Tag: ಕರ್ನಾಟಕ ಉಪಚುನಾವಣೆ ಫಲಿತಾಂಶ

  • ಉಪ ಚುನಾವಣೆ ಬಳಿಕ ಮೂರು ಪಕ್ಷಗಳ ಸಂಖ್ಯಾಬಲ

    ಉಪ ಚುನಾವಣೆ ಬಳಿಕ ಮೂರು ಪಕ್ಷಗಳ ಸಂಖ್ಯಾಬಲ

    ಬೆಂಗಳೂರು: ದೇಶದ ಗಮನ ಸೆಳೆದಿದ್ದ ಕರ್ನಾಟಕದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದೆ. 15 ಕ್ಷೇತ್ರಗಳಲ್ಲಿ ಬಿಜೆಪಿ ಏಕಮೇವಾದ್ವಿತೀಯ ಸಾಧನೆ ಮಾಡಿದ್ದು 12 ಕ್ಷೇತ್ರಗಳಲ್ಲಿ ಅರಳಿದೆ. ಈ ಮೂಲಕ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರದ ಮೇಲಿದ್ದ ಆತಂಕದ ಕಾರ್ಮೋಡ ದೂರ ಸರಿದಿದೆ.

    ಮೂರೂವರೆ ವರ್ಷಗಳ ಕಾಲ ಯಡಿಯೂರಪ್ಪ ಅವರು ಅಬಾಧಿತರಾಗಿ ತಮ್ಮ ಅವಧಿಯನ್ನು ಪೂರೈಸಲಿದ್ದಾರೆ. ಜೊತೆಗೆ ನ್ಯಾಯಾಂಗ-ಶಾಸಕಾಂಗದ ಸಮರದಲ್ಲಿ ಅನರ್ಹರಾಗಿದ್ದ 12 ಜನ ಮತ್ತೆ ಗೆದ್ದು ಬಂದಿದ್ದಾರೆ. ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಇದನ್ನೂ ಓದಿ: ಉಪಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಧೂಳಿಪಟ – ಅರಳಿದ ಕಮಲ

    ಬಿಎಸ್‍ವೈ ಸರ್ಕಾರದ ಸಂಖ್ಯಾಬಲ (ಮ್ಯಾಜಿಕ್ ನಂಬರ್ 112)
    ಸದನದ ಬಲ- 222 ( ಎರಡು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಬೇಕಿದೆ)
    ಬಿಜೆಪಿ- 117
    ಪಕ್ಷೇತರ – 1 (ನಾಗೇಶ್)
    ಎನ್ ಮಹೇಶ್- 1 (ಬಿಎಸ್‍ಪಿ ಉಚ್ಛಾಟಿತ ಶಾಸಕ)
    ಒಟ್ಟು – 119

    ವಿಪಕ್ಷಗಳ ಬಲ
    ಕಾಂಗ್ರೆಸ್ – 68
    ಜೆಡಿಎಸ್ -34
    ಪಕ್ಷೇತರ – 1 (ಶರತ್ ಬಚ್ಚೇಗೌಡ)
    ಒಟ್ಟು – 103

  • ಹುಟ್ಟೂರಲ್ಲಿ ಕಮಲ ಅರಳಿದ್ದು ಖುಷಿಯಾಗಿದೆ, ಗೆದ್ದ ಎಲ್ಲರಿಗೂ ಮಂತ್ರಿಗಿರಿ – ಸಿಎಂ

    ಹುಟ್ಟೂರಲ್ಲಿ ಕಮಲ ಅರಳಿದ್ದು ಖುಷಿಯಾಗಿದೆ, ಗೆದ್ದ ಎಲ್ಲರಿಗೂ ಮಂತ್ರಿಗಿರಿ – ಸಿಎಂ

    ಬೆಂಗಳೂರು: ಕೆ.ಆರ್ ಪೇಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ನನಗೆ ತುಂಬಾ ಖುಷಿಯಾಗಿದೆ. ಗೆಲುವು ಸಾಧಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಭರವಸೆ ಕೊಟ್ಟಂತೆ ಸಚಿವ ಸ್ಥಾನ ನೀಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಗೆಲುವಿನ ಸಂತೋಷ ಹಂಚಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈವರೆಗೆ ಮಂಡ್ಯದಲ್ಲಿ ಬಿಜೆಪಿ ಗೆದ್ದಿರಲಿಲ್ಲ. ಆದರೆ ಈ ಬಾರಿ ನಾರಾಯಣಗೌಡರು ಕೆ.ಆರ್ ಪೇಟೆಯಿಂದ ಗೆಲುವು ಸಾಧಿಸಿದ್ದಾರೆ. ನನ್ನ ಹುಟ್ಟೂರಲ್ಲಿ ಕಮಲ ಅರಳಿದ್ದು ನನಗೆ ತುಂಬಾ ಖುಷಿಯಾಗಿದೆ. ಅಲ್ಲದೆ ಸಂಘಟಿತವಾಗಿ ಈ ಗೆಲುವು ಸಾಧಿಸಲು ಕೆಲಸ ಮಾಡಿದ ನಮ್ಮ ಕಾರ್ಯಕರ್ತರಿಗೆ, ರಾಜ್ಯಾಧ್ಯಕ್ಷರಿಗೆ ಎಲ್ಲಾ ಬೆಂಬಲಿಗರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

    15ರಲ್ಲಿ 12 ಕ್ಷೇತ್ರಗಳಲ್ಲಿ ಬಹಳ ದೊಡ್ಡ ಅಂತರದಲ್ಲಿ ಗೆಲ್ಲುವಂತೆ ಮತದಾರರು ಆಶೀರ್ವಾದ ಮಾಡಿದ್ದಾರೆ. ನಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಹಗಲು, ರಾತ್ರಿ ಕೆಲಸ ಮಾಡಿದ್ದಾರೆ. ಕಾರ್ಯಕರ್ತರು, ಮುಖಂಡರು ಕೆಲಸ ಮಾಡಿದ್ದಾರೆ ಅವರೆಲ್ಲರ ಪರಿಶ್ರಮದಿಂದ ಇಂದು ನಾವು 15ರಲ್ಲಿ 12 ಸೀಟು ಗೆದ್ದಿದ್ದೇವೆ ಎಂದು ಹೇಳಿದರು.

    ಮುಂದೆ ಬಹಳ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಅಸ್ತಿರತೆ ಇದೆ ಎಂದು ಗೊಂದಲ ಉಂಟುಮಾಡುವ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡುತ್ತಿದ್ದವು. ಅವರಿಗೆ ನಾನು ವಿನಂತಿ ಮಾಡುತ್ತೇನೆ, ಇನ್ನಾದರೂ ಮೂರುವರೆ ವರ್ಷ ನಮಗೆ ಸಹಕರಿಸಿ, ಅಭಿವೃದ್ಧಿ ಪರ ಸರ್ಕಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರಲ್ಲಿ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ನಾನು ಕಾಂಗ್ರೆಸ್, ಜೆಡಿಎಸ್ ಬಗ್ಗೆ ಟೀಕೆ, ಟಿಪ್ಪಣಿ ಮಾಡಲು ಇಷ್ಟಪಡಲ್ಲ. ಮತದಾರ ತನ್ನ ಅಭಿಪ್ರಾಯ ವ್ಯಕ್ತಪಡಿಸಾಗಿದೆ. ಫಲಿತಾಂಶ ಬಂದಾಗಿದೆ. ರಾಜ್ಯದ ಅಭಿವೃದ್ಧಿ ಕಡೆ ಗಮನಕೊಡುವುದು ಮಾತ್ರ ಇನ್ನು ಉಳಿದಿದೆ. ನಾನಂತು ಈ ಮೂರುವರೆ ವರ್ಷ ಸಚಿವರು, ಶಾಸಕರ ಬೆಂಬಲದಿಂದ ಒಳ್ಳೆಯ ಆಡಳಿತ ನಡೆಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ಬಿಜೆಪಿ 150 ಸೀಟು ಗೆಲ್ಲುವ ರೀತಿ ಕೆಲಸ ಮಾಡುತ್ತೇನೆ. ಈ ಮೂಲಕ ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

    ಈಗಾಗಲೇ ಲೋಕಸಭೆಯಲ್ಲಿ 25 ಸ್ಥಾನವನ್ನು ಗೆದ್ದಿದ್ದೇವೆ. ಅಲ್ಲದೆ ಉಪಚುನಾವಣೆ ಗೆಲುವು ಕೂಡ ನಮ್ಮ ನಾಯರಿಕೆ ಖುಷಿತಂದಿದೆ ಎಂದು ನಾನು ಭಾವಿಸಿದ್ದೇನೆ. ಇನ್ನು ಮೂನಾಲ್ಕು ದಿನಗಳಲ್ಲಿ ದೆಹಲಿಗೆ ಹೋಗಿ ಇಲ್ಲಿನ ವಿವರಗಳನ್ನು ಅವರಿಗೆ ಮೋದಿ, ಶಾ ಅವರಿಗೆ ತಿಳಿಸುತ್ತೇನೆ. ನಮಗಾಗಿ ರಾಜಿನಾಮೆ ಕೊಟ್ಟವರಿಗೆ ನಾವೇನು ಭರವಸೆ ನೀಡಿದ್ದೇವೆ ಅದರಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಗೆಲುವು ಸಾಧಿಸಿದ ಎಲ್ಲಾ ನನ್ನ ಸ್ನೇಹಿತರಿಗೆ ಸಚಿವ ಸ್ಥಾನವನ್ನು ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    ರಾಜ್ಯದಲ್ಲಿ ಏನೆಲ್ಲಾ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಬಗ್ಗೆ ಕೇಂದ್ರಕ್ಕೂ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇವೆ ಎಂದರು.

  • ಸಿದ್ದು ಅಭಿಮಾನಿಗಳಿಗೆ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ : ಸಿಟಿ ರವಿ

    ಸಿದ್ದು ಅಭಿಮಾನಿಗಳಿಗೆ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ : ಸಿಟಿ ರವಿ

    ಬೆಂಗಳೂರು: ಅಭಿಮಾನಿಗಳ ದೃಷ್ಟಿಯಲ್ಲಿ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ ಎಂದು ಸಚಿವ ಸಿಟಿ ರವಿ ಅವರು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಟಾಂಗ್ ಕೊಟ್ಟಿದ್ದಾರೆ.

    ಇಂದು ಉಪಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಮತ ಏಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ 11 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, 1 ಕ್ಷೇತ್ರದಲ್ಲಿ ಭಾರೀ ಅಂತರದಲ್ಲಿ ಗೆಲವು ಸಾಧಿಸಿದೆ. ಇದೇ ಬೆನ್ನಲ್ಲೇ ಸಿಟಿ ರವಿ ಅವರು ಟ್ವೀಟ್ ಮಾಡಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ. ಪ್ರಚಾರದ ವೇಳೆ ಉಪಚುನಾವಣೆಯಲ್ಲಿ ಗೆಲವು ನಮ್ಮದೇ ಎಂದು ಹೇಳುತ್ತಿದ್ದ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿರುವ ಹಿನ್ನೆಲೆ ಅಭಿಮಾನಿಗಳ ದೃಷ್ಟಿಯಲ್ಲಿ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ ಎಂದು ಸಿಟಿ ರವಿ ಟೀಕಿಸಿದ್ದಾರೆ.

    ಇತ್ತೀಚೆಗಷ್ಟೇ ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ `ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು’ ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲೇ ಇದ್ದ ಕುಡುಕನೋರ್ವ `ಹೌದು ಹುಲಿಯಾ’ ಎಂದಿದ್ದರು. ಸದ್ಯ ಕುಡುಕನ `ಹೌದು ಹುಲಿಯಾ’ ಡೈಲಾಗ್ ಈಗ ಸಖತ್ ಟ್ರೆಂಡ್ ಆಗಿದೆ.

    ಇದೇ ಡೈಲಾಗ್ ಇಟ್ಟುಕೊಂಡು ಸಿಟಿ ರವಿ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಟ್ವೀಟ್ ಮಾಡಿ ಸಚಿವರು ಟಾಂಗ್ ಕೊಟ್ಟಿದ್ದಾರೆ.

  • ಕೆಆರ್ ಪೇಟೆಯಲ್ಲಿ ಹಾವು ಏಣಿ ಆಟ – ನಾರಾಯಣ ಗೌಡಗೆ ಅಲ್ಪ ಮುನ್ನಡೆ

    ಕೆಆರ್ ಪೇಟೆಯಲ್ಲಿ ಹಾವು ಏಣಿ ಆಟ – ನಾರಾಯಣ ಗೌಡಗೆ ಅಲ್ಪ ಮುನ್ನಡೆ

    ಮಂಡ್ಯ: ಜೆಡಿಎಸ್ ಕೋಟೆಯಾಗಿರುವ ಕೆ.ಆರ್ ಪೇಟೆಯಲ್ಲಿ ಹಾವು ಏಣಿ ಆಟ ಆರಂಭವಾಗಿದೆ.

    ಆರಂಭದಲ್ಲಿ ಒಂದು ಗಂಟೆ ಜೆಡಿಎಸ್ ದೇವರಾಜ್ ಮುನ್ನಡೆ ಸಾಧಿಸಿದ್ದರೆ ನಂತರ ಬಿಜೆಪಿಯ ನಾರಾಯಣ ಗೌಡ ಮುನ್ನಡೆ ಸಾಧಿಸಿದ್ದಾರೆ.

    ಐದನೇ ಸುತ್ತಿನಲ್ಲಿ ನಾರಾಯಣ ಗೌಡ 295 ಮತಗಳ ಮುನ್ನಡೆ ಸಾಧಿಸಿದ್ದರು. ದೇವರಾಜ್ 15,607 ಮತಗಳನ್ನು ಪಡೆದರೆ ಬಿಜೆಪಿಯ ನಾರಾಯಣ ಗೌಡ 15,902 ಮತಗಳನ್ನು ಪಡೆದರೆ ಕಾಂಗ್ರೆಸ್ಸಿನ ಚಂದ್ರಶೇಖರ್ 10,271 ಮತಗಳನ್ನು ಪಡೆದಿದ್ದರು.

    ಏಳನೇ ಸುತ್ತಿನಲ್ಲಿ ನಾರಾಯಣ ಗೌಡ 1,403 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ 23,352 ಮತಗಳನ್ನು ಪಡೆದರೆ ಜೆಡಿಎಸ್ 21,949 ಮತಗಳನ್ನು ಪಡೆದಿದೆ. ಕಾಂಗ್ರೆಸ್ 16,086 ಮತಗಳನ್ನು ಪಡೆದಿದೆ.

    ಯಲ್ಲಾಪುರ, ಕಾಗವಾಡ, ಅಥಣಿ, ಗೋಕಾಕ್, ಕೆಆರ್ ಪುರಂ, ಚಿಕ್ಕಬಳ್ಳಾಪುರ, ಹಿರೇಕೆರೂರು, ಮಹಾಲಕ್ಷ್ಮಿ ಲೇಔಟ್, ರಾಣೇಬೆನ್ನೂರು, ಕೆಆರ್ ಪೇಟೆ, ವಿಜಯನಗರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

    ಶಿವಾಜಿನಗರ ಮತ್ತು ಹುಣಸೂರಿನಲ್ಲಿ ಕಾಂಗ್ರೆಸ್, ಯಶವಂತಪುರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರೆ, ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮುನ್ನಡೆ ಸಾಧಿಸಿದ್ದಾರೆ.