Tag: ಕಪ್ಪತ್ತಗುಡ್ಡ

  • ಕಪ್ಪತ್ತಗುಡ್ಡದಲ್ಲಿ ಮತ್ತೆ ಪ್ರತ್ಯಕ್ಷವಾದ ಚಿರತೆ

    ಕಪ್ಪತ್ತಗುಡ್ಡದಲ್ಲಿ ಮತ್ತೆ ಪ್ರತ್ಯಕ್ಷವಾದ ಚಿರತೆ

    ಗದಗ: ಎದುರಿಗೆ ಬಂದ ಚಿರತೆಯನ್ನು (Leopard) ಕಂಡು ವಾಹನ ಸವಾರರು ಆತಂಕಕ್ಕೆ ಒಳಗಾದ ಘಟನೆ ಗದಗ (Gadag) ಜಿಲ್ಲೆಯಲ್ಲಿ ನಡೆದಿದೆ.

    ಗದಗ ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಡೋಣಿ ಗ್ರಾಮದ ಬಳಿಯ ಕಪ್ಪತ್ತಗುಡ್ಡದಲ್ಲಿ (Kappatagudda) ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಪ್ಪತ್ತಗುಡ್ಡದ ಗಾಳಿಗುಂಡಿ ಬಸವಣ್ಣ ದೇವಸ್ಥಾನದ ಬಳಿ ಸ್ಕಾರ್ಪಿಯೋ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಚಿರತೆ ಕಂಡುಬಂದಿದೆ. ರಸ್ತೆಮಧ್ಯ ಚಿರತೆ ಅಲ್ಲಾಡದಂತೆ ಗಾಂಭೀರ್ಯವಾಗಿ ನಿಂತುಕೊಂಡಿದ್ದರಿಂದ ಒಂದು ಕ್ಷಣ ವಾಹನ ಸವಾರರು ಭಯಭೀತರಾಗಿದ್ದಾರೆ. ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ: ಯುಗಾದಿ ಹಬ್ಬದಂದು ಮತ್ತೆ ಮುನ್ನೆಲೆಗೆ ಬಂತು ಹಲಾಲ್ ಬಾಯ್ಕಾಟ್ ಅಭಿಯಾನ  

    ಘಟನೆಯಿಂದ ಕಪ್ಪತ್ತಗುಡ್ಡ ಸೆರಗಿನ ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ. ಕಪ್ಪತ್ತಗುಡ್ಡಕ್ಕೆ ಬರುವ ಜನರಿಗೆ ಚಿರತೆ ನೋಡಿದ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ (Forest Department) ಸ್ಥಳೀಯರು ಆಗ್ರಹಿಸಿದ್ದಾರೆ. ಈ ಹಿಂದೆಯೂ ಕಪ್ಪತ್ತ ಮಲ್ಲೇಶ್ವರ ದೇವಸ್ಥಾನದ ಬಳಿ, ಕಡಕೋಳ ಭಾಗ ಹಾಗೂ ಮೈನಿಂಗ್ ಪ್ರದೇಶಲ್ಲಿ ಚಿರತೆ ಸೆರೆಹಿಡಿಯಲಾಗಿದೆ. ಗಾಳಿಗುಂಡಿ ಬಸವಣ್ಣ ಬಳಿ ಪ್ರತ್ಯಕ್ಷವಾದ ಚಿರತೆ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಒಂಟಿ ಮನೆಗೆ ನುಗ್ಗಿ ಡಕಾಯಿತಿ ಮಾಡಿದ್ದ ರೌಡಿ ಗ್ಯಾಂಗ್ ಅರೆಸ್ಟ್

  • ಹಸಿರಿನ ಮಧ್ಯೆ ಜಿಪ್‍ಲೈನ್ – ಕಪ್ಪತ್ತಗುಡ್ಡದಲ್ಲಿ ರೋಮಾಂಚನಕಾರಿ ಅನುಭವ

    ಹಸಿರಿನ ಮಧ್ಯೆ ಜಿಪ್‍ಲೈನ್ – ಕಪ್ಪತ್ತಗುಡ್ಡದಲ್ಲಿ ರೋಮಾಂಚನಕಾರಿ ಅನುಭವ

    – ಯುವಕರನ್ನು ಸೆಳೆಯುತ್ತಿದೆ ರಾಜ್ಯದ ಅತಿ ಉದ್ದದ ಜಿಪ್‍ಲೈನ್

    ಗದಗ: ಲಾಕ್‍ಡೌನ್‍ನಲ್ಲಿ ಮನೆಯಲ್ಲೇ ಕೂತು ಬೇಜಾರಾಗಿದೆ, ಈಗ ಅನ್‍ಲಾಕ್ ಆಗಿದೆ, ಎಲ್ಲಾದ್ರೂ ಸುತ್ತಾಡಿಕೊಂಡು ಬರೋಣ. ಸ್ವಲ್ಪ ಅಡ್ವೆಂಚರಸ್ಸಾಗಿ ಏನಾದ್ರೂ ಮಾಡೋಣ ಎಂದು ನೀವು ಪ್ಲಾನ್ ಮಾಡಿದ್ದರೆ, ನೇರವಾಗಿ ಮುದ್ರಣಾ ಕಾಶಿಗೆ ಬನ್ನಿ. ಇಲ್ಲಿ ಒಂದೊಳ್ಳೆ ಅನುಭವ ಪಡೆಯಬಹುದು.

    ನಗರದ ಹೊರವಲಯದ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನೂತನವಾಗಿ ಜಿಪ್‍ಲೈನ್ ಅಳವಡಿಸಲಾಗಿದೆ. ಒಂದು ತುದಿಯಿಂದ ಮತ್ತೊಂದು ತುದಿಗೆ ತಂತಿಯ ಸಹಾಯದಿಂದ ಸಾಗೋ ಈ ಕ್ರೀಡೆ ಸದ್ಯ ಯುವ ಜನರಲ್ಲಿ ಭಾರೀ ಜನಪ್ರಿಯವಾಗಿದೆ. ಕಳೆದ ವರ್ಷ ಲಾಕ್‍ಡೌನ್ ಸಂದರ್ಭದಲ್ಲೇ ಈ ಜಿಪ್‍ಲೈನ್ ಅಳವಡಿಸುವ ಕಾಮಗಾರಿ ಆರಂಭವಾಗಿತ್ತು. ಸದ್ಯ ಕಾಮಗಾರಿ ಪೂರ್ಣಗೊಂಡು ಪ್ರವಾಸಿಗರ ಹಾಟ್ ಫೆವರೆಟ್ ಆಗವಾಗಿದೆ.

    ರಾಜ್ಯದಲ್ಲೇ ಅತ್ಯಂತ ಉದ್ದದ ಜಿಪ್‍ಲೈನ್ ಹೊಂದಿದ ಹಿರಿಮೆ ಗದಗನ ಸಾಲುಮರದ ತಿಮ್ಮಕ್ಕ ಉದ್ಯಾನವನದ್ದಾಗಿದೆ. ಕಪ್ಪತ್ತಗುಡ್ಡದ ಈ ಹಸಿರು ಸೊಬಗಿನ ನಡುವೆ ಈ ಬದಿಯಿಂದ ಈ ಬದಿಯವರೆಗೆ ಎತ್ತರಕ್ಕೆ ಜಿಪ್‍ಲೈನ್ ತಂತಿ ಮೂಲಕ ಹಾರೋದೆ ಒಂದು ರೋಮಾಂಚನ. ಸುಮಾರು 32 ಲಕ್ಷ ರೂ. ವೆಚ್ಚದಲ್ಲಿ ಈ ಜಿಪ್‍ಲೈನ್ ಕಾಮಗಾರಿ ಕೈಗೆತ್ತಿಗೊಳ್ಳಲಾಗಿತ್ತು. ಸುಮಾರು 360 ಮೀಟರ್ ಉದ್ದದ ತಂತಿ ಬಳಸಿ, ಲೈನ್ ಅಳವಡಿಸಲಾಗಿದೆ. ಮೈಸೂರು ಹಾಗೂ ಹೈದರಾಬಾದ್ ಫಿಲ್ಮ್ ಸಿಟಿಯಲ್ಲಿ ಜಿಪ್‍ಲೈನ್ ವ್ಯವಸ್ಥೆ ಇದೆ. ಅಷ್ಟು ದೂರ ಹೋಗೋದಕ್ಕೆ ಆಗದಿರುವವರು ಗದಗಿನಲ್ಲೆ ಈ ಅನುಭವ ಪಡೆಯಬಹುದು. ಸೇಫ್ಟಿ ಫಸ್ಟ್ ಅನ್ನೋ ಕಾರಣಕ್ಕೆ ಇಲ್ಲಿಯ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಪ್ರತಿ ರೈಡ್ ನಡೆಸಲಾಗುತ್ತೆ. ಅನ್‍ಲಾಕ್ ಆದ ಮೇಲೆ ಸಾಕಷ್ಟು ಜನ ಪ್ರವಾಸಿಗರು ಬಂದು ಇದರ ಅನುಭವ ಪಡೆಯುತ್ತಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಪ್‍ಲೈನ್ ಆಡಲು ಒಬ್ಬರಿಗೆ 100 ರೂಪಾಯಿ ದರ ನಿಗದಿ ಮಾಡಲಾಗಿದೆ. ತಂತಿಯ ಮೇಲೆ ಸಾಗುವ ವೇಳೆ ಮೈ ಝುಮ್ಮೆನಿಸುತ್ತೆ. ಬಾನಾಡಿಯಂತೆ ಸ್ವಚ್ಛಂದವಾಗಿ ಹಾರಾಡ್ತಿರೋ ಹಾಗೆ ಅನುಭವ ಆಗುತ್ತೆ. ಹಸಿರು ಸೆರಗು ಹೊತ್ತ ಬೆಟ್ಟವನ್ನ ಮೇಲಿಂದ ಕಣ್ತುಂಬಿಕೊಳ್ಳುವ ಭಾಗ್ಯ ಸಿಗುತ್ತೆ. ಲಾಕ್‍ಡೌನ್ ನಿಂದ ಮನೆಯಲ್ಲೇ ಕೂತು ಬೇಜಾರಾಗಿದ್ದ ಬಹಳಷ್ಟು ಜನ, ಈಗ ಈ ವಿಶಿಷ್ಟ ಸಾಹಸ ಕ್ರೀಡೆಯಲ್ಲಿ ಭಾಗಿಯಾಗುವ ಮೂಲಕ ರಿಲ್ಯಾಕ್ಸ್ ಆಗ್ತಿದ್ದಾರೆ.

    ಏನಿದು ಜಿಪ್ ಲೈನ್?
    ತಂತಿಯ ಮೂಲಕ ಒಂದು ತುದಿಯಿಂದ ಇನ್ನೊಂದು ತುದಿಗೆ ಗುರುತ್ವಾಕರ್ಷಣೆಯ ಬಲದಿಂದ ತಲುಪುವುದಕ್ಕೆ ಜಿಪ್‍ಲೈನ್ ಎನ್ನುತ್ತಾರೆ. ಈಶಾನ್ಯ ಭಾರತದಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ, ಗಣಿಗಾರಿಕೆಗಳಲ್ಲಿ ಸರಕುಗಳನ್ನ ಸಾಗಿಸಲು ಈ ಜಿಪ್‍ಲೈನ್ ಬಳಸುತ್ತಿದ್ದರು. ಈಗ ಇದು ಯುತ್ಸ್ ಮನ ಸೆಳೆಯುವ ಮನರಂಜನಾ ಕ್ರೀಡೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಅನ್‍ಲಾಕ್ ಆಗಿದ್ದೇ ತಡ ಜಿಪ್‍ಲೈನ್ ಆಡಲು ಪ್ರವಾಸಿಗರ ದಂಡು ಬಿಂಕದಕಟ್ಟಿಯ ಕಡೆ ಹರಿದು ಬರ್ತಿದೆ.

    ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಈಗ ಹೊಸ ಕ್ರೀಡೆಯಾಗಿ ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರು ಏಂಜಾಯ್ ಮಾಡುವ ಎಲ್ಲಾ ವ್ಯವಸ್ಥೆಯನ್ನು ಈ ಪಾರ್ಕ್ ನಲ್ಲಿ ಕಲ್ಪಿಸಲಾಗಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರು ಅರಣ್ಯ ಸಚಿವರಾಗಿದ್ದಾಗ ಸುಮಾರು 32 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಜಿಪ್‍ಲೈನ್ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಸದ್ಯ ಪೂರ್ಣ ಗೊಂಡಿದ್ದು, ಲಾಕ್‍ಡೌನ್ ವೇಳೆಯಲ್ಲಿ ಆದಾಯವಿಲ್ಲದೆ ಸೊರಗಿದ್ದ ಉದ್ಯಾನವನಕ್ಕೆ ಈಗ ಅತೀ ಹೆಚ್ಚು ಆದಾಯ ತಂದುಕೊಡುತ್ತಿದೆ. ಸದ್ಯ ಇಲ್ಲಿನ ಸಿಬ್ಬಂದಿ ಸಂಬಳ ಸೇರಿದಂತೆ ಬಹಳಷ್ಟು ಖರ್ಚು ವೆಚ್ಚಗಳನ್ನ ನೀಗಿಸಲು ಅನುಕೂಲಕರವಾಗಿದೆ.

    ಈ ಕ್ರೀಡೆಯಾಡಲು ಎಲ್ಲ ರೀತಿಯ ರಕ್ಷಣೆಯ ಸಲಕರಗಳನ್ನು ಹೊಂದಿಸಿದ್ದಾರೆ. ಕೊರೊನಾ ಸಂಪೂರ್ಣವಾಗಿ ಇನ್ನೂ ದೂರವಾಗಿಲ್ಲ. ದೂರ ಹೋಗೋದಕ್ಕೆ ಈಗ ಸಕಾಲವೂ ಅಲ್ಲ. ಸಮೀಪದಲ್ಲೇ ಒಂದು ಸಣ್ಣ ಟ್ರಿಪ್ ಮಾಡ್ಕೊಂಡು, ಎಂಜಾಯ್ ಮಾಡಬೇಕೆಂದು ನೀವು ಪ್ಲಾನ್ ಮಾಡಿದ್ರೆ, ಗದಗಿನ ಸಾಲುಮರದ ತಿಮ್ಮಕ್ಕ ಪಾರ್ಕ್‍ಗೆ ಬನ್ನಿ. ಫ್ಯಾಮಿಲಿ ಜೊತೆ ಸಖತ್ ಎಂಜಾಯ್ ಮಾಡಹುದಾಗಿದೆ.

  • ಕಪ್ಪತ್ತಗುಡ್ಡ ಆಸುಪಾಸಿನಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ

    ಕಪ್ಪತ್ತಗುಡ್ಡ ಆಸುಪಾಸಿನಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ

    -ಸರ್ಕಾರದ ಆದೇಶಕ್ಕೂ ಗಣಿಕುಳಗಳು ಡೋಂಟ್‍ಕೇರ್

    ಗದಗ: ಜಿಲ್ಲೆಯ ಕಪ್ಪತ್ತಗುಡ್ಡ ಅಕ್ಕಪಕ್ಕದಲ್ಲೇ ಸಾಕಷ್ಟು ಕಲ್ಲು ಗಣಿಗಾರಿಕೆ ಕ್ವಾರಿಗಳು ತಲೆ ಎತ್ತಿವೆ. ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಆದ್ರೂ, ಈ ಪ್ರದೇಶದಲ್ಲಿ ಸಕ್ರಮದ ಹೆಸರಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಕಪ್ಪತ್ತಗುಡ್ಡ ವನ್ಯಜೀವಿ ಧಾಮದ 1 ಕಿಲೋ ಮೀಟರ್ ವ್ಯಾಪ್ತಿ 14 ಕಲ್ಲುಗಣಿಗಾರಿಕೆ ಕ್ವಾರಿಗಳನ್ನ ತಕ್ಷಣ ಸ್ಥಗಿತ ಮಾಡುವಂತೆ ಸರ್ಕಾರ ನೋಟಿಸ್ ನೀಡಿದೆ. ಆದರೆ ಇಲ್ಲಿರುವ ಘಟಕಗಳು ಪ್ರಭಾವಿಗಳದ್ದು ಎಂದು ತಿಳಿದು ಬಂದಿದೆ. ಹಾಗಾಗಿ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿ ಎಗ್ಗಿಲದೇ ಗಣಿಗಾರಿಕೆ ನಡೆಸುತ್ತಿದ್ದಾರೆ. ಹಗಲು ರಾತ್ರಿ ಅನ್ನದೇ ಬ್ಲಾಸ್ಟಿಂಗ್ ಮಾಡ್ತಿದ್ದಾರೆ.

    ಕಪ್ಪತ್ತಗುಡ್ಡ ವ್ಯಾಪ್ತಿಯ ಎಲ್ಲಾ ಗಣಿ ಘಟಕಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಇದನ್ನ ನೋಡಿದ ಗಣಿಕುಳಗಳು ಹೌಹಾರಿದ್ದಾರೆ. ಗಣಿ ಇಲಾಖೆಯಿಂದ ಅನುಮತಿ ಪಡೆದ ಕಲ್ಲು ಗಣಿಗಾರಿಕೆ ಕ್ವಾರಿಗಳಿಗೆನೇ ಇದೀಗ ಕಂಟಕ ಎದುರಾಗಿದೆ. ಕ್ವಾರಿಗಳನ್ನು ಉಳಿಸಿಕೊಳ್ಳಲು ಪ್ರಭಾವಿಗಳು ಭಾರೀ ಲಾಬಿ ನಡೆಸಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ 15 ದಿನ ಗಡವು ನೀಡಿದ್ದೆವೆ ಎಂದು ಹೇಳುತ್ತಾರೆ.

    ಸರ್ಕಾರದಿಂದ ಪರವಾನಿಗೆ ಪಡೆದ ಕ್ವಾರಿಗಳು ಇದ್ದರೂ ಕೂಡಾ ಕಾನೂನು ಮೀರಿ ಬ್ಲಾಸ್ಟಿಂಗ್ ಮಾಡಿ ಲೂಟಿ ಮಾಡುತ್ತಿರುವ ಆರೋಪಗಳು ಸಹ ಇವೆ.. ಅದೇನೆ ಇರಲಿ ಎಷ್ಟೇ ಒತ್ತಡ ಹಾಕಿದ್ರು ಯಾವುದಕ್ಕೂ ಮಣಿಯದೆ ಕಪ್ಪತ್ತಗುಡ್ಡ, ಪರಿಸರ ಉಳಿಸಿ ಬೆಳಸಬೇಕು ಎಂಬುದು ಇಲ್ಲಿನ ಜನರ ಆಶಯ.

  • ಕಪ್ಪತ್ತ ಗುಡ್ಡದ ಬಳಿ ಪ್ರಾಣಿಗಳ ದಾಳಿಗೆ ರೈತರು ಕಂಗಾಲು

    ಕಪ್ಪತ್ತ ಗುಡ್ಡದ ಬಳಿ ಪ್ರಾಣಿಗಳ ದಾಳಿಗೆ ರೈತರು ಕಂಗಾಲು

    ಗದಗ: ಒಂದೆಡೆ ನೆರೆಯಿಂದ ಬೆಳೆ ಹಾಳಾದರೆ, ಇನ್ನೊಂದೆಡೆ ಪ್ರಾಣಿಗಳ ದಾಳಿಯಿಂದಾ ರೈತರ ಬೆಳೆ ನಾಶವಾಗುತ್ತಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದು, ದಾರಿ ತೋಚದಂತಾಗದೆ ಬೆಳೆ ಹಾಳಾದರೂ ಕೈಕಟ್ಟಿ ಕೂರುವ ಪರಿಸ್ಥಿತಿ ಎದುರಾಗಿದೆ.

    ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡ ಸೆರಗಿನ ಡೋಣಿ ಬಳಿಯ ರೈತರಿಗೆ ಕಾಡು ಪ್ರಾಣಿಗಳ ಕಾಟ ಎದುರಾಗಿದ್ದು, ಸಾಲ ಮಾಡಿ ಬೆಳೆದ ಅನೇಕ ಬೆಳೆಗಳು ಪ್ರಾಣಿಗಳ ಪಾಲಾಗುತ್ತಿವೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಸಿಕೊಳ್ಳುವ ಕಪ್ಪತ್ತಗುಡ್ಡದಲ್ಲಿ ಕಾಡುಪ್ರಾಣಿಗಳು ತುಂಬಾ ಇವೆ. ಚಿರತೆ, ಕಾಡುಹಂದಿ, ಕಾಡುಬೆಕ್ಕು, ತೋಳ, ನರಿ, ಕತ್ತೆ ಕಿರುಬ, ನವಿಲು ಸೇರಿದಂತೆ ಅನೇಕ ಪ್ರಾಣಿ, ಪಕ್ಷಿಗಳು ಈ ಕಾಡಲ್ಲಿ ನೆಲೆಯೂರಿವೆ. ಈ ಕಾಡು ಪ್ರಾಣಿಗಳು ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದು, ರೈತರ ಬದುಕನ್ನು ಮೂರಾಬಟ್ಟೆ ಮಾಡುತ್ತಿವೆ.

    ಕಪ್ಪತ್ತಗುಡ್ಡ ಸೇರಗಿನ ಡೋಣಿ, ತಾಂಡಾ, ಕಡಕೊಳ, ಜಲ್ಲಿಗೇರಿ, ಹೊಸಳ್ಳಿ, ಹಿರೇವಡ್ಡಟ್ಟಿ, ಹಾರೊಗೇರಿ ಹೀಗೆ ಅನೇಕ ಗ್ರಾಮಗಳ ಜಮೀನುಗಳಿಗೆ ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದೆ. ಫಸಲು ನೀಡುವ ಸಮಯದಲ್ಲಿ ಪ್ರಾಣಿಗಳು ದಾಳಿ ಮಾಡಿ, ಹಾಳುಗೆಡುವುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಕಾಡು ಪ್ರಾಣಿಗಳಿಂದ ಮುಕ್ತಿ ನೀಡಿ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

    ಕಪ್ಪತ್ತಗುಡ್ಡದ ಸೆರಗಿನ ಸಾವಿರಾರು ಹೆಕ್ಟೇರ್ ಪ್ರದೇಶದ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ, ಹತ್ತಿ ಹಾಗೂ ಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಪ್ರಾಣಿಗಳು ತಿಂದು ಹಾಕುತ್ತಿವೆ. ಫಸಲು ಬಾರದೆ ರೈತರು ಮತ್ತಷ್ಟು ಸಾಲದ ಸುಳಿಗೆ ಸಿಲುಕಿದ್ದಾರೆ. ಡೋಣಿ ಗ್ರಾಮದಲ್ಲಿ ಮೆಕ್ಕೆಜೋಳ ಫಸಲು ಬರುವ ಸಮಯದಲ್ಲಿ ಕಾಡು ಹಂದಿಗಳು ಜಮೀನಿಗೆ ನುಗ್ಗಿ ಬೆಳೆ ಹಾನಿ ಜೊತೆಗೆ ತೆನೆಗಳನ್ನೂ ತಿಂದು ಹಾಳು ಮಾಡಿವೆ.

    ಈ ಮೊದಲು ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ಪಟಾಕಿ ಸಿಡಿಸಿ, ಬೆಂಕಿಹಾಕಿ, ಬಲೆಹಾಕಿ ಓಡಿಸಲಾಗುತ್ತಿತ್ತು. ಆದರೆ ಈಗ ಅರಣ್ಯ ಇಲಾಖೆ ಅಂತಹ ಚಟುವಟಿಕೆಗೆ ಬ್ರೇಕ್ ಹಾಕಿದೆ. ಹೀಗಾಗಿ ರಾತ್ರಿ ಹಗಲು ಎನ್ನುದೆ ಕಾಡು ಪ್ರಾಣಿಗಳನ್ನು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಆದರೂ ರೈತರ ಕಣ್ಣು ತಪ್ಪಿಸಿ ಬೆಳೆಯನ್ನು ನಾಶ ಮಾಡುತ್ತಿವೆ. ಹೀಗಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ಈ ಕುರಿತು ಅರಣ್ಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬೆಳೆ ಹಾನಿಯಾದ ಪ್ರದೇಶವನ್ನು ಸರ್ವೇ ಮಾಡಿ ಪರಿಹಾರ ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೆ ವರ್ಷವಿಡಿ ಕಷ್ಟಪಟ್ಟು ದುಡಿದು ಬೆಳೆದ ಬೆಳೆಗೆ ಅರಣ್ಯ ಇಲಾಖೆ ನೀಡುವ ಅಲ್ಪ ಪ್ರಮಾಣದ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಹೀಗಾಗಿ ಅರಣ್ಯ ಇಲಾಖೆ ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡು ರೈತರ ಕಷ್ಟವನ್ನು ನೀಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

  • ಔಷಧೀಯ ಸಸ್ಯಕಾಶಿ ಮತ್ತೆ ಬೆಂಕಿಗಾಹುತಿ

    ಔಷಧೀಯ ಸಸ್ಯಕಾಶಿ ಮತ್ತೆ ಬೆಂಕಿಗಾಹುತಿ

    ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ, ಔಷಧೀಯ ಸಸ್ಯಕಾಶಿ ಎಂದೆ ಖ್ಯಾತಿಯಾದ ಗದಗ ಜಿಲ್ಲೆ ಕಪ್ಪತ್ತಗುಡ್ಡ ಮತ್ತೆ ಬೆಂಕಿಗಾಹುತಿಯಾಗಿದೆ.

    ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಕಪ್ಪತ್ತ ಮಲ್ಲಯ್ಯನ ದೇವಸ್ಥಾನದ ಬಳಿಯ ಕೆಪಿಟಿಸಿಎಲ್ ವಿಂಡ್ ಪ್ಯಾನ್ ಬಳಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಅಪಾರ ಪ್ರಮಾಣದ ಔಷಧೀಯ ಸಸ್ಯಗಳು ಸಂಪತ್ತು ಸೇರಿದಂತೆ ಪ್ರಾಣಿ ಪಕ್ಷಿಗಳು ಬೆಂಕಿಗೆ ಆಹುತಿಯಾಗಿದೆ.

    ಕಪ್ಪತ್ತಗುಡ್ಡದಲ್ಲಿ ಶುಕ್ರವಾರ ಮಧ್ಯರಾತ್ರಿ ವೇಳೆಗೆ ಬೆಂಕಿ ಕಾಣಿಸಿಕೊಂಡಿತ್ತು. ಇದು ವಿಂಡ್ ಫ್ಯಾನ್ ಶಾರ್ಟ್ ಸರ್ಕ್ಯೂಟ್‍ನಿಂದ ಆಗಿದೆಯಾ? ಅಥವಾ ಕಿಡಿಗೇಡಿಗಳ ಕೃತ್ಯನಾ? ಎಂಬುದು ತಿಳಿದು ಬಂದಿಲ್ಲ. ಬೇಸಿಗೆ ಸಂದರ್ಭದಲ್ಲಿ ಪ್ರತಿ ವರ್ಷವೂ ಈ ಭಾಗದಲ್ಲಿ ಬೆಂಕಿ ಹತ್ತಿಕೊಳ್ಳುತ್ತಿದ್ದು, ಇದುವರೆಗೂ ಬೆಂಕಿ ಹೇಗೆ ಹೊತ್ತಿಕೊಳ್ಳುತ್ತದೆ ಎನ್ನುವ ನಿಖರವಾದ ಕಾರಣ ತಿಳಿದು ಬರುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ನಡೆಸಿದರೂ ಕೆಲಕಾಲ ಬೆಂಕಿ ಹತೋಟಿಗೆ ತರಲು ಹರಸಾಹಸ ಪಡಬೇಕಾಯಿತು.

  • ಕಪ್ಪತ್ತಗುಡ್ಡ ಚಿನ್ನದ ಗುಹೆಗಳನ್ನು ಮುಚ್ಚಲು ಮುಂದಾದ ಜಿಲ್ಲಾಡಳಿತ – ಅಧಿಕಾರಿಗಳಿಗೆ ಗ್ರಾಮಸ್ಥರ ಮುತ್ತಿಗೆ

    ಕಪ್ಪತ್ತಗುಡ್ಡ ಚಿನ್ನದ ಗುಹೆಗಳನ್ನು ಮುಚ್ಚಲು ಮುಂದಾದ ಜಿಲ್ಲಾಡಳಿತ – ಅಧಿಕಾರಿಗಳಿಗೆ ಗ್ರಾಮಸ್ಥರ ಮುತ್ತಿಗೆ

    ಗದಗ: ಗದಗ ಜಿಲ್ಲಾಡಳಿತ ಏಕಾಏಕಿ ಕಪ್ಪತ್ತಗುಡ್ಡದ ಗುಹೆಗಳನ್ನು ಮುಚ್ಚಲು ಮುಂದಾಗಿದ್ದು, ಈ ವೇಳೆ ಜಿಲ್ಲಾಡಳಿತದ ಕ್ರಮದ ವಿರುದ್ಧ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಹೊಸೂರ ಭಾಗದ ಕಪ್ಪತ್ತಗುಡ್ಡ ಕಣಿವೆಯಲ್ಲಿ ಅಕ್ರಮವಾಗಿ ಅದಿರು ತೆಗೆಯುವ ಕೆಲಸವನ್ನು ಇಲ್ಲಿನ ಜನರು ಜೀವದ ಹಂಗು ತೊರೆದು ಮಾಡುತ್ತಿದ್ದರು. ಈ ಕುರಿತು ಪಬ್ಲಿಕ್ ಟಿವಿ ವಿಶೇಷ ವರದಿ ಪ್ರಸಾರ ಮಾಡಿದ್ದು, ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಅಧಿಕಾರಿಗಳು ಏಕಾಏಕಿ ಜೆಸಿಬಿ ಮೂಲಕ ಗುಹೆ ಮುಚ್ಚಲು ಮುಂದಾಗಿದ್ದರು. ಆದರೆ ಈ ವೇಳೆ ಗುಹೆಯಲ್ಲಿ ಮೂವರು ಬಂಗಾರದ ಅದಿರು ತರಲು ಹೋಗಿರವ ಶಂಕೆ ವ್ಯಕ್ತವಾಗಿದ್ದು, ಗುಹೆ ಮುಚ್ಚದಂತೇ ಅಧಿಕಾರಿಗಳಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದಾರೆ. 

    ಗುಹೆಗಳ ಹಿಂದಿನ ರಹಸ್ಯ ಏನು?:
    ನೂರಾರು ವರ್ಷಗಳ ಹಿಂದೆ ಬ್ರಿಟಿಷರು ಸಾಂಗ್ಲಿ ಮೈನಿಂಗ್ ಹೆಸರಿನಲ್ಲಿ ಅದಿರು ಮೂಲಕ ಚಿನ್ನ ತೆಗೆಯುತ್ತಿದ್ದರು. ನಂತರದಲ್ಲಿ ಕಾರಣಾಂತರಗಳಿಂದ ಸಾಂಗ್ಲಿ ಮೈನಿಂಗ್ ಸ್ಥಗಿತಗೊಂಡಿತ್ತು. ಬಳಿಕ 1980ರ ದಶಕದಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಎಂಬ ಕಂಪನಿ ಕೇಂದ್ರ ಸರ್ಕಾರದ ಅಧೀನದಲ್ಲಿ ನಿಕ್ಷೇಪಗಳನ್ನ ತೆಗೆಯುತ್ತಿದ್ರು. ಈ ವೇಳೆ ತೋಡಿರುವ ಸುರಂಗ ಗುಹೆಗಳು ಹಾಗೆ ಉಳಿದುಕೊಂಡಿವೆ. ಹೀಗಾಗಿ ಈ ಗುಹೆಗಳ ಮೂಲಕ ಈಗಲೂ ಅದಿರು ತರುವ ಜನರು ಇದನ್ನ ಬಂಗಾರದ ಗುಂಡಿ ಅಂತಾನೇ ಕರೆಯುತ್ತಾರೆ.

    500 ಮೀಟರ್ ಆಳಕ್ಕೆ ಹೋದಂತೆ ಕಡಿದಾಗೋ ಈ ಗುಹೆ ಕವಲೊಡೆದು ನಾಲ್ಕೈದು ಕಿಲೋಮೀಟರ್ ವರೆಗೆ ಕ್ರಮಿಸಿವೆ. ಇಲ್ಲಿ ಅನೇಕ ಬಾರಿ ಗುಹೆಗಳು ಕುಸಿದು ಸಾವುನೋವುಗಳು ಸಂಭವಿಸಿದೆ. ಇಲ್ಲಿನ ಒಂದು ಟನ್ ಮಣ್ಣಿನಿಂದ 2 ರಿಂದ 4 ಗ್ರಾಂ ಚಿನ್ನ ತೆಗೆಯಬಹುದಾಗಿದೆ. ಚಿನ್ನ ಸಂಸ್ಕರಣೆಗೆ ಸೈನೇಡ್ ಬಳಕೆಯಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ.

     

  • ಕಪ್ಪತ್ತಗುಡ್ಡಕ್ಕೆ ಕನ್ನ ಹಾಕಲು ಬಹುರಾಷ್ಟ್ರೀಯ ಕಂಪನಿಗಳ ಸಂಚು!

    ಕಪ್ಪತ್ತಗುಡ್ಡಕ್ಕೆ ಕನ್ನ ಹಾಕಲು ಬಹುರಾಷ್ಟ್ರೀಯ ಕಂಪನಿಗಳ ಸಂಚು!

    ಗದಗ: ಕಪ್ಪತ್ತಗುಡ್ಡ ರಕ್ಷಿಸುವಂತೆ ಹೋರಾಟಗಳು ನಡೆದಿರುವಾಗಲೇ ಕಪ್ಪತ್ತಗುಡ್ಡಕ್ಕೆ ಕನ್ನ ಹಾಕಲು ಬಹುರಾಷ್ಟ್ರೀಯ ಕಂಪನಿಗಳು ಸಂಚು ಹಾಕಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಸೊರಟೂರು, ವೆಂಕಟಾಪೂರಕ್ಕೆ ಹೊಂದಿಕೊಂಡಂತೆ ಇರುವ ಗುಡ್ಡದ ಬಳಿ ಕೇಂದ್ರ ಸರ್ಕಾರದ ಭೂಗರ್ಭ ಶಾಸ್ತ್ರ ಇಲಾಖೆ ಹಾಗೂ ಆಸ್ಟ್ರೇಲಿಯಾ ಮೂಲದ ಕಂಪನಿಯ ಪ್ರತಿನಿಧಿಗಳು ಅದಿರು ನಿಕ್ಷೇಪ ಶೋಧ ಕಾರ್ಯಾಚರಣೆ ಮಾಡಿದ್ದಾರೆ. ಜಿಲ್ಲಾಡಳಿತಕ್ಕೂ ಮಾಹಿತಿ ನೀಡದೇ 30ಕ್ಕೂ ಹೆಚ್ಚ ಅಧಿಕಾರಿಗಳ ತಂಡ ಆಗಮಿಸಿ ಅದಿರು ನಿಕ್ಷೇಪ ಶೋಧ ಮಾಡಿರುವುದು ಇದೀಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

    ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಬೇಕು ಅನ್ನೋ ಕೂಗು ಕೇಳಿಬರುವಾಗಲೇ ಅದಿರು ಶೋಧ ಕಾರ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಲ್ದೋಟಾ ಕಂಪನಿಗೆ ಅನುಕೂಲ ಮಾಡಿಕೊಡಲು ಅದಿರು ನಿಕ್ಷೇಪ ಶೋಧ ಕಾರ್ಯ ನಡೆಸಿದ್ದಾರೆ ಅಂತಾ ಜನರು ಸಂಶಯ ವ್ಯಕ್ತಪಡಿಸಿದ್ದಾರೆ.

    ಗಣಿಗಾರಿಕೆ ಸೇರಿದಂತೆ ಹಲವು ವ್ಯವಹಾರಗಳಲ್ಲಿ ಬಲ್ಡೊಟ ಕಂಪನಿ ಆಸ್ಟ್ರೇಲಿಯಾ ಕಂಪನಿ ಜೊತೆ ಪಾಲುಗಾರಿಕೆ ಹೊಂದಿರುವ ಮಾಹಿತಿಯಿದೆ. ಕಳೆದ ಭಾನುವಾರವೇ ಈ ಅಧಿಕಾರಿಗಳ ತಂಡ ಶೋಧ ಮಾಡಿದ್ದು, ತಡವಾಗಿ ವಿಚಾರ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರವು ಬಲ್ದೋಟ ಕಂಪನಿ ಪರ ಇದೆ ಅಂತಾ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಹದಾಯಿ ಹೋರಾಟಗಾರರ ಕೇಸ್ ವಾಪಸ್; ಮೇಕೆದಾಟು ಯೋಜನೆಗೆ ಸಂಪುಟ ಅಸ್ತು

    ಮಹದಾಯಿ ಹೋರಾಟಗಾರರ ಕೇಸ್ ವಾಪಸ್; ಮೇಕೆದಾಟು ಯೋಜನೆಗೆ ಸಂಪುಟ ಅಸ್ತು

    – ಕಪ್ಪತ್ತಗುಡ್ಡ ಹೋರಾಟಕ್ಕೂ ಸಿಕ್ತು ಜಯ

    ಬೆಂಗಳೂರು: ಮಹದಾಯಿ ಹೋರಾಟದಲ್ಲಿ ರೈತರ ಮೇಲೆ ಹಾಕಲಾಗಿದ್ದ ಎಲ್ಲಾ ಪ್ರಕರಣಗಳನ್ನ ಕೊನೆಗೂ ರಾಜ್ಯ ಸರ್ಕಾರ ಹಿಂಪಡೆದಿದೆ. 94 ಪ್ರಕರಣಗಳನ್ನ ವಾಪಸ್ ಪಡೆಯಲು ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯಿಸಲಾಯಿತು. ಇದರ ಜೊತೆಗೆ ಮೇಕೆದಾಟು ಯೋಜನೆಗೆ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದ್ದು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯೋಜಿಸಲಾಗಿದೆ.

    ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅದ್ರಲ್ಲಿ ಪ್ರಮುಖವಾದ ಅಂಶಗಳು ಹೀಗಿವೆ.
    * ಮಹದಾಯಿ ಹೋರಾಟದ 94 ಪ್ರಕರಣಗಳು ವಾಪಸ್ ಆಗಿವೆ.
    * ಮೇಕೆದಾಟು ವಿದ್ಯುತ್ ಯೋಜನೆಗೆ ತಾತ್ವಿಕ ಒಪ್ಪಿಗೆ.
    * 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯೋಜನೆ.
    * 5,912 ಕೋಟಿ ರೂ. ವೆಚ್ಚದಲ್ಲಿ ಮೇಕೆದಾಟು ಯೋಜನೆ.
    * ಮೇಕೆದಾಟು ಬಳಿ 60 ಟಿಎಂಸಿ ನೀರು ಸಂಗ್ರಹದ ಗುರಿ.
    * ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್.
    * ಕೂಡಲಸಂಗಮದಲ್ಲಿ 44.94 ಕೋಟಿ ವೆಚ್ಚದ ಬಸವೇಶ್ವರ ಮ್ಯೂಸಿಯಂ.
    * ಅಕ್ರಮ ಸಕ್ರಮದಲ್ಲಿ ಚದರಡಿ ಮಿತಿ 30*40ಗೆ ಏರಿಕೆ.
    * ಬೆಂಗಳೂರು ಉಪನಗರ ರೈಲ್ವೇ ಯೋಜನೆಗೆ ಒಪ್ಪಿಗೆ.

    ಕಪ್ಪತ್ತಗುಡ್ಡ ಹೋರಾಟಕ್ಕೂ ಸಿಕ್ತು ಜಯ: ಗದಗ ಜಿಲ್ಲೆಯ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ನಡೆಸಿದ ಅಹೋರಾತ್ರಿ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಹೋರಾಟಕ್ಕೆ ನೇತೃತ್ವ ವಹಿಸಿದ್ದ ತೋಂಟದಾರ್ಯ ಸ್ವಾಮಿಜಿಗಳಿಗೆ ಸಚಿವ ಎಚ್.ಕೆ.ಪಾಟೀಲ್ ಈ ಕುರಿತು ಭರವಸೆ ನೀಡಿದ್ದಾರೆ.

    ಫೆಬ್ರವರಿ 20 ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ವನ್ಯಜೀವಿ ಮಂಡಳಿ ಸಭೆ ಕರೆದಿದ್ದು, ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಅಂತಾ ಘೋಷಣೆ ಬಗ್ಗೆ ತಿರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಸಚಿವರು ದೂರವಾಣಿ ಮೂಲಕ ಶ್ರೀಗಳಿಗೆ ಭರವಸೆ ನೀಡಿದ್ದಾರೆ. ಆ ಮೂಲಕ ಕಳೆದ ಮೂರು ದಿನಗಳಿಂದ ಕಪ್ಪತ್ತಗುಡ್ಡ ರಕ್ಷಣೆಗಾಗಿ ನಡೆದ ಬೃಹತ್ ಆಂದೋಲನ ಗುರಿ ಈಡೇರಿಕೆಯಲ್ಲಿ ತಾತ್ಕಾಲಿಕ ಯಶ ಕಂಡಿದೆ.