ರಾಯಚೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ. ನಿನ್ನೆ ರಾತ್ರಿಯಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ. ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ.
ಪಟ್ಟಣದ ಗಾಂಧಿನಗರದಲ್ಲಿ ರಾಜಕಾಲುವೆ ನೀರು ನೇರವಾಗಿ ಮನೆಗಳಿಗೆ ನುಗ್ಗಿದೆ. ನೀರು ಹೊರಹಾಕಲು ನಿವಾಸಿಗಳು ರಾತ್ರಿಯೆಲ್ಲಾ ಜಾಗರಣೆ ಮಾಡಿದ್ದಾರೆ. ಮನೆ ಹೊರಗಡೆ ನಿಲ್ಲಿಸಿದ್ದ ಬೈಕ್, ಕಾರುಗಳು ನೀರಿನಲ್ಲಿ ಮುಳುಗಡೆಯಾಗಿವೆ. ಮನೆಯಲ್ಲಿನ ದವಸ ಧಾನ್ಯಗಳು ನೀರುಪಾಲಾಗಿವೆ. ನಿರಂತರ ಮಳೆಗೆ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ರಾತ್ರಿಯಿಡಿ ಬಿಡುವು ನೀಡದೇ ಸುರಿದ ಧಾರಾಕಾರ ಮಳೆಗೆ ಮಸ್ಕಿ ಪಟ್ಟಣದ ಜನ ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯಾದ್ಯಂತ ಮಳೆ ಇಂದು ಕೂಡ ಮುಂದುವರೆದಿದೆ. ಇದನ್ನೂ ಓದಿ: ಕೊಲೆ ಆರೋಪಿ ಯುವತಿ ಮೇಲೆ ಮಾರಣಾಂತಿಕ ಹಲ್ಲೆ
ಮಳೆ ಹಾಗೂ ವೀಕೆಂಡ್ ಕರ್ಫ್ಯೂ ನಡುವೆಯೂ ರಾಯಚೂರು ನಗರದಲ್ಲಿ ತರಕಾರಿ, ಹಣ್ಣು, ಹೂ ವ್ಯಾಪಾರ ನಡೆದಿದೆ. ನಗರದ ಹಲವೆಡೆ ಮಳೆಯಲ್ಲೇ ಮಹಿಳೆಯರು ತರಕಾರಿ ವ್ಯಾಪಾರ ನಡೆಸಿದ್ದಾರೆ. ಮಳೆ ಜೋರಾಗಿ ಸುರಿಯುತ್ತಿರುವುದರಿಂದಾಗಿ ಜನರ ಓಡಾಟಕ್ಕೆ ಬ್ರೇಕ್ ಬಿದ್ದಂತಾಗಿದೆ.
ದೆಹ್ರಾಡೂನ್: ಉತ್ತರಾಖಂಡ್ ಸರ್ಕಾರ ರಾಜ್ಯದಲ್ಲಿ ಕೊರೊನಾ ಕರ್ಫ್ಯೂವನ್ನು ಸೋಮವಾರದಿಂದ ವಿಸ್ತರಿಸಿದ್ದು, ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳವವರಿಗೆ ಕೋವಿಡ್-19 ನೆಗೆಟಿವ್ ವರದಿಯನ್ನು ತರಲು ಕಡ್ಡಾಯಗೊಳಿಸಿದೆ.
ಮೇ 18ರ ಬೆಳಗ್ಗೆ 6 ಗಂಟೆಗೆ ಮುಕ್ತಾಯವಾಗಬೇಕಿದ್ದ ಕೋವಿಡ್-19 ಕರ್ಫ್ಯೂ ಮೇ 25ರ ಬೆಳಗ್ಗೆ 6 ಗಂಟೆಯವರೆಗೂ ವಿಸ್ತರಿಸಲಾಗಿದೆ ಎಂದು ಕ್ಯಾಬಿನೆಟ್ ಸಚಿವರು ಮತ್ತು ರಾಜ್ಯ ಸರ್ಕಾರದ ಅಧಿಕೃತ ವಕ್ತಾರ ಸುಬೋಧ್ ಯುನಿಯಲ್ ತಿಳಿಸಿದ್ದಾರೆ.
ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಜನರು ತಮ್ಮ ಕೋವಿಡ್-19 ನೆಗೆಟಿವ್ ಪರೀಕ್ಷಾ ವರದಿಯನ್ನು ತೆಗೆದುಕೊಂಡು ಬರಬೇಕು. ಅದು 72 ಗಂಟೆಗಳಿಗಿಂತ ಒಳಗಿನದ್ದಾಗಿರಬೇಕು ಹಾಗೂ ಮದುವೆ ಸಮಾರಂಭಗಳಿಗೆ 20 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 20 ಮಂದಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅಲ್ಲದೇ ಶವಸಂಸ್ಕಾರಕ್ಕೆ ಹೋಗುವವರಿಗೆ ಆಡಳಿತವು ಕರ್ಫ್ಯೂ ಪಾಸ್ ನೀಡುವುದು ಅಗತ್ಯವಾಗಿದೆ. ಒಟ್ಟಾರೆ ಕೊರೊನಾ ಸೋಂಕನ್ನು ತಡೆಗಟ್ಟಲು ಕರ್ಫ್ಯೂ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಶ್ರೀನಗರ: ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಜಮ್ಮು-ಕಾಶ್ಮೀರದ ಆಡಳಿತವು ಯುಟಿಯ 20 ಜಿಲ್ಲೆಗಳಲ್ಲಿ ಒಂದು ವಾರ ಕೊರೊನಾ ಕರ್ಫ್ಯೂವನ್ನು ವಿಸ್ತರಿಸಿದೆ.
ಮೇ 17ರ ಬೆಳಗ್ಗೆ 7 ಗಂಟೆಯವರೆಗೆ ಜಮ್ಮು-ಕಾಶ್ಮೀರದ 20 ಜಿಲ್ಲೆಗಳಲ್ಲಿ ಕಫ್ರ್ಯೂವನ್ನು ವಿಧಿಸಲಾಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಕರ್ಫ್ಯೂ ಕಟ್ಟುನಿಟ್ಟಾಗಿರುತ್ತದೆ ಎಂದು ಡಿಐಪಿಆರ್ ತನ್ನ ಟ್ವಿಟ್ಟರ್ ಖಾತೆ ಮೂಲಕ ತಿಳಿಸಿದೆ.
“CORONA CURFEW” imposed in the district is extended further by 07 days till 7 am on Monday 17-05-2021.
It will be more strict.
# Permissible gathering for marriage is reduced to 25 with immediate effect .
ALL ARE REQUESTED TO CO-OPERATE.@OfficeOfLGJandK@diprjk@PoonchPolice
ಅಷ್ಟೇ ಅಲ್ಲದೇ ಮದುವೆ ಸಮಾರಂಭಗಳಲ್ಲಿ 25 ಜನರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳಿದೆ ಷರತ್ತು ಬದ್ಧ ಅವಕಾಶ ನೀಡಲಾಗಿದೆ. ಜನರ ಅನಗತ್ಯ ಸಂಚಾರವನ್ನು ತಡೆಯಲು ಪೊಲೀಸರು ಮತ್ತು ಸೈನಿಕರ ಪಡೆಗಳನ್ನು ಯುಟಿಯ ಎಲ್ಲಾ ಜಿಲ್ಲೆಗಳ ರಸ್ತೆಯ ಚೆಕ್‍ಪೋಸ್ಟ್‍ಗಳಲ್ಲಿ ನಿಯೋಜಿಸಿದೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುಮಾರು 5 ಸಾವಿರಕ್ಕೂ ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, 60 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಧಾರವಾಡ: ಕೊರೊನಾ ಕರ್ಫ್ಯೂನಿಂದ ರೈತರಿಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ, ರೈತರು ತಮ್ಮ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಬಹುದು ಎಂದು ಸರ್ಕಾರ ಹೇಳುತ್ತದೆ. ಆದರೆ ಇದೀಗ ಮಾವು ಬೆಳೆಗಾರರಿಗೆ ನಷ್ಟವಾಗುತ್ತಿದ್ದು, ಜ್ಯೂಸ್ ಕಂಪನಿಗಳು ಕಡಿಮೆ ಬೆಲೆಗೆ ಮಾವು ಖರೀದಿಸುತ್ತಿವೆ.
ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿ ಮಾಡಿದಾಗಿನಿಂದ ಮಾವು ಬೆಳಗಾರರಿಗೆ ಸಂಕಷ್ಟ ಎದುರಾಗಿದ್ದು, ಜಿಲ್ಲೆಯಿಂದ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿಗೆ ಅತೀ ಹೆಚ್ಚು ಮಾವು ಹೋಗುತ್ತೆ. ಆದರೆ ಕೊರೊನಾ ಕರ್ಫ್ಯೂ ಜಾರಿಯಾದಾಗಿನಿಂದ ಮಾವಿನ ಬೆಲೆ ಏಕಾಏಕಿ ಕುಸಿದಿದೆ.
ಕರ್ಫ್ಯೂಗಿಂತ ಮೊದಲು ಇದೇ ಮಾವು ಪ್ರತಿ ಕೆ.ಜಿಗೆ 35 ರೂಪಾಯಿಗೆ ಮಾರಾಟವಾಗುತಿತ್ತು. ಆದರೆ ಕರ್ಫ್ಯೂ ಜಾರಿಯಾದಾಗಿನಿಂದ ಪ್ರತಿ ಕೆ.ಜಿ.ಗೆ 25 ರೂಪಾಯಿಗೆ ಬೆಲೆ ಕುಸಿದಿದೆ. ಮಾವು ಹೆಚ್ಚು ದಿನಗಳ ಕಾಲ ಇಡಲು ಆಗುವುದಿಲ್ಲ, ಕೆಟ್ಟು ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅನಿವಾರ್ಯವಾಗಿ ಮಾವು ಬೆಳೆಗಾರರು ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ.
ಧಾರವಾಡದಿಂದ ಹೋಗುವ ಬಹುತೇಕ ಮಾವು ಜ್ಯೂಸ್ ಕಂಪನಿಗಳಿಗೇ ಹೋಗುತ್ತೆ. ಕರ್ಫ್ಯೂ ಜಾರಿಯಾಗಿದ್ದರಿಂದ ಜ್ಯೂಸ್ ಕಂಪನಿಯವರು ಅವಕಾಶ ಮಾಡಿಕೊಂಡಿದ್ದು, ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಕಳೆದ ವರ್ಷ ಸಹ ಇದೇ ರೀತಿ ಮಾವು ಬೆಳೆಗಾರರು ಲಾಕ್‍ಡೌನದಿಂದ ನಷ್ಟ ಅನುಭವಿಸಿದ್ದರು. ಈ ಬಾರಿ ಅದೇ ರೀತಿಯ ಸ್ಥಿತಿ ನಿರ್ಮಾಣವಾಗಿದೆ.
ಚಾಮರಾಜನಗರ: ಕಳೆದ ಮೂರು ದಿನಗಳಿಂದ ಲಾಕ್ ಡೌನ್ ಮಾದರಿಯ ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಚಾಮರಾಜನಗರದಲ್ಲಿ ವಾಹನ ಸವಾರರು ಯಾವುದಕ್ಕೂ ಕೇರ್ ಮಾಡದೇ ಜನರು ಒಂದಲ್ಲ ಒಂದು ಕಾರಣ ಹೇಳಿಕೊಂಡು ಓಡಾಡುತ್ತಿದ್ದಾರೆ.
ನಗರದ ಭುವನೇಶ್ವರಿ ವೃತ್ತದ ದೃಶ್ಯಗಳನ್ನು ಕಣ್ಣಾರೆ ಕಂಡು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಸ್ಥಳದಲ್ಲೇ ಎಸ್ಪಿಗೆ ಫೋನ್ ಕರೆ ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿಗೆ ಬಂದು ನೋಡಿ. ಯಾವ ರೀತಿ ಕರ್ಫ್ಯೂ ಉಲ್ಲಂಘನೆ ಆಗುತ್ತಿದೆ. ಮೂವರು ಪೊಲೀಸ್ ಸಿಬ್ಬಂದಿ ಬಿಟ್ಟರೆ ಸ್ಥಳದಲ್ಲಿ ಯಾವ ಹಿರಿಯ ಪೊಲೀಸ್ ಅಧಿಕಾರಿಯು ಇಲ್ಲ. ಸಂಬಂಧಪಟ್ಟ ಸಬ್ ಇನ್ಸ್ ಪೆಕ್ಟರ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಎಂದು ಸೂಚನೆ ನೀಡಿದರು.
ಹೀಗೆ ಹೇಳಿ ಫೋನ್ ಸಂಪರ್ಕ ಕಡಿತ ಮಾಡಿದ ಕೆಲವೇ ಹೊತ್ತಿನಲ್ಲಿ ತಕ್ಷಣ ಸ್ಥಳಕ್ಕೆ ಬಂದ ಡಿವೈಎಸ್ಪಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ರನ್ನು ಸಹ ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ಸಮಜಾಯಿಷಿ ನೀಡಲು ಬಂದ ಪೊಲೀಸ್ ಅಧಿಕಾರಿಗಳ ವಿರುದ್ದ ಮತ್ತೆ ಗರಂ ಆದ ಜಿಲ್ಲಾಧಿಕಾರಿ, ಇದೇನಾ ಕರ್ಫ್ಯೂ? ಅರ್ಥ ಆಗ್ತಾ ಇಲ್ವಾ? ಯಾವ ಭಾಷೆಯಲ್ಲಿ ಹೇಕಬೇಕು? ಮಾತು ಕಡಿಮೆ ಮಾಡಿ ಕೆಲಸ ಮಾಡಿ. ಹೀಗೆ ಜನ ಸಂಚರಿಸಲು ಬಿಟ್ಟರೆ ಏನು ಪ್ರಯೋಜನ? ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಸೀಜ್ ಮಾಡಿ, ಕೇಸ್ ಹಾಕಿ ಜನಸಂಚಾರ ನಿಯಂತ್ರಣ ಮಾಡಿ ಎಂದು ಖಡಕ್ ಸೂಚನೆ ನೀಡಿದರು.
ಬೆಂಗಳೂರು: ಕರ್ಫ್ಯೂ ವಿಚಾರದಲ್ಲಿ ಸಚಿವರು ಒಂದೊಂದು ರೀತಿಯ ಹೇಲಿಕೆ ನೀಡುತ್ತಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೈಟ್ ಕರ್ಫ್ಯೂ ಮುಗಿದ ಅಧ್ಯಾಯವೆಂದರೆ, ಕಂದಾಯ ಸಚಿವ ಆರ್.ಅಶೋಕ್ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಅಗತ್ಯ ಎಂದು ಹೇಳಿದರು.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಯಾವದೇ ರೀತಿಯ ಕರ್ಫ್ಯೂ ಜಾರಿಗೆ ತಂದರೂ ಸರಿಯಾದ ರೀತಿಯಲ್ಲಿ ತರಬೇಕು. ಕಾಟಾಚಾರಕ್ಕೆ ಕರ್ಫ್ಯೂ ಜಾರಿಗೆ ತರದೆ, ಸೂಕ್ತ ನಿರ್ಬಂಧಗಳನ್ನು ಹೇರುವ ಮೂಲಕ ಜನರ ಓಡಾಟ ತಪ್ಪಿಸಬೇಕು. ರಿಯಲ್ ಕರ್ಫ್ಯೂ ಜಾರಿಗೆ ತರಲು ಮುಖ್ಯಮಂತ್ರಿಗಳೊಂದಿಗೆ ನಾನು ಚರ್ಚಿಸುತ್ತೇನೆ. ಈಗ ಕರ್ಫ್ಯೂ ಜಾರಿಗೆ ತರುವುದು ತುಂಬಾ ಮುಖ್ಯವಾಗಿದೆ. ಬ್ರಿಟನ್ ವೈರಸ್ ತುಂಬಾ ವೇಗವಾಗಿ ಹಬ್ಬುತ್ತದೆ ಎಂದು ಆರ್.ಅಶೋಕ್ ತಿಳಿಸಿದರು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಸಂಬಂಧಿಸಿದಂತೆ 15 ದಿನಗಳ ಹಿಂದೆಯೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಾನು ಸೇರಿದಂತೆ ಹಲವರು ಸಭೆ ಸೇರಿ ಮಾರ್ಗಸೂಚಿಯನ್ನು ಹೊಡಿಸಿದ್ದೇವೆ. ಬೆಂಗಳೂರಿನಲ್ಲಿಯೇ ಹೊಸ ವರ್ಷದ ಆಚರಣೆ ಹೆಚ್ಚಾಗಿ ನಡೆಯುವುದರಿಂದ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದಾರೆ. ಕರ್ಫ್ಯೂ ನಿಯಮಗಳನ್ನು ಜನ ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಪಾಲಿಸುವುದು ಜನ ಸಾಮಾನ್ಯರ ಕರ್ತವ್ಯವಾಗಿದೆ ಎಂದು ಎಚ್ಚರಿಸಿದರು.
ಶಾಲಾಕಾಲೇಜು ತೆರೆಯುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ತೀರ್ಮಾನಿಸುತ್ತಾರೆ. ಕೆಲವು ಪೋಷಕರು ಶಾಲೆ ತೆರೆಯಬೇಕೆಂದು, ಮತ್ತೆ ಕೆಲವರು ಶಾಲೆ ತೆರೆಯುವುದುಬೇಡ ಎಂದು ಹೇಳುತ್ತಿದ್ದಾರೆ. ಮಕ್ಕಳ ಭವಿಷ್ಯದಲ್ಲಿ ಇದು ಕಪ್ಪು ಚುಕ್ಕಿಯಾಗಬಾರದು. ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಾಲೆಯನ್ನು ಪ್ರಾರಂಭಿಸುವುದು ಮುಖ್ಯವಾಗಿದೆ. ಸರ್ಕಾರ ಶೀಘ್ರದಲ್ಲೇ ಗೊಂದಲ ನಿವಾರಣೆ ಮಾಡುತ್ತದೆ ಎಂದು ತಿಳಿಸಿದರು.
ಧರ್ಮೇಗೌಡರ ಸಾವಿನ ಕುರಿತು ತನಿಖೆ ಅಗತ್ಯ
ಧರ್ಮೇಗೌಡರ ಸಾವಿನ ಕುರಿತು ಬೇಸರ ವ್ಯಕ್ತಪಡಿಸಿದ ಆರ್.ಅಶೋಕ್, ವಿಧಾನ ಸೌಧದ ಮಾಜಿ ಉಪಸಭಾ ಪತಿ ಧರ್ಮೇಗೌಡರ ಸಾವು ನಿಜಕ್ಕೂ ದುಃಖ ತಂದಿದೆ. ಅವರ ಸಾವು ರಾಜಕಾರಣಿಗಳಿಗೆ ಒಂದು ಪಾಠ ಆಗಬೇಕು. ಧರ್ಮೇಗೌಡ ಒಬ್ಬ ಸಜ್ಜನ ರಾಜಕಾರಣಿ, ಅವರ ಸಾವು ನಿಜಕ್ಕೂ ಎಲ್ಲರಿಗೂ ದುಃಖ ತಂದಿದೆ. ವಿಧಾನ ಪರಿಷತ್ತಿನಲ್ಲಿ ನಡೆದ ಗಲಾಟೆಯಿಂದ ಬಹಳ ಮನನೊಂದಿದ್ದರು ಎಂದು ಡೆತ್ ನೋಟ್‍ನಲ್ಲಿ 2 ಬಾರಿ ಉಲ್ಲೇಖನ ಮಾಡಿದ್ದಾರೆ ಎಂಬ ಮಾಹಿತಿ ನನಗೆ ದೊರೆತಿದ್ದು, ಈ ವಿಚಾರವಾಗಿ ತನಿಖೆಯ ನಂತರ ಸತ್ಯ ಬಹಿರಂಗಗೊಳ್ಳಲಿದೆ ಎಂದರು.
ವಿಧಾನ ಪರಿಷತ್ತಿನಲ್ಲಿ ಯಾವುದೇ ಗಲಾಟೆ ನಡೆಯುತ್ತಿದ್ದಾಗ ಕುರ್ಚಿಯಿಂದ ಅವರನ್ನು ಎಳೆದು ಮತ್ತೊಬ್ಬರು ಕುಳಿತುಕೊಳ್ಳುವುದು ಒಳ್ಳೆಯ ಪರಿಪಾಠವಲ್ಲ. ಕುರ್ಚಿ ಬೇಕಿದ್ದಲ್ಲಿ ಮಾತಿನ ಮೂಲಕ ಕೇಳಬಹುದಾಗಿತ್ತು. ಈ ಹಿಂದೆ ಶಂಕರ್ ಮೂರ್ತಿಯವರು ಎಂಎಲ್‍ಸಿಗಳು ಕುಳಿತುಕೊಳ್ಳುವ ಸ್ಥಳದಲ್ಲಿ ಕುಳಿತುಕೊಂಡು ಉಪಸಭಾಪತಿಗಳಿಗೆ ಸಭೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಶಂಕರ್ ಮೂರ್ತಿಯವರು ಪಾಲಿಸಿದ ನಿಯಮವನ್ನೇ ಧರ್ಮೇಗೌಡರು ಪಾಲನೆ ಮಾಡಿದ್ದರು. ಧರ್ಮೇಗೌಡರ ಸಾವಿನ ವಿಚಾರವಾಗಿ ತನಿಖೆಯಾಗಬೇಕು ಮುಂದೆ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ತಿನ ಬಾಗಿಲಿಗೆ ಒದೆಯುವುದು, ಎಳೆದಾಡುವ ಪದ್ಧತಿಗಳನ್ನು ರಾಜಕಾರಣಿಗಳು ಮಾಡಬಾರದು. ಸುಸಜ್ಜಿತ ಪ್ರಜಾಪ್ರಭುತ್ವದ ವ್ಯವಸ್ಥೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡರಲ್ಲಿಯೂ ಬರಬೇಕು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ. ಹೊಡಿಬಡಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಒಳ್ಳೆಯ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಪ್ರಯತ್ನ ಮಾಡಿ, ಧರ್ಮೇಗೌಡರ ಸಾವು ರಾಜಕಾರಣಿಗಳಿಗೆ ಒಂದು ಪಾಠ ಆಗಬೇಕು. ಎಲ್ಲರಿಗೂ ಮಾರ್ಗದರ್ಶನವಾಗಬೇಕು. ಆಗ ಅವರ ಆತ್ಮಕ್ಕೆ ಶಾಂತಿಸಿಗುತ್ತದೆ ಎಂದರು.
ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಜ್ಯಾದ್ಯಂತ ಬಿಜೆಪಿ ಸ್ಥಳೀಯ ಮಟ್ಟದಲ್ಲಿ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗೆಲುವು ಸಾಧಿಸುವ ಮೂಲಕ ಮೇಲು ಗೈ ಸಾಧಿಸಿದೆ. ಇದರಿಂದ ಕಾಂಗ್ರೆಸ್ ಹಿನ್ನಡೆಗೊಳ್ಳುವ ಸಂದರ್ಭ ಸೃಷ್ಟಿಸಿದ್ದೇವೆ. ಕರ್ನಾಟಕದ ಇಡೀ ಜನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಆಶೀರ್ವಾದ ಮಾಡಿದ್ದಾರೆ. ಜನ ಕೊಟ್ಟಿರುವ ಬೆಂಬಲಕ್ಕೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಯಡಿಯೂರಪ್ಪನವರ ನೇತೃತ್ವದಲ್ಲಿ ಮಾಡುವುದಾಗಿ ತಿಳಿಸಿದರು.
ಉಡುಪಿ: ಭಾನುವಾರದ ಕೊರೊನಾ ಕರ್ಫ್ಯೂ ನಡುವೆ ಉಡುಪಿ ಜಿಲ್ಲೆಯಲ್ಲಿ 27 ಜೋಡಿಗಳು ಹಸೆಮಣೆಗೆ ಏರಿವೆ. ರಾಜ್ಯ ಸರ್ಕಾರ ಭಾನುವಾರ ಕಠಿಣ ಕರ್ಫ್ಯೂ ಘೋಷಣೆ ಮಾಡಿದರೂ ಮೊದಲೇ ನಿರ್ಧಾರವಾದ ಮದುವೆಗಳಿಗೆ ಅನುಮತಿ ಕೊಟ್ಟಿತ್ತು. ಹೀಗಾಗಿ ಜಿಲ್ಲೆಯಲ್ಲಿ ಮದುವೆ ನಿಶ್ಚಿತಾರ್ಥ ಸೇರಿದಂತೆ 27 ಶುಭ ಕಾರ್ಯಗಳು ನಡೆದಿದೆ.
ಕುಂದಾಪುರ ಮತ್ತು ಕಾರ್ಕಳ ತಾಲೂಕಿನಲ್ಲಿ ತಲಾ ಆರು ಮದುವೆಗಳಾಗಿದೆ. ಉಡುಪಿ ಮತ್ತು ಬೈಂದೂರಿನಲ್ಲಿ ತಲಾ ನಾಲ್ಕು ಮದುವೆಗಳಾಗಿದ್ದು, ನಿಶ್ಚಿತಾರ್ಥ ಮತ್ತು ರಿಸೆಪ್ಷನ್‍ಗಳು ಕಾಪು ತಾಲೂಕು ಮತ್ತು ಬ್ರಹ್ಮಾವರದಲ್ಲಿ ನಡೆದಿದೆ. ತಹಶೀಲ್ದಾರ್ ಎಲ್ಲ ಕಾರ್ಯಕ್ರಮಗಳಿಗೆ ಪರವಾನಿಗೆ ಕೊಟ್ಟ ನಂತರ ಶುಭ ಕಾರ್ಯಗಳು ನೆರವೇರಿದೆ.
ಉಡುಪಿ ಅಂಬಲಪಾಡಿಯಲ್ಲಿ ಕೃಷ್ಣದಾಸ್ ಮತ್ತು ಐಶ್ವರ್ಯ ಮನೆಯಲ್ಲೇ ಸತಿಪತಿಗಳಾದರು. ಬೆಂಗಳೂರಿನಲ್ಲಿ ಅಕೌಂಟೆಂಟ್ ಆಗಿರುವ ಕೃಷ್ಣ ದಾಸ್ ಎರಡು ತಿಂಗಳ ಹಿಂದೆ ಮದುವೆ ತಯಾರಿಗೆ ಬಂದವರು ಊರಲ್ಲೇ ಲಾಕ್ ಆಗಿದ್ದರು. ಐಶ್ವರ್ಯ ಉಡುಪಿಯ ಖಾಸಗಿ ಕಾಲೇಜಿನಲ್ಲಿ ಕಾಮರ್ಸ್ ಟೀಚಿಂಗ್ ಮಾಡುತ್ತಿದ್ದಾರೆ. ಉಡುಪಿಯ ಶ್ರೀಕೃಷ್ಣ ಸಭಾದಲ್ಲಿ ಮದುವೆ ಸಿದ್ಧತೆಗಳನ್ನು ಮಾಡಲಾಗಿತ್ತು. ಆದರೆ ಸರ್ಕಾರ ಏಕಾಏಕಿ ಕರ್ಫ್ಯೂ ಹೇರಿದೆ. ಹಾಗಾಗಿ ಮದುವೆಯನ್ನು ಹಾಲ್‍ನಿಂದ ಮನೆಗೆ ಶಿಫ್ಟ್ ಮಾಡಲಾಯಿತು.
ಒಂದು ಸಾವಿರ ಮಂದಿ ಸಂಬಂಧಿಕರು, ಗೆಳೆಯರು ಆಪ್ತರು ನೆರೆಹೊರೆಯವರು ಸೇರಿ ಮದುವೆ ಮಾಡುವುದಾಗಿ ನಿಶ್ಚಯ ಮಾಡಿದ್ದೆವು. ಆದರೆ ಸರ್ಕಾರದ ನಿಯಮಕ್ಕೆ ಬೆಲೆ ಕೊಡುವುದು ಅಗತ್ಯ. ಈ ಸಂಖ್ಯೆಯನ್ನು 40 ರಿಂದ 50ಕ್ಕೆ ಇಳಿಸಿದೆವು. ಮನೆಯಲ್ಲೇ ಮದುವೆ ಮಾಡುವುದಾಗಿ ಗುರು ಹಿರಿಯರು ತೀರ್ಮಾನ ಮಾಡಿದ್ದರು ಎಂದು ಸಂಬಂಧಿ ಸುಮನ್ ಹೇಳಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೃಷ್ಣದಾಸ್, ಅದ್ಧೂರಿಯಾಗಿ ಮದುವೆ ಆಗಬೇಕು ಎಂದು ಆಸೆ ಇತ್ತು. ಆದರೆ ನಮ್ಮ ಖುಷಿಗಿಂತ ದೇಶದ ಹಿತ ಮುಖ್ಯ. ನಾವು ಬಹಳ ಸಿಂಪಲ್ಲಾಗಿ ಮದುವೆ ಆಗುತ್ತಿದ್ದೇವೆ ಎಂದರು. ಐಶ್ವರ್ಯ ಮಾತನಾಡಿ, ನನ್ನ ಯಾವ ಗೆಳೆಯ ಗೆಳತಿಯರು ಮದುವೆಗೆ ಬಂದಿಲ್ಲ. ಕುಟುಂಬದಲ್ಲೂ ಕೂಡ ಹತ್ತಿರ ಸಂಬಂಧಿಗಳು ಮಾತ್ರ ಬಂದಿದ್ದಾರೆ. ಸಿಂಪಲ್ಲಾಗಿ ಮದುವೆಯಾಗಿದ್ದೇವೆ ಎಂಬ ಖುಷಿ ಇದೆ. ಸಾಂಪ್ರದಾಯಿಕವಾಗಿ ಹಿಂದೆ ತೀರ್ಮಾನಿಸಿದ ದಿನಾಂಕದಂದೇ ಮದುವೆಯಾಗಿದ್ದೇವೆ ಎಂದು ಖುಷಿ ಹಂಚಿಕೊಂಡರು.
– ಮುನ್ನೆಚ್ಚರಿಕೆಯಾಗಿ ಇನ್ನೆರಡು ದಿನ ಕರ್ಫ್ಯೂ ಮುಂದುವರಿಕೆ
ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ಹೊತ್ತಿ ಉರಿದಿದ್ದ ಮಂಗಳೂರಿನಲ್ಲಿ ಪರಿಸ್ಥಿತಿ ಸದ್ಯ ಶುಕ್ರವಾರದ ಮಟ್ಟಿಗೆ ಶಾಂತವಾಗಿದೆ. ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರ ಅಂತ್ಯಕ್ರಿಯೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ನಡೆದಿದೆ.
ನೌಶೀನ್ ಮತ್ತು ಅಬ್ದುಲ್ ಜಲೀಲ್ ಮರಣೋತ್ತರ ಪರೀಕ್ಷೆ ವೆನ್‍ಲಾಕ್ ಆಸ್ಪತ್ರೆಯಲ್ಲಿ ನಡೆಯಿತು. ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಇಂದು ಸಂಜೆ ಮೆಕಾನಿಕ್ ನೌಶೀನ್ ಅಂತ್ಯಕ್ರಿಯೆ ಕುದ್ರೋಳಿಯಲ್ಲಿಯೂ, ಮೀನು ಮಾರಾಟಗಾರ ಅಬ್ದುಲ್ ಜಲೀಲ್ ಅಂತ್ಯಕ್ರಿಯೆ ಕಂದುಕ್‍ನಲ್ಲಿ ನೆರವೇರಿತು. ಕರ್ಫ್ಯೂ ನಡುವೆಯೂ ಇಂದು ಬೆಳಗಿನ ಜಾವ ಉಪ್ಪಿನಂಗಡಿ, ಪುಂಜಾಲಕಟ್ಟೆ, ಕುಪ್ಪಟ್ಟಿಯಲ್ಲಿ ಬಸ್‍ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಬಸ್ ಗಾಜುಗಳು ಪುಡಿ ಪುಡಿಯಾಗಿದೆ.
ಕುದ್ರೋಳಿ ಸಮೀಪ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತ ಆಗಿಲ್ಲ. ಮಂಗಳೂರು ನಗರದಲ್ಲಿ ವಾಹನ ಸಂಚಾರ ಸಂಪೂರ್ಣ ಕಡಿಮೆ ಆಗಿದ್ದು, ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲಿದೆ. ಮನೆಯಿಂದ ಹೊರಬರಬೇಡಿ ಅಂತಾ ಜನರಿಗೆ ಪೊಲೀಸರು ಮೈಕ್‍ನಲ್ಲಿ ಕೂಗಿ ಕೂಗಿ ಹೇಳುತ್ತಿದ್ದರು. ಆದರೂ ಕುಂಟು ನೆಪ ಹೇಳಿಕೊಂಡು ಹೊರಬರುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದರು. ಗುಪ್ತಚರ ಇಲಾಖೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮಂಗಳೂರಿನಲ್ಲಿ ಬೀಡುಬಿಟ್ಟಿದ್ದು, ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಪರಿಸ್ಥಿತಿ ಹತೋಟಿಗೆ ಬರುತ್ತಿದ್ದಂತೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಡೀ ದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮನೆಯಲ್ಲೇ ಉಳಿದಿದ್ದ ಸಿಎಂ, ಪೊಲೀಸ್ ಅಧಿಕಾರಿಗಳು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆಗೆ ಸಭೆ ನಡೆಸಿದರು. ಸಿಎಂ ಯಡಿಯೂರಪ್ಪ ಅವರು ಮಂಗಳೂರಿಗೆ ಶನಿವಾರ ಭೇಟಿ ನೀಡುತ್ತಿದ್ದು, ಸಕ್ರ್ಯೂಟ್ ಹೌಸ್‍ನಲ್ಲಿ ಅಧಿಕಾರಿಗಳ ಸಭೆ ನಡೆಸಿ, ಗೋಲಿಬಾರ್‌ಗೆ ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಮಂಗಳೂರಿನಲ್ಲಿ ಇಂದು ಕೂಡ ಕರ್ಫ್ಯೂ ಮುಂದುವರಿಸಿದ್ದು, ಇಂಟರ್‍ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ನಾಳೆಯೂ ಕೂಡ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮಾನ್ಯತಾ ಪತ್ರ ಹೊಂದಿಲ್ಲದ ಕಾರಣಕ್ಕಾಗಿ ವಶಕ್ಕೆ ಪಡೆದಿದ್ದ ಪತ್ರಕರ್ತರನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕರ್ನಾಟಕ ಸರ್ಕಾರಕ್ಕೂ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದರು.