Tag: ಕರಡಿ ದಾಳಿ

  • ಕಾಡಾನೆ, ಕರಡಿ ದಾಳಿ- ಕಂಗೆಟ್ಟ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ರೈತರು

    ಕಾಡಾನೆ, ಕರಡಿ ದಾಳಿ- ಕಂಗೆಟ್ಟ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ರೈತರು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬನವಾಸಿ ಭಾಗದಲ್ಲಿ ಆನೆಗಳ ದಾಳಿಯಿಂದ ರೈತರು ಕಂಗೆಟ್ಟರೆ, ಇತ್ತ ಜೋಯಿಡಾ ದಾಂಡೇಲಿ ಭಾಗದಲ್ಲಿ ಕರಡಿ ದಾಳಿಯಿಂದ ಜನ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಕಳೆದೆರಡು ದಿನಗಳಿಂದ ಶಿರಸಿಯ ಪೂರ್ವ ಭಾಗದ ಮದ್ರಳ್ಳಿ ಭಾಗದಲ್ಲಿ ಬೀಡು ಬಿಟ್ಟಿರುವ ಆನೆಗಳು ರೈತರ ಗದ್ದೆಗಳಿಗೆ ನುಗ್ಗಿ ತೊಂದರೆ ಕೊಡುತ್ತಿವೆ. ಬೆಳೆದ ಫಸಲನ್ನು ಆನೆಗಳು ನಾಶ ಮಾಡತೊಡಗಿದೆ. ಇದರಿಂದಾಗಿ ಸ್ಥಳೀಯರು ಆತಂಕದಿಂದ ಕಾಲ ಕಳೆಯಬೇಕಾಗಿದೆ. ಇಷ್ಟು ದಿನ ಮುಂಡಗೋಡ ಕಡೆ ಇರುತ್ತಿದ್ದ ಗಜಪಡೆ ಮದ್ರಳ್ಳಿಯಲ್ಲಿ ಠಿಕಾಣಿ ಹೂಡಿದ್ದು ತನ್ನ ಪ್ರತಾಪ ತೋರಿಸುತ್ತಿವೆ.

    ಗುಂಪಿನಲ್ಲಿ ನಾಲ್ಕು ಆನೆಗಳಿದ್ದು, ಕೇವಲ ಕೃಷಿ ಭೂಮಿಗೆ ದಾಳಿ ಇಡುವುದಲ್ಲದೇ ಗ್ರಾಮಗಳಿಗೂ ಲಗ್ಗೆ ಇಡುತ್ತಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯ ಸೊರಬ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಭಾಗದಿಂದ ಆನೆಗಳು ಬನವಾಸಿ ಪ್ರದೇಶಕ್ಕೆ ಬಂದು ಬೀಡು ಬಿಟ್ಟಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಆನೆಗಳನ್ನ ಓಡಿಸುವ ಪ್ರಯತ್ನ ನಡೆಸಿದ್ದಾರೆ.

    ಜೋಯಿಡಾ ಭಾಗದಲ್ಲಿ ಕರಡಿ ದಾಳಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿ ಕಾಲನ್ನು ಕಚ್ಚಿ ಹರಿದ ಘಟನೆ ಜೋಯಿಡಾ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಂಬಾರವಾಡಾ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

    ಜೋಯಿಡಾದ ನುಜ್ಜಿ ಸಮೀಪದ ಗ್ರಾಮದ ವಿಠಲ್ ಭಾಮಟೋ ವೇಳಿಪ ಕರಡಿ ದಾಳಿಗೆ ತುತ್ತಾಗಿದ್ದಾರೆ. ವಿಠಲ್ ತಮ್ಮ ಹೊಲದ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕರಡಿ ದಾಳಿ ನಡೆಸಿದೆ. ಮೊಳಕಾಲಿನ ಕೆಳಭಾಗವನ್ನು ಕರಡಿ ಕಚ್ಚಿ ಹರಿದಿದ್ದು, ಗಾಯಾಳು ಜೀವಾಪಾಯದಿಂದ ಪಾರಾಗಿದ್ದಾರೆ. ರೈತನಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಮುಂದಿನ ಚಿಕಿತ್ಸೆಗಾಗಿ ಅರಣ್ಯ ಇಲಾಖೆ ಸಹಕಾರ ನೀಡಬೇಕೆಂದು ಈ ಬಡ ರೈತನ ಕುಂಟುಂಬ ಆಗ್ರಹಿಸಿದೆ.

    ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ವನ್ಯಜೀವಿಗಳ ಕಾಟ ಈ ಬಾರಿ ಮಿತಿ ಮೀರಿದ್ದು ಇದೇ ತಿಂಗಳಲ್ಲಿ ಆನೆ ,ಕರಡಿ ದಾಳಿಗೆ ನಾಲ್ಕು ಜನ ಗಂಭೀರ ಗಾಯಗೊಂಡಿದ್ದಾರೆ.

  • ಕರಡಿ ದಾಳಿಯಿಂದ ವ್ಯಕ್ತಿ ಸಾವಿನ ಪ್ರಕರಣಕ್ಕೆ ಟ್ವಿಸ್- ಹೆಂಡ್ತಿಯ ಸಂಶಯದಿಂದ ಬಯಲಾಯ್ತು ಕೊಲೆ ರಹಸ್ಯ

    ಕರಡಿ ದಾಳಿಯಿಂದ ವ್ಯಕ್ತಿ ಸಾವಿನ ಪ್ರಕರಣಕ್ಕೆ ಟ್ವಿಸ್- ಹೆಂಡ್ತಿಯ ಸಂಶಯದಿಂದ ಬಯಲಾಯ್ತು ಕೊಲೆ ರಹಸ್ಯ

    ಕೊಪ್ಪಳ: ಕರಡಿ ದಾಳಿಯಿಂದ ಮೃತಪಟ್ಟಿದ್ದಾನೆ ಅಂತ ಬಿಂಬಿಸಲಾಗಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಅನೈತಿಕ ಸಂಬಂಧ ಹಿನ್ನಲೆಯಲ್ಲಿ ತನ್ನ ಚಿಕ್ಕಪ್ಪನನ್ನೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರೋ ಪ್ರಕರಣ ಕೊಪ್ಪಳದಲ್ಲಿ ಬಯಲಾಗಿದೆ.

    ಕೊಪ್ಪಳ ತಾಲೂಕಿನ ಆಚಾರ್ ತಿಮ್ಮಾಪೂರ ಗ್ರಾಮದಲ್ಲಿ ಕಳೆದ ಅಕ್ಟೋಬರ್ 1 ರಂದು ಈ ಘಟನೆ ನಡೆದಿತ್ತು. ಹಿರೇಹನುಮಪ್ಪ ಹೊಸಮನಿ ಎಂಬಾತ ರಾತ್ರಿ ತೋಟದಲ್ಲಿ ಮಗಳು ವಿಶಾಲಾಕ್ಷಿಯೊಂದಿಗೆ ಮಲಗಿದ್ದಾಗ ಗಂಭೀರ ಗಾಯವಾಗಿ ಅನುಮಾನಸ್ಪದವಾಗಿ ಮೃತಪಟ್ಟಿದ್ದ. ಕರಡಿ ದಾಳಿಯಿಂದ ಆತ ಮೃತಪಟ್ಟಿದ್ದಾನೆ ಅಂತ ಬಿಂಬಿಸಲಾಗಿತ್ತು. ಬಳಿಕ ಮೃತನ ಪತ್ನಿ ಈ ಸಾವಿನ ಹಿಂದೆ ಸಂಶಯವಿದೆ ಅಂತ ದೂರು ಕೊಟ್ಟಿದ್ರು. ಬಳಿಕ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಕೊಲೆಯಾಗಿದೆ ಅನ್ನೋದು ಗೊತ್ತಾಗಿದೆ.

    ಆರೋಪಿ ಯಮನೂರಪ್ಪ ಹೊಸಮನಿಯ ಪತ್ನಿಯೊಂದಿಗೆ ಹಿರೇಹನಮಪ್ಪ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಯಮನೂರಪ್ಪನಿಗೆ ಹಿರೇಹನಮಪ್ಪ ಚಿಕ್ಕಪ್ಪನಾಗಬೇಕು. ಅಂದ್ರೆ ಸೊಸೆಯೊಂದಿಗೆ ಈತ ಅನೈತಿಕ ಸಂಬಂಧ ಇಟ್ಟುಕೊಂಡಿರೋದು ಯಮನೂರಪ್ಪನಿಗೆ ಗೊತ್ತಾಗಿದೆ. ಇದೇ ವಿಷಯವಾಗಿ ಈ ಹಿಂದೆ ಇವರಿಬ್ಬರ ನಡುವೆ ಜಗಳವಾಗಿದ್ದು, ಆಗ ಯಮನೂರಪ್ಪ ನಿನ್ನನ್ನ ಮುಗಿಸೋದು ಗ್ಯಾರಂಟಿ ಅಂತ ಹಿರೇಹನಮಪ್ಪನಿಗೆ ಬೆದರಿಕೆ ಕೂಡಾ ಹಾಕಿದ್ದ ಎನ್ನಲಾಗಿದೆ.

    ಮೀನುಗಾರಿಕೆ ಮಾಡಲು ಊರುಬಿಟ್ಟು ಹೋಗಿದ್ದ ಆರೋಪಿ ಯಮನೂರಪ್ಪ ಅಕ್ಟೋಬರ್ 1 ರಂದು ತಡರಾತ್ರಿ ಹುಸೇನಸಾಬ ಎಂಬವನೊಂದಿಗೆ ಸೇರಿ ಕೊಡಲಿ, ಕಟ್ಟಿಗೆಯಿಂದ ಹೊಡೆದು ಹಿರೇಹನಮಪ್ಪ ನನ್ನು ಕೊಲೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ವಿಶಾಲಾಕ್ಷಿಯ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದರು. ಇದೀಗ ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣವನ್ನ ಬೇಧಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.