Tag: ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ

  • ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ- ಶಿವಣ್ಣ, ರಿಷಬ್ ಶೆಟ್ಟಿ ಬೆಂಬಲ

    ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ- ಶಿವಣ್ಣ, ರಿಷಬ್ ಶೆಟ್ಟಿ ಬೆಂಬಲ

    ಬೆಂಗಳೂರು: ಕರ್ನಾಟಕದಲ್ಲಿ ಮೊದಲು ಕನ್ನಡಿಗರಿಗೆ ಉದ್ಯೋಗ ಕೊಡಿ ಎಂಬ ಅಭಿಯಾನ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದ್ದು, ಈ ಕಾರ್ಯಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಿಷಬ್ ಶೆಟ್ಟಿ ಸೇರಿದಂತೆ ಸ್ಯಾಂಡಲ್ ವುಡ್ ಕೈ ಜೋಡಿಸಿದೆ.

    ಈ ಸಂಬಂಧ ಮೊಬೈಲ್ ವಿಡಿಯೋದಲ್ಲಿ ಮಾತನಾಡಿರುವ ಶಿವಣ್ಣ, ದಯವಿಟ್ಟು ಕನ್ನಡಿಗರಿಗೆ ಮೊದಲು ಆದ್ಯತೆ ಕೊಡಿ. ಆ ಬಳಿಕ ಇತರರಿಗೆ ಉದ್ಯೋಗ ನೀಡಿ ಎಂದು ಶಿವರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

    ಶಿವಣ್ಣ ಹೇಳಿದ್ದೇನು?:
    ಕರ್ನಾಟಕ ಎಂದಾಕ್ಷಣ ಮೊದಲು ಕನ್ನಡಿಗರಿಗೆ ಆದ್ಯತೆ ನೀಡಬೇಕು. ಭಾಷೆ, ನೀರು ಅಥವಾ ಉದ್ಯೋಗ ಹೀಗೆ ಯಾವುದೇ ಇರಲಿ, ಅಲ್ಲಿ ಮೊದಲು ಕನ್ನಡಿಗರಿಗೆ ಅವಕಾಶಗಳನ್ನು ನೀಡಬೇಕು. ಇದು ಎಲ್ಲರ ಕರ್ತವ್ಯವಾಗಿದೆ ಎಂದರು.

    ಇದೇ ತಿಂಗಳ 14, 15ಕ್ಕೆ ಉಪವಾಸ ಸತ್ಯಾಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅದು ಯಶಸ್ವಿಯಾಗಲಿ. ಅದಕ್ಕೆ ನನ್ನ ಬೆಂಬಲ ಇದ್ದೇ ಇದೆ. ಉದ್ಯೋಗಕ್ಕಾಗಿ ಮಾಡುತ್ತಿರುವ ಈ ಕಾರ್ಯಕ್ರಮ ಒಳ್ಳೆಯ ಮುಂದುವರಿಕೆಯಾಗಿದೆ. ಖಂಡಿತಾ ಇದು ಯಶಸ್ವಿಯಾಗುತ್ತದೆ. ದಯವಿಟ್ಟು ಕನ್ನಡದವರಿಗೆ ಮೊದಲ ಆದ್ಯತೆ ಕೊಡಿ ಎಂದು ಇದೇ ವೇಳೆ ಶಿವಣ್ಣ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಹಾಗಂತ ಬೇರೆಯವರಿಗೆ ಕೊಡಬೇಡಿ ಎಂದು ನಾನು ಹೇಳುತ್ತಿಲ್ಲ. ಅವರಿಗೂ ಉದ್ಯೋಗವನ್ನು ನೀಡಿ. ಆದರೆ ಕನ್ನಡಿಗರಿಗೆ ಮೊದಲು ಕೊಡಿ ಎಂದು ಕೇಳಿಕೊಂಡರು.

    ರಿಷಬ್ ಶೆಟ್ಟಿ ಬೆಂಬಲ:
    ಕರ್ನಾಟಕದ ಉದೋಗ ಕನ್ನಡಿಗರಿಗೆ ಇದು ಬಹುವರ್ಷದ ಕನ್ನಡಿಗರ ಬೇಡಿಕೆಯಾಗಿದೆ. ಈ ಸಂಬಂಧ ಇದೇ 14 ಮತ್ತು 15ರಂದು ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ನಾನು ಬೆಂಬಲ ನೀಡುತ್ತಿದ್ದೇನೆ.

    ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಈ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಬೇಕು ಎಂದರು.

    ಇತ್ತೀಚೆಗಷ್ಟೇ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಮೀಸಲಾಗಬೇಕು ಎಂದು ಒತ್ತಾಯಿಸಿ ರಾಜ್ಯದ ನಾಲ್ಕು ಸಂಸದರು ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರೂ, ಅವರ ಸರ್ಕಾರ ಪತನವಾಯಿತು. ಬಳಿಕ ಮತ್ತೆ ಆಗಸ್ಟ್ 10ರಂದು ಟ್ವಿಟರ್ ಅಭಿಯಾನ ಕೂಡ ನಡೆಸಲಾಯಿತು. ಈ ವೇಳೆ ಸಿಎಂ ಯಡಿಯೂರಪ್ಪನವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ.

    https://www.instagram.com/p/B1HOiXiHRBs/