Tag: ಕಪಿಲ್ ದಾಖಲೆ

  • ಸೊನ್ನೆ ಸುತ್ತಿ ಕಪಿಲ್ ದಾಖಲೆ ಸರಿಗಟ್ಟಿದ ರನ್ ಮೆಷಿನ್!

    ಸೊನ್ನೆ ಸುತ್ತಿ ಕಪಿಲ್ ದಾಖಲೆ ಸರಿಗಟ್ಟಿದ ರನ್ ಮೆಷಿನ್!

    ಕೋಲ್ಕತ್ತಾ: ರನ್ ಮೆಷಿನ್, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಮಾಜಿ ನಾಯಕ ಕಪಿಲ್ ದೇವ್ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಕೊಹ್ಲಿ 11 ಎಸೆತಗಳನ್ನು ಎದುರಿಸಿ ಸುರಂಗ ಲಕ್ಮಲ್ ಎಸೆತದಲ್ಲಿ ಎಲ್‍ಬಿಗೆ ಬಲಿಯಾದರು. ಈ ಮೂಲಕ ವರ್ಷವೊಂದರಲ್ಲೇ ನಾಯಕನಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿದ್ದ ಕಪಿಲ್ ದೇವ್ ದಾಖಲೆಯನ್ನು ಸರಿದೂಗಿಸಿದ್ದಾರೆ.

    ಮೊದಲ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್‍ದೇವ್ 1983ರಲ್ಲಿ 5 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಕೊಹ್ಲಿ ಎರಡು ಟೆಸ್ಟ್, ಎರಡು ಏಕದಿನ ಮತ್ತು ಒಂದು ಟ್ವೆಂಟಿ-20 ಪಂದ್ಯದಲ್ಲಿ ಶೂನ್ಯ ಸಂಪಾದಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ಪಂದ್ಯಗಳಲ್ಲೇ ಕೊಹ್ಲಿ ಸೊನ್ನೆ ಸುತ್ತಿದ್ದು ವಿಶೇಷ.

    1976ರಲ್ಲಿ ಬಿಷನ್ ಸಿಂಗ್ ಬೇಡಿ ಹಾಗೂ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಸಹ ನಾಲ್ಕು ಬಾರಿ ಶೂನ್ಯಕ್ಕೆ ಔಟಾಗಿದ್ದರು.

    ಕೊಹ್ಲಿ ಸೊನ್ನೆ ಸುತ್ತಿದ ಪಂದ್ಯಗಳು
    ಫೆ.23, ಟೆಸ್ಟ್, ಆಸ್ಟ್ರೇಲಿಯಾ ವಿರುದ್ಧ, ಪುಣೆ
    ಜೂ.8, ಏಕದಿನ, ಶ್ರೀಲಂಕಾ ವಿರುದ್ಧ, ಓವಲ್
    ಸೆ.17, ಏಕದಿನ, ಆಸ್ಟ್ರೇಲಿಯಾ ವಿರುದ್ದ, ಚೆನ್ನೈ
    ಅ.10, ಟಿ-20, ಆಸ್ಟ್ರೇಲಿಯಾ ವಿರುದ್ಧ, ಗುವಾಹಟಿ
    ನ.16, ಟೆಸ್ಟ್, ಶ್ರೀಲಂಕಾ ವಿರುದ್ಧ, ಕೋಲ್ಕತ್ತಾ

    ಮಳೆಯಿಂದಾಗಿ ಮಧ್ಯಾಹ್ನ 1.30ಕ್ಕೆ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ 11.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 17 ರನ್ ಗಳಿಸಿದೆ. ಕೆಎಲ್ ರಾಹುಲ್ 0, ಶಿಖರ್ ಧವನ್ 8, ಚೇತೇಶ್ವರ ಪೂಜಾರ ಔಟಾಗದೇ 8, ಕೊಹ್ಲಿ 0, ಅಜಿಂಕ್ಯಾ ರೆಹಾನೆ ಔಟಾಗದೇ 0 ರನ್ ಗಳಿಸಿದ್ದಾರೆ.