Tag: ಕಬ್ಬಿನ ಹಾಲು

  • ಶಿರಸಿಯಲ್ಲಿ ಆಲೆಮನೆ ಹಬ್ಬ- ಬೆಲ್ಲಕ್ಕೆ ಬಂತು ಬರಪೂರ ಡಿಮ್ಯಾಂಡ್

    ಶಿರಸಿಯಲ್ಲಿ ಆಲೆಮನೆ ಹಬ್ಬ- ಬೆಲ್ಲಕ್ಕೆ ಬಂತು ಬರಪೂರ ಡಿಮ್ಯಾಂಡ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಶಿರಸಿ, ಸಿದ್ದಾಪುರ ಭಾಗದಲ್ಲಿಗ ಆಲೆಮನೆ ಹಬ್ಬದ ಸುಗ್ಗಿ. ಪ್ರತಿ ಜನವರಿಯಿಂದ ಮಾರ್ಚ್ ಅಂತ್ಯದವರೆಗೂ ಶಿರಸಿ ಭಾಗದಲ್ಲಿ ಕಬ್ಬು ಬೆಳೆದ ರೈತರು ಕಟಾವು ಮಾಡಿ ಹಾಲು ಹಿಂಡಿ ಬೆಲ್ಲ ಮಾಡುವ ಸಂದರ್ಭವಿದು.

    ಈ ಸಂದರ್ಭದಲ್ಲಿ ಶಿರಸಿ, ಸಿದ್ದಾಪುರ ಭಾಗದ ಹಲವು ರೈತರು ಆಲೆಮನೆ ಹಬ್ಬ ಎಂದೇ ಸಂಭ್ರಮದಿಂದ ಆಚರಿಸುತ್ತಾರೆ. ಕಬ್ಬನ್ನು ಕಟಾವು ಮಾಡಿ ಆಲೆಮನೆಯಲ್ಲಿ ಕಬ್ಬಿನ ರಸ ಹಿಂಡುವ ಸಂದರ್ಭದಲ್ಲಿ ಊರಿನ ಜನರಿಗೆ ಹಾಗೂ ನೆಂಟರಿಷ್ಟರಿಗೆ ಕಬ್ಬಿನ ಹಾಲಿನ ಜೊತೆ ಬಿಸಿ ಬಿಸಿ ಬೆಲ್ಲ ಸವಿಯಲು ಆಮಂತ್ರಿಸುತ್ತಾರೆ.

    ಸಂಜೆಯಾಗುತ್ತಿದಂತೆ ಆಲೆಮನೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಎಷ್ಟೇ ಜನರು ಬಂದರೂ ಹಾಲು ಹಾಗೂ ಬೆಲ್ಲ ಸವಿಯಲು ಕೊಡುವುದು ಇಲ್ಲಿನ ರೈತರ ಸಾಂಪ್ರದಾಯವಾಗಿದೆ.

    ತರಹೇವಾರಿ ಕಬ್ಬಿನ ಹಾಲು, ಜೋನಿ ಬೆಲ್ಲ: ಕಬ್ಬನ್ನು ಅರೆದು ಕೇವಲ ಕಬ್ಬಿನ ಹಾಲು ಹಾಗೂ ಬಿಸಿ ಜೋನಿ ಬೆಲ್ಲ ಮಾತ್ರ ಸವಿಯುಲು ಮಾತ್ರ ಈ ಹಬ್ಬ ಸೀಮಿತವಾಗಿಲ್ಲ. ಇಲ್ಲಿ ತರ ತರದ ಕಬ್ಬಿನ ಹಾಲು ಸಹ ತುಂಬಾ ಸವಿಯಲು ಲಭ್ಯವಿರುತ್ತದೆ. ಸಾಂಪ್ರದಾಯಿಕ ಹಾಗೂ ಜೈವಿಕ ಗೊಬ್ಬರದಿಂದ ಕೃಷಿ ಮಾಡಿದ ಕಬ್ಬುಗಳು ಬಲು ರುಚಿಯಾಗಿರುತ್ತದೆ. ಹೀಗಾಗಿ ಕಬ್ಬಿನ ಹಾಲಿನ ಜೊತೆ ಸುಂಟಿ, ನಿಂಬೆ ಹಣ್ಣು ಬೆರತರೆ ಅದರ ಜೊತೆ ನೆಲ್ಲಿಕಾಯಿ ಮಿಶ್ರಿತ ಕಬ್ಬಿನ ಹಾಲು, ಪುದೀನ, ಸೊಗದೆ ಬೇರು, ಮಜ್ಜಿಗೆ ಹುಲ್ಲು, ಒಂದೆಲಗ ಹೀಗೆ ಔಷಧೀಯ ಗುಣವಿರುವ ಕಬ್ಬಿನ ಹಾಲು ಸವಿಯಲು ಸಿಗುತ್ತದೆ. ಇದರ ಜೊತೆ ಮಲೆನಾಡಿನ ಪ್ರಸಿದ್ಧ ಅಪ್ಪೆ ಮಿಡಿ, ಜೀರಿಗೆ ಮಿಡಿ ಮಾವಿನ ಉಪ್ಪಿನ ಕಾಯಿ ಸವಿಯುವ ಜೊತೆ ಮಂಡಕ್ಕಿ ರುಚಿ ಹೆಚ್ಚಿಸುತ್ತದೆ.

    ಶಿರಸಿಯಿಂದ ವಾನಳ್ಳಿ ಬಳಿ ಇರುವ ಭೂಸನಕೇರಿಯ ತವರುಮನೆ ಹೋಮ್ ಸ್ಟೇನಲ್ಲಿ ಆಲೆಮನೆ ಹಬ್ಬ ಆಚರಿಸಲಾಯಿತು. ನೂರಾರು ಜನರು ಈ ಹಬ್ಬದಲ್ಲಿ ಭಾಗಿಯಾಗಿ ವಿವಿಧ ರೀತಿಯ ಕಬ್ಬಿನ ಹಾಲನ್ನು ಸವಿದು ಬೆಲ್ಲದ ರುಚಿ ನೋಡಿದರು. ಇನ್ನೆರಡು ತಿಂಗಳು ಶಿರಸಿ, ಸಿದ್ದಾಪುರ ಭಾಗದಲ್ಲಿ ಆಲೆಮನೆ ಸುಗ್ಗಿ ಯ ಹಬ್ಬ ಇರಲಿದ್ದು ಇದಕ್ಕಾಗಿ ದೂರದೂರಿಂದಲೂ ಜನ ಬಂದು ಸವಿದು ಹೋಗುವ ಜೊತೆಗೆ ಬೆಲ್ಲವನ್ನೂ ಕೊಂಡು ಹೋಗುತ್ತಿರುವುದು ಈ ಆಲೆಮನೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.

    ಹೆಚ್ಚಿದ ಬೇಡಿಕೆ: ಶಿರಸಿಯಲ್ಲಿ ಸಾಂಪ್ರದಾಯಿಕವಾಗಿ ಬೆಳೆದ ಕಬ್ಬಿನ ಬೆಲ್ಲಕ್ಕೆ ಕಳೆದ ಎರಡು ವರ್ಷಗಳಿಂದ ಅತೀ ಹೆಚ್ಚು ಬೇಡಿಕೆ ಹಾಗೂ ಮಾರುಕಟ್ಟೆ ದೊರೆಯುತ್ತಿದೆ. ಸಾದ ಬೆಲ್ಲಕ್ಕೆ ಒಂದು ಕೆಜಿಗೆ 50 ರೂ. 25 ಕೆಜಿಗೆ 1,250 ಮಾತ್ರ ಇದೆ. ಆದರೆ ಈ ಬೆಲ್ಲಕ್ಕೆ 25 ಕೆಜಿಗೆ 2,500 ರೂ. ರಿಂದ 4 ಸಾವಿರದ ವರೆಗೂ ಈ ಬಾರಿ ಬೇಡಿಕೆ ಬಂದಿದ್ದು ಉತ್ತಮ ಮಾರುಕಟ್ಟೆ ದರ ದೊರೆಯುತ್ತಿದೆ.

    ಜೋನಿ ಬೆಲ್ಲ, ಗಟ್ಟಿ ಬೆಲ್ಲಗಳಿಗೆ ಬೆಂಗಳೂರು, ಮುಂಬೈ, ಗೋವಾದಂತ ಪ್ರದೇಶದಲ್ಲಿ ಬೇಡಿಕೆ ಬಂದರೆ ಈಗ ದೇಶವನ್ನೂ ದಾಟಿ ಬೇಡಿಕೆ ಬರುತಿದ್ದು ದುಬೈ, ಅಮೆರಿಕ ದೇಶಕ್ಕೂ ರಫ್ತಾಗುತ್ತಿದೆ. ಮಂಡ್ಯ, ಮೈಸೂರು ನಗರದಲ್ಲಿ ಕಬ್ಬು ಬೆಳೆದ ರೈತರು ಸಾಲದ ಶೂಲಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಆದರೆ ಮಲೆನಾಡು ಭಾಗದ ರೈತರು ಆರ್ಗಾನಿಕ್ ಹಾಗೂ ಸಾಂಪ್ರದಾಯಿಕ ಬೆಲ್ಲಗಳನ್ನು ತಯಾರಿಸಿ ಉತ್ತಮ ಲಾಭದ ಕಡೆ ಮುಖಮಾಡಿದ್ದು ಕಬ್ಬು ಬೆಳಗಾರರಿಗೆ ಮಾದರಿಯಾಗಿದೆ.

  • ದಾಹ ತಣಿಸಲು ಮಾತ್ರವಲ್ಲ ಆರೋಗ್ಯಕ್ಕೂ ಕಬ್ಬಿನ ಹಾಲು ಬೆಸ್ಟ್

    ದಾಹ ತಣಿಸಲು ಮಾತ್ರವಲ್ಲ ಆರೋಗ್ಯಕ್ಕೂ ಕಬ್ಬಿನ ಹಾಲು ಬೆಸ್ಟ್

    ಬಿಸಿಲ ಬೇಗೆಯನ್ನು ತಣಿಸಲು ಜನರು ಸಾಮಾನ್ಯವಾಗಿ ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಅದರಲ್ಲೂ ಬಿಸಿಲ ಬೇಗೆ ತಣಿಸಿಕೊಳ್ಳಲು ಬಹುತೇಕ ಮಂದಿ ರಸ್ತೆ ಬದಿಯಲ್ಲಿ ಸಾಮಾನ್ಯವಾಗಿ ಸಿಗುವ ಎಳನೀರು ಹಾಗೂ ಕಬ್ಬಿನ ಹಾಲನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಕಬ್ಬಿನ ಹಾಲಿನ ಅದ್ಭುತ ಆರೋಗ್ಯಕರ ಪ್ರಯೋಜನ ಹಲವರಿಗೆ ತಿಳಿದಿಲ್ಲ. ಕಬ್ಬಿನ ಹಾಲು ಕೇವಲ ದಣಿವು ನಿವಾರಣೆಯಾಗುವುದಲ್ಲದೆ ಹಲವು ಆರೋಗ್ಯ ಸಮಸ್ಯೆಗಳನ್ನೂ ಸಹ ನಿವಾರಿಸುವ ಗುಣಗಳನ್ನೂ ಹೊಂದಿದೆ.

    ಸಕ್ಕರೆ ಹಾಗೂ ಬೆಲ್ಲವನ್ನು ತಯಾರಿಸಲೆಂದು ಭಾರತದಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುವ ಕಾರಣ ಇಂದು ಭಾರತ ಜಗತ್ತಿನ ಅತಿಹೆಚ್ಚು ಕಬ್ಬು ಬೆಳೆಯುವ ದೇಶವಾಗಿದೆ. ನಮ್ಮ ದೇಶದ ಪ್ರತಿ ಊರಿನಲ್ಲಿಯೂ ಕಬ್ಬಿನ ಜಲ್ಲೆಯನ್ನು ಹಿಂಡಿ ಹಾಲನ್ನು ಮಾರುವ ಅಂಗಡಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಕಬ್ಬಿನಲ್ಲಿ ಉತ್ತಮ ರೀತಿಯ ಕಾರ್ಬೋಹೈಡ್ರೇಟ್‍ಗಳು, ಪ್ರೋಟಿನ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಇದು ಆರೋಗ್ಯಕ್ಕೆ ಒಳ್ಳೆದು.

    ಕಬ್ಬಿನ ಹಾಲಿನ ಉಪಯೋಗಗಳೇನು?

    ಕ್ಯಾನ್ಸರ್ ನಿಂದ ರಕ್ಷಣೆ:
    ಕಬ್ಬಿನ ಹಾಲಿನಲ್ಲಿ ಕ್ಯಾಲ್ಸಿಯಂ, ಮೆಗ್ನೇಶಿಯಂ, ಪೊಟ್ಯಾಶಿಯಮ್, ಕಬ್ಬಿಣ ಹಾಗೂ ಮ್ಯಾಂಗನೀಸ್ ಮೊದಲಾದ ಖನಿಜಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಅಲ್ಲದೇ ಇದರಲ್ಲಿರುವ ಫ್ಲೇವನಾಯ್ಡುಗಳು ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್ಯಾಡಿಕಲ್ ಕಣಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ. ಹೀಗಾಗಿ ಇದನ್ನು ಸೇವಿಸಿದರೆ ನಿಮಗೆ ಸ್ತನ ಹಾಗೂ ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ವಿರುದ್ಧ ರಕ್ಷಣೆ ಒದಗಿಸುತ್ತದೆ.

    ಮಧುಮೇಹ ಗುಣಪಡಿಸುತ್ತದೆ:
    ಮಧುಮೇಹಿಗಳಿಗೆ ಸಕ್ಕರೆ ವಜ್ರ್ಯವಾದರೂ ಕಬ್ಬಿನ ರಸವನ್ನು ಆರಾಮಾಗಿ ಸೇವಿಸಬಹುದು. ಯಾಕೆಂದರೆ ಇದರ ಗ್ಲೈಸೆಮಿಕ್ ಕೋಷ್ಟಕ ಕಡಿಮೆ ಇರುವುದರಿಂದ ಹಾಗೂ ಇದರ ನೈಸರ್ಗಿಕ ಸಕ್ಕರೆ ಅಂಶ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಏರುವುದನ್ನು ತಡೆಯುತ್ತದೆ. ಹೀಗಾಗಿ ಕಬ್ಬಿನ ಹಾಲ ಸೇವನೆ ಮಧುಮೇಹ ಗುಣಪಡಿಸಲು ಸಹಕಾರಿಯಾಗಿದೆ.

    ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:
    ಕಬ್ಬಿನ ಹಾಲಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದ ಹಲವಾರು ಸೋಂಕುಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ. ಹಾಗೆಯೇ ದೇಹದ ರೋಗ ನಿರೋಧಕ ಶಕ್ತಿಯನ್ನು ಇದು ವೃದ್ಧಿಸುತ್ತದೆ. ಕಬ್ಬಿನ ಹಾಲಿನ ಸೇವನೆಯಿಂದ ದೇಹದ ಪೋಷಕಾಂಶಗಳ ಕೊರತೆ ನೀಗುತ್ತದೆ. ಇದರಲ್ಲಿರುವ ಪ್ರೋಟಿನ್‍ಗಳು ಘಾಸಿಗೊಂಡಿದ್ದ ಜೀವಕೋಶಗಳನ್ನು ಪುನರ್ಜೀವಗೊಳಿಸಲು ನೆರವಾಗುತ್ತದೆ.

    ಮೊಡವೆಗಳನ್ನು ಕಡಿಮೆ ಮಾಡುತ್ತೆ:
    ಕಬ್ಬಿನ ರಸದ ಸೇವನೆಯಿಂದ ಮೊಡವೆಗಳು ಮಾಯವಾಗುತ್ತವೆ. ಇದರಲ್ಲಿರುವ ಆಲ್ಫಾ-ಹೈಡ್ರಾಕ್ಸಿ-ಆಮ್ಲ [alpha-hydroxy acids (AHAs)] ಗಳು ದೇಹದಲ್ಲಿ ಬಿಳಿರಕ್ತಕಣಗಳ ಸಂಖ್ಯೆ ಹೆಚ್ಚು ಮಾಡುತ್ತದೆ. ಹೀಗಾಗಿ ಕಬ್ಬಿನ ಹಾಲಿನ್ನು ನಿಯಮಿತವಾಗಿ ಸೇವಿಸಿದರೆ ಬಿಳಿರಕ್ತಕಣಗಳು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಹಾಗೆಯೇ ಚರ್ಮದಡಿಯಲ್ಲಿ ಸಂಗ್ರಹಗೊಂಡಿದ್ದ ಸೋಂಕುಗಳನ್ನು ನಿವಾರಿಸಿ ಮೊಡವೆಗಳನ್ನು ಕಡಿಮೆ ಮಾಡುತ್ತದೆ.

    ಜೀರ್ಣಕ್ರಿಯೆಗೆ ಉತ್ತಮ:
    ಒಂದು ವೇಳೆ ಅಜೀರ್ಣತೆ ತೊಂದರೆ ಇದ್ದರೆ ನಿತ್ಯವೂ ಕಬ್ಬಿನ ಹಾಲನ್ನು ಸೇವಿಸುವುದು ಒಳ್ಳೆದು. ಇದರ ವಿರೇಚಕ ಗುಣ ಜೀರ್ಣಾಂಗಗಳಲ್ಲಿ ಉಂಟಾಗಿದ್ದ ಉರಿಯೂತವನ್ನು ನಿವಾರಿಸಿ ಮಲಬದ್ಧತೆಯಾಗದಂತೆ ನೋಡಿಕೊಳ್ಳುತ್ತದೆ. ಹಾಗೆಯೇ ಹೊಟ್ಟೆಯುಬ್ಬರಿಕೆ ಹಾಗೂ ಹೊಟ್ಟೆಯ ಸೆಡೆತಗಳಿಂದಲೂ ರಕ್ಷಣೆ ನೀಡುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಜಠರದಲ್ಲಿ ಪಿಎಚ್ ಮಟ್ಟವನ್ನು ಸರಿಯಾಗಿರಿಸಲು ನೆರವಾಗುತ್ತದೆ.

    ಹೃದಯದ ಆರೋಗ್ಯಕ್ಕಾಗಿ:
    ಕಬ್ಬಿನ ಹಾಲಿನ ಸೇವನೆಯಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಇದರ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವ ಟ್ರೈಗ್ಲಿಸರೈಡ್‍ಗಳ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹಾಗೆಯೇ ಹೃದಯಾಘಾತ, ಸ್ಟ್ರೋಕ್ ಆಗದಂತೆ ನೋಡಿಕೊಳ್ಳುತ್ತದೆ.