Tag: ಕನ್ನಡ ಹೋರಾಟ

  • 20 ಮಂದಿ ಕನ್ನಡ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್

    20 ಮಂದಿ ಕನ್ನಡ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್

    ಬೆಳಗಾವಿ: ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸಿದ ಕನ್ನಡ ಸಂಘಟನೆಗಳ 20 ಮಂದಿ ಕಾರ್ಯಕರ್ತರ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಲಾಗಿದೆ.

    ದೊಂಬಿ, ಅತಿಕ್ರಮ ಪ್ರವೇಶ, ಮಾರಕಾಸ್ತ್ರಗಳೊಂದಿಗೆ ಗಲಭೆ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಅಡಿ ಆರೋಪ ಸಾಬೀತಾದರೆ ಕನಿಷ್ಠ 3 ತಿಂಗಳಿಂದ 3 ವರ್ಷದವರೆಗೆ ಜೈಲು ಶಿಕ್ಷೆ ಆಗುವ ಸಾಧ್ಯತೆಯಿದೆ.

    ಆದರೆ ಕನ್ನಡ ಕನ್ನಡ ಧ್ವಜಕ್ಕೆ ಚಪ್ಪಲಿ ಎಸೆದವರೊಂದಿಗೆ ಸಂಧಾನ ಮಾಡಲು ಸರ್ಕಾರ ಮುಂದಾಗಿದ್ದು ಟೀಕೆಗೆ ಗುರಿಯಾಗಿದೆ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಸಭೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸಿ ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಟ್ವೀಟ್‌ ಮಾಡಿ ಬೆಳಗಾವಿಯ ಪೀರನವಾಡಿಯಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ‌ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿರುವವರ ಮೇಲಿನ ಪೊಲೀಸರ ಲಾಠಿ ಪ್ರಹಾರ ಖಂಡನೀಯ. ನಾನು ಈಗಷ್ಟೆ ಅಲ್ಲಿನ ಜಿಲ್ಲಾಧಿಕಾರಿ‌ ಮತ್ತು ಪೊಲೀಸ್ ಕಮಿಷನರ್ ಜೊತೆ ಮಾತನಾಡಿ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

    ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು, ಬೆಳಗಾವಿ ಜಿಲ್ಲೆ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ವಿರೋಧಿಸಿ ಮರಾಠೀ ಭಾಷಿಗರು ದಾಂಧಲೆ ನಡೆಸಿದ್ದು ಅಕ್ಷಮ್ಯ. ನಮ್ಮ ನೆಲದಲ್ಲಿ ಅಪ್ರತಿಮ ಹೋರಾಟಗಾರ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

    ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಹೆಮ್ಮೆ. ಅವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನ ಕೆಣಕಿದಂತೆ. ನಾಡಿನ ವೀರಪುತ್ರ ಮತ್ತು ವನಿತೆಯರ ವಿರುದ್ಧ ನಮ್ಮ ನೆಲದಲ್ಲಿ ತಗಾದೆ ತೆಗೆದರೆ ತಕ್ಕಪಾಠ ಕಲಿಸಬೇಕಾಗುತ್ತದೆ. ನಮ್ಮ ನಾಡಿನ ನೆಲ-ಜಲ, ಭಾಷೆ ಮತ್ತು ಗಡಿ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಈ ನೆಲದ ಅಸ್ಮಿತೆಗೆ ಭಂಗ ತರುವವರನ್ನು ಹೆಡೆಮುರಿ ಕಟ್ಟುವುದು ಸ್ವಾಭಿಮಾನಿ ಕನ್ನಡಿಗರ ರಕ್ತದಲ್ಲೇ ಇದೆ. ಕನ್ನಡಿಗರೆಂದರೆ -ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯನ್, ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಎಂದು ಹೇಳಿದ್ದಾರೆ.

  • ‘ಗೀತಾ’ಗಾಗಿ ಹಾರ್ಡ್‌ಕೋರ್ ಕನ್ನಡಿಗನಾದ ಗೋಲ್ಡನ್ ಸ್ಟಾರ್!

    ‘ಗೀತಾ’ಗಾಗಿ ಹಾರ್ಡ್‌ಕೋರ್ ಕನ್ನಡಿಗನಾದ ಗೋಲ್ಡನ್ ಸ್ಟಾರ್!

    ಬೆಂಗಳೂರು: ಮುಂಗಾರುಮಳೆಯ ಮಹಾ ಗೆಲುವಿನೊಂದಿಗೆ ಗೋಲ್ಡನ್ ಸ್ಟಾರ್ ಆಗಿ ಅವತರಿಸಿರೋ ಗಣೇಶ್ ಇದುವರೆಗೂ ಹಲವಾರು ಚಿತ್ರಗಳಲ್ಲಿ ನಾನಾ ಥರದ ಪಾತ್ರಗಳನ್ನು ಮಾಡಿದ್ದಾರೆ. ಹೆಚ್ಚಾಗಿ ಲವರ್ ಬಾಯ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿರೋ ಗಣೇಶ್ ಗೀತಾ ಚಿತ್ರದಲ್ಲಿ ಮಾತ್ರ ಇದುವರೆಗೂ ಕಾಣಿಸಿಕೊಂಡಿರದ ಪಾತ್ರದಲ್ಲಿ, ಗೆಟಪ್ಪಿನಲ್ಲಿ ಕಾಣಿಕೊಂಡಿದ್ದಾರೆಂಬುದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿರೋ ಟ್ರೇಲರ್ ಮತ್ತು ಹಾಡುಗಳಲ್ಲಿಯೇ ಸಾಕ್ಷ್ಯಗಳು ಸಿಕ್ಕಿವೆ. ಈ ಸಿನಿಮಾದಲ್ಲಿ ಗಣೇಶ್ ಹಾರ್ಡ್‍ಕೋರ್ ಕನ್ನಡಾಭಿಮಾನಿಯಾಗಿ, ಕನ್ನಡಪರ ಹೋರಾಟಗಾರನಾಗಿ ನಟಿಸಿದ್ದಾರೆ.

    ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಹಠಾತ್ತನೆ ಇಂಥಾದ್ದೊಂದು ರೂಪಾಂತರವನ್ನು ಕಲ್ಪಿಸಿ ಕೊಟ್ಟಿರುವವರು ನಿರ್ದೇಶಕ ವಿಜಯ್ ನಾಗೇಂದ್ರ. ಇವರ ಪಾಲಿಗಿದು ಚೊಚ್ಚಲ ಚಿತ್ರ. ಆದರೆ ಈ ಮೊದಲ ಪ್ರಯತ್ನದಲ್ಲಿಯೇ ಸವಾಲಿನಂಥಾ ಅದೆಷ್ಟೋ ಅಂಶಗಳನ್ನು ವಿಜಯ್ ಅಳವಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಇಮೇಜಿಗೆ ಹೊಂದಿಕೊಂಡ ನಟನಟಿಯರನ್ನು ಏಕಾಏಕಿ ಬೇರೆ ಥರದ ಪಾತ್ರದಲ್ಲಿ ಕಾಣಿಸೋದು ಸವಾಲಿನ ಕೆಲಸ. ಆದರೆ ಗೋಲ್ಡನ್ ಸ್ಟಾರ್ ಎಂಥಾ ಪಾತ್ರಕ್ಕಾದರೂ ನ್ಯಾಯ ಒದಗಿಸೋ ಕಸುವಿರುವ ನಟ. ಅದಕ್ಕೆ ತಕ್ಕುದಾದ ಕಥೆ ಮತ್ತು ಪಾತ್ರವನ್ನು ವಿಜಯ್ ನಾಗೇಂದ್ರ ಸೃಷ್ಟಿಸಿದ್ದಾರೆ. ಗಣೇಶ್ ಹೋಂ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ಖ್ಯಾತ ನಿರ್ಮಾಪಕರಾದ ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ.

    ಗಣೇಶ್ ಪಾಲಿಗಿದು ಮನ್ವಂತರದಂಥಾ ಚಿತ್ರ. ಯಾಕೆಂದರೆ, ನಿರ್ದೇಶಕರ ವಿಜಯ್ ನಾಗೇಂದ್ರ ಅವರ ಈವರೆಗಿನ ಇಮೇಜ್ ಹೊಸಾ ಥರದಲ್ಲಿ ಕಳೆಗಟ್ಟುವಂತೆ ಈ ಸಿನಿಮಾವನ್ನು ರೂಪಿಸಿದ್ದಾರೆ. ತೀರಾ ಕನ್ನಡದ ಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಡೆದ ಗೋಕಾಕ್ ಚಳುವಳಿಯಂಥಾ ಕಥೆಯನ್ನು ಮುಟ್ಟೋದೂ ಕೂಡಾ ಸಿನಿಮಾ ಚೌಕಟ್ಟಿನಲ್ಲಿ ಬಲು ಕಷ್ಟದ ಕೆಲಸ. ಆದರೆ ವಿಜಯ್ ಆಳವಾದ ಅಧ್ಯಯನದ ಮೂಲಕವೇ ಅದನ್ನು ಸಾಧ್ಯವಾಗಿಸಿಕೊಂಡಿದ್ದಾರೆ. ಮೂಲತಃ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರೋ ಗೋಲ್ಡನ್ ಸ್ಟಾರ್ ಗಣೇಶ್ ತೆರೆಯ ಮೇಲೆಯೂ ಪ್ರತೀ ಮನಸುಗಳಲ್ಲಿಯೂ ಕನ್ನಡತನದ ಕಿಚ್ಚು ಹಚ್ಚುವಂಥಾ ಪಾತ್ರದ ಮೂಲಕ ಮಿನುಗಲು ರೆಡಿಯಾಗಿದ್ದಾರೆ.

  • ಗೀತಾ ಟ್ರೇಲರ್: ಕನ್ನಡಾಭಿಮಾನಿಯಾಗಿ ಘರ್ಜಿಸಿದ ಗೋಲ್ಡನ್ ಗಣಿ!

    ಗೀತಾ ಟ್ರೇಲರ್: ಕನ್ನಡಾಭಿಮಾನಿಯಾಗಿ ಘರ್ಜಿಸಿದ ಗೋಲ್ಡನ್ ಗಣಿ!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹೋಂ ಬ್ಯಾನರ್‍ನಲ್ಲಿ ನಿರ್ಮಾಣ ಮಾಡಿರೋ ಮೊದಲ ಚಿತ್ರವೆಂಬುದೂ ಸೇರಿದಂತೆ ‘ಗೀತಾ’ ಪ್ರೇಕ್ಷಕರನ್ನು ಸೆಳೆದುಕೊಂಡಿರೋದರ ಹಿಂದೆ ನಾನಾ ಕಾರಣಗಳಿವೆ. ಕೆಲ ದಿನಗಳ ಹಿಂದೆಯಷ್ಟೇ ಇದರ ಲಿರಿಕಲ್ ವೀಡಿಯೋ ಸಾಂಗ್ ಒಂದು ಬಿಡುಗಡೆಯಾಗಿತ್ತು ಅದರೊಂದಿಗೆ ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಪರ ಹೋರಾಟಗಾರನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರೋದೂ ಸ್ಪಷ್ಟವಾಗಿತ್ತು. ಇದೀಗ ಗೀತಾದ ಟ್ರೇಲರ್ ರಿಲೀಸ್ ಆಗಿದೆ. ಇದರಲ್ಲಿ ಕನ್ನಡಪರ ಹೋರಾಟದ ಸ್ವರೂಪ ಮತ್ತಷ್ಟು ಸ್ಪಷ್ಟವಾಗಿಯೇ ಕಾಣಿಸಿಕೊಂಡಿದೆ.

    ಈ ಟ್ರೇಲರ್ ಗೀತಾ ಚಿತ್ರದ ಬಗ್ಗೆ ಪ್ರೇಕ್ಷಕರು ಮತ್ತಷ್ಟು ಮೋಹಗೊಳ್ಳುವಂತೆ ಮೂಡಿ ಬಂದಿದೆ. ಗಣೇಶ್ ಚಿತ್ರಗಳೆಂದ ಮೇಲೆ ಅದರಲ್ಲಿ ಪ್ರೀತಿ ಪ್ರೇಮದ ನವಿರು ಭಾವಗಳ ಕಥೆ ಇದ್ದೇ ತರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಅದನ್ನು ಬಯಸೋ ಅಭಿಮಾನಿ ವರ್ಗವೂ ದೊಡ್ಡ ಸಂಖ್ಯೆಯಲ್ಲಿಯೇ ಇದೆ. ಆದರೆ ಗೀತಾ ಚಿತ್ರದಲ್ಲಿ ಪ್ರೇಮ ಕಥಾನಕ ಮತ್ತು ಕನ್ನಡಪರ ಹೋರಾಟದ ಕಥನಗಳು ಬ್ಲೆಂಡ್ ಆಗಿರೋ ಸೂಚನೆಯನ್ನು ಈ ಟ್ರೇಲರ್ ರವಾನಿಸಿದೆ. ಗಣೇಶ್ ಅಂತೂ ಕನ್ನಡಾಭಿಮಾನದ ಡೈಲಾಗುಗಳೊಂದಿಗೆ ಕನ್ನಡ ಪರ ಹೋರಾಟಗಾರನಾಗಿ ಕನ್ನಡಿಗರೆಲ್ಲರೂ ರೋಮಾಂಚನಗೊಳ್ಳುವ ಗೆಟಪ್ಪಿನಲ್ಲಿಯೂ ಗಮನ ಸೆಳೆದಿದ್ದಾರೆ.

    ಇದೀಗ ಬಿಡುಗಡೆಯಾಗಿರೋ ಟ್ರೇಲರ್ ತನ್ನ ಸೀಮಿತ ಗಡುವಿನಲ್ಲಿಯೇ ಗೀತಾ ಚಿತ್ರದ ಬಗೆಗಿನ ಹಲವಾರು ಅಂಶಗಳನ್ನು ಅನಾವರಣಗೊಳಿಸಿದೆ. ಪ್ರೇಮ ಕಥೆಯ ವಿಚಾರದಲ್ಲಿಯೂ ಈ ಚಿತ್ರ ಭಿನ್ನವಾದ ಕಥೆಯನ್ನೇ ಹೊಂದಿದೆ ಅನ್ನೋದೂ ಕೂಡಾ ಈ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಹೇಳಿ ಕೇಳಿ ಈ ಸಿನಿಮಾದಲ್ಲಿ ಮೂವರು ನಾಯಕಿಯರಿದ್ದಾರೆ. ಅವರೆಲ್ಲರನ್ನು ಬಳಸಿಕೊಂಡು ಗಣೇಸ್ ಪಾತ್ರದ ಸುತ್ತ ಸಾಗೋ ತ್ರಿಕೋನ ಪ್ರೇಮ ಕಥೆಯ ಸುಳಿವೂ ಕೂಡಾ ಸಿಕ್ಕಿದೆ. ಒಟ್ಟಾರೆಯಾಗಿ ಇದೇ ತಿಂಗಳ 27ರಂದು ಬಿಡುಗಡೆಗೊಳ್ಳಲಿರೋ ಈ ಸಿನಿಮಾ ಬಗ್ಗೆ ಮತ್ತಷ್ಟು ಪ್ರೇಕ್ಷಕರ ಚಿತ್ತ ಸೆಳೆಯುವಲ್ಲಿ ಈ ಟ್ರೇಲರ್ ಯಶ ಕಂಡಿದೆ.