿದ್ದಾರೆ. ಅವಶ್ಯವಿದ್ದರೆ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ.

    ಕನಕಪುರ ಕಾಲೇಜು ಸ್ಥಾಪನೆ ನನ್ನ ಡ್ರೀಮ್ ಪ್ರೊಜೆಕ್ಟ್. ಅಧಿಕಾರಕ್ಕೆ ಬಂದಾಗ ಎಲ್ಲವನ್ನು ಯಡಿಯೂರಪ್ಪ ಒಪ್ಪಿಕೊಂಡು ಕಾಮಗಾರಿಗೆಗೆ ಗುತ್ತಿಗೆ ನೀಡಲಾಗಿದೆ. ಈ ಹಿಂದೆ ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ್ದವರು ಇದೀಗ ಕಾಲೇಜು ಅನುಮತಿಯನ್ನು ರದ್ದುಗೊಳಿಸಿದ್ದಾರೆ. ಕಾಲೇಜು ಸ್ಥಳಾಂತರ ವಿಚಾರವನ್ನು ಸಿಎಂ ಅವರಿಗೆ ಪತ್ರ ಬರೆದು ತಿಳಿಸುತ್ತೇನೆ. ಕನಕಕಪುರ ಜನಕ್ಕೆ ಮೆಡಿಕಲ್ ಕಾಲೇಜು ಭಾವನಾತ್ಮಕ ವಿಷಯವಾಗಿದೆ. ಈ ಎಲ್ಲ ಸೂಕ್ಷ್ಮಗಳನ್ನು ಪತ್ರದ ಮೂಲಕ ತಿಳಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

    ಅನಾರೋಗ್ಯದಿಂದ ಸ್ವಲ್ಪ ಸುಸ್ತಾಗಿದೆ. ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಕನಕಪುರ ಕಾಲೇಜು ಸಂಬಂಧ ಸ್ಥಳೀಯ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತೇನೆ. ಕನಕಪುರ ಕಾಲೇಜಿಗಾಗಿ ಹೋರಾಟ ಮಾಡಲು ಸಹ ಸಿದ್ಧನಿದ್ದೇನೆ. ನಾವು ಅಧಿಕಾರದಲ್ಲಿದ್ದಾಗ ಯಡಿಯೂರಪ್ಪರು ನಮ್ಮ ಬಳಿ ಬಂದಾಗ ಗೌರವಯುತವಾಗಿ ಅನುದಾನ ಬಿಡುಗಡೆ ಮಾಡಿದ್ದೇವೆ. ಅಭಿವೃದ್ಧಿ ವಿಷಯದಲ್ಲಿ ನಾವು ಎಂದೂ ದ್ವೇಷ ರಾಜಕಾರಣ ಮಾಡಿಲ್ಲ ಎಂದು ಸಿಎಂಗೆ ಪರೋಕ್ಷವಾಗಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.

  • ಹೊಸಕೋಟೆಯಲ್ಲಿ ಎಂಟಿಬಿ, ಬಚ್ಚೇಗೌಡ ಕಾಳಗ

    ಹೊಸಕೋಟೆಯಲ್ಲಿ ಎಂಟಿಬಿ, ಬಚ್ಚೇಗೌಡ ಕಾಳಗ

    ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾಳಗ ದಿನೇ ದಿನೇ ರಂಗೇರುತ್ತಿದೆ. ಸಂಸದ ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡರಿಗೆ ಬಿಜೆಪಿ ಟಿಕೆಟ್ ಸಿಗಲ್ಲ ಅನ್ನೋದು ಬಹುತೇಕ ಖಚಿತ ಆಗಿದೆ. ಯಾಕಂದ್ರೆ ಬಿಜೆಪಿ ಟಿಕೆಟ್ ಅನರ್ಹರಿಗೆ ಎಂದು ಖುದ್ದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ರೆಬಲ್ ಆಗುವ ಮುನ್ಸೂಚನೆ ನೀಡಿದ್ದಾರೆ.

    ಹೊಸಕೋಟೆಯ ಗಾಂಧಿ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಬಚ್ಚೇಗೌಡ, ಉಪಚುನಾವಣೆ ವಿಚಾರವಾಗಿ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು. ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ರು ಚುನಾವಣೆ ಘೋಷಣೆ ಮಾಡಿದ್ದು ಯಾಕೆ? ಮತ್ತೆ ಅನರ್ಹತೆ ಪ್ರಕರಣ ಕೋರ್ಟ್ ಮುಂದೆ ಹೋಗ್ತಿದ್ದಂತೆ ಚುನಾವಣೆ ಮುಂದೂಡಿದ್ದು ಯಾಕೆ? ಎಂದು ಚುನಾವಣಾ ಆಯೋಗಕ್ಕೆ ಬಚ್ಚೇಗೌಡರು ಪ್ರಶ್ನೆ ಮಾಡಿದರು.

    ಇದೇ ವೇಳೆ ತಮ್ಮ ಬಹುಕಾಲದ ವೈರಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಆಕ್ರೋಶ ವ್ಯಕಪಡಿಸೋದನ್ನು ಬಚ್ಚೇಗೌಡರು ಮರೆಯಲಿಲ್ಲ. ಮುಂದಿನ ಮೂರೂವರೆ ವರ್ಷ ನಾನೇ ಮಂತ್ರಿ, ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ತರ್ತೀನಿ ಅನ್ನೋ ಎಂಟಿಬಿ ಮಾತಿಗೆ, ಎನ್ ಅವರಪ್ಪನ ಮನೆಯಿಂದ ತಂದು ಕೊಡ್ತಾನ ದುಡ್ಡು ಅಂತ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ನಾವು ಕಟ್ಟೋ ತೆರಿಗೆ ಹಣ ನಮಗೆ ವಾಪಸ್ ಕೊಡ್ತಾರೆ. ಏನು ಅವನ ಮನೆ ಹಣಾನಾ ಕೇಳೋವಷ್ಟು ಕೊಡೋಕೆ ಎಂದು ತಿರುಗೇಟು ಕೊಟ್ಟರು.

    ನನ್ನ ಪುತ್ರ ಶರತ್ ಬಚ್ಚೇಗೌಡ ಹೊಸಕೋಟೆ ತಾಲೂಕಿನ ಜನತೆಯ ಮತದಾರರ ತೀರ್ಮಾನದಂತೆ ನಡೆದುಕೊಳ್ಳುತ್ತಾನೆ. ಚುನಾವಣೆ ದೂರವಿದ್ದು, ಮುಂದೆ ಏನಾಗುತ್ತೋ ನೋಡೋಣ ಎಂದು ಮಗನ ಸ್ಪರ್ಧೆಯನ್ನು ಬಚ್ಚೇಗೌಡ್ರು ಪರೋಕ್ಷವಾಗಿ ಖಚಿತ ಪಡಿಸಿದರು.

  • ಬೈಎಲೆಕ್ಷನ್ ಡೇಟ್ ಮತ್ತೆ ಫಿಕ್ಸ್ – ಆಯೋಗದ ನಡೆಗೆ ಕಾಂಗ್ರೆಸ್, ಜೆಡಿಎಸ್ ಗರಂ

    ಬೈಎಲೆಕ್ಷನ್ ಡೇಟ್ ಮತ್ತೆ ಫಿಕ್ಸ್ – ಆಯೋಗದ ನಡೆಗೆ ಕಾಂಗ್ರೆಸ್, ಜೆಡಿಎಸ್ ಗರಂ

    ಬೆಂಗಳೂರು: ರಾಜಕೀಯ ಹೈಡ್ರಾಮಕ್ಕೆ ಕರ್ನಾಟಕ ಮತ್ತೆ ರೆಡಿಯಾಗಿದೆ. ಕರ್ನಾಟಕ ಬೈ ಎಲೆಕ್ಷನ್‍ಗೆ ಹೊಸ ಡೇಟ್ ಫಿಕ್ಸ್ ಆಗಿದೆ. ದೋಸ್ತಿ ಸರ್ಕಾರ ಪತನಕ್ಕೆ ಕಾರಣವಾಗಿ ಅನರ್ಹರಾಗಿ ಅತಂತ್ರರಾಗಿರೋ 15 ಕ್ಷೇತ್ರಗಳಿಗೆ ಎಲೆಕ್ಷನ್ ಮುಂದೂಡಿಕೆಯಾಗಿತ್ತು. 24 ಗಂಟೆ ಕಳೆಯುವ ಮುನ್ನವೇ ಹೊಸದೊಂದು ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

    ಉಪ ಚುನಾವಣೆಗೆ ದಿನಾಂಕ ನಿಗದಿ ಮಾಡಿದ ಚುನಾವಣೆ ಆಯೋಗ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸಾಂವಿಧಾನಿಕ ಸಂಸ್ಥೆಯೊಂದು ಈ ಮಟ್ಟದ ಗೊಂದಲದಲ್ಲಿ ಕಾರ್ಯ ನಿರ್ವಹಿಸುವುದರ ಹಿಂದಿನ ಮರ್ಮವೇನು? ಇಂತಹ ಗೊಂದಲದ ಚುನಾವಣೆ ಎಂದೂ ಘೋಷಣೆಯಾಗಿರಲಿಲ್ಲ ಅಂತ ಮಾಜಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇತ್ತ ಸಿದ್ದರಾಮಯ್ಯ ಕೂಡ ಆಕ್ರೋಶ ಹೊರಹಾಕಿದ್ದು, ಕೇಂದ್ರ ಚುನಾವಣಾ ಆಯೋಗದ ಉದ್ದೇಶವೇ ಅರ್ಥವಾಗುತ್ತಿಲ್ಲ. ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದಿದ್ದಾರೆ. ದಿಢೀರ್ ಅಂತ ಚುನಾವಣೆ ಘೋಷಣೆ ಮಾಡಿರೋದು ಯಾಕೆ, ಚುನಾವಣಾ ಆಯೋಗ ಅಣತಿಯಂತೆ ಕಾರ್ಯನಿರ್ವಹಿಸ್ತಿದೆ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

    ಬೈ ಎಲೆಕ್ಷನ್ ಹೊಸ ಮುಹೂರ್ತ
    * ನವೆಂಬರ್ 11 – ಅಧಿಸೂಚನೆ ಪ್ರಕಟ
    * ನವೆಂಬರ್ 18 – ನಾಮಪತ್ರ ಸಲ್ಲಿಕೆಗೆ ಕೊನೆ ದಿನ
    * ನವೆಂಬರ್ 19 – ನಾಮಪತ್ರಗಳ ಪರಿಶೀಲನೆ
    * ನವೆಂಬರ್ 21 – ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
    * ಡಿಸೆಂಬರ್ 5 – ಮತದಾನ
    * ಡಿಸೆಂಬರ್ 11 – ಚುನಾವಣಾ ಪ್ರಕ್ರಿಯೆ ಅಂತ್ಯ
    ಚುನಾವಣೆ ಆಯೋಗ ಫಲಿತಾಂಶ ದಿನವನ್ನು ಪ್ರಕಟಿಸಿಲ್ಲ.

    ಸಿದ್ದರಾಮಯ್ಯ ಟ್ವೀಟ್: ಕೇಂದ್ರ ಚುನಾವಣಾ ಆಯೋಗದ ಉದ್ದೇಶವೇ ಅರ್ಥವಾಗುತ್ತಿಲ್ಲ. ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ಮೊದಲು ತರಾತುರಿಯಲ್ಲಿ ಚುನಾವಣೆ ಮುಂದೂಡಿ, ಮತ್ತೆ ದಿನಾಂಕ ಘೋಷಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ, ಆದರೆ ಆಯೋಗದ ನಡೆ ಮಾತ್ರ ಸಹಜವಾಗಿಯೇ ಅನುಮಾನ ಮೂಡುವಂತಿದೆ.

    ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್: ರಾಜ್ಯದ 15 ಕ್ಷೇತ್ರಗಳಿಗೆ ಮತ್ತೆ ಚುನಾವಣೆ ಘೋಷಣೆಯಾಗಿದೆ. ಆದರೆ ಚುನಾವಣಾ ಪ್ರಕ್ರಿಯೆ ಬಗ್ಗೆ ಅಯೋಗಕ್ಕೇ ಸ್ಪಷ್ಟತೆ ಇಲ್ಲ. ನೀತಿ ಸಂಹಿತೆ, ಫಲಿತಾಂಶಗಳ ಬಗ್ಗೆ ಗೊಂದಲಗಳಿವೆ. ನೀತಿ ಸಂಹಿತೆ ಇಲ್ಲದೇ ನ್ಯಾಯಬದ್ಧ ಚುನಾವಣೆ ನಡೆಯುವುದು ಹೇಗೆ? ಫಲಿತಾಂಶದ ಉಲ್ಲೇಖವೇ ಇಲ್ಲದ ಮೇಲೆ ಚುನಾವಣೆ ಏಕೆ? ಸಾಂವಿಧಾನಿಕ ಸಂಸ್ಥೆಯೊಂದು ಈ ಮಟ್ಟದ ಗೊಂದಲದಲ್ಲಿ ಕಾರ್ಯನಿರ್ವಹಿಸುವುದರ ಹಿಂದಿನ ಅರ್ಥವೇನು?ಇಂಥ ಗೊಂದಲದ ಚುನಾವಣೆ ಎಂದೂ ಘೋಷಣೆಯಾಗಿರಲಿಲ್ಲ. ಒಂದು ಆಪರೇಷನ್ ಕಮಲ, ಜನಮನ್ನಣೆಯನ್ನು ಮಾರಿಕೊಳ್ಳುವ ಜನಪ್ರತಿನಿಧಿಗಳ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟೆಲ್ಲ ಅನರ್ಥಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ.