Tag: ಕರ್ನಾಟಕ ಉಪ ಚುನಾವಣೆ 2019

  • ‘ಸಾಹುಕಾರ’ನ ಕೋಟೆಗಿಂದು ‘ಕನಕಪುರ ಬಂಡೆ’ ಎಂಟ್ರಿ

    ‘ಸಾಹುಕಾರ’ನ ಕೋಟೆಗಿಂದು ‘ಕನಕಪುರ ಬಂಡೆ’ ಎಂಟ್ರಿ

    ಬೆಳಗಾವಿ: ಉಪಚುನಾವಣೆಯ ಕಣದಲ್ಲಿ ಗೋಕಾಕ್ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ. ಒಂದೇ ಮನೆತನದ ಇಬ್ಬರು ಸಹೋದರರ ಎರಡು ಪಕ್ಷಗಳ ಸ್ಪರ್ಧೆಯಿಂದ ಈ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಈ ಅಖಾಡಕ್ಕೆ ಇಂದು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಎಂಟ್ರಿ ಕೊಡುತ್ತಿದ್ದಾರೆ. ಒಂದು ಕಾಲದಲ್ಲಿ ಗೆಳೆಯರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಡಿಕೆಶಿ ಮಾತಿನ ವರಸೆ ಕೇಳಲು ಕ್ಷೇತ್ರದ ಜನತೆ ಕಾತುರರಾಗಿದ್ದಾರೆ.

    ಕುಂದಾನಗರಿ ಬೆಳಗಾವಿ ಗಡಿ ವಿಷಯಕ್ಕೆ ಸುದ್ದಿಯಲ್ಲಿದ್ದರೆ, ಗೋಕಾಕ್ ಕ್ಷೇತ್ರ ರಮೇಶ್ ಜಾರಕಿಹೂಳಿ ರಾಜೀನಾಮೆಯಿಂದ ಉಪಚುನಾವಣೆ ಕಣದ ಭಾರೀ ಹೈವೋಲ್ಟೇಜ್ ಕದನ ಕಣವಾಗಿದೆ. ಒಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದ ಡಿ.ಕೆ ಶಿವಕುಮಾರ್ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಈಗ ವೈರಿಗಳಾಗಿದ್ದಾರೆ. ಕೈ ಪಕ್ಷದ ಅಭ್ಯರ್ಥಿ ಲಖನ್ ಪರ ಪ್ರಚಾರಕ್ಕೆ ಇಂದು ಡಿಕೆಶಿ ಆಗಮಿಸ್ತಿದ್ದು, ತಮ್ಮ ಬತ್ತಳಿಕೆಯಲ್ಲಿರುವ ಯಾವ ಬಾಣಗಳನ್ನು ರಮೇಶ್ ವಿರುದ್ಧ ಬಿಡುತ್ತಾರೋ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

    ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯಗೆ ನನ್ನ ವಿರುದ್ಧ ವೈಯಕ್ತಿಕ ಟೀಕೆ ನಿಲ್ಲಿಸದಿದ್ದರೆ ಎಲ್ಲವೂ ಬಹಿರಂಗ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ರಮೇಶ್, ಮೈಸೂರು ಭಾಗದವರ ಆಟ ಇಲ್ಲಿ ನಡೆಯುವುದಿಲ್ಲ. ಅಲ್ಲಿಯ ರಾಜಕೀಯವೇ ಬೇರೆ ಇಲ್ಲಿಯ ರಾಜಕೀಯ ಬೇರೆಯೆಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್‍ಗೂ ಎಚ್ಚರಿಕೆ ನೀಡಿದರು. ಈಗ ಡಿಕೆಶಿ ಎಂಟ್ರಿಯಾಗುತ್ತಿರೋದ್ರಿಂದ ಸಾಹುಕಾರ ಮತ್ತಷ್ಟು ಅಲರ್ಟ್ ಆಗುವ ಸಾಧ್ಯತೆ ಇದೆ. ಡಿಕೆಶಿಗೆ ಸರಿಸಮನಾಗಿ ಪ್ರಚಾರಕ್ಕೆ ತಯಾರಿ ನಡೆಸಿದ್ದಾರೆ.

  • ಹಳ್ಳಿಹಕ್ಕಿಗೆ ಹೆಚ್ಚಾಯ್ತು ಸಿದ್ದು ಮೇಲೆ ಪ್ರೀತಿ – ದೇವೇಗೌಡ್ರನ್ನು ದೇವರೆಂದ ವಿಶ್ವನಾಥ್

    ಹಳ್ಳಿಹಕ್ಕಿಗೆ ಹೆಚ್ಚಾಯ್ತು ಸಿದ್ದು ಮೇಲೆ ಪ್ರೀತಿ – ದೇವೇಗೌಡ್ರನ್ನು ದೇವರೆಂದ ವಿಶ್ವನಾಥ್

    ಮೈಸೂರು: ಹಳ್ಳಿಹಕ್ಕಿಗೆ ಇತ್ತೀಚೆಗೆ ಯಾಕೋ ಏನೋ ಸಿದ್ದು ಮೇಲೆ ಪ್ರೀತಿ ಜಾಸ್ತಿ ಆದಂಗೆ ಕಾಣಿಸುತ್ತಿದೆ. ಸಿದ್ದರಾಮಯ್ಯರನ್ನು ಕಂಡ್ರೆ ಉರಿದು ಬೀಳ್ತಿದ್ದ ವಿಶ್ವನಾಥ್ ಈಗ ಸಿದ್ದು ನಾನು ಅಣ್ತಮ್ಮ ಅಂತಿದ್ದಾರೆ. ಹಳ್ಳಿಹಕ್ಕಿಯ ಈ ನಡೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

    ಒಂದ್ಕಡೆ ಹುಣಸೂರು ಚುನಾವಣಾ ಕಣ ರಂಗೇರ್ತಿದೆ. ಮತ್ತೊಂದು ಕಡೆ ಹಳ್ಳಿಹಕ್ಕಿ ಪ್ರಚಾರ ಕಣದಲ್ಲಿ ಹೊಸ ಹೊಸ ರಾಗ ತೆಗೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಯಾವಾಗ ಯಾರನ್ನ ಟೀಕಿಸ್ತಾರೋ, ಯಾರನ್ನು ಹೊಗಳ್ತಾರೋ ಅನ್ನೋದು ಗೊತ್ತಾಗಲ್ಲ. ಯಾಕಂದ್ರೆ ಅಷ್ಟರ ಮಟ್ಟಿಗೆ ವಿಶ್ವನಾಥ್ ವರ್ತನೆ ಬದಲಾಗ್ತಿದೆ. ವಿಶ್ವನಾಥ್ ಬೈ ಎಲೆಕ್ಷನ್ ಅಖಾಡದಲ್ಲಿ ಅಚ್ಚರಿಯ ಸ್ಟೇಟ್‍ಮೆಂಟ್‍ಗಳನ್ನು ಕೊಡುತ್ತಿದ್ದು, ರಾಜಕೀಯವಲಯದಲ್ಲಿ ಕುತೂಹಲ ಕೆರಳಿಸಿದೆ.

    ಸಿದ್ದರಾಮಯ್ಯರನ್ನು ಯಾವಾಗ್ಲೂ ಟೀಕಿಸುತ್ತಿದ್ದ ವಿಶ್ವನಾಥ್ ದಿಢೀರನೇ ಪ್ಲೇಟ್ ಚೇಂಜ್ ಮಾಡಿದ್ದಾರೆ. ಸಿದ್ದರಾಮಯ್ಯರನ್ನು ನಾನು ಇಷ್ಟಪಡ್ತಿನಿ. ಯಾಕಂದ್ರೆ ಅವರೊಬ್ಬ ಒಬ್ಬ ಉತ್ತಮ ಆಡಳಿತಗಾರ. ಭ್ರಷ್ಟಾಚಾರಿ ಅಲ್ಲ. ಅಂತ ಹೊಸ ಹೊಸ ಹೇಳಿಕೆಗಳನ್ನು  ಕೊಡುತ್ತಿದ್ದಾರೆ.

    ವಿಶ್ವನಾಥ್ ಈ ಹೊಸ ವರಸೆಗೆ ಕುರುಬ ಸಮುದಾಯದ ಮತಗಳು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಹುಣಸೂರು ಕ್ಷೇತ್ರದಲ್ಲಿ 40 ಸಾವಿರ ಕುರುಬ ಸಮುದಾಯದ ಮತಗಳಿವೆ. ಸಿದ್ದರಾಮಯ್ಯ ಪರವಾಗಿ ಈ ಮತಗಳು ಹೆಚ್ಚು ಕಾಂಗ್ರೆಸ್ಸಿನತ್ತ ಹೋಗುವ ಸಾಧ್ಯತೆ ಇದೆ. ಹಾಗಾಗಿ ಇದನ್ನು ತಡೆಯುವ ಸಲುವಾಗಿ ವಿಶ್ವನಾಥ್, ಸಿದ್ದರಾಮಯ್ಯರನ್ನು ಗುಣಗಾನ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಇಷ್ಟು ಮಾತ್ರವಲ್ಲ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ್ರಿಗೂ ವಿಶ್ವನಾಥ್ ದೇವರ ಸ್ಥಾನ ನೀಡಿದ್ದಾರೆ. ದೇವೇಗೌಡ್ರ ಫೋಟೋವನ್ನು ದೇವರ ಮನೆಯಲ್ಲಿ ಇಡ್ತೀನಿ. ದೇವೇಗೌಡ್ರು ನನ್ನ ಹೃದಯದಲ್ಲಿದ್ದಾರೆ ಎನ್ನುತ್ತಿದ್ದಾರೆ. ಇಲ್ಲಿ ಮತಗಳಿಕೆಯ ಲೆಕ್ಕಕ್ಕಿಂತ ಆ ಮತಗಳು ಪಕ್ಷದಲ್ಲೇ ಉಳಿಸುವ ತಂತ್ರ ಎದ್ದು ಕಾಣ್ತಿದೆ.

    ಹುಣಸೂರು ಮತಕ್ಷೇತ್ರದಲ್ಲಿ 45 ಸಾವಿರ ಒಕ್ಕಲಿಗ ಮತಗಳಿದ್ದರೂ, ಆ ಮತಗಳ ಮೇಲೆ ವಿಶ್ವನಾಥ್‍ಗೆ ವಿಶ್ವಾಸವಿದ್ದಂತೆ ಕಾಣ್ತಿಲ್ಲ. ಹಾಗಾಗಿ ತಮಗೆ ಆ ವೋಟ್ ಬೀಳದಿದ್ರೂ ಪರವಾಗಿಲ್ಲ, ಕಾಂಗ್ರೆಸ್ ಪಾಲಾಗಬಾರದು. ಆ ವೋಟುಗಳು ಜೆಡಿಎಸ್ ಬುಟ್ಟಿಯನ್ನಷ್ಟೆ ಸೇರಬೇಕು ಎಂಬುದು ಇವರ ಲೆಕ್ಕ. ಆದರೆ ಹಳ್ಳಿ ಹಕ್ಕಿಯ ಈ ಲೆಕ್ಕಾಚಾರದ ಗುರಿ ಸರಿಯಾಗಿ ತಲುಪುತ್ತಾ, ಇಲ್ಲ ಮತದಾರ ಇನ್ಯಾವ ಸ್ಟ್ರಾಟಜಿಯಲ್ಲಿ ಇದ್ದಾನೋ ಕಾದು ನೋಡಬೇಕಿದೆ.

  • ಉಪಚುನಾವಣೆಯ ನಂತ್ರ ರಾಜ್ಯ ರಾಜಕೀಯ ಬದಲಾಗುತ್ತೆ: ಸಿದ್ದರಾಮಯ್ಯ

    ಉಪಚುನಾವಣೆಯ ನಂತ್ರ ರಾಜ್ಯ ರಾಜಕೀಯ ಬದಲಾಗುತ್ತೆ: ಸಿದ್ದರಾಮಯ್ಯ

    ಹುಬ್ಬಳ್ಳಿ: ಉಪಚುನಾವಣೆ ನಂತರ ರಾಜ್ಯ ರಾಜಕೀಯ ಬದಲಾವಣೆ ಆಗುತ್ತದೆ. ಬಿಜೆಪಿ 8 ಸ್ಥಾನಗಳಲ್ಲಿ ಗೆಲ್ಲದಿದ್ದರೆ ರಾಜೀನಾಮೆ ಕೊಡಲೇಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ 5 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇನೆ. ಉಪಚುನಾವಣೆ ನಂತರ ರಾಜ್ಯ ರಾಜಕೀಯ ಬದಲಾವಣೆ ಆಗುತ್ತದೆ ಎಂದರು.

    ಬಿಜೆಪಿ 8 ಸ್ಥಾನಗಳಲ್ಲಿ ಗೆಲ್ಲದಿದ್ದರೆ ರಾಜೀನಾಮೆ ಕೊಡಲೇಬೇಕು. 17 ಜನರಿಗೆ ರಾಜೀನಾಮೆ ಕೊಡಿಸಿ ಕುದುರೆ ವ್ಯಾಪಾರ ಮಾಡಿದ್ದಾರೆ ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಡಲ್ಲ ನನಗೆ ನಂಬಿಕೆ ಇದೆ. ಅವರು ಬಿಜೆಪಿ ಬೆಂಬಲಿಸುವುದಿಲ್ಲ. ಬಿಎಸ್‍ವೈ ಡಿಸ್ಟರ್ಬ್ ಆಗಿದ್ದಾರೆ ಅದಕ್ಕೆ ಏನೇನೋ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ರಾತ್ರೋ ರಾತ್ರಿ ರಾಷ್ಟ್ರಪತಿ ಆಡಳಿತ ಹಿಂಪಡೆದಿದ್ದು, ಶಿವಸೇನೆ ಬಿಜೆಪಿಯಿಂದ ಈಗಾಗಲೇ ಹೊರಬಂದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನವಾದ್ರೆ ನಾನು ಸಿಎಂ ಆಗುವುದಾಗಿ ಎಲ್ಲಿಯೂ ಹೇಳಿಲ್ಲ. ಬಿಜೆಪಿ ಸರ್ಕಾರ ಪತನವಾದ್ರೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರೋ ಸಾಧ್ಯತೆಯಿದೆ. ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ದೊರೆಯಲಿದೆ. ಮುಂದೆ ನಾನು ಸಿಎಂ ಆಗೋ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.

  • ಬೆಳಗಾವಿ ರಾಜಕೀಯ ಬದಲಿಸ್ತೀನಿ- ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ ರಾಜಕೀಯ ಬದಲಿಸ್ತೀನಿ- ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ನಾನು ಬೆಳಗಾವಿ ರಾಜಕಾರಣ ಬದಲು ಮಾಡಬಲ್ಲೆ. ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ ಎಂದು ಅನರ್ಹರ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗುಡುಗಿದ್ದಾರೆ.

    ಶನಿವಾರ ರಾತ್ರಿ ಅಥಣಿ ಕ್ಷೇತ್ರದ ಕಕಮರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹೇಶ ಕುಮಟಳ್ಳಿ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅನ್ನೋವಂತಹ ಮಳ್ಳ. 2013 ಮತ್ತು 2018ರ ಚುನಾವಣೆಗೆ ಟಿಕೆಟ್ ಕೊಡಿಸಲು ನಾನೂ ಸಹಾಯ ಮಾಡಿದ್ದೆ. ಒಳ್ಳೆಯವರು, ಸುಸಂಸ್ಕೃತರು ಇದ್ದಾರೆ ಅಂದುಕೊಂಡಿದ್ದೆವು. ಆದರೆ ಅವರು ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಪಕ್ಷವೆನ್ನುವ ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ. ಇವತ್ತು ಹಾಲು ಕುಡಿದ ಮಕ್ಕಳು ಬದುಕುತ್ತಿಲ್ಲ ಇನ್ನು ಇವರು ವಿಷ ಕುಡಿದವರು ಇವರು ಬದುಕುತ್ತಾರಾ? ಜನ್ಮಕೊಟ್ಟ ತಾಯಿ ಒಬ್ಬರಿದ್ರೆ ಜಗತ್ತನ್ನು ತೋರಿಸಿದ ತಾಯಿ ನಮ್ಮ ಪಕ್ಷ. ಅಂತಹ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಅನುದಾನ ಕೊಡದಿದ್ದಕ್ಕೆ ಇವರೆಲ್ಲ ಪಕ್ಷ ಬಿಟ್ಟು ಹೋಗಿದ್ದಾರಂತೆ. ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕೊಟ್ಟಷ್ಟು ಅನುದಾನ ನಮಗೆ ಕೊಡಲಿಲ್ಲ ಅಂತಾರೆ. ಅನುದಾನ ಕೇಳೋಕೆ ಆಗದೇ ಇವರೇನು ಬಾಯಲ್ಲಿ ಕಡಬು ಇಟ್ಟುಕೊಂಡಿದ್ದರಾ? ಮಂತ್ರಿಗಳ ಕಾಲು, ಕೈ ಹಿಡಿದು ಕೇಳಿ ಅನುದಾನ ಪಡೆಯಬಹುದಿತ್ತು ಎಂದು ವಾಗ್ದಾಳಿ ನಡೆಸಿದರು.

    ಹೆಣ್ಣು ಮಗಳಾಗಿ 12 ನೂರು ಕೋಟಿ ಅನುದಾನ ತಂದಿದ್ದೇನೆ ಅಂದ್ರೆ ನೀವು ಗಂಡಸರಾಗಿ ತರೋಕೆ ಆಗಲಿಲ್ವಾ? ಇನ್ನೊಬ್ಬರು ಊಟ ಮಾಡಿದ್ದಾರೆ ಅಂತ ನಾವು ಉಪವಾಸ ಇರೋದು ತಪ್ಪು. ಇನ್ನೊಬ್ಬರ ದುಡಿದು ಊಟ ಮಾಡಿದಾರೆ ಅಂದ್ರೆ ನಾವು ದುಡಿದು ಊಟ ಮಾಡಬೇಕೆನ್ನುವುದು ಗಂಡಸ್ಥನ. ಅದನ್ನು ಬಿಟ್ಟು ಮಳ್ಳನಂಗ ಸೋಗು ಹಾಕುವುದು ಕೈ ಮುಗಿಯೋದು ಮಾಡುತ್ತಾರೆ. ಆದರೆ ಇವರದ್ದು ಅತೀ ವಿನಯಂ ಚೋರ್ ಲಕ್ಷಣಂ. ನನ್ನ ಮಾತು ಬಿರುಸು, ಗುಂಡು ಹೊಡೆದಂಗೆ ಇರಬಹುದು. ಆದರೆ ಯಾವತ್ತಿಗೂ ಸತ್ಯಕ್ಕೆ ತಲೆಬಾಗುವೆ. ನಾನು ಅಥಣಿ ಜನರಿಗೆ ಏನೂ ಮಾಡಲು ಆಗದಿದ್ದರೂ ಬೆಳಗಾವಿ ರಾಜಕಾರಣ ಬದಲು ಮಾಡಿ ತೋರಿಸ್ತೀನಿ ಎಂದು ಸವಾಲು ಹಾಕಿದ್ದಾರೆ.

  • ಇವತ್ತೆಲ್ಲಾ ಟೈಮ್ ತಗೊಳಿ, ನಾಳೆ ಬೆಳಗ್ಗೆ ಫೈನಲ್ ಆಗ್ಬೇಕು- ಬಿಎಸ್‍ವೈ ವಾರ್ನಿಂಗ್

    ಇವತ್ತೆಲ್ಲಾ ಟೈಮ್ ತಗೊಳಿ, ನಾಳೆ ಬೆಳಗ್ಗೆ ಫೈನಲ್ ಆಗ್ಬೇಕು- ಬಿಎಸ್‍ವೈ ವಾರ್ನಿಂಗ್

    ಬೆಂಗಳೂರು: ಇಂದು ಇಡೀ ದಿನ ಟೈಮ್ ತೆಗೆದುಕೊಳ್ಳಿ ನಾಳೆ ಬೆಳಗ್ಗೆ ಫೈನಲ್ ಆಗಬೇಕು. ಸೋಮವಾರ ನೀವು ಪ್ರಚಾರಕ್ಕೆ ಇಳಿಯಲೇಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡರಿಗೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ವಾರ್ನ್ ಮಾಡಿದ್ದಾರೆ.

    ಬಚ್ಚೇಗೌಡರ ಜೊತೆ ಕೊನೆಯ ಬಾರಿ ಮಾತುಕತೆ ನಡೆಸಿದ ಯಡಿಯೂರಪ್ಪ, ದಿನಕ್ಕೆ ಎರಡು `ಹೊಸ’ ಕಡೆ ಪ್ರಚಾರ ಮಾಡ್ಲೇಬೇಕು. ಸೋಮವಾರದೊಳಗೆ ಪ್ರಚಾರಕ್ಕೆ ಇಳಿಯಬೇಕು. ಇಲ್ಲದಿದ್ದರೆ ಪಕ್ಷ ವಿಧಿಸೋ ಕ್ರಮವನ್ನು ಎದುರಿಸಿ. ನಿಮ್ಮ ವಿಚಾರವನ್ನ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ದಿನಕ್ಕೆ ಎರಡು ಕಡೆಯಾದ್ರೂ ಚಿಕ್ಕಬಳ್ಳಾಪುರ, ಹೊಸಕೋಟೆಯಲ್ಲಿ ಪ್ರಚಾರ ಮಾಡಿ. ಇನ್ನೆರಡು ದಿನವಾದ್ರೂ ಟೈಮ್ ತೆಗೆದುಕೊಂಡು ಪ್ರಚಾರಕ್ಕೆ ಬನ್ನಿ ಎಂದು ಸಂದೇಶ ರವಾನೆ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಒಟ್ಟಿನಲ್ಲಿ ಬಿಜೆಪಿ, ಸಿಎಂ ಬಿಎಸ್‍ವೈ ವಾರ್ನಿಂಗ್‍ಗೆ ಬಚ್ಚೇಗೌಡರು ಮಣೀತಾರಾ ಅಥವಾ ಡೋಂಟ್ ಕೇರ್ ಎಂದು ಮಗನ ಪರ ನಿಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಮಗನ `ಕುಕ್ಕರ್’ನಲ್ಲಿ ಅಪ್ಪ ವಿಲವಿಲ!

  • ರಾಜು ಕಾಗೆ ವಿರುದ್ಧ ತೊಡೆ ತಟ್ಟಿದ ವಿವೇಕ್ ಶೆಟ್ಟಿ

    ರಾಜು ಕಾಗೆ ವಿರುದ್ಧ ತೊಡೆ ತಟ್ಟಿದ ವಿವೇಕ್ ಶೆಟ್ಟಿ

    – ರಾಜು ಕುಟುಂಬದವ್ರಿಂದ ವಿವೇಕ್ ಮೇಲೆ ನಡೆದಿತ್ತು ಹಲ್ಲೆ

    ಚಿಕ್ಕೋಡಿ(ಬೆಳಗಾವಿ): ಕಾಗವಾಡ ಮತಕ್ಷೇತ್ರದಲ್ಲಿ ಒಂದು ಕಡೆ ಚುನಾವಣಾ ಕಣ ರಂಗೇರುತ್ತಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳ ಸ್ಪರ್ಧೆ ಸಾಲದು ಅಂತ ಈಗ ದ್ವೇಷದ ರಾಜಕಾರಣಕ್ಕೂ ಈ ರಣಕಣ ಸಾಕ್ಷಿಯಾಗಲಿದೆ.

    ಕಾಗವಾಡ ಕ್ಷೇತ್ರದ ಈಗಿನ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಕುಟುಂಬದವರಿಂದ ಹಲ್ಲೆ ನಡೆದು ಎರಡು ವರ್ಷಗಳೇ ಕಳೆದಿವೆ. ಅಂದು ಹಲ್ಲೆಗೊಳಗಾಗಿದ್ದ ಯುವಕ ವಿವೇಕ್ ಶೆಟ್ಟಿ ಈಗ ಉಪಚುನಾವಣೆಯಲ್ಲಿ ರಾಜು ಕಾಗೆ ಎದುರು ಸ್ಪರ್ಧೆಗಿಳಿದಿದ್ದಾರೆ. ಬಹುಜನ ವಂಚಿತ ಅಘಾಡಿ ಪಕ್ಷದಿಂದ ಸ್ಪರ್ಧೆಗಿಳಿದಿರುವ ವಿವೇಕ್ ಶೆಟ್ಟಿ, ರಾಜು ಕಾಗೆ ವಿರುದ್ಧ ತೊಡೆ ತಟ್ಟಿದ್ದಾರೆ.

    ರಾಜು ಕಾಗೆ ಬಿಜೆಪಿ ಶಾಸಕರಾಗಿದ್ದ ಸಂದರ್ಭದಲ್ಲಿ ಕುಟುಂಬ ಸಮೇತ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಹಲ್ಲೆ ಮಾಡಿ ಜೈಲಿಗು ಕೂಡ ಹೋಗಿ ಬಂದಿದ್ದರು. ಇವರಿಂದ ಹಲ್ಲೆಗೊಳಗಾಗಿದ್ದ ಯುವಕ ಈಗ ರಾಜು ಕಾಗೆಯವರನ್ನು ಸೋಲಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಬಹುಜನ ವಂಚಿತ ಅಘಾಡಿ ಪಕ್ಷದಿಂದ ಸ್ಪರ್ಧೆ ಮಾಡಿ ದಲಿತ ಹಾಗೂ ಮುಸ್ಲಿಂ ಮತಗಳು ರಾಜು ಕಾಗೆ ಪಾಲಾಗದಂತೆ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ವಿವೇಕ್ ವಿರುದ್ಧ ರಾಜು ಕಾಗೆ ಕಿಡಿಕಾರಿದ್ದಾರೆ.

    ಒಟ್ಟಿನಲ್ಲಿ ಒಂದು ಕಡೆ ಕಾಂಗ್ರೆಸ್, ಬಿಜೆಪಿ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದೆ. ಮತ್ತೊಂದು ಕಡೆ ಮತ್ತೆ ವಿವೇಕ್ ಶೆಟ್ಟಿ ಹಲ್ಲೆ ಪ್ರಕರಣ ಮೇಲೆ ಬಂದಿದೆ. ಶೆಟ್ಟಿ ಹಾಗೂ ಕಾಗೆ ಕುಟುಂಬದ ದ್ವೇಷದ ರಾಜಕಾರಣ ಮುಂದಿನ ದಿನಗಳಲ್ಲಿ ಯಾವ ಹಂತ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

    https://www.youtube.com/watch?v=i9uLjb_O_5Y

  • ಅಥಣಿ ಬೇಗುದಿ ಇಂದಾದ್ರೂ ಶಮನವಾಗುತ್ತಾ?- ಕುಮಟಳ್ಳಿ ಪರ ಪ್ರಚಾರಕ್ಕಿಳಿದ ಬಿಎಸ್‍ವೈ

    ಅಥಣಿ ಬೇಗುದಿ ಇಂದಾದ್ರೂ ಶಮನವಾಗುತ್ತಾ?- ಕುಮಟಳ್ಳಿ ಪರ ಪ್ರಚಾರಕ್ಕಿಳಿದ ಬಿಎಸ್‍ವೈ

    ವಿಜಯಪುರ: ಅಥಣಿ ರಣಕಣದಲ್ಲಿ ಮೇಲ್ನೋಟಕ್ಕೆ ಬಂಡಾಯದ ಬೇಗುದಿ ಮುಗಿದಿದ್ರೂ ಒಳಗೊಳಗೆ ಕುದಿಯುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಬೇಗುದಿ ಜಾಸ್ತಿ ಆಗುತ್ತಿದೆ. ಇದರ ಬೆನ್ನಲ್ಲೇ ಇಂದು ಬಿಎಸ್‍ವೈ ಅಥಣಿಗೆ ಆಗಮಿಸುತ್ತಿದ್ದಾರೆ.

    ಅಥಣಿಯಲ್ಲಿ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಎದ್ದಿರೋ ಬಂಡಾಯ ಇನ್ನೂ ತಣ್ಣಗಾಗಲಿಲ್ಲ. ಬಿಜೆಪಿ ಮುಖಂಡರು ಅಸಮಾಧಾನ, ಬಂಡಾಯ ಶಮನಕ್ಕೆ ಪ್ರಯತ್ನಿಸಿದ್ರೂ ಏನೂ ವರ್ಕೌಟ್ ಆಗಿದ್ದಂತೆ ಕಾಣುತ್ತಿಲ್ಲ. ಟಿಕೆಟ್ ಕೈ ತಪ್ಪಿರೋ ಸವದಿಗೆ ಅಸಮಾಧಾನ ಮೇಲ್ನೋಟಕ್ಕೆ ತೋರಿಸದೇ ಇದ್ದರೂ ಒಳಗೊಳಗೆ ಇನ್ನು ಜ್ವಾಲೆಯಂತೆ ಉರಿಯುತ್ತಲೆ ಇದೆ.

    ಅಥಣಿಯಲ್ಲಿ ಒಳಬೇಗುದಿ ಇನ್ನೂ ಮುಂದುವರಿದಿದ್ದು ಅದಕ್ಕಾಗಿಯೇ ಸವದಿ ಆಪ್ತರು, ಬೆಂಬಲಿಗರು ಒಂದಿಲ್ಲೊಂದು ಕ್ಯಾತೆ, ಬಂಡಾಯವನ್ನ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹಾಗಾಗಿ ಸಿಎಂಗೆ ಅಥಣಿ, ಕಾಗವಾಡ, ಗೋಕಾಕೇ ದೊಡ್ಡ ಸವಾಲಾಗಿತ್ತು. ಈಗ ಸ್ವತಃ ಸಿಎಂ ಯಡಿಯೂರಪ್ಪನವರೇ ಅಖಾಡಕ್ಕೆ ಇಳಿಯುತ್ತಿದ್ದು ಇಂದಿನಿಂದ ಅಥಣಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಸಿಎಂ ಬಿಎಸ್‍ವೈ ಬಿಜೆಪಿ ಕಾರ್ಯಕರ್ತರ ಸಭೆ ಕೂಡ ನಡೆಸಲಿದ್ದಾರೆ.

    ಕುಮಟಳ್ಳಿಗೆ ಟಿಕೆಟ್ ಘೋಷಣೆ ಆದ ಮೇಲೆ ಇದೇ ಮೊದಲ ಬಾರಿಗೆ ಅಥಣಿಗೆ ಸಿಎಂ ಆಗಮಿಸುತ್ತಿದ್ದಾರೆ. ಈ ವೇಳೆ ಬಿಎಸ್‍ವೈ ಮುಂದೆ ಮತ್ತೆ ಸವದಿ ಬೆಂಬಲಿಗರು ಅಸಮಾಧಾನ ಹೊರಹಾಕೋ ಸಾಧ್ಯತೆ ಇದೆ. ಒಂದೆಡೆ ಸಿಎಂ ಬಿಎಸ್‍ವೈ ಸ್ವಾಗತಕ್ಕೆ ಮಹೇಶ್ ಕುಮಟಳ್ಳಿ ಹಾಗೂ ಟೀಮ್ ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ಬಿಎಸ್‍ವೈಗೆ ಬಿಸಿ ತಟ್ಟಿಸಲು ಸವದಿ ಅಭಿಮಾನಿಗಳು ರೆಡಿ ಆಗಿರೋ ಮಾತುಗಳು ಕೇಳಿಬರುತ್ತಿದೆ.

    ಇದರ ನಡುವೆ ತನಗೆ ಯಾವುದೇ ಅಸಮಾಧಾನ ಇಲ್ಲ. ಆದರೆ ಕಾರ್ಯಕರ್ತರಲ್ಲಿ ಸ್ವಲ್ಪ ಗೊಂದಲ ಇದೆ. ಅದನ್ನು ಸರಿ ಪಡಿಸುತ್ತೇವೆ. ನಾವೆಲ್ಲ ಒಗ್ಗಟ್ಟಾಗಿ ಹೋಗುತ್ತಿದ್ದೇವೆ ಅಂತ ಸವದಿ ಹೇಳಿದ್ದಾರೆ.

    ಒಟ್ಟಿನಲ್ಲಿ ಇಂದು ಯಡಿಯೂರಪ್ಪ ನೇತೃತ್ವದಲ್ಲಿ ನಡೆಯೋ ಬಿಜೆಪಿ ಸಭೆ ಎಲ್ಲರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅಲ್ಲದೆ ಈ ಎಲ್ಲಾ ಅಸಮಾಧಾನಗಳಿಗೆ ಸಿಎಂ ಹೇಗೆ ಇತಿಶ್ರೀ ಹಾಡ್ತಾರಾ ಅನ್ನೋದನ್ನ ಕಾದುನೋಡಬೇಕಾಗಿದೆ.

  • ಕೆ.ಆರ್.ಪೇಟೆ ಕಣದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯಿಂದ `ಒಕ್ಕಲಿಗ’ ವ್ಯೂಹ!

    ಕೆ.ಆರ್.ಪೇಟೆ ಕಣದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯಿಂದ `ಒಕ್ಕಲಿಗ’ ವ್ಯೂಹ!

    ಮಂಡ್ಯ: ಉಪ ಚುನಾವಣೆಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಕೆ.ಆರ್ ಪೇಟೆಯೂ ಒಂದು. ಈಗ ಇಲ್ಲಿ ಎಲ್ಲರೂ ಡಿಫರೆಂಟ್ ಸ್ಟ್ರಾಟಜಿಯಲ್ಲಿ ತೊಡಗಿದ್ದಾರೆ.

    ಮಂಡ್ಯ ರಣಕಣದಲ್ಲಿ ತೆನೆ ಕಾಳು ಕಟ್ಟಿದ್ದೇ ಹೆಚ್ಚು. ಈಗ ಕೆ.ಆರ್.ಪೇಟೆ ಬೈಎಲೆಕ್ಷನ್ ಬಂದಿದ್ದು ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಡಿಫರೆಂಟ್ ಪ್ಲಾನ್ ಮಾಡುತ್ತಿದ್ದಾರೆ. ಜೆಡಿಎಸ್ ತನ್ನ ಭದ್ರ ಕೋಟೆಯನ್ನು ಉಳಿಸಿಕೊಳ್ಳಬೇಕು ಎಂದು ಸರ್ಕಸ್ ಮಾಡುತ್ತಿದೆ. ಇನ್ನೊಂದು ಕಡೆ ಕಾಂಗ್ರೆಸ್ ಗೆಲ್ಲುವ ಮೂಲಕ ಮತ್ತೆ ಕೆಆರ್‍ಪೇಟೆಯನ್ನು ತಮ್ಮ ವಶಪಡಿಕೊಳ್ಳಬೇಕೆಂಬ ಹಂಬಲವಿದೆ. ಮತ್ತೊಂದು ಕಡೆ ಬಿಜೆಪಿ ಕೆಆರ್‍ಪೇಟೆ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಂಡ್ಯದಲ್ಲಿ ಬಿಜೆಪಿ ಬಾವುಟವನ್ನು ಹಾರಿಸಬೇಕೆಂಬ ಕನಸು ಕಾಣುತ್ತಿದೆ. ಈ ಎಲ್ಲಾ ಸರ್ಕಸ್, ಹಂಬಲ ಮತ್ತು ಕನಸುಗಳನ್ನು ನನಸು ಮಾಡಿಕೊಳ್ಳಲು ಮೂರು ಪಕ್ಷಗಳು ರೂಪಿಸ್ತಿರೋದು ಒಂದೇ ಸ್ಟ್ರಾಟಜಿ. ಅದುವೇ ಜಾತಿ ಮತಗಳನ್ನು ಸೆಳೆಯುವುದು.

    ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ಹೆಚ್ಚಿವೆ. ಈ ಕ್ಷೇತ್ರದಲ್ಲಿ 90 ಸಾವಿರ ಮತಗಳು ಇವೆ ಎಂದು ಅಂದಾಜಿಸಲಾಗಿದೆ. ಈ ಮತಗಳನ್ನು ಕಬಳಿಸಲು ಜೆಡಿಎಸ್, ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಂದ ಮತಬೇಟೆಗೆ ಶುರುಮಾಡಿದೆ. ಉಳಿದಂತೆ ಬಿಜೆಪಿ ತನ್ನ ಸಚಿವ ಸಂಪುಟದಲ್ಲಿ ಅಶ್ವಥ್ ನಾರಾಯಣ್ ಹಾಗೂ ಆರ್.ಅಶೋಕ್‍ಗೆ ಪ್ರಮುಖ ಹುದ್ದೆ ನೀಡಿದೆ. ಜೊತೆ ಕೆ.ಆರ್ ಪೇಟೆ ಚುನಾವಣೆಯ ಉಸ್ತುವಾರಿಯಾಗಿ ಮಾಧುಸ್ವಾಮಿಗೆ ಕೊಕ್ ಕೊಟ್ಟು ಅಶ್ವಥ್ ನಾರಾಯಣ್ ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಬಿಜೆಪಿ ಒಕ್ಕಲಿಗರ ಮತಗಳನ್ನು ಕಬಳಿಸುವ ತಂತ್ರವನ್ನು ಬಿಜೆಪಿ ಮಾಡಿದೆ.

    ಇಷ್ಟು ಮಾತ್ರವಲ್ಲದೇ ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿ ಲಿಂಗಾಯತರ ವೋಟ್‍ಗೂ ಕಣ್ಣಾಕಿದೆ. ಸ್ವತಃ ಕೆ.ಆರ್.ಪೇಟೆ ಚುನಾವಣಾ ಉಸ್ತುವಾರಿಯಾಗಿರೋ ವಿಜಯೇಂದ್ರರೇ ರಣಕಣಕ್ಕಿಳಿದು ಅಬ್ಬರ ಪ್ರಚಾರ ಮಾಡುತ್ತಿದ್ದಾರೆ. ಒಟ್ಟಾರೆ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸಲಿದ್ದು, ಹೀಗಾಗಿ ಮೂರು ಪಕ್ಷಗಳು ಒಕ್ಕಲಿಗರನ್ನು ಸೆಳೆಯಲು ತಮ್ಮದೇ ಸ್ಟ್ರಾಟರ್ಜಿ ಮಾಡ್ತಾ ಇದ್ದಾರೆ.

  • ಬಿಎಸ್‍ವೈ-ಎಚ್‍ಡಿಕೆ ನಡುವೆ ಒಳ ಒಪ್ಪಂದ: ಸಿದ್ದರಾಮಯ್ಯ ಆರೋಪ

    ಬಿಎಸ್‍ವೈ-ಎಚ್‍ಡಿಕೆ ನಡುವೆ ಒಳ ಒಪ್ಪಂದ: ಸಿದ್ದರಾಮಯ್ಯ ಆರೋಪ

    ಬೆಳಗಾವಿ: ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ಬಗ್ಗೆ ಮೃದು ಧೋರಣೆ ತೋರುತ್ತಿದ್ದಾರೆ. ಇದನ್ನು ಗಮನಿಸಿದರೆ ಕುಮಾರಸ್ವಾಮಿ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಒಳ ಒಪ್ಪಂದ ಮಾಡಿಕೊಂಡಂತಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜೆಡಿಎಸ್‍ನ ಅನೇಕ ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಹೀಗಾಗಿ ಬಿಜೆಪಿ ಸರ್ಕಾರ ಬೀಳಲು ನಾನು ಬಿಡುವುದಿಲ್ಲ. ನಾವು ಬೆಂಬಲ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಸರ್ಕಾರ ಬೀಳಿಸುವ ಅಭ್ಯಾಸ ಇರುವುದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಹೊರತು ನಮಗಲ್ಲ ಎಂದು ಗುಡುಗಿದರು.

    ಇತ್ತ ಟ್ವಿಟ್ಟರ್ ನಲ್ಲಿಯೂ ಕಿಡಿಕಾರಿರುವ ಸಿದ್ದರಾಮಯ್ಯ, ಕುಮಾರಸ್ವಾಮಿಯವರಿಗೆ 14 ತಿಂಗಳು ನಾನು ಆಡಳಿತ ನಡೆಸಲು ಬಿಡಲಾಗದಷ್ಟು ತೊಂದರೆ ಕೊಟ್ಟಿದ್ದರೆ ಮೊದಲ ದಿನವೇ ಅವರು ರಾಜೀನಾಮೆ ಕೊಟ್ಟುಬಿಡಬಹುದಿತ್ತು. 14 ತಿಂಗಳು ಆಡಳಿತ ನಡೆಸಿ ಈಗ ರಾಜಕೀಯ ದುರುದ್ದೇಶಕ್ಕೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಸರ್ಕಾರ ಬೀಳಿಸುವುದರಲ್ಲಿ ಯಾರು ನಿಪುಣರು ಎಂದು ಅವರವರ ಇತಿಹಾಸವೇ ಹೇಳುತ್ತದೆ ಎಂದು ಬರೆದುಕೊಂಡಿದ್ದಾರೆ.

    ಬಿಜೆಪಿ ಸರ್ಕಾರ ಬೀಳಿಸಲ್ಲ ಅನ್ನೋ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಯ ಹಿಂದೆ ರಾಜಕೀಯ ಲೆಕ್ಕಾಚಾರವಿದೆ. ಆ ಲೆಕ್ಕಾಚಾರದಿಂದಲೇ ಹೆಚ್‍ಡಿಕೆಯವರು ಬಿಜೆಪಿಗೆ ಬೆಂಬಲ ಎಂದು ಹೇಳುತ್ತಿದ್ದಾರೆ ಎಂದು ಇಂದು ಬೆಳಗ್ಗೆ ಪಬ್ಲಿಕ್ ಟಿವಿ ವರದಿಯನ್ನು ಬಿತ್ತರಿಸಿತ್ತು.

    ಹೆಚ್‍ಡಿಕೆ ಲೆಕ್ಕಾಚಾರವೇನು?
    ಆಪರೇಷನ್ ಕಮಲದಿಂದ ಪಕ್ಷವನ್ನು ಪಾರು ಮಾಡುವುದು. ಬಿಜೆಪಿಗೆ ಜಿಗಿಯಲು ಸಜ್ಜಾಗಿರೋ ಶಾಸಕರನ್ನು ಉಳಿಸಿಕೊಳ್ಳುವುದು. ಸಾಫ್ಟ್ ಕಾರ್ನರ್ ತೋರಿಸಿದರೆ ಆಪರೇಷನ್‍ಗೆ ಬಿಜೆಪಿ ಕೈ ಹಾಕಲ್ಲ ಅನ್ನೋ ನಂಬಿಕೆ ಹಾಗೂ ತಮ್ಮ ಶಾಸಕರ ಕ್ಷೇತ್ರಗಳಿಗೆ ಸರ್ಕಾರದಿಂದ ಅನುದಾನ ಕೊಡಿಸೋದು ಹೆಚ್‍ಡಿಕೆ ಲೆಕ್ಕಾಚಾರವಾಗಿದೆ.

    ತಮ್ಮ ವಿರುದ್ಧದ ಫೋನ್ ಟ್ಯಾಪಿಂಗ್ ಕೇಸ್ ತನಿಖೆ ಪ್ರಗತಿಯಲ್ಲಿದೆ. ಹೀಗಾಗಿ ಬಿಜೆಪಿ ಮೇಲೆ ದಾಳಿ ಮಾಡಿದರೆ ಡಿಕೆಶಿ ಸ್ಥಿತಿ ಎದುರಾಗಬಹುದು. ಅಲ್ಲದೆ ಭವಿಷ್ಯದಲ್ಲಿ ರಾಜಕೀಯವಾಗಿ ಕಷ್ಟ ಆಗಬಹುದು ಅನ್ನೋ ಭಯಯ ಹೆಚ್‍ಡಿಕೆಗೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈಗ ಸಾಫ್ಟ್ ಕಾರ್ನರ್ ತೋರಿಸಿದರೆ ಮುಂದೆ ಅನುಕೂಲವಾಗನಹುದು ಎಂಬ ಲೆಕ್ಕಾಚಾರ ಕೂಡ ಹೆಚ್‍ಡಿಕೆಯವರದ್ದಾಗಿದೆ.

    ಕಾಂಗ್ರೆಸ್ ಕೈಕೊಟ್ಟ ಮೇಲೆ ಜೆಡಿಎಸ್ ಪರಿಸ್ಥಿತಿ ಕಷ್ಟವಾಗಿದೆ. ಹೀಗೆ ಮುಂದುವರಿದರೆ ಜೆಡಿಎಸ್ ಭವಿಷ್ಯಕ್ಕೆ ಸಮಸ್ಯೆ ಆಗಬಹುದು. ಹೀಗಾಗಿ ಬಿಜೆಪಿ ಜೊತೆ ದೋಸ್ತಿಗೆ ಬಾಗಿಲು ಓಪನ್ ಮಾಡೋದು ಸೂಕ್ತ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಪರೋಕ್ಷ ಬೆಂಬಲ ನೀಡುವುದು. ಈ ಮೂಲಕ ಕೇಂದ್ರ ಕಮಲ ನಾಯಕರ ಮನಸ್ಸು ಗೆಲ್ಲುವುದು. ಕಮಲ ಬೆಂಬಲಿಸಿ ಜೆಡಿಎಸ್ ಪಕ್ಷ ಉಳಿಸಿಕೊಳ್ಳೋದು ಹೆಚ್‍ಡಿಕೆ ಪ್ಲಾನ್ ಆಗಿದೆ.

  • ಅನರ್ಹರನ್ನು ಗೆಲ್ಲಿಸಿ, ಸರ್ಕಾರ ಉಳಿಸಿಕೊಳ್ಳಲು ಮುಂದಾದ ಸಿಎಂ

    ಅನರ್ಹರನ್ನು ಗೆಲ್ಲಿಸಿ, ಸರ್ಕಾರ ಉಳಿಸಿಕೊಳ್ಳಲು ಮುಂದಾದ ಸಿಎಂ

    ಬೆಂಗಳೂರು: ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ.

    ಚುನಾವಣಾ ನೀತಿ ಸಂಹಿತೆ ಜಾರಿ ಆಗುವ ಮುನ್ನವೇ ಅನರ್ಹರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಯೋಜನೆಯನ್ನು ಸಿಎಂ ಮಾಡಿಕೊಂಡಿದ್ದಾರೆ. ನವೆಂಬರ್ 3ರಿಂದ ಅನರ್ಹರ ಕ್ಷೇತ್ರಗಳಿಗೆ ತೆರಳಲಿರುವ ಸಿಎಂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಅನರ್ಹರ ಪರ ಅಧಿಕೃತವಾಗಿ ಪ್ರಚಾರ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.

    ಕಾಂಗ್ರೆಸ್ ಅನರ್ಹ ಶಾಸಕ ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸಿಎಂ ನವೆಂಬರ್ 3ರಂದು ಭೇಟಿ ನೀಡಲಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಸುಧಾಕರ್ ಪರ ಸಿಎಂ ಮತ ಕೇಳುವ ಸಾಧ್ಯತೆಗಳಿವೆ. ನವೆಂಬರ್ 7ರಂದು ಕಾಂಗ್ರೆಸ್ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಪ್ರತಿನಿಧಿಸುವ ಹಿರೇಕೆರೂರಿನಲ್ಲಿ ಸಿಎಂ ಪ್ರಚಾರ ನಡೆಸಲಿದ್ದಾರೆ. ನವೆಂಬರ್ 10ರಂದು ಆನಂದ್ ಸಿಂಗ್ ಪ್ರತಿನಿಧಿಸುವ ವಿಜಯನಗರ(ಹೊಸಪೇಟೆ)ದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯಲ್ಲಿ ಯಡಿಯೂರಪ್ಪನವರು ಭಾಗಿಯಾಗಲಿದ್ದಾರೆ. ಕಳೆದ ವಾರ ಎಂಟಿಬಿ ನಾಗರಾಜ್ ಪ್ರತಿನಿಧಿಸುವ ಹೊಸಕೋಟೆಯಲ್ಲಿ ಸಿಎಂ ಪರೋಕ್ಷವಾಗಿ ಪ್ರಚಾರ ನಡೆಸಿದ್ದರು.

    15 ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ನಡೆಯಲಿದೆ. ನವೆಂಬರ್ 11ಕ್ಕೆ ಅಧಿಸೂಚನೆ ಪ್ರಕಟವಾಗಲಿದ್ದು, ನ.18ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ನ.18ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು ನ.21 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಪರಿಗಣನೆ ಆಗಲಿದೆ.

    ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ತೆರವಾದ ಕ್ಷೇತ್ರಗಳಿಗೆ 6 ತಿಂಗಳ ಒಳಗಡೆ ಚುನಾವಣೆ ನಡೆಸಬೇಕಾಗುತ್ತದೆ.