Tag: ಕಬಿನಿ

  • ಕಬಿನಿ ಜಲಾಶಯ ಭರ್ತಿ – 85 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ, ಹೈ ಅಲರ್ಟ್ ಘೋಷಣೆ

    ಕಬಿನಿ ಜಲಾಶಯ ಭರ್ತಿ – 85 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ, ಹೈ ಅಲರ್ಟ್ ಘೋಷಣೆ

    ಮೈಸೂರು: ಕಾವೇರಿ ಜಲಾನಯನ ವ್ಯಾಪ್ತಿಯ ಕಬಿನಿ ಜಲಾಶಯ ಭರ್ತಿಯಾಗಿದೆ. ಭಾರೀ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿರುವ ಕಾರಣ ಡ್ಯಾಂನಿಂದ 85 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿದುಬಿಡಲಾಗುತ್ತಿದೆ.

    ಇಂದು ಬೆಳಗ್ಗೆ 50 ಸಾವಿರ ಕ್ಯೂಸೆಕ್ ನೀರು ಬರುತಿತ್ತು. ಕ್ಷಣಕ್ಕೆ ನೀರಿನ ಮಟ್ಟ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆ 85 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

    ಗರಿಷ್ಠ ಮಟ್ಟ 84 ಅಡಿ ಇರುವ ಕಬಿನಿ ಜಲಾಶಯದ ನೀರಿನ ಮಟ್ಟ ಬುಧವಾರ 80 ಅಡಿ ಇತ್ತು. ಈಗ 83 ಅಡಿಗೆ ತಲುಪುತ್ತಿದ್ದಂತೆ ನೀರನ್ನು ಹೊರ ಬಿಡಲಾಗುತ್ತಿದೆ.

    ಭಾರೀ ಪ್ರಮಾಣದಲ್ಲಿ ನೀರನ್ನು ಹರಿ ಬಿಡುತ್ತಿರುವ ಹಿನ್ನೆಲೆಯಲ್ಲಿ ನಂಜನಗೂಡು, ಟಿ ನರಸಿಪುರ, ಎಚ್‍ಡಿ ಕೋಟೆಯಲ್ಲಿರುವ ನದಿ ವ್ಯಾಪ್ತಿಯ ಗ್ರಾಮದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ನಂಜನಗೂಡು ಸೇತುವೆ ಇಂದೇ ಮುಳುಗಡೆಯಾಗುವ ಸಾಧ್ಯತೆಯಿದೆ.

  • ಕೆಆರ್‌ಎಸ್‌ ಒಳಹರಿವು ಹೆಚ್ಚಳ, ಕಬಿನಿ ಭರ್ತಿಗೆ 4 ಅಡಿ ಬಾಕಿ

    ಕೆಆರ್‌ಎಸ್‌ ಒಳಹರಿವು ಹೆಚ್ಚಳ, ಕಬಿನಿ ಭರ್ತಿಗೆ 4 ಅಡಿ ಬಾಕಿ

    ಬೆಂಗಳೂರು: ಪ್ರಾರಂಭದಲ್ಲಿ ಅಷ್ಟೇನು ಮಳೆಯಾಗಿಲ್ಲದ ಕಾರಣ ಈ ಬಾರಿ ಜಲಾಶಯಗಳು ಭರ್ತಿಯಾಗುವುದಿಲ್ಲ ಎಂಬ ಆತಂಕ ರೈತರಲ್ಲಿ ಮನೆ ಮಾಡಿತ್ತು. ಆದರೆ, ಇತ್ತೀಚೆಗೆ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಕೆಆರ್‌ಎಸ್‌ ಸೇರಿದಂತೆ ಎಲ್ಲ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ.

    ಕೊಡಗು, ಹಾಸನ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬಿರುಸುಗೊಂಡ ಹಿನ್ನೆಲೆ ಕೆಆರ್‌ಎಸ್‌ ಡ್ಯಾಂನ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಡ್ಯಾಂನ ಒಳ ಹರಿವು 26,522 ಕ್ಯೂಸೆಕ್ ಏರಿಕೆಯಾಗಿದೆ. ಬೆಳಗ್ಗೆ 22,719 ಕ್ಯೂಸೆಕ್ ಇದ್ದ ಒಳ ಹರಿವು ಸಂಜೆ ಹೊತ್ತಿಗೆ 26,522 ಕ್ಯೂಸೆಕ್‍ಗೆ ತಲುಪಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದು 88.60 ಅಡಿ ನೀರು ಸಂಗ್ರವಾಗಿದೆ. ಒಳ ಹರಿವು 26,522 ಕ್ಯೂಸೆಕ್ ಇದ್ದು, ಪ್ರಸ್ತುತ 15.121 ಟಿಎಂಸಿ ನೀರು ಸಂಗ್ರಹವಾಗಿದೆ.

    ಕೇರಳದ ವಯನಾಡಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿಯೂ ಹೆಚ್ಚಳವಾಗಿದ್ದು, ಭರ್ತಿಯಾಗಲು ಕೆಲವೇ ಅಡಿಗಳಷ್ಟು ಬಾಕಿ ಇದೆ. ಹೀಗಾಗಿ ಹೊರಹರಿವು ಕೂಡ ಹೆಚ್ಚಳವಾಗಿದೆ.

    ಕಬಿನಿ ಜಲಾಶಯದ ನೀರಿನ ಮಟ್ಟ 80 ಅಡಿ ತಲುಪಿದ್ದು, ಗರಿಷ್ಠ ಮಟ್ಟ 84 ಅಡಿ ಆಗಿದೆ. ಜಲಾಶಯದ ಸದ್ಯದ ಒಳಹರಿವು 23,000 ಕ್ಯೂಸೆಕ್ ಆಗಿದ್ದು, ಹೊರಹರಿವು 10,000 ಕ್ಯೂಸೆಕ್ ಇದೆ. ಜಲಾಶಯದ ಸಂಪೂರ್ಣ ಭರ್ತಿಗೆ 4 ಅಡಿಗಳು ಮಾತ್ರ ಬಾಕಿ ಇದ್ದು, ಒಳಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಜಲಾಶಯದಿಂದ ಹೊರಹರಿವು ಹೆಚ್ಚಳ ಮಾಡಲಾಗಿದೆ.

    ಕಪಿಲಾ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಪಿಲಾ ನದಿಯ ಇಕ್ಕೆಲಗಳ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

    ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯ ಸಹ ಭರ್ತಿಯಾಗುತ್ತಿದ್ದು, ನೀರಿನ ಮಟ್ಟದಲ್ಲಿಯೂ ಸಹ ಹೆಚ್ಚಳವಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2,922 ಅಡಿ ಆಗಿದ್ದು, 2,899.77 ಅಡಿಯಷ್ಟು ಭರ್ತಿಯಾಗಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿಯಾಗಿದ್ದು, ಒಳಹರಿವು 28,317 ಕ್ಯೂಸೆಕ್ ಆಗಿದೆ.

  • ಕಬಿನಿ ಕಿರುನಾಲೆ ಏರಿ ಬಿರುಕು – ರೈತರ ಜಮೀನು ಬದಲು ರಸ್ತೆಗೆ ನುಗ್ಗಿದ ನೀರು

    ಕಬಿನಿ ಕಿರುನಾಲೆ ಏರಿ ಬಿರುಕು – ರೈತರ ಜಮೀನು ಬದಲು ರಸ್ತೆಗೆ ನುಗ್ಗಿದ ನೀರು

    ಮೈಸೂರು: ಜಿಲ್ಲೆಯ ಕಬಿನಿ ಬಲದಂಡೆ ನಾಲೆಗೆ ಹರದನಹಳ್ಳಿ ಗ್ರಾಮದ ಬಳಿ ಇರುವ ಕಿರುನಾಲೆ ಏರಿ ಒಡೆದಿದೆ. ಇದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

    ಕಿರು ನಾಲೆ ಒಡೆದ ಪರಿಣಾಮ ರಸ್ತೆಗಳಲ್ಲಿ ನೀರು ಹರಿದು ಹೋಗುತ್ತಿದ್ದು, ಗದ್ದೆಗಳಿಗೆ ನೀರಿಲ್ಲದೆ ರೈತರು ಬವಣೆ ಪಡುತ್ತಿದ್ದಾರೆ. ರಸ್ತೆಗಳಲ್ಲಿ ನೀರು ಹರಿಯುತ್ತಿರುವ ಕಾರಣ ತಮ್ಮ ಗದ್ದೆಗಳಿಗೆ ನೀರು ತಲುಪಲು ಸಾಧ್ಯವಾಗದೆ ರೈತರು ಪರದಾಡುತ್ತಿದ್ದಾರೆ.

    ಉತ್ತಮ ಮಳೆ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಬಿಟ್ಟಿರುವ ಕಾರಣ ಕೃಷಿ ಚಟುವಟಿಕೆಗೆ ರೈತರು ಮುಂದಾಗಿದ್ದಾರೆ. ನೀರು ಪೋಲಾಗುತ್ತಿರುವ ಕಾರಣ ಅನಾನುಕೂಲತೆ ಉಂಟಾಗಿ, ಕೃಷಿ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ ಎಂದು ರೈತರು ಆಗ್ರಹಿಸುತ್ತಿದ್ದಾರೆ.

    ಕೆಲವು ತಿಂಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ರಾಜ್ಯದ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ಇತ್ತ ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ ಪ್ರಮಾಣಕ್ಕೆ ಭೀಮಾನದಿ ಉಕ್ಕಿ ಹರಿಯುತ್ತಿದೆ. ಉಜನಿ ಜಲಾಶಯದಿಂದ 35 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಸಿಂಧಗಿ ತಾಲೂಕಿನ ಭೀಮಾತೀರದ ತಾರಾಪೂರ ಗ್ರಾಮ ಜಲಾವೃತ್ತಗೊಂಡಿದೆ. ಗ್ರಾಮದ ಮನೆಗಳನ್ನ ನೀರು ಸುತ್ತುವರಿಯುತ್ತಿದ್ದು, ಆತಂಕದಲ್ಲಿ ತಾರಾಪುರ ಗ್ರಾಮಸ್ಥರು ಕಾಲ ಕಳೆಯುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಆರ್‌ಎಸ್‌ , ಕಬಿನಿ, ಹಾರಂಗಿಯಿಂದ ಭಾರೀ ಪ್ರಮಾಣದಲ್ಲಿ ನದಿಗೆ ನೀರು: ಎಲ್ಲೆಲ್ಲಿ ಏನು ಅನಾಹುತವಾಗಿದೆ?

    ಕೆಆರ್‌ಎಸ್‌ , ಕಬಿನಿ, ಹಾರಂಗಿಯಿಂದ ಭಾರೀ ಪ್ರಮಾಣದಲ್ಲಿ ನದಿಗೆ ನೀರು: ಎಲ್ಲೆಲ್ಲಿ ಏನು ಅನಾಹುತವಾಗಿದೆ?

    ಮೈಸೂರು/ಮಂಡ್ಯ: ಕೆಆರ್‌ಎಸ್‌, ಕಬಿನಿ ಹಾಗೂ ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿದ್ದು, ಅನೇಕ ಸೇತುವೆ ಮುಳಗಡೆಯಾಗಿವೆ. ಇತ್ತ ಗದ್ದೆ ಹಾಗೂ ಗ್ರಾಮಗಳಿಗೆ ನೀರು ನುಗ್ಗಿದ್ದು ನದಿ ಪಾತ್ರದ ಗ್ರಾಮಸ್ಥರ ಜೀವನ ಅಸ್ತವ್ಯಸ್ತವಾಗಿದೆ.

    ಕೆಆರ್‌ಎಸ್‌ ಹಾಗೂ ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ನೀರಿನಮಟ್ಟ ಹೆಚ್ಚುತ್ತಿದೆ. ಹೀಗಾಗಿ ಅಧಿಕಾರಿಗಳು ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿಬಿಡುತ್ತಿದ್ದಾರೆ. ಹೀಗಾಗಿ ಟಿ.ನರಸೀಪುರ ತಾಲೂಕಿನ ತಲಕಾಡಿನ ಹೆಮ್ಮಿಗೆ ಸೇತುವೆ ಮುಳುಗಡೆಯಾಗಿದ್ದು ಟಿ.ನರಸೀಪುರ- ತಲಕಾಡು ನಡುವಿನ ರಸ್ತೆ ಸಂಪರ್ಕ ಕಡಿತವಾಗಿದೆ.

    ತಲಕಾಡಿನ ಮಾಧವ ಮಂತ್ರಿ ಅಣೆಕಟ್ಟೆ ಮುಂಭಾಗದಲ್ಲಿ ಹೆಮ್ಮಿಗೆ ಸೇತುವೆ ಇದೆ. ಕೆಆರ್‌ಎಸ್‌ ನಿಂದ ಒಂದೂವರೆ ಲಕ್ಷ, ಕಬಿನಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವುದರಿಂದ ಹೆಮ್ಮಿಗೆ ಸೇತುವೆ ಮುಳುಗಡೆಯಾಗಿದೆ. ಇತ್ತ ಹಾರಂಗಿ ಡ್ಯಾಮ್‍ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, 65 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದೆ. ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾನಯನ ಪ್ರದೇಶದಲ್ಲಿಯೂ ಮಳೆ ಹೆಚ್ಚಾಗುತ್ತಿದ್ದು, ಡ್ಯಾಮ್ ಗೆ 65,600 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಭದ್ರತೆಯ ದೃಷ್ಟಿಯಿಂದ ನಿನ್ನೆಯಿಂದ ನದಿಗೆ ನಾಲ್ಕು ಕ್ರಸ್ಟ್ ಗೇಟ್ ಮತ್ತು ವಿದ್ಯುತ್ ಘಟಕದ ಮೂಲಕ 65 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.

    ಭಾರೀ ಪ್ರಮಾಣದ ನೀರನ್ನು ಹೊರಬಿಟ್ಟಿದ್ದರಿಂದ ಹಾರಂಗಿ ನದಿ ಪಾತ್ರದ ತಗ್ಗು ಪ್ರದೇಶ ರೈತರ ಗದ್ದೆಗಳಿಗೆ ನೀರು ನುಗ್ಗಿದೆ. ಹುದಗೂರು ಗ್ರಾಮದ 8 ಜನ ರೈತರ ನಾಟಿ ಮಾಡಿದ್ದ 10 ಎಕರೆಗೂ ಹೆಚ್ಚು ಗದ್ದೆಗಳು ಹಾಗೂ ಕೂಡಿಗೆ ಗಾಮ್ರ ಪಂಚಾಯತ್ ವತಿಯಿಂದ ನಿವೇಶನ ನೀಡಲು ಕಾಯ್ದಿರಿಸಿದ್ದ ತಗ್ಗು ಪ್ರದೇಶವು ನೀರಿನಿಂದ ಜಲಾವೃತಗೊಂಡಿದೆ. ಇಂದು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಕಪ್ಪಡಿಯ ಸಿದ್ದಪ್ಪಾಜಿ ರಾಚಾಪ್ಪಾಜಿ ದೇವಾಲಯಕ್ಕೆ ನೀರು ನುಗ್ಗಿದೆ. ದೇವಾಲಯದ ಆವರಣದ ಸುತ್ತ ಹಾಗೂ ಅಲ್ಲಿರುವ ಮಳಿಗೆಗಳಿಗೆ ನೀರು ನುಗ್ಗಿದೆ. ಹೀಗಾಗಿ ವ್ಯಾಪಾರಿಗಳು, ಭಕ್ತರು ಪರದಾಡುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಮಣೀಯವಾಗಿ ಗೋಚರಿಸುತ್ತಿದೆ ಹೊಗೆನಕಲ್ ಫಾಲ್ಸ್: ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅವಕಾಶವಿಲ್ಲ

    ರಮಣೀಯವಾಗಿ ಗೋಚರಿಸುತ್ತಿದೆ ಹೊಗೆನಕಲ್ ಫಾಲ್ಸ್: ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅವಕಾಶವಿಲ್ಲ

    ಚಾಮರಾಜನಗರ: ಕಬಿನಿ ಮತ್ತು ಕೆಆರ್‍ಎಸ್ ನಿಂದ ಅಧಿಕ ಪ್ರಮಾಣದ ನೀರು ಹರಿಸಿರುವುದರಿಂದ ಹೊಗೆನಕಲ್ ಫಾಲ್ಸ್ ರಮಣೀಯವಾಗಿ ಗೋಚರಿಸುತ್ತಿದೆ.

    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗಡಿಯಲ್ಲಿರುವ ಹೊಗೆನಕಲ್ ಪ್ರದೇಶದಲ್ಲಿ ಎಲ್ಲಿ ನೋಡಿದರು ಬಂಡೆಗಳನ್ನು ಸೀಳಿಕೊಂಡು ಬರುವ ನೀರು ಗೋಚರವಾಗುತ್ತಿದೆ. ಆದರೆ ಈ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಮಾತ್ರ ಅವಕಾಶವಿಲ್ಲ.

    ಅಧಿಕ ಪ್ರಮಾಣದಲ್ಲಿ ಇಲ್ಲಿ ನೀರು ಹರಿಯುತ್ತಿರುದರಿಂದ ಯಾವುದೇ ರೀತಿಯ ಅವಘಡಗಳು ಜರುಗಬಾರದೆಂದು ನೀರಿನ ರಭಸ ಕಡಿಮೆ ಆಗುವವರೆಗೂ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಸದ್ಯ ಹೊಗೆನಕಲ್ ಪ್ರದೇಶ 1.40 ಲಕ್ಷ ಕ್ಯೂಸೆಕ್ ನೀರಿನಿಂದ ಮುಳುಗಡೆಯಾಗಿದೆ.

    ಕಬಿನಿ ಹಾಗೂ ಕೆಆರ್ ಎಸ್ ಜಲಾಶಯಗಳಿಂದ ಅಧಿಕ ನೀರು ಹರಿಸಿರುವ ಹಿನ್ನೆಲೆಯಲ್ಲಿ ನದಿ ಅಪಾಯ ಮಟ್ಟಿ ಮೀರಿ ಹರಿಯುತ್ತಿವೆ. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರ ನೀಡುತ್ತಿರುವ ಕಾರಣ ಎಲ್ಲೆಡೆ ಜಲಪ್ರವಾಹ ಉಂಟಾಗಿದೆ.

    ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮೇಲೆ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಹೆದ್ದಾರಿ ಸಂಪರ್ಕ ಕಡಿತದಿಂದ ವಾಹನ ಸವಾರರ ಪರದಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಭರಚುಕ್ಕಿ ಜಲಪಾತದಲ್ಲಿ ಕೊಚ್ಚಿ ಹೋದ ಹಸು!

    ಭರಚುಕ್ಕಿ ಜಲಪಾತದಲ್ಲಿ ಕೊಚ್ಚಿ ಹೋದ ಹಸು!

    ಚಾಮರಾಜನಗರ: ಭರಚುಕ್ಕಿ ಜಲಪಾತದಲ್ಲಿ ಹಸು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ.

    ಭರಚುಕ್ಕಿ ಜಲಪಾತದ ಬಳಿ ಹಸು ನೀರು ಕುಡಿಯಲು ತೆರಳಿತ್ತು. ನೀರಿನ ರಭಸದಲ್ಲಿ ಸಿಲುಕಿದ ಹಸು ಮೇಲಕ್ಕೆ ಬರಲಾರದೇ ನದಿಯ ಮಧ್ಯ ಭಾಗದಲ್ಲಿ ನಿಂತುಕೊಂಡಿತ್ತು. ಹಸು ತನ್ನ ಪ್ರಾಣ ರಕ್ಷಿಸಿಕೊಳ್ಳಲು ಸತತ ಎರಡು ಗಂಟೆಗಳ ಕಾಲ ಪ್ರಯತ್ನ ನಡೆಸಿದೆ. ಕೊನೆಗೆ ನೀರಿನ ರಭಸ ಹೆಚ್ಚಾಗಿದ್ದರಿಂದ ಜಲಪಾತದಲ್ಲಿ ಕೊಚ್ಚಿ ಹೋಗಿದೆ. ಈ ಎಲ್ಲ ದೃಶ್ಯಗಳು ಪ್ರವಾಸಿಗರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ನೀರಿನ ರಭಸ ಹೆಚ್ಚಾಗಿದ್ದರಿಂದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪ್ರವಾಸಿಗರು ಅಸಹಾಯಕರಾಗಿದ್ದರು.

    ಕಬಿನಿ ಹಾಗೂ ಕೆಆರ್ ಎಸ್ ಜಲಾಶಯಗಳಿಂದ ಅಧಿಕ ನೀರು ಹರಿಸಿರುವ ಹಿನ್ನೆಲೆಯಲ್ಲಿ ನದಿ ಅಪಾಯ ಮಟ್ಟಿ ಮೀರಿ ಹರಿಯುತ್ತಿವೆ. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರ ನೀಡುತ್ತಿರುವ ಕಾರಣ ಎಲ್ಲೆಡೆ ಜಲಪ್ರವಾಹ ಉಂಟಾಗಿದೆ. ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮೇಲೆ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಹೆದ್ದಾರಿ ಸಂಪರ್ಕ ಕಡಿತದಿಂದ ವಾಹನ ಸವಾರರ ಪರದಾಡುತ್ತಿದ್ದಾರೆ.

    ಹೊಳೆ ದಾಟುವಾಗ ಆಕಸ್ಮಿಕವಾಗಿ ವೃದ್ಧ ನೀರಲ್ಲಿ ಕೊಚ್ಚಿಕೊಂಡು ಹೋಗಿರುವಂತ ಘಟನೆ ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ನಡೆದಿದೆ. ಬೊಮ್ಮಯ್ಯ ದಾಸ್ ನೀರಲ್ಲಿ ವೃದ್ಧ ಕೊಚ್ಚಿಹೋಗಿದ್ದು, ವೃದ್ಧನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕೆಆರ್‌ಎಸ್ , ಕಬಿನಿಯಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ-ನದಿ ಪಾತ್ರದ ಗ್ರಾಮಗಳಿಗೆ ಮುಳುಗಡೆಯ ಭೀತಿ

    ಕೆಆರ್‌ಎಸ್ , ಕಬಿನಿಯಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ-ನದಿ ಪಾತ್ರದ ಗ್ರಾಮಗಳಿಗೆ ಮುಳುಗಡೆಯ ಭೀತಿ

    ಚಾಮರಾಜನಗರ: ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನದಿ ಪಾತ್ರದ ಗ್ರಾಮಗಳಿಗೆ ಮುಳುಗಡೆಯ ಭೀತಿ ಎದುರಾಗಿದೆ.

    ಕೊಳ್ಳೇಗಾಲ ತಾಲೂಕಿನ ಎಡಕೂರಿಯ, ಹಳೆಹಂಪಾಪುರ, ದಾಸನಪುರ, ಹಣೆಗಳ್ಳಿ, ಮುಳ್ಳುರು ಸೇರಿದಂತೆ ಇನ್ನಿತರ ಗ್ರಾಮಗಳ ಜಮೀನುಗಳು ಈಗಾಗಲೇ ಜಲಾವೃತಗೊಂಡಿವೆ. ಇದರಿಂದ ಜಮೀನಿನಲ್ಲಿ ಬೆಳೆದಿದ್ದ ಭತ್ತ, ರಾಗಿ, ಕಬ್ಬು, ಬಾಳೆ, ತೆಂಗು ಸೇರಿದಂತೆ ಮುಂತಾದ ಬೆಳೆಗಳಿಗೆ ಹಾನಿಯುಂಟಾಗಿದ್ದು, ನದಿ ಪಾತ್ರದ ಜನರು ಆತಂಕದಲ್ಲಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ಹೋಗಲು ಆದೇಶವನ್ನು ಸಹ ನೀಡಿದ್ದಾರೆ. ಅಲ್ಲದೇ ನದಿಯ ದಂಡೆ ಹಾಗೂ ತಗ್ಗು ಪ್ರದೇಶದಲ್ಲಿರುವ ಜನರು ತಮ್ಮ ರಕ್ಷಣೆಗೆ ಮೊದಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

    ಇನ್ನು ಕೇರಳದಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣವು ಹೆಚ್ಚಳವಾಗಿದ್ದು, ಅನಿವಾರ್ಯವಾಗಿ ನದಿಗೆ ಹೆಚ್ಚಿನ ನೀರು ಹರಿದು ಬಿಡಲಾಗಿದೆ. ಕಬಿನಿ ಜಲಾಶಯದ ಇತಿಹಾಸದಲ್ಲಿ ಮೊದಲ ಬಾರಿಗೆ 80 ಸಾವಿರ ಕ್ಯೂಸೆಕ್ ನೀರನ್ನು ನದಿ ನೀರನ್ನು ಹೊರಗೆ ಬಿಡಲಾಗಿತ್ತು. ಹಾಗೆಯೇ ಕೆಆರ್ ಎಸ್ ಅಣೆಕಟ್ಟಿನಿಂದಲೂ 40 ಸಾವಿರ ಕ್ಯೂಸೆಕ್ ನೀರನ್ನು ಕ್ರಸ್ಟ್ ಗೇಟ್ ಮೂಲಕ ಹೊರಕ್ಕೆ ಬಿಡಲಾಗಿತ್ತು. ಈ ಮೂಲಕ ಕಾವೇರಿ ಕೊಳ್ಳದ ಕೇವಲ 2 ಜಲಾಶಯಗಳಿಂದಲೇ 1 ಲಕ್ಷ ಕ್ಯೂಸೆಕ್ ಅಧಿಕ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಕಬಿನಿ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಕ್ಕೆ

    ಕಬಿನಿ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಕ್ಕೆ

    ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಎಚ್‍ಡಿಕೋಟೆ ಯಲ್ಲಿರುವ ಕಬಿನಿ ಡ್ಯಾಂ ನಿಂದ ದಾಖಲೆ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗಿದೆ.

    1992 ರ ನಂತರ ಇದೇ ಮೊದಲ ಬಾರಿಗೆ 70 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದೆ. ಹಾಗೆಯೇ ಕೆಆರ್ ಎಸ್  ಅಣೆಕಟ್ಟಿನಿಂದಲೂ 40 ಸಾವಿರ ಕ್ಯೂಸೆಕ್ ನೀರನ್ನು ಕ್ರಸ್ಟ್ ಗೇಟ್ ಮೂಲಕ ಹೊರಕ್ಕೆ ಬಿಡಲಾಗಿದ್ದು, ಈ ಮೂಲಕ ಕಾವೇರಿ ಕೊಳ್ಳದ ಕೇವಲ 2 ಜಲಾಶಯಗಳಿಂದಲೇ 1 ಲಕ್ಷ ಕ್ಯೂಸೆಕ್ ನೀರು ನದಿಗೆ ಸೇರುತ್ತಿದೆ.

    ಮಲೆನಾಡು, ಕರಾವಳಿಯಲ್ಲಿ ಕಳೆದ ಎರಡು ವಾರಗಳಿಂದ ಬಿಡುವು ನೀಡಿದ್ದ ಮಳೆರಾಯ ಈಗ ಮತ್ತೆ ಅಬ್ಬರಿಸ್ತಿದ್ದಾನೆ. ಮಂಗಳೂರಿನಲ್ಲೂ ಭಾರೀ ವರ್ಷಧಾರೆಯಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಇನ್ನು ಜಿಲ್ಲೆಯ ಪುಂಜಾಲಕಟ್ಟೆ ಸಮೀಪದ ಮೂರ್ಜೆ ಎಂಬಲ್ಲಿ ಭಾರೀ ಮಳೆಗೆ ಅಂಗನವಾಡಿ ಒಂದರ ಬಳಿ ಮಣ್ಣು ಕುಸಿದು ಆತಂಕ ಎದುರಾಗಿದೆ. ಚಿಕ್ಕಮಗಳೂರಿನಲ್ಲೂ ಧಾರಾಕಾರ ಮಳೆ ಸುರಿಯುತ್ತಿರೋದ್ರಿಂದ ತುಂಗಾ, ಭದ್ರಾ ಹಾಗೂ ಹೇಮಾವತಿ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಕಳಸಾ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಮತ್ತೊಮ್ಮೆ ಮುಳುಗಡೆಯಾಗಿದ್ದು ಪ್ರವಾಸಿಗರು ಪರದಾಡೋ ಸ್ಥಿತಿ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕಬಿನಿ, ಕೆಆರ್ ಎಸ್ ನಿಂದ ನೀರು ಹೊರಕ್ಕೆ- ತಮಿಳುನಾಡಿನ ಮೆಟ್ಟೂರು ಜಲಾಶಯದತ್ತ ಅಪಾರ ಪ್ರಮಾಣದ ನೀರು!

    ಕಬಿನಿ, ಕೆಆರ್ ಎಸ್ ನಿಂದ ನೀರು ಹೊರಕ್ಕೆ- ತಮಿಳುನಾಡಿನ ಮೆಟ್ಟೂರು ಜಲಾಶಯದತ್ತ ಅಪಾರ ಪ್ರಮಾಣದ ನೀರು!

    ಚೆನ್ನೈ: ತಮಿಳುನಾಡಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೆಟ್ಟೂರು ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

    ಕಾವೇರಿ ನದಿ ಪಾತ್ರದಲ್ಲಿ ಬಿಟ್ಟುಬಿಡದೆ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್‍ಎಸ್ ಡ್ಯಾಂ ಭರ್ತಿಯಾಗಿದೆ. ಹೀಗಾಗಿ ಕಬಿನಿ, ಕೆಆರ್ ಎಸ್ ಡ್ಯಾಂನಿಂದ ಭಾರೀ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗ್ತಿದೆ. ಇದ್ರಿಂದ ತಮಿಳುನಾಡಿನ ಮೆಟ್ಟೂರು ಜಲಾಶಯದತ್ತ ಅಪಾರ ಪ್ರಮಾಣ ನೀರು ಹರಿಯುತ್ತಿದೆ.

    ಸೋಮವಾರ ಬೆಳಗ್ಗೆ 87.92 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಸದ್ಯ ಮೆಟ್ಟೂರು ಡ್ಯಾಂ ನಲ್ಲಿ 1.25 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಓ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಡ್ಯಾಂ ನ ನೀರಿನ ಮಟ್ಟ 100 ಅಡಿ ತಲುಪುವ ಸಾಧ್ಯತೆಗಳು ಹೆಚ್ಚಿವೆ.

    ಹೊಗೇನಕಲ್ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ನದಿ ಪಾತ್ರದ ಪ್ರದೇಶಗಳಿಗೆ ನೀರು ನುಗ್ಗಿದೆ. ಮನೆಗಳು, ದೇಗುಲಗಳಲ್ಲಿ ನೀರು ನಿಂತಿದ್ದು, ಜನ ಆತಂಕದಲ್ಲಿದ್ದಾರೆ. ಹೊಗೇನಕಲ್ ಫಾಲ್ಸ್ ಗೆ ಯಾರು ಹೋಗಬಾರದು ಅಂತಾ ತಮಿಳುನಾಡು ನಿಷೇಧ ಹೇರಿದೆ. ಈಗಾಗಲೇ 88 ಅಡಿಯಷ್ಟು ತಲುಪಿರುವ ಮೆಟ್ಟೂರು ಡ್ಯಾಂನ ನೀರಿನ ಮಟ್ಟ ಕೆಲವೇ ದಿನಗಳಲ್ಲಿ 100 ಅಡಿಯಷ್ಟು ತಲುಪಲಿದೆ. ಈ ಜಲಾಶಯದಲ್ಲಿ 120 ಅಡಿ ನೀರಿನ ಗರಿಷ್ಠ ಮಟ್ಟವನ್ನು ಹೊಂದಿದೆ.

    ಒಟ್ಟಿನಲ್ಲಿ ಮೆಟ್ಟೂರು ಜಲಾಶಯದಲ್ಲಿ ಜಲತಾಂಡವೇ ಸೃಷ್ಟಿಯಾಗಿದೆ. ಇನ್ನು ನದಿ ಪಾತ್ರದ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ.

  • ತಮಿಳುನಾಡಿಗೆ ನೀರು ಬಿಡುವಂತೆ ಸಿಎಂ ಸೂಚನೆ

    ತಮಿಳುನಾಡಿಗೆ ನೀರು ಬಿಡುವಂತೆ ಸಿಎಂ ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಎಲ್ಲಾ ಡ್ಯಾಂಗಳು ಬಹುತೇಕ ತುಂಬುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

    ಮಳೆಯಿಂದಾಗಿ ಎಷ್ಟು ನೀರು ಭರ್ತಿಯಾಗಿದೆಯೋ ಅಷ್ಟನ್ನು ಬಿಟ್ಟುಬಿಡಿ. ಒಟ್ಟಿನಲ್ಲಿ ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ನೀರು ಬಿಡಬೇಕೋ ಅಷ್ಟು ನೀರನ್ನು ಬಿಡಿ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಈಗಾಗಲೇ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು, ರಾಮನಗರ ಹಾಗೂ ಮಂಡ್ಯದಿಂದ ಸಾಕಷ್ಟು ನೀರು ತಮಿಳುನಾಡಿಗೆ ಹರಿದುಹೋಗುತ್ತದೆ. ಇದರ ಜೊತೆಗೆ ಜಲಾಶಯದಿಂದಲೂ ಅಲ್ಪ ಪ್ರಮಾಣದ ನೀರು ತಮಿಳುನಾಡಿಗೆ ಹರಿಯಬಿಟ್ಟರೆ ಜುಲೈ ತಿಂಗಳಲ್ಲಿ ಬಿಡಬೇಕಾದ ನೀರಿನ ಪ್ರಮಾಣ ಸರಿಯಾಗುತ್ತದೆ. ಹೀಗಾಗಿ ಜುಲೈ ತಿಂಗಳಲ್ಲಿ ಬಿಡಬೇಕಾದ ನೀರನ್ನು ಬಿಟ್ಟಿದ್ದು, ಪ್ರಾಧಿಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಿ ಅಂತ ಕೇಳಬಹುದು ಎಂಬ ದೃಷ್ಟಿಯಿಂದ ಕುಮಾರಸ್ವಾಮಿ ಈ ರೀತಿಯ ಆದೇಶ ಮಾಡಿರಬಹುದೆಂದು ಹೇಳಲಾಗುತ್ತಿದೆ.

    ಮೈಸೂರಿನ ಎಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಗರಿಷ್ಠ ಮಟ್ಟ 2,284 ಅಡಿ ಇದ್ದು, ಮಂಗಳವಾರ 2,282 ಅಡಿ ನೀರು ಸಂಗ್ರಹವಾಗಿದೆ. 32,635 ಕ್ಯೂಸೆಕ್ ಒಳಹರಿವು ಇದ್ದರೆ, 36 ಸಾವಿರ ಕ್ಯೂಸೆಕ್ ಹೊರ ಹರಿವು ಇದೆ.

    ಸುಪ್ರೀಂಕೋರ್ಟ್ ಆದೇಶದ ಅನ್ವಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾದ ಬಳಿಕ ಜುಲೈ 7 ರಂದು ನವದೆಹಲಿಯಲ್ಲಿ ಮೊದಲ ಸಭೆ ನಡೆಸಲಾಯಿತು. ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಮಸೂದ್ ಹುಸೇನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಮಿಳುನಾಡಿನ ಪ್ರತಿನಿಧಿ ಎಸ್.ಕೆ ಪ್ರಭಾಕರನ್, ತಿಂಗಳುವಾರು ಹಂಚಿಕೆ ಪೈಕಿ ಜುಲೈ ನಲ್ಲಿ 34 ಟಿಎಂಸಿ ನೀರನ್ನು ಕರ್ನಾಟಕ ಹರಿಸಬೇಕು, ಈ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲು ಮನವಿ ಮಾಡಿದ್ದರು. ಆದರೆ ತಮಿಳುನಾಡು ಪ್ರಸ್ತಾಪವನ್ನು ರಾಜ್ಯದ ಪ್ರತಿನಿಧಿ ರಾಕೇಶ್ ಸಿಂಗ್ ತಿರಸ್ಕರಿಸಿದ್ದರು. ಬಳಿಕ ರಾಜ್ಯ ಸರ್ಕಾರದ ಜೊತೆ ಚರ್ಚೆ ನಡೆಸಿ ಈ ಕುರಿತು ಪ್ರತಿಕ್ರಿಯಿಸುವುದಾಗಿ ತಿಳಿಸಿ ಸಭೆಯಿಂದ ಹೊರ ಬಂದಿದ್ದರು. ಅಂದಹಾಗೇ ಸುಪ್ರೀಂಕೋರ್ಟ್ ಆದೇಶದ ಬಳಿಕ ನ್ಯಾಯಬದ್ಧವಾಗಿ ತಮಿಳುನಾಡು 31.24 ಟಿಎಂಸಿ ನೀರು ಕೇಳಬೇಕಿತ್ತು. ಆದರೆ 31.24 ಟಿಎಂಸಿ ಬದಲು 2.5 ಟಿಎಂಸಿ ನೀರು ಹೆಚ್ಚುವರಿ ಕೇಳಿ ಪ್ರಸ್ತಾಪ ಸಲ್ಲಿಸಿದ್ದಕ್ಕೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿತ್ತು.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Secon ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.