Tag: ಕರ್ನಾಟಕ ಉಪ ಚುನಾವಣೆ

  • ಬೆಳಗಾವಿ, ಬಸವಕಲ್ಯಾಣ, ಮಸ್ಕಿಯಲ್ಲಿಂದು ಮತದಾನ

    ಬೆಳಗಾವಿ, ಬಸವಕಲ್ಯಾಣ, ಮಸ್ಕಿಯಲ್ಲಿಂದು ಮತದಾನ

    ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರದ ಉಪಚುನಾವಣೆಗೆ ಮತದಾನ ಆರಂಭಗೊಂಡಿದೆ.

    ಬಹಿರಂಗ ಪ್ರಚಾರ ಅಂತ್ಯ ಹಿನ್ನೆಲೆ ಅಭ್ಯರ್ಥಿಗಳ ಪರ ಗುರುವಾರ ಮನೆ ಮನೆಗಳಿಗೆ ತೆರಳಿಗೆ ರಾಜಕೀಯ ನಾಯಕರು ಅದ್ಧೂರಿ ಪ್ರಚಾರ ನಡೆಸಿದ್ದರು. ಮಸ್ಕಿ ಕ್ಷೇತ್ರದಲ್ಲಿ ಒಟ್ಟು 305 ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ. ಬೀದರ್‍ನ ಬಸವಕಲ್ಯಾಣದಲ್ಲಿ 326 ಮತಗಟ್ಟೆಗಳು ಸಜ್ಜಾಗಿವೆ. ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಒಟ್ಟು 2,566 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

    ಮಸ್ಕಿಯಲ್ಲಿ ಬಿಜೆಪಿಯ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್‍ನ ಬಸನಗೌಡ ತುರವಿಹಾಳ ಮಧ್ಯೆ ಬಿಗ್ ಫೈಟ್ ಇದೆ. 2,05,429 ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಬಸವ ಕಲ್ಯಾಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‍ನ ಮಾಲಾ ಬಿ.ನಾರಾಯಣರಾವ್, ಬಿಜೆಪಿಯ ಶರಣು ಸಲಗಾರ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಸೇರಿದಂತೆ 12 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. 2,39,782 ಮತದಾರು 12 ಅಭ್ಯರ್ಥಿಗಳ ಹಣೆ ಬರಹ ನಿರ್ಧರಿಸಲಿದ್ದಾರೆ.

    ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೂ ಮತದಾನ ಆರಂಭಗೊಂಡಿದ್ದು, 18,07,250 ಮತದಾರರನ್ನು ಕ್ಷೇತ್ರ ಹೊಂದಿದೆ. ಬಿಜೆಪಿಯ ಮಂಗಳಾ ಅಂಗಡಿ, ಕಾಂಗ್ರೆಸ್‍ನ ಸತೀಶ್ ಜಾರಕಿಹೊಳಿ ಮಧ್ಯೆ ಫೈಟ್ ಜೋರಾಗಿದೆ. 118 ಸೂಕ್ಷ್ಮ, 587 ಅತೀ ಸೂಕ್ಷ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, 3,500 ಪೊಲೀಸರರನ್ನ ನಿಯೋಜಿಸಲಾಗಿದೆ.

  • ಮಸ್ಕಿಯಲ್ಲಿ ‘ಕಣ್ಣೇ ಅದಿರಿಂದಿ’ ಸಿಂಗರ್ ಮಂಗ್ಲಿ ಪ್ರಚಾರ – ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್‍ಗೆ ಕೊರೊನಾ

    ಮಸ್ಕಿಯಲ್ಲಿ ‘ಕಣ್ಣೇ ಅದಿರಿಂದಿ’ ಸಿಂಗರ್ ಮಂಗ್ಲಿ ಪ್ರಚಾರ – ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್‍ಗೆ ಕೊರೊನಾ

    ರಾಯಚೂರು: ಮಸ್ಕಿ ಉಪ ಚುನಾವಣೆ ಅಖಾಡದಲ್ಲಿ ಮಂಗಳವಾರ ಬಿಜೆಪಿ ಪರವಾಗಿ ಗಾಯಕಿ ಮಂಗ್ಲಿ ಪ್ರಚಾರ ಮಾಡಲಿದ್ದಾರೆ. ಬಿಜೆಪಿ ಮಂಗ್ಲಿ ಅವರನ್ನ ಆಹ್ವಾನಿಸಿದ್ದು, ನಾಳೆಯ ಮಸ್ಕಿ ಕೆಲ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಮತ ಕೇಳಲಿದ್ದಾರೆ. . ಈ ಮಧ್ಯೆ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.

    ಇದೇ 17 ರಂದು ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಪ್ರಚಾರದ ಕಾವು ಜೋರಾಗಿದೆ. ಮೂರು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಭರ್ಜರಿ ರಣತಂತ್ರ ರೂಪಿಸ್ತಿದ್ದಾರೆ. ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ನೆಲಸಮ ನಿಶ್ಚಿತ. 3 ಕ್ಷೇತ್ರಗಳಲ್ಲೂ ದೊಡ್ಡ ಅಂತರದಲ್ಲಿ ನಾವೇ ಗೆಲ್ತೀವಿ ಎಂಬ ಭರವಸೆ ವ್ಯಕ್ತಪಡಿಸಿದರು.

    ಮಧ್ಯಾಹ್ನ ಪರಿಶಿಷ್ಟ ಪಂಗಡ ಕಾರ್ಯಕರ್ತ ದುರುಗಪ್ಪ ಮನೆಯಲ್ಲಿ ಉಪಹಾರ ಸವಿದ್ರು. ಸಿಎಂ ಊಟಕ್ಕೆ ಬರ್ತಾರೆ ಅಂತ ಹುಗ್ಗಿ ಪಾಯಸ, ಹೋಳಿಗೆ, ಚಪಾತಿ, ಜೋಳದ ರೊಟ್ಟಿ, ಬದನೆಕಾಯಿ ಪಲ್ಯ, ದಾಲ್, ಸಾಂಬಾರ್, ಮೆಟಗಿಕಾಳು, ಮಜ್ಜಿಗೆ, ಹಪ್ಪಳ ಎಣ್ಣೆಗಾಯಿ ರೆಡಿಯಾಗಿತ್ತು.

    ಬೆಳಗಾವಿಯಲ್ಲಿ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಿದ್ದರಾಮಯ್ಯಗೆ ದುರಹಂಕಾರ ಅಂದ್ರೆ, ಕಲಬುರಗಿಯಲ್ಲಿ ಸಿ.ಟಿ.ರವಿ ಕಾಂಗ್ರೆಸ್ ಪಕ್ಷವನ್ನ ಖಾಲಿ ಡಬ್ಬ ಅಂದರು. ಸಚಿವರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಘಟಾನುಘಟಿ ನಾಯಕರು ಬೆಳಗಾವಿಯಲ್ಲಿ ಮಂಗಳ ಅಂಗಡಿ ಪರ ಪ್ರಚಾರ ಮಾಡಿದರು.

    ಇತ್ತ ಕಾಂಗ್ರೆಸ್ ನಾಯಕರು ಕೂಡ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಸ್ಕಿಯಲ್ಲಿ ಒಂದೆಡೆ ಸಿಎಂ ಯಡಿಯೂರಪ್ಪ ಪ್ರಚಾರ ಮಾಡಿದ್ರೆ, ಮತ್ತೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಯಾಂಪೇನೆ ಮಾಡಿದರು. ಬಿಜೆಪಿ ಅಂದ್ರೆ ಭ್ರಷ್ಟಾಚಾರ ಜನತಾ ಪಾರ್ಟಿ ಅಂತ ಸಿದ್ದರಾಮಯ್ಯ ಟೀಕಿಸಿದ್ರು. ಅತ್ತ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಹಮ್ಮಿಕೊಂಡಿತ್ತು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಅಭ್ಯರ್ಥಿಯ ಸೀಟು ಮಾರಾಟವಾಗಿದೆ. ಟಿವಿ, ವಾಟ್ಸ್ ಅಪ್ ನೋಡಿದ್ರೆ ವಾಕರಿಕೆ ಬರುತ್ತಿದೆ ಅಂತ ಪರೋಕ್ಷವಾಗಿ ಸಿಡಿ ವಿಚಾರ ಕೆಣಕಿದರು. ಪ್ರಚಾರ ಸಭೆಯಲ್ಲಿ ಸರ್ಕಾರವನ್ನ ಕುಟುಕಿದ ಮಲ್ಲಿಕಾರ್ಜುನ ಖರ್ಗೆ, ಸಿಎಂ ವಿರುದ್ಧ ಅವರ ಸಚಿವರೇ ಗವರ್ನರ್‍ಗೆ ದೂರು ನೀಡಿದ್ದಾರೆ. 3 ಕ್ಷೇತ್ರದಲ್ಲಿ ಗೆದ್ರೆ ಸರ್ಕಾರ ಬಿದ್ದೋಗುತ್ತೆ ಅಂತ ಭವಿಷ್ಯ ನುಡಿದರು.

  • ಉಪಸಮರಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು – ನಾಲ್ಕು ಕ್ಷೇತ್ರ, ಯಾರು? ಎಲ್ಲಿಂದ ಸ್ಪರ್ಧೆ?

    ಉಪಸಮರಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು – ನಾಲ್ಕು ಕ್ಷೇತ್ರ, ಯಾರು? ಎಲ್ಲಿಂದ ಸ್ಪರ್ಧೆ?

    ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದ್ದು, ಶನಿವಾರ ಅಥವಾ ಮುಂದಿನ ವಾರ ಎಲೆಕ್ಷನ್ ದಿನಾಂಕ ಘೋಷಣೆ ಆಗುವ ಸಾಧ್ಯತೆಗಳಿವೆ. ಹಾಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ಆರಂಭಿಸಿದ್ದು, ಮತ್ತೊಂದು ಕಡೆ ಟಿಕೆಟ್ ಆಕಾಂಕ್ಷಿಗಳು ಲಾಬಿಗೆ ಮುಂದಾಗಿದ್ದಾರೆ. ಕೆಲವರು ದೆಹಲಿ ಮಟ್ಟದಲ್ಲಿಯೂ ಲಾಬಿಗೆ ಮುಂದಾಗಿ, ಬಹಿರಂಗವಾಗಿಯೇ ತಾವು ಟಿಕೆಟ್ ಆಕಾಂಕ್ಷಿಗಳೆಂದು ಹೇಳುತ್ತಿದ್ದಾರೆ.

    2020ರಲ್ಲಿ ನಡೆದ ಎರಡು ಕ್ಷೇತ್ರಗಳಿಗೆ (ಆರ್.ಆರ್.ನಗರ ಮತ್ತು ಶಿರಾ) ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿತ್ತು. ಗೆಲುವಿನ ಹುಮ್ಮಸ್ಸಿನಲ್ಲಿರುವ ಕಮಲ ಪಾಳಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರಿಸಲು ಭರ್ಜರಿ ಸಿದ್ಧತೆ ನಡೆಸಿಕೊಂಡಿದೆ. ಇನ್ನು ಕಾಂಗ್ರೆಸ್‍ಗೆ ತನ್ನ ಕ್ಷೇತ್ರಗಳಾಗಿರುವ ಮಸ್ಕಿ ಮತ್ತು ಬಸವಕಲ್ಯಾಣ ಉಳಿಸಿಕೊಳ್ಳುವ ಸವಾಲು ಒಂದೆಡೆಯಾದ್ರೆ, ಬಿಜೆಪಿ ಪ್ರಾಬಲ್ಯದ ಬೆಳಗಾವಿ ಹಾಗೂ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾದ ಸಿಂದಗಿಯನ್ನ ಕೈ ವಶ ಮಾಡಿಕೊಂಡು ಇಬ್ಬರಿಗೂ ತಿರುಗೇಟು ನೀಡಲು ಕೈ ಪಾಳಯ ತಂತ್ರ ರೂಪಿಸುತ್ತಿದೆ. ಇತ್ತ ಬೈ ಎಲೆಕ್ಷನ್ ನಿಂದ ದೂರ ಉಳಿಯುವ ಮಾತುಗಳನ್ನಾಡುತ್ತಿರುವ ದಳಪತಿಗಳಿಗೆ ತನ್ನ ಕ್ಷೇತ್ರ ಸಿಂದಗಿಯನ್ನ ಉಳಿಸಿಕೊಳ್ಳೋದು ಗೌರವದ ಪ್ರಶ್ನೆಯಾಗಿದೆ. ಹಾಗಾಗಿ ಮೂರು ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ.

    ಸಿಂದಗಿ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಭೂಮಿಕೆ ಸಿದ್ಧವಾಗಿದೆ. ಯಾರಿಗೆ ಯಾವ ಕ್ಷೇತ್ರದ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಪಕ್ಷಗಳಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯಯುತ್ತಿವೆ.

    ಯಾರಿಗೆ ಯಾವ ಕ್ಷೇತ್ರದ ಟಿಕೆಟ್ ಸಾಧ್ಯತೆ?:
    ಸಿಂದಗಿ ಕ್ಷೇತ್ರದ ಮೇಲೆ ಡಿಸಿಎಂ ಲಕ್ಷ್ಮಣ ಸವದಿ ಕಣ್ಣು ಹಾಕಿದ್ದಾರೆ ಎನ್ನಲಾಗ್ತಿದೆ. ಇತ್ತ ಸ್ಥಳೀಯ ನಾಯಕ ರಮೇಶ್ ಭೂಸನೂರು ಸಹ ಸಿಂದಗಿ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಲ್ಲಿ ಲಕ್ಷ್ಮಣ ಸವದಿ ವರ್ಸಸ್ ರಮೇಶ್ ಭೂಸನೂರು ಎಂಬಂತೆ ಬಿಂಬಿತವಾಗಿದೆ. ಜೆಡಿಎಸ್ ನಿಂದ ಮನಗೂಳಿ ಅವರ ಪುತ್ರನಿಗೆ ಟಿಕೆಟ್ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಕಾಂಗ್ರೆಸ್ ನಿಂದ ಮನಗೂಳಿ ಪುತ್ರನ ಆಪರೇಷನ್ ತಂತ್ರದ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ.

    ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಬಿಜೆಪಿ ಅಭ್ಯರ್ಥಿಯಾದ್ರೆ, ಕಾಂಗ್ರೆಸ್ ನಿಂದ ಆರ್.ಬಸನಗೌಡ ತುರುವಿಹಾಳ ಸ್ಪರ್ಧಿಸೋದು ಖಚಿತವಾಗಿದೆ. ಆದ್ರೆ ಮಸ್ಕಿಯಲ್ಲಿ ಇಬ್ಬರು ಅಭ್ಯರ್ಥಿಗಳು ಕಳೆದ ಬಾರಿ ಸ್ಪರ್ಧೆ ಮಾಡಿದ್ದರು. ಆದ್ರೆ ಈ ಬಾರಿ ಪಕ್ಷಗಳು ಅದಲು ಬದಲು ಆಗಿದೆ. ಜೆಡಿಎಸ್ ನಿಂದ ಅಭ್ಯರ್ಥಿ ಹಾಕುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಬಸವಕಲ್ಯಾಣದಲ್ಲೂ ಬಿಜೆಪಿಯಿಂದ ಮೂವರು, ಕಾಂಗ್ರೆಸ್ ನಿಂದ ನಾರಾಯಣ್ ರಾವ್ ಪುತ್ರನ ಸ್ಪರ್ಧೆ ಬಗ್ಗೆ ಸರ್ಕಸ್ ನಡೆದಿದ್ದು, ಅಂತಿಮವಾಗಿಲ್ಲ. ಬಸವಕಲ್ಯಾಣದ ಅಖಾಡದಿಂದಲೂ ಜೆಡಿಎಸ್ ದೂರ ಉಳಿಯುವ ಸಾಧ್ಯತೆಗಳಿವೆ. ಈ ನಡುವೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ದಿವಂಗತ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ, ಆರ್‍ಎಸ್‍ಎಸ್ ಹಿನ್ನೆಲೆವುಳ್ಳ ವೈದ್ಯ ರವಿ ಪಾಟೀಲ್ ನಡುವೆ ಪೈಪೋಟಿ ಇದ್ರೆ, ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಅವರನ್ನ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ.

    ಒಟ್ಟಾರೆ ಮುಂದಿನ ವಾರದೊಳಗೆ ಉಪ ಚುನಾವಣೆ ಘೋಷಣೆಯಾದ್ರೆ ಬಜೆಟ್ ಅಧಿವೇಶನದ ಮೇಲೂ ಪರಿಣಾಮ ಬೀರಲಿದೆ. ಹಾಗಾಗಿ ಮೂರು ಪಕ್ಷಗಳು ಚುನಾವಣಾ ದಿನಾಂಕ ಘೋಷಣೆಯನ್ನು ಎದುರು ನೋಡ್ತಿವೆ.

  • ಉಪಚುನಾವಣೆಯಲ್ಲಿ ಬಿಜೆಪಿ ತಂತ್ರಗಾರಿಕೆ ಚೇಂಜ್

    ಉಪಚುನಾವಣೆಯಲ್ಲಿ ಬಿಜೆಪಿ ತಂತ್ರಗಾರಿಕೆ ಚೇಂಜ್

    ಬೆಂಗಳೂರು: ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ಸಕಲ ರೀತಿ ಸಿದ್ಧವಾಗುತ್ತಿದೆ. ಅಧಿವೇಶನದಲ್ಲಿ ಸಿಎಂ ಯಡಿಯೂರಪ್ಪ ಬೈ ಎಲೆಕ್ಷನ್ ನಲ್ಲಿ ಗೆಲ್ಲೋದಾಗಿ ಚಾಲೆಂಜ್ ಹಾಕಿದ್ದಾರೆ. ಹೀಗಾಗಿ ತಮ್ಮದಲ್ಲದ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಬಿಜೆಪಿ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಎರಡು ಕ್ಷೇತ್ರಗಳಲ್ಲಿ ಚುನಾವಣಾ ತಂತ್ರಗಾರಿಕೆಯನ್ನ ಬಿಜೆಪಿ ಬದಲಿಸಿಕೊಂಡಿದ್ದು, ಈ ಕುರಿತು ಪಕ್ಷದ ಎಲ್ಲರಿಗೂ ಗುಪ್ತ ಸಂದೇಶ ರವಾನಿಸಿದೆ ಎಂದು ತಿಳಿದು ಬಂದಿದೆ.

    ಹೌದು, ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಬೇಕು. ಕಾಂಗ್ರೆಸ್ ಪಕ್ಷ ಮತ್ತು ನಾಯಕರನ್ನ ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಬೇಕು. ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ನೇರ ಎದುರಾಳಿಯಾಗಿದ್ದು, ಹಾಗಾಗಿ ಜೆಡಿಎಸ್ ಮತ್ತು ಅವರ ಅಭ್ಯರ್ಥಿಗಳು ನಮ್ಮ ಗುರಿಯಲ್ಲ ಅನ್ನೋ ಸಂದೇಶ ಬಿಜೆಪಿ ಪಕ್ಷದೊಳಗೆ ರವಾನಿಸಿದೆ ಎನ್ನಲಾಗಿದೆ.

    ರಾಜ ರಾಜೇಶ್ವರಿ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳು ಎರಡೂ ವಿಭಿನ್ನ. ಕಳೆದ ಬಾರಿ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದ ಮುನಿರತ್ನ ಈಗ ಬಿಜೆಪಿ ಅಭ್ಯರ್ಥಿ. ಇತ್ತ ಕಾಂಗ್ರೆಸ್‍ನಿಂದ ಕುಸುಮಾ ಹನುಮಂತ್ರಾಯಪ್ಪ ಮೊದಲ ಬಾರಿಗೆ ಎಲೆಕ್ಷನ್ ಅಖಾಡಕ್ಕೆ ಧುಮುಕಿದ್ದಾರೆ. ಆದ್ರೆ ಇಲ್ಲಿ ಡಿಕೆ ಬ್ರದರ್ಸ್ ಹೆಚ್ಚು ಪ್ರಚಾರದಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳಿವೆ. ಇತ್ತ ಶಿರಾದಲ್ಲಿ ದಿವಂಗತ್ ಸತ್ಯನಾರಾಯಣ್ ಅವರ ಪತ್ನಿ ಅಮ್ಮಜಮ್ಮಾ ಅವರು ಅಖಾಡದಲ್ಲಿದ್ದಾರೆ. ಹಾಗಾಗಿ ಶಿರಾದಲ್ಲಿ ಅತ್ಯಂತ ಎಚ್ಚರಿಕೆಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಯಾವುದೇ ಕಾರಣಕ್ಕಾಗಿ ವಿವಾದಾತ್ಮಕ ಮಾತುಗಳು ಬೇಡ ಎಂದು ಬಿಜೆಪಿ ಪಕ್ಷದ ವರಿಷ್ಠರಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿವೆ.

    ಉಪ ಚುನಾವಣೆಯಲ್ಲಿ ನೇರ ರಾಜಕೀಯ ಅಸ್ತ್ರ ಪ್ರಯೋಗ ಕಾಂಗ್ರೆಸ್ ಮೇಲೆ ಇರಬೇಕು ಎಂದು ಬಿಜೆಪಿ ಮಹಾಪ್ಲ್ಯಾನ್ ಮಾಡಿಕೊಂಡಿದೆ. ಬಿಜೆಪಿಯ ಎರಡು ಕಡೆಯ ಅಸ್ತ್ರಗಳು ವರ್ಕ್ ಔಟ್ ಆಗುತ್ತಾ? ಮತದಾರ ಪ್ರಭು ಯಾರಿಗೆ ಜೈ ಅನ್ನುತ್ತಾನೆ ಎಂಬ ಸತ್ಯ ಫಲಿತಾಂಶದ ದಿನವೇ ತಿಳಿಯಲಿದೆ.

  • ಡಿಕೆಶಿಗೆ ಮೊದಲ ಅಗ್ನಿ ಪರೀಕ್ಷೆಯಲ್ಲಿ ಬಿಗ್ ಶಾಕ್ ಕೊಟ್ಟ ಸಿಬಿಐ

    ಡಿಕೆಶಿಗೆ ಮೊದಲ ಅಗ್ನಿ ಪರೀಕ್ಷೆಯಲ್ಲಿ ಬಿಗ್ ಶಾಕ್ ಕೊಟ್ಟ ಸಿಬಿಐ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದರು. ಆದ್ರೆ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಕಾಂಗ್ರೆಸ್ ಟ್ರಬಲ್ ಶೂಟರ್ ಗೆ ಶಾಕ್ ನೀಡಿದ್ದಾರೆ. ಉಪ ಚುನಾವಣೆ ಹೊಸ್ತಿಲದಲ್ಲಿರುವ ಸಮಯದಲ್ಲಿ ಸಿಬಿಐ ದಾಳಿ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕೈ ಮುಖಂಡರು ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ.

    ಶಿರಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದ ಡಿ.ಕೆ.ಶಿವಕುಮಾರ್ ಇಂದು ಆರ್.ಆರ್.ನಗರದಲ್ಲಿ ಸ್ಪರ್ಧಿಸುವ ಸ್ಪರ್ಧಿಯ ಹೆಸರು ಘೋಷಣೆ ಮಾಡುವದಲ್ಲಿದ್ದರು. ಇಂದು ಅಥವಾ ನಾಳೆ ಅಭ್ಯರ್ಥಿಉ ಹೆಸರು ಘೋಷಣೆ ಮಾಡಿ, ಉಪ ಚುನಾವಣೆ ಅಖಾಡಕ್ಕೆ ಇಳಿಯಲಿದ್ದರು. ಚುನಾವಣೆ ಜೋಶ್ ನಲ್ಲಿದ್ದ ಡಿ.ಕೆ.ಶಿವಕುಮಾರ್ ಗೆ ಸಿಬಿಐ ಉರುಳಿನಿಂದ ಬಚಾವ್ ಆಗಬೇಕಿದೆ.

    https://www.facebook.com/339166656101093/videos/341909803693600

    ತನ್ನದೇ ಕ್ಷೇತ್ರವಾಗಿರುವ ಆರ್.ಆರ್.ನಗರ ಉಳಿಸಿಕೊಳ್ಳಲು ಡಿಕೆ ಬ್ರದರ್ಸ್ ಚುನಾವಣೆ ರಣತಂತ್ರ ರೂಪಿಸಿದ್ದರು. ಇತ್ತ ಜೆಡಿಎಸ್ ತೆಕ್ಕೆಯಲ್ಲಿರುವ ಶಿರಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸಾಂಪ್ರದಾಯಿಕ ಎದುರಾಳಿಗೆ ಸೋಲಿನ ರುಚಿ ತೋರಿಸಲು ಕೆಪಿಸಿಸಿ ಸಾರಥಿಯಾಗಿರುವ ಡಿ.ಕೆ. ಶಿವಕುಮಾರ್ ಪ್ಲಾನ್ ಮಾಡಿಕೊಂಡಿದ್ದರು.

    https://www.facebook.com/339166656101093/videos/324768682143161

  • ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ

    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ

    ಬೆಂಗಳೂರು: ಉಪಚುನಾವಣೆಯ ಸೋಲಿನ ಹೊಣೆ ಹೊತ್ತು ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಜನತಾ ನ್ಯಾಯಾಲಯ ಒಳ್ಳೆಯ ತೀರ್ಪು ನೀಡುತ್ತೆ ಎಂಬ ನಿರೀಕ್ಷೆಗಳಿದ್ದವು. ಉಪ ಚುನಾವಣೆಯಲ್ಲಿಯೂ ಎಲ್ಲ ನಾಯಕರು ಶಕ್ತಿಮೀರಿ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ನಾವು ಗೆಲ್ಲಬೇಕು, ನಮಗೆ ಮೋಸ ಮಾಡಿದವರನ್ನು ಸೋಲಿಸಬೇಕೆಂದು ಎಲ್ಲರೂ ಪ್ರಯತ್ನ ಮಾಡಿದ್ದಾರೆ. ಎಲ್ಲರ ಇಚ್ಛಾನುಸಾರವಾಗಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಆದ್ರೆ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬರಲಿಲ್ಲ. ನಮ್ಮ ಪಕ್ಷಕ್ಕೆ ಮೋಸ ಮಾಡಿದವರು ಗೆದ್ದಾಗ ನೋವು ಆಗುತ್ತದೆ. ಆದ್ರೂ ಗೆದ್ದ ಎಲ್ಲ ಅಭ್ಯರ್ಥಿಗಳಿಗೂ ನಾನು ಶುಭಾಶಯ ತಿಳಿಸುತ್ತೇನೆ ಎಂದರು.

    ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮತದಾರರು ನೀಡಿರುವ ತೀರ್ಪನ್ನು ನಾನು ಒಪ್ಪಿಕೊಂಡಿದ್ದೇನೆ. ಕುದುರೆ ವ್ಯಾಪಾರಕ್ಕೆ ಒಳಗಾಗಿದ್ದವರಿಗೆ ಜನರು ಶಿಕ್ಷೆ ನೀಡುತ್ತಾರೆಂಬ ನಿರೀಕ್ಷೆ ಇತ್ತು. ಇಂದು ನನ್ನ ನಿರೀಕ್ಷೆ ಹುಸಿಯಾಗಿದ್ದು, ಜನಾದೇಶವನ್ನು ಒಪ್ಪಿಕೊಂಡಿದ್ದೇನೆ. ಕಾಂಗ್ರೆಸ್ ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ರಾಜೀನಾಮೆ ಪತ್ರದ ಒಂದು ಪ್ರತಿಯನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಜ್ಯ ಉಸ್ತುವಾರಿ ನಾಯಕ ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ರವಾನಿಸಿದ್ದೇನೆ ಎಂದು ತಿಳಿಸಿದ್ದರು.

  • ಅಭಿವೃದ್ಧಿಯ ಸುವರ್ಣ ಯುಗ ಸ್ಥಾಪನೆಯ ಪರ್ವ ಆರಂಭ: ಜಗ್ಗೇಶ್

    ಅಭಿವೃದ್ಧಿಯ ಸುವರ್ಣ ಯುಗ ಸ್ಥಾಪನೆಯ ಪರ್ವ ಆರಂಭ: ಜಗ್ಗೇಶ್

    ಬೆಂಗಳೂರು: ಇಂದಿನಿಂದ ರಾಷ್ಟ್ರ ಮತ್ತು ರಾಜ್ಯ ಏಕಮೇವ ಸರ್ಕಾರದಲ್ಲಿ ಅಭಿವೃದ್ಧಿಯ ಸುವರ್ಣ ಯುಗ ಸ್ಥಾಪನೆಯ ಪರ್ವ ಆರಂಭವಾಗಿದೆ ಎಂದು ನಟ, ಬಿಜೆಪಿ ಮುಖಂಡ ಜಗ್ಗೇಶ್ ಉಪಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ್ದಾರೆ.

    ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶುಭಾಶಯ ತಿಳಿಸಿರುವ ಜಗ್ಗೇಶ್ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಮಗೆ ಶಕ್ತಿ ನೀಡಿದ ಮತದಾರ ಬಂಧುಗಳಿಗೆ ಧನ್ಯವಾದಗಳು. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಇರೋದರಿಂದ ಅಭಿವೃದ್ಧಿಗಳು ಕೆಲಸಗಳು ವೇಗ ಪಡೆದುಕೊಳ್ಳಲಿವೆ ಎಂದು ಜಗ್ಗೇಶ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    2018ರ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಎಸ್.ಟಿ.ಸೋಮಶೇಖರ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಜಗ್ಗೇಶ್ ಸ್ಪರ್ಧಿಸಿದ್ದರು. ಇಂದು ಅದೇ ಎಸ್.ಟಿ.ಸೋಮಶೇಖರ್ ಅವರಿಗೆ ಕ್ಷೇತ್ರವನ್ನು ಜಗ್ಗೇಶ್ ಬಿಟ್ಟುಕೊಟ್ಟು, ಅವರ ಪರವಾಗಿ ಪ್ರಚಾರ ನಡೆಸಿ ಮತ ಯಾಚಿಸಿದ್ದರು.

  • ಹ್ಯಾಟ್ರಿಕ್ ಗೆಲುವಿನ ಸಂಭ್ರಮದಲ್ಲಿ ಎಸ್.ಟಿ.ಸೋಮಶೇಖರ್

    ಹ್ಯಾಟ್ರಿಕ್ ಗೆಲುವಿನ ಸಂಭ್ರಮದಲ್ಲಿ ಎಸ್.ಟಿ.ಸೋಮಶೇಖರ್

    ಬೆಂಗಳೂರು: ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಕಡೆಗೂ ಗೆಲುವಿನ ನಗೆ ಬೀರಿದ್ದಾರೆ.

    ಯಶವಂತಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ ಸೋಮಶೇಖರ್ 1,44,676 ಮತಗಳನ್ನ ಪಡೆದರು. ಉಪಚುನಾವಣೆಯಲ್ಲಿ ಗೆದ್ದಿರುವ ಯಶವಂತಪುರ ನೂತನ ಶಾಸಕರಾದ ಎಸ್.ಟಿ. ಸೋಮಶೇಖರ್, 2018ರ ಚುನಾವಣೆಗಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸತತ ಮೂರನೇ ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವನ್ನ ಸೋಮಶೇಖರ್ ಸಾಧಿಸಿದರು.

    ಸೋತ ಎರಡನೇ ಸ್ಥಾನದಲ್ಲಿರುವ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ 1,16,990 ಮತಗಳ ಪಡೆದಿದ್ದಾರೆ. ಎಸ್.ಟಿ. ಸೋಮಶೇಖರ್ 27,686 ಮತಗಳ ಅಂತರದಲ್ಲಿ ಗೆಲುವನ್ನ ಸಂಭ್ರಮಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ಪಾಳ್ಯ ಠೇವಣಿ ಕಳೆದುಕೊಂಡು 15,707 ಮತಗಳಿಗೆ ತೃಪ್ತಿ ಪಟ್ಟಿದ್ದಾರೆ. ಇಷ್ಟಲ್ಲದೇ ಉಪಚುನಾವಣೆ ಅಭ್ಯರ್ಥಿಗಳ ಬಗ್ಗೆ ನಿರಾಸೆ ತೋರಿ 2,810 ನೋಟಾ ಮತಗಳು ಚಲಾವಣೆಯಾಗಿದೆ.

  • ಅಂದಿನ ಸಿಎಂ ಜನ್ರ ಮುಂದೆ ಬಂದು ಕಣ್ಣೀರು ಹಾಕ್ತಿದ್ರು: ಪ್ರಧಾನಿ ಮೋದಿ

    ಅಂದಿನ ಸಿಎಂ ಜನ್ರ ಮುಂದೆ ಬಂದು ಕಣ್ಣೀರು ಹಾಕ್ತಿದ್ರು: ಪ್ರಧಾನಿ ಮೋದಿ

    – ಸಿಎಂ ಬಿಎಸ್‍ವೈಗೆ ಮೋದಿ ವಿಶ್

    ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, 12 ಕ್ಷೇತ್ರಗಳು ಕಮಲದ ಪಾಲಾಗಿದೆ. ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಕರ್ನಾಟಕದಲ್ಲಿ ಬಿಜೆಪಿ ಜಯದ ಕುರಿತು ಜಾರ್ಖಂಡ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಒಂದೂವರೆ ವರ್ಷದ ಆಡಳಿತ ನೋಡಿದ್ದರು. ಹಾಗಾಗಿ ಇಂದು ಜನತೆ ಕಮಲದ ಗುರುತಿಗೆ ಮತ ನೀಡುವ ಮೂಲಕ ಉತ್ತರ ನೀಡಿದ್ದಾರೆ ಎಂದರು.

    ಕಾಂಗ್ರೆಸ್ ಮತ್ತು ಜೆಡಿಎಸ್ ರಾತ್ರೊರಾತ್ರಿ ಸರ್ಕಾರ ರಚನೆ ಮಾಡಿ ಕುರ್ಚಿಯ ಮೇಲೆ ಕೂತಿದ್ದರು. ಜನಾದೇಶದ ವಿರುದ್ಧ ಕೆಲಸ ಮಾಡಿದವರಿಗೆ ಜನರು ತಮಗೆ ಸಿಕ್ಕ ಮೊದಲ ಅವಕಾಶದಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ತನ್ನ ಹಿತಕ್ಕಾಗಿ ಮುಖ್ಯಮಂತ್ರಿಯಾಗಿ ಒಬ್ಬರನ್ನು ಮಾಡಿ ಒತ್ತಡ ಹಾಕಲು ಆರಂಭಿಸಿತು. ಕಾಂಗ್ರೆಸ್ ಕೈಗೊಂಬೆಯಾಗಿದ್ದ ಅಂದಿನ ಮುಖ್ಯಮಂತ್ರಿಯನ್ನು ಕಿಡ್ನಾಪ್ ಮಾಡಿತ್ತು. ಮುಖ್ಯಮಂತ್ರಿಯನ್ನ ಅಪಹರಿಸಿದ್ದ ಕಾಂಗ್ರೆಸ್, ದೆಹಲಿಗಾಗಿ ಆ ಕೆಲಸ ಮಾಡಿಕೊಡಿ, ಇದು ಮಾಡಬೇಕೆಂದು ಷರತ್ತುಗಳ ಜೊತೆ ಒತ್ತಡ ಹಾಕುತ್ತಿತ್ತು. ಇದೆಲ್ಲದರಿಂದ ನೊಂದ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಜನರ ಮುಂದೆ ಬಂದು ಕಣ್ಣೀರು ಹಾಕುತ್ತಿದ್ದರು ಎಂದು ತಿಳಿಸಿದರು.

    ಈ ಚುನಾವಣೆಯಲ್ಲಿ ಕಾಂಗ್ರೆಸ್ ಇತರರೊಂದಿಗೆ ತೆರೆಮರೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿತ್ತು. ಈ ರೀತಿಯ ಅನೈತಿಕ ಮೈತ್ರಿಗಳು ನಮಗೆ ಬೇಡವೆಂದು ಕರ್ನಾಟಕ ಜನತೆ ಉತ್ತರ ನೀಡುವ ಮೂಲಕ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಅದೇ ರೀತಿ ಜಾರ್ಖಂಡ್ ನಲ್ಲಿಯೂ ಸುಭದ್ರ ಸರ್ಕಾರಕ್ಕೆ ಕಮಲದ ಗುರುತಿಗೆ ನೀವು ಮತ ನೀಡಬೇಕಿದೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ – ಹುಟ್ಟೂರಿನಲ್ಲಿ ಪಕ್ಷ ಗೆಲ್ಲಿಸಿ ಜೆಡಿಎಸ್ ಕೋಟೆ ಛಿದ್ರಗೊಳಿಸಿದ ಸಿಎಂ

    ಈ ಮಧ್ಯೆ ಬಿಎಸ್‍ವೈಗೆ ದೂರವಾಣಿ ಕರೆ ಮಾಡಿರುವ ಪ್ರಧಾನಿಯವರು, ಆರ್ ಯೂ ನೌ ಹ್ಯಾಪಿ (ಈಗ ನಿಮಗೆ ಖುಚಿಯಾಯ್ತಾ) ಎಂದು ಕೇಳಿ ಶುಭಾಶಯಗಳು ಎಂದು ತಿಳಿಸಿದ್ದಾರೆ. ಈ ವೇಳೆ ಸಿಎಂ ಕೂಡ, ನೌ ಐ ಆ್ಯಮ್ ಹ್ಯಾಪಿ (ಈಗ ನನಗೆ ಖುಷಿಯಾಯ್ತು) ಎಂದು ಹೇಳಿ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೆಡವಲು ಕಾರಣರಾದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ. ಇದರ ಫಲಿತಾಂಶ ಇಂದು ಹೊರ ಬಿದ್ದಿದ್ದು, 12 ಕಡೆಗಳಲ್ಲಿ ಕಮಲ ಅರಳಿದೆ. ಅದರಲ್ಲಿಯೂ ಜೆಡಿಎಸ್ ಭದ್ರ ಕೋಟೆಯಾಗಿದ್ದ ಮಂಡ್ಯದ ಕೆ ಆರ್ ಪೇಟೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಜಯಗಳಿಸಿರುವುದು ಅಚ್ಚರಿ ಮೂಡಿಸಿದೆ. ಹುಣಸೂರು ಹಾಗೂ ಶಿವಾಜಿನಗರದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದು, ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಜಯಗಳಿಸಿದ್ದಾರೆ.

  • 15 ಕ್ಷೇತ್ರಗಳಿಗೆ ಇಂದು ಮತದಾನ- ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ

    15 ಕ್ಷೇತ್ರಗಳಿಗೆ ಇಂದು ಮತದಾನ- ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಅಳಿವು-ಉಳಿವು, ಕಾಂಗ್ರೆಸ್-ಜೆಡಿಎಸ್ ನಾಯಕರ ಮರು ಮೈತ್ರಿ, ಅನರ್ಹರ ಅರ್ಹತೆಯ ಸವಾಲು ಎಲ್ಲವನ್ನೂ ನಿರ್ಣಯಿಸಲಿರೋ ದಿನ ಬಂದೇ ಬಿಟ್ಟಿದೆ. 15 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ. ಹೊಸಕೋಟೆ, ಚಿಕ್ಕಬಳ್ಳಾಪುರ, ಕೆಆರ್ ಪುರ, ಶಿವಾಜಿನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್ ಪೇಟೆ, ಹುಣಸೂರು, ಹಿರೇಕೆರೂರು, ರಾಣೆಬೆನ್ನೂರು, ಹೊಸಪೇಟೆ, ಯಲ್ಲಾಪುರ, ಕಾಗವಾಡ, ಅಥಣಿ, ಗೋಕಾಕ್ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಲಿದೆ.

    ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರ 165 ಅಭ್ಯರ್ಥಿಗಳ ಹಣೆಬರಹ ಇವಿಎಂಗಳಲ್ಲಿ ಅಡಕವಾಗುತ್ತಾ ಹೋಗುತ್ತದೆ. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ.

    15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು 165 ಮಂದಿ ಕಣದಲ್ಲಿದ್ದಾರೆ. ಬೆಂಗಳೂರಿನ ಶಿವಾಜಿನಗರದಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 37,82,681 ಮಂದಿ ಮತದಾರರಿದ್ದು, ಇದರಲ್ಲಿ ಪುರುಷ ಮತದಾರರು 18,52,027 ಮಹಿಳಾ ಮತದಾರರು 19,25,529 ಮಂದಿ ಇದ್ದಾರೆ. 4,185 ಕಡೆಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಸೂಕ್ತ ಭದ್ರತೆಗಾಗಿ 42,509 ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. 11,241 ಮಂದಿ ಪೊಲೀಸ್ ಸಿಬ್ಬಂದಿ, 2,511,900 ಸಿಆರ್‍ಪಿಎಫ್ ಸಿಬ್ಬಂದಿ ಹಾಗೂ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ.

    ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಾಲ್ಕು ಕ್ಷೇತ್ರಗಳಲ್ಲಿ 5,988 ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆ.ಆರ್.ಪುರ ಕ್ಷೇತ್ರಕ್ಕೆ ಐಟಿಐ ವಿದ್ಯಾಮಂದಿರ, ಯಶವಂತಪುರ ಕ್ಷೇತ್ರಕ್ಕೆ ಆರ್.ವಿ. ಎಂಜಿನಿಯರಿಂಗ್ ಕಾಲೇಜು, ಮಹಾಲಕ್ಷ್ಮಿ ಲೇಔಟ್‍ಗೆ ವಿದ್ಯಾವರ್ಧಕ ಸಂಘದ ಹೈಸ್ಕೂಲ್, ಶಿವಾಜಿನಗರ ಕ್ಷೇತ್ರಕ್ಕೆ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ.

    ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,361 ಮತಗಟ್ಟೆಗಳಿವೆ. ಈ ಪೈಕಿ 12 `ಸಖಿ’ ಮತಗಟ್ಟೆ, 4 ಮಾದರಿ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಯಲ್ಲೂ ಮೆಡಿಕಲ್ ಕಿಟ್ ನೀಡಲಾಗಿದೆ. 15 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನಕ್ಕೆ ಅನುಕೂಲವಾಗುವಂತೆ ರಜೆ ಕೂಡ ಘೋಷಣೆ ಮಾಡಲಾಗಿದೆ.

    ಒಟ್ಟಾರೆ ಸಿಎಂ ಯಡಿಯೂರಪ್ಪ ಅವರಿಗೆ ಈ ಉಪಚುನಾವಣೆ ಅಗ್ನಿ ಪರೀಕ್ಷೆಯಾಗಿದ್ದು, ಅನರ್ಹರ ಪರ ತಾವೇ ಖುದ್ದಾಗಿ ಪ್ರಚಾರ ನಡೆಸಿದ್ದಾರೆ. 15 ಕ್ಷೇತ್ರಗಳ ಪೈಕಿ ಸರ್ಕಾರ ಉಳಿಸಿಕೊಳ್ಳಲು 7 ಸ್ಥಾನಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಇತ್ತ ಪ್ರತಿಪಕ್ಷಗಳು ಸರ್ಕಾರ ಪತನವಾಗಲಿದೆ ಎಂದು ಮೈತ್ರಿ ಮಾತುಕತೆಗೆ ನಾಂದಿ ಹಾಡಿವೆ. ಎಲ್ಲಾ ಅನರ್ಹರನ್ನು ಸೋಲಿಸಬೇಕೆಂದು ಕಾಂಗ್ರೆಸ್ ಶಪಥ ಮಾಡಿದೆ. 3 ಕ್ಷೇತ್ರಗಳಲ್ಲಿ ಜೆಡಿಎಸ್ ಉಳಿಸಿಕೊಳ್ಳಲು ದಳಪತಿಗಳು ಹೋರಾಟ ಮಾಡಿದ್ದಾರೆ. ಈ ಎಲ್ಲದಕ್ಕೂ ತೆರೆಬಿದ್ದಿದ್ದು, ಮತದಾರರು ಇಂದು ಅಂತಿಮ ತೀರ್ಪು ನೀಡಲಿದ್ದಾರೆ. ಡಿಸೆಂಬರ್ 9 ರಂದು 15 ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಈಗಾಗಲೇ ಢವಢವ ಶುರುವಾಗಿದೆ.