Tag: ಕರಡು ಮಸೂದೆ 2017

  • ಮೋದಿಯಂತಹ ಸಹೋದರ ಸಿಕ್ಕಿದ್ರೆ ನೀವು ಚಿಂತೆ ಮಾಡೋ ಅಗತ್ಯವಿಲ್ಲ: ಬಿಜೆಪಿ

    ಮೋದಿಯಂತಹ ಸಹೋದರ ಸಿಕ್ಕಿದ್ರೆ ನೀವು ಚಿಂತೆ ಮಾಡೋ ಅಗತ್ಯವಿಲ್ಲ: ಬಿಜೆಪಿ

    ನವದೆಹಲಿ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗುರುವಾರದ ಲೋಕಸಭೆ ಕಲಾಪದಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಿದ್ದಾರೆ. ಈ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿಯ ಮೀನಾಕ್ಷಿ ಲೇಖಿ, ಪ್ರಧಾನಿ ನರೇಂದ್ರ ಮೋದಿ ಅವರಂತಹ ಸಹೋದರ ಮುಸ್ಲಿಂ ಮಹಿಳೆಯರಿಗೆ ಸಿಕ್ಕಿದರೆ ಅವರು ಚಿಂತೆ ಪಡುವ ಅಗತ್ಯವೇ ಇಲ್ಲ ಎಂದು ಹೇಳಿದರು.

    ಈ ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾಗಿರುವುದು ಮಹಿಳೆಯರು. ಹಿಂದಿನಿಂದಲೂ ಹಿಂಸಿಸಿ ಮಹಿಳೆಯನ್ನು ತುಳಿಯಲಾಗುತ್ತಿದೆ. ಈಗ ಈ ಹಿಂಸಾಚಾರಗಳಿಗೆ ಕಡಿವಾಣ ಹಾಕುವ ಸಮಯ ಬಂದಿದ್ದು ನಾವೆಲ್ಲ ಆಲೋಚಿಸಬೇಕಿದೆ ಎಂದು ಹೇಳಿದರು.

    ಮುಸ್ಲಿಂ ಮಹಿಳೆಯರ ಸಮಾನ ಹಕ್ಕು ಮತ್ತು ನ್ಯಾಯಕ್ಕಾಗಿ ಕಾನೂನು ತರಲಾಗುತ್ತದೆ ಹೊರತು ಪ್ರಾರ್ಥನೆ, ಧರ್ಮಕ್ಕೆ ಸಂಬಂಧಿಸಿಲ್ಲ ಎಂದು ಕೇಂದ್ರಸರ್ಕಾರದ ಮಸೂದೆಯನ್ನು ರವಿಶಂಕರ್ ಪ್ರಸಾದ್ ಸಮರ್ಥಿಸಿಕೊಂಡರು.

    ಮಸೂದೆಯಲ್ಲಿ ಏನಿದೆ?
    ಕರಡು ಮಸೂದೆಯಲ್ಲಿ ತ್ರಿವಳಿ ತಲಾಖ್ ನೀಡಿದರೆ ಆ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬೇಕೆಂಬ ಅಂಶವಿದೆ. ತ್ರಿವಳಿ ತಲಾಖ್ ಅಥವಾ ತಲಾಕ್ ಇ ಬಿದ್ದತ್ ಅನ್ನು ಕಾಗ್ನಿಸೆಬಲ್ ಅಪರಾಧ ಎಂದು ಪರಿಗಣಿಸಬೇಕು. ಅಷ್ಟೇ ಅಲ್ಲದೇ ಜಾಮೀನು ನೀಡಬಾರದು. ಜೈಲು ಶಿಕ್ಷೆಯ ಜೊತೆ ತಲಾಖ್ ನೀಡಿದ ಪತಿಗೆ ದಂಡ ವಿಧಿಸುವ ಅವಕಾಶ ಕೂಡ ಇದ್ದು, ಸಂಬಂಧ ನ್ಯಾಯಾಧಿಶರು ದಂಡದ ಪ್ರಮಾಣವನ್ನು ನಿರ್ಧರಿಸಲು ಅನುಮತಿ ನೀಡಲಾಗಿದೆ.

    ಕರುಡು ಮಸೂದೆಯ ಪ್ರಕಾರ ಬಾಯಿ ಮಾತು, ಬರವಣಿಗೆ ಅಥವಾ ಯಾವುದೇ ಎಲೆಕ್ಟ್ರಾನಿಕ್ ಅಂದರೆ ಇಮೇಲ್, ಎಸ್‍ಎಂಎಸ್, ವಾಟ್ಸಪ್ ಮೂಲಕ ತಲಾಖ್ ಹೇಳಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ.

    ಇದೇ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ರೂಪಿಸುವಂತೆ ಕೇಂದ್ರಕ್ಕೆ ಆದೇಶಿಸಿತ್ತು. ಈ ಆದೇಶದ ಅನ್ವಯ ಕೇಂದ್ರ ಸರ್ಕಾರ ಮುಸ್ಲಿಂ ಮಹಿಳೆಯರ ಮದುವೆ, ಹಕ್ಕುಗಳ ರಕ್ಷಣೆಯ ಕರಡು ಮಸೂದೆ 2017ನ್ನು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ನೇತೃತ್ವದ ಆಂತರಿಕ ಸಚಿವಾಲಯ ಸಿದ್ಧಪಡಿಸಿತ್ತು.