Tag: ಕರಾವಳಿ ಭಾಗ

  • ಎರಡು ದಿನ ಕರ್ನಾಟಕದಲ್ಲಿ ಮಹಾ ಮಳೆ – ಹವಾಮಾನ ಇಲಾಖೆಯಿಂದ ಎಚ್ಚರಿಕೆ

    ಎರಡು ದಿನ ಕರ್ನಾಟಕದಲ್ಲಿ ಮಹಾ ಮಳೆ – ಹವಾಮಾನ ಇಲಾಖೆಯಿಂದ ಎಚ್ಚರಿಕೆ

    ಬೆಂಗಳೂರು: ಮುಂದಿನ ಎರಡು ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಈಗಾಗಲೇ ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ ಮತ್ತು ಬಳ್ಳಾರಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಮಹಾ ಮಳೆಗೆ ಹಲವಾರು ರಸ್ತೆಗಳು ಕೊಚ್ಚಿ ಹೋಗಿವೆ. ಸೇತುವೆಗಳು ಮುಳುಗಡೆಯಾಗಿವೆ. ಅಪಾರ ಪ್ರಮಾಣದ ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಇದರ ನಡುವೆ ಮತ್ತೆ ಮಹಾಮಳೆಯಾಗುವ ಸೂಚನೆಯನ್ನು ಇಲಾಖೆ ನೀಡಿದೆ.

    ನಾಳೆ ಮತ್ತು ನಾಡಿದ್ದು, ಕರ್ನಾಟಕದಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈಗ ಮತ್ತೆ ಕರಾವಳಿ ಭಾಗ, ಬಳ್ಳಾರಿ, ಧಾರವಾಡ ಮತ್ತು ಚಿಕ್ಕಮಗಳೂರಿನಲ್ಲಿ ಮಳೆಯಾಗಲಿದ್ದು, ಈ ಜಿಲ್ಲೆಗಳಿಗೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಈಗಾಗಲೇ ಸುರಿಯುತ್ತಿರುವ ಮಳೆಗೆ ಕಲಬುರಗಿಯ ಅಫಜಲಪುರ, ಆಳಂದ, ಚಿಂಚೋಳಿಯ ಹಲವು ಗ್ರಾಮಗಳು ಜಲಾವೃತವಾಗಿವೆ. ಕಾಳಗಿ ತಾಲೂಕಿನ ನೀಲಕಂಠೇಶ್ವರ ದೇಗುಲ ಮುಳುಗಿದೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಸಹ ಸಂಪೂರ್ಣ ಜಲಾವೃತವಾಗಿದೆ. ಕಾಗಿಣಾ ನದಿ ಅಪಾಯಮಟ್ಟ ಮೀರಿದೆ. ಕಲಬುರಗಿ-ಸೇಡಂ ರಸ್ತೆ ಸಂಚಾರ ಸ್ಥಗಿತವಾಗಿದೆ.

    ಅತ್ತ ಗಡಿಜಿಲ್ಲೆ ಬೀದರಿನ ಔರಾದ್, ಬಸವಕಲ್ಯಾಣ ತಾಲೂಕಿನ ಹಲವು ಗ್ರಾಮಗಳು ಜಲಾವೃತವಾಗಿವೆ. ಭಾಲ್ಕಿ ತಾಲೂಕಿನ ಜಮಖಂಡಿ ಗ್ರಾಮದ ಬಳಿ ಸೇತುವೆ ದಾಟುವಾಗ ಕೋಳಿ ಆಹಾರ ಸಾಗಿಸುತ್ತಿದ್ದ ಲಾರಿ ನೀರು ಪಾಲಾಗಿದೆ. ರಾಯಚೂರು ಜಿಲ್ಲೆ ಇಡಪನೂರು, ಮಿಡಗಲದಿನ್ನಿ ಗ್ರಾಮ ಮುಳುಗಡೆಯಾಗಿದೆ. ಸತತ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇತ್ತ ಯಾದಗಿರಿ ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ಮುಂಗಿ ಹಳ್ಳ ಉಕ್ಕಿ ಹರಿಯುತ್ತಿದ್ದು, ಬಾಚ್ವಾರ ಗ್ರಾಮದ ಸಂಪರ್ಕ ಕಡಿತವಾಗಿದೆ.

  • ಕ್ಯಾರ್, ಮಹಾ ನಂತರ ಕರುನಾಡಿಗೆ ಅಪ್ಪಳಿಸಲಿವೆ ಇನ್ನೆರಡು ಚಂಡಮಾರುತಗಳು

    ಕ್ಯಾರ್, ಮಹಾ ನಂತರ ಕರುನಾಡಿಗೆ ಅಪ್ಪಳಿಸಲಿವೆ ಇನ್ನೆರಡು ಚಂಡಮಾರುತಗಳು

    ಬೆಂಗಳೂರು: ಕ್ಯಾರ್, ಮಹಾ ಎರಡು ಚಂಡಮಾರುತದ ಅಬ್ಬರಕ್ಕೆ ಕರುನಾಡಿನ ಕರಾವಳಿ ಸೇರಿದಂತೆ ಬಹುತೇಕ ಭಾಗ ನಲುಗಿ ಹೋಗಿದೆ. ಈಗಾಗಲೇ ಮಹಾ ಅಬ್ಬರಕ್ಕೆ ಕರಾವಳಿ ಭಾಗದಲ್ಲಿ ಮಳೆ ಜೊತೆ ರಕ್ಕಸ ಅಲೆ ಸೃಷ್ಟಿಯಾಗಿದೆ. ಈ ಮಧ್ಯೆ ಇನ್ನೆರಡು ಚಂಡಮಾರುತದ ಎಚ್ಚರಿಕೆಯನ್ನು ಭೂಗರ್ಭ ವಿಜ್ಞಾನಿಗಳು ಕೊಟ್ಟಿದ್ದಾರೆ.

    ಕ್ಯಾರ್ ಚಂಡಮಾರುತದ ಹೊಡೆತ, ಮಹಾ ಚಂಡಮಾರುತದ ಘರ್ಜನೆ ಕರಾವಳಿಯನ್ನು ಹಿಂಡಿ ಹಿಪ್ಪೆ ಮಾಡಿದೆ. ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ನಾಲ್ಕು ದಿನ ಹೈ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

    ಇದರ ನಡುವೆ ಇನ್ನೆರಡು ಸದ್ದಿಲ್ಲದೇ ಚಂಡಮಾರುತ ಬಂಗಾಳಕೊಲ್ಲಿಯ ಗರ್ಭದಲ್ಲಿ ಪುಟಿದೇಳಲು ತಯಾರಾಗಿದೆ. ಹೌದು ನವೆಂಬರ್ ತಿಂಗಳಲ್ಲಿ ಇನ್ನೆರಡು ಚಂಡಮಾರುತ ಫಾರ್ಮ್ ಆಗಲಿದ್ದು, ಮೊದಲ ವಾರದಲ್ಲಿಯೇ ಕರುನಾಡನ್ನು ಅಲ್ಲೋಲಕಲ್ಲೋಲ ಮಾಡುವ ಎಚ್ಚರಿಕೆಯನ್ನು ಭೂಗರ್ಭ ತಜ್ಞರು ಕೊಟ್ಟಿದ್ದಾರೆ.

    ಬಂಗಾಳಕೊಲ್ಲಿಯ ಸಾಗರದೊಳಗಿನ ಜ್ವಾಲಮುಖಿ ಸ್ಫೋಟದಿಂದ ಈ ಚಂಡಮಾರುತ ಸೃಷ್ಟಿಯಾಗಲಿದ್ದು ಜಲಪ್ರವಾಹ ತರುವ ಸಾಧ್ಯತೆ ಇದೆ. ಚಂಡಮಾರುತದ ಪರಿಣಾಮ ಬೆಂಗಳೂರು, ಮೈಸೂರು, ಕೋಲಾರ ರಾಮನಗರ ಭಾಗಕ್ಕೆ ಹೆಚ್ಚು ಹಾನಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ನವೆಂಬರ್ ತಿಂಗಳು ಚಿಲ್ಡ್ ವೆದರ್ ಇರುತ್ತೆ ಅಂತೆಲ್ಲ ಅಂದುಕೊಂಡಿದ್ದ ಕರುನಾಡಿಗೆ ಈಗ ಜಲರಕ್ಕಸನ ಕಾಟದ ಮುನ್ಸೂಚನೆ ಸಿಕ್ಕಿದ್ದು, ಭೀತಿಯ ವಾತವರಣ ಸೃಷ್ಟಿಯಾಗಿದೆ.