Tag: ಕಬ್ಬಿಣದ ಆಯುಧ

  • ಭದ್ರಾವತಿಯಲ್ಲಿ ಶಿಲಾಯುಗದ ನಿಲಸುಗಲ್ಲು ಪತ್ತೆ

    ಭದ್ರಾವತಿಯಲ್ಲಿ ಶಿಲಾಯುಗದ ನಿಲಸುಗಲ್ಲು ಪತ್ತೆ

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸ ನಂಜಾಪುರ ಗ್ರಾಮದಲ್ಲಿ ಶಿಲಾಯುಗ ಕಾಲದ ನಿಲಸುಗಲ್ಲು ಪತ್ತೆಯಾಗಿದೆ. ನಿಲಸುಗಲ್ಲು ಮಾನವ ಪ್ರಥಮವಾಗಿ ಕಬ್ಬಿಣದ ಆಯುಧಗಳನ್ನು ಬಳಸಲು ಪ್ರಾರಂಭಿಸಿದಾಗ ಕಲ್ಲು ಬಂಡೆಗಳನ್ನು ಸೀಳಿ ಅದರಲ್ಲಿ ಚಪ್ಪಡಿ ರೀತಿ ಆಕೃತಿ ಕೊಟ್ಟು ಮಾಡಿದ ಕಲ್ಲಾಗಿದೆ. ಇದನ್ನು ಶಿಲಾಗೋರಿಗಳೆಂದು ಸಹ ಕರೆಯುತ್ತಾರೆ.

    7 ಅಡಿ ಎತ್ತರ ಇರುವ ಈ ಕಲ್ಲು ಶಿಲಾಯುಗದ ಸಂಸ್ಕೃತಿಯ ಸಂಕೇತವಾಗಿದೆ. ಇದನ್ನು ಸ್ಥಳೀಯರು ಪಾಂಡವರ ಮನೆ, ಪಾಂಡವರ ಕಲ್ಲು, ರಾಕ್ಷಸರ ಕಲ್ಲು, ಮೊರೆರ ಮನೆ, ಮೊರೆರ ಅಂಗಡಿ ಎಂದು ಕರೆಯುತ್ತಾರೆ. ಇವುಗಳಲ್ಲಿ ನಿಲುಸು ಕಲ್ಲುಗಳು, ಕಲ್ಪನೆ, ಕಲ್ಲುಪ್ಪೆಗಳು, ಕಲ್ಲು ವೃತ್ತಗಳು, ಅಸ್ಥಿ ಮಡಿಕೆಗಳು, ಶವ ಪೆಟ್ಟಿಗೆಗಳು, ಸಮಾಧಿ ದಿಬ್ಬ, ನೆಲಕೋಣೆ, ಹೆಡೆಕಲ್ಲು, ಮಾನವಾಕೃತಿಯ ಚಪ್ಪಡಿಕಲ್ಲು, ಸಮಾಧಿ, ನೆಲದಡಿ ಕಲ್ಲು ಗುಹೆಗಳು ಮೊದಲಾದ ಬೃಹತ್ ಶಿಲಾಗೋರಿಗಳು ಕಂಡು ಬರುತ್ತವೆ.

    ಈ ಸಂಸ್ಕೃತಿಯ ಜನರು ಜೀವಿಸುತ್ತಿದ್ದ ಪ್ರದೇಶಗಳನ್ನು ವಾಸ್ತವ್ಯದ ನೆಲೆಗಳೆಂದು ಹಾಗೂ ಶವಸಂಸ್ಕಾರದ ಕೇಂದ್ರಗಳನ್ನು ಗೋರಿ ಶವಸಂಸ್ಕಾರಕ ಕೇಂದ್ರಗಳನ್ನು ಗೋರಿ ನೆಲೆಗಳೆಂದು ಕರೆಯುತ್ತಾರೆ.

    ಇದು ನಿಲುಸುಗಲ್ಲಾಗಿದ್ದು, ಬೃಹತ್ ಶಿಲಾಯುಗದ ಮಾನವನು ಸಮಾಧಿ ಮಾಡುವಾಗ ಈ ರೀತಿ ನಿಲುಸುಗಲ್ಲನ್ನು ನೆನಪಿಗೆ ಸ್ಮಾರಕದ ರೀತಿ ನಿಲ್ಲಿಸುತ್ತಿದ್ದರು. ಇದರಲ್ಲಿ ಯಾವುದೇ ಕೆತ್ತನೆಯ ಕಲೆಯಾಗಲಿ ಇರುವುದಿಲ್ಲ. ಈ ಸಮಾಧಿಗಳು ಆಯಾ ಪ್ರದೇಶದಲ್ಲಿರುವ ನೈಸರ್ಗಿಕ ಶಿಲಾ ರಚನೆಗೆ ಅನುಸಾರವಾಗಿ ನಿರ್ಮಿತವಾಗಿರುತ್ತದೆ. ಹೊಸನಂಜಾಪುರದಲ್ಲಿ ದೊರೆತ ಶಿಲೆಯು ಕ್ರಿ.ಪೂ. 1200ರಿಂದ ಕ್ರಿ.ಶ 200 ಎಂದು ತಿಳಿದು ಬರುತ್ತದೆ.

    ಈ ರೀತಿಯ ಸಮಾಧಿಗಳು ಹೊಸನಗರದ ನಿಲುಗಲ್ಲು ಗ್ರಾಮದ ಹೊರ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರ ಜೊತೆಗೆ ಭದ್ರಾವತಿಯ ಆನವೇರಿ, ನಾಗಸಮುದ್ರ, ನಿಂಬೆಗೊಂದಿ, ವಡೇರಪುರ ಸೇರಿ ಇತರೆ ಕಡೆ ಪತ್ತೆಯಾಗಿದೆ. ಈ ನಿಲಸುಗಲ್ಲನ್ನು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕರಾದ ಆರ್. ಶೇಜೇಶ್ವರ್ ಅವರು ಡಾ. ಮಧುಸೂಧನ್ ಹಾಗೂ ಡಾ.ಅನಿಲ್ ಅವರ ಸಹಾಯದೊಂದಿಗೆ ಪತ್ತೆ ಮಾಡಿದ್ದಾರೆ.