Tag: ಕನ್ನಡ ಹೋರಾಟಗಾರರು

  • ತೇಜಸ್ವಿ ಸೂರ್ಯನ ನಾಲಿಗೆ ಸೀಳುತ್ತೇನೆ – ಪದ್ಮನಾಭ ಪ್ರಸನ್ನ ಧಮ್ಕಿ

    ತೇಜಸ್ವಿ ಸೂರ್ಯನ ನಾಲಿಗೆ ಸೀಳುತ್ತೇನೆ – ಪದ್ಮನಾಭ ಪ್ರಸನ್ನ ಧಮ್ಕಿ

    ಧಾರವಾಡ: ಸಂಸದ ತೇಜಸ್ವಿ ಸೂರ್ಯನ ನಾಲಿಗೆ ಸೀಳುತ್ತೇನೆ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಧಮ್ಕಿ ಹಾಕಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಕನ್ನಡ ಹೋರಾಟಗಾರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ ಅನ್ನೋ ಹಾಗೆ ಅವರ ಪರಿಸ್ಥಿತಿ ಆಗಿದೆ ಎಂದು ಕಿಡಿಕಾರಿದರು.

    ಸಂಸದರಿಗೆ ನಾಚಿಕೆ, ಮಾಯ-ಮರ್ಯಾದೆ ಇದ್ದರೆ ಕನ್ನಡ ಹೋರಾಟಗಾರರ ಕ್ಷಮೆ ಕೇಳಬೇಕು. ರವಿ ಸುಬ್ರಹ್ಮಣ್ಯ ಅವರಿಗೆ ಬಕೆಟ್ ಹಿಡಿದು ಸಂತೋಷ್ ಹತ್ತಿರ ಟಿಕೆಟ್ ತಗೊಂಡು ಎಂಪಿ ಆಗಿದ್ದಾರೆ ಎಂದು ಆರೋಪ ಮಾಡಿದರು. ಅವರು ಕನ್ನಡ ಹೋರಾಟಗಾರರ ಬಳಿ ಕ್ಷಮೆ ಕೇಳದೇ ಹೋದರೆ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿಎಂ ಬಿ.ಎಸ್. ಯಡಿಯೂರಪ್ಪ ನಮ್ಮ ತಂದೆ ಸಮಾನ, ಮೊದಲಿನಿಂದಲೂ ಯಡಿಯೂರಪ್ಪ ಜೊತೆ ನನ್ನ ಸಂಬಂಧ ಚೆನ್ನಾಗಿದೆ. ಬಿಎಸ್‍ವೈ ಅವರಿಂದಲೇ ನನಗೆ ಒಳ್ಳೆಯ ಹೆಸರು ಬಂದಿದೆ. ಅವರು ಬಂದ ಮೇಲೆಯೇ ಕೆಜೆಪಿಗೆ ಒಳ್ಳೆದಾಗಿದೆ ಎಂದು ಹೇಳಿದರು. ಬಿಎಸ್‍ವೈ ಪಾಪ ಈಗ ತುಂಬಾ ಟೆನ್ಷನ್ ಮತ್ತು ಗೊಂದಲದಲ್ಲಿ ಇದ್ದಾರೆ. ಮೊದಲಿನಿಂದಲೂ ಅವರ ಮೇಲೆ ನನಗೆ ಸಾಫ್ಟ್ ಕಾರ್ನರ್ ಇದೆ ಎಂದು ತಿಳಿಸಿದರು.

    ನನಗೆ ಅನ್ಯಾಯ ಆದಾಗ ಬಿಸ್‍ವೈ ವಿರುದ್ಧ ಮಾತಾಡಿದ್ದು ಬೈದಿದ್ದು ಉಂಟು. ಅಪ್ಪ ಕೆಟ್ಟದು ಮಾಡಿದಾಗ ನಾವೂ ಬೈತಿವಿ, ಯಡಿಯೂರಪ್ಪ ಅವರು ನಮ್ಮ ತಂದೆ ಸಮಾನರು. ಭ್ರಷ್ಟಾಚಾರ ಅಪ್ಪ-ಅಮ್ಮ ಯಾರೇ ಮಾಡಿದರೂ ತಪ್ಪೇ. ನನ್ನ ಪಕ್ಷಕ್ಕೆ ಅವರು ಬಂದ ಮೇಲೆ ನನಗೆ ಏನೆನೆಲ್ಲ ಮಾಡಿದರು ಆದರೂ ಸಹಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.

    ವಿಧಾನಸೌಧದಲ್ಲಿ ಕುಳಿತು ನೀಲಿ ಚಿತ್ರ ನೋಡಿದ ಸವದಿ ಒಳ್ಳೆಯವರಾ, ಬಿಜೆಪಿಗೆ ಬ್ಲೂಫಿಲ್ಮ್ ನೋಡುವವರೇ ಬೇಕಾಗಿದ್ದಾರೆ ಅಂದರೆ ಏನೂ ಮಾಡೋಕೆ ಆಗೋದಿಲ್ಲ, ಅವರಿಗೆ ಜನರ ಸೇವೆ ಮಾಡೋರು ಬೇಕಾಗಿಲ್ಲ ನೀಲಿ ಚಿತ್ರ ನೋಡುವವರು ತೋರಿಸುವವರು ಬೇಕಾಗಿದ್ದಾರೆ ಎಂದು ಪ್ರಸನ್ನ ಕಿಡಿಕಾರಿದರು.

  • ಜೈನ ಸಮುದಾಯದ ಬ್ಯಾನರ್ ಹರಿದ ಹೋರಾಟಗಾರರು ರೌಡಿಗಳು: ತೇಜಸ್ವಿ ಸೂರ್ಯ

    ಜೈನ ಸಮುದಾಯದ ಬ್ಯಾನರ್ ಹರಿದ ಹೋರಾಟಗಾರರು ರೌಡಿಗಳು: ತೇಜಸ್ವಿ ಸೂರ್ಯ

    – ಉರ್ದು ಭಾಷೆಯಲ್ಲಿ ಬ್ಯಾನರ್ ಹಾಕಿದ್ರೆ ಪ್ರಶ್ನೆ ಮಾಡಲ್ಲ
    – ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

    ಬೆಂಗಳೂರು: ಯುವ ಬಿಜೆಪಿ ನಾಯಕ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕನ್ನಡ ಸಂಘಟನೆಯ ಕಾರ್ಯಕರ್ತರ ಕುರಿತು ಮಾಡಿರುವ ಟ್ವೀಟ್ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಜೈನ ದೇವಾಲಯದಲ್ಲಿ ಹಿಂದಿ ಬ್ಯಾನರ್ ಅಳವಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜೈನ ಸಹೋದರರ ಮೇಲೆ ಕೆಲ ರೌಡಿಗಳು ದಾಳಿ ಮಾಡಿರುವುದು ಬಹಳ ನೋವಾಗಿದೆ. ಆದರೆ ಇವರು ಬೆಂಗಳೂರಿನಲ್ಲಿ ಉರ್ದು ಭಾಷೆ ಬಳಕೆ ಮಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಕರ್ನಾಟಕಕ್ಕೆ ಕೊಡುಗೆ ನೀಡಿರುವ ಶಾಂತಿ ಪ್ರಿಯ ಜೈನರ ಮೇಲೆ ಹಲ್ಲೆ ನಡೆಸಿರುವುದು ನಿಜವಾದ ಕನ್ನಡಿಗರು ಮತ್ತು ಕಾರ್ಯಕರ್ತರಿಗೆ ಅಪಚಾರ ಮಾಡಿದಂತೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.

    ಇದಾದ ನಂತರ ಮತ್ತೊಂದು ಟ್ವೀಟ್ ನಲ್ಲಿ ದೊಡ್ಡ ಕವಿಗಳಾದ ಪಂಪ, ಪೊನ್ನ, ರನ್ನ ರತ್ನತ್ರಯರಾಗಿದ್ದು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಈ ಮೂವರು ಜೈನರಾಗಿದ್ದಾರೆ. ಹೀಗಾಗಿ ಕರ್ನಾಟಕ ಯುವ ಜೈನರು ಕರ್ನಾಟಕದ ಇತಿಹಾಸವನ್ನು ಓದಬೇಕು ಮತ್ತು ಸಂವಹನದ ವೇಳೆ ಕನ್ನಡವನ್ನು ಬಳಕೆ ಮಾಡಬೇಕು ಎಂದು ಹೇಳಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಸಂಘಟನೆಯ ಸದಸ್ಯರನ್ನು ರೌಡಿಗಳು ಎಂದು ಕರೆದಿದ್ದಕ್ಕೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. 6 ಸಾವಿರಕ್ಕೂ ಹೆಚ್ಚು ಜನ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದರೆ 23 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.

    https://twitter.com/SwamiGeetika/status/1163088798890094598

    ಕನ್ನಡದ ನೆಲದಲ್ಲಿ ಕನ್ನಡ ಹಾಕದಿದ್ದರೆ ಪ್ರಶ್ನೆ ಮಾಡಬೇಕು ತಾನೇ? ಕನ್ನಡ ನೆಲದ ಜಾಗ, ನೀರು, ಹಣ ಎಲ್ಲಾ ಬೇಕು. ಆದರೆ ಕನ್ನಡ ಬೇಡವೇ? ಹೋಗಿ ಅವರನ್ನು ಓಲೈಕೆ ಮಾಡೋದು ನೋಡಿದರೆ ನೀವು ಕೇವಲ ಓಟಿಗಾಗಿ ನಿಮ್ಮ ಈ ಹೇಳಿಕೆ ಅನಿಸುತ್ತದೆ. ಅಷ್ಟು ಕನ್ನಡ ಜನರ ಕಾಳಜಿ ಇದ್ದರೆ ನೆರೆ ಪರಿಹಾರ ತರಬೇಕಿತ್ತು. ಬಕೆಟ್ ಹಿಡಿಯೋದೇ ಜೀವನವಾಗಬಾರದು ಎಂದು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಕರ್ನಾಟಕದಲ್ಲಿರುವ ಬೋರ್ಡ್ ಗಳಲ್ಲಿ ಕನ್ನಡ ಇರಬೇಕು ಎನ್ನುವುದು ಹೇಗೆ ಅಪರಾಧ? ಇಲ್ಲದಿದ್ದಾಗ ಪ್ರಶ್ನಿಸುವುದು ಯಾವ ಅಪರಾಧ? ಕನ್ನಡಿಗರು ಏನೇ ಕೇಳಿದರೂ ಉರ್ದುವನ್ನು ಯಾಕೆ ಮಧ್ಯದಲ್ಲಿ ತರುತ್ತೀರಾ? ಕನ್ನಡದ ವಿಷಯದಲ್ಲಿ ಯಾಕೆ ವಸ್ತುನಿಷ್ಠ ವಾಗಿ ಹೇಳಿಕೆ ನೀಡುವುದಿಲ್ಲ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.

    ಏನಿದು ಪ್ರಕರಣ?
    ಇನ್‍ಫೆಂಟ್ರಿ ರಸ್ತೆಯ ಬಳಿ ಜೈನ ಸಮುದಾಯದ ಪ್ರಾರ್ಥನಾ ಮಂದಿರದಲ್ಲಿ ಚಾತುರ್ಮಾಸ ಆಚರಣೆ ನಡೆಯುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ಹಿಂದಿ ಭಾಷೆಯಲ್ಲಿ ಬ್ಯಾನರ್ ಕಟ್ಟಲಾಗಿತ್ತು. ಹಿಂದಿ ಭಾಷೆಯಲ್ಲಿ ಬ್ಯಾನರ್ ಕಟ್ಟಿದ್ದಕ್ಕೆ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬಿ.ಹರೀಶ್‍ಕುಮಾರ್, ಪದಾಧಿಕಾರಿಗಳಾದ ಮಂಜು, ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕೆಯ ಅಂಜನಪ್ಪ, ರಕ್ಷಣಾ ಸೇನೆಯ ರಮೇಶ್‍ಗೌಡ ಹಾಗೂ ಕರುನಾಡ ಸೇವಕರು ವೇದಿಕೆಯ ಮಾದೇಶ್‍ಗೌಡ ಈ ಬ್ಯಾನರ್ ಹರಿದು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

    ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬ್ಯಾನರ್ ಹರಿದು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡಪರ ಸಂಘಟನೆಗಳ ಆರು ಮಂದಿ ಕಾರ್ಯಕರ್ತರನ್ನು ಕೋಮು ಸೌಹರ್ದತೆಗೆ ಧಕ್ಕೆ ತರುವ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆರು ಮಂದಿಯನ್ನು ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿ ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

    ಆನಂದ ಚಾತುರ್ಮಾಸ ಸಮಿತಿಯ ಕಾರ್ಯದರ್ಶಿ ಫ್ಯಾನ್‍ಚಂದ್ ಜೈನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜೈನ ಸಮುದಾಯಕ್ಕಾಗಿ ನಡೆಸುವ ಕಾರ್ಯಕ್ರಮ ಆಗಿರುವುದರಿಂದ ಬೇರೆಯವರಿಗೆ ಪ್ರವೇಶ ಇರುವುದಿಲ್ಲ. ಈಗಾಗಿ ಕನ್ನಡದಲ್ಲಿ ಬ್ಯಾನರ್ ಹಾಕಿರಲಿಲ್ಲ. ಹಿಂದೆಯೂ ಹಿಂದಿ ಭಾಷೆಯಲ್ಲಿಯೇ ಬ್ಯಾನರ್ ಹಾಕಿದ್ದೇವೆ. ಎಂದೂ ಕೂಡ ಇಂತಹ ಅನುಭವ ಆಗಿಲ್ಲ. ಶುಕ್ರವಾರ ಮಾತ್ರ ಕೆಲ ಕಾರ್ಯಕರ್ತರು ಬ್ಯಾನರ್ ಹರಿದಿದ್ದಾರೆ. ನಾವು ಕನ್ನಡ ವಿರೋಧಿಗಳಲ್ಲ. ಚಾತುರ್ಮಾಸ್ಯಕ್ಕೆ ಕನ್ನಡಿಗರು ಬಾರದ ಕಾರಣ ಹಿಂದಿಯಲ್ಲಿ ಬ್ಯಾನರ್ ಹಾಕಲಾಗಿತ್ತು ಎಂದು ಹೇಳಿದ್ದಾರೆ.

  • ಬೆಳಿಯೋಕೆ ಕನ್ನಡ ಬೇಕು, ಈಗ ಬೇಡ – ‘ಡಿಯರ್ ಕಾಮ್ರೆಡ್’ ಚಿತ್ರ ಬಿಡುಗಡೆಗೆ ವಿರೋಧ

    ಬೆಳಿಯೋಕೆ ಕನ್ನಡ ಬೇಕು, ಈಗ ಬೇಡ – ‘ಡಿಯರ್ ಕಾಮ್ರೆಡ್’ ಚಿತ್ರ ಬಿಡುಗಡೆಗೆ ವಿರೋಧ

    ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಡಿಯರ್ ಕಾಮ್ರೆಡ್’ ಚಿತ್ರ ಬಿಡುಗಡೆ ವಿರೋಧಿಸಿ ಸಿಲಿಕಾನ್ ಸಿಟಿಯಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

    ಕೆಜಿ ರಸ್ತೆಯ ಮೇನಕಾ ಚಿತ್ರಮಂದಿರ ಬಳಿ ಕನ್ನಡ ಹೋರಾಟಗಾರರು ‘ಡಿಯರ್ ಕಾಮ್ರೆಡ್’ ಪ್ರದರ್ಶನವನ್ನು ನಿಲ್ಲಿಸಿ ಎಂದು ಪ್ರತಿಭಟನೆ ಮಾಡೆಸಿದ್ದಾರೆ. ಕನ್ನಡ ಹೋರಾಟಗಾರ ನಾಗೇಶ್ ಕುಮಾರ್ ನೇತೃತ್ವದಲ್ಲಿ ಮೇನಕಾ ಚಿತ್ರಮಂದಿರದ ಮುಂದೆ ರಶ್ಮಿಕಾ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ರಶ್ಮಿಕಾ ಮಂದಣ್ಣ ‘ಕನ್ನಡ ಮಾತನಾಡೋದು ಕಷ್ಟ’ ಎಂದು ತಮಿಳಿನ ಖಾಸಗಿ ವಾಹಿನಿಯ ಸಂದರ್ಶದಲ್ಲಿ ಹೇಳಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದವರಾಗಿ ಕನ್ನಡ ಮಾತನಾಡೋದು ಕಷ್ಟ ಎನ್ನುವ ನಟಿ ನಮಗೆ ಬೇಡ, ರಶ್ಮಿಕಾ ನಟಿಸಿರುವ ಚಿತ್ರಗಳು ರಾಜ್ಯದಲ್ಲಿ ಪ್ರದರ್ಶನ ಕಾಣಬಾರದು ಎಂದು ಘೋಷಣೆ ಕೂಗುತ್ತ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

    ಚಿತ್ರರಂಗದಲ್ಲಿ ಬೆಳೆಯಲು ರಶ್ಮಿಕಾ ಅವರಿಗೆ ಕನ್ನಡ ಬೇಕಿತ್ತು. ಆದ್ರೆ ಈಗ ಬೇಡವಾಗಿದೆ. ರಶ್ಮಿಕಾ ಅವರು ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ಮಾಡಿ, ಕರ್ನಾಟಕದವರಾಗಿ ಕನ್ನಡ ಮಾತಾಡೋದು ಕಷ್ಟ ಎಂದಿದ್ದಾರೆ. ಅವರ ಚಿತ್ರ ಬಿಡುಗಡೆ ರಾಜ್ಯದಲ್ಲಿ ಆಗಬಾರದು ಎಂದು ನಾವು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ತೆಲುಗು ಭಾಷೆಯಲ್ಲಿ ತೆರೆಕಂಡಿರುವ ಡಿಯರ್ ಕಾಮ್ರೆಡ್ ಸಿನಿಮಾ ಪ್ರದರ್ಶನ ನಡೆಯುತ್ತಿದೆ. ಆದರೆ ಕನ್ನಡ ಭಾಷೆಯಲ್ಲಿರುವ ಇದೇ ಚಿತ್ರ ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರ ಹಂಚಿಕೆಯಲ್ಲೂ ಕನ್ನಡಕ್ಕೆ ಅನ್ಯಾಯವಾಗಿದೆ ಎಂದು ಕಿಡಿಕಾರಿದ್ದಾರೆ.

    ರಶ್ಮಿಕಾರನ್ನು ರಾಜ್ಯದಿಂದ ಹೊರಹಾಕಿ. ಇಂತಹ ನಟಿಯರಿಗೆ ಅವಕಾಶ ಕೊಟ್ಟು ನಿರ್ಮಾಪಕರು ಕನ್ನಡಕ್ಕೆ ಮೋಸ ದ್ರೋಹ ಮಾಡಬೇಡಿ. ಅವರು ಬೇರೆ ಬೇರೆ ಭಾಷಯಲ್ಲಿ ಚಿತ್ರ ಮಾಡಲಿ ಪರವಾಗಿಲ್ಲ, ಆದರೆ ಕನ್ನಡಕ್ಕೆ ಅವರ ಅವಶ್ಯಕತೆ ಇಲ್ಲ. ನಮಗೆ ಇಂತಹ ನಟಿಯರು ಬೇಡ. ಅವರು ನಮ್ಮ ಮೇಲೆ ಕೇಸ್ ಹಾಕಿದರೂ ನಾವು ಹೆದರಲ್ಲ. ತಾಖತ್ ಇದ್ದರೆ ಕರ್ನಾಟಕದಲ್ಲಿ ರಶ್ಮಿಕಾ ಚಿತ್ರ ಬಿಡುಗಡೆ ಮಾಡಿ ತೋರಿಸಲಿ. ನಾವು ಅವರ ಚಿತ್ರ ಬಿಡುಗಡೆಯಾಗದಂತೆ ಹೋರಾಟ ಮಾಡುತ್ತೇವೆ. ಮೇನಕಾ ಚಿತ್ರಮಂದಿರದಿಂದ ಈ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿಯೇ ನಾವು ಇಲ್ಲಿಂದೆ ಹೋಗೋದು ಎಂದು ಪ್ರತಿಭಟನಾಕಾರರು ಹರಿಹಾಯ್ದಿದ್ದಾರೆ. ಜೊತೆಗೆ ರಶ್ಮಿಕಾ ಅವರ ವ್ಯಂಗ್ಯ ಚಿತ್ರಗಳ ಪೋಸ್ಟರ್ ಹಿಡಿದು ಘೋಷಣೆ ಕೂಗಿದ್ದಾರೆ.