Tag: ಕಬಿನಿ ಜಲಾಶಯ

  • ವೈನಾಡಿನಲ್ಲಿ ಭಾರೀ ಮಳೆ- 40 ಸಾವಿರ ಕ್ಯೂಸೆಕ್ ಗಡಿ ದಾಟಿದ ಕಬಿನಿ ಒಳಹರಿವು

    ವೈನಾಡಿನಲ್ಲಿ ಭಾರೀ ಮಳೆ- 40 ಸಾವಿರ ಕ್ಯೂಸೆಕ್ ಗಡಿ ದಾಟಿದ ಕಬಿನಿ ಒಳಹರಿವು

    ಬೆಂಗಳೂರು: ಕೇರಳದ ವೈನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ ಜಲಾಶಯಕ್ಕೆ ಒಳಹರಿವು 40 ಸಾವಿರ ಕ್ಯೂಸೆಕ್ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ಹೊರಹರಿವು ಉಂಟಾಗಿರುವುದರಿಂದ ನದಿ ಪಾತ್ರದ ಜನ ಎಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ.

    ನಂಜನಗೂಡಿನ ಬಳಿ ಕಪಿಲಾ ನದಿ ತುಂಬಿ ಹರಿಯುತ್ತಿದ್ದು, ಸ್ನಾನಘಟ್ಟ ಮುಳುಗಡೆಯಾಗಿದೆ. ಹೆಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಗ್ರಾಮದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಬಳಿ ನಿಂತ ವ್ಯಕ್ತಿ ಮೇಲೆಯೇ ಮರ ಉರುಳಿ ಬಿದ್ದು, ವ್ಯಕ್ತಿ ಮೃತಪಟ್ಟಿದ್ದಾನೆ.

    ಅಲ್ಲದೆ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಸಕಲೇಶಪುರ ತಾಲೂಕಿನ ಬಿಸಿಲೆಘಾಟ್‍ನಲ್ಲಿ ಭಾರೀ ಗಾತ್ರದ ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ಹೀಗಾಗಿ ಬಿಸಿಲೆ ಘಾಟ್‍ನಲ್ಲಿ ಸಂಚಾರ ಸ್ಥಗಿತಗೊಂಡಿದೆ. ಸ್ಥಳೀಯ ಆಡಳಿತ ಮರಗಳನ್ನು ತೆರವು ಮಾಡುವ ಕಾರ್ಯಾಚರಣೆಗೆ ಮುಂದಾಗಿದೆ. ಸಕಲೇಶಪುರ ತಾಲೂಕಿನ ಹೆತ್ತೂರು, ಯಸಳೂರು, ಐಗೂರು, ಬನ್ನೂರು ಹಾಗೂ ಸುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

    ಕೊಡಗು ಜಿಲ್ಲೆಯಲ್ಲಿ ಸಹ ಹೆಚ್ಚಿನ ಮಳೆ ಆಗುತ್ತಿರುವ ಹಿನ್ನೆಲೆ ಕೆಆರ್‍ಎಸ್ ಒಳ ಹರಿವಿನಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಜಲಾಶಯಕ್ಕೆ 29,855 ಕ್ಯೂಸೆಕ್ ನೀರು ಒಳ ಹರಿವು ಇದ್ದು, ಹೊರ ಹರಿವು 4,715 ಕ್ಯೂಸೆಕ್ ಇದೆ. ಕೆಆರ್‍ಎಸ್ ಡ್ಯಾಮ್‍ನ ಇಂದಿನ ನೀರಿನಮಟ್ಟ 108.40 ಅಡಿ ಇದೆ.

    ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಹಿನ್ನೆಲೆ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳನ್ನು ರೆಡ್ ಅಲರ್ಟ್ ಎಂದು ಘೋಷಣೆ ಮಾಡಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, 11 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮಳೆ ಪರಿಸ್ಥಿತಿ, ಮಳೆ ಮುನ್ಸೂಚನೆ ಹಾಗೂ ಜಲಾಶಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳನ್ನು ರೆಡ್ ಅಲರ್ಟ್ ಎಂದು ಘೋಷಿಸುವಂತೆ ಸೂಚನೆ ನೀಡಿದ್ದಾರೆ. ಕೊಡಗು, ಧಾರವಾಡ, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಧ್ಯದಲ್ಲೇ ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ತಂಡಗಳನ್ನು ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

  • ಕೆಆರ್‌ಎಸ್ ಡ್ಯಾಂ 100 ಅಡಿ ಭರ್ತಿ- ಕಬಿನಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

    ಕೆಆರ್‌ಎಸ್ ಡ್ಯಾಂ 100 ಅಡಿ ಭರ್ತಿ- ಕಬಿನಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

    ಮಂಡ್ಯ/ಮೈಸೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ಮಧ್ಯೆ ಹಲವೆಡೆ ಧಾರಾಕಾರ ಮಳೆ ಆಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇತ್ತ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

    ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಂ ಒಳ ಹರಿವಿನಲ್ಲಿ ಹೆಚ್ಚಾಗಿದೆ. ಮಂಗಳವಾರ ಬೆಳಗ್ಗೆ 6,324 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು 8,972 ಕ್ಯೂಸೆಕ್‍ಗೆ ಏರಿಕೆಯಾಗಿದೆ. ಅಣೆಕಟ್ಟೆಯಲ್ಲಿ ಒಳ ಹರಿವು ಹೆಚ್ಚಾಗಿರುವುದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.

    ಅಣೆಕಟ್ಟೆಯ ನೀರಿನ ಮಟ್ಟ 100.33 ಅಡಿಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಈ ಬಾರಿ 18 ಅಡಿ ನೀರು ಹೆಚ್ಚಾಗಿದೆ. ಕೆಆರ್‌ಎಸ್ ಅಣೆಕಟ್ಟೆಯ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದ್ದು, ಇಂದಿನ ನೀರಿನ ಮಟ್ಟ 100.33 ಅಡಿ ಆಗಿದೆ. ಅಣೆಕಟ್ಟೆ ಒಳಹರಿವು 8,972 ಕ್ಯೂಸೆಕ್ ಆಗಿದ್ದು, ಹೊರ ಹರಿವು 458 ಕ್ಯೂಸೆಕ್ ಆಗಿದೆ. ಸದ್ಯ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರು 23.071 ಟಿಎಂಸಿ ಆಗಿದೆ.

    ಇತ್ತ ಕೇರಳ ಭಾಗದಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಜಲಾಶಯದ ಒಳಹರಿವು 10 ಸಾವಿರ ಕ್ಯೂಸೆಕ್‍ಗೆ ದಾಟಿದೆ. ಜಲಾಶಯದ ಇಂದಿನ ಒಳಹರಿವು 11,324 ಕ್ಯೂಸೆಕ್ ಆಗಿದ್ದು, ಜಲಾಶಯದ ಇಂದಿನ ಹೊರಹರಿವು 1,500 ಕ್ಯೂಸೆಕ್ ಆಗಿದೆ.

    ಇನ್ನೂ ಜಲಾಶಯದ ಗರಿಷ್ಠ ನೀರಿನ ಮಟ್ಟ 2,284 ಅಡಿ ಆಗಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 2,267.88 ಅಡಿ ಆಗಿದೆ. ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 19.50 ಟಿಎಂಸಿ ಆಗಿದೆ. ಜಲಾಶಯದಲ್ಲಿ ಇಂದು ಇರುವ ನೀರಿನ ಸಂಗ್ರಹ 10.67 ಟಿಎಂಸಿ ಆಗಿದೆ.

  • ಕಬಿನಿ ಜಲಾಶಯ ಭರ್ತಿ – 85 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ, ಹೈ ಅಲರ್ಟ್ ಘೋಷಣೆ

    ಕಬಿನಿ ಜಲಾಶಯ ಭರ್ತಿ – 85 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ, ಹೈ ಅಲರ್ಟ್ ಘೋಷಣೆ

    ಮೈಸೂರು: ಕಾವೇರಿ ಜಲಾನಯನ ವ್ಯಾಪ್ತಿಯ ಕಬಿನಿ ಜಲಾಶಯ ಭರ್ತಿಯಾಗಿದೆ. ಭಾರೀ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿರುವ ಕಾರಣ ಡ್ಯಾಂನಿಂದ 85 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿದುಬಿಡಲಾಗುತ್ತಿದೆ.

    ಇಂದು ಬೆಳಗ್ಗೆ 50 ಸಾವಿರ ಕ್ಯೂಸೆಕ್ ನೀರು ಬರುತಿತ್ತು. ಕ್ಷಣಕ್ಕೆ ನೀರಿನ ಮಟ್ಟ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆ 85 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

    ಗರಿಷ್ಠ ಮಟ್ಟ 84 ಅಡಿ ಇರುವ ಕಬಿನಿ ಜಲಾಶಯದ ನೀರಿನ ಮಟ್ಟ ಬುಧವಾರ 80 ಅಡಿ ಇತ್ತು. ಈಗ 83 ಅಡಿಗೆ ತಲುಪುತ್ತಿದ್ದಂತೆ ನೀರನ್ನು ಹೊರ ಬಿಡಲಾಗುತ್ತಿದೆ.

    ಭಾರೀ ಪ್ರಮಾಣದಲ್ಲಿ ನೀರನ್ನು ಹರಿ ಬಿಡುತ್ತಿರುವ ಹಿನ್ನೆಲೆಯಲ್ಲಿ ನಂಜನಗೂಡು, ಟಿ ನರಸಿಪುರ, ಎಚ್‍ಡಿ ಕೋಟೆಯಲ್ಲಿರುವ ನದಿ ವ್ಯಾಪ್ತಿಯ ಗ್ರಾಮದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ನಂಜನಗೂಡು ಸೇತುವೆ ಇಂದೇ ಮುಳುಗಡೆಯಾಗುವ ಸಾಧ್ಯತೆಯಿದೆ.

  • ಕಬಿನಿಯಿಂದ ತಮಿಳುನಾಡಿಗೆ ರಾತ್ರೋರಾತ್ರಿ ನೀರು ಬಿಡುಗಡೆ

    ಕಬಿನಿಯಿಂದ ತಮಿಳುನಾಡಿಗೆ ರಾತ್ರೋರಾತ್ರಿ ನೀರು ಬಿಡುಗಡೆ

    ಮೈಸೂರು: ಒಂದೆಡೆ ಪತನದಂಚಿನಲ್ಲಿ ದೋಸ್ತಿ ಸರ್ಕಾರವಿದೆ. ಇತ್ತ ಅಧಿಕಾರಿಗಳು ತಮಗೆ ಬೇಕಾದಂತೆ ದರ್ಬಾರ್ ಮಾಡುತ್ತಿದ್ದು, ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ.

    ಕಬಿನಿ ಜಲಾಶಯದಿಂದ ನಮ್ಮ ರೈತರಿಗೆ ನೀರು ಬಿಡದೆ ತಮಿಳುನಾಡಿಗೆ ಅಧಿಕಾರಿಗಳು ನೀರು ಬಿಡುಗಡೆ ಮಾಡಿದ್ದಾರೆ. ಖಾಸಗಿ ಕಂಪನಿಯ ಗೇಟ್ ಮೂಲಕ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಅಕ್ರಮವಾಗಿ ನೀರು ಬಿಟ್ಟಿದ್ದಾರೆಂದು ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಕಬಿನಿ ಜಲಾಶಯದಲ್ಲಿ ಗರಿಷ್ಠ ಮಟ್ಟ ತಲುಪುವ ಮುನ್ನ ತಮಿಳುನಾಡಿಗೆ ನೀರನ್ನು ಬಿಡಲಾಗಿದೆ. ರಾತ್ರಿಯಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಅಧಿಕಾರಿಗಳು ಬಿಟ್ಟಿದ್ದಾರೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ ತಲುಪಲು ಇನ್ನೂ 14 ಅಡಿ ಬಾಕಿ ಇದೆ. ಶುಕ್ರವಾರ 70 ಅಡಿ ಇದ್ದ ನೀರಿನ ಮಟ್ಟ ಈಗ 69 ಅಡಿಗೆ ಕುಸಿದಿದೆ. ಹೀಗಾಗಿ ಒಂದೇ ದಿನದಲ್ಲಿ ಕಬಿನಿ ಜಲಾಶಯದಲ್ಲಿ 1 ಅಡಿ ನೀರು ಕುಸಿದಿದೆ.

  • ಕಬಿನಿ ಜಲಾಶಯದ ಒಳಹರಿವು ಹೆಚ್ಚಳ

    ಕಬಿನಿ ಜಲಾಶಯದ ಒಳಹರಿವು ಹೆಚ್ಚಳ

    ಮೈಸೂರು: ಎಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ. 4,261 ಕ್ಯೂಸೆಕ್ ನೀರು ಜಲಾಶಯಕ್ಕೆ ಬರುತ್ತಿದ್ದರೆ 500 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.

    ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯಕ್ಕೆ 15,000 ಕ್ಯೂಸೆಕ್ ನೀರು ಒಳಹರಿವು ಇದ್ದರೆ, 10,000 ಕ್ಯೂಸೆಕ್ ಹೊರಹರಿವು ಇತ್ತು. ಕಬಿನಿ ಜಲಾಶಯದ ಗರಿಷ್ಟ ಮಟ್ಟ 2284 ಅಡಿ ಆಗಿದ್ದು, ಇಂದಿನ ಮಟ್ಟ 2259 ಅಡಿ ನೀರಿದೆ. ಕಳೆದ ವರ್ಷ 2282 ಅಡಿ ಇತ್ತು. ಕಳೆದ ವರ್ಷ 18.55 ಟಿಎಂಸಿ ನೀರಿದ್ದರೆ ಈಗ 7.04 ಟಿಎಂಸಿ ನೀರಿದೆ.

    ಕಾವೇರಿ ನದಿ ಪಾತ್ರದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‍ಎಸ್‍ನ ಒಳಹರಿವಿನಲ್ಲಿ ಅಲ್ಪ ಪ್ರಮಾಣದ ಏರಿಕೆ ಆಗಿದೆ. ಕೆಆರ್‍ಎಸ್‍ನ ಗರಿಷ್ಟ ಮಟ್ಟ 124.80 ಅಡಿ ಇದ್ದು, ಇಂದಿನ ಮಟ್ಟ 80.75 ಅಡಿ ಆಗಿದೆ. ಒಳಹರಿವು 2,222 ಕ್ಯೂಸೆಕ್ ಇದ್ದು, 291 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಕಬಿನಿ ರಭಸಕ್ಕೆ ನೂರಾರು ಎಕರೆ ಜಮೀನು ಬೆಳೆ ನಾಶ- ರೈತರು ಕಂಗಾಲು

    ಕಬಿನಿ ರಭಸಕ್ಕೆ ನೂರಾರು ಎಕರೆ ಜಮೀನು ಬೆಳೆ ನಾಶ- ರೈತರು ಕಂಗಾಲು

    -ಪರಿಹಾರಕ್ಕಾಗಿ ಸರ್ಕಾರಕ್ಕೆ ಆಗ್ರಹ

    ಮೈಸೂರು: ಕಬಿನಿ ರಭಸಕ್ಕೆ ನೂರಾರು ಎಕರೆ ಜಮೀನು ಬೆಳೆ ನಾಶವಾಗಿದ್ದು, ಇದೀಗ ಹೆಚ್.ಡಿ.ಕೋಟೆ ಬೆಳ್ತೂರು ಗ್ರಾಮದ ರೈತರು ಕಂಗಾಲಾಗಿದ್ದಾರೆ.

    ಕೃಷಿ ಮಾಡಲೆಂದು ಇಲ್ಲಿನ ರೈತರು ಬ್ಯಾಂಕ್ ಹಾಗೂ ಸ್ತ್ರೀ ಶಕ್ತಿ ಸಂಘಗಳಿಂದ ಸಾಲ ತಂದು ನಾಟಿ ಮಾಡಿದ್ದರು. ಆದ್ರೆ ಇದೀಗ ಪ್ರವಾಹದ ರಭಸಕ್ಕೆ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಆತಂಕಗೊಂಡಿದ್ದಾರೆ.

    ಬೆಳೆ ನಾಶದಿಂದ ಕಂಗೆಟ್ಟ ರೈತರು ಇದೀಗ ನಮಗೆ ಪರಿಹಾರ ಕೊಡಿ ಅಂತ ಆಗ್ರಹಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡದೇ ಇದ್ದಲ್ಲಿ ಆತ್ಮಹತ್ಯೆಯ ಮಾರ್ಗ ಹಿಡಿಯುವುದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕಬಿನಿ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಕ್ಕೆ

    ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಜಲಾಶಯದ ಒಳಹರಿವು 73.300 ಕ್ಯೂಸೆಕ್- ಹೊರಹರಿವು 80.000 ಕ್ಯೂಸೆಕ್ ಆಗಿದ್ದು, ಜಲಾಶಯದಿಂದ ನಾಲೆಗಳಿಗೆ 1200 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇನ್ನು ಜಲಾಶಯದ ಇಂದಿನ ನೀರಿನ ಮಟ್ಟ 2281.41 ಅಡಿಯಾಗಿದ್ದು, ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಜಮೀನಿಗೆ ನುಗ್ಗಿದ ನೀರಿನಿಂದ ಭತ್ತದ ಬೆಳೆ ನಾಶ- ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಯತ್ನಿಸಿದ ರೈತ – ವಿಡಿಯೋ ನೋಡಿ

    ಜಮೀನಿಗೆ ನುಗ್ಗಿದ ನೀರಿನಿಂದ ಭತ್ತದ ಬೆಳೆ ನಾಶ- ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಯತ್ನಿಸಿದ ರೈತ – ವಿಡಿಯೋ ನೋಡಿ

    ಮೈಸೂರು: ಕಷ್ಟಪಟ್ಟು 4 ಎಕರೆ ಜಮೀನಿನಲ್ಲಿ ಬೆಳೆದ ಭತ್ತ ನೀರಿನಲ್ಲಿ ಮುಳುಗಿ ನಾಶವಾಗಿದ್ದನ್ನು ಕಂಡ ರೈತರೊಬ್ಬರು ಅದೇ ನೀರಿನಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ನಡೆದಿದೆ.

    ಬಸವಯ್ಯ ಬೆಳೆ ನಾಶವಾಗಿದನ್ನು ಕಂಡು ಆತ್ಮಹತ್ಯೆಗೆ ಯತ್ನಿಸಿದ ರೈತ. ಕುಪ್ಪರವಳ್ಳಿ ಗ್ರಾಮ ನಿವಾಸಿಯಾದ ಬಸವಯ್ಯ 4 ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದರು. ಆದರೆ ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಹರಿದ ಪರಿಣಾಮ ಸಂಪೂರ್ಣ ಬೆಳೆ ನಾಶವಾಗಿತ್ತು. ಇದನ್ನು ಕಂಡ ಬಸವಯ್ಯ ತನಗೆ ಈ ಜೀವನ ಬೇಡ ಎಂದು ಗೋಳಾಡುತ್ತಾ ಆತ್ನಹತ್ಯೆ ಯತ್ನಿಸಿದ್ದರು.

    ಈ ವೇಳೆ ಸ್ಥಳದಲ್ಲಿದ್ದ ಯುವಕರಿಬ್ಬರು ಬಸಯ್ಯರನ್ನು ದಡಕ್ಕೆ ಕರೆ ತಂದು ರಕ್ಷಣೆ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಮಳೆನಾಡು ಸೇರಿದಂತೆ ಕಪಿಲ ನದಿಯ ಪಾತ್ರದಲ್ಲಿ ಭಾರೀ ಮಳೆಯಾದ ಕಾರಣ ಕಬಿನಿ ಜಲಾಶಯದಿಂದ ಹೆಚ್ಚಿನ ನೀರನ್ನು ಹೊರ ಬಿಡಲಾಗಿತ್ತು. ಮುಂಗಾರು ಈ ಬಾರಿ ರಾಜ್ಯದಲ್ಲಿ ಬಹುಬೇಗ ಆರಂಭವಾಗಿದ್ದರಿಂದ ಮಳೆಯ ಪ್ರಮಾಣವು ಹೆಚ್ಚಾಗಿದ್ದು ಜಲಾಶಯದಿಂದ ನೀರನ್ನು ಹೊರಬಿಡಲಾಗಿದೆ.

    ನಂಜನಗೂಡು ಸೇರಿದಂತೆ ಕಬಿನಿ ಜಲಾಶಯ ಪಾತ್ರದ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಬೆಳೆ ನಾಶವಾಗಿದ್ದು, ಸುಮಾರು 50 ಎಕರೆಗೂ ಹೆಚ್ಚಿನ ಬೆಳೆ ನೀರಿನಲ್ಲಿ ಮುಳುಗಿದೆ. ಲಕ್ಷ ಲಕ್ಷ ಸಾಲ ಮಾಡಿ ಬೆಳೆದ ಬೆಳೆ ಕೈ ಸೇರುವ ಮುನ್ನವೇ ನೀರು ಪಾಲಾಗಿದೆ. ಜಲಾಶಯದ ಅಧಿಕಾರಿಗಳು ಈ ಕುರಿತು ಮುನ್ನೆಚ್ಚರಿಕೆ ನೀಡಿದ್ದರೂ ಕೂಡ ಬೆಳೆ ಕಟಾವು ಮಾಡಲು ಇನ್ನು 15 ದಿನಗಳ ಸಮಯ ಬೇಕಾಗಿದ್ದರಿಂದ ರೈತರು ಸಹ ಅಸಹಾಯಕರಾಗಿದ್ದಾರೆ.

    https://www.youtube.com/watch?v=HbexpBIvzhA

  • ಕಬಿನಿ ಜಲಾಶಯ ಭರ್ತಿ: ಬಾಗಿನ ಅರ್ಪಿಸಿದ ಸಿಎಂ

    ಕಬಿನಿ ಜಲಾಶಯ ಭರ್ತಿ: ಬಾಗಿನ ಅರ್ಪಿಸಿದ ಸಿಎಂ

    ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆಯಲ್ಲಿ ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿ ವಂದನೆ ಸಲ್ಲಿಸಿದರು.

    ಆರಂಭದಲ್ಲಿ ಮುಂಗಾರು ಮಳೆ ಕಡಿಮೆಯಾಗಿದ್ದ ಕಾರಣ ಕಬಿನಿ ಜಲಾಶಯ ತುಂಬುವ ಯಾವ ಲಕ್ಷಣಗಳು ಇರಲಿಲ್ಲ. ಆದರೆ ಕೊನೆಯಲ್ಲಿ ಮುಂಗಾರು ಮಳೆ ಚುರುಕಾದ ಕಾರಣ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯ ಭರ್ತಿಯಾಗಿದೆ.

    2284 ಅಡಿ ಇದೆ ಎತ್ತರದ ಕಬಿನಿ ಜಲಾಶಯದ ಇಂದಿನ ಒಳಹರಿವು 15,800 ಕ್ಯೂಸೆಕ್ ಇದೆ. ಜಲಾಶಯದಿಂದ ಕಪಿಲಾ ನದಿಗೆ 8,300 ಕ್ಯೂಸೆಕ್‍ನೀರು ಹೊರ ಬಿಡಲಾಗುತ್ತಿದೆ.

    ಜಲಾಶಯ 19.50 ಟಿಎಂಸಿ ಅಡಿ ನೀರು ಸಂಗ್ರಹದ ಸಾಮರ್ಥ್ಯವಿದ್ದು, ಅದರಲ್ಲಿ 16.50 ಟಿಎಂಸಿ ಅಡಿ ನೀರನ್ನು ಮಾತ್ರ ಬಳಕೆ ಮಾಡಬಹುದಾಗಿದೆ.

    18 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ, ನಾಲ್ಕು ವರ್ಷಗಳ ಬಳಿಕ ಕಬಿನಿ ಜಲಾಶಯ ಭರ್ತಿಯಾಗಿದೆ. ಪ್ರತಿವರ್ಷ ಬೆಳೆಗೆ ಸುಮಾರು 20 ಟಿಎಂಸಿ ಅಡಿ ಮತ್ತು ಕುಡಿಯಲು 7.86 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ. ಬೆಂಗಳೂರು ಮಂಡ್ಯ ಮೈಸೂರು ನಗರಗಳು ಸೇರಿದಂತೆ ಪ್ರತಿ ತಿಂಗಳು ಕುಡಿಯಲು 0.655 ಟಿಎಂಸಿ ಅಡಿ ನೀರು ಬೇಕಿರುತ್ತದೆ.

  • ಕಬಿನಿ ಜಲಾಶಯದ ಸಂಪೂರ್ಣ ಭರ್ತಿಗೆ ಕೇವಲ 3 ಅಡಿಗಳು ಮಾತ್ರ ಬಾಕಿ

    ಕಬಿನಿ ಜಲಾಶಯದ ಸಂಪೂರ್ಣ ಭರ್ತಿಗೆ ಕೇವಲ 3 ಅಡಿಗಳು ಮಾತ್ರ ಬಾಕಿ

    ಮೈಸೂರು: ವರುಣ ದೇವನ ಕೃಪೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಭರ್ತಿಗೆ ಇನ್ನು 2 ಅಡಿ ಬೇಕಿದೆ.

    ಗರಿಷ್ಟ 2284 ಅಡಿಗಳ ಸಾಮಾಥ್ರ್ಯವನ್ನು ಹೊಂದಿರುವ ಕಬಿನಿಯಲ್ಲಿ ಈಗ ನೀರಿನ ಮಟ್ಟ 2281 ಅಡಿಗಳಿಗೆ ತಲುಪಿದೆ. ಜಲಾಶಯದ ಸಂಪೂರ್ಣ ಭರ್ತಿಗೆ ಕೇವಲ 3 ಅಡಿಗಳು ಮಾತ್ರ ಬಾಕಿ ಉಳಿದಿದೆ.

    ಕಬಿನಿ ಜಲಾನಯನ ಪ್ರದೇಶ ಹಾಗೂ ಕೇರಳದ ವೈನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಪಿಲ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇರುವ ಕಾರಣ ನದಿಯ ಪಾತ್ರದ ಇಕ್ಕೆಲಗಳ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆಯನ್ನು ಸಹ ನೀಡಲಾಗಿದೆ.

    ಜಲಾಶಯದ ಒಳಹರಿವಿನ ಪ್ರಮಾಣದಲ್ಲಿಯೂ ಭಾರೀ ಹೆಚ್ಚಳ ಕಂಡುಬಂದಿದೆ. ಇಂದು ಬೆಳಿಗ್ಗೆಯ ವೇಳೆಗೆ ಒಳಹರಿವು 13 ಸಾವಿರ ಕ್ಯೂಸೆಕ್ ಒಳಹರಿವು ಇದ್ದರೆ, 2 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಳೆಯಿಂದಾಗಿ ಒಳಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವ ಕಾರಣ ಪರಿಣಾಮ ಜಲಾಶಯದ ಒಳಹರಿವಿಗೆ ಅನುಗುಣವಾಗಿ ಹೊರಹರಿವಿನ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಯಿದೆ.

  • ಕಬಿನಿಯಿಂದ ರಾತ್ರೋರಾತ್ರಿ ತಮಿಳುನಾಡಿಗೆ ನೀರು- ಟಿ ನರಸೀಪುರ ಬಳಿ ನೀರಿಗಿಳಿದು ರೈತರ ಪ್ರತಿಭಟನೆ

    ಕಬಿನಿಯಿಂದ ರಾತ್ರೋರಾತ್ರಿ ತಮಿಳುನಾಡಿಗೆ ನೀರು- ಟಿ ನರಸೀಪುರ ಬಳಿ ನೀರಿಗಿಳಿದು ರೈತರ ಪ್ರತಿಭಟನೆ

    ಮೈಸೂರು: ಕಬಿನಿಯಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನ ಖಂಡಿಸಿ ಟಿ.ನರಸೀಪುರದ ಕಾವೇರಿ ನದಿಗೆ ಇಳಿದು ರೈತರು ಪ್ರತಿಭಟನೆ ನಡೆಸಿದ್ದಾರೆ.

    ಕಬಿನಿ ಜಲಾಶಯದಿಂದ ತಮಿಳುನಾಡಿಗೆ ರಾತ್ರೋ ರಾತ್ರಿ 6000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ 13,000 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದ ಭರ್ತಿಗೆ ಇನ್ನು 10 ಅಡಿ ಬಾಕಿ ಇದೆ. ಜಲಾಶಯ ತುಂಬುವ ಮೊದಲೇ ತಮಿಳುನಾಡಿಗೆ ನೀರು ಹರಿಸುತ್ತಿರೋದು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ರೈತರು ತಕ್ಷಣ ನೀರು ನಿಲ್ಲಿಸುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟು ಕೊನೆಗೆ ದೋಣಿಗಳ ಸಹಾಯದಿಂದ ಪ್ರತಿಭಟನಾಕಾರರನ್ನ ದಡಕ್ಕೆ ಕರೆತರಲಾಯಿತು.

    ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ನೀಡಿರುವ ಮೇಲಾಧಿಕಾರಿಗಳ ಆದೇಶವನ್ನಷ್ಟೆ ಪಾಲನೆ ಮಾಡ್ತಿದ್ದೇವೆ ಎಂದು ಜಲಾಶಯದ ಅಧಿಕಾರಿಗಳು ಹೇಳಿದ್ದಾರೆ. ಜಲಾಶಯದಿಂದ ನೇರವಾಗಿ ನದಿಯ ಮೂಲಕ 6,000 ಕ್ಯೂಸೆಕ್ ನೀರು ಹೊರಕ್ಕೆ ಬಿಟ್ಟಿದ್ದಾರೆ. ನಾಲೆಗಳ ಮೂಲಕ ನೀರು ಬಿಟ್ಟಿದ್ದರೆ ರೈತರಿಗೆ ಅನುಕೂಲವಾಗಿ ಕೆರೆ ಕಟ್ಟೆಗಳು ತುಂಬುತ್ತಿದ್ದವು. ಆದರೆ ನದಿಯ ಮೂಲಕ ಬಿಟ್ಟ ನೀರು ಕೇವಲ ತಮಿಳುನಾಡಿಗೆ ಮಾತ್ರ ಹರಿಯಲಿದೆ. ಹೀಗಾಗಿ ಈ ಭಾಗದ ರೈತರಿಗೆ ಯಾವ ಪ್ರಯೋಜನವು ಇಲ್ಲದಂತಾಗಿದೆ ಅನ್ನೋದು ರೈತರ ಆರೋಪವಾಗಿದೆ.

    ಸದ್ಯ ಜಲಾಶಯದ ಇಂದಿನ ನೀರಿನ ಮಟ್ಟ 2273.30 ಅಡಿಗಳಷ್ಟಿದ್ದು, ಜಲಾಶಯದ ಗರಿಷ್ಠ ಮಟ್ಟ 2284 ಅಡಿ, ತುಂಬೋಕೆ ಇನ್ನು 10 ಅಡಿ ಮಾತ್ರ ಬಾಕಿ ಇದೆ.